ಸರ್ಕಾರಿ ಹಿ.ಪ್ರಾ ಶಾಲೆಯೂ.. ಪ್ರವೀಣನೆಂಬ ದಡ್ಡನೂ..

    ಗೊರೂರು ಶಿವೇಶ್

ಸರ್ಕಾರಿ.ಹಿ.ಪ್ರಾ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ, ಹಿರಿಯರನ್ನು ಬಾಲ್ಯಕ್ಕೂ, ಯುವಕರಿಗೆ ವ್ಯರ್ಥವಾದ ಬಾಲ್ಯವನ್ನು ಮತ್ತು ಮಕ್ಕಳಿಗೆ ತಾವು ಕಳೆದುಕೊಳ್ಳುತ್ತಿರುವ ಸುಂದರ ಬಾಲ್ಯವನ್ನು ನೆನಪಿಸುವ ಚಿತ್ರ. ಪ್ರಸ್ತುತ ಕನ್ನಡ ಶಾಲೆಗಳ ದುಸ್ಥಿತಿ, ಶಾಲೆ ಮುಚ್ಚುತ್ತಿರುವುದರಿಂದ ಆಗುವ ಸಂಕಷ್ಟಗಳು, ಶಾಲೆಯ ಮುಚ್ಚುವ ಹಿಂದಿನ ಹುನ್ನಾರಗಳನ್ನು ಹೇಳುವ ಪ್ರಯತ್ನವನ್ನು ಮಾಡಿದೆವಾದರೂ ಭಾಷೆಯ ಭಾವಾವೇಶದ ಹಿನ್ನೆಲೆಯಲ್ಲಿ ಅರಳಿರುವುದು ಬಾಲ್ಯದ ವಿವಿಧ ವಿನೋದಾವಳಿಗಳು. ವಿನೋದದ ಹಿನ್ನೆಲೆಯಲ್ಲಿ ಶಾಲೆ ಮುಚ್ಚುವ ವಿಷಾದದ ಕಥೆಯನ್ನು ಹೇಳಲಾಗಿದೆ.

ಕಾಸರಗೋಡು ಹಿಂದೊಮ್ಮೆ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿದ್ದರೂ ಭಾಷಾವಾರು ಪ್ರಾಂತ್ಯ ವಿಂಗಡಣೆಯ ಸಂದರ್ಭದಲ್ಲಿ ಕೇರಳಕ್ಕೆ ಸೇರಿಹೋದ ಜಿಲ್ಲೆ. ಮೊದಲ ರಾಷ್ಟ್ರಕವಿ ಗೋವಿಂದ ಪೈ ನಾವು ಓದಲು ತಿಣುಕುತ್ತಿದ್ದ ಕಯ್ಯಾರ ಕಿಞಣ್ಣರೈರಂತ ಶ್ರೇಷ್ಠಕವಿಗಳಿದ್ದ ದಕ್ಷಿಣಕನ್ನಡದ ಭಾಗವಾಗಿದ್ದ ಜಿಲ್ಲೆ. ಪ್ರಸ್ತುತ ಅಲ್ಲಿನ ಕನ್ನಡ ಶಾಲೆಗಳು ಮಲೆಯಾಳಂ ಶಾಲೆಗಳಾಗಿ ಪರಿವರ್ತನೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಒಂದು ಶಾಲೆಯ ಮುಚ್ಚುವಿಕೆಯಿಂದಾಗಿ ಒಂದು ಭಾಷೆಯ ಜೊತೆಗೆ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರ, ನಂಬಿಕೆಗಳು ನಾಶವಾಗುವ ಇಲ್ಲವೆ ಮಾಯವಾಗುವ ಅಪಾಯವನ್ನು ಮನದಟ್ಟು ಮಾಡುತ್ತ ಸಾಗುವ ಚಿತ್ರವೂ ಹೌದು.

