ಸಂಧ್ಯಾರಾಣಿ, ಇಥೆ ಏತಾಯ್ ಅಸಂ ಕಳಲ ಆಮ್ಹಾಲಾ , ಅವಶ್ಯ  ಯಾ, ವಾಟ್ ಬಘ್ತೋಯ್…

ನಕ್ಕಿ ಯಾ, ವಾಟ್ ಬಘ್ತೋಯ್…

ಅಹಲ್ಯಾ ಬಲ್ಲಾಳ್

ಸಂಧ್ಯಾರಾಣಿ, ಇಥೆ ಏತಾಯ್ ಅಸಂ ಕಳಲ ಆಮ್ಹಾಲಾ , ಅವಶ್ಯ  ಯಾ, ವಾಟ್ ಬಘ್ತೋಯ್…

ನೀವಿಲ್ಲಿಗೆ ಬರ್ತಾ ಇದ್ದೀರಂತೆ. ಬೇಗ ಬನ್ನಿ, ಮುಂಬೈ ಕಾಯ್ತಿದೆ. ನಿಮ್ಮ ಕೊಡುಗೆಯಿರುವ ‘ನಾತಿಚರಾಮಿ’ ಕನ್ನಡ ಚಲನಚಿತ್ರ 2018ರ MAMI ಯಲ್ಲಿ ಪ್ರದರ್ಶನಗೊಳ್ಳಲಿದೆಯಂತೆ. ಈಗಾಗಲೇ ಎರಡು ದೇಖಾವೆಗಳು ಆಗಿ ಹೋಗಿ ಒಳ್ಳೆಯ ಸ್ಪಂದನವೂ ಸಿಕ್ಕಿದೆಯಂತೆ. ಕೇಳಿ ನಿಜಕ್ಕೂ ದಿಲ್ ಖುಶ್.

ಮರಾಠಿ ನಾಡಿನಲ್ಲಿ ಕನ್ನಡ ಚಿತ್ರಕ್ಕೆ ಸಿಕ್ಕಿರುವ ಸ್ವಾಗತ ಚೇತೋಹಾರಿಯೇ. ನಾತಿಚರಾಮಿ- Not without you ಎನ್ನುವ ಭಾಷೆ. ಕೊಟ್ಟ ಭಾಷೆಯನ್ನು ಉಳಿಸಿಕೊಳ್ಳುವಾಗ ಬದುಕು ಕೊಡುವ ಸವಾಲುಗಳೇನು? ಇಂದಿನ ಮಹಿಳೆಯೊಬ್ಬಳು ಅದನ್ನು ಎದುರಿಸುವ  ಬಗೆ ಹೇಗೆ? ಗಂಡು ಹೆಣ್ಣಿನ ಸಂಬಂಧದ ಸಂಕೀರ್ಣತೆಗಳನ್ನು ಶೋಧಿಸುವ ಪ್ರಯತ್ನ ಇದು ಎಂದು ಹೇಳಿದಿರಿ. ಆಹ …ಕೇಳಿ ಕಿವಿ ಚುರುಕಾಯಿತು.

ಊರಿಗೆ ಬಂದವರು ಕೇರಿಗೆ ಬರದೇ ಉಂಟೇ? ‘ಸೃಜನಾ ಬಳಗ’ಕ್ಕೆ  ಸ್ವಾಗತ, ಸಂಧ್ಯಾ. ಸಾಹಿತ್ಯ, ನಾಟಕ, ಚಲನಚಿತ್ರ, ಪ್ರವಾಸ ಮುಂತಾದ ವೈವಿಧ್ಯಮಯ ಆಸಕ್ತಿಗಳಿರುವ ಸಂವೇದನಾಶೀಲರನ್ನು ಭೇಟಿಯಾಗುವುದೆಂದರೆ  ನಮಗೆ ಯಾವತ್ತೂ ಖುಶಿಯ ವಿಚಾರವೇ.

