ಮೀಟ್ Mr. ಕಾಳ

ಕವಿತೆ, ಅನುವಾದ, ಪ್ರಬಂಧಗಳ ಮೂಲಕ ಈಗಾಗಲೇ ಸಾಕಷ್ಟು ಹೆಸರಾಗಿರುವ ಎಂ ಆರ್ ಕಮಲ ಈಗ ಮತ್ತೊಂದು ಪುಸ್ತಕ ಹಿಡಿದು ನಿಂತಿದ್ದಾರೆ.

ಈ ಪುಸ್ತಕ ಯಾವಾಗ? ಎಂದು ಓದುಗರು ಮೇಲಿಂದ ಮೇಲೆ ಕೇಳುವಷ್ಟು ಈ ಪುಸ್ತಕ.. ಅಲ್ಲ, ಪುಸ್ತಕದ ನಾಯಕ ಜನಪ್ರಿಯ

ಎಂ ಆರ್ ಕಮಲ ಅವರ ನಾಯಿ (ಈ ಶಬ್ದ ಬಳಸಬಹುದೋ ನಾಯಿ ಸಾಕಿಲ್ಲದ ನಮಗೆ ಗೊತ್ತಿಲ್ಲ) ಈ ಕೃತಿಯ ಹೀರೋ

ಈ ಕೃತಿಯ ಬಗ್ಗೆ ಎಲ್ಲರಂತೆ ಕುತೂಹಲ ಹೊಂದಿದ್ದ ಅವಧಿ’ ಕಮಲ ಅವರನ್ನು ಕಾಳ ಹೇಗೆ ನಿಮ್ಮ ಕೃತಿಯ ನಾಯಕನಾದ? ಎಂದು ಕೇಳಿತು

ಇಲ್ಲಿದೆ ಎಂ ಆರ್ ಕಮಲ ಅವರು ಆತ್ಮೀಯತೆಯಿಂದ ಬಿಡಿಸಿಟ್ಟ ಚಿತ್ರ..

ಕಾಳನಾಮ ಚರಿತೆ!

(ಇದೇ ತಿಂಗಳು 27 ರಂದು ಮನೆಯಲ್ಲೇ ಕಾಳನ  ಬಗ್ಗೆ ಬರೆದ `ಕಾಳನಾಮ ಚರಿತೆ’ ಬಿಡುಗಡೆಯಾಗುತ್ತಿದೆ.)

ಎಂ. ಆರ್. ಕಮಲ

ಕಾಳನ ಬಗ್ಗೆ ಪುಸ್ತಕ ಬರೆಯುವುದಿರಲಿ ಅವನನ್ನು ನಮ್ಮ ಕುಟುಂಬದ ಒಬ್ಬ ಸದಸ್ಯ ಎಂದು  ಒಪ್ಪಿಕೊಳ್ಳುವುದಕ್ಕೆ ನನಗೆ ಮೂರು-ನಾಲ್ಕು ತಿಂಗಳುಗಳು ಹಿಡಿಯಿತು.

ನಿವೃತ್ತಿಯ ಅಂಚಿನಲ್ಲಿದ್ದ ನಾನು  ಹೊಸ ಜವಾಬ್ದಾರಿಗಳನ್ನು ಬಿಲ್ ಕುಲ್  ಹೊರಲು ಸಿದ್ಧವಿರಲಿಲ್ಲ. ಒಂದು ನಾಯಿಯನ್ನು ಸಾಕುವುದೆಂದರೆ ಮಗುವನ್ನು ಸಾಕಿದಂತೆ ಎನ್ನುವುದು ಚೆನ್ನಾಗಿ ತಿಳಿದಿತ್ತು.

