ಮತ್ತೆ ಓಲ್ಗಾ: ‘ಸೀತೆ ಮತ್ತು ಶೂರ್ಪನಖಿ ಮಾತಿಗೆ ನಿಂತರೆ ಹೇಗೆ ?’

ಸಮಾಗಮ

ತೆಲುಗು: ಓಲ್ಗಾ

ಕನ್ನಡಕ್ಕೆ : ಅಜಯ್ ವರ್ಮಾ ಅಲ್ಲೂರಿ

ಸೂರ್ಯಾಸ್ತವಾಗುತ್ತಿದೆ.ಕಾಡು ಒಂದೆಡೆಗೆ ಕೆಂಗಾಂತಿಯಿಂದ ಮತ್ತೊಂದೆಡೆಗೆ ಹಬ್ಬಿ ಬರುತ್ತಿರೋ ಕತ್ತಲೊಡನೆ ಕಪ್ಪು ಹೊಗೆಯನ್ನೂದುತ್ತಿರುವ ಉರಿಗುಲುಮೆಯಂತಿದೆ. ಆಗಸದಲ್ಲಿ ಹಕ್ಕಿಗಳು ಗುಂಪುಗಟ್ಟಿ ಗೂಡು ಸೇರುತಲಿವೆ.ಚಿಗರೆಗಳ ಗುಂಪೊಂದು ಹಗಲಿನ ಬೇಸರದಿಂದ ಬಿಡಿಸಿಕೊಂಡು ಬೆಳದಿಂಗಳ ವಿಹಾರಕ್ಕೆ  ಸಜ್ಜಾಗುತ್ತಿದೆ.ಆ ದಟ್ಟ ಕಾಡಿನಲ್ಲಿ ಪ್ರತಿಭಾವಂತ ಚಿತ್ರಕಾರನೊಬ್ಬನ ಕಲಾ ಸೃಷ್ಟಿಗಿಡಿದ ಕೈಗನ್ನಡಿಯಂತೆ ತುಂಬಾ ಪ್ರಶಾಂತವಾದ,ಸೊಗಸಾದ ಮುನಿಯಾಶ್ರಮವೊಂದು ಶೋಭಿಸುತ್ತಿದೆ.

ಆಶ್ರಮದಲ್ಲಿ ಸಂಜೆಹೊತ್ತಿನ ಕಾರ್ಯಕ್ರಮಗಳು ಶುರುವಾಗಿವೆ. ಅಗ್ನಿಹೋತ್ರಗಳು ಬೆಳಗುತ್ತಿವೆ.ಗಂಭೀರ ಮಂತ್ರಗಳನಾದಗಳು ಮಧುರವಾಗಿ ಹಿನ್ನೆಲೆಯಲ್ಲಿ ಕೇಳಿಬರುತ್ತಿವೆ.ಆಶ್ರಮದ ಮುನಿಕಾಂತೆಯರು ಫಲಪುಷ್ಪ ತರುಗಳಿಗೆ ನೀರುಣಿಸಿ  ವಿರಮಿಸಿದ್ದಾರೆ.ಕೆಲ ಹೆಂಗಸರು ದೈವ ಪೂಜೆಗೆಂದು ಮಾಲೆಗಟ್ಟುತ್ತಿದ್ದಾರೆ.ಅರಣ್ಯಸಂಚಾ ರದಿಂದ ಮರಳಿ ಬಂದ ಮಕ್ಕಳು ತಮಗಾಗಿಯೇ ಆತುರದಿಂದ ಕಾಯುತ್ತಿದ್ದ ತಮ್ತಮ್ಮ ತಾಯಂದಿರ ತೋಳ್ತೆಕ್ಕೆಯಲ್ಲಿ ಸೇರಿಕೊಂಡಿದ್ದಾರೆ.ಇನ್ನೂ ಕೆಲ ತಾಯಂದಿರು ಸಾಯಂಕಾಲದ ಅನುಷ್ಠಾನಗಳಿಗೆ ತಮ್ಮ ಮಕ್ಕಳನ್ನು ತ್ವರೆಗೊಳಿಸುತ್ತಿದ್ದಾರೆ.ಅಲ್ಲೊಂದು ಚಿಕ್ಕ ಕುಟೀರದಲ್ಲಿ ತಾಯಿಯೊಬ್ಬಳು ಅರಣ್ಯಸಂಚಾರದಿಂದ ಇನ್ನೂ ಮರಳಿ ಬರದ ತನ್ನ ಮಕ್ಕಳಿಗಾಗಿ ಕಾದುನಿಂತಿದ್ದಾಳೆ.ತನ್ನ ಮಕ್ಕಳ ಮೇಲೆಯೇ  ಜೀವವನ್ನೆಲ್ಲಾ ಹೊತ್ತಿಟ್ಟು ಬಾಳುತ್ತಿದ್ದಾಳೆಂಬುದು ಆಕೆಯ ಕಣ್ಣುಗಳನು ನೋಡಿದ ಯಾರಿಗಾದರೂ ಅರ್ಥವಾಗುತ್ತದೆ.
ಆತುರತೆ,ಆರ್ತತೆ,ಅನುಕಂಪದಿಂದ ಕೂಡಿದ ಆ ಕಣ್ಣುಗಳ ತುಂಬಾ ಈಗ ಭಯದ ಅಲೆಗಳು ಮಿಸುಕಾಡುತ್ತಿವೆ.

