ಪೋಯೆಟ್ ಆಫ್ ದಿ ವೀಕ್: ಸಹನಾ ಹೆಗಡೆ

ಕವಿತೆ ಬಂಚ್ – ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

                                      ಸಹನಾ ಹೆಗಡೆ

ಹುಟ್ಟಿದ್ದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಬಳಿ ಕಿಲಾರ. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಮದುವೆ, ಮನೆಮಕ್ಕಳು ಹೀಗೆ ಒಂದೂವರೆ ದಶಕದ ಕಾಲ ದೂರದ ಗುಜರಾತಿನಲ್ಲಿ ವಾಸ.

ಕುವೆಂಪು ವಿಶ್ವವಿದ್ಯಾನಿಲಯದಿಂದ ದೂರಶಿಕ್ಷಣದ ಮೂಲಕ ಕೌನ್ಸೆಲಿಂಗ್‌ ಮತ್ತು ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ.

ಸದಾ ಪೋಷಿಸಿಕೊಂಡು ಬಂದಿದ್ದ ಓದು- ಬರಹಗಳಿಗೆ, ಬೆಂಗಳೂರಿಗೆ ಮರಳಿದ ನಂತರ, ಆಗೀಗ ಕಿರು ಬಿಸಿಲ ಸ್ನಾನ. ಸಾಹಿತ್ಯ ಆಸಕ್ತಿಯ ಕ್ಷೇತ್ರ, ಅಭಿವ್ಯಕ್ತಿಯ ದಾರಿ.

‘ಸೂರ್ಯನ ನೆರಳು’ ಎಂಬುದು ಪ್ರಕಟಿತ ಅನುವಾದಿತ ಕೃತಿ ಮೂಲ: ಕ್ಲಾರಾ ಗ್ಲೋವ್ಸೆಸ್ಕಾ ಅವರಿಂದ ಶಾಡೋ ಆಫ್ ದ ಸನ್ ಎಂಬ ಹೆಸರಿನಲ್ಲಿ ಇಂಗ್ಲೀಷಿಗೆ ಅನುವಾದಗೊಂಡ, ಪೋಲಿಶ್ ಪತ್ರಕರ್ತ ರೈಷರ್ಡ್ ಕಪುಶಿನ್‌ಸ್ಕಿಯವರ ಹೆಬಾನ. ಪ್ರಕಾಶಕರು :ಅಭಿನವ ಬೆಂಗಳೂರು)

 

ಒಡಲಭಾರ 

ಇರುಳ ಸವಿಗತ್ತಲಿನ

ಮಧುರ ಮಂಚದ ಮೇಲೆ

ಕಲೆತು ಕೂಡಿದ ಪರಿಯು

ಭಾವದೆಳೆ ಎಳೆಯಾಗಿ ಇಳಿಯೆ

ಭವದಲಿ ಇಳೆಗೆ

ಮೈದಳೆದು ಮುದ್ದಾಗಿ

ಬೆಳೆವ ಸಿರಿ ಸಂಭ್ರಮವ

ಹೊರಲಾರೆ ನವಮಾಸ

ಮತ್ತೆ ದಿನ ಒಂಬತ್ತು

ಹೆತ್ತು ಒಡಲಿನ ಕುಡಿಯ

ಇಳುಹಿ ಬಸಿರಿನ ಭಾರ

ಹೂವಾದರೆನಗಷ್ಟೇ ತುಸು

ಘಳಿಗೆ ಬಿಡುವು!

ಕಾಯುತಿವೆ ಭಾವಗಳು

ಸದ್ದಿರದೆ ಸಾಲಾಗಿ

ಬಸಿರನೇರುವ ಬಯಕೆ

ಬೊಗಸೆಗಂಗಳ ತುಂಬಿ

ಹಡೆದ ಒಡಲೊಂದೇ

ಅರಿಯಬಲ್ಲುದೀ ನೋವು

ತರುವ ನಲಿವು!

 

