ಅವಳು ಉಮ್ರಾವ್ ಜಾನ್.. ಅವಳು ‘ಕೋಟಿಜಾನ್’..

“ಸ್ವಾರಸ್ಯವಿಹುದೇನೋ ಆವ ಕಥೆಗಳಲಿ ಅರಿಯದು
ನನ್ನ ಕಥೆ ಹೇಳಲೋ, ಜಗದ ಕಥೆ ಹೇಳಲೋ ತಿಳಿಯದು”

ಹೌದು, ತನ್ನ ಕಥೆ ಹೇಳುತ್ತಲೇ ಜಗದ ಎಲ್ಲ ಊಹಾಪೋಹಗಳನ್ನೂ ಬದಿಗೆ ಸರಿಸಿ ಹೊಸದೊಂದು ಲೋಕವನ್ನು ತೆರೆದು ತೋರಬಲ್ಲವಳು ಉಮ್ರಾವ್ ಜಾನ್. ಅವಳೊಬ್ಬ ಕೋಟಿಜಾನ್. ಜನಸಾಮಾನ್ಯರ ಭಾಷೆಯಲ್ಲಿ ಹೇಳಬಹುದಾದರೆ ‘ಶ್ರೀಮಂತರ ವೇಶ್ಯೆ.’ ಆದರೆ ಹಾಗೆ ಹೇಳಿದರೆ ಆ ಪದವೇ ನಾಚಿ ಹಿಂದೆ ಸರಿಯುವಂಥ ಪ್ರಖರ ಪ್ರತಿಭೆ ಅವಳದ್ದು. ಸಾಹಿತ್ಯ, ಸಂಗೀತ ಮತ್ತು ನೃತ್ಯ ಎಲ್ಲದರಲ್ಲೂ ಅವಳದ್ದು ಅದ್ಭುತವೆನಿಸುವಂತಹ ಸಿದ್ಧಿ!

ಅಸಲಿಗೆ ಕೋಟಿಜಾನ್‍ಗಳೆಂದರೆ ಜನಸಾಮಾನ್ಯರು ಸಾಮಾನ್ಯ ಅರ್ಥದಲ್ಲಿ ಹೇಳುವಂತಹ ಸೂಳೆಯರಲ್ಲ. ಕೇವಲ ದೈಹಿಕ ಸುಖವನ್ನು ನೀಡಲೆಂದೇ ನಿಯೋಜಿಸಲ್ಪಟ್ಟ ಹೆಣ್ಣುಗಳೂ ಅಲ್ಲ. ಅವರು ತಮ್ಮ ಬಳಿಗೆ ಬರುವವರಿಗೆ ಬೌದ್ಧಿಕ ಸಾಂಗತ್ಯವನ್ನು ನೀಡುವಷ್ಟು ಮೇಧಾವಿಗಳು. ಅಷ್ಟೇ ಅಲ್ಲ, ಲೋಕ ವ್ಯವಹಾರ ಕುಶಲಿಗಳು ಕೂಡ. ಆ ಕಾಲದಲ್ಲಿ ಯೌವ್ವನಕ್ಕೆ ಬಂದ ತಮ್ಮ ಮಕ್ಕಳಿಗೆ ಲೋಕವ್ಯವಹಾರ, ಕಲೆ ಮತ್ತು ಸಾಹಿತ್ಯದ ಅರಿವು ಮೂಡಿಸಲು ತಂದೆತಾಯಂದಿರೇ ಯುವಕರನ್ನು ಕೋಟಿಜಾನ್‍ಗಳ ಮನೆಗೆ ಕಳುಹಿಸುತ್ತಿದ್ದರು. ತನಗೆ ಇಂತವಳೊಂದಿಗೆ ಸಂಗಾತವಿದೆ ಎಂದು ಹೇಳಿಕೊಳ್ಳುವುದು ಆ ಕಾಲಕ್ಕೆ ಹೆಮ್ಮೆಯ ವಿಷಯವೇ ಆಗಿತ್ತು. ಅದಕ್ಕೆ ಸರಿಯಾಗಿ ಪ್ರತಿಯೊಬ್ಬ ಕೋಟಿಜಾನ್‍ಗಳು ಬಾಲ್ಯದಿಂದಲೇ ಸಾಹಿತ್ಯ, ಸಂಗೀತ ಮತ್ತು ನೃತ್ಯವನ್ನು ಬಹಳ ಗಂಭೀರವಾಗಿ ಅಧ್ಯಯನ ಮಾಡುತ್ತಿದ್ದರು.

ಅವರ ಸಂಗಾತ ಬಯಸಿ ಬರುವವರಿಗೆಂದೇ ಪ್ರತಿದಿನ ಸಂಜೆ ಚೆಂದದ ಗೋಷ್ಠಿಗಳು ಆಯೋಜಿಸಲ್ಪಡುತ್ತಿದ್ದವು. ಅವುಗಳಲ್ಲಿ ಷೇರ್‍ಗಳನ್ನು, ಮುಕ್ತಾಗಳನ್ನು, ಶಾಯರಿಗಳನ್ನು ಓದಲಾಗುತ್ತಿತ್ತು. ಯುದ್ಧಗಳಲ್ಲಿ ಜಯಶೀಲರಾದಾಗ, ಮನೆಗಳಲ್ಲಿ ಮದುವೆ ಮೊದಲಾದ ಮಂಗಲ ಕಾರ್ಯಗಳು ನಡೆಯುವಾಗ ಕೋಟಿಜಾನ್‍ಗಳನ್ನು ಕರೆಸಿ ಮುಜರಾಗಳನ್ನು ನಡೆಸಲಾಗುತ್ತಿತ್ತು. ಅಂತೆಯೇ ಮನೆಗಳಲ್ಲಿ ಪ್ರೀತಿಪಾತ್ರರು ತೀರಿಕೊಂಡಾಗ ಸಾಂತ್ವನದ ಚರಮಗೀತೆಗಳನ್ನೂ ಹಾಡಲಾಗುತ್ತಿತ್ತು. ಸಾಮಾನ್ಯ ಹೆಂಗಸರಿಗೆ ಶಿಕ್ಷಣವೆಂಬುದು ಕನಸಾದ ಆ ಕಾಲದಲ್ಲಿ ಗಂಡಸರಿಗೆ ಬೌದ್ಧಿಕ ಸಾಂಗತ್ಯ ನೀಡುವಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು. ಅನಿವಾರ್ಯವಾಗಿ ಅಂಥದೊಂದು ಪಾತ್ರವಾದ ಉಮ್ರಾವ್ ತನ್ನ ಕಥೆ ಹೇಳುತ್ತಲೇ ಜಗದ ಕಥೆಯಾಗುತ್ತಾಳೆ.

