ಇವರು ಶೂದ್ರ ಶ್ರೀನಿವಾಸ್..

 ವಿಜಯೇಂದ್ರ 

ಸೆಂಟ್ರಲ್ ಕಾಲೇಜಿನ ಸಾಮಿಪ್ಯ ನನಗೆ ಅಸಂಖ್ಯಾತ ಗೆಳೆಯರನ್ನು ಗಳಿಸಿಕೊಟ್ಟಿತ್ತು. ನನ್ನ ಎಲ್ಲಾ ಚಟುವಟಿಕೆಗಳಿಗೆ ಬ್ಯಾಟರಾಯನಪುರ ದೂರವೆನಿಸಿದಾಗ, ಗೆಳೆಯ ಸತ್ಯೇಂದ್ರನಿಗೆ ನಿಲ್ಲಲು ನೆಲೆ ಇಲ್ಲದ ಕಾರಣ ಕಬ್ಬನ್ ಪೇಟೆಯಲ್ಲಿ ಸಣ್ಣದೊಂದು ಕೊಠಡಿ ಬಾಡಿಗೆಗೆ ಪಡೆದಿದ್ದೆ. ಸಂಜೆಯಾಗುತ್ತಿದ್ದಂತೆ ಬೇರೆಲ್ಲೂ ಕಾರ್ಯಕ್ರಮವಿಲ್ಲದಿದ್ದಲ್ಲಿ ರೂಮೇ ನಮ್ಮ ಅಡ್ಡಾ. ನಾಗರಾಜ ಶೆಟ್ಟಿ, ಅಂಜನ್, ಬಾಲರಾಜ್, ಬಾನಂದೂರು ಕೆಂಪಯ್ಯ ಇತ್ಯಾದಿ ಒಮ್ಮೊಮ್ಮೆ ಅದೇ ತಂಗುದಾಣ.. ದೂರದೂರುಗಳಿಂದ ಬಂದ ಗೆಳೆಯರ ವಾಸ್ತವ್ಯ ಅಲ್ಲಿಯೇ. ಮೊದಲನೆ ಮಹಡಿಯಲ್ಲಿ ವಿಶಾಲ ಮಾಳಿಗೆ ಮದ್ಯೆ ಇದ್ದ ರೂಮ್ ನೋಡಿದ ಕೂಡ್ಲೆ ಎಲ್ಲರಿಗೂ ಇಷ್ಟವಾಗಿಬಿಡುತಿತ್ತು.