ಚಿಕ್ಕವಳಿದ್ದಾಗ ಬೀದಿಯಲ್ಲಿ ಸಿಕ್ಕ ನಾಯಿಗಳನ್ನೆಲ್ಲ ತಂದು ಅಂತಃಕರಣಿ ಅಮ್ಮನಿಗೆ ಕಟ್ಟಿ, ಕೊಟ್ಟ ಹಿಂಸೆಯನ್ನು ಇವತ್ತಿಗೂ ಮರೆಯುವುದಕ್ಕೆ ಸಾಧ್ಯವಾಗಿಲ್ಲ.

ಆದರೆ ಮಗಳು ನಾನು ಮಾಡಿದ್ದನ್ನೇ ಮಾಡಿ ಮುಯ್ಯಿ ತೀರಿಸಿದಳು!  ಹಟ  ಮಾಡಿ,  ಇಪ್ಪತ್ತು ದಿನಗಳ ಕಪ್ಪು ಬಣ್ಣದ ಲ್ಯಾಬ್ರಡಾರ್ ನಾಯಿ ಮರಿಯೊಂದನ್ನು ಅದೆಲ್ಲಿಂದಲೋ ಮನೆಗೆ ತಂದೇ ಬಿಟ್ಟಳು! ತರುತ್ತೇನೆ ಎಂದು ಹೇಳಿದ ದಿನ  ಅವಳೊಂದಿಗೆ ಕರಾರೊಂದನ್ನು ಮಾಡಿಕೊಂಡಿದ್ದೆ. ಮದುವೆಯ ನಂತರ ಅವಳದನ್ನು ತನ್ನ ಗಂಡನ ಮನೆಗೆ ಕಡ್ಡಾಯವಾಗಿ  ಕರೆದುಕೊಂಡು ಹೋಗಬೇಕು!

ಇಡೀ ದಿನ ಅವಳ ಬಳಿಯೇ ಇರುತ್ತಿದ್ದ ನಾಯಿಮರಿಯನ್ನು ನಾನು ನೋಡಿದರೂ ನೋಡದಂತಿರುತ್ತಿದ್ದೆ. ಹಚ್ಚಿಕೊಳ್ಳುವುದು ಮೆಚ್ಚಿಕೊಳ್ಳುವುದು ಈ ಯಾವುದೂ ಘಟಿಸದಂತೆ  ಅತಿಯಾದ ಎಚ್ಚರ ವಹಿಸುತ್ತಿದ್ದೆ. ಆದರೇನಾಯಿತು? ಇವಳು ಸಂಗೀತ ಕಾರ್ಯಕ್ರಮ ಎಂದು ಅಲೆಯತೊಡಗಿದಳು. ಸುಮ್ಮನೆ ತನ್ನ ಪಾಡಿಗೆ ತಾನು ಪಾಪದವನಂತೆ ಮಂಕಾಗಿ ಕುಳಿತಿರುತ್ತಿದ್ದ `ಮರಿಕಾಳ’ ನನ್ನ ಹೃದಯ ಹಿಂಡತೊಡಗಿದ.

ಕೊನೆಗೆ  ತಾತ್ಸಾರ, ಕೋಪದ ಮುಸುಕನ್ನು ತೆಗೆದು ಮುದ್ದಿಸತೊಡಗಿದೆ. ಊಟ ಬಡಿಸಿದೆ, ವಾಕ್ ಕರೆದುಕೊಂಡು ಹೋಗಲು ಆರಂಭಿಸಿದೆ. ಆದರೂ ನನಗಿವನು ಬೇಕಿರಲಿಲ್ಲ ಎಂದೇ ಮನಸ್ಸು ಚೀರುತ್ತಿತ್ತು. ಯಾರಿಗಾದರೂ ಕೊಟ್ಟುಬಿಡೋಣ ಎಂದು ಮಗಳನ್ನು  ಒಪ್ಪಿಸಲು ನೋಡಿದೆ. ಅವಳಂತೂ ಬಗ್ಗಲಿಲ್ಲ.