ಉಮ್ರಾವ್ ಕೋಟಿಜಾನ್‍ರ ಮನೆತನದಲ್ಲಿ ಹುಟ್ಟಿದವಳಲ್ಲ. ನೃತ್ಯಗಾತಿಯ ಕುಟುಂಬದಲ್ಲಿ ಜನಿಸಿದವಳಲ್ಲ. ಕಲೆಗಾಗಿ ಗುರುವನ್ನರಸಿ ಹೊರಟ ಸಾಧಕಳೂ ಅಲ್ಲ. ಖಾನ್‍ಪುರದ ಜಮಾದಾರನ ಕುಟುಂಬದಲ್ಲಿ ಜನಿಸಿದ ಸಾಮಾನ್ಯ ಹೆಣ್ಣು.ಊರಿನಲ್ಲಿರುವ ಎಲ್ಲರ ಮನೆಗಿಂತ ಎತ್ತರವಿರುವ ಅವಳ ಮನೆಯ ಮಾಳಿಗೆಯಲ್ಲಿ ನಿಂತು ಪಾರಿವಾಳಗಳನ್ನು ಹಾರಿಬಿಡುವ ಹತ್ತರ ಹರೆಯದ ಅಮೀರನ್. ಅಮ್ಮ, ಅಪ್ಪ ತೋರಿಸಿದ ಹುಡುಗನೊಂದಿಗೆ ಮದುವೆಯಾಗುವ ಕನಸು ಕಾಣುವ ಹುಡುಗಿ. ಆದರೆ ಅವಳ ಮನೆಯೆದುರೇ ತಂದೆಯ ಕಡುವೈರಿ ದಿಲಾವರ್‍ಖಾನ್‍ನ ಮನೆಯಿದ್ದಿತ್ತು.ಹಾರಿಬಿಡುವ ಪಾರಿವಾಳಗಳನ್ನು ಹಿಡಿದು ಹಿಂಸಿಸುವ ಕ್ರೂರಿ ಆತ.ಪಾರಿವಾಳಗಳನ್ನು ಹಿಡಿಯುವಂತೆ ಸಮಯ ಸಾಧಿಸಿ ಅವಳನ್ನೂ ಹಿಡದುಬಿಟ್ಟ.ಅಪ್ಪನ ಕಣ್ಣತಪ್ಪಿಸಿ ಅವಳನ್ನು ಗಾಡಿಯಲ್ಲಿ ಸಾಗಿಸಿ ತಂದು ಲಖ್ನೋದ ಜನಾನವೊಂದಕ್ಕೆ ಮಾರಿಬಿಟ್ಟ.ಅಮೀರನ್ ಉಮ್ರಾವ್ ಆಗಿ ಬದಲಾದ ನೋವಿನ ಕಥೆಯಿದು.

“ಪಾರಿವಾಳದಂತೆ ಬಾಲ್ಯ ಹಾರಿಹೋಯಿತು
ಬೇಟೆಗಾರನ ಕುಣಿಕೆಯಲ್ಲಿ ಜಾರಿಹೋಯಿತು
ಆಗಸದ ಎತ್ತರಕ್ಕೆ ಏರಬೇಕು ಎಂಬ ಕನಸು
ಒಂದೇ ಬಾಣದ ಹತಿಗೆ ಸಿಕ್ಕು ನಾಶವಾಯಿತು.”

ಅವಳ ಬಾಲ್ಯದ ಕನಸು ಹೀಗೆ ಜಾರಿಹೋಗಿತ್ತು. ನೂರೈವತ್ತು ವರಹಕ್ಕೆ ಅವಳ ಭವಿಷ್ಯ ಖರೀದಿಯಾಗಿತ್ತು. ಆದರೆ ಅವಳೊಳಗಿನ ಅದಮ್ಯವಾದ ಚೈತನ್ಯ ಬಿಡುಗಡೆಗೆಂದು ಕಾಯುತ್ತಿತ್ತು.

“ರೆಕ್ಕೆ ಬಡಿಯಲು ನನಗೆ ಬೇಕು ಆಕಾಶ
ಬಂಧಿಸಿಡದಿರು ನನ್ನ ಓ ಭೇಟೆಗಾರ
ಬಂಧನವು ಕೊಲ್ಲುವುದು ಹಕ್ಕಿ ಕನಸನ್ನು
ಹಾರಲು ಬಿಡು ನನ್ನ ಕೈಮುಗಿದು ಬೇಡುವೆನು”

ಅವಳ ಮೊರೆ ದೇವರಿಗೆ ಕೇಳಿತ್ತು. ಅವಳಿಗೆ ಖಾನಂಳ ಮನೆಯಲ್ಲಿ ಎಲ್ಲ ಕಲೆಗಳ ಶಿಕ್ಷಣ ಪ್ರಾರಂಭವಾಯಿತು. ಉಸ್ತಾದರ ಸಂಗೀತದ ಆಲಾಪಗಳು ಅವಳ ಚಿಂತೆಗಳನ್ನು ದೂರಮಾಡುವ ಸಾಂತ್ವನದ ಸ್ವರಗಳಾದವು. ಮುಲ್ಲಾರ ಸಾಹಿತ್ಯದ ಪಾಠಗಳು ಮನದ ಭಾವಗಳಿಗೆ ಬಿಡುಗಡೆಯಾಗಿ ಒದಗಿದವು. ಖಾನಂಳ ನೃತ್ಯದ ಪಟ್ಟುಗಳು ಅವಳೊಳಗಿನ ಚೈತನ್ಯದ ಹೊರಹರಿವಾಯಿತು. ಅವಳು ನಾದ, ನೃತ್ಯ, ಸಾಹಿತ್ಯವನ್ನು ಜೀವದ ಉಸಿರಾಗಿಸಿ ಅಭ್ಯಾಸ ಮಾಡತೊಡಗಿದಳು. ಜನಾನಾದಲ್ಲಿ ಅವಳೊಬ್ಬಳೇ ಅಲ್ಲ. ಖುರ್ಷಿದಾ, ಬಿಸ್ಮಿಲ್ಲಾ, ಅಮೀರಾಜಾನ್ ಎಲ್ಲರೂ ಆಟವಾಡುತ್ತಾ, ಪಾಠ ಕಲಿಯುತ್ತಾ ಜೊತೆಯಾಗುತ್ತಿದ್ದರು. ಅವಳಿಗಿಂತಲೂ ತುಂಬ ಚೆಲುವೆಯರಾದ ಇವರೆಲ್ಲರನ್ನು ಕೇವಲ ಕಲೆಯಿಂದ ಮಾತ್ರ ಮೀರಿಸಲು ಉಮ್ರಾವ್‍ಗೆ ಅವಕಾಶವಿತ್ತು. ಅವಳದನ್ನು ಹಠಹಿಡಿದು ಸಾಧಿಸಿದಳು. ನರ್ತನ, ಸಂಗೀತ, ವಿನೋದ, ಜಾತ್ರೆ, ಸಾಹಿತ್ಯ ಗೋಷ್ಠಿ, ತೋಟಗಳಲ್ಲಿ ವಿಹಾರ ಓಹ್! ಅವರಿಗೆಟುಕದ ಸೌಕರ್ಯಗಳೇ ಇರಲಿಲ್ಲ.