ಆ ತಾಯಿಯ ಹೆಸರು ಸೀತೆ.ತನ್ನಿಬ್ಬರು ತನಯರಿಗಾಗಿ ಆಕೆ ಕಾದು ನೋಡುತ್ತಿದ್ದಾಳೆ.

ದಿನವೂ ಈ ವೇಳೆಗೆ ಇಬ್ಬರೂ ಅರಣ್ಯದಿಂದ ಮರಳುತ್ತಿದ್ದರು. ಬರುತ್ತಾ ಬಗೆಬಗೆಯ ಕಾಡಹೂಗಳನ್ನು ತರುತ್ತಿದ್ದರು‌.ಅವುಗಳನ್ನು ದೇವರ ಪೂಜೆಗೆಂದು ಬಳಸಬೇಕಾಗಿ ತಾಯಿಯ ಬಳಿ ಬೇಡಿಕೊಳ್ಳುತ್ತಿದ್ದರು.ಹೆಸರು ಗೊತ್ತಿರದ ಹೂಗಳಿಂದ ತಾನು ಪೂಜೆ ಮಾಡುವುದಿಲ್ಲವೆಂದು ಹೇಳಿದಾಗ ಅವರಿಬ್ಬರೂ ಸೇರಿ ಆ ಹೂವುಗಳಿಗೆ ಚಿತ್ರ ವಿಚಿತ್ರ ಹೆಸರುಗಳನ್ನು ಕೊಡುತ್ತಿದ್ದರು.ಸೀತೆ ನಗಲು,ಅವರಿಬ್ಬರು ಮುನಿಸುಕೊಳ್ಳುತ್ತಿದ್ದರು.ಆಗ ಸೀತೆಯು ಅವರನ್ನು ರಮಿಸಿ ಆ ಹೂಗಳಿಂದ  ಪೂಜೆ ಮಾಡಿ ಇಬ್ಬರನ್ನೂ ಸಂತೈಸುತ್ತಿದ್ದಳು.ಕತ್ತಲು ದಟ್ಟವಾಗುವ ವೇಳೆಗೆ ಬಾಲಕರಿಬ್ಬರು ಕೊರಳೆತ್ತಿ ಹಾಡಲು ನಿಂತರೆ ಇಡೀ ಕಾಡಿಗೇ ಕಿವಿ ಮೂಡುತ್ತಿತ್ತು.

ಆ ಲವಕುಶರು ಈ ದಿನ ಏಕೋ ಇನ್ನೂ ಮರಳಲಿಲ್ಲ.ಸೀತೆಯ ಕಂಗಳಲ್ಲಿ ಭಯವು ತುಂಬಿಕೊಂಡಿದೆಯಾದರೂ ಅವಳ ಮನವು ಯಾವುದೇ ಆಪತ್ತನ್ನು ಶಂಕಿಸುತ್ತಿಲ್ಲ.’ಮೀನಿಗೆ ಈಜಲು ಕಲಿಸಬೇಕೆ ?’ ಅವರಿವ್ಬರಿಗೆ ಕಾಡು ಹೊಸತೇನಲ್ಲ.ಅವರು ಅಲ್ಲಿಯೇ ಹುಟ್ಟಿದ್ದಾರೆ. ಅಲ್ಲಿಯೇ ಬೆಳದಿದ್ದಾರೆ.ಅವರು ಅರಣ್ಯಪುತ್ರರು.ಆದರೆ ತಡವಾಗಲು ಕಾರಣವೇನಿರಬಹುದು ? ಅದು ತಿಳಿದಿಲ್ಲವೆಂದೇ  ಈ ಭಯ-ಸಂದೇಹಗಳು.ಲವಕುಶರಿಬ್ಬರೂ ಅಯೋಧ್ಯೆಗೆ ಹೋಗಿ ಬಂದಾಗಿನಿಂದಲೂ ಸೀತೆಯ ಮನದಲ್ಲಿ ಮಕ್ಕಳ ಕುರಿತು ಈ ಹಿಂದೆ ಇರದ ಆತಂಕವೊಂದು ಮನೆ ಮಾಡಿತ್ತು.ಮನದೊಳಗೆ ಏನೋ ತಿಳಿಯದ ತಳಮಳ.ಈಗಲೂ ಅದೇ ತಳಮಳ‌‌.ಕಾಡಿನ ಕುರಿತಲ್ಲ,ನಗರದ ಕುರಿತೇ.ಕತ್ತಲು ಮತ್ತಷ್ಟು ದಟ್ಟವಾಗುತ್ತಿತ್ತು.ಸೀತೆಯ ಕಂಗಳು ಜೋಡಿ ದೀಪಗಳಂತೆ ಬೆಳಗುತ್ತಿದ್ದವು.

ಅಷ್ಟರಲ್ಲಿ,ಆ ದೀಪಗಳ ಕಾಂತಿಯೊಳಗೆ ಬಾಲಕರಿಬ್ಬರು ಬಂದು ನಿಂತರು.ಸೀತೆ ಒಮ್ಮೆ ನಿಟ್ಟುಸಿರು ಬಿಟ್ಟು,ತಡವಾಗಲು ಕಾರಣವೇನೆಂದು ಅವರನ್ನು ಕೇಳಿದಳು.

“ಅಮ್ಮಾ ಇಲ್ಲಿ ನೋಡು.” ಎನ್ನುತ್ತಾ ಲವನು ತನ್ನ ಭುಜದ ಸೆಲ್ಯೆಯಲ್ಲಿ ಕಟ್ಟಿತಂದ ಹೂಗಳನ್ನು ಪಾತ್ರೆಗೆ ಸುರಿದನು.
ಕ್ಷಣದಲ್ಲೇ ಪರ್ಣಶಾಲೆ ಹಿಂದೆಂದೂ ಸವಿದಯದಿರದ ಸುಗಂಧದಿಂದ ತುಂಬಿಕೊಂಡಿತು.