ಹೀಗಿದ್ದಾಗ  ನನಗೆ  ವೀಣೆ ಹೇಳಿಕೊಡುತ್ತಿದ್ದ  ವಾಣೀ ಮೇಡಂ ಅವರು ಒಮ್ಮೆ ಅಮೇರಿಕೆಯಿಂದ ಮನೆಗೆ ಬಂದಿದ್ದರು. ಬರುವಾಗ ಕಾಳನಿಗೆ ಕೆಲವು  ಉಡುಗೊರೆಗಳನ್ನು ತಂದಿದ್ದರು. ನನ್ನ ಸಂಕಷ್ಟವನ್ನು ಅವರೊಂದಿಗೆ ಹಂಚಿಕೊಂಡಾಗ, `ಕಮಲ, ಸಾಯೋತನಕ ಮಗುವಾಗಿ ಉಳಿಯೋದು ಈ ನಾಯಿಯೊಂದೇ, ಮಕ್ಕಳಲ್ಲ, ಬೇಸರ ಮಾಡಿಕೊಳ್ಳಬೇಡಿ’ ಎಂದು ಒತ್ತಿ ಹೇಳಿದರು.

ನಾನು ಕಾಳನನ್ನು ನೋಡುವ ದೃಷ್ಟಿಯನ್ನು ಸ್ವಲ್ಪ ಮಟ್ಟಿಗೆ ಬದಲಿಸಿಕೊಂಡೆ. ಸಂಜೆಯ ಸಮಯದಲ್ಲಿ ಎರಡು ಬಾರಿ ಕಾಳನನ್ನು ವಾಕಿಂಗ್ ಕರೆದೊಯ್ಯುವ ಹೊಣೆ ನಾನಾಗಿಯೇ ಹೊತ್ತುಕೊಂಡೆ. ಈ ಮಧ್ಯೆ ಮಗಳ ಮದುವೆಯಾಯಿತು. ಮಗಳ ಗೈರು ಹಾಜರಿಯಲ್ಲಿ ಕಾಳ ನನಗೆ ಹೆಚ್ಚು ಹೆಚ್ಚು ಹತ್ತಿರವಾಗತೊಡಗಿದ. ಕಾಳನನ್ನು ಅವಳ ಮನೆಗೆ ಕಳಿಸಲು ನಾನೇ ಒಪ್ಪದಂಥ ಸ್ಥಿತಿಯಾಯಿತು.

ಕೆಲಸದಿಂದ ಮನೆಗೆ ಬಂದು ಸಂಜೆ ಕಾಳನೊಂದಿಗೆ ವಾಕಿಂಗ್ ಹೋಗುವ ಸಮಯದಲ್ಲಿ ನಡೆಯುತ್ತಿದ್ದ ಸುತ್ತಲಿನ ಅನೇಕ ವಿಷಯಗಳು ನನ್ನ ಕುತೂಹಲವನ್ನು ಕೆರಳಿಸುವಂತಿದ್ದವು. ಕಾಳನ ನೆವದಿಂದಲೇ ಅನೇಕ ಬಾರಿ ಜಗಳಗಳಾದವು. ಹಲವರೊಂದಿಗೆ ಆತ್ಮೀಯತೆ ಬೆಳೆಯಿತು. ಮನೆಗೆ ಬಂದ ಮೇಲೆ ಇವೆಲ್ಲವನ್ನೂ ಮೊಗಹೊತ್ತಿಗೆಯಲ್ಲಿ ಬರೆಯುತ್ತ ಹೋದೆ. ಅಚ್ಚರಿಯೆಂದರೆ ಈ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ಅಪಾರ.