ಬಂಡಿ ಶೇಷಮ್ಮ ಹಾಸ್ಟೆಲ್ ನಲ್ಲಿದ್ದ ಡಿಅರ್ ನಾಗರಾಜ ನಮ್ಮ ಜೊತೆ ಸೇರಿಕೊಳ್ಲಲು ತಡವಾಗಲಿಲ್ಲ. ನಾನು ಆವೇಳೆಗಾಗಲೆ ಮಾರ್ಕಿಸಮ್ ಕುರಿತು ಗಂಭೀರ ಅಧ್ಯಯನ ನಡೆಸಿದ್ದೆ. .ಜಿ.ರಾಮ ಕೃಷ್ಣ ಅವರೇ ನನ್ನ ಮಾರ್ಕ್ಸಿಸಮ್ ಗುರುಗಳಾಗಿದ್ದರಿಂದ ಯಾವ ಪುಸ್ತಕ ಓದಬೇಕೆಂದು ಅವರೇ ಸಲಹೆ ಮಾಡಿ ಪುಸ್ತಕ ಕೊಡುತಿದ್ದರಿಂದ ನನ್ನ ಬಳಿ ಇರುತಿದ್ದ ಪುಸ್ತಕಗಳೂ ಡಿಅರ್ ಗೆ ನನ್ನ ಸಹವಾಸ ಬಯಸಲು ಕಾರಣವಾಗಿತ್ತು. ಪುಸ್ತಕ ಓದಿ ಓದಿ ಡಿಅರ್ ಹಲವಾರು ಕೋಟ್ಗಳನ್ನು ಉದ್ದರಿಸಿ ನಮ್ಮನ್ನು ಬೆರಗುಗೊಳಿಸುತಿದ್ದ. ಮಾರ್ಕ್ಸ್ ಹೇಳಿದ್ದು ಹೀಗೆ. ಇದು ಎಂಜೆಲ್ಸ್ನ ಅಭಿಪ್ರಾಯ ಎಂದು ಹೇಳುತಿದ್ದರೆ ನಾವು ನಿಬ್ಬೆರಗಾಗಿ ನಿಲ್ಲುತಿದ್ದೆವು. ನಾನು ಆ ಪುಸ್ತಕ ಮೊದಲೇ ಓದಿದ್ದರೂ ನನಗೆ ಹೀಗೆ ಕೋಟ್ ಮಾಡಲು ಸಾದ್ಯವಾಗುತಿರಲಿಲ್ಲ. ಎಷ್ಟೋಬಾರಿ ಇವನು ಯಾವುದೋ ಹೊಸಪುಸ್ತಕದಿಂದ ಕೋಟ್ ಮಾಡ್ತಾ ಇದ್ದನಾ ಅಂತ ಗಲಿಬಿಲಿ ಯಾಗುತಿತ್ತು.[ಇದೇ ಪ್ರವ್ರತ್ತಿಯನ್ನು ಮತ್ತೂ ಮುಂದುವರಿಸಿ ಡಿಅರ್ ಸಾಹಿತ್ಯಲೋಕದಲ್ಲಿ “ ಕೋಟ್ ನಾಗರಾಜ “ರೆಂದೇ ಹೆಸರಾದ. ಸಭೆ ಸಮಾರಂಭಗಳಲ್ಲಿ ನಮಗೆ ಹೆಸರೇ ಗೊತ್ತಿಲ್ಲದ ಯಾವುದೋ ಸಾಹಿತಿಯ ಹೆಸರೇಳಿ ಅವನ ಹೇಳಿಕೆ ಕೋಟ್ ಮಾಡಿ ಸಭಿಕರನ್ನು ಬೆಚ್ಚಿಬೀಳಿಸುತಿದ್ದ.] ಮುತ್ತಾನಲ್ಲೂರು ಶ್ರೀನಿವಾಸ ರೆಡ್ಡಿ ಯಾನೆ ಶೂದ್ರ ಶ್ರೀನಿವಾಸ ಯಾನೆ ಶೂದ್ರ ಆ ಕಾಲಕ್ಕಾಗಲೇ ಸಾಹಿತ್ಯಿಕ ವಲಯಗಳಲ್ಲಿ ಚಿರಪರಿಚಿತನಿದ್ದ.

ಶೂದ್ರ ಪತ್ರಿಕೆಯನ್ನು ಸಂಪಾದಿಸುತ್ತಾ ಸಭೆ ಸಮಾರಂಭಗಳಲ್ಲಿ ಎದುರು ಸಿಕ್ಕಾಗ ಹಲೋ ಹೇಗಿದ್ದಿರಿ? ಹೊಸಾ ಇಷ್ಯೂ ಬಂದಿದೆ. ಎಂದು ಜೋಳಿಗೆಯಿಂದ ಪ್ರತಿ ಎತ್ತಿಕೊಡುತಿದ್ದ. ನೀವು ಚಂದಾ ಕೊಡುತಿಲ್ಲ. ಕೊಡಿ ಎಂದು ದುಂಬಾಲು ಬೀಳುತ್ತಿದ್ದ.ನೀವು ಕಳೆದ ವಾರವಷ್ಟೇ ಮತ್ತೊಂದು ಸಮಾರಂಭದಲ್ಲಿ ಚಂದಾ ಕೊಟ್ಟಿರುತ್ತಿರಿ ಅದರ ನೆನಪು ಅವನಿಗೆ ಇರುತಿರಲಿಲ್ಲ. ಅವನು ಸಂಪಾದಕನಾದರೂ ನಾಲ್ಕಾರು ಜನರನ್ನು ಉಪಸಂಪಾದಕರೆಂದು ಪತ್ರಿಕೆಯಲ್ಲಿ ಹಾಕಿಕೊಳ್ಲುತಿದ್ದ ಆಗ ಸ್ವಲ್ಪ ಮಟ್ಟಿಗೆ ಸದ್ದು ಮಾಡುತಿದ್ದ ಸಮಾಜವಾದಿ ಯುವಜನ ಸಭ ದಲ್ಲಿ ಸಕ್ರಿಯವಾಗಿದ್ದ ಶೂದ್ರ ಇತರೆ ಬಣಗಳಲ್ಲೂ ಅಷ್ಠೇ ಜನಪ್ರಿಯನಾಗಿದ್ದ. ಎಲ್ಲ ಬಗೆಯ ಚಟುವಟಿಕೆಗಳ ನಡುವೆ ಸಂಪರ್ಕಸೇತುವಂತಿದ್ದ.

