ತ್ರಿಪುರದ ಊಟ ಮತ್ತು ಸಾಕಾಗುವಷ್ಟು ಪ್ರಶ್ನೆಗಳ ಸರಮಾಲೆ

ತ್ರಿಪುರಾದಲ್ಲಿ ಮೀನು, ಮಾಂಸ ಎರಡನ್ನೂ ದಿನ ಎರಡೂ ಹೊತ್ತಿನ ಊಟಕ್ಕೇ ಬಳಸುತ್ತಾರೆ. ಇಲ್ಲಿನ ಮುಖ್ಯ ಆಹಾರ ಅನ್ನ. ಗೋಧಿಗಿಂತಾ ಅನ್ನವನ್ನು ತಿನ್ನುವ ಜನರಿವರು. ಅನ್ನ, ಅದಕ್ಕೊಂದು ಮಸೂರ್ ಬೇಳೆಯ ತೆಳ್ಳಗಿನ ದಾಲ್ (ನೀರಿನ ರೀತಿಯ ಬೇಳೆಯುಕ್ತ ಸಾರು) ಜೊತೆಗೊಂದು ತರಕಾರಿಯ ಪಲ್ಯ ಅಥವಾ ಮೀನು, ಇದ್ದೇ ಇರುತ್ತದೆ. ಚಿಕ್ಕಪೆಟ್ಟಿಗೆ ಅಂಗಡಿಯ ತರದ ಹೊಟೇಲ್‍ಗಳಲ್ಲೂ ಅನ್ನ – ದಾಲ್ – ಪಲ್ಯದೊಂದಿಗೆ ಹಸಿ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಗೇ ಒಂದು ಹೋಳು ನಿಂಬೆಹಣ್ಣು ಕಡ್ಡಾಯವಾಗಿರುತ್ತದೆ. ಕೆಲವು ಕಡೆ ಒಂದು ತುಂಡು ಸೌತೇಕಾಯಿಯನ್ನೂ ಇಟ್ಟಿರುತ್ತಾರೆ. ಇದು ನನಗೆ ಬಹಳ ಇಷ್ಟವಾಯ್ತು. ಪುಟ್ಟದಾದ ಗಟ್ಟಿ ಹಸಿಮೆಣಸಿನಕಾಯಂತೂ, ನಮ್ಮ ಚಿಕ್ಕಬಳ್ಳಾಪುರದ ಮೆಣಸಿನಕಾಯಿಯ ಜಾತಿಯದೇ ಇರಬೇಕೆನಿಸಿದದ್ದು ನಿಜ, ಖಾರದಲ್ಲಂತೂ ಅದರಷ್ಟೇ, ಅಥವಾ ಅದಕ್ಕಿಂತ ಒಂದು ಕೈ ಮೇಲೆ ಎನ್ನಬಹುದು.