ನಾನು ಕಾಳನ ಬಗ್ಗೆ ಬರೆಯದಿದ್ದರೆ ಅನೇಕರು `ಯಾಕೆ’ ಎಂದು ವಿಚಾರಿಸತೊಡಗಿದರು. ದಾರಿಯಲ್ಲಿ ಸಿಕ್ಕವರು ಕಾಳನ ಮೂಲಕ ನನ್ನನ್ನು ಗುರುತು ಹಿಡಿಯತೊಡಗಿದರು. ಅವನನ್ನು  ನೋಡುವ ಸಲುವಾಗಿಯೇ ಅನೇಕರು ಮನೆಗೆ ಬಂದರು. ಆತ್ಮೀಯರಾದ ಅನುರಾಧ ಮೇಡಂ ಮತ್ತು ಅವರ ಮಗಳು ಭಾನುಮತಿ ಕಾಳನಿಗೆಂದು ವಿದೇಶದಿಂದ ಉಡುಗೊರೆ ತಂದುಕೊಟ್ಟರು. (ಈ ಉಡುಗೊರೆ ತರುವ ಮೊದಲೇ ಪುಸ್ತಕ ಪ್ರಿಂಟಿಗೆ ಹೋಗಿದ್ದರಿಂದ ಅಲ್ಲಿ ದಾಖಲಿಸಲಾಗಲಿಲ್ಲವೆಂದು ಇಲ್ಲಿ ಬರೆಯುತ್ತಿದ್ದೇನೆ)

ಕಾಳನನ್ನು ಕರೆದುಕೊಂಡು ಹೋಗುತ್ತಿದ್ದುದು ಮೂರು ಬೀದಿಗಳಲ್ಲಿ. ಆದರೆ ಅಲ್ಲಿ ಕಂಡ ದೃಶ್ಯಗಳು ಒಂದೇ ಎರಡೇ? ನಾಯಿಯನ್ನು ಸದಾ ಬೈಯುವ ಪೂಜಾರಿ, ಮಕ್ಕಳನ್ನು ಕೂಡಿಹಾಕಿಕೊಂಡು ಟ್ಯೂಷನ್ ಹೇಳುವ ಮೇಡಂ, ಹುಚ್ಚು ಕುಣಿತದ ಮಕ್ಕಳು, ಬೀದಿಯಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಯಾರನ್ನೋ ಬೈದುಕೊಂಡು ಓಡಾಡುವ ಹುಚ್ಚಿ, ಬ್ಯಾಟ್ ಹಿಡಿದುಕೊಂಡು ಜಗಳಕ್ಕೆ ಬರುವ ಹುಡುಗ, ನಾಯಿಯೊಂದಿಗೆ ಅಲೆದಾಡುವ ಅರೆಹುಚ್ಚ, ಹೂಗಳ್ಳಿ, ನೂರಾರು ಬಗೆಯ ಗಿಡ, ಮರ, ಹೂವು, ಹಣ್ಣುಗಳು, ಮಗನಿಗಾಗಿ ಹಂಬಲಿಸುವ ಮುದಿಜೀವ, ವಿಚಿತ್ರ ನಾಯಿಗಳನ್ನು ಹಿಡಿದುಕೊಂಡು ಬರುವ ಮಂದಿ, ಹೋಟೆಲ್, ಅಂಗಡಿಯ ಜನರು, ಅರಳಿ ಕಟ್ಟೆಗೆ ಪ್ರದಕ್ಷಿಣೆ ಹಾಕುವ ಹೆಣ್ಣುಮಕ್ಕಳು, ಗಿಡ ಕಡಿಯುವ ಜನ ಒಂದು ಕಡೆಯಾದರೆ, ರಸ್ತೆಯಲ್ಲಿ ಗಿಡ ನೆಟ್ಟು ನೀರೆರೆಯುವ ಜನ ಮತ್ತೊಂದು ಕಡೆ.ನಾಯಿ ಕಂಡರೆ ಎಗರಿ ಬೀಳುವವರು, ಬಂದು ಮುದ್ದಿಕ್ಕುವವರು, ಬೀದಿಯಲ್ಲಿಯೇ ಒಲೆ ಹೂಡಿ ವಾಸ ಮಾಡುವ ಕಟ್ಟಡ ಕಾರ್ಮಿಕರು ಹೀಗೆ…