ಹೂಗಳು ! ಕೆಂಪು,ಬಿಳುಪು,ಹಳದೀಯ ಹೂಗಳು ! ಪಾತ್ರೆಯ ತುಂಬಾ ಮುಖವರಳಿಸಿ ನಗುತ್ತಿವೆ.ಅವು ಎಂದೂ ನೋಡಿರದ ಹೂಗಳು.ಆ ಪರಿಮಳವೂ ಸಹ ತುಂಬಾ ಹೊಸತು. ಲವಕುಶರಿಬ್ಬರು ತಾವು ಸಾಧಿಸಿದ ಈ ಪುಷ್ಪ ವಿಜಯಕ್ಕೆ ಹೆಮ್ಮೆ ಪಡುತ್ತಿರುವಂತೆ ತಾಯಿಯತ್ತ ನೋಡಿದರು.

“ಎಲ್ಲಿಯವು ಕಂದಾ ಈ ಹೂಗಳು ? ಎಷ್ಟು ಚೆನ್ನಾಗಿವೆ ! ” ಎಂದಳು ಸೀತೆ ಅವುಗಳನ್ನು ಸುನ್ನಿತವಾಗಿ ಬೆರಳಗಳಿಂದ ಸ್ಪುರಿಸುತ್ತಾ.

“ಅಮ್ಮ ಈ ದಿನ ಅಡವಿಯಲ್ಲಿ ಒಂದು ಹೊಸ ಉದ್ಯಾನವನವನ್ನು ಕಂಡಿದ್ದೇವೆ.ಅಂತಹ ಉದ್ಯಾನವನವನ್ನು ನಾವು ಎಂದೂ ನೋಡಿರಲಿಲ್ಲ.ವಾಲ್ಮೀಕಿ ಅಜ್ಜನು ವರ್ಣಿಸುವ ಆ ನಂದನವನವೂ ಸಹ ಇದರ ಸರಿಸಾಟಿ ನಿಲ್ಲಲಾರದು.” ಎಂದನು ಕುಶ.

ಅಣ್ಣನ ಮಾತುಗಳನ್ನು ಸಮರ್ಥಿಸುತ್ತಿದ್ದವನಂತೆ ಲವ ಕಣ್ಣುಗಳಿಂದಲೇ ತನ್ನ ಒಪ್ಪಿಗೆಯನ್ನು ತಿಳಿಸಿದನು.

“ಯಾರ ಉದ್ಯಾನವನದು ಕುಶಾ ?” ಕೇಳಿದಳು ಸೀತೆ.

“ಅಮ್ಮಾ ಆ ಉದ್ಯಾನವನವೆಷ್ಟು ಸುಂದರವೋ ಅದರ ಒಡತಿಯ ರೂಪವು ಅಷ್ಟೇ ವಿಕಾರ‌.ನಾವು ಹೂವುಗಳನ್ನು ಕೊಯ್ಯುತ್ತಿದ್ದಾಗ ಬಂದಳಾಕೆ.ನಾವು ಭಯಗೊಂಡಿದ್ದೆವು.ಅಣ್ಣ ಹೇಗೋ ಧೈರ್ಯ ಮಾಡಿ -ನಾವು ಮುನಿಬಾಲಕರೆಂದು,ಪೂಜೆಗಾಗಿ ಹೂಗಳನ್ನು ಕೊಯ್ದುಕೊಂಡಿದ್ದೇವೆಂದು ಹೇಳಿದ.ನಂತರ ಅಲ್ಲಿಂದ ನಾವು ಬೇಗ ಓಡೋಡಿ ಬಂದುಬಿಟ್ಟೆವು.ಅಬ್ಬಾ ಆಕೆಯ ರೂಪ ಮಾತ್ರ ಪರಮ ವಿಕಾರ.ತುಂಬಾ ಕುರೂಪ.ಲವನು ಅಸಹ್ಯಗೊಳ್ಳುತ್ತಾ ವಿವರಿಸಿದ.

“ತಪ್ಪು ಕಂದಾ.ಮನುಷ್ಯರ ಆಕಾರಗಳನ್ನು ನೋಡಿ ಅವರ ಬಗ್ಗೆ ಅಸಹ್ಯ ಪಡಕೂಡದು.ಆಕೆ ಕುರೂಪಿಯಾದರೇನಂತೆ ? ಅಷ್ಟು ಒಳ್ಳೆಯ ಹೂದೋಟ ಬೆಳೆಸಿದ್ದಳಲ್ಲವಾ.” ಎಂದಳು ಸೀತೆ

“ಆಕೆಯ ಮೈಯೆಲ್ಲಾ ಮಾಮೂಲಾಗಿಯೇ ಇದೆಯಮ್ಮಾ.ಆದರೆ ಮೂಗು-ಕಿವಿಗಳೂ ಇಲ್ಲ.ಯಾರೋ ಕೊಯ್ದಂತೆ ಅಲ್ಲಿ ಬರೀ ತಗ್ಗು” ಕುಶನು ಮುಖವನ್ನು ಸಿಂಡರಿಸಿಕೊಂಡ.