ಸೊಪ್ಪು! ಸೊಪ್ಪಿನ ಬಳಕೆ ಇವರ ಆರೋಗ್ಯದ ರಹಸ್ಯವೆನಿಸುತ್ತದೆ. ಒಂದು ಸೊಪ್ಪಿನ ಪಲ್ಯ ದಿನದ ಅಡುಗೆಯಲ್ಲಿರಲೇಬೇಕೆಂಬ ಪದ್ಧತಿಯನ್ನು ನಾನು ಕೊಲ್ಕತ್ತಾದಲ್ಲಿ ಗಮನಿಸಿದ್ದೇನೆ. ಬಾಳೇಕಾಯಿ ಅಥವಾ ದೊಡ್ಡ ಬದನೇಕಾಯಿ, ಆಲೂಗಡ್ಡೆ ಹೀಗೆ ತೆಳ್ಳಗೆ ಹೆಚ್ಚಿದ ಈ ತರಕಾರಿಯ ಹೋಳುಗಳನು ತೆಳುವಾದ ಕಡಲೇ ಹಿಟ್ಟಿನಲ್ಲಿ ಕರಿದು ಇವರು ಮಾಡುವ ಬಜ್ಜಿಯಂತೂ ತುಂಬಾ ರುಚಿಕರ. ಆದರೆ ಎಲ್ಲವೂ ಹಿತ, ಮಿತ! ಒಂದು ಅಥವಾ ಎರಡು ಬಜ್ಜಿಗಳನ್ನು ಮಾತ್ರ ಊಟಕ್ಕೆ ನೀಡುತ್ತಾರೆ. ದೊಡ್ಡ ಹೊಟೇಲಿನಲ್ಲಿ ಬಾಸುಮತಿ ಅನ್ನ ನೀಡಿದರೆ, ಹೊರಗಡೆ ಚಿಕ್ಕ-ಪುಟ್ಟ ಹೊಟೇಲ್‍ಗಳಲ್ಲಿ ಚಿಕ್ಕ ಅಕ್ಕಿಯ ಸಾಧಾರಣ ಅನ್ನ ಹಾಗೂ ನುಚ್ಚಕ್ಕಿಯ ಅನ್ನವನ್ನೂ ನೀಡುತ್ತಾರೆ ಕೊಡುವ ಅಳತೆ ಮಾತ್ರ ಸಿಕ್ಕಾಪಟ್ಟೆ ಜಾಸ್ತಿ. ನಾವು ಮೂರು ಹೊತ್ತು ತಿನ್ನುವ ಅನ್ನವನ್ನು ಒಂದೇ ಹೊತ್ತಿಗೆ ಇಲ್ಲಿನ ಜನ ತಿನ್ನುತ್ತಾರೆ. ಆದರೆ ಅಷ್ಟೇ ಕಠಿಣ ಪರಿಶ್ರಮದ ಬದುಕು ಅವರದಾಗಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಾನು ಮೊದಲು ಅಗರ್‍ತಲಾ ನಗರದಲ್ಲೇ ಇರುವ ಪ್ರವಾಸಿ ತಾಣಗಳನ್ನು ಮೊದಲು ಮುಗಿಸಿ, ನಂತರ ಊರಿಂದ ಹೊರಗಡೆ ಇರುವ ಜಾಗಗಳನ್ನು ನೋಡುವ ನಿರ್ಧಾರ ಮಾಡಿ, ಆ ಪಟ್ಟಿಯನ್ನು ತಯಾರಿಸಿಕೊಂಡೆ. ತ್ರಿಪುರದ ವಿಶ್ವವಿದ್ಯಾನಿಲಯವೂ ಆ ಪಟ್ಟಿಯಲ್ಲಿತ್ತು. ದಸರೆಗೆಂದು ವಿಶ್ವವಿದ್ಯಾನಿಲಯಕ್ಕೆ ರಜೆ ಘೋಷಿಸಲಾಗಿತ್ತು. ಆದರೂ, ವಿಶಾಲವಾದ ಬಿಳಿಯ ಕಟ್ಟಡ, ದೊಡ್ಡದಾದ ಪುಸ್ತಕ ಭಂಡಾರಗಳನ್ನು ನೋಡಿಕೊಂಡು ಬಂದೆ. ಅಲ್ಲಿ ಇಲ್ಲಿ ಇದ್ದ ಕೆಲವು ವಿದ್ಯಾರ್ಥಿಗಳನ್ನು ಮಾತನಾಡಿಸಿದೆ ಕೂಡಾ. ಇಲ್ಲಿಯೂ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆಂದು ಹೊರ ರಾಜ್ಯಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು. ಬೆಂಗಳೂರಿನಲ್ಲೂ ಹಲವಾರು ಕಾಲೇಜುಗಳಲ್ಲಿ ಈ ಈಶಾನ್ಯ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಗಮನಿಸಬಹುದು.

ಶುಭ್ರಶಂಕರ್ ದಾಸ್! ಯುವ ಉತ್ಸಾಹಿ ಕವಿ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರ, ಇಲ್ಲಿಯ ಶಾಲೆಯೊಂದರಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಹುಡುಗನ ಆಸಕ್ತಿ ಕಾವ್ಯ. ಎರಡು ಸಂಕಲನಗಳನ್ನು ಹೊರ ತಂದಿರುವ ಈತ, ನನಗೆ ದುಭಾಷಿಯಾಗಿ, ಅಗರ್‍ತಲಾದ ಸುತ್ತಮುತ್ತಲ ಜಾಗಗಳನ್ನು ಅವನಿಗೆ ಬಿಡುವಿರುವ ವೇಳೆಯಲ್ಲಿ ಹಾಗೂ ಶನಿವಾರ, ಭಾನುವಾರಗಳಂದು ನನ್ನೊಡನೆ, ಟ್ಯಾಕ್ಸಿಯಲ್ಲಿ ಕೆಲವು ಪ್ರವಾಸೀ ಸ್ಥಳಗಳಿಗೂ ಸಹಯಾತ್ರಿಯಾಗಿ ಬಂದ, ಅವನ ಪದ್ಯಗಳು ನವನವೀನ ರೂಪಕಗಳೊಂದಿದೆ, ಪದ್ಯ ಹೇಳಬಹುದಾದ ಹೊಸ ಸಾಧ್ಯತೆಗಳಿಗೆ ಮೂರ್ತ ರೂಪದಂತಿವೆ! ನನಗೆ ಈ ಕೆಲಸ ಎನ್ನುವುದೊಂದು ಇಲ್ಲದಿದ್ದರೆ, ಇಂಥ ಹೊಸ ಪ್ರತಿಮೆಗಳನ್ನು ನೀಡುವ ಉತ್ತಮ ಕವಿಗಳೊಂದಿಗೆ ಕಾಲಕಳೆಯುತ್ತಾ, ಅವರ ಪದ್ಯಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತಾ ಇದ್ದು ಬಿಡಬಲ್ಲೆ!

