ಬಂಗುಡೆ ಖ್ಯಾತಿಗೇನು ‘ಕಡಮೆ’

ಪ್ರಕಾಶ್ ಕಡಮೆ 

ಫೋಟೋ: ಗಣೇಶ್ ಪಿ ನಾಡಾರ್

ಇದು ಬಂಗಡೆ ಮೀನು .
ಜನಸಾಮಾನ್ಯನಿಗೂ ಕೈಗೆಟಕುವ ದರದಲ್ಲಿ ಸಿಗುವ ಮೀನು. ಕೆಜಿಗೆ ಒಂದು ಸಾವಿರ ರೂಪಾಯಿಯ ಪಾಪ್ಲೇಟ್, ಕಾಣೆ ಮೀನುಗಳನ್ನು ತಿನ್ನುವ ಶ್ರೀಮಂತ ದೊರೆಗಳಿಗೂ ಸಹ ನೂರಾಐವತ್ತು ರೂಪಾಯಿಯ ಈ ಬಂಗಡೆ ತಿಂದರೇನೇ ತೃಪ್ತಿ, ಸಂತೃಪ್ತಿ. ಇದು ಒಂಥರಾ ಬದಾಮು ಮತ್ತು ಶೇಂಗಾ ಬೀಜದ ಸಂಬಂಧವಿದ್ದಂತೆ.

ತಿನ್ನುವಾಗಲೂ ಈ ಬಂಗಡೆ ನಿರುಪದ್ರವಿಯೆ. ಒಂದೇ ಉದ್ದನೆಯ ಮುಳ್ಳು. ತಿನ್ನುವಾಗ ಯಾರ ಬಾಯಿಗೂ ಚುಚ್ಚುವದಿಲ್ಲ. ಹೊಸದಾಗಿ ಮೀನು ತಿನ್ನಲು ಕಲಿಯುವರಿಗಂತೂ ಇಂಗ್ಲೀಷ್ ಗೈಡ್ ಇದ್ದಂತೆ . ತಿಂದಾದ ಮೇಲೆ ಅಷ್ಟೇನು ಬಾಯಿ ಮುಂದೆ
ವಾಸನೆಯೂ ಬರುವದಿಲ್ಲ.

ಇದು ತಂಡೋಪತಂಡವಾಗಿ ‌ಸಮುದ್ರದಲಿ ಸಂಚರಿಸುವುದರಿಂದ ಬಲೆಗೆ ಒಮ್ಮೆಲೇ ಬಿದ್ದು ಬಡವರ ಹೊಟ್ಟೆಗೂ ಪಾಲುದಾರನಾಗುವದು. ಇದರ ರುಚಿಯಲ್ಲಿ ಮಿಗಿಲಿಲ್ಲ .

ಬಂಗಡೆ ಫ್ರೈಗೇ ಅಗ್ರಸ್ಥಾನ, ಮಸಾಲೆ, ಸುಕ್ಕಾನೂ ಅಗದೀ ರುಚಿಕಟ್ಟು. ಆದರೂ ಇವೆಲ್ಲಕಿಂತ ಹೆಚ್ಚಾಗಿ ನನಗಂತೂ ಅನ್ನದ ಜೊತೆ ಕಲಿಸಿಕೊಳ್ಳಲು ಇದರ ಸಾರೇ ರುಚಿಕರ .ಇಂತಹ ಸಾರು ತಯಾರಿಸುವಾಗ ಒಂದು ಬಂಗಡೆಯನ್ನು ಮೂರು ಭಾಗಗಳಾಗಿ ತಲೆಯಭಾಗ , ನಡುವಿನ ಭಾಗ ಮತ್ತು ಬಾಲದ ಭಾಗಗಳಾಗಿ ಕತ್ತರಿಸುವರು. ಸಾರು ತಯಾರಿಸುವಾಗ ನನ್ನ ಅಮ್ಮನ ರುಚಿಕಟ್ಟನ್ನೇ ಸುನಂದಾಳೂ ಮುಂದುವರಿಸಿಕೊಂಡು ಬಂದಿರುವುದು ನನಗಂತೂ ಬಂಗಡೆ ಪದಾರ್ಥ ನನ್ನ ಬಾಲ್ಯವನ್ನೇ ನೆನಪಿಸುತ್ತದೆ..

