ಪ್ರೀತಿಯ ಪ್ರೊ ಗಿರಡ್ಡಿ ಗೋವಿಂದರಾಜ ನಮಸ್ಕಾರ್ರೀ ಸರ್..

 ಕುಂ.ವೀರಭದ್ರಪ್ಪ 

ಪ್ರೀತಿಯ ಪ್ರೊ ಗಿರಡ್ಡಿ ಗೋವಿಂದರಾಜ ನಮಸ್ಕಾರ್ರೀ ಸರ್

ಹೋಗುವವರು ಹೋದ ಬಳಿಕ ನೀವು ಹೊರಡುವಿರೆಂದು ಭಾವಿಸಿದ್ದೇ ಪರಪಾಟಾಯಿತು ನೋಡಿರಿ. ಹೊರಡೋಕೆ ಯಾಕೆ ಅವಸರ ಮಾಡಿದಿರಿ? ಇತ್ತೀಚಿಗೆ ನೀವು ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸಿದ್ದಿರಿ, ಅದೂ ಕೈಯಲ್ಲಿ ಸಿಗರೇಟು ಹಿಡಿದುಕೊಂಡೆ. ಕಂಡೊಡನೆ ನಿಮಗೆ ಶುಗರ್ರೂ ಬೀಪೀ ಐತೆನು ಅಂತ ಪರಾಂಬರಿಸುತ್ತಿದ್ದಿರಿ, ಇದೆ ಅಂದಾಗ ಮುಖದಲ್ಲಿ ಪ್ರಸನ್ನತಾ ಭಾವ ಸೂಸುತ್ತಿದ್ದಿರಿ, ಔಷಧ ಮಾತ್ರೆ ಕುರಿತು ಕೇಳಿ ಮಾಹಿತಿ ಸಂಗ್ರಹಿಸುತ್ತಿದ್ದಿರಿ, ನೀವೇನು ತಗೋತೀರಿ ಎಂದು ಕೇಳಿದೊಡನೆ ಮುಖ್ಯವಾಗಿ ಗಿಡಮೂಲಿಕೆ ಕುರಿತಂತೆ ಅನಾಸಕ್ತಿಯಿಂದ ಹೇಳಿದ ಬಳಿಕ ನೇರಳೆ ಪುಡಿಯನ್ನು ಹಿತಮಿತವಾಗಿ ಸೇವಿಸುತ್ತಿರುವುದಾಗಿ ಹೇಳುವುದನ್ನು ಮರೆಯುತ್ತಿರಲಿಲ್ಲ.

ಅದರೂ ಕೈಯಲ್ಲಿ ಗುಗ್ಗುಳದಂತೆ ದಹಿಸುತ್ತಿದ್ದ ಸಿಗರೇಟು ಕಡೆ ಅಸಹನೆಯಿಂದ ನೋಡುತ್ತಿದ್ದ ಗೆಳೆಯರಿಂದ ನೀವು ಇರುಸು ಮುರುಸು ಅನುವಿಸುತ್ತಿದ್ದಿರಿ, ಕೇಳುವುದಕ್ಕಿಂತ ಮೊದಲೆ ಬಿಡಬೇಕಂತ ಮಾಡಿನಿ ಎಂದು ಆಶ್ವಾಸನೆ ನೀಡುತ್ತಿದ್ದಿರಿ. ಚಟ ಇಲ್ಲದವ ಲೇಖಕ ಅಂತ ಅನ್ನಿಸಿಕೊಳ್ಳುವನೇನು ಎಂದು ಹೇಳಲು ಪ್ರಯತ್ನಿಸುತ್ತಿದ್ದಿರಿ, ಆಗೊಮ್ಮೆ ಈಗೊಮ್ಮೆ ಥರ್ಟಿ ಸಾಕು ಸಿಕ್ಸ್ಟಿ ಎನಫ್ ಎಂದ ಬಳಿಕವೂ ನೈಂಟಿ ಡಿಗ್ರಿಗೆ ಏರುತ್ತಿದ್ದಿರಿ. ಆ ಉನ್ಮಾದವಾಸ್ಥೆಯಲ್ಲಿ ಸಮಕಾಲೀನ ಬರಹಗಾರರ ಬಗ್ಗೆ, ಇಂಗ್ಲೀಷ್ ಲೇಖಕರ ಬಗ್ಗೆ ಹಿತಮಿತವಾಗಿ ಮಾತು ಆರಂಭಿಸುತ್ತಿದ್ದಿರಿ. ಅಷ್ಟೇ ಹಿತಮಿತವಾಗಿ ನಗುತ್ತಿದ್ದಿರಿ. ಆದರೂ ಸಾರ್ವಜನಿಕವಾಗಿ ನೀವು ನಕ್ಕದ್ದು ಕಡಿಮೆ ಎಂಬ ಆಪಾದನೆ ನಿಮ್ಮ ಮೇಲೆ ಮರಣೋತ್ತರವಾಗಿ ಅಚಂದ್ರಾರ್ಕವಾಗಿ ಉಳಿದಿದೆ, ಈ ಅಪಾದನೆಯನ್ನು ಭೌತಿಕವಾಗಿ ಇಲ್ಲದಿರುವ ನೀವು ಅದು ಹೇಗೆ ತೊಡೆದು ಹಾಕುವಿರಿ ಎಂಬುದು ತಿಳಿಯದು. ಹ್ಹಾಂ ಅಂದ ಹಾಗೆ ನನ್ನ ಮೇಲೆ ನೀವು ಸೆಟಗೊಂಡು ಹತ್ತುವರ್ಷದ ಮೇಲಾತು.