ಹಳ್ಳಿಗ ಸ್ವಭಾವತಃ ಭೋಳೇಸ್ವಬಾವದವನಿದ್ದ. ಒಂದು ರೀತಿಯಲ್ಲಿ ಬ್ಲಾಟಿಂಗ್ ಪೇಪರ್ ಇನ್ನುತ್ತಾರಲ್ಲ ಹಾಗೆ. ಇವನನ್ನು ಇಂಪ್ರೆಸ್ ಮಾಡುವುದು ಅತಿ ಸುಲಭವಾಗಿತ್ತು. ಸ್ವಯಂ ಅವನೇ ಸುಲಭವಾಗಿ ಇಂಪ್ರೆಸ್ ಆಗಿಬಿಒಡುತಿದ್ದ. ಲಂಕೇಶರ ಬಳಿ ಅರ್ಧಘಂಟೆ ಕೂತುಬಂದರೆ ಅವರದೇ ಶೈಲಿಯಲ್ಲಿ ನಮ್ಮೊಂದಿಗೆ ಮಾತನಾಡುತಿದ್ದರೆ ಲಂಕೇಶ್ ನಮ್ಮೆದುರು ಇದ್ದು ಮಾತನಾಡುತಿದ್ದಾರೆನೋ ಅನಿಸುತ್ತಿತ್ತು ಶೂದ್ರನ ಭೊಳೆತನ ನಮ್ಮೆಲ್ಲರ ಹಾಸ್ಯದ ವಸ್ತುವಾಗಿತ್ತು. ವಿಶೇಷವಾಗಿ ಡಿಅರ್ಎನ್ ನಾನು ಸಿದ್ದಲಿಂಗಯ್ಯಮತ್ತು ಕೀರಂ- ಕೆಲವೊಮ್ಮೆ ಶೂದ್ರನ ಈ ಸ್ಥಿತಿಯ ದುರುಪಯೋಗ ಪಡೆಯುತ್ತಿದ್ದೆವು. ಅವನಷ್ಟೇ ಸೀರಿಯಸ್ಸಾಗಿ ಯಾವುದೋ ಒಂದು ಗಾಸಿಪ್ ಅನ್ನು ಸತ್ಯಸಂಗತಿ ಎಂಬಂತೆ ಪ್ಲಾಂಟ್ ಮಾಡುತಿದ್ದೆವು. ಅವನೂ ಅಷ್ಟೇ ಸಿರಿಯಸ್ಸಾಗಿ ನಾವು ಯಾರನ್ನು ಉದ್ದೇಶಿಸಿ ಹೇಳಿದ್ದೆವೋ ಅವರಿಗೇ ಹೋಗಿ ಹೇಳಿ ಬೈಗುಳ ತಿನ್ನುತಿದ್ದ.