   ಯಾಚನೆ

ಹಗಲಿರುಳ ಭೋರ್ಗರೆತ

ಮೊರೆತ ಅನವರತ

ದಕ್ಕಿದ್ದು ಬರಿ ಕೊರೆತ

ಅಲ್ಲಲ್ಲಿ ಭೂಸವೆತ

ಬೇಕಿಲ್ಲ ಭುವಿಗೆ ಮಿಕ್ಕಿದ್ದು

ಬಿಟ್ಟು ಸಾಗರನ ಸೆಳೆತ

ಒಮ್ಮೆ ಕೇಳಿದಳಾಕೆ

ಬರಸೆಳೆದು ಮುತ್ತಿಕ್ಕಿ

ಹಿಂದೆಗೆವ ಈ ತುಳಿತ

ಸಾಕಿನ್ನು ಸೆಳೆದು

ಕೊಂಡೊಯ್ದುಬಿಡು ಒಡಲೊಳಗೆ

ಕಡಲಾಗಿ ಕಡಲೊಳಗೆ

ಅಳಿಸಿ ಹೋಗುವ ತನಕ

ನಾನು ನೀನೆಂಬ

ಬರೆಹ ವಿಧಿಲಿಖಿತ

  ಬಾಳ ಬಡಿವಾರ    

ಹಡೆದ ಒಡಲಿಗೆ ಕಡಲೂ ಒಂದೇ

ಬಡ ನದಿಯೂ ಒಂದೇ

ಮೇಲುಕೀಳೆಂಬ ಗೊಡವೆ ಏಕೆ

ಎಂದಲ್ಲವೇ

ಒಡವೆ ಧರಿಸಿದವರು

ಅಡವಿ ಪಾಲಾದವರು

ಬೇಡಿಯೂ ಬಾಡದವರು

ಬಾಡಿಯೂ ಬೇಡದವರು

ತಿಂದುಂಡು ಹಾಯಾಗಿ

ಮೇಲೆದ್ದು ಹೋದವರು

ನೋಡಿಯೂ ಹಿಂದಿರುಗಿ

ಬಾರದವರು

ಎಲ್ಲ ಸೇರುವುದಷ್ಟೆ ತಾಯಮಡಿಲ

ಸಂಜೆ ಇಲ್ಲವೇ ಬೆಳಗು

ನಡುವೆ ಬಡಿವಾರದ ಮೆರುಗು

ದರೆ… ದಿರೆ…

ನೋಡಿದರೆ ‘ಎಲ್ಲಾ’ ಬಿಟ್ಟವಳು

ನೋಡದಿರೆ ಎಲ್ಲಾ ‘ಬಿಟ್ಟ’ ವಳು

ಆಡಿದರೆ ಆಗುವುದಂತೆ

ಧಕ್ಕೆ ಸ್ವಾತಂತ್ರ್ಯಕ್ಕೆ

ಆಡದಿರೆ ಆರೋಪ

ಮೌನ ಹೀಗೇಕೆ

ಕುಳಿತರೆ ನಡೆದೀತೆ ಬದುಕು

ನಿಂತರೆ ಅವಸರದ ಕುಟುಕು

ನೀಡಿದರೆ ಸಾಕು ನಿಲ್ಲಿಸು ಮುಸಲಧಾರೆ

ನೀಡದಿರೆ ಯಾಕಾದೆ ಬರಡು ನೀರೆ

‘ದರೆ’ ‘ದಿರೆ’ಗಳ ನಡುವೆ ಆಗೀಗ

ಉಸಿರನಾಡದೆಯೂ ‘ಇರು’ತ್ತೇನೆ

ಆಡಿಯೂ ಉಸಿರು ‘ಇಲ್ಲ’ವಾಗುತ್ತೇನೆ

ಬಸಿರಾಗದೆಯೂ ಹೆರುತ್ತೇನೆ

ಮಾಡದ ಸಾಲಕ್ಕೆ ಸದಾ

ಬಡ್ಡಿ ತೆರುತ್ತೇನೆ

    ಒಮ್ಮೆ….

ಇಟ್ಟ ಹೆಜ್ಜೆಯ ಸುತ್ತ

ದಟ್ಟ ಕರಿನೆರಳು

ನೆಟ್ಟ ದೃಷ್ಟಿಯ ದೂರದೂರಕ್ಕೂ

ಮತ್ತದೇ ಮುಂಗುರುಳು

ಕವಿದು ಕತ್ತಲೆಯಾಗಿ

ಕಣ್ಣ ಮುಂದೆಲ್ಲ

ಎಲ್ಲವೂ ಬರಿದು

ಸರಿದು ಬಿಡಲೇ………………ಒಮ್ಮೆ

ನೇವರಿಸಿ ಕುರುಳ

ಬಾಚಿ ಬದುಕ

ಮುತ್ತಿಕ್ಕಿ ಹದನಾಗಿ

ಕಟ್ಟ ಕಡೆಯದಾಗಿ

ಕಾರಿ ಬಿಡಲೇ………………,ಒಮ್ಮೆ

ಕರುಳ ಕೀವನ್ನೆಲ್ಲ

ಕೊರಗಿ ಸಾಯುವ ಮುನ್ನ

ನರಳಿ ಬೇಯುವ ಬದಲು

ತೂರಿ ಬಿಡಲೇ……………..ಒಮ್ಮೆ

ಈ ಜಗದ ನೇಮ

ನಿಯಮಗಳನೆಲ್ಲ

ಕವಿದ ಕಾರ್ಮುಗಿಲ ಕಪ್ಪು

ಕರಗಿ ಹನಿಹನಿಯಾಗಿ

ತಿರೆಗೆ ಎರಗುವ ತನಕ

ಕಾಯದೇ ಒಂದಿನಿತು

ಜಾರಿ ಬಿಡಲೇ…………………ಒಮ್ಮೆ

ಸಾರಿ ಬಿಡಲೇ…….