“ಎಂಥ ಕಠಿಣ ಮನಸ್ಸಿನವಳಿವಳು
ತಂದೆ-ತಾಯಿಯರ ಮರೆತು ಸುಖವಾಗಿರುವಳು ಎಂದೆನ್ನಬೇಡಿ,
ಬಂಧಿಯಾದಮೇಲೆ ಪಂಜರವ ಪ್ರೀತಿಸದೇ ವಿಧಿಯಿಲ್ಲ ತಿಳಿಯಿರಿ
ಒಂದೇ ಸ್ಥಿತಿಯಲಿ ಮನುಜ ಬಾಳುವುದು ಕಠಿಣ
ಬೇರೆಯಾಗುವುದೊಳಿತು ಈಗ ಬದುಕಿನ ಬಣ್ಣ”

ಹೊಸ ಮೊದಲಗಿತ್ತಿ ಅತ್ತೆಯಮನೆಗೆ ಹೋದಬಳಿಕ ನಾನಿಲ್ಲಿ ಎರಡು ದಿನಗಳ ಸಲುವಾಗಿ ಬಂದಿಲ್ಲ; ಸಾಯುವವರೆಗೆ ಇಲ್ಲಿಯೇ ಇರಲು ಬಂದಿದ್ದೇನೆ ಎಂದು ತಿಳಿಯುವಂತೆ ಅವಳು ಖಾನಂಳ ಮನೆಗೆ ಹೊಂದಿಕೊಂಡಳು. ನೃತ್ಯ, ಶಾಯರಿಗಳನ್ನು ತನ್ನ ಉಸಿರಾಗಿಸಿಕೊಂಡಳು. ನವಾಬರ ಮಹಲಿನಲ್ಲಿ ನಡೆಯುವ ಪ್ರತಿಷ್ಠಿತ ಮುಝರಾದಲ್ಲಿ ಪಾಲ್ಗೊಳ್ಳುವ ಅವಕಾಶವನ್ನೂ ಬಾಚಿಕೊಂಡಳು. ತನ್ನ ಮೈಯ್ಯ ತೊಗಲನ್ನೇ ನೃತ್ಯದುಡುಗೆಯಾಗಿ ಧರಿಸಿಕೊಂಡಳು.

ನವಾಬರ ಮಗನ ಮದುವೆಯಲ್ಲಿ ಅವಳ ಮೊದಲ ಮುಜರಾ.ಆ ದಿನದ ಸಭೆಯಾದರೂ ಅದು ಹೇಗೆ ಶೃಂಗಾರಗೊಂಡಿತ್ತು? ಬಹುಬೆಲೆಯ ಕಾಜಿನ ಸುಂದರ ದೀಪಗಳಿಂದ ರಾತ್ರಿ ಹಗಲಾಗಿತ್ತು. ಹಸನಾದ ನೆಲದ ಮೇಲೆ ರತ್ನಗಂಬಳಿಯನ್ನು ಹಾಸಲಾಗಿತ್ತು. ಜರಿಯಲಂಕರಿಸಿದ ಪೀಠ, ಕುಸುರಿಗಳಿಂದ ತುಂಬಿದ ದಿಂಬು. ಹೂವಿನ ಕಂಪು, ಪರಿಮಳ ದೃವ್ಯಗಳ ಸುವಾಸನೆಯಿಂದ ಇಡೀ ಬಾರಾದರಿ ದಿವ್ಯವಾಗಿತ್ತು. ತಾಂಬೂಲದ ತನಿಗಂಪಿನಿಂದ ಹೃದಯ ಮತ್ತು ಮೆದುಳು ಸೌಗಂಧಮಯವಾಗಿದ್ದವು. ಬಡೋದೆಯಿಂದ ಆ ಕಾಲದ ಗವಾಯೀ ಗಾಯಕಿ ಬಾಯೀಜಿ ಹಾಡಲೆಂದೇ ಬಂದಿದ್ದಳು. ಆ ದಿನ ಹಾಡು ನೃತ್ಯಗಳ ಮೂಲಕ ಉಮ್ರಾವ್ ತನ್ನನ್ನು ತಾನು ಭದ್ರವಾಗಿ ಸ್ಥಾಪಿಸಿಕೊಳ್ಳಬೇಕಿತ್ತು. ಅವಳ ನೃತ್ಯ ಪ್ರಾರಂಭವಾಯಿತು.

“ಎದೆಯ ತುಂಬ ಆಸೆ ಹಕ್ಕಿ ಗೂಡುಕಟ್ಟಿವೆ
ಎದೆಯ ಕದವ ತೆರೆದು ನೋಡು ಮೋಜುಗಾರನೆ

ಮನದ ಆಸೆಯೆಂಬ ತೊಟ್ಟಿ ತುಂಬಿತುಳುಕಿದೆ
ಒಮ್ಮೆ ಬಂದು ಮುಳುಗಿನೋಡು ಈಜುಗಾರನೆ

ಬಯಕೆಯೆಂಬ ಜೇನುಹಟ್ಟಿ ಮಧುವ ತುಂಬಿದೆ
ತುಟಿಯನಿಟ್ಟು ಹೀರು ಬಾರಾ ರಸಿಕ ಗೆಳೆಯನೆ

ಕನಸುಗಳು ಖೈದಿಯಾಗಿ ಪರದೆ ಹಿಂದಿವೆ
ಓ ಅದಾ …ನೀನು ಬರದೆ ಬಿಡುಗಡೆಯು ಎಲ್ಲಿದೆ?”