ಸೀತೆಗೆ ಒಂದೇ ಸಲ ತನ್ನ ಬೆನ್ನ ಮೇಲೆ ಯಾರೋ ಚಾಟಿಯೇಟು ಬಡಿದಂತಾಯಿತು.

“ಮೂಗು-ಕಿವಿಗಳೂ ಇಲ್ಲವಾ ?”

“ಇಲ್ಲ ಎಂದರೆ-ಮೊದಲಿಗೆ ಇದ್ದವೇನೋ.ಆದರೀಗ ಯಾರೋ ಕೊಯ್ದಿದ್ದಾರೆ‌.ಹಾಗೇ ಅನಿಸುತಿತ್ತು ಅಲ್ಲವಣ್ಣಾ ?” ಲವನು ಕುಶನ ಸಾಕ್ಷಿಯನ್ನು ಕೋರಿದ.

ಸೀತೆಗೆ ಈಗ ಖಚಿತವಾಯಿತು.

ಹೌದು ಆಕೆ ಶೂರ್ಪನಖಿ.ಯಾವುದೇ ಸಂದೇಹವಿಲ್ಲ.

ಹದಿನೆಂಟು ವರ್ಷಗಳ ಹಿಂದಿನ ಮಾತು.ರಾಮನನ್ನು ಬಯಸಿ ಬಂದಿದ್ದಳು.ಎಷ್ಟು ಸುಂದರವಾಗಿದ್ದಳು.ರಾಮ-ಲಕ್ಷ್ಮಣರ ಕ್ರೂರವಾದ ಪರಿಹಾಸಕ್ಕೆ ಪಾಪ ಕುರೂಪಿಯಾಗಿದ್ದಾಳೆ.ಆ ಶೂರ್ಪನಖಿ ಈಗ ಈ ಅರಣ್ಯದಲ್ಲೇ ಇರುವಳಾ ? ಎಷ್ಟು ವರ್ಷಗಳಾದವು ?


ಶೂರ್ಪನಖಿಯನ್ನು ರಾಮನು ಅವಮಾನಿಸಿದ್ದಕ್ಕಾಗಿ ರಾವಣನು ತನ್ನನಪಹರಿಸಿ ರಾಮನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದುಕೊಂಡನು.

ಗಂಡಸರ ಹಾಗೆ,ಸೇಡುಗಳನ್ನು ತೀರಿಸಿಕೊಳ್ಳಲಿಕ್ಕೆಯೇ ಹೆಂಗಸರಿದ್ದಿದ್ದು ?

ರಾವಣನ ತಂಗಿಯೆಂದು ಗೊತ್ತಿದ್ದರೆ ರಾಮ-ಲಕ್ಷ್ಮಣರು ಶೂರ್ಪನಖಿಗೆ ಹಾಗೆ ಮಾಡುತ್ತಿರಲಿಲ್ಲ.ರಾವಣನನ್ನು ಕೆರಳಿಸುವುದೇ ರಾಮನ ಉದ್ದೇಶವಾಗಿತ್ತು.ಆತನೊಂದಿಗೆ ಕದನಕ್ಕಿಳಿಯಲು ಕಾರಣ ಹುಡುಕುತ್ತಿದ್ದ ರಾಮನ ಅನ್ವೇಷಣೆಯು ಶೂರ್ಪನಖಿಯಿಂದ ನೆರವೇರಿತ್ತು.

ಇದೆಲ್ಲ ರಾಜಕೀಯ.

ಪಾಪ ಶೂರ್ಪನಖಿ ! ಪ್ರೀತಿ-ಪ್ರೀತಿಯೆಂದು ಪರಿತಪಿಸುತ್ತಾ ಬಂದಿದ್ದಳು.ಮೂಗೂ-ಕಿವಿಗಳೂ ಇಲ್ಲದ ಆ ಕುರೂಪಿಯನ್ನು ಈಗ ಯಾರು ತಾನೆ ಪ್ರೀಸುತ್ತಾರೆ ?

ಜೀವನವೆಲ್ಲ  ಹೀಗೆ ಪ್ರೀತಿಯಿಲ್ಲದೆ ಕಳೆದಳಾ ?

ತನ್ನೊಳಗಿನ ಪ್ರೀತಿಯನ್ನೆಲ್ಲಾ ಸುರಿದು ಆ ಹೂದೋಟವನ್ನು ಬೆಳದಳಾ ?

ತನ್ನ ಸೌಂದರ್ಯಕಾಂಕ್ಷೆಯ ಫಲವಾಗಿ ಉದ್ಯಾನವನ್ನುವನ್ನು ಅಷ್ಟು ಸುಂದರವಾಗಿ ರೂಪಿಸಿದಳಾ ?

ಆಕೆಯ ಕೋಮಲ ಹೃದಯದ ಪ್ರತಿಫಲನಗಳಾ ಈ ಹೂಗಳು ?

ಪಾಪ ಶೂರ್ಪನಖಿ !

ಸೀತೆಯ ಕಣ್ಣು ಒದ್ದೆಯಾದದ್ದನ್ನು ಕಂಡು ಲವಕುಶರು ಆಚ್ಚರಿಗೊಂಡರು.

“ಏನಮ್ಮಾ ಇದು ? ಯಾರೋ ಅನಾಮಿಕೆಯ ಕುರೂಪಿತನದ ಬಗ್ಗೆ ಕೇಳಿದ ಮಾತ್ರಕ್ಕೆ ಅಳುತ್ತಿರುವೆಯೇಕಮ್ಮಾ ?”