ಸಾರ್ವಜನಿಕ ಅಭಿವ್ಯಕ್ತಿ , ಮುಕ್ತತೆ ಇವುಗಳಿಗೆ  ಚೌಕಟ್ಟೇ ಇಲ್ಲದಂತಾಗಿ ಅವು ಎಲ್ಲೆಲ್ಲೋ ಹೋಗಿರುವ ಕಾಲ ಇದು. ಅಧಿಕಾರ-ಅಂತಸ್ತು ಮತ್ತು ಹಣವೆಂಬ ಅಫೀಮಿನ ಅಮಲು ಪ್ರಾಯಶಃ ಎಲ್ಲ ಕಾಲದಲ್ಲೂ  ಇದ್ದದ್ದೇ. ಅಂದಕಾಲತ್ತಿಲ್ ಎಲ್ಲವೂ ಎಷ್ಟು ಚೆನ್ನಾಗಿತ್ತು, ಈಗ ಕಾಲ ಕೆಟ್ಟು ಹೋಗಿದೆ ಎಂಬ ಕೊರಗನ್ನೂ ಆಧುನಿಕತೆಯೇ ಎಲ್ಲದಕ್ಕೂ ರಾಮಬಾಣ ಎಂಬಂಥ ಬೀಸು ಹೇಳಿಕೆಗಳನ್ನೂ ಬದಿಗಿಡೋಣ.

ನಾನು ನನ್ನದು ಸರಿ ಎಂದು ಹೇಳಿಕೊಳ್ಳುವಾಗ ನೀನು ನಿನ್ನದು ತಪ್ಪು, ನೀನು ಮಾತಾಡ್ಬೇಡ ಎಂದು ಕಿರುಚುವುದು ಈಗ ಸಾಮಾಜಿಕ ತಾಣಗಳಿಂದಾಗಿ ನೀರು ಕುಡಿಯುವುದಕ್ಕಿಂತ ಸಲೀಸು. ಈ ಊರು ಆ ಊರು ಅಂತಲ್ಲ; ಈ ರಾಡಿ ಸಾರ್ವತ್ರಿಕವಾಗತೊಡಗಿದೆ.

ಗಂಡು ಹೆಣ್ಣು ಸಂಬಂಧಗಳೂ ಸೇರಿದಂತೆ, ಎಷ್ಟೋ ವಿಷಯಗಳಲ್ಲಿ ಯಾವುದು ‘ಸರಿ’ ಯಾವುದು ‘ತಪ್ಪು’ ಎಂಬ ನಿರ್ಣಯ ತೆಗೆದುಕೊಳ್ಳುವುದು ನಿಷ್ಪ್ರಯೋಜಕ ಮಾತ್ರವಲ್ಲ counter productive ಕೂಡ ಎನಿಸಿದೆ. ಹಾಂ,   ಈ ನಿರ್ಣಯ ‘ತೀರ್ಪು’ ಎಂಬರ್ಥದಲ್ಲೂ ಅಲ್ಲ, ಇನ್ನೊಬ್ಬರನ್ನು ಅಳೆಯಲೂ ಅಲ್ಲ; ಅದು ಸ್ವಂತದ ನೆಮ್ಮದಿಗಾಗಿ. ರೂಮಿಯಂತೆ ‘Out beyond ideas of wrongdoing and rightdoing there is a field. I’ll meet you there’  ಎಂಬಲ್ಲಿಗೆ ತಲುಪಲು ಇನ್ನೂ ಕತ್ತಲೆ ದಾರಿ ದೂರ. ಒಂಥರಾ ಉಸಿರುಗಟ್ಟಿಸುವ ಇಬ್ಬಂದಿತನ, ಧಗೆ. ನಿನ್ನೆಯಷ್ಟೇ ಸುದ್ದಿಪತ್ರಿಕೆ ಹೇಳಿತು: ತಾಪಮಾನ 38 ಡಿಗ್ರೀಯಂತೆ.