ಅದೂ ಸಿಲ್ಲಿ ಕಾರಣಕ್ಕೆ. ತೀರ್ಥಂಕರರು ಖೂನಿ ಮಾಡಿದರೂ ಮಾಫ್ ಎಂಬ ನಾಣ್ನುಡಿ ತಿಳಿದಿದ್ದರು ಸಹ. ಮಟನ್ ಬಿರಿಯಾನಿಯ ಮರ್ಯಾದೆಯನ್ನು ಪುಳಿಯೊಗರೆಗಳ ಮುಂದೆ ನಿಮ್ಮಂಥ ಕಳೆಯಬಹುದೆಂದು ನಿರೀಕ್ಷಿಸಿರಲಿಲ್ಲ. ಆದ್ದರಿಂದ ನಾನು ಆ ಕ್ಷಣ ಸೆಟಗೊಂಡದ್ದು ಎಷ್ಟು ನಿಜವೋ ಮಾರನೆ ದಿವಸ ನಿಮ್ಮ ರೂಮಿಗೆ ಬಂದು ಸಾರಿ ಕೇಳಿದ್ದು ಸಹ ಅಷ್ಟೇ ನಿಜ ಸಾರ್. ಆಗಲೂ ನಿಮ್ಮ ಮುಖದ ಸುಕ್ಕುಗಳನ್ನು ತಿಳಿಗೊಳಿಸಲಿಲ್ಲ, ನನ್ನ ಪ್ರಕಟಣೆಗಳನ್ನು ಕಳಿಸಿದರೂ ನಿಮ್ಮಿಂದ ಎಂದಿನಂತೆ ಕಾರ್ಡುಗಳು ನಮ್ಮ ಮನೆಯ ಬುಲಂದೆ ದರವಾಜ್ ದಾಟಲಿಲ್ಲ. ಅದರಿಂದ ಈ ರಾಯಲಸೀಮೆ ನಿರಾಸೆಗೊಂಡರೆ ತಾನೆ!

ಸಂಸ್ಕೃತಿ ಶಿಬಿರದ ನೆಪದಲ್ಲಿ ಹೆಗ್ಗೋಡಲ್ಲಿ, ಬೆಂಗಳೂರಿನಲ್ಲಿ, ಹಾಗೆಯೇ ನನ್ನ ಪ್ರೀತಿಯ ಧಾರವಾಡದಲ್ಲಿ! ಹೀಗೆ ಎಲ್ಲಂದರಲ್ಲಿ ನುಗ್ಗಿ ಮಾತಾಡಿಸಲು ಪ್ರಯತ್ನಿಸಿದೆ, ಆದರೆ ನೀವು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ನನಗೂ ಸೆಟಗೊಳ್ಳಲು ಬರುತ್ತದೆ ಎಂದು ನಿರೂಪಿಸದೆ ಇರಲಾದೀತೆ! ಸಮೀರ ಜೋಷಿ ಸಾಹಿತ್ಯ ಸಂಭ್ರಮಕ್ಕೆ ಕರೆದರು, ಆದರೆ ನಿಮ್ಮ ಕಾರಣಕ್ಕೆ ಒಪ್ಪಲಿಲ್ಲ ಗಿರಡ್ಡಿ ಸಾರ್. ಆದರೂ ಎರಡು ವರ್ಷಗಳ ಹಿಂದೆ ಸಾಹಿತ್ಯ ಸಂಭ್ರಮಕ್ಕೆ ಹಾಜರಾದೆ. ತುಂಬಾ ಒರಟಾಗಿ ಪಾತ್ರ ನಿರ್ವಹಿಸಿದೆ. ವೀಣಾ ಬನ್ನಂಜೆ ನೀವು ಹೀಗೆ ಮಾತಾಡಬಾರದಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಯೋಚಿಸಿದೆ, ನನ್ನ ಮಾತುಗಳಲ್ಲಿ ನನ್ನನ್ನು ನಾನೆ ಮಾಡಿಕೊಂಡ ತಮಾಷೆ ಇತ್ತು, ಅತಿಥಿಗಳು ಹೀಗೆ ವರ್ತಿಸಬೇಕೆಂಬ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಹಕೀಕತ್ತಿತ್ತು.