ಗೋಷ್ಠಿಯ ಜನರು ಸಂತೋಷದಿಂದ ತೊನೆದಾಡಿದರು. ಪ್ರತಿ ಶಬ್ದಕ್ಕೂ ವಾಹ್! ವಾಹ್! ಪ್ರತಿಗತ್ತಿಗೂ ಆಹ್! ಆಹ್!

ಅವಳು ಎಲ್ಲ ಪ್ರೇಕ್ಷಕರಿಗೆ ಗೌರವದ ಮುಜರಾ ಸಲ್ಲಿಸಿ, ತೆರೆಯ ಹಿಂದೆ ಸರಿದಳು. ನೃತ್ಯಗಾತಿಯ ಪಾತ್ರವನ್ನು ತೆಗೆದಿಟ್ಟು ಸಾಮಾನ್ಯ ಯುವತಿಯಾಗಬಯಸಿದಳು. ಆದರೆ ಅವಳೊಳಗಿನ ನೃತ್ಯಗಾತಿ ಅವಳಿಂದ ನಿರ್ಗಮಿಸಲು ಒಪ್ಪಲಿಲ್ಲ. ಅವಳ ಎದೆಯಾಳದ ಅದಮ್ಯ ಚೇತನವಾಗಿ ಸದಾ ಇರಲು ಬಯಸಿದ್ದಳು. ತನ್ನ ತೊಗಲ ಹೊದಿಕೆಯೇ ನೃತ್ಯದುಡುಗೆಯಾದ ಪುಲಕವನ್ನು ಅವಳು ಮೊದಲ ಬಾರಿ ಅನುಭವಿಸಿದಳು. ಇಷ್ಟು ದಿನ ಅವಳು ಹಾಡು, ನರ್ತನಗಳನ್ನು ಹೊರಗಿನಿಂದ ಕಂಡು ಅವೇ ತನ್ನ ದೈವವೆಂಬಂತೆ ಆರಾಧಿಸಿದ್ದಳು. ಆದರಿಂದು ಅದು ಇಡಿಯಾಗಿ ಅವಳನ್ನು ಆವರಿಸಿ ತನ್ನೊಳಗೆ ಒಂದಾಗಿಸಿಕೊಂಡಿತು. ಅದರ ತೆಕ್ಕೆಗೆ ಸಿಕ್ಕಿದ ಉಮ್ರಾವ್ ತನ್ನನ್ನು ತಾನು ಕಳಕೊಂಡಳು.

ದಿಲಾವರ್ ಅವಳನ್ನು ಖಾನಂಳಿಗೆ ಮಾರಿದ್ದೇನೋ ನಿಜ. ಈ ಮೊದಲ ಮುಝರಾ ಅವಳನ್ನು ಕಲೆಗೆ ಮಾರಿಕೊಳ್ಳುವಂತೆ ಮಾಡಿತು.ನೃತ್ಯ ನೋಡಿದ ಸುಲ್ತಾನ ಸಾಹೇಬರು ಅವಳ ಮನೆಯವರೆಗೂ ಬಂದರು.ಅವಳನ್ನು ಕಂಡಷ್ಟೇ ಪ್ರೀತಿ ಅವರಿಗೆ ಉಮ್ರಾವ್‍ನ ಗಝಲಿನ ಮೇಲೆಯೂ ಇತ್ತು.

“ಒಳ್ಳೆ ರೂಪದ ಜೊತೆಗೆ ದೇವರೀ ಒಳ್ಳೆ ಗುಣಗಳ ಕೊಡಲಿ
ನಕ್ಷತ್ರದಂತೆ ಅಕ್ಷರ ಮೇಣ್ ಮುತ್ತಿನೊಲು ಮಾತು ಕೊಡಲಿ”

ಎಂಬ ಅವರ ಷೇರ್‍ಗೆ ಉತ್ತರವಾಗಿ ಉಮ್ರಾವ್ ಹೀಗೆ ಉತ್ತರಿಸುತ್ತಾಳೆ.

“ನಾನೇನು ಮತ್ತೆನ್ನ ಸಾಮಥ್ರ್ಯವೇನು?
ಇದು ನಿಮ್ಮ ಕರುಣೆಯಲ್ಲದೇ ಮತ್ತೇನು?”

ರಸವತ್ತಾದ ಸಂಭಾಷಣೆ, ತಿಳಿಹಾಸ್ಯದಿಂದ ಕೂಡಿದ ಮಾತುಕತೆ, ಮೋಹಕ ಮಾತುಗಳು, ಸಂಕೇತಗಳು, ನೋಟಗಳು…….. ಸ್ವರ್ಗದಂತಿತ್ತು ಅವರ ಕೂಟ!