ಹೀಗೆಲ್ಲ ಇರುವಾಗ ……

ನಿಮ್ಮ ಎಲ್ಲ ಬರೆಹಗಳನ್ನು ಓದಿರುವೆ ಎಂದು ಹೇಳಿಕೊಳ್ಳಲಾರೆನಾದರೂ ಓದಿದವುಗಳಲ್ಲಿ ಎದ್ದು ಕಾಣಿಸುವ ಮುಖ್ಯ ಗುಣ ಸಹೃದಯತೆ  ಎಂದೇ ನನಗನಿಸುವುದು. ಅದರ ಮಹತ್ವವನ್ನು ಎಷ್ಟು ಹೇಳಿಕೊಂಡರೂ ಸಾಲದು, ಅದೂ ಇಂದಿನ ದಿನಗಳಲ್ಲಿ. ಒಂದು ನಾಟಕವಾಗಲೀ ಚಲನಚಿತ್ರವಾಗಲೀ ಪುಸ್ತಕವಾಗಲೀ ಹಾಡಾಗಲೀ ನೀವದನ್ನು ಅಸ್ವಾದಿಸಿ, ಅದರ ಸಾರ ಪಡೆಯಲು ತಾದಾತ್ಮ್ಯದಿಂದ ಸಾಗುತ್ತ, ಯಥೇಷ್ಟ ಕಾಳಜಿಯಿಂದ ಓದುಗರೊಂದಿಗೆ ಹಂಚಿಕೊಳ್ಳುವುದು ಅವರ ಪಾಲಿಗೆ ಹಿಗ್ಗಿನ ಬುಗ್ಗೆಯೇ ಆಗಿರುತ್ತದೆ.

2015ರಲ್ಲಿ ಪಲ್ಲವ ಪ್ರಕಾಶನದವರು ಹೊರತಂದ ‘ಯಾಕೆ ಕಾಡುತಿಹೆ ಸುಮ್ಮನೆ ನನ್ನನು..’ ಎಂಬ ಹೆಸರಿನ ನಿಮ್ಮ ಪುಸ್ತಕವನ್ನೇ ತೆಗೆದುಕೊಂಡರೆ ಅದರಲ್ಲಿರುವ ಲೇಖನಗಳನ್ನು ಈ ಮೊದಲು ಅಂಕಣರೂಪದಲ್ಲಿ ಓದಿದ್ದರೂ ಮತ್ತೆ ಓದೋಣ ಅನಿಸುತ್ತದೆ. “ಹೀಗೊಬ್ಬ ಶಾಪಗ್ರಸ್ತ ಸುಂದರಿಯೂ, ಅವಳ ನಿರಾಕರಣೆಗಳ ಸಾಲುಗಲೂ…’ (ಹಿಂದಿ ಚಿತ್ರನಟಿ ರೇಖಾಳನ್ನು ಕುರಿತು); “ಸದ್ದು ಮಾಡದೆ ಕದ ದಾಟುವ ಎಲ್ಲ ಅಮ್ಮಂದಿರ ನೆನಪಿನಲ್ಲಿ”(ದುಡಿಯುವ ತಾಯಂದಿರನ್ನು ಕುರಿತು); “ಎಲ್ಲರ ಪಾಡಿಗೂ ಒಂದೊಂದು ಹಾಡು”(ಆಫ್ರಿಕಾ ಬುಡಕಟ್ಟು ಜನಾಂಗದ ಹಾಡುಗಳ ಕಥೆ); “ಮುಚ್ಚಿದ ಬಾಗಿಲಿನ ಆಚೆ ನಿಂತು” ಮೊದಲಾದವು ತಕ್ಷಣಕ್ಕೆ ನೆನಪಿಗೆ ಬರುವಂಥವು. ಇನ್ನು ನಾಟಕ ಮತ್ತು ಸಿನೆಮಾ ರಸಗ್ರಹಣದ ಬರೆಹಗಳಂತೂ ಬೇಕಾದಷ್ಟಿವೆ. ಅಂತರ್ಜಾಲದಲ್ಲಿ ಅನೇಕರು ಅವುಗಳನ್ನು ಓದಿ ನಾವೂ ನೋಡಬೇಕು ಎಂಬರ್ಥ ಬರುವ  ಒಕ್ಕಣಿಕೆಗಳನ್ನು ಹಾಕುತ್ತಲೇ ಇರುವುದನ್ನು ಕಾಣಬಹುದು.