ಅಷ್ಟೇ ವಿನಃ ಮತ್ಯಾವ ಅಹಂಕಾರ ಇರಲಿಲ್ಲ ಗಿರಡ್ಡಿ ಸರ. ಏನೇ ಸೆಡಂಗಳಿದ್ದಾಗ್ಯೂ ನಿಮ್ಮ ಬಗ್ಗೆ ನನಗೆ ಅಪರಿಮಿತ ಗೌರವ, ಅಲ್ಲಿನವರು ಕಂಡಾಗಲೆಲ್ಲ ನಿಮ್ಮ ಕ್ಷೇಮಲಾಭ ಕುರಿತು ವಿಚಾರಿಸುತ್ತಿದ್ದೆ, ಇತ್ತೀಚಿಗೆ ಧೂಮ್ರಪಾನ ಬಿಟ್ಟಿರುವಿರಿ ಎಂಬ ಸಂಗತಿ ತಿಳಿದು ಸಮಾಧಾನದ ಉಸಿರು ಚೆಲ್ಲಿದ್ದೆ. ಹ್ಹಾಂ ಅಂದಹಾಗೆ ನಮ್ಮದು ಹೇಳಿಕೇಳಿ ಚಂಪಾರವರ ಘರಾನ, ಹಾಗೆಂದ ಮಾತ್ರಕ್ಕೆ ನೀವು ಹುಬ್ಬೇರಿಸ ಬೇಡಿ. ನಾನು ಹೇಳಿಕೇಳಿ ಕಥೆ ಕಾದಂಬರಿ ಬರಕೊಂಡು ಲೈಫ್‍ನ ಎಂಜಾಯ್ ಮಾಡಿಕೊಂಡಿರೋನು. ನನಗೆ ಎಡಾನು ಬೇಕು ಬಲಾನೂ ಬೇಕು ಸಾರ್. ಅದು ಅಲ್ಲದೆ ನನ್ನ ತಲೆಮಾರಿನ ಸೃಜನಶೀಲ ಮಾಗಾಣಿಗೆ ನೀರು ಗೊಬ್ಬರ ಹಾಕಿದ ಪ್ರಮುಖರಲ್ಲಿ ನೀವು ಸಹ ಒಬ್ಬರು.

ನಿಜ ಹೇಳುವುದಾದರೆ ನನ್ನ ಎಳೆ ಮೀಸೆ ಕಪ್ಪಾಗಲು ಕಾರಣ ನಿಮ್ಮ ಕವಿತೆ ಮಲ್ರಿನ್ ಮನ್ರೊ ಹೆಸರಿನ ಕವಿತೆ. ಆ ಕವಿತೆಯ ಓದಿನ ಪ್ರಭಾವದಿಂದ ಆಕೆಯ ಅಭಿನಯ ನಯಾಗಾರ, ವು ಮ್ಯಾರೀಡ್ ಎ ಮಿಲಿಯನ್, ಬಸ್‍ಸ್ಟಾಪ್ ಮತ್ತಿತರ ಸಿನೆಮಾಗಳನ್ನು ಆಸ್ವಾದಿಸಿರುವೆ, ನನ್ನ ಮಹತ್ವದ ಕೃತಿ ಚಾಪ್ಲಿನ್ ನೀವು ಓದಿ ನಾಲ್ಕಾರು ಸಾಲಿನ ಪತ್ರ ಬರೆದಿದ್ದಿರಿ, ಅದರಲ್ಲಿ ಮೆಚ್ಚುಗೆ ಅಂಶಗಳಿಲ್ಲದೆ ಇರಲಿಲ್ಲ. ಹ್ಹಾಂ ಅಂದ ಹಾಗೆ ಹಿರಿಯರ ಕೃತಿಗಳನ್ನು ಓದಿ ಸಂಭ್ರಮಿಸುವಂತೆಯೆ ಕಿರಿಯರ ಕೃತಿಗಳನ್ನು ಓದುವುದು ಮಾತ್ರವಲ್ಲ, ಅದರ ಕುರಿತು ಆಯಾ ಲೇಖಕರಿಗೆ ಪತ್ರ ಬರೆಯುವಿರಿ, ಈ ಸಂಪ್ರದಾಯ ನನಗೆ ತಿಳಿದಿರುವಂತೆ ದಕ್ಷಿಣಾತ್ಯದಲ್ಲಿ ಹಾಮಾ ನಾಯಕರಿಗೆ ಹಾಗೂ ಉತ್ತರಾತ್ಯದಲ್ಲಿ ನಾಡೋಜ ಚೆನ್ನವೀರ ಕಣವಿ ಹಾಗು ನೀವು. ನಿಮ್ಮ ಕಾರ್ಡುಗಳನ್ನು ಎಲ್ಲೋ ಅಡಗಿಸಿಟ್ಟಿರುವೆ. ಅದಿರಲಿ ನಿಮ್ಮ ಕವಿತೆಯ ಪ್ರಭಾವ ನನ್ನೊಳಗೆ ಗರಿಷ್ಠಮಟ್ಟ ಯಾವ ರೀತಿ ತಲುಪಿರುವುದೆಂದರೆ ಆಕೆಯ ಆತ್ಮಕಥೆ ಬರೆಯಲೆಂದೇ ಹತ್ತಾರು ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟುಕೊಂಡಿರುವೆ.

ಆಕೆಯ ಪತಿ ಅರ್ಥರ್ ಮಿಲ್ಲರ್‍ನ ಪುಸ್ತಕವನ್ನು ಕೇಳಿದೊಡನೆ ಮಿತ್ರ ಮಧುಕೃಷ್ಣಮೂರ್ತಿ ಕ್ಯಾಲಿಫೋರ್ನಿಯಾದಿಂದ ತಂದು ಖುದ್ದ ಕೊಟ್ಟು ಹೋದರು ಎಂದರೆ ನೀವೆ ಲೆಕ್ಕಹಾಕಿರಿ. ಇದೆಲ್ಲ ಇರಲಿ ಸರ, ನಿಮ್ಮ ವಸ್ತ್ರವಿಲಾಸವನ್ನು ಮೂರ್ನಾಲ್ಕು ದಶಕಗಳಿಂದ ಗಮನಿಸುತ್ತಿದ್ದೆ, ಅದೆ ಮಾಸಲು ವರ್ಣದ ಪ್ಯಾಂಟು ಅದೇ ಕೈಮಗ್ಗದ ಜುಬ್ಬ ಬಗಲಲ್ಲಿ ಒಂದು ಚೀಲ, ಮುಖದ ಮೇಲೆ ಎರಡು ಮೂರು ದಿವಸದ ಹರಕುಮುರುಕು ಗಡ್ಡ, ತಿಳಿದಂತೆ ನಾನು ನಿಮ್ಮ ಮಗನ ಮದುವೆ ಅಟೆಂಡಾಗಿದ್ದೆ, ಯಾದಗಿರಿಯಲ್ಲಿ. ಆ ಕಲ್ಯಾಣಮಂಟಪದಲ್ಲೂ ನೀವು ಅವತ್ತು ಶೇವಿಂಗ್ ಮಾಡಿಕೊಂಡಿರಲಿಲ್ಲ. ವರನ ತಂದೆಯಾದವರಿಗೆ ಸ್ವಲ್ಪ ಅಸ್ತೆಟಿಕ್ ಸೆನ್ಸಿದ್ದರೆ ಚೆನ್ನಾಗಿತ್ತು ಎಂದು ಪಕ್ಕದಲ್ಲಿದ್ದ ನಿರ್ಗಮಿತ ಅರ್ಜುನ ಕೊರಟಕರ್ ಕಿವಿಯಲ್ಲಿ ಪಿಸುಗುಟ್ಟಿದ್ದೆ. ಇದರಿಂದ ನನಗೆ ತಿಳಿದ್ದದ್ದೆಂದರೆ ನಿಮ್ಮನ್ನು ನೀವು ಯಾವತ್ತೂ ಸಂಭ್ರಮಿಸಿಕೊಂಡವರಲ್ಲ. ಸೌಂದರ್ಯಪ್ರಸಾದನಗಳು ಒತ್ತಟ್ಟಿಗಿರಲಿ ಕನಿಷ್ಟಪಕ್ಷ ಕನ್ನಡಿಯಲ್ಲೂ ನೀವು ನಿಮ್ಮ ಪ್ರತಿಬಿಂಬ ನೋಡಿಕೊಂಡವರಲ್ಲ. ಇಂಥ ಜಾಯಮಾನದವರು ಹೆಚ್ಚುವರಿ ಜ್ಞಾನಾರ್ಜನೆಗೆ ವ್ಯಾಸಂಗಕ್ಕೇಂತ ಲೀಡ್ಸೂ ಮ್ಯಾಂಚೆಸ್ಟರ್ರೂಗಳಂಥ ಹೊರದೇಶಗಳಿಗೆ ಹೋಗಿದ್ದಿರಲ್ಲವೆ! ಅಲ್ಲೂ ಹೀಗೆ ವರ್ತಿಸುತ್ತಿದ್ದಿರಾ ಹೇಗೆ ಸಾರ್?