ಶೈಕ್ಷಣಿಕ ಮಧ್ಯದಲ್ಲಿ ಜೂನ್, ಜುಲೈ ಕಳೆದೊಡನೆ ಪ್ರತಿವರ್ಷದ ಆರಂಭದಲ್ಲಿಯೂ ಕೇಳಿ ಬರುವ ಮಾತೆಂದರೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಬಹುದಾದ, ಸ್ಥಳಾಂತರ ಮತ್ತು ವರ್ಗಾವಣೆಯ ಶಾಲೆಗಳ ಸುದ್ದಿಗಳು. ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರು ಈ ಕತ್ತಿಯ ಅಂಚಿನ ನಡುವೆ ಜೀವಿಸುತ್ತಿದ್ದಾರೆ. ಶಾಲೆ ಮುಚ್ಚಲು ಇರುವ ಖಾಸಗಿ ಶಾಲೆಗಳೆಡೆಗೆ ಪೋಷಕರ ತುಡಿತ, ಸಣ್ಣ ಗ್ರಾಮಗಳಿಂದಲೂ ಮಕ್ಕಳನ್ನು ಹೊತ್ತೊಯ್ಯುವ ಹಳದಿ ಬಸ್ಸುಗಳು, ಶಿಕ್ಷಕರ ಕೊರತೆ, ಇಂಗ್ಲೀಷ್ ಮಾದ್ಯಮದ ಆಕರ್ಷಣೆಯ ಜೊತೆಗೆ ಅಧಿಕಾರಿಗಳ ದರ್ಪ, ಪ್ರತಿಷ್ಠೆ ಒಮ್ಮೊಮ್ಮೆ ಶಿಕ್ಷಕರ ನಿರ್ಲಕ್ಷ, ಬೇಜವಾಬ್ದಾರಿಯೂ ಕೂಡ ಕಾರಣ ಎಂಬುದು ವಿಷಾದದ ಸಂಗತಿ. ಆದರೆ ಚಿತ್ರವು ಕನ್ನಡ ಮಾಧ್ಯಮದ ಮೇಲೆ ಮಲೆಯಾಳಂ ಮಾಧ್ಯಮದ ಹೇರುವಿಕೆಯನ್ನು ವಿರೋಧಿಸುತ್ತಿದೆಯೆ ಹೊರತು ಭಾಷಾ ಮಾಧ್ಯಮದ ಶಾಲೆಗಳ ಮೇಲೆ ಇಂಗ್ಲೀಷ್ ಮಾಧ್ಯಮದ ಪ್ರಭಾವ ಕುರಿತು ಚರ್ಚೆಯಾಗದಿರುವುದು ಗಮನಾರ್ಹ ಸಂಗತಿ.

ಸಿನಿಮಾವು ಬಾಲ್ಯದ ಕದ ತೆರೆದಿರುವುದು 2007ರ ಕಾಲಘಟ್ಟದಲ್ಲಿ. ಸರ್ಕಾರ ಎಲ್ಲಾ ಮಕ್ಕಳಿಗೂ ಸೈಕಲನ್ನು ನೀಡಿದ್ದು, ‘ಸರ್ವಶಿಕ್ಷಾ ಅಭಿಯಾನ’ ದಿಂದಾಗಿ ಶಾಲೆಗಳಿಗೆ ಮೂಲಭೂತ ಸೌಲಭ್ಯವನ್ನು ನೀಡಿದ್ದು, ಅಧಿಕಾರಿಗಳ ತಪ್ಪು ಅರ್ಥೈಸುವಿಕೆಯಿಂದಾಗಿ ಕನ್ನಡ ಮಾಧ್ಯಮದ ಮಕ್ಕಳಿಗೆ ಸೈಕಲ್ ದೊರೆಯದಾದಾಗ ಆಗುವ ನಿರಾಸೆ, ಇದಕ್ಕಾಗಿ ನಡೆಯುವ ಉಗ್ರ ಹೋರಾಟವನ್ನು ಚಿತ್ರದ ಆರಂಭದಲ್ಲಿ ವಿನೋದದಡಿಯಲ್ಲಿ ಹೇಳಿದ್ದರೂ ಇಂದು ಎಲ್ಲಾ ಸವಲತ್ತುಗಳನ್ನು ಹೋರಾಟ ಮಾಡಿಯೇ ಪಡೆಯಬೇಕಾದ್ದನ್ನು ವ್ಯಂಗ್ಯವಾಗಿ ಪ್ರತಿಪಾದಿಸುತ್ತದೆ. ಆದರೆ ಶಾಲೆ ಮುಚ್ಚುವ ಪ್ರಸಂಗ ಬಂದಾಗ ಉಪಾದ್ಯ (ಪ್ರಮೋದ್ ಶೆಟ್ಟಿ) ತನ್ನ ಮಗಳನ್ನು ಮಂಗಳೂರಿಗೆ ಸೇರಿಸಿ ಪ್ರತಿಭಟನೆಯಿಂದ ಹಿಂದೆ ಸರಿಯುವುದು ಕೂಡ ಪರಿಸ್ಥಿತಿಯ ವ್ಯಂಗ್ಯವೆ.