ಇಲ್ಲಿನ ಅನೇಕ ಸಾಹಿತಿಗಳ ಮನೆಗೆ ಕರೆದೊಯ್ದು, ಅವರೊಂದಿಗೆ ಕೆಲವು ಸಂಜೆಗಳನ್ನು ಕಳೆಯುವ ಅವಕಾಶ ನೀಡಿದ ಮತ್ತೊಬ್ಬ ಸ್ನೇಹಿತ ಪ್ರಬುದ್ಧ ಸುಂದರ್‍ಕರ್. ಕೇಂದ್ರ ಸಾಹಿತ್ಯ ಅಕಾಡೆಮಿಯ ಅನೇಕ ಕವಿ ಸಮ್ಮೇಳನಗಳಲ್ಲಿ ಕವಿತೆ ವಾಚಿಸಿರುವ ಪ್ರಬುದ್ಧ, ನಿಜಕ್ಕೂ ಒಬ್ಬ ಪ್ರಬುದ್ಧ ಕವಿ. ಬಿ.ಆರ್. ಲಕ್ಷ್ಮಣರಾವ್, ಪ್ರತಿಭಾ ನಂದಕುಮಾರ್, ಚಿಂತಾಮಣಿ ಕೊಡ್ಲೆಕೆರೆಯಂತ ಪ್ರಸಿದ್ಧ ಕವಿಗಳ ಕವಿತೆಗಳನ್ನು ಪ್ರಬುದ್ಧ ಅವರು, ಇಂಗ್ಲಿಷ್‍ನಿಂದ ಬಂಗಾಲಿ ಭಾಷೆಗೆ ತರ್ಜುಮೆ ಮಾಡಿದ್ದಾರೆ.
ಸಾಹಿತ್ಯಿಕವಾಗಿ ಕ್ರಿಯಾಶೀಲವಾಗಿ ದುಡಿಯುವ ಅನೇಕ ಸೃಜನಶೀಲ ಮನಸ್ಸುಗಳು ಇಲ್ಲಿ ಸಾಹಿತ್ಯ, ನಾಟಕ, ಸಂಗೀತ – ಹೀಗೆ ವಿಭಿನ್ನ ಆಸಕ್ತಿಯ ಕೆಲವರು ಒಂದು ಸಂಘ ಕಟ್ಟಿಕೊಂಡು, ಕವಿತಾ ವಾಚನ, ಹಾಡುಗಾರಿಕೆಯ ಹಲವು ಸಾಂಸ್ಕøತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಒಬ್ಬ ಪ್ರಕಾಶಕರೂ ಕೂಡ, ತನ್ನ ಪ್ರಕಾಶನ ಸಂಸ್ಥೆಯ ಮಾಳಿಗೆಯನ್ನು ಇಂಥ ಚಟುವಟಿಕೆಗಳಿಗೆಂದು ನೀಡುತ್ತಾ ಬಂದಿದ್ದಾರೆಂಬುದು ಖುಷಿ ಕೊಡುವ ಸಂಗತಿ.