ಸಂಧ್ಯಾ, ಮುಂಬೈಯಲ್ಲಿ ಕನ್ನಡ ಅಂತರ್ಜಾಲ ಪತ್ರಿಕೆಗಳನ್ನು ಓದುವ  ಹವ್ಯಾಸ ಎಷ್ಟು ವ್ಯಾಪಕವೋ ತಿಳಿಯದು. ಅದಕ್ಕೇನೀವೇ ಖುದ್ದು ಬರುತ್ತೀರಿ ಎಂಬ ಖುಶಿ. ಈ  ನೆಪದಲ್ಲಿ ಮುಖತಃ ನಿಮ್ಮ ‘ಹಚ್ಚೆ ಹಾಕುವ ಹುಡುಗಿ’ಯನ್ನು ಭೇಟಿಯಾಗಬೇಕು. ನಿಮ್ಮ  ಚಿತ್ರಣದ ಕಾತ್ಯಾಯಿನಿಗೆ ಹಲೋ ಎನ್ನಬೇಕು. ‘ನೀಲಿಕಂಠದವನೊಡನೆ ನನ್ನ ನೀಲಿಗ್ಯಾನ’ವನ್ನು ನಿಮ್ಮಿಂದಲೇ ಕೇಳಬೇಕು.

ಅವಧಿ ಅಂತರ್ಜಾಲ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿದ್ದಾಗ, ರಂಗಶಂಕರದ ಯೋಜನೆಗಳಲ್ಲಿ ಭಾಗವಹಿಸಿದಾಗ, ಸ್ವತಃ ನೀವೇ ನಾಟಕ ಬರೆಯುವಾಗ ಏನೇನು ಅನುಭವಗಳನ್ನು ಪಡೆದಿರಿ ಎಂದು ಕೇಳಿ ಸವಿಯಬೇಕು. ಜೊತೆಗೆ, ಕಥೆಯೊಂದು ಚಲನಚಿತ್ರವಾಗುವ ಹಾದಿಯಲ್ಲಿ ಏನೇನು ಇರುತ್ತದೆ? ಒಂದು ಮಾಧ್ಯಮದಿಂದ ಇನ್ನೊಂದಕ್ಕೆ ಸಾಗುವ ಪರಿಯಲ್ಲಿ ನಿಮಗೇನನಿಸಿತು ಎಂಬ ಕುತೂಹಲ ನಮಗೆ.

ಇನ್ನು ಗುಲ್ಜಾರ್ ಮತ್ತು ಉರ್ದು ಕವಿತೆಯಂತೂ ಸರಿಯೇ ಸರಿ. ಅದಕ್ಕೂ ಒಂದಿಷ್ಟು ಪಾಲಿರಲಿ, ಏನಂತೀರಿ?

ನಾಳೆ ಇನ್ನೂ ಕಾದಿದೆ

ಮತ್ತು

ನಾತಿಚರಾಮಿ ಮುಂಬೈಗೆ ಬಂದಿದೆ.

ಸಿಗೋಣ.

15 comments

 1. ಅವರ ಬಗ್ಗೆ ಬರೆದಿರುವುದೆಲ್ಲ ನೂರಕ್ಕೆ ನೂರು ಸರಿ. ಅವರ ಅಕ್ಷರಗಳನ್ನು ಓದುವುದೆಂದರೆ ಖುಷಿ. ಸಿನಿಮಾ ನೋಡಬೇಕು.

  • ಸರ್,ನೀವು ಓದಿ ಸ್ಪಂದಿಸಿದ್ದು ನನಗೆ ಖುಶಿ.

 2. ಎಷ್ಟೊಂದು ಆಪ್ತವಾದ ಮತ್ತು ಸೂಕ್ತವಾದ ಬರಹ. ಧನ್ಯವಾದ ಅಹಲ್ಯರವರಿಗೆ… ಮತ್ತು ಸಂಧ್ಯಾರಾಣಿಗೂ 🙂

 3. ವಾಹ್! ಅಹಲ್ಯ ತುಂಬ ಚೆಂದ ಬರೆದಿದ್ದೀರಿ ಸಂಧ್ಯಾ ಬಗ್ಗೆ … Loved it!!!

  • ಭಾ ಭಾ ಭಾ! ಭಾಳಾ ಖುಶ್ ನಾವು ನೀವು ನಿಮ್ಮ ಗೆಳತೀನ್ನ ಇಲ್ಲಿಗ್ ಕಳ್ಸೋ ಮನಸ್ಸು ಮಾಡಿದ್ದಕ್ಕೆ. Thank you.