ಶಾಲೆ ಮುಚ್ಚುವಿಕೆಯ ಗಂಭೀರ ಪರಿಸ್ಥಿತಿಯನ್ನು ಚಿತ್ರ ಚರ್ಚಿಸಿದ್ದರೂ ಬರಿ ಅಷ್ಟೆ ಆಗಿದ್ದರೆ ಚಿತ್ರ ಸಾಕ್ಷ ಚಿತ್ರದ ಸ್ವರೂಪ ಪಡೆಯುವ ಅಪಾಯವಿತ್ತು. ಅದನ್ನು ಜನಾಕರ್ಷಣೆಯ ಮಟ್ಟಕ್ಕೆ ತಂದಿರುವುದು ಅಲ್ಲಿ ಹೆಣೆಯಲಾದ ಬಾಲ್ಯದ ಆಟ ಹುಡುಗಾಟಗಳು. ತರಗತಿಯಲ್ಲಿನ ಪ್ರಮಾದಗಳು, ಹೆಸರು ಬರೆದು ಅದರ ಮುಂದೆ ಗೀಟು ಎಳೆದು ಹೆದರಿಸುವ ಮಾನೀಟರ್, ಸಮಾಜ ಪರೀಕ್ಷೆಗೆ ತಯಾರಾಗಿ ಹೋದರೆ ಅಲ್ಲಿ ಗಣಿತವಿರುವುದು, ಶಾಲೆ ಮುಚ್ಚಿದಾಗ ತಮ್ಮದೆ ರೀತಿಯಲ್ಲಿ ಪ್ರತಿಭಟಿಸುವ ಮಕ್ಕಳು ಎಲ್ಲವನ್ನು ವಿನೋದದ ದಾಟಿಯಲ್ಲಿ ಹೇಳಿದ್ದಾರೆ ರಿಷಬ್‍ಶೆಟ್ಟಿ. ಬುದ್ದಿವಂತ ಚುರುಕಾದ ಹುಡುಗ ಬಂದಾಗ ಹಳೆಯ ಗೆಳೆಯನನ್ನು ಮರೆತು ಹೊಸ ಹುಡುಗನ ಸ್ನೇಹಕ್ಕೆ ಯಾಚಿಸುವ ಪ್ರಸಂಗ ಆರ್.ಕೆ.ನಾರಾಯಣರ ಸ್ವಾಮಿ ಮತ್ತು ಅವನ ಸ್ನೇಹಿತರ ಕಥೆಯನ್ನು ನೆನಪಿಸುತ್ತದೆ.

ನಾಗರಹೊಳೆ, ಚಿನ್ನಾರಿಮುತ್ತ, ಸಿಂಹದ ಮರಿ ಸೈನ್ಯ, ಕೊಟ್ರೇಶಿಕನಸು, ಮುಂತಾಗಿ ಕೆಲವೇ ಮಕ್ಕಳ ಚಿತ್ರಗಳು ಮಕ್ಕಳ ಸಾಹಸ, ಹೋರಾಟದಿಂದಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಗೆದ್ದಿವೆ. ಆದರೆ ಇಲ್ಲಿ ಚಿತ್ರವನ್ನು ಗೆಲ್ಲಿಸಲು ಸಹಾಯಕವಾಗಿರುವುದು ದಡ್ಡ ಪ್ರವೀಣನ ಪ್ರೇಮಪ್ರಸಂಗ. ಏಳನೆಯ ತರಗತಿಯಲ್ಲಿ ಮೂರು ಬಾರಿ ಅನುತ್ತೀರ್ಣನಾಗಿ ಉಳಿದಿರುವ ಪ್ರವೀಣ ಇತರೆ ಹುಡುಗರ ಪಾಲಿಗೆ ಹಾಸ್ಯದ ವಸ್ತು. ಮಾಸ್ತರರ ಪಾಲಿಗೆ ಹೊಡೆಯಲು ಸಿಕ್ಕ ಚೆಂಡು. ಆತನ ಪ್ರೌಢಾವಸ್ಥೆಯ ಮೀಸೆ ಚಿಗುರುವ ಮಜಲುಗಳನ್ನು ಹೇಳುತ್ತಲೆ ಆತನ ಕನಸುಗಳು, ಹತಾಶೆ, ಚಡಪಡಿಕೆ ನೋವು, ಸಂತೋಷಗಳ ಹಳವಂಡಗಳನ್ನು ಒಂದು ಪ್ರತ್ಯೇಕ ಟ್ರ್ಯಾಕ್‍ನಲ್ಲಿ ತೆಗೆದುಕೊಂಡು ಹೋಗಿರುವುದು ಅದೇ ಚಿತ್ರದ ಹೈಲೈಟಾಗಿ ಮಾರ್ಪಟ್ಟಿದೆ. ಚಿತ್ರ ಯುವ ಜನರನ್ನು ವಿಶೇಷವಾಗಿ ಸಿನಿಮಾ ಸೆಳೆಯುತ್ತಿದ್ದು ಆತನ ಮೇಲೆ ಚಿತ್ರಿತವಾಗಿರುವ ದಡ್ಡ ಮತ್ತು ಅವಳ ನಗುವ ಹಾಡುಗಳು ಜನಪ್ರಿಯವಾಗಿದ್ದು ಮಿಲಿಯನ್ ಗಟ್ಟಲೆ ವ್ಯೂಗಳನ್ನು ಪಡೆದಿರುವುದು ಅದಕ್ಕೆ ಸಾಕ್ಷಿಯಾಗಿದೆ.