“ನಾಳೆ ನನ್ನನ್ನು ಆ ಉದ್ಯಾನವನಕ್ಕೆ ಕರೆದುಕೊಂಡು ಹೋಗುವಿರಾ ?”

ಸೀತೆ ಕಣ್ಣೊರೆಸಿಕೊಂಡು ಕಿರುನಗು ಬೀರುತ್ತಾ ಕೇಳಿದಳು.

ಲವಕುಶರು ನಂಬಲಾಗದೆ ಮುಖ-ಮುಖ ನೋಡಿಕೊಂಡರು.

“ನಿಜವಾಗಿಯೂ ನಾನು ನಿಮ್ಮ ಜೊತೆ ಬರುವೆ.ಕರೆದುಕೊಂಡು ಹೋಗುವಿರಾ ? ಆ ದಾರಿ ನೆನಪಿದೆಯಾ ?

ಸೀತೆಯ ಮಾತುಗಳಿಗೆ ಅಣ್ಣತಮ್ಮಂದಿರ ಸಂಭ್ರಮವು ಮುಗಿಲುಮುಟ್ಟಿತ್ತು.

ತಾಯಿ ತಮ್ಮೊಂದಿಗೆ ಅರಣ್ಯ ವಿಹಾರಕ್ಕೆ ಬರುತ್ತಾಳೆಂದು ತಿಳಿದು ಅವರಿಬ್ಬರ ಮನಗಳು ಉಲ್ಲಾಸದಿಂದ ಉಕ್ಕೇರಿದವು.ತಮಗೆ ಸುಪರಿಚಿತವಾದ ಅರಣ್ಯ ತಾಣಗಳನ್ನೆಲ್ಲಾ ತಾಯಿಗೆ ತೋರಿಸಬೇಕೆಂದು ಅವರಿಗೆ ಎಂದಿನಿಂದಲೋ ಕುತೂಹಲ ಇದ್ದೇ ಇತ್ತು.ಆದರೆ ಸೀತೆ ಎಂದೂ ಹೋಗುವವಳಲ್ಲ.ಹೋದರೂ ಸಹ ಮುನಿಕಾಂತೆಯೆರೊಡನೆಯೇ ಹೋಗುತ್ತಿದ್ದಳು.ಆದರೀಗ-ಅಮ್ಮನ ಕೈ ಹಿಡಿದು ಆ ದುರ್ಗಮ್ಮಾರಣ್ಯದಲ್ಲಿ ಸಂಚರಿಸಬಹುದು,ಅಮ್ಮನಿಗೆ ಭಯವಾಗದಂತೆ ಧೈರ್ಯ ಹೇಳಬಹುದು,ಅರಣ್ಯದ ಅದ್ಭುತಗಳನ್ನೆಲ್ಲಾ ತೋರಿಸುಬಹುದು ಎಂದುಕೊಂಡಂತೆಲ್ಲಾ ಆ ಪುಟಾಣಿಗಳಿಬ್ಬರ ಸಂತಸಕ್ಕೆ ಮಿತಿಯೇ ಇಲ್ಲ.

ಆ ರಾತ್ರಿ ಕಳೆದು ಅದೆಷ್ಟು ಬೇಗ ಬೆಳಕು ಹರಿವುದೋ ಎಂದುಕೊಂಡರು ಕುಶಲವರಿಬ್ಬರು.

ಆ ರಾತ್ರಿ ಸೀತೆಗೂ ಸಹ ಭಾರವಾಗಿಯೇ ಕಳೆಯಿತು.ಗತಕಾಲದ ನೆನಪುಗಳು ಎಷ್ಟು ದೂರ ತಳ್ಳಿದರೂ,ಮತ್ತೆ ಮತ್ತೆ ಮುಂದೆ ಬಂದು ನಿಲ್ಲುತ್ತಿವೆ.

ರಾಮನೊಡನೆ ಆನಂದದಿಂದ ಕಳೆದ  ಆ ಅರಣ್ಯವಾಸದ ದಿನಗಳು.

ಎಷ್ಟು ಮನಮೋಹರವಾಗಿ ನಡೆದು ಬಂದಿದ್ದಳು ಶೂರ್ಪನಖಿ. ತಲೆಯಲ್ಲಿ ಬಿಳಿ ಮಲ್ಲಿಗೆ,ಕೊರಳಲ್ಲಿ ಹಳದಿ-ಕಣಗಿಲೆ ಹಾರ, ಕೈಗಳಿಗೆ ನೀಲಾಂಬರದ ಹೂಮಾಲೆ.ನಡೆದಾಡುವ ಹೂಬಳ್ಳಿಯಂತೆ ಬಂದಿದ್ದಳು.ತನ್ನ ಚಿನ್ನದೊಡವೆಗಳತ್ತ ವಿಚಿತ್ರವಾಗಿ ನೋಡಿದಳು.

 

ಪರಿಮಳವಿಲ್ಲದ,ಕೋಮಲವಲ್ಲದ ಆ ಭಾರವನ್ನೇಕೆ ಹೊರುತ್ತಿರುವೆ ಎಂಬಂತೆಯೇ ನೋಡಿದಳು.ತನ್ನನ್ನು ನೋಡಿದಳೇ ವಿನಃ ತುಟಿ ಬಿಚ್ಚಲಿಲ್ಲ.ಸರಸರನೆ ರಾಮನ ಬಳಿಗೆ ಹೋದಳು.ತಾನು ಇವರ ಮಾತುಗಳ ಮೇಲೆ ಲಕ್ಷ್ಯವಿಟ್ಟೇ ಬೇರೆ ಯಾವುದೋ ಕೆಲಸದಲ್ಲಿ ತೊಡಗಿದ್ದಳು.ಕೆಲಹೊತ್ತಿನಲ್ಲೇ ಆಶ್ರಮದಲ್ಲಿ ರಕ್ತಪಾತ.