ಆದರೆ ನಿಮ್ಮ ಮನೆ ತೆರೆದಿದ್ದುದನ್ನು ನೀವು ಎದ್ದಿರುವುದನ್ನು ನೀವು ಎದ್ದು ವಾಕಿಂಗ್ ಮಾಡುತ್ತಿದ್ದುದನ್ನು, ಕನಿಷ್ಟಪಕ್ಷ ಯಾವುದಾದರೊಂದು ನಾಯಿ ನಿಮ್ಮ ಮನೆ ಪ್ರಹರಿಗೋಡೆಯೊಳಗೆ ಬೊಗಳಿ ಎಚ್ಚರಿಸುವುದನ್ನು ನಾನು ಇದುವರೆಗೆ ನೋಡಿಯೆ ಇಲ್ಲ ಗಿರಡ್ಡಿ ಸರ. ಈ ಕುರಿತು ನಾನು ನಿಮಗೆ ಸಲಹೆ ನೀಡಿರುವುದುಂಟು, ಅದನ್ನು ನನ್ನನ್ನೆಷ್ಟೆತ್ತರದ ನೀವು ಮುಗುಳ್ನಕ್ಕು ಅಲಕ್ಷಿಸಿರುವುದುಂಟು. ಸ್ವಲ್ಪ ಎಚ್ಚರವಹಿಸಿದ್ದರೆ!

ಅಯ್ಯೋ ಇನ್ನೊಂದು ವಿಷಯ ಸರ, ಅದೆಂದರೆ ಧಾರವಾಡದಲ್ಲಿನ ನನ್ನ ಬೆಳಗಿನ ವಾಯುವಿಹಾರಕ್ಕೆ ಸಂಬಂದಿಸಿದ್ದು. ಯಾವುದೆ ಶಹರಕ್ಕೆ ಹೋಗಲಿ ವಾಕಿಂಗ್ ನೆಪದಲ್ಲಿ ಅಲ್ಲಿನ ಗಲ್ಲಿಗಲ್ಲಿಗಳಲ್ಲಿರಬಹುದಾದ ಲೇಖಕರ ಮನೆಗಳ ಅಂಗಳಗಳಲ್ಲಿನ ರಂಗವಲ್ಲಿಗಳ ದರ್ಶನ ಪಡೆಯುವುದು, ಅವರೇನಾದರೂ ಕಂಡರೆಂದರೆ ಮಾತಾಡಿಸುವುದು, ಮಾತಾಡಿಸಿದ ತಪ್ಪಿಗೆ ಅವರ ಮನೆಗಳಲ್ಲಿ ಚಹದಂಥ ಕಪ್ಪಕಾಣಿಕೆ ಸ್ವೀಕರಿಸುವುದು ನನ್ನ ಅಭ್ಯಾಸಗಳಲ್ಲಿ ಒಂದು. ಧಾರವಾಡಕ್ಕೆ ಬಂದೆನೆಂದರೆ ಈ ಕಡೆಯಿಂದ ಅಂದರೆ ಆಕಾಶವಾಣಿ ಸಪ್ತಾಪೂರದೆಸೆಯಿಂದ ಹೊರಟು ಪಾವಟೆ ಸರ್ಕಲ್ ಬಳಿ ಒಂದು ಕಪ್ಪು ಚಹಾ ಸೇವನೆ ಮಾಡೋದು, ಅಲ್ಲಿಂದ ಅಜರಾಮರ ವಿಶ್ವವಿದ್ಯಾಲಯ ಪ್ರವೇಶಿಸುವುದು, ಎಷ್ಟು ಪ್ರಯತ್ನಿಸಿದರೂ ಅಲ್ಲೆಲ್ಲ ಲೇಖಕರು ಕಾಣಿಸಿಕೊಳ್ಳುವುದು ದುರ್ಲಭ. ಅಲ್ಲಿ ಕಾಲು ಕೈ ಮಿಸುಕಾಡಿಸಿ ಕಾಲು ಕೈಗಳ ಕೀಲುಗಳನ್ನು ಸೈಲ ಮಾಡಿಕೊಳ್ಳುವುದು. ಉಲ್ಲಸಿತನಾದ ಬಳಿಕ ಪ್ರಸಾರಾಂಗದ ಕಡೆಯಿಂದ ನಿರ್ಮಲ ನಗರವನ್ನೋ ಕಲ್ಯಾಣನಗರವನ್ನೋ ಪ್ರವೇಶಿಸುವುದು. ಒಂದು ವಿಚಿತ್ರವೆಂದರೆ ಎಲ್ಲರ ಮನೆಗಳ ಬಾಗಿಲುಗಳು ಹದಿನೈದು ಡಿಗಿರಿ ಕೋನದಲ್ಲಿ ತೆರೆದಿರುತ್ತವೆ, ಎಲ್ಲರು ಎದ್ದಿರುತ್ತಾರೆ ಆಮೆಯಂತೆ ವಾಕಿಂಗ್ ಮಾಡುತ್ತಿರುತ್ತಾರೆ.

