ಕುಶಲವೇ ಗೆಳತಿ….

  ಆಶಾ ಜಗದೀಶ್ 

ನಿಮ್ಮಲ್ಲಿ ಮಳೆ ಧಾರಾಕಾರ
ಸುರಿಯುತ್ತಿದೆಯೆಂದು ನ್ಯೂಸ್ ಬಿತ್ತರಿಸುತ್ತಿದೆ
ಆಕಾಶಕ್ಕೆ ಹೊಂಡಬಿದ್ದಂತೆ
ಸಮುದ್ರವೇ ನದಿಯ ಹುಡುಕಿಬಂದಂತೆ
ಎಲ್ಲವೂ ನೀರುಮಯ

ನೀರೆಂದರೆ ನನಗೆಷ್ಟೋ ಇಷ್ಟ
ಅದಕ್ಕಷ್ಟು ಹಸಿರು ಹಿನ್ನಲೆಯಿದ್ದುಬಿಟ್ಟರೆ
ಮೊಸರನ್ನದ ಜೊತೆ ಉಪ್ಪಿನಕಾಯಿ
ಮೆದ್ದಷ್ಟೇ ಚಂದ

ನಿನ್ನೂರು ಗಡ್ಡೆಯ ಮೇಲಿದೆ ಅಂದದ್ದು ನೆನಪು
ಬಹುಶಃ ಮಳೆ ನೀರು ಗಡ್ಡೆ ಹತ್ತಿರಲಿಕ್ಕಿಲ್ಲ
ನೀನಲ್ಲಿ ಹುಷಾರಿದ್ದೀ ಅನ್ನುವ ಸಣ್ಣ ಮಾತೊಂದು
ಅಧಿಕೃತವಾಗಿ ನಿನ್ನ ಬಾಯಿಂದ ಹೊರಬಂದುಬಿಟ್ಟರೆ ಸಾಕು
ನನಗಿಲ್ಲಿ ನಿರಾಳ

ಆಗಾಗ ಪವರ್ ಕಟ್ ಆಗುತ್ತಿರುವುದರಿಂದ
ನಿನ್ನೂರು ಮುಳುಗುತ್ತಿರುವುದನ್ನು
ಸರಿಯಾಗಿ ನೋಡಲೂ ಆಗುತ್ತಿಲ್ಲ
ನೀನು ಕಳಿಸಿದ್ದ ಮೆಸೇಜಸ್ಸನ್ನು
ಹತ್ತಾರು ಗುಂಪುಗಳಿಗೆ ಹಂಚಿದ್ದೇನೆ
ಯಾರಾದರೂ ಪುಣ್ಯಾತ್ಮರು ಖಂಡಿತ
ಸಂತ್ರಸ್ಥರಿಗೆ ಸಹಾಯ ಮಾಡುತ್ತಾರೆ

ಇಲ್ಲಿ ಮೋಡ ಕವಿದ ವಾತಾವರಣ
ಆಗಾಗ ತುಂತುರು ಮಳೆ
ಗಾಳಿ ಜೋರು ಬೀಸಿ ಸುಮ್ಮನಾಗಿ
ಉಸಿರು ತೆಗೆದುಕೊಳ್ಳುತ್ತದೆ
ಮತ್ತೊಮ್ಮೆ ಬೀಸಲು
ಬಿಸಿಲು ಕಾಣಿಸಿಕೊಂಡು ಐದಾರು
ದಿನವಾಯಿತು

ಹೊಗೆಯಾಡುವ ಕಾಫಿಯ ಜೊತೆ
ಬಿಸಿ ಬಿಸಿ ಬೋಂಡ ಬಜ್ಜಿ
ಶಾಲು ಹೊದ್ದು ನೆಂಚುತ್ತಾ ಕೂತಿದ್ದೇನೆ
ಒಂದು ಸಣ್ಣ ಮಳೆಗಾಗಿ ಕಾಯುತ್ತಾ

ಭೂಕುಸಿತಕ್ಕೆ ಸಿಕ್ಕಿ ಇಡಿದೆ ಮನೆ
ಆಟಿಕೆಯಂತೆ ಪಾತಾಳ ಸೇರುತ್ತಿರುವ ಚಿತ್ರಣ
ಕೊಚ್ಚಿ ಹೋಗುತ್ತಿರುವ ಜನ
ಹುಲ್ಲು ಕಡ್ಡಿಯನ್ನೂ ಕಡೆಗಣಿಸುತ್ತಿಲ್ಲ
ಅಪಘಾತಕ್ಕೀಡಾದ ಬದುಕು
ಆಘಾತಗೊಂಡ ಮನಸ್ಸು
ಏನೆಲ್ಲಾ ವಿಡಿಯೋಗಳು
ಎಷ್ಟೆಲ್ಲಾ ಫೋಟೋಗಳು
ಟೀವಿ ವಾಟ್ಸ್ಯಾಪ್ ಫೇಸ್ಬುಕ್ಕಿನ ತುಂಬ
ಯಾವ ಭೇದವೂ ಇಲ್ಲ ತುಳಿದು ಸಮ
ಮಾಡುವ ಬುಲ್ಡೋಜರ್ರಿನ ಚಕ್ರಕ್ಕೆ
ಪಾಪದ ಜನ…

ನಾವೆಲ್ಲ ಎಷ್ಟು ಪುಣ್ಯವಂತರು
ನಮ್ಮ ಸೂರುಗಳಿನ್ನು ಗಟ್ಟಿ ನಿಂತಿವೆ
ಪ್ರಕೃತಿಯ ಮುನಿಸಿಗೆ ಯಾರು ಹೊಣೆ
ಹೋಗಲಿ ಹೇಳು
ನೀನಾದರೂ ಹೇಗಿರುವೆ ಎಂದು….

“ಗೆಳತಿ ನಿನ್ನ ಕಾಳಜಿಗೆ ಹೃದಯ ತುಂಬಿ
ಹರಿದು ನನ್ನನ್ನು ಮುಳುಗಿಸುತ್ತಿದೆ…
ಮತ್ತು ಊರೇ ಸತ್ತಿರುವಾಗ
ನಾನೊಬ್ಬಳೇ ಬದುಕಿರುವೆನೆಂದು
ಹೇಗೆ ಹೇಳಲಿ ಹೇಳು….”

 

2 comments

Leave a Reply