ನನ್ನ ಪರಿಚಯವಾದಮೇಲೆ ಶೂದ್ರ ಎಲ್ಲಾ ಉಪಸಂಪಾದಕರನ್ನು ಕಿತ್ತುಹಾಕಿ ನನ್ನನ್ನು ಉಪಸಂಪಾದಕನೆಂದು ನೇಮಿಸಿ ಪತ್ರಿಕೆಯಲ್ಲಿ ನನ್ನ ಹೆಸರು ಪ್ರಕಟಿಸಲಾರಂಭಿಸಿದ. ಸಂಚಿಕೆಗೆ ಬೇಕಾದ ಮೂರುಮುಕ್ಕಾಲು ಲೇಖನಗಳನ್ನು ಬರೆದುಕೊಡಲು ಸಾಕಷ್ಟು ಲೇಖಕರಿದ್ದರು. ಆದರೆ ಉಪಸಂಪಾದಕನೆಂದು ಹೆಸರು ಹಾಕಿಕೊಂಡ ಮೇಲೆ ಎನಾದರೂ ಕೆಲಸಮಾಡಬೇಕಲ್ಲ.
ಮೊದಲೇ ಹೇಳಿದಂತೆ ಶೂದ್ರ ಶ್ರೀನಿವಾಸನ ಮರ್ಜಿಯಲ್ಲಿ ಬರುತಿದ್ದ ಪತ್ರಿಕೆಯಾಗಿತ್ತು. ಸಾಹಿತ್ಯಿಕ ಮಾಸಪತ್ರಿಕೆ ಎಂದು ಹಾಕಿಕೊಂಡರೂ ಮೊದಲಿಗೆ ಅದು ನೋಂದಣಿಯೂ ಆಗಿರಲಿಲ್ಲ. ಶೂದ್ರನೇ ಪತ್ರಿಕೆಯ ಮೊಬೈಲ್ ಆಫೀಸ್ ಆಗಿದ್ದ. ಅವನ ಜೋಳಿಗೆಯಂತಿದ್ದ ಬ್ಯಾಗೇ ಆಫೀಸ್. ಇಷ್ಟ ಬಂದ ಕಡೆ ಮುದ್ರಿಸುತಿದ್ದರಿಂದ ಇಂಥವನೇ ಮುದ್ರಕ ರೆಂದು ಹೇಳುವಂತಿರಲಿಲ್ಲ. ಜಾಹಿರಾತು ಸ್ಥಿತಿಯು ಅದೇ ಆಗಿತ್ತು.

ಮೊದಲಿಗೆ ಶೂದ್ರ ಹೆಸರನ್ನು ದಾಖಲಿಸುವ ಕೆಲಸ. ದೆಹಲಿಯ ಪತ್ರಿಕಾ ನೊಂದಣಿ ಕಚೇರಿಯೊಂದಿಗ ಪತ್ರ ವ್ಯವಹಾರ ನಡೆಸಿ ನೊಂದಣಿ ಮಾಡಿಸಿದೆವು. ಪತ್ರಿಕೆಗೆ ಯಾರ್ಯಾರು ಚಂದಾದಾರರು ಎಂಬ ಮಾಹಿತಿ ಶೂದ್ರನ ತಲೆಯಲ್ಲಿ ಬಿಟ್ಟರೆ ಬೇರೆಲ್ಲು ಸಿಗುತಿರಲಿಲ್ಲ. ಶೂದ್ರನ ಬಿಡುವಿಲ್ಲದ ಚಟುವಟಿಕೆಗಳ ಮದ್ಯೆ ಅವನಿಗೆ ದುಂಬಾಲು ಬಿದ್ದು ಚಂದಾದಾರರ ಯಾದಿಯನ್ನು ತಯಾರುಮಾಡಿದೆ. ಯಾರ ಚಂದಾ ಮುಗಿದಿದೆ? ಯಾರದು ಯಾವಾಗ ಮುಗಿಯಲಿದೆ ಎಂಬ ಯಾದಿ ತಯಾರು ಮಾಡಿದೆ. ಚಂದಾ ಕೊಡದೆ ಬಿಟ್ಟಿ ಪ್ರತಿ ಪಡೆಯುತಿದ್ದ ಮಿತ್ರರಿಗೆ ನೆನಪೋಲೆ ಸಿದ್ದಮಾಡುತಿದ್ದೆ. ಕರಡು ಮುದ್ರಣದಲ್ಲಿರುತಿದ್ದ ವ್ಯಾಕರಣ ದೋಷಗಳನ್ನು ತಿದ್ದಿ ಪೈನ್ ಪ್ರಿಂಟ್ ಹೊರಬರುವಂತೆ ಪ್ರಯತ್ನಿಸಿದೆ. ಹೆಸರಿಗೆ ಮಾತ್ರ ಮಾಸಿಕ ಎಂದಿದ್ದರೂ ನಿಯಮಿತವಾಗಿ ತರದೆ ಎರಡು ಮೂರು ಸಂಚಿಕೆಗಳನ್ನು ಕಂಬೈನ್ಡ್ ಮಾಡಿ ವಿಶೇಷ ಸಂಚಿಕೆ ತರುವುದು ಶೂದ್ರನ ಸ್ಪೆಷಾಲಿಟಿಯಾಗಿತ್ತು. ಇದನ್ನು ತಪ್ಪಿಸಿ ನಿಯಮಿತವಾಗಿ ಪತ್ರಿಕೆ ಹೊರಬರುವಂತೆ ಮಾಡುವುದು ಜೊತೆಗೆ ಚಂದಾದಾರರಿಗೆ ಪತ್ರಿಕೆ ಅಂಚೆಯ ಮೂಲಕ ಸಿಗುವಂತೆ ಮಾಡಲು ಪೋಸ್ಟಲ್ ಡಿಪಾರ್ಟ್ಮೆಂಟನಿಂದ ಪ್ರತಿ ತಿಂಗಳ ಒಂದು ನಿರ್ಧಿಷ್ಠ ದಿನದಂದು ಸ್ಟಾಂಪ್ ಹಚ್ಚದೆ ಪೋಸ್ಟ್ ಮಾಡುವ ಸನ್ನದು ಗಿಟ್ಟಿಸಿಕೊಂಡೆವು.

