ಅಭಿವೃದ್ಧಿ ರಾಜಕಾರಣ ಮತ್ತು ಪರಿಸರ ಸಮತೋಲನ

  ನಾ ದಿವಾಕರ

ಬಂಡವಾಳಶಾಹಿ ವ್ಯವಸ್ಥೆಯ ಅಭಿವೃದ್ಧಿ ಮಾರ್ಗವನ್ನು ಏಳು ದಶಕಗಳ ಕಾಲ ಅನುಸರಿಸಿರುವ ಭಾರತದ ಆಳುವ ವರ್ಗಗಳಿಗೆ ಕೆಲವು ವರ್ಷಗಳ ಹಿಂದೆ ಕೇದಾರನಾಥದಲ್ಲಿ ಸಂಭವಿಸಿದ ದುರಂತವೇ ಎಚ್ಚರಿಕೆಯ ಗಂಟೆಯಾಗಬೇಕಿತ್ತು. ಆದರೆ ಇಡೀ ಅರ್ಥವ್ಯವಸ್ಥೆಯನ್ನು ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಯ ರಕ್ಷಣೆಗಾಗಿಯೇ ಒತ್ತೆ ಇಟ್ಟಿರುವ ಭಾರತದ ಆಳುವ ವರ್ಗಗಳು ತಮ್ಮ ಕಣ್ಣ ಮುಂದಿನ ಅಪಾಯವನ್ನೂ ಅರಿತಿಲ್ಲ, ಬೆನ್ನ ಹಿಂದಿನ ಶತ್ರುವನ್ನೂ ಗ್ರಹಿಸಿಲ್ಲ ಎಂದು ಕೇರಳ ಮತ್ತು ಕೊಡಗು ಘಟನೆಗಳು ನಿರೂಪಿಸಿವೆ.

ಅಭಿವೃದ್ಧಿಯ ಆಗುಹೋಗುಗಳನ್ನು ಆರ್ಥಿಕ ನೆಲೆಯಲ್ಲಿ ಮಾತ್ರವೇ ಪರಿಗಣಿಸುವ ಬಂಡವಾಳಶಾಹಿ ವ್ಯವಸ್ಥೆ ಅಭಿವೃದ್ಧಿಯ ಸಾಮಾಜಿಕ ಆಗುಹೋಗುಗಳನ್ನು ನಿರ್ಲಕ್ಷಿಸುತ್ತಲೇ ಬಂದಿರುವುದರಿಂದ ಇಂದು ಇಡೀ ಜಗತ್ತು ವಿನಾಶದ ಅಂಚಿನಲ್ಲಿ ನಿಂತಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಮಾನವನ ಅಭ್ಯುದಯಕ್ಕೆ ಬಳಸುವುದೆಂದರೆ ಕೆಲವೇ ಜನರ ಐಷಾರಾಮಿ ಬದುಕಿಗೆ ಪೂರಕವಾಗಿ ಬಳಸುವುದು ಎಂದರ್ಥವಲ್ಲ. ಸಮಸ್ತ ಜನತೆಯ ಒಳಿತಿಗೆ ಮತ್ತು ಭವಿಷ್ಯದ ಪೀಳಿಗೆಯ ಒಳಿತಿಗಾಗಿ ಪರಿಸರ ಹಾಗೂ ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವುದು ಎಂದರ್ಥ.

ದುರಂತ ಎಂದರೆ ಆಧುನಿಕ ಜಗತ್ತಿನ ಅಭಿವೃದ್ಧಿಯ ಆದ್ಯತೆಗಳಿಗೆ ಅನುಸಾರವಾಗಿ ಆಳುವ ವರ್ಗಗಳು ನಿಸರ್ಗವನ್ನು ಸಂರಕ್ಷಿಸುವ ಚಿಂತನೆಗೇ ತಿಲಾಂಜಲಿ ನೀಡಿವೆ.