ಒಂದು ಹೆಣ್ಣಿನ ಹೃದಯ ವಿದ್ರಾವಕ ರೋಧನೆ.

ಅದೆಷ್ಟು ಶಪಿಸಿರಬಹುದು ಆಕೆ ಆ ಕೃತ್ಯಕ್ಕೆ.

ಆ ಶಾಪದಿಂದ ತಾನಿನ್ನೂ ಬಿಡಿಸಿಕೊಂಡಂತಿಲ್ಲ.

ಆಕೆಯನ್ನು ಇನ್ನು ಯಾವ ಗಂಡಸೂ ಪ್ರೀತಿಸುವುದಿಲ್ಲ.

ತನ್ನನ್ನು ಪ್ರೀತಿಸಿದ ಗಂಡಸೇ ತನ್ನನ್ನು ತೊರೆದಿದ್ದಾನೆ.

ಇಬ್ಬರ ಕಥೆಗಳೂ ಕೊನೆಗೆ ಒಂದೇ ಜಾಡು ಹಿಡಿದವಾ ?

ಏನೆನ್ನತ್ತಾಳೋ ಶೂರ್ಪನಖಿ ತನ್ನನ್ನು ಕಂಡ ಮೇಲೆ ?

ತನ್ನ ಮೇಲಿನ ಕೋಪದಿಂದಾಗಿ ಮಾತನಾಡುವದಿಲ್ಲವೇ ?
ಆದರೂ ಸರಿ,ಶೂರ್ಪನಖಿಯನ್ನು ನೋಡಲೇಬೇಕು.

*

ಮರುದಿನದ ಬೆಳಗು ಕೆಲಸಗಳೆಲ್ಲ ಮುಗಿದ ಮೇಲೆ  ಲವಕುಶರಿಬ್ಬರೂ ತಾಯಿಯನ್ನು ಕರೆದುಕೊಂಡು ಕಾಡಿಗೆ ಹೊರಟರು.

“ಅಮ್ಮಾ ಈ ದಿನ ನಿನಗೆ ನನ್ನ ‘ರಾಜಾ’ನನ್ನ ತೋರಿಸುವೆ.” ಎಂದನು ಲವ.

ಅರಣ್ಯದೊಳಗೆ ಹಾಯಾಗಿ ಅಲೆದಾಡುವ ಮದ್ದಾನೆಯೊಂದು ಲವನ ವಶವಾಗಿತ್ತು.

ಅದರ ಮೇಲೇರಿ ಸೋದರರಿಬ್ಬರೂ ಅರಣ್ಯವಿಹಾರ ಮಾಡುತ್ತಾರೆ.

“ಅಮ್ಮಾ ನೀನು ರಾಜಾನ ಮೇಲೆ ಹತ್ತೋದಿಲ್ಲೇನು ?” ಲವನು ಮುದ್ದಾಗಿ ಕೇಳಿದನು.

“ಬೇಡ ಮಗ.ನನಗೆ ನಡೆಯುವುದೇ ಇಷ್ಟ.” ಎಂದಳು ಸೀತೆ,ತಾನು ಪಟ್ಟದಾನೆಯ ಮೇಲೆ ಮೆರೆದ ಆ ದಿನಗಳನ್ನು ಮೆಲುಕು ಹಾಕುತ್ತಾ.

ಸೀತೆಗೆ ಆನೆಯೆಂದರೆ ಭಯವೆಂದುಕೊಂಡಿದ್ದಾರೆ ಅವರು.

“ಪಾಪ,ಅಮ್ಮನಿಗೆ ಆನೆ ಹತ್ತಲಾದೀತೇನು ? ಭಯವೂ ಬೇರೆ.” ಕುಶನು ಲವನನ್ನು ಗದರಿದ.

ನಂತರ ಅವರಿಬ್ಬರೂ ತಮಗೆ ಅಡವಿಯಲ್ಲಿ ಪರಿಚಯವಾದ ಜಂತುಜಾಲವನ್ನೆಲ್ಲಾ ತಾಯಿಗೆ ತೋರಿಸುತ್ತಾ ನಡೆದರು.

ಎಷ್ಟು ದೂರ ನಡೆದರೂ ಮಕ್ಕಳಿಬ್ಬರ ಮುದ್ದಾದ ಮಾತುಗಳಿಂದಾಗಿ ದಣಿವೇ ತಿಳಿಯಲಿಲ್ಲ ಸೀತೆಗೆ.

“ಇದೇ ಅಮ್ಮಾ ಆ ಉದ್ಯಾನವನ.”

ಸೀತೆ ಅಲ್ಲೇ ನಿಂತಳು.ನಿಸರ್ಗದ ಮಧುರಹಾಸದಂತಹ ಆ ತೋಟವನು ಹಾಗೆಯೇ ನೋಡುತ್ತಾ ಇದ್ದುಬಿಡಬೇಕೆನಿಸಿತು ಆಕೆಗೆ.ಇದರ ಹೋಲಿಕೆಗೆ ಅಶೋಕವನವು ಏನೂ ಅಲ್ಲವೆಂದೂ ಸಹ ಅನಿಸಿತು.