ಇರುಳ ಮರೆಸುವ ಈ

ಬೆಳಗು ಬರಿದೆ ಮರುಳಲ್ಲ!

   ಸುಖ…?

ಕೆಂಡಗಳ ಹಾದು

ಗುಂಡಿಗಳ ನೆಗೆದು

ಗುಂಡಿಗೆಯ ಮೇಲೊಂದು

ಕಲ್ಲುಬಂಡೆಯನೆಳೆದು

ಅಂಡಲೆದ ಜೀವಕ್ಕೆ

ತುಂಡು ಭರವಸೆಯೇ ದಿಕ್ಕು

ಉಂಡೆಸೆವ ಆಟ ಆಡಿದವರು

ಉಣ್ಣದೆಯೂ ಊಟ

ಎಲೆಯನೇ ಬಿಸುಟಿದವರು

ಬೇಟಕೂಟಕ್ಕಷ್ಟೇ ನೆಟ್ಟು ನೋಟ

ಬಿಟ್ಟ ನಿಟ್ಟುಸಿರ ನಿಟ್ಟಿಸದೇ ಹೋದವರು

ಹಟ್ಟಿಯಲಿ ಮೇವ ಹೋರಿಯಂತವರು

ಘಟ್ಟ ಹತ್ತಿಸಿದರೂ ಹುಟ್ಟುಗುಣ ಬಿಡದವರು

ಸುಟ್ಟು ಸಂಸಾರ ಮನೆಮಾರು ಬಾಳು

ಬರಿದೆ ಹಿಡಿಬೂದಿ ಹಾರುತಿರಲು

ಕೊಳ್ಳಿಯಿಟ್ಟ ಕೈಗೆ ಚಳಿ ಕಾಯಿಸುವ ತೆವಲು

ಉಳಿದಿರುವುದೇನು ಸುಡಲು

ಒಮ್ಮೆಯಾದರೂ ಸವರಿ ಸುಟ್ಟ

ಕೈಗಳ ಬಿಸುಪ

ಬರಿದೆ ಮನದಲ್ಲಿ ಸುಖಿಸುವವರು

  ಬೆಳಕು …   

ಏರು ಘಟ್ಟದ ದಾರಿ

ಏದುಸಿರು ಹತ್ತಿದ್ದಕ್ಕೆ

ಅದುರುವ ಕಾಲು

ಅರಗದ ಕಾಳು

ಬೆರಗು ತೊರೆದ ಕಣ್ಣು

ನಿರಿಗೆಯಿಂದಲೇ ಹುಟ್ಟಿ

ಹೊರಬಂದ ನಿಡಿ

ದಾದ ನಿಟ್ಟುಸಿರು ಗಟ್ಟಿ ಮುಟ್ಟು

ನಿಂತ ಸಮಯವೇ ಸಾಕ್ಷಿ

ಏರಿ ಬಂದಿದ್ದಕ್ಕೆ

ತೊಟ್ಟು ನೀರಿರದ ನೆಲ

ಬಿಡಲಾರದ ಮೋಹ

ಮತ್ತೆ ಇಳಿಯುವುದೇ

ಮಾಯಕದ ಲೋಕಕ್ಕೆ

ಕಿತ್ತಿಡುವ ಹೆಜ್ಜೆಗಳು

ಹೊತ್ತು ನಡೆದಾವೇ ಬೆನ್ನ

ಭಾರವ ನೆತ್ತಿಗೇರಿದ ಮತ್ತ

ನಿಳಿಸಿ ಬಿಡಬಹುದೇ ಇನ್ನು

ಉಸಿರ ಜಾರುವ ದಾರಿಯಲ್ಲಿ

ಇರಿವ ಕರಿ ಸರಿರಾತ್ರಿಯಲಿ

ತೀರಿದರೂ ಎಣ್ಣೆ

ಆರಬಾರದಲ್ಲ, ಬೆಳಕು.. ಹೆಣ್ಣೇ..

3 comments

  1. ಒಂದೇ ಬಾರಿಗೆ ಹಲವು ಕವಿತೆಗಳನು ಓದುವದೆಂದರೆ ರಮ್ಝಾನ್ ದೀಪಾವಳಿ ಒಟ್ಟಿಗೆ ಆಚರಿಸಿದಂತೆ. ನಿಧಾನವಾಗಿ ಓದಿಕೊಂಡು ಅನಿಸಿಕೆ ತಿಳಿಸುತ್ತೇನೆ .

Leave a Reply