ಬಂಡವಾಳ ವ್ಯವಸ್ಥೆಯ ಮೂಲ ಲಕ್ಷಣವೇ ಶೋಷಣೆ ಮತ್ತು ಉತ್ಪಾದನಾ ಸಾಧನಗಳ ಮೇಲಿನ ಒಡೆತನ. ಈ ಒಡೆತನವನ್ನು ಸಾಧಿಸುವ ನಿಟ್ಟಿನಲ್ಲಿ ಉತ್ಪಾದಕೀಯ ಶಕ್ತಿಗಳು ಬಂಡವಾಳದ ಗುಲಾಮರಂತೆ ಪರಿಗಣಿಸಲ್ಪಟ್ಟರೆ, ಉತ್ಪಾದನೆಯ ಮೂಲ ಎನ್ನಬಹುದಾದ ನೈಸರ್ಗಿಕ ಮತ್ತು ಮಾನವ ಸಂಪತ್ತು ಬಂಡವಾಳಿಗರ ಖಾಸಗಿ ಸ್ವತ್ತಾಗಿ ಪರಿಣಮಿಸುತ್ತದೆ.

ಉತ್ಪಾದಕೀಯ ಶಕ್ತಿಗಳ ಮಾನವ ಶ್ರಮವನ್ನು ಮಾನವ ಸಂಪತ್ತು ಎಂದು ವರ್ಗೀಕರಿಸುವ ಮೂಲಕ ಆಧುನಿಕ ಬಂಡವಾಳಶಾಹಿ ವ್ಯವಸ್ಥೆ ಶೋಷಣೆಯ ಸ್ವರೂಪವನ್ನೇ ಬದಲಿಸಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಿದೆ. ನಿಸರ್ಗದ ಒಡಲನ್ನು ಸೀಳಿ ಗರ್ಭದೊಳಗಿನ ಸಕಲ ಸಂಪತ್ತನ್ನು ತನ್ನ ಔದ್ಯಮಿಕ ಭದ್ರ ಕೋಟೆಯಲ್ಲಿ ಸಂರಕ್ಷಿಸುವ ಬಂಡವಾಳಶಾಹಿ ವ್ಯವಸ್ಥೆಗೆ ಒಡಲನ್ನು ಸೀಳುವ ಪ್ರಕ್ರಿಯೆಯಲ್ಲಿ ತನ್ನ ಮೂಲ ನೆಲೆಯೇ ಕೊಚ್ಚಿಹೋಗುತ್ತಿದ್ದರೂ ಅರಿವಾಗುವುದಿಲ್ಲ.

ಏಕೆಂದರೆ ತನ್ನ ಭದ್ರ ಕೋಟೆಯೊಳಗಿನ ಸಂಪತ್ತನ್ನು ರಕ್ಷಿಸಿ ತನ್ನ ಹಿತಾಸಕ್ತಿಯನ್ನು ಕಾಪಾಡಳು ಪ್ರಭುತ್ವ ಮತ್ತು ಸರ್ಕಾರ ಸದಾ ಬದ್ಧವಾಗಿರುತ್ತದೆ. 19-20ನೆಯ ಶತಮಾನದ ಔದ್ಯಮಿಕ ಬಂಡವಾಳ ಈ ಸಂಪತ್ತಿನ ರಕ್ಷಣೆಗೆ ನಿಸರ್ಗವನ್ನೇ ಆಶ್ರಯಿಸುತ್ತಿತ್ತು. ಆದರೆ 21ನೆಯ ಶತಮಾನದ ಹಣಕಾಸು ಬಂಡವಾಳ ಮಾರುಕಟ್ಟೆಯನ್ನು ಆಶ್ರಯಿಸುತ್ತದೆ.

ಹಾಗಾಗಿ ನವ ಉದಾರವಾದ ಮತ್ತು ಹಣಕಾಸು ಬಂಡವಾಳದ ಅಧಿಕಾರ ರಾಜಕಾರಣದಲ್ಲಿ ನಿಸರ್ಗ ಸಂಪತ್ತು ಸಹ ಮಾರುಕಟ್ಟೆ ಪ್ರಕ್ರಿಯೆಗೆ ಒಳಗಾಗುತ್ತವೆ. ಈ ನಿಸರ್ಗ ಸಂಪತ್ತನ್ನು ಬಳಸಿ ಉತ್ಪಾದಿಸಲಾಗುವ ಪದಾರ್ಥಗಳು ಬಂಡವಾಳ ವ್ಯವಸ್ಥೆಯ ಐಷಾರಾಮಿ ಜೀವನಕ್ಕೆ ಮೂಲವಾಗುತ್ತವೆ. ಉತ್ಪಾದಕೀಯ ಶಕ್ತಿಗಳು ಮಾರುಕಟ್ಟೆಯ ಕೃಪಾಕಟಾಕ್ಷದಲ್ಲೇ ತಮ್ಮ ಬದುಕು ಕಟ್ಟಿಕೊಳ್ಳಬೇಕಾಗುತ್ತದೆ. ಉತ್ಪಾದನಾ ವಿಧಾನಗಳು ಮತ್ತು ಮಾರ್ಗಗಳು ಮಾರುಕಟ್ಟೆಯ ವಶವಾಗುತ್ತವೆ.