ಚಿತ್ರದ ಮತ್ತೊಂದು ಚಿತ್ರದ ಆಕರ್ಷಣೆ ವಾಸುಕಿ ವೈಭವ್ ಸಂಗೀತ. ಚಿತ್ರದಲ್ಲಿ ಒಂಬತ್ತು ಹಾಡುಗಳಿದ್ದು, ಚಿನ್ನಾರಿಮುತ್ತದ ನಂತರ ಇಷ್ಟೊಂದು ಹಾಡುಗಳು ಇರುವುದು ಇದೇ ಚಿತ್ರವೆನ್ನಬಹುದು. ಬಲೂನು ಹಾಡು (ಆ ಹಾಡಿನಲ್ಲಿ ಬಾಲ್ಯದಲ್ಲಿಯೇ ಗೃಹಕೃತ್ಯಕ್ಕಾಗಿ ವ್ಯಾಪಾರ, ವಹಿವಾಟುಗಳಲ್ಲಿ ತೊಡಗಿಸಿಕೊಳ್ಳಬೇಕಾದ ಇತರ ಮಕ್ಕಳ ರೀತಿ ಆಟವಾಡಲಾರದ ಮಕ್ಕಳ ವ್ಯಥೆಯ ಕಥೆಯನ್ನು ಗೀತೆಯಲ್ಲಿ ಹೇಳಿರುವುದು ವಿಶೇಷ). ಹೇ ಶಾರದೆ ಮುಂತಾದ ಗೀತೆಗಳು ಇಷ್ಟವಾಗುತ್ತವೆ.

ಕಿರಿಕ್ ಪಾರ್ಟಿಯಂತ ಸೂಪರ್‍ಹಿಟ್ ಚಿತ್ರ ನೀಡಿ ಗಮನ ಸೆಳೆದ ರಿಷಬ್‍ಶೆಟ್ಟಿ ಈ ಬಾರಿ ಸಂಪೂರ್ಣ ಹೊಸ ಕಲಾವಿದರು, ಮಕ್ಕಳು, ನಟರು, ತಂತ್ರಜ್ಞರ ಜೊತೆ ತಾವೆ ಸ್ನೇಹಿತರೊಂದಿಗೆ ನಿರ್ಮಿಸಿ ನಿರ್ದೇಶಿಸಿ ಮಾಡಿರುವ ಪ್ರಯತ್ನ ಮೆಚ್ಚುಗೆ ಮೂಡಿಸುತ್ತದೆ. ಎಲ್ಲಾ ಕಲಾವಿದರ ಉತ್ತಮ ಅಭಿನಯ ಛಾಯಗ್ರಹಣ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ದಕ್ಷಿಣಕನ್ನಡದ ಯಕ್ಷಗಾನ, ಸಮುದ್ರ ತೀರದ ಬದುಕು ಹಿನ್ನೆಲೆಯಲ್ಲಿ ಮೂಡಿದೆ. ಕನ್ನಡ ಶಾಲೆಗಳೆಡೆಗೆ ಜನರ ಗಮನ ಸೆಳೆಯುವುದರ ಜೊತೆಗೆ ಅನಂತ್‍ನಾಗ್‍ರ ಮೂಲಕ ಕನ್ನಡ ಶಾಲೆಗಳನ್ನು ಉಳಿಸುವ, ಕನ್ನಡಾಭಿಮಾನದ ಮಾತುಗಳನ್ನು ಆಡಿಸಿ ಚಪ್ಪಾಳೆ ಗಿಟ್ಟಿಸುವುದರ ಮೂಲಕ ಜನರ ಹೊಸ ಪ್ರಯತ್ನದಲ್ಲಿ ರಿಷಬ್‍ಶೆಟ್ಟಿ ಯಶ ಸಾಧಿಸಿದ್ದಾರೆ.

1 comment

Leave a Reply