‘ಬರಲೇನೇ’ ಅಂತ ಎದ್ದೇ ಬಿಟ್ಟಳು..

ಪ್ರೀತಿ -ಪ್ರೇಮ – ವಿರಹ.

ಸರೋಜಿನಿ ಪಡಸಲಗಿ

‘ಪ್ರೀತಿ , ಪ್ರೇಮ, ವಿರ‌ಹ’ ಎಷ್ಟು ಪರಿ, ಎಷ್ಟು ಬಗೆ , ಎಷ್ಟು ರೂಪ !!!! ಅದೆಷ್ಟು ನೋವು, ಅದೆಷ್ಟು ನಲಿವು!! ದಿನಕ್ಕೊಂದು, ಗಳಿಗೆಗೊಂದು, ಒಟ್ಟಲ್ಲಿ ವಿರಾಟ್ ರೂಪ ದರ್ಶನ. ನಮ್ಮ ಗುಂಪಿನ ದುಂಡು ಮೇಜಿನ ಪರಿಷತ್ತಿನಲ್ಲಿ ನಿನ್ನೆ ನಡೆದ ಚರ್ಚೆಯ ಗುಂಗಿನಲ್ಲಿ ಮನ ಗುಂಗಾಗಿ ಮುಳುಗಿ ಹೋಗಿತ್ತು. ಕರೆಗಂಟೆಯ ಶಬ್ದಕ್ಕೆ ಯೋಚನಾತಂತಿ ಕಡಿದು ಬಾಗಿಲು ತೆರೆಯುವಷ್ಟರಲ್ಲಿಯೇ, “ಹಾಯ್, ಹೇಗಿದ್ದಿ ” ಎನ್ನುತ್ತಾ ತಾನೇ ಬಾಗಿಲು ದೂಡಿ ಕೊಂಡು ಬಿರುಗಾಳಿಯಂತೆ ಒಳ ನುಗ್ಗಿ  ಸೋಫಾದಲ್ಲಿ ಕುಸಿದು, “ನಿನ್ನ ಜೊತೆ ಮಾತನಾಡಬೇಕೆ.ಯಾಕೆ ಹೀಗಿದ್ದಿ, ಏನಾಯ್ತು?” ಅಂತ ನನಗೇ ಪ್ರಶ್ನೆ ಎಸೆದಳು ಸ್ನೇಹಿತೆ.

‘ಇದೇನೇ ಇಷ್ಟೇಕೆ ಗೊಂದಲ ಗಡಿಬಿಡಿ? ಅದೇನು ಅಂಥ ವಿಷಯ ? ಇರು ಕಾಫಿ ತರ್ತೀನಿ’ ಅಂದೆ. ಅದಕ್ಕೆ ಅವಳು,
‘ಕಾಫಿ ಗೀಫಿ ಎಲ್ಲಾ ಆಮೇಲೆ. ಈಗ ನನಗೆ ಹೇಳು, ನೀನು ನಿನ್ನೆ ಪ್ರೀತಿ, ಪ್ರೇಮ ವಿರಹ ಅಂತೆಲ್ಲ ಮಾತಾಡ್ತಾ ವಿರಹವೂ ಶೃಂಗಾರದ ಒಂದು ಅವಿಭಾಜ್ಯ ಅಂಗ. ವಿರಹ ಇಲ್ಲದೇ ಪ್ರೀತಿ ಪ್ರಣಯದಲ್ಲಿ ಸೊಗಸಿಲ್ಲ, ಸೊಗಡಿಲ್ಲ ಅಂದೆಯಲ್ಲ ಯಾರಿಗೆ ಗೊತ್ತು?ವಿರಹದಲ್ಲಿಯೇ ಪ್ರೇಮ ಪರಿಪೂರ್ಣತೆ ಕಾಣ್ತದೆಯೋ ಏನೋ ಅಂದೆಯಲ್ಲ, ಅದಕ್ಕೆ ಸಾಕ್ಷಿ ಪುರಾವೆ?”