ಪುಡಿಗಾಸಿನ ಪ್ರತಿಕೆಗಳೆಲ್ಲ ಸರಕಾರಿ ಜಾಹಿರಾತು ಪಡೆದುಕೊಂಡರೂ ನಮ್ಮಂತಹ ಸಾಹಿತ್ಯಿಕ ಪತ್ರಿಕೆಗಳಿಗೆ ಮಾತ್ರ ಯಾವುದೇ ಪ್ರೋತ್ಸಾಹ ಸಿಗುತಿಲ್ಲ ವೆಂದಾಗ ನಾವದನ್ನು ಪ್ರತಿಭಟಿಸಬೇಕೆನ್ನಿಸಿತು. ಆಗ ಧಾರವಾಡದಿಂದ ಚಂಪಾ/ಗಿರಡ್ಡಿ/ಕುರ್ತಕೋಟಿ ಅವರ ಸಂಕ್ರಮಣ, ಹುಬ್ಬಳ್ಳಿಯಿಂದ ರಾಜಶೇಖರ ಕೋಟಿ ಅವರ “ಆಂದೋಳನ”, ಗೋವಿಂದಯ್ಯ ಮೈಸೂರಿನಿಂದ “ಪಂಚಮ”,ಚಿತ್ರದುರ್ಗದಿಂದ ಮಂಗ್ಳೂರ ವಿಜಯನ “ಬದುಕು” ಈ ತೆರನ ಪತ್ರಿಕೆಗಳಾಗಿದ್ದವು. ಇವರೆಲ್ಲರನ್ನು ಒಗ್ಗೂಡಿಸಿ ವಾರ್ತಾ ಇಲಾಖೆಗೆ ಜಂಟಿ ಮನವಿ ಸಲ್ಲಿಸಿದೆವು. ಮುಂದೆ ವಾರ್ತಾಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಯಮ್.ಆರ್.ಶ್ರೀನಿವಾಸಮೂರ್ತಿ ಕೂಡ ಆಗ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಪತ್ರಿಕೆಯೊಂದನ್ನು ನಡೆಸುತಿದ್ದರು.ಜಾಹಿರಾತಿಗಾಗಿ ಅವರೂ ನಮ್ಮತರಃ ಪರದಾಡುತಿದ್ದರು.

ಈ ಎಲ್ಲಾ ನನ್ನ ಚಟುವಟಿಕೆಗಳೂ ನನಗೆ “ಉಪಶೂದ್ರ” ನೆಂಬ ನಿಕ್ ನೇಮ್ ಗಳಿಸಿಕೊಟ್ಟಿತು. ಆ ವೇಳೆಗಾಗಲೇ ಗೆಳೆಯರಾಗಿ ಬಿಟ್ಟಿದ್ದ ಯಗಟಿ, ಮಹಾದೇವಪ್ಪ, ಶಿವಾಜಿ, ರಾಜಶೇಖರ್, ಮುಂತಾದ ಪತ್ರಕರ್ತರು ನನ್ನನ್ನು ಹಾಗೆಯೇ ಸಂಭೋಧಿಸುತಿದ್ದು ವರದಿಗಳಲ್ಲಿ ಉಲ್ಲೇಖಿಸುತಿದ್ದರು..

