ಇಲ್ಲಿ ನೀಲಾಂಜನೆ, ಶಾಂತಲಾ, ಉಮ್ರಾವ್ ಜಾನ್ ಎಲ್ಲರೂ ಇದ್ದಾರೆ..

ಉಡುಪಿಯಲ್ಲಿ ಇತ್ತೀಚಿಗೆ ಮಹತ್ವದ ಏಕವ್ಯಕ್ತಿ ಪ್ರಯೋಗವೊಂದು ಜರುಗಿತು. ಅದೇ ‘ನೃತ್ಯಗಾಥಾ’. ಈಗಾಗಲೇ ನೃತ್ಯನಾಟಕಗಳ ಮೂಲಕ ಗಮನ ಸೆಳೆದಿರುವ ಅನಘಾ, ಶ್ರೀಪಾದ್ ಭಟ್ ಅವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿದ ಈ ಪ್ರಯೋಗ ಎಲ್ಲರ ಮನ ಗೆದ್ದಿತು. ಸುಧಾ ಆಡುಕಳ ಇದರ ಸ್ಕ್ರಿಪ್ಟ್ ರಚಿಸಿದ್ದಾರೆ. ಈ ಪ್ರಯೋಗಕ್ಕೆ ಶ್ರೀಪಾದ್ ಭಟ್ ಬರೆದುಕೊಂಡ ಟಿಪ್ಪಣಿ ಹಾಗೂ ಪ್ರಯೋಗದ ಚಿತ್ರ ಸಂಪುಟ ಇಲ್ಲಿದೆ-

ನೃತ್ಯ ಗಾಥಾ ಏಕವ್ಯಕ್ತಿ ಅಭಿನಯದ ರಂಗಪ್ರಯೋಗ.  ನೃತ್ಯವನ್ನು ತನ್ನ ಮೈ ಮನಸ್ಸಿಗೆ ಹಚ್ಚಿಕೊಂಡ ಆಧುನಿಕ ನೃತ್ಯಗಾತಿಯೊಬ್ಬಳು ನೃತ್ಯವನ್ನು ಓದುವ ಒಂದು ಮಾದರಿ ಇದು. ನೃತ್ಯವೆಂಬ ಅಗಾಧವಾದ ಭೂ ವ್ಯೋಮವನ್ನು ಚಲನೆಯಲ್ಲಿ ಧರಿಸುವ ಮಹತ್ವಾಕಾಂಕ್ಷೆಯ ಕಲೆಯೊಂದನ್ನು ತನ್ನ ಕಾಲದ ಅಗತ್ಯಕ್ಕೆ ತಕ್ಕಂತೆ ಓದಿಕೊಳ್ಳುವ ಅರ್ಥೈಸಿಕೊಳ್ಳುವ ಬಗೆಯನ್ನು ಚಿತ್ರಿಸಹೊರಟ ಪ್ರಯೋಗ.

ಕಾವ್ಯ, ಕಾದಂಬರಿ, ಇತಿಹಾಸಗಳಿಂದ ಆಯ್ದು ತೆಗೆದ ನೃತ್ಯಗಾತಿಯರ ಕಥನವನ್ನು ಮರು ರೂಪಿಸಿಕೊಳ್ಳುತ್ತ ಅದರಿಂದ ದೊರೆತ ವಿವೇಕವನ್ನು ಮುಂದಿನ ನೃತ್ಯಬದುಕಿಗಾಗಿ ಆವಿಷ್ಕರಿಸಿಕೊಳ್ಳುವ ಒಂದು ಸಾಧ್ಯತೆಯನ್ನು ಇಲ್ಲಿ ಕಾಣಿಸಲು ಪ್ರತ್ನಿಸಲಾಗಿದೆ. ಇಲ್ಲಿ ನೀಲಾಂಜನೆ, ಶಾಂತಲಾ, ಉಮ್ರಾವ್ ಜಾನ್ ಆಧುನಿಕ ಯುಗದ ನರ್ತಕಿಯೊಬ್ಬಳ ದೇಹ ಧರಿಸಿ ಮಾತನಾಡುತ್ತಾರೆ. ಆಖ್ಯಾನಗಳು ಇಲ್ಲಿ ವ್ಯಾಖ್ಯಾನಗೊಳ್ಳುತ್ತವೆ. ನೃತ್ಯ ಮೀಮಾಂಸೆಯನ್ನು ಮಂಡಿಸುವ ನಮ್ರ ಪ್ರಯತ್ನವಿದು. ಕಾಲದ ಕರೆಗೆ ಕಂಪಿನ ಕರೆಯನ್ನು ಒಗ್ಗಿಸಹೊರಟ ಪ್ರಯೋಗವಿದು. ಕಲಾಮಾರ್ಗವೊಂದರ ಸಾಧ್ಯತೆಯ ಅನ್ವೇಷಣೆ ಈ ಪ್ರಯೋಗದಲ್ಲಿ ಪ್ರಬಂಧದ ಸ್ವರೂಪ ಪಡೆಯುವದೂ ಉಂಟು.