ವಕೀಲೀ ಥಾಟಿನಲ್ಲಿ ಟೇಬಲ್ ಕುಟ್ಟಿ ಕೇಳಿದಳು ಅವಳು. ನಾನು ಮುಗುಳ್ನಗೆ ಬೀರಿ
“ನಿಜವಾಗಲೂ ಕೇಳ್ತಿದಿ ಏನೇ?” ಎಂದೆ.

“ಹೌದು ಕಣೆ. ನನಗೆ ಉತ್ತರ ಬೇಕು ” ಅಂದ್ಲು. ಕಾಫೀ ಕಪ್ ಅವಳ ಕೈಗಿತ್ತು ಒಂದು ಕ್ಷಣ ಕಣ್ಮುಚ್ಚಿ ಕೊಂಡೆ. ಎಲ್ಲೋ ತೇಲಿತು ನನ್ನ ಚಿತ್ತ. ಅರಿಯದ ಭಾವುಕತೆಯಲ್ಲಿ ಮುಳುಗಿ ನನ್ನ ಧ್ವನಿ ಮೆಲ್ಲ ಮೆಲ್ಲಗೆ ನುಡಿಯಲಾರಂಭಿಸಿತು.-

“ಇಲ್ನೋಡೇ ಪ್ರೀತಿ, ಪ್ರೇಮ, ವಿರಹ ಇವುಗಳ ನಡುವೆ ಒಂದು ನವಿರಾದ ಸೂಕ್ಷ್ಮ ಸಂವೇದನೆಯುಳ್ಳ ಸಂಬಂಧ ಇದೆ ಕಣೆ , ಇಂಥದೇ ಅಂತ ಹೆಸರಿಸಲಾಗದ್ದು. ಪ್ರೇಮ ವಿರಹದಲ್ಲಿಯೇ ಪರಿಪೂರ್ಣತೆ ಕಾಣೋದು. ವಿರಹದಲ್ಲಿ ಒಂದು ಮಧುರ ಯಾತನೆಯ ಸುಳಿವಿನದು, ಇನ್ನೊಂದು ದುಃಖ ಮಡುಗಟ್ಟಿದ ವೇದನಾಮಯ ನೋವಿನೆಳೆಯದು. ಇದರಲ್ಲಿ ಅಗಲಿಕೆ ನಿರಂತರವೋ ಏನೋ. ನೆನಪೇ ಇಲ್ಲಿ ಆಸರೆ, ನೆನಪೇ ಇಲ್ಲಿ ಸಂಗಾತಿ. ಆದರೆ ಅಲ್ಪ ಅಗಲಿಕೆಯ ನಂತರದ ಮಿಲನದಲ್ಲಿ ಸಿಗುವ ಹಿತ, ಅನುಭವಿಸುವ ಮುದ ಅಳತೆಗೆ, ಕಲ್ಪನೆಗೂ ನಿಲುಕದು. ಪ್ರೀತಿಸುವ ಪ್ರತಿ ಹೃದಯದ ಅನುಭವ ಇದು. ಆ ಪರಿಪೂರ್ಣತೆಗೆ ಇದೇ ಸಾಕ್ಷಿ. ನಿನ್ನ ಹೃದಯವನ್ನೇ ಕೇಳಿ ನೋಡು. ಅದೇ ಉತ್ತರಿಸಬಲ್ಲದು ನನಗಿಂತ ಚೆನ್ನಾಗಿ.” ಎಂದೆ ನಾನು.

ನನ್ನ ಮುಖವನ್ನೇ ದಿಟ್ಟಿಸಿ ನೋಡುತ್ತಾ ಇದ್ದ ಅವಳ ಕಣ್ಣಲಿಣುಕುತ್ತಾ ಮುಂದುವರೆಸಿದೆ – “ಇಲ್ನೋಡು, ಈ ಪ್ರೀತಿ ಪ್ರೇಮ ಎಲ್ಲ ಅನುಭೂತಿಗೊಳಪಟ್ಟ ಹೃದಯದ ಭಾಷೆಗಳು ಅಲ್ವೇನೆ? ಅಂದ ಮೇಲೆ ಅದಕ್ಕೆ ಘನೀಭೂತವಾದ ಸಾಕ್ಷಿ ಪುರಾವೆ ಎಲ್ಲಿಂದ ತರಲಿ? ಹೀಗೇ ಇದರ ಸೊಬಗು , ಸೊಗಡು ಅಂತ ಹೇಳಲಾದೀತೆ ? ಪ್ರೀತಿ ತುಂಬಿದ ಪುಟ್ಟ ಎದೆಗೂಡಿನ ಪ್ರತಿ ಬಡಿತ, ಪ್ರತಿ ಮಿಡಿತ ಅದರ ಸಾಕ್ಷಿ ನುಡಿದೀತು ಕೇಳೀತು ನಿನಗೆ ನೀನು ಆ ಭಾಷೆ ಬಲ್ಲರೆ ” ಅಂದೆ.