ನವ ಉದಾರವಾದ, ಜಾಗತೀಕರಣ ಮತ್ತು ಹಣಕಾಸು ಬಂಡವಾಳದ ಅಧಿಪತ್ಯದಲ್ಲಿ ಸಂಪತ್ತಿನ ಕ್ರೋಢೀಕರಣ ಕೆಲವೇ ಕೆಲವರ ಪಾಲಾಗುತ್ತದೆ. ಈ ಔದ್ಯಮಿಕ ಹಿತಾಸಕ್ತಿಗಳೇ ನಿಸರ್ಗ ಸಂಪತ್ತಿನ ಮೇಲೆಯೂ ತಮ್ಮ ಅಧಿಪತ್ಯ ಸಾಧಿಸಲು ಯತ್ನಿಸುತ್ತಾರೆ. ನವ ಉದಾರವಾದವನ್ನು ಪೋಷಿಸುವ ಆಳುವ ವರ್ಗಗಳು ಈ ಕಾರ್ಪೋರೇಟ್ ವಲಯವನ್ನು ಪೋಷಿಸಿ ರಕ್ಷಿಸಲೆಂದೇ ಹೊಸ ಕಾನೂನುಗಳನ್ನು ರಚಿಸುತ್ತವೆ. ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಕರಾಳ ಶಾಸನಗಳನ್ನು ಜಾರಿಗೊಳಿಸುತ್ತವೆ.

ಈ ವಿಕೃತ ಅಭಿವೃದ್ಧಿಯ ಛಾಯೆಯನ್ನು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ, ಬಳ್ಳಾರಿಯಲ್ಲಿ, ಛತ್ತಿಸ್‍ಗಡದಲ್ಲಿ, ಜಾರ್ಖಂಡ್‍ನಲ್ಲಿ, ಒಡಿಷಾದಲ್ಲಿ ಕಾಣಬಹುದಾಗಿದೆ. ಬಳ್ಳಾರಿಯಲ್ಲಿ ತಮ್ಮದೇ ಆದ ರಿಪಬ್ಲಿಕ್ ಸ್ಥಾಪಿಸಿದ್ದ ಗಣಿ ಉದ್ಯಮಿಗಳು ಈ ನಿಟ್ಟಿನಲ್ಲಿ ಒಂದು ಪ್ರಾತ್ಯಕ್ಷಿಕೆಯನ್ನೇ ನಮ್ಮ ಮುಂದಿರಿಸಿದ್ದಾರೆ.

ಈ ನವ ಉದಾರವಾದಿ ಅರ್ಥವ್ಯವಸ್ಥೆಯ ದುಷ್ಪರಿಣಾಮಗಳನ್ನು ಇದೀಗ ಕೊಡಗು ಮತ್ತು ಕೇರಳದಲ್ಲಿ ಕಾಣುತ್ತಿದ್ದೇವೆ. ಕೆಲವು ವರ್ಷಗಳ ಹಿಂದೆ ಕೇದಾರನಾಥದಲ್ಲಿ ಕಂಡಿದ್ದೇವೆ. ಮಾಧವ ಗಾಡ್ಗಿಲ್ ಹೇಳಿದಂತೆ ಮುಂದಿನ ದಿನಗಳಲ್ಲಿ ಗೋವಾದಲ್ಲಿ ಕಾಣಲಿದ್ದೇವೆ. ಪರಿಸರ ನಿಯಮಗಳನ್ನು ಸರ್ಕಾರ ಪಾಲಿಸಿದ್ದಲ್ಲಿ ಈ ಪರಿಯ ಅವಘಡಗಳು ಸಂಭವಿಸುತ್ತಿರಲಿಲ್ಲ ಎಂದು ಶ್ರೀಯುತ ಗಾಡ್ಗಿಲ್ ಹೇಳಿರುವುದು ಅತಿಶಯೋಕ್ತಿಯಲ್ಲ.

