ಮುಗಿಯದ ಸಂಭಾಷಣೆ ಮತ್ತು ಮುಗಿದುಹೋದ ಸಂಬಂಧ..

‘ಸ್ವಲ್ಪ ಮೊಬೈಲ್ ಕೊಡ್ತೀರ ?’ ಎಂದ .

ರೈಲ್ವೇ ಪ್ಲಾಟ್ ಫಾರ್ಮ್ ನ ಮೇಲೆ ಐದಾರು ಬ್ಯಾಗ್ ಗಳನ್ನು ಇಟ್ಟುಕೊಂಡು ಅವುಗಳ ಕಾವಲು ಕಾಯುತ್ತಾ ನಿಂತಿದ್ದ ನನಗೆ ಒಮ್ಮೆಲೆ ಅವನ ಮೇಲೆ ಅನುಮಾನ ಮೂಡಿತು.

ರೈಲು, ದಿನದ ಸಮಯಕ್ಕಿಂತ ಮೂವತ್ತು ನಿಮಿಷ ತಡವಾಗಿ ಬರುತ್ತದೆಂಬ ಸೂಚನೆಯೂ ಬಂತು.

‘ಮನೆಯಲ್ಲಿ ಮೊಬೈಲ್ ಮರೆತುಬಿಟ್ಟು ಬಂದೆ ‘ ತನ್ನ ಹಿಂದಿನ ಮಾತನ್ನು ಮುಂದುವರೆಸುವಂತೆ ಆತ ಹೇಳಿದ.
ಕೆದರಿದ ಕೂದಲು , ಕೊಳೆಯಾದ ಅಂಗಿ, ಅಸ್ತವ್ಯಸ್ತವಾಗಿದ್ದ ಅವನ ಗಡ್ಡ – ಇವೆಲ್ಲವನ್ನು ನೋಡಿದಾಗ ಇವನಿಗೆ ಮೊಬೈಲ್ ಕೊಡುವುದು ಉಚಿತವಲ್ಲವೇನೋ, ನನ್ನ ಬಳಿ ಮೊಬೈಲ್ ಪಡೆದು ಓಡಿ ಹೋದರೆ ? ಅಥವಾ ಮೊಬೈಲ್ ಪಡೆದು ಮಾತಾಡುವಂತೆ ಮಾಡಿ, ನನ್ನ ಐದಾರು ಬ್ಯಾಗ್ ಗಳಲ್ಲಿ ಒಂದನ್ನು ತೆಗೆದುಕೊಂಡು ಓಡಿ ಹೋದರೆ ಎಂಬ ಭಯ ಕಾಡಿತು.

ಆದರೂ ‘ಒಳ್ಳೆಯವನು’ ‘ ಪರೋಪಕಾರಿ’ ಎನ್ಸಿಸಿಕೊಳ್ಳುವ ಒಂದು ಸಣ್ಣ ಅವಕಾಶ ಸಿಕ್ಕರೂ ಅದನ್ನು ತಪ್ಪದೇ ಬಳಸಿಕೊಳ್ಳಬೇಕೆಂಬ ಸೈದ್ದಾಂತಿಕ ಆಲೋಚನೆ ಅವನಿಗೆ ಮೊಬೈಲ್ ನೀಡಬೇಕೆಂದು ಒಳಗಿನಿಂದ ಒತ್ತಡ ತಂದಿತು.
‘ಬೇಗ ಮಾತಾಡಿ ಕೊಡಿ’ ಎನ್ನುತ್ತಾ, ಮೊಬೈಲ್ ನ್ನು ಅನ್ ಲಾಕ್ ಮಾಡಿ ‘ನಂಬರ್ ಹೇಳಿ’ ಎಂದೆ.‌ ಆತ ನಂಬರುಗಳನ್ನು ಬಿಡಿಬಿಡಿಯಾಗಿ ಹೇಳಿದ. ಡಯಲ್ ಮಾಡಿ ಕೊಟ್ಟೆ. ‘ ಸ್ವಲ್ಪ ದೂರ ಹೋಗಿ ಮಾತಾಡಬಹುದಾ ಸರ್ ? ಒಂದೈದು ನಿಮಿಷ ‘ ಎಂದನಾತ.

‘ಬೇಡ. ಇಲ್ಲೇ ನಿಂತು ಮಾತಾಡಿ.‌ ರೈಲು ಬರುವ ಸಮಯವಾಯ್ತು’ ಎಂದು ನಿಷ್ಠುರವಾಗಿಯೇ ಹೇಳಿದೆ.