ಮುಂಗೈ ಮೇಲೆ ಗದ್ದ ಊರಿ ತನ್ಮಯಳಾಗಿ ಕೇಳುತ್ತಿದ್ದ ಆಕೆಯ ತಲೆ ಮೇಲೆ ಮೊಟಕಿ ಮತ್ತೆ ಮುಂದುವರೆಸಿದೆ– “ಕೇಳು ಇಲ್ಲಿ ಈ ಪ್ರೀತಿಯ ಪರಿಪೂರ್ಣತೆಗೆ, ಸೊಬಗಿಗೆ ಯಾವ ಅಳತೆ ಗೋಲೂ ಇಲ್ಲ. ಭಾವನೆಗಳನ್ನಳೆಯಲಾದೀತಾ? ಅವು ಹರಿವ ದಾರಿ ಸಾಗ್ತಾನೇ ಇರ್ತದೆ.ಇಷ್ಟು ದೂರ ಅಂತ ಹೇಳಲಾದೀತಾ?ನಿನ್ನ ಎದೆದುಂಬಿದ ಭಾವನೆಗಳ ಆಳ ಎಷ್ಟು ತೋರಿಸು ನೋಡ್ತೇನೆ ಎಂಬಂತಿದು.ರೂಪ , ಆಕಾರ ಇಲ್ಲದ , ಸ್ಪರ್ಶ ಕೆ ನಿಲುಕದ , ಆದರೆ ಮನ ಮುದಗೊಳಿಸುವ , ಅದಿಲ್ಲದೇ ಹೋದಾಗ ಮನ ಮುದುಡಿಸುವ ಮಧುರ ರಾಗ ಅದು.

“ಎಷ್ಟು ಮುದುಡಿತು ನಿನ್ನ ಹೃದಯ ಎಂದರೆ ಇಷ್ಟು ಅಂತ ಹೇಳಲಾದೀತಾ? ಹರಿದ ಕಣ್ಣೀರು ಎಷ್ಟು ಎಂಬ ಅಳತೆ ಮಾಡಲಾದೀತಾ ಹೇಳು ” ಎಂದು ಸುಮ್ಮನಾದೆ.   ‌‌‌

ಒಂದು ಉರ್ದು ಗಝಲ್ ನೆನಪಾಯಿತು ನನಗೆ.ಆ ಪ್ರೇಮಿಗೆ ಕಳೆದು ಹೋದ ವಿರಹದ ರಾತ್ರಿಯ ನೆನಪೂ ಬೇಡ.ಅದು ಕಳೆದಾಯ್ತಲ್ಲ ಅದರ ಮಾತೂ ಬೇಡ.ತನ್ನ ಯೋಚನೆಯ ದರ್ಬಾರ್ ನಲ್ಲಿ ಸುಳಿದ ಅವಳ ನೆನಪು ಮೂಡಿಸಿದ ಛಾಯೆಯೇ ಸಾಕು ಆತನಿಗೆ.ಅಲ್ಲಿಯೇ ಅವಳನ್ನು ಕಂಡ ಆತನಿಗೆ ,ವಿರಹದಲ್ಲಿ ಕುದಿವಂತೆ ತೋರಿದ ಚಂದ್ರ ತಣ್ಣಗಾದಂತೆ ಕಂಡ.ಅವಳ ನೆನಪಿನ ಮುಂಜಾವು ಮೋಹಕವಾಗಿ ತೋರಿದರೆ, ವಿರಹದ ರಾತ್ರಿ ರುದ್ರ ನರ್ತನ ಬಿಂಬಿಸಿ ತಲ್ಲಣಗೊಂಡಂತೆ ಎನಿಸಿದೆ ಆತಗೆ.