…ಪ್ರತಿನಿತ್ಯ ಪಾರಿವಾಳಗಳಿಗೆ ಧಾನ್ಯ ಎರಚುವ ಒಬ್ಬ ವ್ಯಕ್ತಿಯೊಂದಿಗೆ ದಿನನಿತ್ಯ ಒಂದೆರಡು ನಿಮಿಷ ಮಾತಾಡುತ್ತೇನೆ. ಮಕ್ಕಳೆಲ್ಲ ವಿದೇಶದಲ್ಲಿದ್ದಾರೆ. ಕಾಳನಿಗೆ ಬ್ರೆಡ್ ತಿನ್ನಿಸುವ, ಹಕ್ಕಿಗಳಿಗೆ ಕಾಳು ಹಾಕುವ, ಹಣ್ಣುಬಿಟ್ಟ ಗಿಡಮರಗಳ ಫೋಟೋ ಇತ್ಯಾದಿಗಳನ್ನು ತೆಗೆದುಕೊಂಡು ಖುಷಿಯಿಂದ ಮಕ್ಕಳಿಗೆ ಕಳಿಸುತ್ತಾರೆ. ತಮ್ಮ ಪಾಡಿಗೆ ಸಂತಸದ ನೂರು ಮಾರ್ಗಗಳನ್ನು ಹುಡುಕಿಕೊಂಡು ಬದುಕಿನ ಬವಣೆಗಳ ದಾಟುತ್ತಿರುವ ಈ ಮಂದಿ ನನ್ನ ಬದುಕಿನ ದೃಷ್ಟಿಕೋನವನ್ನು ಬದಲಿಸಿದ್ದಾರೆ.

ಒಂದು ವರ್ಷದ ಅವಧಿಯಲ್ಲಿ ಬರೆದಿರುವ ಈ ಹಗುರ ಹರಟೆಯ ಹಂದರಕ್ಕೆ ಎಷ್ಟೊಂದು ಜನರು ಕೂಡಿಕೊಂಡರು. ಬಾಂಧವ್ಯದ  ಹೆಣಿಗೆಯನ್ನು ಒತ್ತೊತ್ತಾಗಿ  ನೇಯ್ದು ಒಂದು ಅಪೂರ್ವವಾದ ಜೀವನ ದರ್ಶನ ಕಟ್ಟಿಕೊಟ್ಟರು. ಕಾಳ ನನ್ನನ್ನು ತೊರೆದರೂ ನಾನವನನ್ನು ತೊರೆಯಲಾರೆ ಎನ್ನುವಂತಾಗಿ ಬಿಟ್ಟಿದೆ ನನ್ನ ಸ್ಥಿತಿ. ನನ್ನನ್ನು  ಬದುಕಿಗೆ ಕಟ್ಟಿ ಹಾಕಿ ಜೀವನ ಪ್ರೀತಿಯನ್ನು ದಟ್ಟ ಮಾಡುತ್ತಿರುವ ಕಾಳನಿಗೆ ಸದಾ ಋಣಿಯಾಗಿದ್ದೇನೆ.

2 comments

  1. ಅಭಿನಂದನೆಗಳು ಕಮಲಾ!..
    ನನ್ನ ಮಾತಿಗೆ ಬೆಲೆಯಿತ್ತು, ಮುದ್ದು ಕಾಳು ಮರಿ ನಿಮ್ಮನ್ನು ಆವರಿಸಿಕೊಳ್ಳಲು ಅನುಗೊಳಿಸಿದ ನಿಮ್ಮ ಹೃದಯ ವೈಶಾಲ್ಯತೆಗೆ ಹಾಗೂ ನಿಮ್ಮ ಸುತ್ತಲಿನ ಪ್ರಪಂಚವನ್ನು ಮತ್ತಷ್ಟು ವಿಶಾಲಗೊಳಿಸಿದ ಕಾಳುವಿಗೆ – ಪ್ರೀತಿಯಿಂದ..

Leave a Reply