ನಿಜ, ಕೊಡಗು ಮತ್ತು ಕೇರಳ ಪ್ರಾಂತ್ಯದಲ್ಲಿ ಎಂದಿಗಿಂತಲೂ ಹೆಚ್ಚಿನ ಮಳೆಯಾಗಿದೆ. ಎಲ್ಲ ಜಲಾಶಯಗಳೂ ತುಂಬಿ ಹರಿದಿವೆ. ಗುಡ್ಡ ಪ್ರದೇಶಗಳಲ್ಲಿ ಸದಾ ಜಿನುಗುವ ನೀರು ಮತ್ತು ಮಳೆನೀರು ಒಟ್ಟಾಗಿ ಭೂಕುಸಿತ ಉಂಟಾಗಿ ಸಾವಿರಾರು ಜನರನ್ನು ಅಸ್ಥಿರಗೊಳಿಸಿದೆ. ಸರ್ಕಾರದ ಆರ್ಥಿಕ ನೀತಿಗಳೇ ದುರಂತಕ್ಕೆ ಏಕೈಕ ಕಾರಣವಲ್ಲ. ಆದರೆ ಅಭಿವೃದ್ಧಿಯ ಸಾಮಾಜಿಕ ಆಗುಹೋಗುಗಳನ್ನು ಪರಿಗಣಿಸುವ ಸುಸ್ಥಿರ ಅಭಿವೃದ್ಧಿಯ ಮಾರ್ಗವನ್ನು ಅನುಸರಿಸಿದ್ದಲ್ಲಿ ಅನಾಹುತವನ್ನು ತಪ್ಪಿಸಬಹುದಿತ್ತು ಎನ್ನುವುದು ನಿಸ್ಸಂದೇಹ.

ಇಲ್ಲಿ ಸಮಸ್ಯೆ ಎಂದರೆ ಪರಿಸರ ಸಂರಕ್ಷಣೆ ಮತ್ತು ಸಮತೋಲನದ ಬಗ್ಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಎಷ್ಟೇ ಬದ್ಧತೆ ತೋರಿದರೂ, ನವ ಉದಾರವಾದಿ ಆರ್ಥಿಕ ವ್ಯವಸ್ಥೆ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ವರ್ತಿಸುವುದಿಲ್ಲ. ಏಕೆಂದರೆ ಹಣಕಾಸು ಬಂಡವಾಳದ ಚಲನಶೀಲತೆ ಕ್ಷಿಪ್ರಗತಿಯನ್ನು ಹೊಂದಿದ್ದು ಬಂಡವಾಳದ ಹರಿವು ಮಾರುಕಟ್ಟೆಯ ಏರುಪೇರುಗಳನ್ನು ಅವಲಂಬಿಸಿ ವ್ಯಕ್ತವಾಗುತ್ತಿರುತ್ತದೆ. ಕೊಡಗಿನ ಕಾಫಿ ತೋಟದಲ್ಲಿ ಹೂಡಿದ ಬಂಡವಾಳವಾಗಲಿ, ರೆಸಾರ್ಟ್-ಸ್ಪಾಗಳಲ್ಲಿ ಹೂಡಿದ ಬಂಡವಾಳವಾಗಲೀ ಕೊಡಗಿನಲ್ಲೇ ನಿಲ್ಲುವುದಿಲ್ಲ ಬದಲಾಗಿ ಮತ್ತಾವುದೋ ದೇಶಕ್ಕೆ ಸಾಗಿರುತ್ತದೆ.