ಈ ಮದ್ಯೆ ಎಮರ್ಜೆಂನ್ಸಿ ಬಂತು. ಪ್ರೋ. ಜಿಎಸ್ಎಸ್ ಅವರ ಕುರ್ಚಿಯ ಮಹಿಮೆ ಕುರಿತ ಪದ್ಯ ಶೂದ್ರ ದಲ್ಲಿ ಪ್ರಕಟಗೊಂಡಿತು. ಈ ಕವನ ಸಾಕಷ್ಟು ಗೊಂದಲವೆಬ್ಬಿಸಿ ಅಧಿಕಾರಸ್ತರ ಗಮನ ನಮ್ಮ ಮೇಲೆ ಬೀಳುವಂತೆ ಮಾಡಿತು ಎಂಬುದು ನನ್ನ ನೆನಪು. ಅಂದಿನಿಂದ ಪೋಲಿಸರ ಕಣ್ಣು ನಮ್ಮ ಮೇಲೆ ಬಿತ್ತು .ಶೂದ್ರ ಈಗಾಗಲೇ ಸಾಕಷ್ಟು ಕಡೆ ವಿವರವಾಗಿ ಬರೆದುಕೊಂಡಿರುವುದರಿಂದ ನಾನು ಅದರ ಪುನರ್ ಪ್ರಸ್ತಾಪಕ್ಕೆ ಹೋಗುವುದಿಲ್ಲ. ನನಗೆ ಅಂದಿನ ಪೋಲಿಸ್ ಕಮೀಷನರ್ ಯಮ್.ಎಲ್.ಚಂದ್ರಶೇಕರ್ ತಮ್ಮ ಕಚೇರಿಗೆ ಕರೆಸಿಕೊಂಡು ಬುದ್ದಿಮಾತು ಹೇಳಿದರು.

ಶೂದ್ರ ಮಾತ್ರ ಅತ್ಯುಗ್ರವಾಗಿ ಪ್ರತಿಕ್ರಿಯಿಸಿ ಶೂದ್ರ ದ ಪ್ರಕಟನೆಯನ್ನೇ ನಿಲ್ಲಿಸಿಬಿಟ್ಟ. ಹಲವಾರು ರಾಜಿ ಸಂಧಾನಗಳಾದ ಮೇಲೆ ನಮಗೆ ನೊಂದಣಿ ವೇಳೆ ಸಿಕ್ಕಿದ್ದ ಸವಾಲು ಎಂಬ ಹೆಸರಿನಲ್ಲಿ ಪತ್ರಿಕೆ ತರಲಾರಂಬಿಸಿದ. ತುರ್ತು ಪರಿಸ್ಥಿತಿ ಹಿಂತೆಗೆದುಕೊಂಡ ಬಳಿಕ ನಾವೆಲ್ಲರೂ ಒಟ್ಟುಗೂಡಿ ಶೂದ್ರದ ವಿಶೇಷಾಂಕ ಹೊರತಂದೆವು. ಅಪತ್ಕಾಲೀನ ಸ್ಥಿತಿಯ ಪ್ರಮಾಣಿಕ ವಿಶ್ಲೇಷನೆಯ ಜೊತೆಗೆ ಜೈಲು ವಾಸ ಅನುಭವಿಸಿ ಅದೇತಾನೆ ಬಿಡುಗಡೆಯಾಗಿದ್ದ ರಾಜಕೀಯ ನೇತಾರರ ಸಂದರ್ಶನಗಳನ್ನು ಪ್ರಕಟಿಸಿದೆವು. ಡಿಆರ್ಎನ್ ಆಲಂಪಲ್ಲಿ ವೆಂಕಟರಾಮ್ ಅವರ ಸಂದರ್ಶನ, ಪ್ರಸನ್ನ- ಜೇಹೆಚ್ ಪಟೇಲ್, ಶೂದ್ರ- ರಾಮಕ್ರಷ್ಣ ಹೆಗಡೆ, ನಾನು- ಮಳ್ಳೂರು ಆನಂದರಾವ್,.ಕಾಮ್ರೇಡ್ ಸೂರಿ, ಮೀಸ ಬಂಧಿ ಜಗನ್ನಾಥ್.. ವಿಜಯಮ್ಮನವರ ಇಳಾ ಮುದ್ರಣ ದಲ್ಲಿ ಸಾವಿರ ಗಟ್ಟಲೇ ಸಂಖ್ಯೆಯಲ್ಲಿ ಮುದ್ರಣ ಕಂಡ ಸಂಚಿಕೆ ನಮ್ಮ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು ಕೂಡಾ.