“ಎಲ್ಲಿ ಕಳೆದು ಹೋದೆ? ಸಂಜೆ ಆಗ್ತಾ ಬಂತು.ಬರಲಾ ” ಅಂದ್ಲು ಅವಳು.ಯೋಚನೆಯಲ್ಲಿ ಮುಸ್ಸಂಜೆ ಆವರಿಸಿದ್ದೂ ಗೊತ್ತಾಗಲಿಲ್ಲ ಅನ್ಕೊಂಡೆ ನಾ.ಪಡುವಣದತ್ತ ಜಾರುತಿರುವ ಸೂರ್ಯ ಯಾಕೋ ಮಂಕಾಗಿ ಕಂಡ.ನಾ ತಟ್ಟನೇ ” ಏ ಇಲ್ಲಿ ನೋಡು ,ಭುವಿಯನ್ನು ಬಿಟ್ಟು ಪಡುವಣದ ಒಡಲ ಕಡಲು ಸೇರುತಿರುವ ದಿವಿಯ ಮೊಗದ ಮೇಲೆ ಕವಿದ ವಿರ‌ಹದ ನೋವನ್ನು !!ಆ ವೇದನೆಯಿಂದ ಕೆಂಪಡರಿದ ಆತನ ಕಣ್ಣ ಬೆಳಕೇ ಬಾನ ತುಂಬ ಪ್ರತಿಫಲಿಸಿದಂತಿದೆ.ಪಾಪ  ವಿರಹಿ ದಿವಿ” ಎಂದೆ.ಆದರೆ ನನಗೆ ಆ ವಿರಹಿ ದಿವಿಯ ಮೊಗದಲ್ಲೂ ಒಂದು ಆಸೆ ನಿರೀಕ್ಷೆ ಕಂಡಿತು.ಮತ್ತೆ ಮೂಡಣದ ಬಸಿರಲಿ ಮೂಡಿ  ಭುವಿಯ ಕಣ್ಣಲಿ ಒಲವನರಸುವ ಹೊಳಪು!!! ಅರಿಯದೇ ಉದ್ಗರಿಸಿದೆ,” ವಿರಹದ ಲ್ಲಿಯೇ ಶೃಂಗಾರದ ಹುಟ್ಟೋ ಏನೋ!! ಅದೆಷ್ಟು ಸಶಕ್ತ ಈ ಪ್ರೀತಿ ನೋವು ಕೊಡಲೂ ನಲಿವು ನೀಡಲೂ!!!!”

“ನಿಜವಾಗಲೂ ವಿರಹದಲ್ಲಿಯೂ ನೋವೇ ತುಂಬಿದ್ದರೂ ,ಒಂದು ಸಣ್ಣ ಹಿತದೆಳೆ ಇದೆ.ರಾಧೆ ಕೃಷ್ಣನ ಹೃದಯ,ಅವನ ಜೀವ.ಅವಳ ಅಣು ಅಣು ,ಕಣ ಕಣ ಕೃಷ್ಣಮಯ.ಆದರೂ ಅವಳು ನಿರಂತರ ವಿರಹಿ.ಅವಳ ದುಃಖ ಮಡುಗಟ್ಟಿದ ವೇದನಾಮಯ ವಿರಹಸಾಗರದಲ್ಲಿಯೂ, ಅವಳ ಯೋಚನೆ ಲೋಕದಲ್ಲಿಯೂ ಅವಳ, “ಕಣ್ಣ” ಅವಳೊಡನೆಯೇ.ಕೃಷ್ಣ ಮಧುರೆಗೆ ಹೋದ ಮೇಲೆ ತನ್ನ ಆಪ್ತಮಿತ್ರ ಉದ್ದೇಶವನ್ನು ವೃಂದಾವನಕ್ಕೆ ಕಳಿಸಿದ ತನ್ನ ಸಂದೇಶದೊಂದಿಗೆ.ಉದ್ಧವ ರಾಧೆಯನ್ನು ಭೇಟಿ ಮಾಡಿ,”ಕೃಷ್ಣ ನಿನ್ನಿಂದ ದೂರ ಇದ್ದರೂ ನೀನೇ ಅವನ ಒಲವು ನಲಿವಿನ ದೇವತೆ.ಇದು ಕೃಷ್ಣ ನ ಸಂದೇಶ ರಾಧೆ” ಎಂದ.