ಇಲ್ಲಿ ದುಡಿಯುವ ಕೇರಳದ ಮತ್ತು ಸ್ಥಳೀಯ ಶ್ರಮಿಕರ ಶ್ರಮ ಮಾರುಕಟ್ಟೆಯ ಸರಕಿನಂತೆ ಬಿಕರಿಯಾಗುತ್ತದೆ. ದೂರದ ನಗರಗಳಲ್ಲಿ ತಮ್ಮ ಐಷಾರಾಮಿ ಜೀವನದಲ್ಲಿ ಓಲಾಡುವ ಭೂಮಾಲೀಕರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡುವ ಸಂದರ್ಭದಲ್ಲಿ ಪರಿಸರದ ಬಗ್ಗೆ ಯೋಚಿಸುವುದಿಲ್ಲ. ಏಕೆಂದರೆ ಅವರ ಜೀವ ಸಂರಕ್ಷಣೆಗೆ ನಗರ ಜೀವನ ಸುಸ್ಥಿರವಾಗಿರುತ್ತದೆ. ಇಲ್ಲಿನ ನಿಸರ್ಗ ಸಂಪತ್ತು ನಾಶವಾದರೂ ಭೂಮಾಲೀಕರ ಜೀವನ ನಿರ್ವಹಣೆಗೆ ಕುತ್ತು ಬರುವುದಿಲ್ಲ. ಈ ವಿಕೃತ ಮನೋಭಾವವೇ ಕೊಡಗಿನ ಬಹುತೇಕ ಭಾಗಗಳಲ್ಲಿ ರೆಸಾರ್ಟ್‍ಗಳು ನಾಯಿಕೊಡೆಗಳಂತೆ ತಲೆ ಎತ್ತಲು ಮೂಲ ಕಾರಣವಾಗಿದೆ.

ಪ್ರವಾಸೋದ್ಯಮ ಎಂದರೆ ಲೀಟರ್‍ಗಟ್ಟಲೆ ಹಾಲು ಕರೆಯುವ ಗೋವು ಎಂದೇ ಭಾವಿಸುವ ಆಳುವ ವರ್ಗಗಳಿಗೆ ಪ್ರತಿಯೊಂದು ಬೆಟ್ಟಗಾಡು ಪ್ರದೇಶವೂ ಹಣದ ಥೈಲಿಗಳಂತೆಯೇ ಕಾಣುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ದಕ್ಷಿಣದ ಕಾಶ್ಮೀರ ಎಂದೇ ಹೆಸರಾಗಿರುವ ಕೊಡಗು ಈ ಧನದಾಹಿಗಳ ಲಾಲಸೆಗೆ ಬಲಿಯಾಗುತ್ತಿರುವುದನ್ನೂ ಮೌನವಾಗಿಯೇ ಸಹಿಸುತ್ತಿದ್ದೇವೆ.

ಕೇರಳದ ವಯನಾಡು, ಮುನ್ನಾರ್, ತಮಿಳುನಾಡಿನ ಊಟಿ ಮತ್ತು ಕೊಡೈಕೆನಾಲ್, ಕರ್ನಾಟಕದ ಕೆಮ್ಮಣ್ಣುಗುಂಡಿ, ಕುದುರೆ ಮುಖ ಮತ್ತು ಪಶ್ಚಿಮ ಘಟ್ಟಗಳು ಪ್ರವಾಸೋದ್ಯಮ ಮತ್ತು ಧನದಾಹದ ಲಾಲಸೆಗೆ ಬಲಿಯಾಗುತ್ತಿರುವ ನಿಸರ್ಗಧಾಮಗಳು. ನಿಸರ್ಗವನ್ನು ಆನಂದಿಸುವುದೆಂದರೆ ಅರಣ್ಯಗಳನ್ನು ಕಡಿದು, ಬೆಟ್ಟ ಗುಡ್ಡಗಳನ್ನು ನೆಲಸಮ ಮಾಡಿ ರೆಸಾರ್ಟ್, ಸ್ಪಾ, ಮನರಂಜನಾ ಕೇಂದ್ರಗಳನ್ನು ನಿರ್ಮಿಸುವುದಲ್ಲ.

