ವಿರಹಕ್ಕೊಂದು ಮಾತು..

  ಶ್ರೀದೇವಿ ಕೆರೆಮನೆ

ಸಹಿಸುವುದು ಇಷ್ಟೊಂದು ಕಷ್ಟ
ಈ ವಿರಹವನ್ನು
ಎನ್ನುವ ಕಲ್ಪನೆ ಕೂಡ ಇರಲಿಲ್ಲ
ಕಟ್ಟು ಪಾಡುಗಳಿಗಂಜಿ
ನಿನ್ನಿಂದ ದೂರವಿರಲು ನಿರ್ಧರಿಸುವವರೆಗೆ

ಕಣ್ಣೊಳಗೆ ದಹಿಸುವ
ಅಗಲುವಿಕೆಯ ವಿರಹದ ಜ್ವಾಲೆಗೆ
ಕಿಚ್ಚು ಸ್ಪೋಟಿಸಿ
ಮೈಯ್ಯ ನರಗಳೆಲ್ಲ ಹುರಿಗೊಂಡು
ಬಿಗಿದ ವೀಣೆಯ ನುಡಿಸಲಾಗದೇ
ತಂತಿಗಳೆಲ್ಲ ಚಟಚಟನೇ ಸಿಡಿವ ಸದ್ದು

 

ಕೊರೆವ ಪ್ರಪಾತದೊಳಗೆ
ದಿನವಿಡೀ ಕುಳಿತು ಹಾಯಾಗಿರಬಹುದು
ನೀನು ಜೊತೆಗಿದ್ದರೆ
ಜ್ವಲಿಸುವ ಕೆಂಡವನ್ನೂ
ನಗುನಗುತ್ತ ಕೈಯ್ಯಲ್ಲಿ ಹಿಡಿದು
ಸಪ್ತ ಸಾಗರವ ಬರಿಗಾಲಲ್ಲಿ ದಾಟಿ
ನಿಹಾರಿಕಾ ಲೋಕದಲ್ಲಿ ವಿಹರಿಸಬಹುದು
ಎನ್ನುವ ಕಲ್ಪನೆಗಳೆಲ್ಲ
ಅಂದಿನ ನಗೆಗೆ ಪಶ್ಚಾತ್ತಾಪ ಪಟ್ಟು
ಇಂದು ನಿಜವೆಂಬಂತೆ ಭಾಸವಾಗುತ್ತಿದೆ

ಎಲ್ಲವನ್ನೂ ತೊರೆದು ಬಂದುಬಿಡು
ಎಂದು ಹೇಳುವುದಾದರೂ ಹೇಗೆ
ಎಲ್ಲವನ್ನೂ ಬಿಟ್ಟು ಹೊರಡುವುದಾದರೂ ಹೇಗೆ
ಬಯಸಿ ಬಯಸಿ ಬಂಧಿಸಿಕೊಂಡ
ಚಿನ್ನದ ಸರಪಳಿಯನ್ನು
ತುಂಡರಿಸಿ ಕಿತ್ತೆಸೆಯುವ ಧೈರ್ಯವೂ ಇಲ್ಲದಿರುವಾಗ
ಉರಿಯುವ ವಿರಹಕ್ಕೆ
ಮದ್ದು ಹುಡುಕುವ ಪ್ರಮೇಯವಾದರೂ ಎಲ್ಲಿದೆ

ಹೆಚ್ಚೇನೂ ಕೇಳುವುದಿಲ್ಲ ನಾನು
ಜಗದ ಬವಣೆಗಳ ಬಗ್ಗೆ ಗೊಣಗುವುದೂ ಇಲ್ಲ
ಒಂದೇ ಒಂದು ಸಲ
ನಿನ್ನ ತೋಳೊಳಗೆ ಸೇರಿ
ಕಣ್ಣೆವೆಯೊಳಗೆ ನಿನ್ನ ತುಂಬಿಕೊಂಡು
ನಿಡಿದಾದ ಶ್ವಾಸ ಒಳಗೆಳೆವಾಗ
ಉಸಿರು ನಿಂತೇ ಹೋದರೂ ಚಕಾರವೆತ್ತುವುದಿಲ್ಲ..

 

4 comments

  1. ಶ್ರೀದೇವಿ ಮೇಡಂ ಅವಧಿಯಲ್ಲಿ…ವಿರಹಕ್ಕೊಂದು ಮಾತು ನಿಮ್ಮ ಕವನ ತುಂಬಾ ಸೂಪರ ಆಗಿದೆ… ನಿಜಕ್ಕೂ ನಿಮ್ಮ ಈ ಕವನ ನನಗೆ ತುಂಬಾ ಇಷ್ಟ ಆಯ್ತು…. ನಿಮಗೆ ಅಭಿನಂದನೆಗಳು

  2. ವಿರಹ ದಹಿಸುವ ವೇದನೆ.ಅದನ್ನು ಸುಂದರವಾಗಿ ಸೆರೆಹಿಡಿದಿರುವ ನಿಮ್ಮ ಕವಿತೆ ಸೊಗಸಾಗಿದೆ.

Leave a Reply