ಕೋಟಿಜಾನ್‍ಳ ಕೋಟೆಯನ್ನು ಸೇರಿದ ಉಮ್ರಾವ್‍ಗೆ ಸಾಮಾನ್ಯರ ಬಂಧನವನ್ನು ಮೀರಿದ ಸ್ವಾತಂತ್ರ್ಯವಿತ್ತು ಮತ್ತು ಅದೇ ಅವಳೊಳಗಿನ ಕಲೆಯನ್ನು ಪೊರೆಯುವ ಶಕ್ತಿಯಾಗಿತ್ತು.ಅವಳೊಂದಿಗೆ ಬೆರೆಯುವ, ಗೋಷ್ಠಿಯಲ್ಲಿ ಪಾಲ್ಗೊಳ್ಳುವ ಎಲ್ಲರಿಂದಲೂ ಅವಳು ತನ್ನ ಕಲೆಯ ಜಗತ್ತನ್ನು ಹಿಗ್ಗಿಸಿಕೊಳ್ಳುತ್ತಲೇ ಸಾಗಿದಳು. ಎಪ್ಪತ್ತು ದಾಟಿದ ಅಲಿಖಾನ್ ಸಾಹೇಬರಂತವರು ಕೇವಲ ದೈಹಿಕ ಹಸಿವಿಗಾಗಿ ಖಾನ್‍ದಾನಿಗೆ ಬರಲು ಸಾಧ್ಯವಿರಲಿಲ್ಲ. ಉಮ್ರಾವ್‍ನ ಪ್ರತಿ ಷೇರ್‍ಗಳಿಗೆ ಉತ್ತರವಾಗಿ ಅವರು ವಿಷಾದಭರಿತ ಚರಮಗೀತೆಗಳನ್ನು ಹಾಡುತ್ತಿದ್ದರು. ಅವರಿಂದ ಉಮ್ರಾವ್ ಚರಮಗೀತೆಗಳನ್ನು ಹಾಡುವುದನ್ನು ಕಲಿತಳು. ಅವಳನ್ನು ಅರಸಿಬರುವ ಪ್ರತಿಯೊಬ್ಬರಿಂದಲೂ ತನ್ನೊಳಗಿರುವ ನೃತ್ಯಗಾತಿಯನ್ನು, ಹಾಡುಗಾರ್ತಿಯನ್ನು, ಸಾಹಿತಿಯನ್ನು ಪೋಷಿಸುತ್ತಲೇ ಹೋದಳು. ಸಾಮಾನ್ಯ ಮನೆತನದಿಂದ ಬಂದವಳಾದ್ದರಿಂದಲೇ ಅವಳಿಗೆ ಕೋಟಿಜಾನ್‍ನ ಕೋಟೆಯನ್ನೂ ಮೀರಿ ನಿಲ್ಲಲು ಸಾಧ್ಯವಾಗಿತ್ತು. ಅವಳು ಖಾನಂಳ ಬಂಧನವನ್ನೂ ಮೀರಿ ತನ್ನದೇ ಜನಾನಾದಲ್ಲಿ ಗೋಷ್ಠಿಯನ್ನು ನಡೆಸಲು ಪ್ರಾರಂಭಿಸಿದಳು. ದೊಡ್ಡ ದೊಡ್ಡ ಮನೆತನದವರಿಂದ ಮುಜರಾಗಳಿಗೆ ಕರೆಬರತೊಡಗಿದವು. ಉಮ್ರಾವ್‍ಳನ್ನು ಈಗ ಕೇವಲ ಹಾಡುವ, ನರ್ತಿಸುವ ಹೆಣ್ಣಾಗಿ ಗುರುತಿಸುತ್ತಿರಲಿಲ್ಲ. ತನ್ನ ಸಾಹಿತ್ಯದ ಜ್ಞಾನದಿಂದ, ಷೇರ್‍ಗಳ ಇಂಪಿನಿಂದ, ಗಝಲ್‍ಗಳ ಝಲಕ್ಕಿನಿಂದ ಇಡಿಯ ವಾತಾವರಣವನ್ನೇ ರಂಗೇರಿಸುವ ಮಾಂತ್ರಿಕಳಾಗಿ ಅವಳು ರೂಪುಗೊಂಡಿದ್ದಳು. ಜಗದ ಎಲ್ಲ ಬಂಧನಗಳ ಬಿಡುಗಡೆಯ ಕುರುಹಾಗಿ ಜಗದೆದುರು ನಿಂತಿದ್ದಳು. ಅವಳನ್ನು ಯಾವ ಶಕ್ತಿಯೂ ಬಂಧಿಸಲಾಗುತ್ತಿರಲಿಲ್ಲ. ಏಕೆಂದರೆ ಅವಳು ಕಲೆಯೆಂಬ ಸುಂದರ ಲೋಕದ ಒಡತಿಯಾಗಿದ್ದಳು.

ಉಮ್ರಾವ್ ಸಂಸಾರವೂ ಒಂದು ಬಂಧನವೆಂದು ನಂಬಿದ್ದಳು. ಅವಳ ಕಲೆಯ ಅಭಿವ್ಯಕ್ತಿಗೆ ಸಂಸಾರದ ಒಡವೆ ಅವಳಿಗೆ ಬೇಕಿರಲಿಲ್ಲ. ಉಮ್ರಾವ್ ತನ್ನ ಹೆಂಡತಿಯೆಂದು ಘೋಷಿಸಿದ ವ್ಯಕ್ತಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ಅವಳು ನ್ಯಾಯಾಂಗದ ಬಾಗಿಲನ್ನೂ ತಟ್ಟಿದಳು. ತನ್ನ ಜೀವನದ ಕೊನೆಯ ಗಳಿಗೆಯವರೆಗೂ ಅವಳು ಯಾರೊಂದಿಗೂ ಒಡಂಬಡಿಕೆ ಮಾಡಿಕೊಳ್ಳದೇ ಸ್ವತಂತ್ರವಾದ ಬದುಕನ್ನು ಕಟ್ಟಿಕೊಂಡಳು.

ಹಾಗೆ ಸ್ವತಂತ್ರವಾಗಿ ಜೀವಿಸುತ್ತಾ, ತನಗೆ ಬೇಕಾದುದನ್ನೆಲ್ಲ ಬರೆಯುತ್ತಾ, ಅನೇಕ ಪಂಡಿತರ, ನವಾಬರ ರಾತ್ರಿಗಳನ್ನು ಕಳೆಗಟ್ಟುತ್ತಾ ಅವಳ ದಿನಗಳು ಸರಿಯುತ್ತಾ ಹೋದವು. ಅವಳು ತನ್ನ ವರ್ತಮಾನವನ್ನು ಸದಾಕಾಲವೂ ಕಲೆಯ ವೈಭವದಿಂದ ಅಲಂಕರಿಸಿಕೊಳ್ಳುತ್ತಿದ್ದಳು. ಆದರೆ ಅಂದು ಖಾನ್‍ಪುರದಲ್ಲಿ ನಡೆದ ಮುಜರಾ ಅವಳೆದುರು ಮತ್ತೆ ಅವಳ ಭೂತವನ್ನು ತಂದು ನಿಲ್ಲಿಸಿತ್ತು.ಮುಜರಾ ಮುಗಿಸಿ ಕಣ್ಣು ಬಿಟ್ಟಾಗ ಅವಳ ಅಮ್ಮ ಅವಳ ಕಣ್ಣೆದುರು ನಿಂತಿದ್ದಳು.ಅವಳ ತುಟಿ ಅಲುಗುತ್ತಿತ್ತು.