“ನೀನು ಧನ್ಯಳು ಶೂರ್ಪನಖಿ !” ಎಂದುಕೊಂಡಳು ಸೀತೆ ಮನದೊಳಗೆ.

“ಬಾ ಅಮ್ಮಾ, ಒಳಗೆ ಹೋಗೋಣ.” ಎಂದರು ಮಕ್ಕಳು.

“ನಾನೊಬ್ಬಳೆ ಹೋಗುವೆ.ನೀವು ಸಂಜೆಯವರೆಗೂ ಅರಣ್ಯ ಸುತ್ತಿ ಬನ್ನಿ.ಆಮೇಲೆ ಮೂವರೂ ಸೇರಿ ಆಶ್ರಮಕ್ಕೆ ಮರಳೋಣ.”

ಮಕ್ಕಳು ಅತ್ತ ಹೋದಮೇಲೆ ಸೀತೆ ಉದ್ಯಾನವನದೊಳಗೆ ಬಂದಳು.

ದೂರದಲೊಬ್ಬ ಹೆಂಗಸು ನಿಂತಿದ್ದಳು.ಆಕೆ ಆಕಡೆಗೆ ಮುಖಮಾಡಿದ್ದರೂ,ಆ ಆಕಾರವನ್ನು ನೋಡಿದರೆ ಆಕೆ ಶೂರ್ಪನಖಿಯೇ ಇರಬಹುದೆಂದುಕೊಂಡಳು ಸೀತೆ.

ಹತ್ತಿರಕ್ಕೆ ಹೋಗಿ “ಶೂರ್ಪನಖಿ-“ಎಂದು ಮೆಲ್ಲದನಿಯಲ್ಲಿ ಕರೆದಳು.

ಶೂರ್ಪನಖಿ ಹಿಂದಿರುಗಿ ನೋಡಿದಳು.ಆಕೆಗೆ ಸೀತೆಯನ್ನು ಗುರುತು ಹಿಡಿಯಲಾಗಲಿಲ್ಲ.

“ಯಾರಮ್ಮಾ ನೀನು ? ದಾರಿತಪ್ಪಿ ಬಂದೆಯಾ ? ನನ್ನ ಹೆಸರೇಗೆ ಗೊತ್ತು ?” ಎಂದು ಕೇಳಿದಳು.

“ದಾರಿತಪ್ಪಿ ಬರಲಿಲ್ಲ ಶೂರ್ಪನಖಿ.ದಾರಿ ಹುಡುಕುತ್ತಲೇ ಬಂದಿದ್ದೇನೆ.ನಾನು ಸೀತೆ.”

ಶೂರ್ಪನಖಿಗೆ ಬಾಯಿ ಕಟ್ಟಿದಂತಾಯಿತು.

ಸೀತೆ-ಈಕೆ ಸೀತೆನಾ ! ಎಷ್ಟು ಬದಲಾಗಿದ್ದಾಳೆ !

ಮೈತುಂಬಾ ಆಭರಣಗಳ ಭಾರವೊತ್ತು ಶೋಭಿಸುತ್ತಿದ್ದ ಸೀತೆ ಮಾತ್ರ ತನಗೆ ಗೊತ್ತು.ಅದೂ ತುಂಬಾ ಹೊತ್ತು ನೋಡಿರಲಿಲ್ಲ.

ರಾವಣನನ್ನು ಸಂಹರಿಸಿ ಆರ್ಯ ಸಾಮ್ರಾಜ್ಯವನ್ನು ದಕ್ಷಿಣಪಥಕ್ಕೆಲ್ಲಾ ವಿಸ್ತರಿಸಿದ  ಚಕ್ರವರ್ತಿ ಶ್ರೀರಾಮಚಂದ್ರನ ಪಟ್ಟಮಹಿಷಿ ಸೀತೆಯಾ ಈಕೆ ?

ಶೂರ್ಪನಖಿಗೆ ನಂಬಲಾಗುತ್ತಿಲ್ಲ.

ಈ ನಾರಿನಸೀರೆಳೇನು ? ಈ ಹೂಮಾಲೆಗಳ ಆಭರಣಗಳೇನು ?

ಬಿಸಿಲಿಗೆ ಕಂದುಹೋದ ಆ ಬಂಗಾರದ ಛಾಯೆ ಏನು ?

ಈಕೆ ಸೀತೆನಾ ? ಶ್ರೀರಾಮಚಂದ್ರನ ಪತ್ನಿ ಸೀತೆನಾ ?

“ಸೀತೆ ಎಂದರೆ ಶ್ರೀರಾಮಚಂದ್ರನ-”

ಸೀತೆ ಶೂರ್ಪನಖಿಯನ್ನು ಅರ್ಧಕ್ಕೆ ತಡೆದು-

“ನಾನು ಸೀತೆ,ಜನಕನ ಮಗಳು,ಜಾನಕಿ.ಭೂಪುತ್ರಿ.” ಎಂದಳು ಹೆಮ್ಮೆಯಿಂದ.

“ಮತ್ತೆ ಶ್ರೀರಾಮ ?”  ಶೂರ್ಪನಖಿಗೆ ಎಲ್ಲವೂ ಅಯೋಮಯವಾಗಿದೆ‌.

“ಶ್ರೀರಾಮ ನನ್ನನ್ನು ಪರಿತ್ಯಜಿಸಿದ್ದಾನೆ.ನಾನೀಗ ವಾಲ್ಮೀಕಿಯ ಆಶ್ರಮದಲ್ಲಿದ್ದೇನೆ.”

