ನಾಗೇಂದ್ರ ಶಾ ಕಂಡ ‘ಕಾತ್ಯಾಯಿನಿ’

ಸಂಕೇತ್ ಗುರುದತ್ತ

ಸಿದ್ಧ ನಾಟಕವನ್ನು ರಂಗಕ್ಕೆ ತರುವುದು ಒಂದು ಕ್ರಮವಾದರೆ ಕತೆ, ನೀಳ್ಗತೆ, ಕಾದಂಬರಿಯನ್ನು ರಂಗಕ್ಕೆ ಅಳವಡಿಸುವುದು ಮತ್ತೊಂದು ಕ್ರಮ. ಮೂಲ ಕತೆಗೆ ದಕ್ಕೆ ಆಗದಂತೆ ದೃಶ್ಯೀಕರಿಸಿ ರಂಗಕ್ಕೆ ತರುವುದು ಅಷ್ಟು ಸುಲಭವೇನಲ್ಲ. ಇಂತಹ ಪ್ರಯತ್ನವನ್ನು ಕನ್ನಡ ರಂಗಭೂಮಿಯ ಹಿನ್ನೆಲೆಯಲ್ಲಿ ಬೆಳೆದು ಪಳಗಿದ ಖ್ಯಾತ ನಟ, ನಿರ್ದೇಶಕ ನಾಗೇಂದ್ರ ಶಾ ಮಾಡಿದ್ದಾರೆ. ‘ಮಾಮನ ರಂಗ ತಾಣ’ ತಂಡಡಾ ಪ್ರಯೋಗ ಇದು.

ಕನ್ನಡ ರಂಗಭೂಮಿಯಲ್ಲೇ ಹೊಸ ಸಂಚಲನವನ್ನು ಉಂಟು ಮಾಡಿರುವ, ಸಂಭಾಷಣೆಯಲ್ಲೇ ಪ್ರೇಕ್ಷಕರನ್ನು ಹಿಡಿದಿಡಬಲ್ಲ ಹಿರಿಯ ರಂಗಕರ್ಮಿ ಎಸ್ ಎನ್ ಸೇತೂರಾಮ್ ಅವರ `ಕಾತ್ಯಾಯಿನಿ’ ನೀಳ್ಗತೆಯ ಪ್ರಯೋಗವು ಅಕ್ಟೋಬರ್‍ನ 4ರಂದು ಕೆ ಎಚ್ ಕಲಾಸೌಧದಲ್ಲಿ ಪ್ರದರ್ಶನ ಕಂಡಿತ್ತು. ತುಂಬಿದ ಗೃಹದಲ್ಲಿ ಪ್ರದರ್ಶನ ಕಂಡಿದ್ದಲ್ಲದೇ ಸಹೃದಯ ಪ್ರೇಕ್ಷಕರನ್ನು ರಂಜಿಸಿ ಯಶ ಕಂಡಿದೆ.

ತಾವೇ ನಾಟಕವನ್ನು ರಚಿಸಿ, ನಿರ್ದೇಶಿಸಿ, ನಟಿಸುವ ಮೂಲಕ ತಮ್ಮದೇ ಆದ ಒಂದು ವರ್ಗದ ಪ್ರೇಕ್ಷಕರನ್ನು ಸೇತೂರಾಮ್ ಸೃಷ್ಟಿಸಿಕೊಂಡಿದ್ದಾರೆ. ಅವರ ಕತೆ ಕಟ್ಟುವ ರೀತಿ, ಕತೆಯನ್ನು ಹೇಳುವ ರೀತಿಯೇ ವಿಭಿನ್ನ. ತಮ್ಮದೇ ರಚನೆಯ ನಾಟಕಗಳಾದ `ನಿಮ್ಮಿತ್ತ’ ಹಾಗೂ `ಗತಿ’ಯನ್ನು ಪುಸ್ತಕರೂಪದಲ್ಲಿ ತಂದಿದ್ದರು. ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಹಾಗೂ ಓದುಗರ ಪ್ರೋತ್ಸಾಹಕ್ಕೆ ಮಣಿದ ಸೇತೂರಾಮ್ ಒಂದೇ ಪುಸ್ತಕದ ಕರ್ತೃವಾಗಿ ಉಳಿಯದೇ `ನಾವಲ್ಲ’ ಎಂಬ ಕಥಾಗುಚ್ಚವನ್ನು ಹೊರ ತಂದರು.