“ಲಖ್ನೋದಿಂದ ಬಂದ ಸೂಳೆನೀನೇ ಏನು?”
“ಹೌದು, ನಾನೆ.”
“ನಿನ್ನ ಹೆಸರೇನು?”
“ಉಮ್ರಾವ್ ಜಾನ್ ಎನ್ನುತ್ತಾರೆ”
“ಸುಳ್ಳುಹೇಳಬೇಡ, ನೀನು ನನ್ನ ಅಮೀರನ್”
“ಹಾಂ, ಮೊದಲಾಗಿದ್ದೆ”
“ಆದರೆ ಅಮೀರನ್, ನಮ್ಮನ್ನೆಲ್ಲ ಬಿಟ್ಟು ಯಾರೊಂದಿಗೋ ಓಡಿಹೋದೆಯೇಕೆ?”
ಅಮ್ಮ ಅವಳನ್ನು ಅಪ್ಪಿ ಬಿಕ್ಕಿ, ಬಿಕ್ಕಿ ಅತ್ತಳು.
“ಅಮ್ಮಾ, ನೀನೂ ಅದನ್ನು ನಂಬಿದೆಯೇನು?”
ಅವಳು ಅಮ್ಮನಿಗೆ ತೆಕ್ಕೆಬಿದ್ದು ಕೇಳಿದಳು. ಖಂಡಿತ ಅಮ್ಮ ಅದನ್ನ ನಂಬಿರೋದಿಲ್ಲ. ಆದರೆ ಸಮಾಜ ಅದನ್ನೇ ಹೇಳಿ, ಹೇಳಿ ನಂಬಿಸಿರುತ್ತದೆ ಅಷ್ಟೆ ಎಂಬ ಸತ್ಯ ಅವಳಿಗೂ ತಿಳಿದಿತ್ತು.
ಹೆಣ್ಣು ಕಾಣೆಯಾದಳೆಂದರೆ ಯಾರೊಂದಿಗಾದರೂ ಓಡಿಹೋದಳೆಂದು ತಾನೆ ಅರ್ಥ?

ಅದು ಅವಳು ಆಡಿ ಬೆಳೆದ ಅಂಗಳವಾಗಿತ್ತು. ಅದೇ ಮನೆಯ ಉಪ್ಪರಿಗೆಯಲ್ಲಿ ನಿಂತು ದಿನವೂ ಅವಳು ಪಾರಿವಾಳಗಳನ್ನು ಹಾರಿಬಿಡುತ್ತಿದ್ದಳು. ಹಳೆಯ ನೆನಪಿನ ಯಾನದಲ್ಲಿ ಅವಳು ಕ್ಷಣಕಾಲ ಕಳೆದುಹೋದಳು. ಅಷ್ಟರಲ್ಲಿ ಒಬ್ಬ ತರುಣ ಅವಳನ್ನು ಹುಡುಕಿಕೊಂಡು ಬಂದ.

“ನೀನು ಸತ್ತಿರುವೆಯೆಂದು ಭಾವಿಸಿದ್ದೆವು. ಹಾಗಿದ್ದರೆ ಎಷ್ಟು ಚೆನ್ನಾಗಿತ್ತು” ಎಂದ.
“ಹೌದಲ್ಲ,ನನಗೂ ಮೊದಮೊದಲು ಹಾಗನ್ನಿಸಿತ್ತು. ಆದರೆ ಸಾಯುವ ಮಾರ್ಗಗಳೇ ಹೊಳೆಯಲಿಲ್ಲ” ಎಂದು ಅವಳು ಉತ್ತರಿಸಿದಳು.
“ನೀರಿನಲ್ಲಿಮುಳುಗಿಯಾದರೂ ಸಾಯಬೇಕಿತ್ತು. ಎಷ್ಟು ಕ್ರೂರಿ ನೀನು! ಹುಟ್ಟಿಬೆಳೆದ ಮನೆಯೆದುರಿಗೆ ನಜರಾಕ್ಕೆ ಬಂದಿರುವಿಯಲ್ಲ. ಮನೆತನದ ಮರ್ಯದೆಯ ಬಗ್ಗೆ ಯೋಚಿಸಿರುವಿಯೇನು?” ಕೋಪದಿಂದ ಕುದಿಯುತ್ತ ಹೇಳಿದ.
“ಧನ್ಯವಾದಗಳು ತಮ್ಮ ಅಮೂಲ್ಯ ಸಲಹೆಗೆ. ಆದರೆ ನನಗೆ ಸಾಯುವ ಮನಸ್ಸಿಲ್ಲ. ನಿನ್ನ ಮನೆತನದ ಕೀರ್ತಿ ಬೆಳಗಲಿ”

ಎಂದು ಹಾರೈಸಿ ಅಲ್ಲಿಂದ ನಿರ್ಗಮಿಸಿದಳು ಉಮ್ರಾವ್. ಏಕೆಂದರೆ ಅವನು ಅವಳ ಖಾಸಾ ತಮ್ಮನಾಗಿದ್ದ ಮತ್ತು ಅವನಿಗೆ ಬೆಳೆಯುತ್ತಿರುವ ಹೆಣ್ಣುಮಕ್ಕಳಿದ್ದರು.
ಅವಳು ಹುಟ್ಟಿಬೆಳೆದ ಮನೆಯ ಸುತ್ತಲೂ ಮರ್ಯಾದೆಯ ಅಬೇಧ್ಯ ಬೇಲಿಯಿರುವುದನ್ನು ಆ ದಿನ ಅವಳು ನೋಡಿದಳು.
ಆದರೆ ಆ ಬೇಲಿಯನ್ನು ಜಿಗಿಯುವ ಶಕ್ತಿಯನ್ನು ಕಲೆ ಅವಳಿಗೆ ನೀಡಿತ್ತು.ಅವರು ಹೇಳಿದಂತೆ ವೇಶ್ಯೆಯ ಕೀಳು ಬದುಕು ಸಾಕೆಂದು ತನ್ನನ್ನೇ ಸಾಯಗೊಡುವ ಹೀನವಾದ ಬದುಕು ಅವಳದಾಗಿರಲಿಲ್ಲ. ಉಮ್ರಾವ್ ಅವರ ಬಂಧನದ ಬೇಲಿಯನ್ನು ದಾಟಿ ನವಾಬರ ಯುದ್ಧದ ಗೆಲುವಿನ ಮುಜರಾದಲ್ಲಿ ನೃತ್ಯವೇ ನಾನಾದಂತೆ ನರ್ತಿಸಿದಳು.