ಅಗರ್‍ತಲಾದ ಸಾಹಿತ್ಯ ಜಗತ್ತಿನಲ್ಲಿ ಗಮನಾರ್ಹವಾಗಿ ಕಂಡ ಒಂದು ಚಿಕ್ಕ ಘಟನೆಯನ್ನು ಹೇಳದೇ ಹೋದರೇ ಜೀವ ನಿಲ್ಲುವುದಿಲ್ಲ. ಪ್ರಸಿದ್ಧ ಕತೆಗಾರರೊಬ್ಬರ ಮನೆಗೆ ಹೋಗಿದ್ದೆವು. ಅವರು ಬಂಗಾಲಿ ಮೇಷ್ಟ್ರು – ಅಷ್ಟರಲ್ಲಿ ಅವರ ಚುರುಕಾಗಿ ಪಾದರಸದಂತೆ ಓಡಾಡುತ್ತಿದ್ದ ಮಗಳು ನಮಗೆ ಚಹಾ ತಂದುಕೊಟ್ಟಳು. ನಾನು ಆ ಹುಡುಗಿಯ ಹೆಸರು ಕೇಳಿದೆ “ಅಂತರ್‍ಲೀನ”! ಹೆಸರು ಎಷ್ಟು ಆಕರ್ಷಕ! 17 ವಯಸ್ಸಿನ ಅಂತರ್‍ಲೀನಾ ಇನ್ನೂ ಎರಡನೇ ಪಿಯೂಸಿ ಓದುತ್ತಿದ್ದಾಳೆ. ಸಂಗೀತ, ನೃತ್ಯ, ಸಾಹಿತ್ಯದಲ್ಲಿ ಅಪಾರ ಆಸಕ್ತಿಯಿದೆ. ಅಷ್ಟೇ ಅಲ್ಲ, ಈಕೆ ಒಂದು ಇಂಗ್ಲಿಷ್ ಸಾಹಿತ್ಯಿಕ ಪತ್ರಿಕೆಯ ಸಂಪಾದಕಿ! ಅವಳಿಗೆ ನಗದು ರೂಪದಲ್ಲಿ ಬರುವ ಹುಟ್ಟುಹಬ್ಬದ ಕಾಣಿಕೆಯನ್ನು ಅವಳು ಪತ್ರಿಕೆ ತರಲು ಬಳಸಿಕೊಳ್ಳುತ್ತಿದ್ದಾಳೆ. ಹೆಮ್ಮೆ, ಆಶ್ಚರ್ಯ ಹಾಗೂ ಸಂತೋಷಗಳಿಂದ ಅಂತರ್‍ಲೀನಾಳನ್ನು ಅಪ್ಪಿಕೊಂಡು, ಅವಳ ಮುಂದಿನ ಯೋಜನೆಗಳ ಬಗ್ಗೆ ಕೇಳಿದೆ.

ಅವಳು ಬರೆದ ಸಂಪಾದಕೀಯದ ಬಗ್ಗೆ ವಿಚಾರಿಸಿದೆ. ಸಾಹಿತ್ಯ ಪತ್ರಿಕೆ, ಅದೂ ಆಂಗ್ಲ ಭಾಷೆಯದು! ಇದಕ್ಕಿರುವ ಓದುಗರ ಬಳಗದ ಬಗೆಗೂ ವಿಚಾರಿಸಿದೆ. ಯಾವುದಕ್ಕೂ ನಿರಾಶಾದಾಯಕ ಉತ್ತರ ಹೇಳದೇ ಎಲ್ಲಕ್ಕೂ ಒಂದು ಧನಾತ್ಮಕ ಧೋರಣೆಯ ಸಮಜಾಯಿಷಿ ನೀಡುತ್ತಲೇ, ದಿಟ್ಟತನ ತೋರಿದ ಈ ಹುಡುಗಿಯ ಅಂತಸ್ಥೈರ್ಯ, ಸಾಹಿತ್ಯದ ಬಗೆಗಿನ ವ್ಯಾಮೋಹ ಹಾಗೂ ಅಗಾಧ ಪ್ರೀತಿ ಪ್ರತಿ ಚರ್ಚೆಯಲ್ಲೂ ವ್ಯಕ್ತವಾಗುತ್ತಿತ್ತು. ‘ಬಿಯಾಂಡ್ ಇಮ್ಯಾಜಿನೇಷನ್’ ಎಂಬ ಈ ಪತ್ರಿಕೆಯ ಮೂರನೇ ಸಂಚಿಕೆಯನ್ನು ಅವಳು ನನಗೆ ನೀಡಿದಳು. ನಾನು ಅವಳ ಪತ್ರಿಕೆಗೆ ವಾರ್ಷಿಕ ಚಂದಾ ನೀಡಿದೆ. ನಿಜಕ್ಕೂ ತ್ರಿಪುರವೆಂಬ ಚಿಕ್ಕ ರಾಜ್ಯದ ಪುಟ್ಟ ಪಟ್ಟಣದ ಅಗರ್‍ತಲಾದಲ್ಲಿ ಇಂಧ ಪತ್ರಿಕೆಯನ್ನು ಇಷ್ಟು ಚಿಕ್ಕ ವಯಸ್ಸಿನ ಹುಡುಗಿ ನಡೆಸುತ್ತಿರುವುದು, ಇಟ್ ಇಸ್ ಬಿಯಾಂಡ್ ಎನಿಬಡೀಸ್ ಇಮ್ಯಾಜಿನೇಷನ್!