ನಿಟ್ಟೂರು ಶ್ರೀನಿವಾಸರಾಯರ ಮೂರ್ತಿರಾಯರ ಸಿದ್ಧಗಂಗಾ ಸ್ವಾಮೀಜಿಗಳ ಥರಾ ನೂರು ವರ್ಷ ನೀವು ಹಲ್ಲುಕಚ್ಚಿ ಬದುಕಬೇಕೆಂಬ ಇರಾದೆ ನಮ್ಮದಾಗಿರಲಿಲ್ಲ ಸರ, ನಾನ್ ಡಿಪೆಂಡಬಲ್ಲಾಗಿ ಇನ್ನೂ ಕೆಲವು ವರ್ಷ ನೀವು ಅದೆ ಸರೋಜದಲ್ಲಿ ಜೀವಿಸಿರಬೇಕೆಂದು ನಾವೆಲ್ಲ ನಿರೀಕ್ಷಿಸಿದ್ದೆವು. ಆದರೆ ನೀವು ಅಚಾನಕ್ಕಾಗಿ ನಿರ್ಗಮಿಸಬಹುದೆಂದು ನಾವ್ಯಾರು ಕನಸುಮನಸಲ್ಲೂ ಊಹಿಸಿರಲಿಲ್ಲ. ಎಡಬಲ ಸಾಹಿತ್ಯ ಸಂಭ್ರಮಗಳಂಥ ಚರ್ಚೆಗಳನ್ನು ದೂರದ ಸೃಜನಶೀಲ ಮನಸ್ಸುಗಳನ್ನು ನೀವು ತನ್ಮೂಲಕ ಕಕ್ಕಾವಿಕ್ಕಿಗೊಳಿಸಬಹುದೆಂದು ಕಲ್ಪಿಸಿರಲಿಲ್ಲ.

ಆದರೆ ಹಿಂದಿನ ದಿವಸದವರೆಗೆ ನೀವು ಮರಳದ ಊರಿಗೆ ಟಿಕೆಟ್ ಖರೀದಿಸಿದ ಸುಳಿವು ನಿಮ್ಮ ವೆರ್ರಿ ನಿಯರೆಸ್ಟ್ ಗೆಳೆಯರಾ ಸಮೀರ್ ಜೋಷಿ, ಮಲ್ಲಿಕಾರ್ಜುನ ಹಿರೇಮಠ (ನೀವು ಶತಾಯುಷಿಗಳೆಂದೆ ನಂಬಿ ಇವರು ಹುನಗುಂದದಿಂದ ಧಾರವಾಡಕ್ಕೆ ವಲಸೆ ಬಂದದ್ದು, ಈಗ ಇವರೆಲ್ಲಿಗೆ ಹೋಗುವುದು ಹೇಳಿರಿ ಸರ) ಕನಿಷ್ಟಪಕ್ಷ ಇವರಲ್ಲಿ ಒಬ್ಬರಿಗಾದರು ನಿಮ್ಮ ಟಿಕೆಟ್ಟು ತೋರಿಸಬಹುದಿತ್ತಲ್ಲೆ! ಹೋಗಲಿ ನಿಮ್ಮ ಕುಟುಂಬ ಸದಸ್ಯರಿಗಾದರು ನಿಮ್ಮ ಅಲೌಕಿಕ ಸಾಮಾನು ಸರಂಜಾಮು ತೋರಿಸಬಹುದಿತ್ತಲ್ಲವೆ! ನಮ್ಮಂಥ ಉಪದ್ರವಿ ಲೇಖಕರ ಕನಸಲ್ಲಾದರು ಗೋಚರಿಸಿ ನಿಮ್ಮ ಭೌತಿಕಕಾಯದ ಅಚಿತಿಮ ದರ್ಶನ ಪಡೆಯುವ ಅವಕಾಶ ಕರುಣಿಸಬಹುದಿತ್ತಲ್ಲವೆ!