ಆಗ ರಾಧೆ ” ಉದ್ಧವ್ , ನಿನಗೆ ಹುಚ್ಚೇ, ಕಿವುಡೇ? ಕೃಷ್ಣ ನನ್ನಿಂದ ದೂರ ಎಲ್ಲಿದ್ದಾನೆ? ಇಲ್ಲಿ ನೋಡು  ಯಮುನೆಯ ಕಲರವದಲ್ಲಿ ಅವನ ನಗು ನಿನಗೆ ಕೇಳದೇ? ಇಲ್ಲಿಯ ಮಂದಮಾರುತದಲ್ಲಿ‌ ಆತನ ಕೊಳಲನಾದ ಕೇಳದೇ? ಗೋಗಳ ಕೊರಳ ಗಂಟೆಯಲ್ಲಿ ಆತನ ಕೊರಳ ಮಧುರ ನಿನಾದ ಗುಂಜಿಸ್ತಿದೆ ಕೇಳು. ನನ್ನ ಕಂಗಳಲ್ಲಿ ಆತನ ಬಿಂಬ ಕಾಣೆಯಾ? ಈ ಕೊಳಲಿನಲ್ಲಿ ನನ್ನ ಜೀವ ಆತನೊಂದಿಗೆ ಬೆರೆತು ಹೋಗಿದೆ ನೋಡು.”ಎಂದಳಂತೆ.

ಆಕಾಡು, ಆ ಯಮುನೆ, ಆ ಕೊಳಲು, ಆ ನವಿಲು ಪಿಂಛ, ಆ ಬೆಳದಿಂಗಳು, ಆ ಗೋಗಳು ಎಲ್ಲೆಲ್ಲೂ ಆತ ಅವಳ ಜೊತೆಗೇನೇ. ಕೈಗೆಟುಕಲಾರ. ಆದರೆ ಎಂದಿಗೂ ತೊರೆಯಲಾಗದ ಸಾಂಗತ್ಯ. ಕಣ್ಣು ಹನಿದರೂ ತುಟಿಯಂಚಿನಲ್ಲಿ ನಗುವರಳಿಸೋ ಮಧುರ ನೆನಪುಗಳು. ಆ ವಿರಹದಲ್ಲಿಯೂ ಹೆಸರಿಸಲಾಗದ ಮಾಧುರ್ಯ. ಇದು ಪ್ರೀತಿಯ ಪರಿಪೂರ್ಣತೆ ಅಲ್ವೆನೇ” ಎಂದೆ.

“ಹಾಂ” ಎಂದಳಾಕೆ ಕನಸಲ್ಲಿದ್ದಂತೆ. ಡಬ ಡಬಿಸುವ, ತುಂಬಿ ನಿಂದ ಕಂಗಳಿಂದ ನನ್ನ ನೋಡುತ್ತಾ “ಶಂಭರ್ ಟಕ್ಕೆ ನಿಜ. ಇದು ಪ್ರೀತಿ ಪ್ರೇಮ ವಿರಹದ ನವಿರು ಸಂಬಂಧದ ವಿರಾಟ್ ರೂಪ ದರ್ಶನ” ಅನ್ನುತ್ತಾ ‘ಬರಲೇನೇ’ ಅಂತ ಎದ್ದೇ ಬಿಟ್ಟಳು ಕಣ್ಣೊರೆಸುವ ಪ್ರಯತ್ನವನ್ನೂ ಮಾಡದೇ,

ತಣ್ಣಗಾದ ಕಾಫಿ ಕಪ್ಪು ಬಿಟ್ಟು, ಯೋಚನಾಲೋಕದಲ್ಲಿ ನನ್ನ ಓಲಾಡಬಿಟ್ಟು.

Leave a Reply