ಪತ್ರಿಕೆಯಲ್ಲಿ ಇಂಗ್ಲಿಷ್ ಕವಿತೆಗಳು, ಯುವ ಮನಸ್ಸುಗಳ ತಲ್ಲಣ ಹಾಗೂ ಛಾಯಾಚಿತ್ರಕ್ಕೆ ಮನಸೋತ ಯುವಕರು, ಯುವತಿಯರು ತೆಗೆದಿರುವ ಆಕರ್ಷಕ ಸೃಜನಾತ್ಮಕ ಚಿತ್ರಗಳೇ ತುಂಬಿತ್ತು. ಬಣ್ಣದಲ್ಲಿರುವ ಮುಖಪುಟ, ಒಳಗಿನ ಹಲವು ಪುಟಗಳೂ ವರ್ಣಮಯ. ಅಂತರ್‍ಲೀನಾ ಬರೆದ ಒಂದು ಚಿಕ್ಕ ಲೇಖನವೊಂದರ ಚಿಕ್ಕ ಅನುವಾದ ನೀಡಲು ಬಯಸುತ್ತೇನೆ. ಅಂತರ್‍ಲೀನಾ ಪ್ರತಿ ದಿನವೂ ಬೇಲ್‍ಪುರಿ, ಚಾಟ್ ತಿನ್ನುವ ವ್ಯಕ್ತಿಯನ್ನು ಸಂದರ್ಶಿಸಿ, ಅವನ ಬಗ್ಗೆ ಲೇಖನ ಬರೆಯಲು ನಿರ್ಧರಿಸುತ್ತಾಳೆ. ಅವನ ಬಳಿಗೆ ಹೋಗಿ, ‘ನಿಮ್ಮ ಹೆಸರೇನು’? ಎಂದು ಕೇಳಿದಾಗ, ಅವನಿಗೆ ತಕ್ಷಣ ಅವನ ಹೆಸರೇ ನೆನಪಿಗೆ ಬರುವುದಿಲ್ಲ! ಪ್ರತಿದಿನ ಬಂದವರು ಯಾವಾಗಲೂ, ಬೇಲ್‍ಪುರಿ, ಪಾನಿಪುರಿ, ಮಸಾಲಪುರಿ ಕೊಡಿ ಎನ್ನುವುದೋ, ಎಷ್ಟು ಪ್ಲೇಟು ಎನ್ನುವುದೋ ಅಥವಾ ದುಡ್ಡೆಷ್ಟು ಎನ್ನುವುದನ್ನು ಕೇಳಿ ಕೇಳಿ ರೂಢಿಯಾದ ಅವನಿಗೆ, ಇಂಥ ಪ್ರಶ್ನೆಗೆ ಮನಸ್ಸು ಗಲಿಬಿಲಿಯಾದ ಚಿತ್ರಕ ಶೈಲಿಯ ಲೇಖನ ಬರೆದಿದ್ದಾಳೆ, ಈ ಚಿಗರೆ ಕಣ್ಣುಗಳ ಯುವತಿ ಅಂತರ್‍ಲೀನಾ. ನಿನಗೆ ತುಂಬು ಹೃದಯದ ಶುಭ ಹಾರೈಕೆಗಳು ಎನ್ನುವುದನ್ನು ಪ್ರಾಂಜಲ ಮನಸ್ಸಿನಿಂದ ತಿಳಿಸಿದೆ. ಕನ್ನಡದ ಓದುಗರಿಗೆ ಬಹಳ ಬೇಗ ನಿನ್ನ ಪರಿಚಯ ಮಾಡಿಕೊಡುತ್ತೇನೆ ಎಂದೂ ತಿಳಿಸಿ ಬಂದೆ.