ಆಧುನಿಕ ರಂಗಭೂಮಿಯ ವಿದ್ಯಾರ್ಥಿಯಾದ ನನಗೆ ದೇಹದ ಸಾಧ್ಯತೆಯನ್ನು ವಿಸ್ತರಿಸಿಕೊಳ್ಳುವ ಇಂತಹ ಅನ್ಯಜ್ಞಾನ ಶಿಸ್ತುಗಳ ಅಧ್ಯಯನದ ಕುರಿತು ಅಪಾರ ಹಸಿವಿದೆ. ಅದರ ಒಂದು ರೂಪ ಇದು. ಇದರಿಂದ ಆಯಾ ಕಲಾಮಾರ್ಗದಲ್ಲಿರುವವರಿಗೆ ಅಲ್ಪ ಸ್ವಲ್ಪ ಅನುಕೂಲ ಆದರೂ ಆದೀತು. ಆಗುತ್ತದೆ ಎಂಬ ಅಹಂ ನನಗಿಲ್ಲ. ಕಂಪಿನ ಕರೆಯನ್ನು ಕಾಲದ ಕರೆಗೆ ಒಗ್ಗಿಸ ಹೊರಟ ಈ ಪ್ರಯತ್ನಕ್ಕೆ ಸಹೃದಯರ ಸಾಕ್ಷಿಯನ್ನು ಬಯಸುತ್ತ, ಈ ಪ್ರಯತ್ನದ ಒಡನಾಡಿಗಳಾದ ಅನಘ, ನೃತ್ಯನಿಕೇತನದ ಸುಧೀರ್ ಮತ್ತು ಮಾನಸಿ, ಪ್ರಶಾಂತ್, ಶ್ವೇತಾ, ರಾಜು ಮಣಿಪಾಲ, ಮುರಳೀಧರ ಉಪಾದ್ಯಾಯ, ಉಷಾ, ಭಾಗವತ ಇವರೆಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸುವೆ. ನಿಮ್ಮನ್ನಂತೂ ಮರೆಯೋ ಹಾಗೇ ಇಲ್ಲ.

-ಶ್ರೀಪಾದ್ ಭಟ್ 

2 comments

  1. ಪ್ರದರ್ಶನ ಅತ್ಯುತ್ತಮವಾಗಿತ್ತು. ಇಡೀ‌ತಂಡಕ್ಕೆ ಅಭಿನಂದನೆಗಳು

  2. Nruthya ghada ondu athutthama yeka vyakthi abhinayadavarige sawalada haagu athi sookshma nirdeshana ,vibinna vyaktthithwada abhinayagalu. ..thannanu thane rangadalli singarisikondu aa paatrakke hondikolluwa anaga la paatra.. Ooooo adbhutha… Shrepadara nirdeshanakke yella reethiyallu poorakawada manojna abhinayada hudugi ee anagha. .. Mai maresida nataka munde thumba yashassu kanalendu haraisutthene.

Leave a Reply