ಕ್ಲೈಮ್ಯಾಕ್ಸ್!

ಶಾಂತಾಕುಮಾರಿ

ಧಾರಾಕಾರ ಮಳೆ ಸುರಿದು
ಬಟ್ಟೆ ಬಿಚ್ಚಿ ನಿಂತ
ನಿರ್ಲಜ್ಜ ಗಂಡಿನಂತೆ ಆಗಸ

ಇರುಳ ಗಾಳಿಯ ತೇವದ
ನಿಗೂಢ ಶುದ್ಧ ಮೌನವೇ
ಹೆಣ್ಣಾಗಿ ನಿಂತಂತೆ ಇಳೆ

ಉನ್ಮತ್ತ ಕಾಮವಾಸನೇಯೇ ಹೆಪ್ಪು
ಗಟ್ಟಿದೆಯೇನೋ ಎಂಬಂತೆ
ಪುಷ್ಪವತಿ ಹೆಣ್ಣಿನಂತೆ
ತೊಯ್ದುತೊಪ್ಪೆಯಾಗಿ ಭಾಗಿ
ನಿಂತ ಗಿಡಮರಗಳು

ನೆಲಕ್ಕೆ ನೆಲವೇ ಸುಸ್ತಾಗಿ
ಕಿಬ್ಬೊಟ್ಟೆ ಹಿಂಡುವ ನೋವು
ಎದೆಯಲ್ಲಿ ಭಗಭಗನೆ ಉರಿವ ಸೇಡು
ಭಯ ಕ್ರೂರ ಅಸಹ್ಯ
ತೆವಳುತ್ತಾ ಏಳಲು ಹವಣಿಸುವ ಅವನಿ

ತಲೆ ಹಿಡುಕನಂತೆ ಕಾರ್ಮೋಡ ಕವಿದು
ಆಕಾಶದ ದೀಪವನ್ನಾರಿಸಿತು
ನಿರ್ದಯ ಗಂಡಿನಂತೆ ಅಬ್ಬರಿಸಿ
ಮತ್ತೆ ಮತ್ತೆ ಚಚ್ಚತೊಡಗಿದ ಮಳೆ

ಹೊಡೆತ ತಾಳದೆ ಗುಳಿಬಿದ್ದ ಇಳೆ
ಗಾಳಿಗೆ ಅಲುಗುವ ದೀಪದ
ನಿಟ್ಟಿಸುತ್ತಾ ಕುಳಿತ ಅವಳ
ನೆರಳೂ ನಿಡುಸುಯ್ದಿತು

ಮಳೆ ನಿಂತು ಫಕ್ಕನೆ ಬಂದ
ಕರೆಂಟಿಗೆ ಆನ್ ಆದ ಟೀವಿಯಲ್ಲಿ
ಸಿನಿಮಾದ ಕ್ಲೈಮ್ಯಾಕ್ಸ್!

ರಕ್ತಸಿಕ್ತ ಮೈಯೊಂದಿಗೆ ನಾಯಕ
ಖಳನಾಯಕನ ಹೊಟ್ಟೆಗೆ ಚೂರಿಯಿಂದ
ಇರಿದಿರಿದು ಬಗೆಯುತ್ತಿದ್ದಾಳೆ!

ಇಡೀ ಜಗತ್ತಿನ ಬಗೆಗೆ ಸೇಡು
ತೀರಿಸಿಕೊಂಡ ಸಂಭ್ರಮದಲ್ಲಿ
ಮುಂಜಾನೆ ಎಳೆಬಿಸಿಲಿಗೆ ಮೈಯೊಡ್ಡಿ
ನಿಂತ ಭುವಿ!

Leave a Reply