‘Beggars have no choice’ ಎಂಬ ಅಹಂನ ಮಾತೇ ಅದಾಗಿತ್ತು. ಅದೂ ಅಲ್ಲದೆ ದೂರ ಹೋಗಿ‌ ಮಾತಾಡುವಂತೆ ನಟಿಸಿ, ಹಾಗೆಯೇ ಮೊಬೈಲ್ ನೊಂದಿಗೆ ಪರಾರಿಯಾಗುವುದು ಅವನ ಪ್ಲಾನ್ ಇರಬಹುದೆಂದು ನನ್ನ ಊಹೆ‌.

 

ಮೊಬೈಲ್ ಪಡೆದ ಆತ, ಕಾಲ್ ರಿಸೀವ್ ಆಗುತ್ತಿದ್ದಂತೆ ಮಾತಾಡತೊಡಗಿದ. ಆತ ಮಾತಾಡುತ್ತಿದ್ದ ರೀತಿ ನೋಡಿದರೆ ಮೊಬೈಲ್ ನ್ನು ಮರೆತು ಬಿಟ್ಟಬಂದ ಹಾಗೆ ಕಾಣಲಿಲ್ಲ‌. ನಾನು ಮೊಬೈಲ್ ಕೊಟ್ಟಿದ್ದೇನೆ‌ಂಬ ಕಾರಣಕ್ಕೆ ಆತನ ಖಾಸಗಿ ಸಂಭಾಷಣೆಯನ್ನು ಕೇಳಿಸಿಕೊಳ್ಳುವ ಹಕ್ಕು ನನಗಿರಲಿಲ್ಲ ನಿಜ. ಆದರೆ ಅಷ್ಟು ಹತ್ತಿರದಲ್ಲಿ ನಿಂತಿದ್ದ ಅವನ ಮಾತುಗಳು ಬೇಡವೆಂದರೂ ಕಿವಿಗೆ ಬೀಳುತ್ತಿದ್ದವು. ನಾನು ಅವುಗಳಿಗೆಲ್ಲ ಅನ್ಯಮನಸ್ಕನಾಗಿರುವಂತೆ ತೋರಿಸಿಕೊಂಡರೂ ಅವನ ಮಾತಿನಿತ್ತ ಸಂಪೂರ್ಣ ಗಮನ ಇಟ್ಟಿದ್ದೆ.

ಅವನಿಗೇನು ಇದು ತಿಳಿಯದೇ ಇರಲಿಲ್ಲ. ಕೆಲವೊಮ್ಮೆ ಜೋರಾಗಿ ಮಾತಾಡಿದರೂ ಅನೇಕ ವಾಕ್ಯಗಳನ್ನು ತುಂಬಾ ಮೆದುವಾಗಿ ಹೇಳುತ್ತಿದ್ದ. ಅವನ ಒಟ್ಟು ಸಂಭಾಷಣೆಯಲ್ಲಿ ನನ್ನ ಕಿವಿಗೆ ಬಿದ್ದ ಕೆಲವು ವಾಕ್ಯಗಳನ್ನು ಮಾತ್ರ ನಾನು ಹೇಳಬಲ್ಲೆ.

* * * * * * *
‘ ನಾನು ಎಷ್ಟು ಸರಿ ಅಂತ ಸಹಿಸ್ಕೋಬೇಕು ?’

‘ ಇದೊಂದ್ ಸರಿ ಅಂತ ಪ್ರತಿ‌ ಸರಿ ಹೇಳ್ತೀಯಾ.’

‘ ಇಲ್ಲ. ಬರೋಲ್ಲ … ‘

‘ ನಾನು ಇಷ್ಟೆಲ್ಲ ಕಷ್ಟಪಡೋದು ಯಾರಿಗೆ ?’

‘ ಇಲ್ಲ … ಅಂತಾದ್ದೇನೂ ಇಲ್ಲ . ನನಗೂ ಯಾವಾಗಲೂ ಇದ್ನೇ ಹೇಳಿ ಹೇಳಿ ಸಾಕಾಗಿ ಹೋಗಿದೆ’

‘ ನನ್ನ ಕಷ್ಟ ಯಾವತ್ತಾದರೂ ಹೇಳ್ಕೊಂಡಿದೀನಾ ?’

‘ ಅಷ್ಡಿದ್ದಮೇಲೆ ನನ್ನನ್ನ ಯಾಕೆ ಮದುವೆ ಆಗ್ಬೇಕಿತ್ತು?’

‘ ಮಕ್ಕಳು ಇದಾವೆ ಅನ್ನೋ ಯೋಚನೆನಾದರೂ ಇದ್ಯಾ ನಿಮಗೆ ಮೇಡಂ ?