“ಮನವೇಕೋ ಹೆದರುತಿದೆ | ನನ್ನ ತನುವೀಗ ಅರಳುತಿದೆ
ನೀ ತಂದ ಪ್ರೀತಿಗೆ | ಕೊಡಲೇನು ಕಾಣಿಕೆ?
ಎದೆಯಾಳದಲ್ಲಿ ಮೊಗ್ಗು ಹೂವಾಗಿ ಬಿರಿಯುತಿದೆ|

ಕಣ್ಣು ಕಣ್ಣ ಕೂಡುವ ಗಳಿಗೆ
ಕಣ್ಣ ನೋಟವಿಲ್ಲಿ ದಾರಿ ತಪ್ಪಿದೆ
ಎಲ್ಲೆಲ್ಲೋ ಹೊರಳಿ, ಮೈತುಂಬ ಉರುಳಿ
ಚಿನ್ನಾಟವಾಡುತಿದೆ ಕೇಳಿದೆ ನಿನ್ನೊಸಗೆ

ಮೈದೋರುವಾಸೆಯಿರೆ ಮನವ ಮುದಗೊಳಿಸು
ಮೈಗೆ ಕನ್ನಡಿ ಮನವು ಮರೆಯದಲೆ ರಮಿಸು
ತುಂಬಿ ತುಳುಕುವ ಯೌವ್ವನವ ಸಂತೈಸು
ಉಸಿರಲ್ಲಿ ಪ್ರೀತಿಯ ಬೆರಸಿ ಮುದಗೊಳಿಸು

ನೆರವೇಕೆ ಪ್ರೀತಿಗೆ ವರವು ಅದು ಕೇಳು
ಮರೆತುಬಿಡು ಜಗದರಿವು ರಸಿಕತೆಗದು ಕೇಡು
ಸುಖದ ಸೂರೆಯ ಸಮಯ ಈಗ ಬಂದಾಯ್ತು
ಓ ಅದಾ……. ನಿನ್ನ ಭಾಗ್ಯವು ತೆರೆಯಿತು”

ಅದಾ ಅವಳ ಭಾಗ್ಯದ ಬಾಗಿಲನ್ನು ತೆರೆದಿದ್ದ.ಮೆಚ್ಚುಗೆಯ ಚಪ್ಪಾಳೆಯಾಗಿ ಅವಳೆದುರು ಸಾಕ್ಷಾತ್ಕಾರಗೊಂಡಿದ್ದ. ಅವಳು ಯಾರೊಬ್ಬರಿಗಾಗಿ ನರ್ತಿಸುತ್ತಿರಲಿಲ್ಲ. ನೃತ್ಯ, ಗಾನ, ಗೋಷ್ಠಿಗಳು ನಡೆಯುತ್ತಿದುದು ಅವಳ ಸಂತೋಷಕ್ಕಾಗಿ.ಅದರಲ್ಲಿ ಭಾಗಿಯಾಗಲು ಅರ್ಹರೆಲ್ಲರಿಗೂ ಸ್ವಾಗತವಿತ್ತು.ಅವಳ ಭಾಗ್ಯವು ಜನರ ನಡುವಿನಿಂದ ಬಂದುದಾಗಿತ್ತು; ಮತ್ತದು ಜನರೆದುರು ಪ್ರದರ್ಶನಗೊಂಡು ಅವರ ಸಂತೋಷವಾಗಿ ಪ್ರತಿಫಲಿಸುತ್ತಿತ್ತು.ಅವಳು ಪ್ರತಿಫಲಿಸುವ ದರ್ಪಣದೆದುರು ನಿಂತು ನಿತ್ಯವೂ ನನ್ನೊಳಗಿನ ಕಲೆಯನ್ನು ಅಲಂಕರಿಸಿಕೊಳ್ಳುತ್ತಲೇ ಸಾಗಿದಳು. ಜಗವು ಅವಳನ್ನು ಸುಂದರಿಯೆಂದಿತು, ಅಪ್ರತಿಮ ನೃತ್ಯಗಾತಿಯೆಂದು ಹೊಗಳಿತು, ಮಧುರ ಕಂಠದ ಗಾಯಕಿಯೆಂದು ಶ್ಲಾಘಿಸಿತು, ಅವಳ ಷೇರ್‍ಗಳನ್ನು ತನ್ನೆದೆಯೊಳಗೆ ಕಾಪಿಟ್ಟುಕೊಂಡಿತು.

“ಸಾವ ದಿನ ಸನಿಹಕ್ಕೆ ಬಂದಂತೆ ಕಾಣುತಿದೆ ಓ ನನ್ನ ಮನವೆ
ಸಾಕಷ್ಟು ಪಡೆದಿಹುದು ತೃಪ್ತಿ ಮನ ನಿನ್ನಿಂದ ಓ ನನ್ನ ಜೀವನವೆ
ಓ ಅದಾ ನನ್ನ ಭಾಗ್ಯವು ತೆರೆಯಿತು”

ಇಂತಹ ಸುಂದರ ಕಲಾಕಾರ್ತಿಯೊಬ್ಬಳ ಬದುಕನ್ನು ಆ ಕಾಲದ ಪ್ರಸಿದ್ಧ ಕಾದಂಬರಿಕಾರ ರುಸ್ವಾ ತನ್ನ ಪದಗಳಲ್ಲಿ ಪೋಣಿಸಿದ. ಅದರ ಮೊದಲ ಪ್ರತಿಯನ್ನು ಕೈಗಿಟ್ಟಾಗ ಉಮ್ರಾವ್ ತನ್ನ ಬದುಕನ್ನು ಕಥೆಯಾಗಿಸಿದ್ದಕ್ಕೆ ಕೋಪಗೊಂಡಿದ್ದಳು. ಆದರೆ ಅದನ್ನು ಓದಿದ ಮೇಲೆ ತನ್ನ ಬದುಕಲ್ಲೂ ಜಗವು ತಿಳಿಯಬೇಕಾದ ಕಥೆಯಿದೆ ಎಂದು ಸುಮ್ಮನಾದಳು. ತನ್ನ ಪ್ರತಿಭೆಯ ದ್ಯೊತಕವೋ ಎಂಬಂತೆ ತಾನೇ ಸ್ವತಃ ರುಸ್ವಾನ ಜೀವನ ಚರಿತ್ರೆಯನ್ನು ಬರೆದು ಅವನನ್ನು ಅಚ್ಛರಿಗೊಳಿಸಿದಳು.