ಮಾರನೆಯ ದಿನದಿಂದ, ನನ್ನ ಹೊರ ಜಿಲ್ಲೆಗಳ ಪ್ರವಾಸೀ ತಾಣಗಳಿಗೆ ಟ್ಯಾಕ್ಸಿ ಮತ್ತೆ ವಾರಕ್ಕೆಂದು ಮುಂಗಡವಾಗಿ ಬುಕ್ ಮಾಡಿಕೊಂಡಿದ್ದಾಯ್ತು. “ಶಹಾ” ಎನ್ನುವ ಹುಡುಗ, ನಂಬಿಕಸ್ಥ. ‘ನಿಮ್ಮನ್ನು’ ಹೂವಿನ ರೀತಿ ಎಲ್ಲಾ ಕಡೆ, ಕರೆದುಕೊಂಡು ಹೋಗುತ್ತಾನೆ, ಎಲ್ಲಕ್ಕಿಂತ ಮುಖ್ಯವಾಗಿ, ಇವನೇ ನಿಮ್ಮ ಗೈಡ್ ಕೂಡಾ, ಆದರೆ ಇಂಗ್ಲಿಷ್ ಬಾರದ ಗೈಡ್. ನಿಮ್ಮ ಅನುಕೂಲಕ್ಕೆಂದು ಹುಡುಕಿ, ಹಿಂದಿ ಬರುವ “ಶಹಾ”ನನ್ನು ‘ನಿಮಗೋಸ್ಕರ’ ಹುಡುಕಿ ತಂದಿದ್ದೇವೆ. ‘ನಿಮಗೆ’ ಇಷ್ಟವಾದರೆ, ಅವನಿಗೆ ಭಕ್ಷೀಸು ಕೊಡಿ. ಕೂಡಲೇ ಬೇಕು ಅಂತೇನಿಲ್ಲ, ‘ನಿಮಗೆ’ ಕೊಡಬೇಕಿನಿಸಿದರೆ ಕೊಡಿ, – ಹೀಗೆ ಅದೇ ಸವಕಲು ಹಳೆಯ ಸಂಭಾಷಣೆ. ‘ನೀವು’, ‘ನಿಮಗೆ’, ‘ನಿಮಗೋಸ್ಕರ’ ಪದಗಳನ್ನು ಅದೆಷ್ಟು ವಿಶೇಷವಾಗಿ ಬಳಸುತ್ತಾರೆಂದರೆ, ಈ ಪ್ರವಾಸೀ ಸಂಸ್ಥೆಯ ಏಜೆಂಟರುಗಳಿಗೆ ಒಂದು ಪ್ರಶಸ್ತಿ ಕೊಡಬಹುದು. ಗ್ರಾಹಕನನ್ನು, ನೀನು ವಿಶೇಷ ವ್ಯಕ್ತಿ, ನೀನು ನಮಗೆ ತುಂಬಾ ಮುಖ್ಯ, ನಿನ್ನನ್ನು ಬಿಟ್ಟರೆ ನಮಗೆ ಬೇರೆ ಗುರಿಯಿಲ್ಲ, ಎಂಬುದನ್ನು ನಮಗೆ ಹೇಳುತ್ತಾ, ಹೇಳುತ್ತಾ, ನಮ್ಮ ಆತ್ಮರತಿಯ ಬಲೂನು ಉಬ್ಬುತ್ತಾ, ಉಬ್ಬುತ್ತಾ, ಕೊನೆಗೆ ನಮ್ಮ ಜೇಬಿಗೆ ದೊಡ್ಡ ಕತ್ತರಿಯೇ ಬಿದ್ದಿರುತ್ತದೆ ಎಂಬುದು ನಮಗೆ ಎಷ್ಟೋ ಕಾಲದ ನಂತರ ಅರಿವಿಗೆ ಬರುತ್ತದೆ! ಹಾಗಾಗಿ ಬೇಕಾದಷ್ಟು ದೇಶ ಸುತ್ತಿ, ಕೋಶ ಓದದೇ, ಹಲವು ಕೆರೆ, ನದಿ, ಸಮುದ್ರಗಳ ನೀರನ್ನು ಕುಡಿದು, ಕೆಲವು ಕಡೆ ಈಸಿರುವುದರಿಂದ, ನೇರಾನೇರ ಚೌಕಾಸಿಗೆ ಬಿದ್ದು, ಅವರ ಮುಖಭಂಗವಾಗದಂತೆ, ಜಾಣತನದಲ್ಲೇ ಕೆಲವು ರಿಯಾಯಿತಿಗಳನ್ನು ಪಡೆಯುವಲ್ಲಿ ಯಶಸ್ವಿಯಾದೆ.

ಎಲ್ಲಿ ಹೋದರೂ, ಒಂದೇ ಪ್ರಶ್ನೆ, ನೀವೊಬ್ಬರೇ ಬಂದಿದ್ದೀರಾ? ಯಾಕೆ? ಕುಟುಂಬದವರು ಆಮೇಲೆ ಬರ್ತಾರಾ? ಇಲ್ಲಿಗೆ ತುಂಬಾ ಸತಿ ಬಂದಿದ್ದೀರಾ? ಬಂಗಾಳಿ ಭಾಷೆ ಬರದೇ ಇಲ್ಲಿಗೆ ಯಾಕೆ ಬಂದ್ರಿ? ಒಬ್ಬರೇ ನಿಮಗೆ ಬೇಜಾರಾಗೋದಿಲ್ವಾ? ಇಡೀ ಕಾರು ನಿಮ್ಮೊಬ್ಬರಿಗೆ ತೊಗೊಂಡ್ರಾ? ರಾತ್ರಿ, ಯಾರು ಗೊತ್ತಿಲ್ಲದ ಜಾಗದಲ್ಲೇ ಒಬ್ಬರೇ ಇರೋದಕ್ಕೆ ಭಯ ಆಗೋದಿಲ್ವಾ? ಕರೆಂಟ್ ಹೋದ್ರೆ ? ಕಳ್ಳ ಬಂದ್ರೆ ? ಲೂಟಿ ಮಾಡಿದ್ರೇ? ರೇಪ್ ಮಾಡಿದ್ರೆ?
‘ಓ ಮೈ ಗಾಡ್ !!!’ ಅದೆಷ್ಟು ಪ್ರಶ್ನೆಗಳು? ಅದೆಷ್ಟು ಆತಂಕಗಳು? ಅದೆಷ್ಟು ಕುತೂಹಲಗಳು? ಅದೆಷ್ಟು ಹಿಂಜರಿಕೆಗಳು? ಅದೆಷ್ಟು ಲಿಂಗಾಧಾರಿತ ಮುಜುಗರಗಳು?