‘ ಇದು ಬೇರೆಯವರ ಮೊಬೈಲ್ . ತುಂಬಾ ಮಾತಾಡೋಕೆ ಆಗಲ್ಲ’ ( ಎನ್ನುತ್ತ ನನ್ನನ್ನು ಒಮ್ಮೆ ನೋಡಿದ. ಮಾತು ಮುಗಿಸುತ್ತೇನೆ ಎಂಬುದರ ಸೂಚನೆ ನೀಡಲು ಅನ್ನಿಸುತ್ತೆ)

‘ ಯಾವ ಕಾರಣಕ್ಕೂ ಮತ್ತೆ ಆ ಮನೆಗೆ ಬರೋಲ್ಲ…’

* * * * * *

ಈ ಮಾತುಗಳನ್ನಷ್ಟೇ ಕೇಳಿಸಿಕೊಂಡ ನನಗೆ ಅವನ ಮೇಲೆ ಕರುಣೆ ಬರತೊಡಗಿತ್ತು.
‘ ತುಂಬಾ ಥ್ಯಾಂಕ್ಸ್ ಸರ್’ ಎನ್ನುತ್ತಾ ಮೊಬೈಲ್ ವಾಪಾಸ್ಸು ಕೊಟ್ಟ.
‘ ಕಾಲ್ ಕಟ್ ಆಯ್ತೇನೋ. ಬೇಕಿದ್ದರೆ ಮತ್ತೊಂದ್ ಕಾಲ್ ಮಾಡಿ’ ಎಂದೆ.
‘ ಇಲ್ಲ ಸರ್. ನಾನೇ ಕಟ್ ಮಾಡಿದೆ. ಇನ್ನೇನು ಹೇಳೋದ್ ಇಲ್ಲ’ ಎನ್ನುತ್ತಾ ನನ್ನ ಕೈಯಲ್ಲಿ ಮೊಬೈಲ್ ಕೊಟ್ಟು ರಿಸರ್ವೇಷನ್ ಅಲ್ಲದ, ಜನರಲ್ ಬೋಗಿಗಳು ಬಂದು ನಿಲ್ಲುವ ಕಡೆ ನಡೆದು ಹೋದ…
‘ ಏಯ್’ ಅಂದೆ
ತಿರುಗಿ ನೋಡಿದ.
ನನ್ನ ಬಳಿ ಹೇಳಲು ಏನೂ ಇರಲಿಲ್ಲ.
ಅವನನ್ನು ಕಳ್ಳನಂತೆ ಕಲ್ಪಿಸಿಕೊಂಡದ್ದಕ್ಕೆ ಕ್ಷಮೆ ಕೇಳಬೇಕಿತ್ತಾ ? ಎಂದು ಯೋಚಿಸುವಷ್ಟರಲ್ಲೇ ಅವನು ಕಾಣದಾದ.

ಅಷ್ಟರಲ್ಲಿ ರೈಲು ಬಂತು.ಇವೆಲ್ಲವನ್ನೂ ಗಮನಿಸುತ್ತಾ ದೂರದ ಕಟ್ಟೆಯ ಮೇಲೆ ಕೂತಿದ್ದ ನನ್ನವಳು ಎದ್ದುಬಂದು ರೈಲು ಹತ್ತುವಾಗ ‘ಯಾರು ಅವರು ? ಏನಂತೆ ?’ ಅಂದಳು’ . ‘ಗೊತ್ತಿಲ್ಲ, ಕಾಲ್ ಮಾಡೋಕಂತ ಫೋನ್ ತಗೊಂಡಿದ್ರು’ ಅಂದೆ . ಅವಳೂ ಅದರ ಬಗ್ಗೆ ಮತ್ತೇನೂ ಕೇಳಲಿಲ್ಲ.