 4. ಸಂಧ್ಯಾರಾಣಿಯವರ ಸಿನಿಮಾ ಬರಹಗಳು ನನಗೂ ಇಷ್ಟ. ಅವರು ಅಕ್ಷರಗಳಲ್ಲಿ ವಿಶ್ವದ ಅತ್ಯುತ್ತಮ ಸಿನಿಮಾಗಳನ್ನು ಮರುನಿರೂಪಿಸುವುದು ಸಾಂದ್ರ ಕತೆಯನ್ನು ಓದಿದ ಅನುಭವ ನೀಡುತ್ತವೆ. ಮುಂಬೈಗೆ ಸ್ವಾಗತ!
  ನಾತಿಚರಾಮಿ ವೀಕ್ಷಿಸಲು ಜುಹು ಪಿವಿಆರ್ ಗೆ ಮೊನ್ನೆ ರವಿವಾರವೇ ಹೋಗಿದ್ದೆನಾದರೂ ಟಿಕೇಟು ಸಿಗದೇ ನಿರಾಸೆ ಆಯಿತು. ಆದರೆ ಮುಂಬೈನಲ್ಲಿ ಕನ್ನಡ ಸಿನಿಮಾವೊಂದು ಹೌಸ್ ಫುಲ್ ಆಗಿದೆಯಲ್ಲ ಅಂತ ಖುಶಿ ಪಟ್ಟುಕೊಂಡೆ!
  ಇನ್ನು, ಅಹಲ್ಯಾರ ಬರವಣಿಗೆಗೆ ಅವಸರದ ಯಾವುದೋ ಮುಖ್ಯ ಕೆಲಸದಲ್ಲಿ ನಿರತಳಾಗಿರುವಾಗಲೇ, ಜೊತೆಗಿರುವ ಸಹೃದಯರೊಂದಿಗೆ ಸಂಭಾಷಿಸುತ್ತಿರುವ ಭಾವದ ಒಂದು ವಿಶಿಷ್ಟ ಗುಣವಿದೆ. ಅಭಿನಂದನೆ ಅಹಲ್ಯಾ!

 5. ನಮಸ್ಕಾರ ಅಹಲ್ಯಾ ಮೇಡಂ,
  ತುಂಬ ಚೆಂದವಾಗಿ ಬರೆದಿದ್ದೀರಿ. ಪ್ರತಿ ಸಾಲಿನಲ್ಲೂ ನಿಮ್ಮ ಪ್ರೀತಿ ಎದ್ದು ಕಾಣುತ್ತಲಿದೆ. ನಿಜ, ಸಂಧ್ಯಾರಾಣಿಯವರ ‘ಎಲ್ಲರ ಪಾಡಿಗೂ ಒಂದೊಂದು..’ ಲೇಖನದ ಬಗ್ಗೆ ಅದೆಷ್ಟು ಸಾರಿ ಅವರಿಗೆ ಹೇಳಿದ್ದೇನೆಯೋ ಗೊತ್ತಿಲ್ಲ! ಅದೊಂದು ಅದ್ಭುತ ಚಿತ್ರಣ.
  ನೀವು ಹೇಗಿರುವಿರಿ?
  ಪ್ರೀತಿಯಿಂದ,
  -ರಾಜೋ

  • ರೀ ಯಾರ್ರೀ ನೀವು? ಹಳದಿ ಚೀಟಿ ಎಲ್ಲಿ ಕಳೆದುಹೋಗಿದೆ? ಹುಡ್ಕಿ ತನ್ನಿ ಬೇಗ. 🙂 🙂

   ಥ್ಯಾಂಕ್ಸ್ ರಾಜೋ. ಓದಿದ್ದಕ್ಕೆ, ಕಮೆಂಟಿಸಿದ್ದಕ್ಕೆ.

 6. ಸಂಧ್ಯಾ ಬಂದೂ ಆಯ್ತು. ನಮ್ಮವರೇ ಆಗಿ ಹೋದುದೂ ಆಯ್ತು. ಇನ್ನು ಅವರ “ನಾತಿಚರಾಮಿಯ ಸಂಭಾಷಣೆ, ಮನ್ಸೋರೆ ದಿಗ್ದರ್ಶನ, ಶ್ರುತಿ, ವಿಜಯ್ ಅಭಿನಯ, ಹಾಗೂ ಉಳಿದಿಬ್ಬರು ಸ್ತ್ರೀ ಪಾತ್ರಗಳಂತೂ ಮೆಚ್ಚಿದೆವು, ಮೆಚ್ಚಿದೆವು, ಸಂಧ್ಯಾ!

Leave a Reply