ನಮ್ಮ ಒಡನಾಟ, ನಮ್ಮಲ್ಲರ ಅಧ್ಯಯನ, ಆಸಕ್ತಿಗಳು ಕ್ರಮೇಣ ಶೂದ್ರದ ಸಂಪಾದಕೀಯ ನೀತಿಯ ಮೇಲೆ ಪ್ರಭಾವ ಭೀರುತಿದ್ದವು. ಎಡಪಂಥೀಯ ವಿಚಾರಧಾರೆಗನುಗುಣವಾಗಿ ಪತ್ರಿಕೆಯ ಲೇಖನಗಳು ರೂಪುಗೊಳ್ಳಲಾರಂಭಿಸಿದವು. ಇದು ಕೆಲವು ಬಲಪಂಥೀಯ ಮಿತ್ರರಿಗೆ ಸಹ್ಯವಾಗಲಿಲ್ಲ. ಮೋದಲೇ ಹೇಳಿದಂತೆ ಶೂದ್ರನ ಬ್ರೈನ್ ವಾಷ್ ಮಾಡುವುದು ಸುಲಭದ ಕೆಲಸವಾಗಿತ್ತು. ಪತ್ರಿಕೆ ಅದೇ ತಾನೆ ಕನ್ನಡ ಬೌದ್ದಿಕ ವಲಯಗಳಲ್ಲಿ ಹೆಸರು ಮಾಡಲಾರಂಬಿಸಿತ್ತು. ಶೂದ್ರ ಇಂತಹ ಒಂದು ವೀಕ್ ಮೊಮೆಂಟ್ ನಲ್ಲಿ ಶೂದ್ರ ನಮ್ಮೆಲ್ಲರ ಸಂಗವನ್ನು ತ್ಯಜಿಸಿ ಮತ್ತೆ ಏಕಾಂಗಿ ಹೋರಾಟ ಮುಂದುವರಿಸಿದ.
ಈಗಲೂ ಶೂದ್ರ ಸಕ್ರಿಯನಾಗಿದ್ದಾನೆ. ಸಾಹಿತ್ಯ ಲೋಕದಲ್ಲಿ ಶಾಶ್ವತವಾಗಿ ಗುರುತಿಸಿಕೊಳ್ಳಬೇಕೆಂಬ ಹಠದಲ್ಲಿ ಕಥೆ,ಕವನ,ನಾಟಕ, ಪ್ರಭಂಧ ಹೀಗೆ ಎಲ್ಲಾ ಪ್ರಾಕಾರಗಳಲ್ಲೂ ಕೈ ಆಡಿಸುತ್ತಲೇ ಇದ್ದಾನೆ.

ಇದ್ದ ಶಿಕ್ಷಕನ ಕೆಲಸ ಬಿಟ್ಟು ಪೂರ್ಣಪ್ರಮಾಣದ ಸಾಹಿತ್ಯ ಸೇವೆ ಮಾಡುತಿದ್ದಾನೆ. ಸಭೆ ಸಮಾರಂಭಗಳಲ್ಲಿ ಸಿಕ್ಕಾಗ ಎಂದಿನ ದೇಶಾವರಿ ನಗೆ ಬೀರುತ್ತಾನೆ. ಇಷ್ಯೂ ಕೈಯಲ್ಲಿಡುತ್ತ ”ಯೂಸ್ಲೆಸ್ ಫೆಲೊ ಚಂದಾ ಕೊಡೋ” ಅಂತ ಕಿಚಾಯಿಸುತ್ತಾನೆ. ನಮ್ಮ ಉತ್ತರ ಸಿಗುವ ಮೊದಲೇ ಇನ್ಯಾರೊ [ಹುಡುಗಿ] ಹಾಯ್ ಶೂದ್ರ ಎನ್ನುತ್ತಾರೆ . ನಮ್ಮ ಬಳಿ ಬಂದಷ್ಟೇ ವೇಗವಾಗಿ ಶೂದ್ರ ನಮ್ಮನ್ನು ಅಗಲುತ್ತಾ ಹೊಸ ದನಿಯತ್ತ ನಡೆಯುತ್ತಾನೆ.