ಈ ಮೂರೂ ಭಾಗದಲಿ ಪ್ರಾಯಶಃ ತಲೆಯ ಭಾಗಕಿಂತ ರುಚಿ ಇನ್ನೊಂದಿಲ್ಲ. ಆದರೆ ಯಾವುದೋ ಪೂರ್ವಾಗ್ರಹ ಪೀಡಿತವೋ ಏನೋ ಮನೆಗೆ ಯಾವುದೇ ಗೆಸ್ಟ್ ಬಂದರೆ ಅಪ್ಪಿ ತಪ್ಪಿ ಅವರ ತಾಟಲ್ಲಿ ತಲೆ ಬಿದ್ದಿತು ಅಂದರೆ ಬಡಿಸಿದವಳ ಬಾಳು ಅಂದಿನ
ದಿನಕೆ ಮೂರಾಬಟ್ಟೆಯಾದಂತೆಯೇ. ಕೆಲ ಪ್ರತಿಷ್ಠಿತ ಮನೆಗಳಲಿ ಗಂಡಸರಿಗೆ ಅವರ ಗೌರವಕ್ಕನುಗುಣವಾಗಿ ಮೀನಿನ ತಲೆ ಬಡಿಸುವಂತಿಲ್ಲ, ಅದೇನಿದ್ದರೂ ಹೆಂಗಸರಿಗೆ. ನನಗಂತೂ ತಲೆ ಇಲ್ಲದೇ ಉಂಡರೆ ಉಂಡಂತೆನಿಸುವದಿಲ್ಲ. ಆ ತಲೆಯಲೂ ಕಣ್ಣು, ಚಪ್ಪು ಜಗಿದು ನುಂಗುವದೆಂದರೆ ಅದರ ರುಚಿ ಇನ್ನೊಬ್ಬರಿಗೆ ಹೇಳಲಸಾಧ್ಯ.

ಪ್ರತೀ ಮನೆಯ ತಾಯಿಯೂ ತನ್ನ ಪ್ರೀತಿಯ ಮಗನಿಗೆ ಚಂದದ ಬಾಲದ ಹೋಳು ಹಾಕುವದೇ ತನ್ನ ಜನ್ಮಸಿದ್ಧ ಹಕ್ಕೆಂದು ತಿಳಿದಿರುವಳು. ನಡುವಿನ ಹೋಳಿನ ರುಚಿಯೂ ಅಮೃತ ಸಮಾನವೇ. ಅವಿಭಕ್ತ ಕುಟುಂಬದಲ್ಲಿ ಗಂಡಂದಿರ ಊಟದ ನಂತರವೇ ಹೆಂಗಸರ ಊಟ ಎಂಬ ಅಸಮಾನ ಪದ್ದತಿ ಇತ್ತು.. ಕೆಲ ಸಂದರ್ಭದಲ್ಲಿ ಕೆಲ ಹೆಣ್ಣುಮಕ್ಕಳಿಗೆ ಮೀನಿನ ಹೋಳೇ ಇರುತ್ತಿರಲಿಲ್ಲ. ಅದನ್ನು ಬಲ್ಲ ಕೆಲ ಚಾಲಾಕಿ ಗಂಡಸರು ತಮಗೆ ಬೇಡದಿದ್ದರೂ ಮೀನಿನ ಹೋಳು ಹಾಕಿಸಿಕೊಂಡು
ಅನ್ನದಲ್ಲಿ ಅದನ್ನು ಹೂತಿಟ್ಟು ಹೆಂಡತಿಗಾಗಿ ಉಳಿಸುವ ಪದ್ಧತಿಯೂ ಇತ್ತಂತೆ. ಅದು ಗಂಡ ಹೆಂಡಿರ ಪ್ರೀತಿ, ಜಾಣ್ಮೆ, ಲವಲವಿಕೆಗಳ ವಿಷಯಕೆ ಸಂಬಂಧಿಸಿದ್ದು.

ಸಾಕಲ್ಲ ? ಬಂಗಡೆಯ ಕುರಿತು ನನ್ನ ಮಹಾನ್ ಸಂಶೋಧನೆ?.
ಇದನ್ನು ಓದಿದ ನಿಮಗೆ ಯಾರಿಗಾದರೂ ಬಂಗಡೆ ತಿನ್ನುವ ಮನಸಾದರೆ ಒಂದು ದಿನ ಮೊದಲೇ ತಿಳಿಸಿ ‘ನಾಗಸುಧೆ’ಗೆ ಬನ್ನಿ, ನಿಮಗೆ ಸ್ವಾಗತ

Leave a Reply