ಈ `ನಾವಲ್ಲ’ ಪುಸ್ತಕದಲ್ಲಿನ ನೀಳ್ಗತೆಯೇ `ಕಾತ್ಯಾಯಿನಿ’. ಈ ನಾಟಕದ ಮೂಲ ವಸ್ತು. ಸೇತೂರಾಮ್ ಅವರ ಎಲ್ಲಾ ನಾಟಕವನ್ನು ನೋಡಿದವರಿಗೆ ಈ `ನಾವಲ್ಲ’ ಪುಸ್ತಕವು ಓದುವ ಪುಸ್ತಕ ಎನಿಸದೇ `ಕೇಳಿಸಿಕೊಳ್ಳುವ ಪುಸ್ತಕ’ (ಆಡಿಯೋ ಬುಕ್) ಎನಿಸುತ್ತದೆ. ಸೇತೂರಾಮ್ ಅವರೇ ಪಕ್ಕದಲ್ಲಿ ಕೂತು ಕತೆ ಹೇಳಿದಂತಹ ಅನುಭವ ಆಗುತ್ತದೆ.

ಅವರ ಎಲ್ಲಾ ನಾಟಕಗಳಂತೆಯೇ ಈ ಕತೆಯೂ ವಿಭಿನ್ನವಾಗಿದ್ದು ಇಲ್ಲಿ `ಕಾತ್ಯಾಯಿನಿ’ ಪಾತ್ರದ ಮೂಲಕ ಎಲ್ಲಾ ಕಾಲದ ಹೆಣ್ಣಿನ ಎಲ್ಲಾ ಆಯಾಮಗಳನ್ನು ಒಂದೇ ಕತೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಬಡತನದ ಮನೆಯಲ್ಲಿ ಹುಟ್ಟಿದ ಹೆಣ್ಣು ಮಗಳ ಕತೆಯನ್ನು ಕಟ್ಟುತ್ತಾ ಸಮಾಜದಲ್ಲಿನ ಹೆಣ್ಣಿನ ಯಥಾಸ್ಥಿತಿಯನ್ನು ನೇರವಾಗಿ ಯಾವುದೇ ಮುಜುಗರವಿಲ್ಲದೇ ಸತ್ಯವನ್ನು ನಿಷ್ಠೂರವಾಗಿ ಹೇಳುವ ಮೂಲಕ ಕಟ್ಟಿಕೊಟ್ಟಿದ್ದಾರೆ.

ಕಾತ್ಯಾಯಿನಿಯ ಅಪ್ಪ ಅಡುಗೆಯವನು, ಅಮ್ಮ ಒಬ್ಬ ಶ್ರೀಮಂತರ ಮನೆಯಲ್ಲಿ ಕೆಲಸದವಳು. ಆ ಶ್ರೀಮಂತ ದಂಪತಿಗಳ ಒಬ್ಬನೇ ಮಗ ವಿಶ್ವನಾಥ. ಅವನಿಗೆ ಕಾತ್ಯಾಯಿನಿಯನ್ನು ಕಂಡರೆ ತುಂಬಾ ಇಷ್ಟ. ಪ್ರೀತಿಸುತ್ತಿದ್ದರೂ `ನನ್ನನ್ನು ಮದುವೆಯಾಗುವೆಯಾ ಕಾತ್ಯಾಯಿನಿ’ ಎಂದು ಕೇಳದೇ ಮನದಲ್ಲೇ ಮಂಡಿಗೆ ತಿನ್ನುವ ಅಸಾಮಿ. ಆ ವಿಶ್ವನಾಥನನ್ನು ಇಷ್ಟಪಟ್ಟರೂ ಹೆಣ್ಣಾದ ಕಾರಣ `ತನ್ನನ್ನು ಮದುವೆಯಾಗು ವಿಶ್ವನಾಥ’ ಎಂದು ಪ್ರಸ್ತಾಪಿಸದೇ ಹೋಗುವ ಕಾತ್ಯಾಯಿನಿ.