ತಡವಾಗಿ ಬಂದ ರೈಲು ಬೇಗ ಹೊರಟೇ ಬಿಟ್ಟಿತು. ಸ್ಲೀಪಿಂಗ್ ಕೋಚ್ ಗಳಲ್ಲಿ ಜನ ತಕ್ಷಣ ಮಲಗಿಬಿಡುತ್ತಾರೆ‌. ಮಲಗಲೆಂದು ಅಣಿಯಾಗುತ್ತಿದ್ದೆ,  ಅಷ್ಟರಲ್ಲಿ ಮೊಬೈಲ್ ರಿಂಗ್ ಆಯ್ತು. ಆ ವ್ಯಕ್ತಿ ಯಾರಿಗೆ ಕಾಲ್ ಮಾಡಿದ್ದನೋ ಆ ನಂಬರಿನಿಂದ ಕಾಲ್ ಬಂತು.‌ ಇದು ಹೊಳೆಯದ‌‌ ನಾನು ತಕ್ಷಣ ಕಾಲ್ ರಿಸೀವ್ ಮಾಡಿಬಿಟ್ಟೆ. ಆ ಕಡೆಯಿಂದ ಅಳುವ ಹೆಂಗಸಿನ ಧ್ವನಿಯೊಂದು ‘ಈಗ ನಿಮ್ಮ ಮೊಬೈಲ್ ನಿಂದ ಕಾಲ್ ಮಾಡಿದ್ದರಲ್ಲ, ಅವರಿಗೆ ಸ್ವಲ್ಪ ಫೋನ್ ಕೊಡಿ’ ಎನ್ನುವಾಗ ಬಿಕ್ಕಳಿಸುತ್ತಿತ್ತು.
‘ಅವರು ಇಲ್ಲ. ರೈಲು ಹೊರಟಾಗಿದೆ.’ ಎನ್ನುತ್ತಾ ಅಮಾನುಷವಾಗಿ ಕಾಲ್ ಕಟ್ ಮಾಡಿದೆ.

ಆಮೇಲೆ ಕನಿಷ್ಠ ಎಂದರೂ ಹತ್ತು ಬಾರಿ ಆ ನಂಬರಿನಿಂದ ಕಾಲ್ ಬಂತು . ನಾನು ರಿಸೀವ್ ಮಾಡಲಿಲ್ಲ.

* * * * *

 

ಮರುದಿನ ಕಾಲೇಜಿನಲ್ಲಿ ಎಲ್ಲ ತರಗತಿಗಳು ಮುಗಿದ ಮೇಲೆ ಬಿಡುವಾಗಿದ್ದಾಗ ಇದ್ದಕ್ಕಿದ್ದಂತೆ ಈ ವಿಷಯ ನೆನಪಾಗಿ ಮನಸ್ಸಿಗೆ ಬೇಸರವೆನಿಸಿತು.

ಅವರಿಬ್ಬರ ಮಧ್ಯೆ ನಿಜವಾದ ಒಡಕಿರಬಹುದೇ ?
ಅವನು ಜನರಲ್ ಕಂಪಾರ್ಟಮೆಂಟಿನಲ್ಲಿ ಇದ್ದನೆ ?
ಅವನದು ತಪ್ಪೋ ,ಅವಳದ್ದೋ ?
ಮನೆ ಬಿಟ್ಟು ಹೊರಟವನು ಅವಳ ಬಗ್ಗೆ ಯೋಚಿಸಲಿಲ್ಲವೆ ?
ಅಷ್ಟಕ್ಕೂ ಅವನು ನಿಜವಾಗಿಯೂ ರೈಲು ಹತ್ತಿದನೆ ? ಮನೆಬಿಡುವ ನಿರ್ಧಾರ‌ ಮಾಡಿ ಬಂದವನಾಗಿದ್ದರೆ ಮತ್ಯಾಕೆ ಕಾಲ್ ಮಾಡುತ್ತಿದ್ದ ? ಅವನಿಗೂ ಅವಳು ಒತ್ತಾಯ ಮಾಡಲಿ ಎಂಬುದಷ್ಟೇ ಬೇಕಿತ್ತೆ ? ಹಾಗಾಗಿಯೇ ತಾನಾಗಿ ಮತ್ತೆ ಕಾಲ್ ಮಾಡಿದನೆ?
ರೈಲು ಹತ್ತದೆ ಆ ರಾತ್ರಿಯಿಡೀ ಪ್ಲಾಟ್ ಫಾರ್ಮ್ ನಲ್ಲೇ ಮಲಗಿ ಬೆಳಗ್ಗೆ ಎದ್ದು ಮನೆಗೆ ಹೋದನೆ ?