ಹ್ಹೂಹ್ಹು ಇದಾವುದೂ ಈಡೇರಿಸದೆ ನಿರ್ಗಮಿಸಿದ ನಿಮ್ಮನ್ನು ಹೇಗೆ ಕ್ಷಮಿಸುವುದು ಗಿರಡ್ಡಿ ಸರ! ಧಾರವಾಡದ ಸಾಹಿತಿಗಳೆಂದರೆ ಬಿದ್ದು ಸಾಯುವ ನನ್ನ ಮನಸ್ಸಿಗೆ ನಿಮ್ಮ ನಿರ್ಗಮನದಿಂದ ಅಪಾರ ಹಾನಿಯಾಗಿದೆ ಸರ, ಬಿಟ್ಟಿದ್ದ ಛಾಳಿ ಠೂ ಅನ್ನು ಉಪಸಂಹರಿಸಿಕೊಂಡಿದ್ದರೆ ಈ ತಾಪತ್ರಯವಿರುತ್ತಿರಲಿಲ್ಲ, ನಮ್ಮಿಬ್ಬರ ಮುಲಾಕಾಟಿಗೆ ಸಂಬಂಧಿಸಿದಂತೆ ಇನ್ನೊಂದು ಅವಕಾಶ ಕೂಡಿಬರಲಿಲ್ಲ. ಈ ಸೆಡಮ್ಮಿಗೆ ಕಾರಣಗಳು ನಿಮ್ಮ ಮಾನಸ ಸರೋವರದಲ್ಲಿದ್ದವೋ ಇಲ್ಲವೋ ತಿಳಿಯದು, ಆದರೆ ನನ್ನ ಮನಸ್ಸೆಂಬ ವೈಶಂಪಾಯನದಲ್ಲಿ ಸೆಡಮ್ಮಿಗೆ ಕಾರಣಗಳು ಲವಲೇಶವಿರಲಿಲ್ಲ ಸರ.

ಆ ದಿವಸ ಬೆಳೆಗ್ಗೆ (ಅವರಂಥವರು ಇವರಂಥವರು ನಿರ್ಗಮನಕ್ಕೆ ಪ್ರಶಸ್ತ ವೇಳೆ ಎಂದರೆ ಬ್ರಾಹ್ಮೀಮುಹೂರ್ತ, ಕಲಬುರ್ಗಿ ಸಾರ್, ಗೌರಿ, ಪಾನ್ಸರೆ, ದಾಬೋಲ್ಕರ್ ರಂಥವರ ಎದೆಗಳಿಗೆ ಗುಂಡಿಟ್ಟ ಗೂಂಡಾಗಳು ಆಯ್ಕೆ ಮಾಡಿಕೊಂಡ ಸಮಯ ಇದೆ ಸಂದ್ಯಾ ಸಮಯ) ಎಲ್ಲೋ ಇದ್ದ ನನಗೆ ಎಲ್ಲಿಂದಲೋ ಯಾರೋ ಫೋನ್ ಮಾಡಿ ನಿಮ್ಮ ನಿರ್ಗಮನದ ಸಂಗತಿ ತಿಳಿಸಿದರು, ಮೊದಲಿಗೆ ನಂಬಲಿಕ್ಕಾಗಲಿಲ್ಲ, ಕ್ರಾಸ್ ಚೆಕ್ಕು ಮಾಡಿದ ಬಳಿಕ ಕನ್‍ಫರ್ಮಾಯಿತು. ಕಣ್ಣಲ್ಲಿ ಅವತರಿಸಿದ ಬಾಷ್ಪ ರೆಪ್ಪೆ ಬಳಿ ನಿಂತಿತು. ಕೈಯಲ್ಲಿದ್ದ ಉಪಹಾರದ ತುತ್ತು ತನಗರಿವಿಲ್ಲದಂತೆ ತಟ್ಟೆಗೆ ಮರಳಿತು, ಇದ್ದಕ್ಕಿದ್ದಂತೆ ಹೊರಟ ಪಕ್ಷದಲ್ಲಿ ಧಾರವಾಡಕ್ಕೆ ರೈಟ್ ಟೈಮಿಗೆ ತಲುಪಬಹುದೆ! ಆಗ್ಗೆ ಕೆಲ ಹೊತ್ತಿನಿಂದ ಆಕಾಶದಿಂದ ಹನಿ ಉದುರಲಾರಂಭಿಸಿತ್ತು ಸಹಸ್ರಾರು ಕಣ್ಣುಗಳಿಗೆ ಪರ್ಯಾಯವಾಗಿ. ಅಲ್ಲಿನ ಹಲವು ಗೆಳೆಯರಿಗೆ ಮಣ್ಣು ಎಲ್ಲಿ ಎಂಬ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. ಕೆಲವರು ಇಲ್ಲಿ ಎಂದರೆ ಇನ್ನು ಕೆಲವರು ಅಬ್ಬಿಗೆರೆಯಲ್ಲಿ ಎಂದರು.