ಒಬ್ಬ ಹೆಣ್ಣು ಎಂದ ಕೂಡಲೇ ಯಾಕೆ ನಮ್ಮ ಸುತ್ತಮುತ್ತಲ ಮನಸ್ಸುಗಳು ಈ ಪರಿ ವರ್ತಿಸುತ್ತವೆ? ನಮ್ಮ ಸಮಾಜಕ್ಕೆ ಈ ‘ಹೆಣ್ಣು’ ಎಂಬ ಪದದ ಬಗ್ಗೆ ಯಾಕಿಷ್ಟು ಉಸಿರುಗಟ್ಟಿಸುವ ಮಟ್ಟಿಗಿನ ಒಡೆತನ?
ಅಲ್ಲಾ, ಯಾವುದೋ ಗೊತ್ತಿಲ್ಲದ ರಾಜ್ಯದ ಹೊಟೇಲ್ ಪ್ರವಾಸೋದ್ಯಮಿಗೆ ನಾನು ನನ್ನ ಕುಟುಂಬದ ಹಿನ್ನೆಲೆ, ನಾನು ಬಂದ ಕಾರ್ಯದ ಬಗ್ಗೆ ವಿವರ ನೀಡಬೇಕಾಗಿ ಬಂದ ನನ್ನ ಸಮಾಜದ ಕುಹಕದ ಬುದ್ದಿ-ನೋಟಗಳಿಗೆ ನನ್ನ ಬಹಿರಂಗ ಖಂಡನೆ ಹಾಗೂ ಖೇದಗಳನ್ನು ಇಲ್ಲಿ ದಾಖಲು ಮಾಡಲೇಬೇಕು.

ನನಗೆ ಮದುವೆಯಾಗಿದೆ. ನನ್ನ ಗಂಡ ಇಂಥವನು, ನನಗೆ 20 ವರ್ಷ ವಯಸ್ಸಿನ ಮಗನಿದ್ದಾನೆ, ಅವರಿಗೆ, ಅವರವರ ಕರ್ತವ್ಯಗಳಿವೆ. ನನಗೋಸ್ಕರ ‘ರಜೆ’ ಹಾಕಿ ಬರಲು ಸಾಧ್ಯವಿಲ್ಲದಷ್ಟು ಕಾರ್ಯದ ಒತ್ತಡಗಳಿವೆ. ಎಂದೆಲ್ಲಾ ಹೇಳಬೇಕಾಗಿ ಬಂತು. ಏಕೆಂದರೆ, ನಾನು, ನನಗೋಸ್ಕರ, ಇಲ್ಲಿ ಓಡಾಡಿ, ನನಗಿಷ್ಟ ಬಂದ ಹಾಗೆ, ನನ್ನ ದಿನಚರಿಯಲ್ಲಿ ಯಾವುದೇ ನಿರ್ಬಂಧಗಳಿಲ್ಲದೇ ಇರಲು ಬಯಸುವ ಹೆಣ್ಣು, ಎಂದರೆ, ಇಲ್ಲಿ ಯಾರಿಗೂ ಅರ್ಥವಾಗುವುದಿಲ್ಲ. ಗಂಡಸಿಲ್ಲದೇ ಒಬ್ಬಂಟಿಯಾಗಿ ಬಂದ ಹೆಣ್ಣು, ನಮಗೆ ಸುಲಭವಾಗಿ ಲಭ್ಯವಾಗುತ್ತಾಳೆ ಅನ್ನುವ ಮಾರ್ಮಿಕ ಮಾತುಗಳನ್ನು ಹೇಗೆ ನಿಭಾಯಿಸಿಕೊಳ್ಳಬೇಕು ಎಂದು ತಿಳಿದರೆ ಸಾಕು, ನಾವು ನಮ್ಮ ಜಗತ್ತಿನಲ್ಲಿ ಸರ್ವಸ್ವತಂತ್ರರು.