ಈ ಬಗ್ಗೆ ಎಷ್ಟೇ ಗಾಢವಾಗಿ ಯೋಚಿಸಿದರೂ ಸ್ಪಷ್ಟತೆ ಸಿಗಲಿಲ್ಲ. ಇತರರ ಜೀವನದ ಬಗ್ಗೆ ಅನಗತ್ಯ ಯೋಚಿಸುವ ತುರ್ತಾದರೂ ಇದೆಯಾ ಎಂದು ಸಮಾಧಾನಪಟ್ಟುಕೊಂಡೆನಾದರೂ ಆಕೆ ಮತ್ತೆ ಮತ್ತೆ ಕಾಲ್ ಮಾಡಿದಾಗ ಜನರಲ್ ಕಂಪಾರ್ಟ್ ಮೆಂಟ್ ಗೆ ಹೋಗಿ ನೋಡಿದರೆ ಅವನು ಸಿಕ್ಕಿರುತ್ತಿದ್ದನೇನೋ, ಅಷ್ಟೂ ಮಾಡಲಿಲ್ಲವಲ್ಲ ನಾನು ಎಂಬ ಗಿಲ್ಟ್ ಕಾಡತೊಡಗಿತು.
ಹೀಗೆ ಅರ್ದಂಬರ್ಧ, ಅಸಂಬದ್ದವಾಗಿ, ಅಸ್ಪಷ್ಟವಾಗಿ ನಡೆದ ಈ ಸಂಭಾಷಣೆ, ಆಗಲೇ ಒಡಕು ಮೂಡಿದ್ದ ಸಂಬಂಧವೊಂದನ್ನು ತುಂಡರಿಸಿದ್ದರೆ ಅದು ದುರಂತವೇ ಸರಿ.

* * * * * *

ಆಕೆ ಮತ್ತೆ ಕಾಲ್ ಮಾಡದಿದ್ದುದರಿಂದ ಅವನು ಆ ದಿನ ರೈಲು ಹತ್ತಿಲ್ಲದಿರಬಹುದು ಎಂದೇ ನಾನು ಸಮಾಧಾನಪಟ್ಟುಕೊಂಡಿದ್ದೇನೆ. ಹಾಗಾಗದೆ ಅಕಸ್ಮಾತ್ ಅವನು ರೈಲು ಹತ್ತಿ ಬೆಂಗಳೂರಿಗೆ ಬಂದಿದ್ದರೆ, ಮತ್ಯಾರ ಬಳಿಯಾದರೂ ಮೊಬೈಲ್ ಕೇಳಬಹುದು. ಒಂದು ವೇಳೆ ಆ ಮತ್ಯಾರೋ ನೀವಾಗಿದ್ದರೆ ದಯವಿಟ್ಟು ಅವನಿಗೆ ಮೊಬೈಲ್ ಕೊಡಿ. ಆ ಒಂದು ಕರೆಯಿಂದ ಅವನು ಮತ್ತೆ ಶಿವಮೊಗ್ಗ ವಾಪಾಸ್ ಹೋದರೂ ಹೋದಾನು! ನಮಗೆ ಅತೀ ಕ್ಷುಲ್ಲಕವೆನಿಸುವ ಘಟನೆಯೊಂದು ಯಾರದ್ದೋ ಜೀವನದಲ್ಲಿ ಅದೆಷ್ಟು ಮಹತ್ವದ್ದಾಗಿರಬಹುದಲ್ಲವೆ ಎಂಬುದನ್ನು ನೆನೆದಾಗ ಅಚ್ಚರಿ ಮತ್ತು ಆಘಾತ ಒಟ್ಟೊಟ್ಟಿಗೆ ಆಗದಿರವು.

ಇನ್ನು ಇಂತಹ ಸಂದರ್ಭಗಳಲ್ಲಿ ಒಂದು ಕಥೆ ಹುಡುಕುವ ನನ್ನಂಥವನ ಯೋಚನೆಯೂ ಸಭ್ಯವಲ್ಲದರಿಬಹುದು.

6 comments

  1. ಕಥೆ ಹುಡುಕುವ ಸಂದರ್ಭ ಲೇಖಕನಿಗೆ ಯಾವಾಗ ಬರುತ್ತದೆ ಎನ್ನುವುದು ಮುಖ್ಯವಲ್ಲ , ಆ ಸಂದರ್ಭಕ್ಕೆ ಅಕ್ಷರರೂಪ ನೀಡಿ ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು. ಪ್ರಾಯಶಃ ತಮ್ಮ ಮನಸಿಗಾದ ನಿರುಮ್ಮಳತೆಯ ಅನುಭವ ಅನುಭವಿಸಿದ ತಮಗೇ ಗೊತ್ತು. ಒಂದು ಉತ್ತಮ ಕಥೆ ನೀಡಿದ್ದೀರಿ. ವಂದನೆಗಳು.‌
    ಧನ್ಯಕುಮಾರ ಮಿಣಜಗಿ

    • ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ

  2. ಇಂತಹ ಅನುಭವಗಳು ಅಗಿವೆ ..ಅದರೆ
    ಕಣ್ಣು ತೆರೆದಿರಲಿಲ್ಲ..
    ಧನ್ಯವಾದ

Leave a Reply