ನಿನ್ನ ವಾಯಲಿನ್ ಕಲರವ ಇಲ್ಲದೆ..

ಕಮಲಾಕ್ಷ ಅಮೀನ್ 

ಸುಮಾರು ಒಂದೂವರೆ ದಶಕಗಳ ಹಿಂದೆ ನನ್ನ ಮಿತ್ರ ಆ ಹುಡುಗನನ್ನು ನನಗೆ ಪರಿಚಯಿಸಿದ್ದ .

ಆಕರ್ಷಕವಾದ ಯಾರನ್ನೂ ಸೆಳೆಯುವ ವ್ಯಕ್ತಿತ್ವ,ಮುಖದಲ್ಲಿ ತೇಜಸ್ಸು . ಆ ಮುಗ್ದ ಮುಖದಲ್ಲಿ ಸದಾ ಕಂಡೂ ಕಾಣದಂತಿರುವ ಮುಗುಳ್ನಗೆ . ಆ ಹುಡುಗ ಮಿತಭಾಷಿ . ಆತನಲ್ಲಿ ಸ್ವಾಭಿಮಾನ ಹಾಗು ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು . ಆಗಷ್ಟೇ ಮದುವೆಯಾಗಿದ್ದ ಪತ್ನಿಯೂ ಜೊತೆಗಿದ್ದಳು .

‘ ಈತ ಒಬ್ಬ ಅದ್ಭುತ ಸಂಗೀತಗಾರ ,ತುಂಬಾ ಪ್ರತಿಭಾವಂತ ಆದರೆ ಸ್ವಾಭಿಮಾನಿ ಅವಕಾಶಕ್ಕಾಗಿ ಯಾರ ಮುಂದೆಯೂ ಕೈಚಾಚುವುದಿಲ್ಲ. ಸಾಧ್ಯವಾದರೆ ಕನ್ನಡ ಚಲನಚಿತ್ರ ರಂಗದಲ್ಲಿ ಯಾರ ಹತ್ತಿರವಾದರೂ ಮಾತನಾಡು ” ಇದು ನನ್ನ ಮಿತ್ರ ನನಗೆ ಹೇಳಿದ ಮಾತುಗಳು .

 

ಅದ್ಯಾಕೋ ಆ ಹುಡುಗ ನನಗೆ ಬಹಳ ಇಷ್ಟವಾದ ,ಅವನು ಮುಂದೊಂದು ದಿನ ದೊಡ್ಡ ಸಂಗೀತಗಾರನಾಗುತ್ತಾನೆ ಎಂದು ನನ್ನ ಮನಸ್ಸು ಹೇಳುತಿತ್ತು . ನೋಡು ನೋಡುತ್ತಿದ್ದಂತೆಯೇ ಆತ ಬೆಳೆಯುತ್ತಾ ಹೋದ,ವಾಯಲಿನ್ ನಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ ,ದೇಶ ವಿದೇಶಗಳಲ್ಲಿ ಜನಪ್ರಿಯನಾದ .

ಆದರೆ ನಿಜ ಜೀವನದಲ್ಲಿ ಅದೇ ಮುಗ್ದ್ಹತೆ ,ಸರಳತೆಯನ್ನು ಹಾಗೆಯೇ ಉಳಿಸಿಕೊಂಡಿದ್ದ .ವಾಯಲಿನ್ ನುಡಿಸಲು ಪ್ರಾರಂಭಿಸಿದರೆ ಯಾರನ್ನೂ ಮಂತ್ರಮುಗ್ದರನ್ನಾಗಿ ಮಾಡುವ ಶಕ್ತಿಯಿರುವ ಗಾರುಡಿ ಕೊನೆಗೂ ಒಂದು ವಾರ ಸಾವಿನೊಂದಿಗೆ ಸೆಣಸಾಡಿ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಈ ಲೋಕವನ್ನು ತ್ಯಜಿಸಿ ದೂರ ಹೊರಟುಹೋದ .

ದೇವರೇ ಈ ಸಾವು ನ್ಯಾಯವೇ ? ಖಂಡಿತವಾಗಿ ನ್ಯಾಯವಲ್ಲ . ಎಷ್ಟೋ ವರುಷಗಳು ಹಂಬಲಿಸಿದ ನಂತರ ಅವರಿಗೆ ಒಂದು ಹೆಣ್ಣು ಮಗು ನೀಡಿದೆ. ಎಲ್ಲವೂ ಸರಿಯಾಯಿತು ಜೀವನ ಎಷ್ಟು ಸುಂದರ ಎಂದು ಅಂದುಕೊಳ್ಳುವುದರಲ್ಲೇ ಆ ಮಗುವನ್ನೂ ಕಿತ್ತುಕೊಂಡೆ . ಅಲ್ಲಾ ಯಾವುದೇ ಕಪಟವನ್ನೂ ಅರಿಯದ ,ಜಗತ್ತನ್ನೂ ಇನ್ನೂ ಸರಿಯಾಗಿ ಕಣ್ಣು ಬಿಟ್ಟು ನೋಡದ, ಯಾವ ಪಾಪವನ್ನೂಮಾಡದ ಆ ಪುಟ್ಟ ಜೀವದ ತಪ್ಪೇನು ? ಕಿತ್ತುಕೊಳ್ಳಬೇಕೆಂದು ನೀನು ಮೊದಲೇ ನಿರ್ಧರಿಸಿದ್ದರೇ ಅಷ್ಟು ವರುಷಗಳ ನಂತರ ಯಾಕೆ ಆ ಕ್ಷಣಿಕ ಸಂತೋಷ ನೀಡಿದೆ ?

ತನ್ನ ಚಿಕ್ಕ ವಯಸ್ಸಿನಲ್ಲಿಯೇ ಮಗುವನ್ನೂ ,ಗಂಡನನ್ನೂ ಕಳೆದುಕೊಂಡು ಈಗಲೂ ಆಸ್ಪತ್ರೆಯಲ್ಲಿ ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ಆ ಹೆಣ್ಣು ಸರ್ವಸ್ವವನ್ನೂ ಕಳೆದುಕೊಂಡು ಬಾಳುವುದಾದರೂ ಹೇಗೆ?ವಿಧಿ ಕ್ರೂರವೆಂದು ಎಲ್ಲರಿಗೂ ಗೊತ್ತು ಆದರೆ ಇಷ್ಟೊಂದು ಕ್ರೂರವಾಗಲು ಸಾಧ್ಯವೇ

ನಿನ್ನ ವಾಯಲಿನ್ ನ ಕಲರವ ಇಲ್ಲದೆ ಸಂಗೀತಲೋಕ ರೋದಿಸುತ್ತಿದೆ . ಬಾಲ ಭಾಸ್ಕರ ಸಾಧ್ಯವಾದರೆ ಮತ್ತೊಮ್ಮೆ ಹುಟ್ಟಿ ಬಾ. ಗೆಳೆಯ ನಿನಗಿದೋ ಅಶ್ರುತರ್ಪಿತ ಅಂತಿಮ ವಿದಾಯ

 

Leave a Reply