ಬೆಂಗಳೂರಿನ ಬೌಧ್ದಿಕ ಲೋಕಕ್ಕೆ ಪರಿಚಯಿಸಿ ನನ್ನೆಲ್ಲ ತೆವಲುಗಳನ್ನು ಸಹಿಸಿಕೊಂಡ ಶೂದ್ರ ನನ್ನ ಜೀವನದ ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಾನೆ. ಅವನಿಗೆ ಶರಣು,

2 comments

 1. ಶೂದ್ರ ಈಗ ಕಾದಂಬರಿ ಕೂಡಾ ಬರೆಯುತ್ತಿದ್ದಾರೆ. ಮೊನ್ನೆಯಷ್ಟೇ ಅವನ ಎರಡನೆ ಕಾದಂಬರಿ ಹೊರಬಂದಿದೆ. ಇದನ್ನು ಉಲ್ಲೇಖಿಸುವುದು ಮರೆತಿದ್ದೆ.

 2. ಅಣ್ಣಯ್ಯ ಸೂಪರ್
  ನಾನೂ ಶೂದ್ರ ಚಂದಾದಾರನಾಗಿದ್ದೆ.
  ಸಾಹಿತ್ಯ ದ ಮತ್ತು ಲಂಕೇಶ್ ರವರ ಹುಚ್ಚು.
  ಸರಿ ವಿದಾನಸೌದಲವಿಧಾ ಶೂದ್ರ ಸಿಕ್ಕರು.
  ಖುಷಿಯಾಗಿ ಚಂದಾದಾರನಾದೆ.
  ಆಗ ನನ್ನ ಆಥಿ೯ಕ ಪರಿಸ್ಥಿತಿ ಸರಿಯಿರಲಿಲ್ಲ.
  ಸಭೆ ಸಮಾರಂಭಗಳಲ್ಲಿ ಸಿಗುವುದು ಮಾತುಕಥೆ.
  ಹೋಗುವಾಗ ನಿಮ್ಮ ಚಂದಾಹಣ ?
  ಕೊಟ್ಟಿದ್ದೇನೆಂದು
  ಹೇಳಲು ಸಂಕೋಚ,ಮತ್ತೆ ಕೊಡುತ್ತಿದ್ದೆ.
  ಅದೊಂದು ದಿನ ವಿದಾನವಿಧಾನಸಭೆ ಸಿಕ್ಕರು
  ಬಸವರಾಜ ಚನ್ನಾಗಿದಿರಾ ಅಂದರು ಮಾತು
  ನಂತರ ಚಂದಾಹಣ ಎಂದರು ನಾನಂದು
  ಕಾಲಿ ಜೇಬು
  ಹಸಿದಹೊಟ್ಟೆ ಕೋಪದಿಂದ ಎಷ್ಟು‌ಸಾರಿ
  ಕೊಡುವದು ಸಾರ್ ಅಂದೆ ಜೋರಾಗಿ
  ಪಾಪ ಅದೇ ಕೊನೆ,ಮತ್ತಾವತ್ತು ಕೇಳಲಿಲ್ಲ.
  ಈಗಲೂ ಸಿಗುತ್ತಾರೆ,ಅವರಿಗೆ ನೆನಪಿದೆ,
  ಆದ್ದರಿಂದ ಹಾಯ್ ಬಾಯ್ ಮಾತ್ರ.
  ಆದರೂ ಅವರ ಬಗ್ಗೆ ಅಭಿಮಾನ ಪ್ರೀತಿ.
  ನಿಮ್ಮ ನೆನಪಿನ ಬುತ್ತಿ ಬಿಚ್ಚಿದಾಗ ಅದೆಷ್ಟು
  ತರಾವರಿ ಗಳಿದಾವೂ ಬಿಚ್ಚಿ ಹಂಚಿ.
  ಕೂತು ತಿನ್ನೋಣ.

Leave a Reply