ನಿಸರ್ಗದ ಮಡಿಲಲ್ಲಿ ಸಹಜ ಸೌಂದರ್ಯವನ್ನು ಸವಿಯುವ ಮನುಕುಲ ಮಾತ್ರ ಸುಸ್ಥಿರ ಜೀವನ ನಡೆಸಲು ಸಾಧ್ಯ. ಈ ವಾಸ್ತವವನ್ನು ಗ್ರಹಿಸುವುದರಲ್ಲಿ ಆಧುನಿಕ ಮನುಕುಲ ವಿಫಲವಾಗಿರುವುದು ಸ್ಪಷ್ಟ. ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟವೂ ಇದೇ ವಿನಾಶದ ಹಾದಿ ಹಿಡಿದಿರುವುದನ್ನು ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕಿದೆ.

2011ರಲ್ಲಿ ತನ್ನ ಅಂತಿಮ ವರದಿ ಸಲ್ಲಿಸದ್ದ ಮಾಧವ ಗಾಡ್ಗಿಲ್ ನೇತೃತ್ವದ ಸಮಿತಿ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟಗಳ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಹಲವು ಮಾರ್ಗೋಪಾಯಗಳನ್ನು ಸೂಚಿಸಿತ್ತು. ಇಡೀ ಪಶ್ಚಿಮ ಘಟ್ಟಗಳು ಆರು ರಾಜ್ಯಗಳಲ್ಲಿ ಹರಡಿದ್ದ ಇದನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದೇ ಘೋಷಿಸುವಂತೆ ಸಮಿತಿ ಶಿಫಾರಸು ಮಾಡಿತ್ತು.

ಈ ಪ್ರದೇಶದಲ್ಲಿ ಒಸ ಕೈಗಾರಿಕೆ ಅಥವಾ ಗಣಿಗಾರಿಕೆಯನ್ನು ನಿಷೇಧಿಸಲು ಆಗ್ರಹಿಸಿತ್ತು. ಇಲ್ಲಿ ಕೈಗೊಳ್ಳುವ ಯಾವುದೇ ಅಭಿವೃದ್ಧಿ ಕಾರ್ಯ ಯೋಜನೆಗಳಿಗೆ ಸ್ಥಳೀಯ ಜನಸಮುದಾಯಗಳ , ಗ್ರಾಮ ಪಂಚಾಯತಿಗಳ ಸಮ್ಮತಿ ಪಡೆಯಲು ಸೂಚಿಸಲಾಗಿತ್ತು. ಆದರೆ ಪಶ್ಚಿಮಘಟ್ಟಗಳನ್ನು ಹೊಂದಿರುವ ಆರೂ ರಾಜ್ಯಗಳು ಈ ವರದಿಗೆ ವಿರೋಧ ವ್ಯಕ್ತಪಡಿಸಿದ್ದವು.

ನಂತರ ಗಾಡ್ಗಿಲ್ ಸಮಿತಿಯ ವರದಿಯನ್ನು ಪುನರ್ ಪರಿಶೀಲಿಸಲು ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿರಂಗನ್ ನೇತೃತ್ವದ ಸಮಿತಿಯನ್ನು ರಚಿಸಲಾಯಿತು. ಆಳುವ ವರ್ಗಗಳ ಒತ್ತಡಕ್ಕೆ ಮಣಿದೋ ಅಥವಾ ಸನ್ನಿವೇಶದ ಒತ್ತಡಕ್ಕೆ ಮಣಿಯುತ್ತಲೋ ಕಸ್ತೂರಿ ರಂಗನ್ ಸಮಿತಿ ಗಾಡ್ಗಿಲ್ ಸಮಿತಿಯ ಅನೇಕ ಸೂಕ್ಷ್ಮ ಅಂಶಗಳನ್ನು ಕಡೆಗಾಣಿಸಿ, ಪಶ್ಚಿಮ ಘಟ್ಟಗಳ ಮೂರನೆ ಒಂದು ಭಾಗವನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸುವಂತೆ ಶಿಫಾರಸು ಮಾಡಿತ್ತು. ಇದರಂತೆಯೇ ಕಳೆದ ವರ್ಷ ಪಶ್ಚಿಮ ಘಟ್ಟಗಳ 57 ಚದರ ಕಿಲೋಮೀಟರ್ ಪ್ರದೇಶದಲ್ಲಿ ಗಣಿಗಾರಿಕೆ, ಬೃಹತ್ ನಿರ್ಮಾಣ, ಉಷ್ಣ ವಿದ್ಯುತ್ ಸ್ಥಾವರ ಮತ್ತು ಇತರ ಪರಿಸರ ಮಾಲಿನ್ಯ ಉಂಟುಮಾಡುವ ಘಟಕಗಳನ್ನು ನಿಷೇಧಿಸಲಾಗಿತ್ತು.