ಹೀಗೆ ಆರಂಭವಾಗುವ ಕತೆಯಲ್ಲಿ ಕಾತ್ಯಾಯಿನಿಯ ಬದುಕು ಹಲವು ದಾರಿಗಳನ್ನು ಹಿಡಿಯುತ್ತದೆ. ಆ ಕತೆಯಲ್ಲಿನ ಎಡವಟ್ಟುಗಳನ್ನು ಸರಿ ಪಡಿಸಿಕೊಳ್ಳಲು ಮತ್ತೆ ಅದೇ ವಿಶ್ವನಾಥನನ್ನು ಆಶ್ರಯಿಸುತ್ತಾಳೆ. ಕಾತ್ಯಾಯಿನಿಯ ಗಂಡ, ಅವನ ಬಾಯ್ ಫ್ರೆಂಡ್! ವಿಕಲಚೇತನ ಮಗು, ಲಂಚ ಋಷುವತ್ತು, ಕೇಸುಗಳು. ಆ ಕೇಸುಗಳನ್ನು ಗೆಲ್ಲಿಸಲು ವಿಶ್ವನಾಥನ ಮೊರೆ ಹೀಗೆ ಸಿಕ್ಕುಗಳಲ್ಲೇ ಜೀವನವನ್ನು ಸವೆಸುವ ಕಾತ್ಯಾಯಿನಿಯ ಬದುಕಿನ ಚಿತ್ರಣವನ್ನು ಕಟ್ಟಿಕೊಡಲಾಗಿದೆ.

ಈ ಕತೆಯಲ್ಲಿ ಬರುವ ಸನ್ನಿವೇಶಗಳು ಹಾಗೂ ಇಲ್ಲಿ ಬರುವ ವಿಕಲಚೇತನ ಮಗುವಿನ ಪಾತ್ರ ಪೋಷಣೆಯನ್ನು ನಿರ್ದೇಶಕರು ಸಮರ್ಪಕವಾಗಿಯೇ ನಿರ್ವಹಿಸಿದ್ದಾರೆ. ಈ `ಕಾತ್ಯಾಯಿನಿ’ ಕತೆ ಹಾಗೂ ಅದನ್ನು ರಂಗಕ್ಕೆ ತಂದಿರುವ ಕ್ರಮ ಕನ್ನಡ ರಂಗಭೂಮಿಯಲ್ಲಿ ಹೊಸ ಪ್ರಯೋಗ ಎನ್ನಬಹುದು. ಇಲ್ಲಿ ಸಂಭಾಷಣೆಯೇ ಮುಖ್ಯಪಾತ್ರವಹಿಸುತ್ತದೆ. ಆದರೆ ದೃಶ್ಯ ಮಾಧ್ಯಮಕ್ಕೆ ಹೆಚ್ಚು ಒತ್ತುಕೊಡಬೇಕಾಗಿರುವುದರಿಂದ ನಿರ್ದೇಶಕರು ಇಬ್ಬರು ನಿರೂಪಕರನ್ನು ಸೃಷ್ಟಿಸಿ ಕತೆಯನ್ನು ಅವರ ಮೂಲಕ ಹೇಳಿಸಿದ್ದಾರೆ. ಸಂಭಾಷಣೆ ಇಲ್ಲದ ಕಡೆಯೂ ಮೌನವೇ ಮಾತಾಡಿ ಮನದೊಳಗೆ ಕೋಲ್ಹಾಕಿ ಕಲಕಿತು. ಆಗಾಗ ತಿಳಿಯದಂತೆಯೇ ಮನಕರಗಿ ಕಣ್ಣಂಚಲಿ ನೀರಾಡಿದ್ದು ನಿಜ. ಕತೆಗಾರರ ಮನಮುಟ್ಟುವ ಕತೆಯನ್ನು ಅಷ್ಟೇ ಸಮರ್ಪಕವಾಗಿ ನೋಡುಗ ಪ್ರೇಕ್ಷಕರಿಗೆ ದಾಟಿಸಿದ್ದಾರೆ.