ಇದು ತುಂಬಾ ಅಪಾಯಕಾರಿ, ತಿಳಿದಿದ್ದೂ ಅಪಾಯ ಮೈಮೇಲೆ ಎಳೆದುಕೊಂಡ ಹಾಗೆ ಎಂದು ಭಾವಿಸುವವರಿಗೆ ನನ್ನ ಉತ್ತರ, ಯಾರಾದರೂ ಜೊತೆಗಿದ್ದ ಮಾತ್ರಕ್ಕೆ ನಮಗೆ ಝೆಡ್ ಸೆಕ್ಯುರಿಟಿ ರಕ್ಷಣೆ ಇದ್ದ ಹಾಗಲ್ಲ, ಅನಾಹುತ ಆಗ ಬೇಕಿಂದಿದ್ದರೆ, ಎಲ್ಲಿ, ಯಾವಾಗ, ಯಾರಿಗೆ ಬೇಕಾದರೂ ಆಗಬಹುದು… ಎಂಬುದು ನಾನು ನಂಬಿರುವ ಸಿದ್ಧಾಂತ. ಅದರಲ್ಲೂ ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಇರುವ ಕೆಲ ಸ್ಥಾಪಿತ, ಬೇರು ಬಿಟ್ಟ ನಂಬಿಕೆಗಳಿಗೆ ವಿದಾಯ ಹೇಳಬೇಕಾದ ಜರೂರು, ಎಂದಿಗಿಂತಲೂ ಇಂದು ಹೆಚ್ಚಾಗಿದೆ.

ನನ್ನ ಎಲ್ಲಾ ಇಂಥ ಯೋಜನೆ – ಯೋಚನೆಗಳಿಗೆ ಸದಾ ಉತ್ಸಾಹಭರಿತ ಮಾತುಗಳನ್ನಾಡುತ್ತಾ ನನ್ನನ್ನು ಹುರಿದುಂಬಿಸುವ ತಂದೆ-ತಾಯಿ, ಅಣ್ಣ-ಅಕ್ಕ-ಇವರ ಕುಟುಂಬಗಳು ಮಾತ್ರವಲ್ಲದೇ, ನನ್ನ ಈ ರೀತಿಯ ಏಕಾಂಗಿ ದಿಟ್ಟತನದ ಸವಾಲುಗಳಿಗೆ ಎಂದೂ ನಕಾರಾತ್ಮಕವಾಗಿ ಏನನ್ನೂ ಹೇಳದ, ನನ್ನ ಗಂಡ ಹಾಗೂ ಮೆಚ್ಚುಗೆಯ ಮಾತನ್ನಾಡುತ್ತಾ ಕೆಲವು ಅತ್ಯಮೂಲ್ಯ ಸಲಹೆಗಳನ್ನೂ ಪುಕ್ಕಟೆಯಾಗಿ ನೀಡುವ ನನ್ನ ಸುಪುತ್ರನಿರುವಾಗ, ನನಗಿನ್ನೇನು ಬೇಕು? ಆಕಾಶ ಮುಟ್ಟಲು ಹಾರÀುವ ಗರಿ ಸಿದ್ಧ ಮಾಡಿಕೊಂಡರೆ, ಸಾಕು! ಕಟ್ಟಾ ಸಂಪ್ರದಾಯಸ್ಥ! ಮನಸ್ಸುಗಳಿಗೆ ‘ಐ ಡೋಂಟ್ ಕೇರ್’ ಎನ್ನುವುದೇ ನನ್ನ ಉತ್ತರ!

2 comments

  1. ಅಂತರ್ಲಿನಾಳಂತೆ ನಿಮ್ಮ ಪಯಣ ಕೂಡ beyond imagination ಮೇಡಂ, ಸ್ಫೂರ್ತಿದಾಯಕವಾದ ನಿಮ್ಮ ನಡಿಗೆಗೆ ನನ್ನದೊಂದು ಸಲಾಂ….

  2. ನನಗೆ ಮದುವೆಯಾಗಿದೆ. ನನ್ನ ಗಂಡ ಇಂಥವನು, ನನಗೆ 20 ವರ್ಷ ವಯಸ್ಸಿನ ಮಗನಿದ್ದಾನೆ, ಅವರಿಗೆ, ಅವರವರ ಕರ್ತವ್ಯಗಳಿವೆ. ನನಗೋಸ್ಕರ ‘ರಜೆ’ ಹಾಕಿ ಬರಲು ಸಾಧ್ಯವಿಲ್ಲದಷ್ಟು ಕಾರ್ಯದ ಒತ್ತಡಗಳಿವೆ. ಎಂದೆಲ್ಲಾ ಹೇಳಬೇಕಾಗಿ ಬಂತು…. I did the same in Stuttgart. Obba Pakistani, 3 dina… nanna benne bidada betaaladante barthaane idda.. I said.. nanna ganda officalli idhaane.. naan maathra suttakke bandidheeni anta 😛

Leave a Reply