ಇಲ್ಲಿಯೇ ಆಳುವ ವರ್ಗಗಳ ಹಿತಾಸಕ್ತಿಗಳು ಹೇಗೆ ನಿಸರ್ಗ ದತ್ತ ಸಂಪನ್ಮೂಲಗಳನ್ನು ಬಲಿ ಕೊಡುತ್ತವೆ ಎಂಬುದನ್ನು ಗ್ರಹಿಸಬಹುದು. ಪರಿಸರ ಸೂಕ್ಷ್ಮತೆ ಇಲ್ಲದಿದ್ದರೂ ಜಾರಿಯಲ್ಲಿರುವ ಕಾನೂನುಗಳನ್ನು ಅಕ್ಷರಶಃ ಪಾಲಿಸಿದ್ದರೆ ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸುವ ಗಾಡ್ಗಿಲ್ ನಮ್ಮ ಕಾನೂನು ಪ್ರಜ್ಞೆಯೇ ಇಲ್ಲದ ಸಮಾಜ ಮತ್ತು ಕೆಟ್ಟ ಆಡಳಿತವೇ ಈ ಬೆಳವಣಿಗೆಗೆ ಕಾರಣ ಎಂದು ಆರೋಪಿಸುತ್ತಾರೆ.

ಕಲ್ಲುಗಣಿಗಾರಿಕೆಯೊಂದಿಗೇ ಪಶ್ಚಿಮ ಘಟ್ಟಗಳಲ್ಲಿ ವ್ಯಾಪಕವಾಗಿ ಹರಡಿರುವ ರಿಯಲ್ ಎಸ್ಟೇಟ್ ದಂಧೆ ಮತ್ತು ಅಕ್ರಮ ಕಟ್ಟಡ ನಿರ್ಮಾಣಗಳು ಘಟ್ಟಗಳ ಸೂಕ್ಷ್ಮ ಭೂಪದರಗಳನ್ನು ಸಡಿಲಗೊಳಿಸುತ್ತವೆ ಹಾಗಾಗಿಯೇ ಮಳೆಯ ಪ್ರಮಾಣ ಅಧಿಕವಾದರೆ ಭೂ ಕುಸಿತ ಹೆಚ್ಚಾಗುತ್ತದೆ ಎಂದು ಗಾಡ್ಗಿಲ್ ವಿಷಾದಿಸುತ್ತಾರೆ. ಕೇರಳದಲ್ಲಿ ನಡೆಯುತ್ತಿರುವ ಈ ಮಾಫಿಯಾಗಳ ಬೆಳವಣಿಗೆಯ ಮತ್ತೊಂದು ಸ್ವರೂಪವನ್ನು ಉತ್ತರಖಂಡದಲ್ಲೂ ಕಾಣಬಹುದಾಗಿದೆ. 2013ರಲ್ಲಿ ಉತ್ತರಖಂಡದಲ್ಲಿ ಸಂಭವಿಸಿದ ಮೇಘ ಸ್ಪೋಟದಲ್ಲಿ ಆರು ಸಾವಿರಕ್ಕೂ ಹೆಚ್ಚು ಜನರ ಮೃತಪಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.