ಉಮ್ರಾವ್ ಹೇಳುತ್ತಾಳೆ, “ಅದಾ ತನ್ನ ಭಾಗ್ಯದ ಬಾಗಿಲನ್ನು ತೆರೆದ” ಎಂದು. ಆದರೆ ಅವಳಂತಹ ಕೋಟಿಜಾನ್‍ಗಳ ಭಾಗ್ಯ ಬಹಳ ಕಾಲ ಉಳಿಯಲಿಲ್ಲ. ಬ್ರಿಟೀಷರ ಪ್ರಾಬಲ್ಯದೊಂದಿಗೆ ಕೋಟಿಜಾನ್‍ಗಳ ಅಸ್ತಿತ್ವಕ್ಕೇ ಕುತ್ತು ಒದಗಿತು. ಏಕೆಂದರೆ ಕೋಟಿಜಾನ್‍ಗಳ ಚಹರೆಯ ಅರಿವೇ ಆಡಳಿತ ಯಂತ್ರಕ್ಕೆ ಇರಲಿಲ್ಲ. ಅವರು ಇವರನ್ನು ಸಾಹಿತಿಗಳು, ನೃತ್ಯಗಾರರು, ಸಂಗೀತಗಾರರು ಅಥವಾ ವೇಶ್ಯೆಯರೆಂದು ವರ್ಗೀಕರಣ ಮಾಡಬಯಸಿದರು. ಆದರೆ ಇವರ್ಯಾರು ಅದ್ಯಾವ ವಿಭಾಗಕ್ಕೂ ಹೊಂದುವಂತವರಾಗಿರಲಿಲ್ಲ. ಹಾಗೆಂದು ಅವೆಲ್ಲವೂ ಆಗಿದ್ದುದಂತೂ ಸುಳ್ಳಲ್ಲ. ಹಾಗಾಗಿ ಎಲ್ಲ ವಿಭಾಗದ ಸುಂಕವನ್ನೂ ಭರಿಸಲಾಗದ ಇವರು ಕ್ರಮೇಣ ಶುದ್ಧ ವೇಶ್ಯೆಯರಾಗುವ ದುರ್ಗತಿ ಬಂದೊದಗಿತು.

ಇದು ಎಂಥಹ ಕ್ರೂರ ಸತ್ಯವಲ್ಲವೇನು? ಭಿನ್ನ ಸಂಸ್ಕೃತಿ ಯೊಂದು ಹೀಗೆ ಒಂದಕ್ಕೊಂದು ಮುಖಾಮುಖಿಯಾದಾಗ ಅವುಗಳ ಆಲವಾದ ಅರಿವು ಇಲ್ಲದೇ ಹೋದರೆ ಕ್ರಮೇಣ ಕಲೆ ತನ್ನ ಬೆಲೆಯನ್ನು ಕಳಕೊಳ್ಳುತ್ತ ಹೋಗುತ್ತದೆ. ಇಂದಿಗೂ ತಮ್ಮದೇ ಅದ್ಭುತ ಕಲೆಗಾರಿಕೆ ಮತ್ತು ಪರಿಸರ ಸೂಕ್ಷ್ಮವನ್ನು ಅರಿತಿರುವ ಬುಡಕಟ್ಟು ಮತ್ತು ಹಿಂದುಳಿದ ಜನಾಂಗವನ್ನು ನಾವು ನಮ್ಮ ಶಿಕ್ಷಣ ವ್ಯವಸ್ಥೆಯೊಲಗೆ ಬಲವಮತವಾಗಿ ತುಂಬಿಸುತ್ತ, ಅವರ ನೈಜ ಕಸುವನ್ನೆಲ್ಲ ನಿರ್ಲಕ್ಷಿಸುತ್ತ, ಶೈಕ್ಷಣಿಕವಾಗಿ ಮುಂದುವರೆಯಲಾಗದೇ ಒದ್ದಾಡುವ ಅವರಿಗೆ ಪಂಜರದ ಗಿಳಿಯಂತೆ ನಿರಂತರವಾಗಿ ಮಾಹಿತಿಗಳನ್ನು ತುಂಬಿಸುತ್ತ ನಿಜಕ್ಕೂ ಅಂಗವಿಕಲರಾಗಿಸುತ್ತಿದ್ದೆವೇನೋ ಎನಿಸುತ್ತದೆ. ಅವರನ್ನು ಸುಶಿಕ್ಷಿತರಾಗಿಸುತ್ತಿದ್ದೇವೆಂಬ ಭ್ರಮೆಯಲ್ಲಿ ನೆಲಮಟ್ಟದ ಅನೇಕ ಕಲೆಯನ್ನು ನಾಶಪಡಿಸುವ ಕ್ರಿಯೆಯು ಅರಿವಿಲ್ಲದೇ ಸಾಗುತ್ತಲೇ ಇರುತ್ತದೆ. ಇದರ ಬದಲಾಗಿ ಅವರ ಅಂತಸತ್ವವನ್ನೇ ಶಿಕ್ಷಣವಾಗಿಸುವ ಮತ್ತು ಅದನ್ನು ಆಧುನೀಕರಣಕ್ಕೆ ಹಿಗ್ಗಿಸುವ ಶಿಕ್ಷಣ ಅವರ ನಿಜವಾದ ಅವಶ್ಯಕತೆಯಾಗಿದೆ.

ಜೀವನದ ಎಲ್ಲ ದ್ವಂದ್ವಗಳನ್ನು ಕಲೆಯ ಮೂಲಕವೇ ಮಿರಿದ ಉಮ್ರಾವ್ ಈ ಕಾಲಕ್ಕೆ ಎಷ್ಟೆಲ್ಲ ಪಾಠಗಳನ್ನು ಹೇಳುತ್ತಿದ್ದಾಳೆ!

12 comments

  1. Very nice portrayal of Ukraine Jaan. Interspersed poems are very powerful. Liked the article very much. Article has expressed all the feelings of Unrao Jaan very effectively. It is a pity that her mother and brother fail to understand her transformation and that she is now Umrao and not Amiran. Amiran has graduated in university of life with brilliant flying colours to become Umrao! She has skills, expertise and has excelled in her profession. She does not want to go back to her previous life, it would be her certain death of what she had achieved. The social constructs just give label to everything. The real values are not appreciated. !

    ರವಿ ಸಾಣಿಕೊಪ್ಪ

  2. ನೀವು ಕಾಣಿಸುವ ಒಳನೋಟಗಳು ಕಣ್ಣುತೆರೆಸುತ್ತವೆ. ಅಭಿನಂದನೆ!

  3. ಕೈ ಹಿಡಿದು ಓದುಗರನ್ನು ಕರೆದೊಯ್ಯುವ ಬರಹ.well researched, beautifully written. ತುಂಬಾ ಇಷ್ಟ ವಾಯಿತು ಸುಧಾ ಅವರೆ.

  4. ನಿಮ್ಮ ಪ್ರತಿ ಅಂಕಣವು ವಿಶೇಷವೇ.ಆಳ ವಿಷಯ,ಸೂಕ್ತಕವನ ಓದುಗರನ್ನು ಬಂದಿಸಿಬಿಡುತ್ತವೆ.ಈ ಅಂಕಣವು ಮನ ಮುಟ್ಟುವಂತಿದೆ.

Leave a Reply