ಅವರು ಪ್ರತಿಮಾತಿಗೆ ಮಣ್ಣು ಕೊಡುವುದು ಎಂದು ಹೇಳುತ್ತಿದ್ದುದು ಧ್ವನಿಪೂರ್ಣವಾಗಿತ್ತು. ಆ ಕ್ಷಣ ಆ ಹೆಸರಿನ ನಿಮ್ಮ ಕಥೆ ನೆನಪಾಯಿತು, ಹ್ಹಾಹ್ಹಾ ಎಂಥ ಒಳ್ಳೆಯ ಕಥೆ! ಮನಸ್ಸು ಉದ್ಗರಿಸಿತು.

ಆ ದಿವಸ ಮಧ್ಯಾಹ್ನದವರೆಗೆ ಕವಿದಿದ್ದ ಮಂಕು ಸಂಜೆವೇಳೆಗೆ ಇಳಿಯಿತು. ಹ್ಹಾಂ ಅಂದ ಹಾಗೆ ನೀವು ಪವಡಿಸಿರುವ ಹಂಸತೂಲಿಕಾತಲ್ಪವಿರುವ ಅಬ್ಬಿಗೆರೆಗೆ ಹೋಗಲೆಂದೆ ಕಳೆದ ತಿಂಗಳು ಹೊಳೆ ಆಲೂರಿನ ಕಾರ್ಯಕ್ರಮಕ್ಕೆ ಒಪ್ಪಿಕೊಂಡೆ. ಅಬ್ಬಿಗೆರೆ ಆನ್ ದಿ ವೇ ಬಂತು. ಕೇಳಿದ್ದಕ್ಕೆ ರಸ್ತೆ ಬಲಪಕ್ಕ ಮ್ಲಾನವದನರಾಗಿ ಕುಳಿತಿದ್ದ ಹಿರಿಯರೀರ್ವರು ನಮ್ಮ ಗಿರಡ್ಡಿ ಗೌಡರೇನ್ರಿ ಎಂದು ವಿಶೇಷಣ ಪರಿಚಯಿಸಿದರು. ಕೊನೆಗೂ ನೀವಿದ್ದ!

ಗಿರಡ್ಡಿ ಸರ ನೀವಲ್ಲೆ ಇರ್ರಿ, ಅಲ್ಲೂ ಸಾಹಿತ್ಯ ಸಂಭ್ರಮಕ್ಕೆ ಚಾಲನೆ ಆರಂಭಿಸಿರಿ, ಹೇಗೋ ಅಲ್ಲಿ ಯಶವಂತ ಚಿತ್ತಾಲ ಲಂಕೇಶ ತೇಜಸ್ವಿ ಮೊದಲಾದ ಎಡಬಲ ಪಂಥೀಯರಿದ್ದಾರೆ. ನಾವೆಲ್ಲ ಮುಂದೆ ನಿಮ್ಮ ಕರೆಗೆ ಓಗೊಡುವೆವು. ಇನ್ನು ಅಲ್ವಿದಾ!

1 comment

  1. ಆಪ್ತ ಬರಹ. ಗಿರಡ್ಡಿ ಗೋವಿಂದರಾಜರನ್ನು ನೆನಪಿಸಿಕೊಂಡು ಬರೆದ ರೀತಿ ಮನಸ್ಸಿಗೆ ಸಮಾಧಾನ ನೀಡಿತು.

Leave a Reply