ಅರಣ್ಯ ಪ್ರದೇಶದ ಅತಿಕ್ರಮಣದಂತೆಯೇ ಅಣೆಕಟ್ಟುಗಳ ಸುತ್ತಮುತ್ತಲಿನ ಪ್ರದೇಶವನ್ನೂ ಅತಿಕ್ರಮಿಸಿ ತಮ್ಮ ರಿಯಲ್ ಎಸ್ಟೇಟ್, ತೋಟಗಾರಿಕೆ ಮತ್ತು ಗಣಿಗಾರಿಕೆಯನ್ನು ನಡೆಸುತ್ತಿರುವ ಧನಿಕ ಭೂಮಾಲೀಕರು ಇಡೀ ಪಶ್ಚಿಮ ಘಟ್ಟ ಪ್ರದೇಶವನ್ನು ಅಗ್ನಿಪರ್ವತವನ್ನಾಗಿ ಮಾಡಿರುವುದು ವಾಸ್ತವ. ಈ ಬಂಡವಾಳ ದಾಹಿಗಳ ಅಭಿವೃದ್ಧಿಗಾಗಿಯೇ ಸರ್ಕಾರ ತನ್ನ ಅಭಿವೃದ್ಧಿ ಮಾರ್ಗಗಳನ್ನು ಬದಲಿಸುತ್ತಾ ರಾಜಿ ರಾಜಕಾರಣ ಮಾಡುತ್ತಿರುವುದನ್ನು ಮೌನವಾಗಿ ನೋಡುತ್ತಲೇ ಇದ್ದೇವೆ. ಇದು ಕೇವಲ ಒಂದು ಪಕ್ಷಕ್ಕೆ ಸೀಮಿತವಾದ ವಿದ್ಯಮಾನವಲ್ಲ.

ಭಾರತೀಯ ಪ್ರಭುತ್ವ ಮತ್ತು ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಯ ಜಂಟಿ ಕಾರ್ಯಾಚರಣೆ ಇಂದಿನ ವಿಪತ್ತಿಗೆ ಪೂರ್ಣವಾಗಿ ಅಲ್ಲವಾದರೂ ಬಹುಮಟ್ಟಿಗೆ ಕಾರಣವಾಗಿದೆ. ಬಂಡವಾಳಶಾಹಿ ಅಭಿವೃದ್ಧಿ ಪಥದಲ್ಲಿ ಇದು ಸಹಜ ಎನ್ನುವಂತೆ ಕಾಣುತ್ತದೆ. ತಮ್ಮ ಭೂ ಆಸ್ತಿಯಿಂದ ದೂರದಲ್ಲಿದ್ದುಕೊಂಡು ಶ್ರಮಜೀವಿಗಳ ಬೆವರು ನೆತ್ತರಿನ ಫಲ ಉಣ್ಣುತ್ತಿರುವ ಧನಿಕ ಭೂಮಾಲೀಕರು ತಮ್ಮ ಕೊಚ್ಚಿ ಹೋದ ಭೂಮಿಗಾಗಿ ಪರಿತಪಿಸುತ್ತಿದ್ದಾರೆ.

ಮತ್ತೊಂದೆಡೆ ತಮ್ಮ ಮೂಲ ನೆಲೆಯನ್ನೇ ಮರೆತು ಅನ್ಯರ ಪ್ರಗತಿಗಾಗಿ ಬೆವರು ಸುರಿಸಿ ದುಡಿಯುವ ಶ್ರಮಜೀವಿಗಳು ತಮ್ಮ ಕೊಚ್ಚಿಹೋದ ಬದುಕಿಗಾಗಿ ಹಂಬಲಿಸುತ್ತಿದ್ದಾರೆ. ರುದ್ರ ರಮಣೀಯ ನಿಸರ್ಗದ ನಡುವೆಯೇ ನಡೆದಿರುವ ಪ್ರಕೃತಿಯ ರೌದ್ರಾವತಾರಕ್ಕೆ ಬಲಿಯಾಗಿರುವುದು ಕೇವಲ ಬೆಟ್ಟ ಗುಡ್ಡಗಳಲ್ಲ, ಮನೆ ಮತ್ತು ಭೂ ಆಸ್ತಿಯಲ್ಲ. ಈ ಪ್ರಕೃತಿ ವಿಕೋಪಕ್ಕೆ ಬಲಿಯಾಗಿರುವುದು ಭವಿಷ್ಯದ ಪೀಳಿಗೆ. ಪ್ರಕೃತಿಯನ್ನು ದೂಷಿಸೋಣ ಆದರೆ ಪ್ರಜ್ಞಾವಂತರಾಗಿ ಆತ್ಮಾವಲೋಕನಕ್ಕೂ ಅವಕಾಶ ನೀಡಬೇಕಲ್ಲವೇ ? ಮತ್ತೊಂದು ಕೇರಳ-ಕೊಡಗು ನಾಶವಾಗುವ ಮುನ್ನ !

Leave a Reply