ನಾಟಕ ಆರಂಭದಲ್ಲೇ ಬರುವ ಸಂಭಾಷಣೆಯಾದ `ಡೈವೊರ್ಸ್ ಅನ್ನು ನಿಷ್ಕ್ರಿಯಗೊಳಿಸಿ ಗಂಡ-ಹೆಂಡತಿ ಮತ್ತೆ ಒಂದಾಗಲು ಕಾನೂನಿನ ಚೌಕಟ್ಟಲ್ಲಿ ಯಾವುದೇ ಕಾನೂನು ಇಲ್ಲವೇ’ ಎಂಬಂತಹ ಮಾತು ಬಹುಶಃ ಯಾವ ಪ್ರೇಕ್ಷಕನೂ ಊಹಿಸಿರಲಾರ! ಇಂತಹ ಹಲವು ಮಾತುಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಹೆಣ್ಣಿನ ಮನದಾಳದ ನೋವಿಗೆ ಸೇತೂರಾಮ್ ಮಾತು ಕೊಟ್ಟಿದ್ದಾರೆ. ಕಾತ್ಯಾಯಿನಿಯಾಗಿ ಹರಿಣಿ ಶ್ರೀಕಾಂತ್, ಲಾಯರ್ ವಿಶ್ವನಾಥ್ ಆಗಿ ಅಲಕನಂದ ಶ್ರೀನಿವಾಸ್, ನಿರೂಪಕರಾಗಿ ಮಾಧುರಿ ಕೆ ಶಿವಣಗಿ ಹಾಗೂ ಜಗದೀಶ್ ಜಾಲಾ ನಟಿಸಿದ್ದಾರೆ. ವಿಕಲಚೇತನ ಮಗುವಾಗಿ ಶ್ರೇಯಸ್ ಕಶ್ಯಪ್ ವಿಶೇಷವಾಗಿಯೇ ನಟಿಸಿ ಹೀಗೂ ನಟಿಸಬಹುದೆಂದು ತೋರಿಸಿಕೊಟ್ಟಿದ್ದಾರೆ. ಕಲ್ಪನಾ ನಾಗನಾಥ್, ಕೃತಿ ಬೆಟ್ಟದ್, ಶ್ರೀಧರ್ ಹಾಗೂ ಇತರರು ನಾಟಕದ ಓಘಕ್ಕೆ ಸಾಥ್ ನೀಡಿದ್ದಾರೆ.

ಕನ್ನಡದ್ದೇ ಕತೆಯನ್ನು ಕತೆಯಷ್ಟೇ ಅಚ್ಚುಕಟ್ಟಾಗಿ ರಂಗಪ್ರಯೋಗವಾಗಿಸಿದ ನಾಗೇಂದ್ರ ಶಾ ಅವರ ಪ್ರಯೋಗವನ್ನು ಸ್ವತಃ ಸೇತೂರಾಮ್ ಅವರೇ ಮೆಚ್ಚಿದ್ದಾರೆ. ಮೆಚ್ಚಿದ್ದಲ್ಲದೇ ತಾವೇ ಸೃಷ್ಟಿಸಿದ ಪಾತ್ರಗಳು ತಮ್ಮದೇ ಸಂಭಾಷಣೆಯನ್ನು ಪ್ರೇಕ್ಷಕರ ಮುಂದೆ ಒಪ್ಪಿಸುವ ಪರಿಯನ್ನು ಆಲಿಸಿ, ಅನುಭವಿಸಿ ಆದ್ರ್ರರಾಗಿ ಗದ್ಗದಿತರಾಗಿದ್ದು ಕೂಡ ನಾಟಕ ಪ್ರದರ್ಶನಕ್ಕೆ ಪ್ಲಸ್ ಆಗಿತ್ತು ಎನ್ನಲ್ಲಡ್ಡಿಯಿಲ್ಲ.

Leave a Reply