ಶೂರ್ಪನಖಿಗೆ ಮತ್ತೆ  ಬಾಯಿ ಕಟ್ಟಿದಂತಾಯಿತು.
ಶ್ರೀರಾಮಚಂದ್ರನು ಸೀತೆಯನ್ನು ಪರಿತ್ಯಜಿಯಿಸುವುದಾ !
ರಾಮ-ಸೀತೆಯರ ಪ್ರೀತಿ ತನಗೆ ಗೊತ್ತಿರುವಷ್ಟು ಚೆನ್ನಾಗಿ ಮತ್ತಾರಿಗೂ ಗೊತ್ತಿಲ್ಲ.ಅದಕ್ಕೆ ತಾನು ತೆತ್ತ ಬೆಲೆ ಕಡಿಮೆಯೇನಲ್ಲ.

ಶ್ರೀರಾಮನನ್ನು ಪ್ರೀತಿಸಿದ ಹೆಂಗಸರಿಗೆ ವೇದನೆ ತಪ್ಪುವುದಿಲ್ಲವಾ ?

ಶೂರ್ಪನಖಿಗೆ ಸೀತೆಯ ಮುಖದಲ್ಲಿ ಶಾಂತಿಗಂಭೀರತೆಗಳ ಹೊರತು ವೇದನಾ ಛಾಯೆಗಳೇನೂ ಕಾಣಲಿಲ್ಲ.

ಸೀತೆ ತುಂಬಾ ಮಾಗಿದ್ದಾಳೆ ಎಂದುಕೊಂಡಳು ಶೂರ್ಪನಖಿ.

“ನಿನ್ನೆ ನನ್ನ ಮಕ್ಕಳು ನಿನ್ನ ಉದ್ಯಾನವನವನ್ನು ನೋಡಿದ್ದಾರೆ. ನಿನ್ನನ್ನೂ ಸಹ.ಈ ದಿನ ಅವರೇ ನನ್ನನಿಲ್ಲಿಗೆ ಕರೆದುಕೊಂಡು ಬಂದಿದ್ದಾರೆ.ನಿನ್ನ ತೋಟವು ತುಂಬಾ ಸುಂದರವಾಗಿದೆ.ಇಲ್ಲಿ ಮನಸ್ಸಿಗೆ ತುಂಬಾ ಹಾಯೆನಿಸುತ್ತಿದೆ.”

“ಆ ಪುಟಾಣಿಗಳು ನಿನ್ನ ಮಕ್ಕಳಾ-ಎಷ್ಟು ಮುದ್ದಾಗಿದ್ದಾರೆ !” ಎಂದಳು ಶೂರ್ಪನಖಿ.

ಸೀತೆಯ ಮುಖದಲ್ಲಿ ಒಂದು ಕ್ಷಣ ಹೆಮ್ಮೆಯ ಭಾವವು ಮಿಂಚಿ  ಮಾಯವಾಯಿತು.ಅದು ಶೂರ್ಪನಖಿಯ ಗಮನವನ್ನು ದಾಟಿಹೋಗಿರಲಿಲ್ಲ.

“ಈ ತೋಟದೊಳಗಿನ ಸಸ್ಯಗಳು,ಲತೆಗಳು,ತರುಗಳು ಎಲ್ಲವೂ ನನ್ನ ಮಕ್ಕಳೇ ಸೀತಾ.”ಎಂದಳು ಶೂರ್ಪನಖಿ.

“ಹೌದು ಆ ಕಾರಣಕ್ಕಾಗಿಯೇ ಇಷ್ಟು ಮನೋಹರವಾಗಿವೆ.” ಒಪ್ಪಿಕೊಂಡಳು ಸೀತೆ.

ಶೂರ್ಪನಖಿಯ ಕಂಗಳಲ್ಲಿ ಧನ್ಯತಾಭಾವವು ತುಂಬಿ ತುಳುಕುತಿತ್ತು.

“ಹೇಳು ಶೂರ್ಪನಖಿ-ನಿನ್ನ ಜೀವನ ಈಗ ಹೇಗಿದೆ ?”

“ಈ ಉದ್ಯಾನವನದಷ್ಟು ಅಂದವಾಗಿ,ಆನಂದವಾಗಿದೆ ಸೀತಾ.”

“ನಿನ್ನನ್ನು ನೋಡಿದರೆ ಸಂತಸವಾಗುತ್ತಿದೆ ಶೂರ್ಪನಖಿ.ನಿನಗಾದ ಅವಮಾನಕ್ಕೆ ನೀನು ಏನಾಗುವೆಯೋ ಎಂದುಕೊಂಡಿದ್ದೆ‌.ನಿನ್ನ ಸೌಂದರ್ಯ ಕಾಂಕ್ಷೆ ಏಂತಹುದೆಂದು ನನಗೆ ಗೊತ್ತು.ನಿನ್ನ
ಕುರೂಪಿತನವನ್ನು ನೀನು ಸಹಿಸಕೊಳ್ಳುವೆಯೋ ? ಸಹಿಸಲಾಗದೆ ಏನಾದರೂ ಮಾಡಿಕೊಂಡಿರುವೆಯೋ ಎಂದುಕೊಂಡು ನಿನ್ನ ನೆನಪಾದಾಗಲೆಲ್ಲ ನೊಂದುಕೊಳ್ಳುತ್ತಿದ್ದೆ.”

ತನ್ನತ್ತ ನೋಡಿದ ಸೀತೆಯ ಕಣ್ಣಲ್ಲಿಯ ಪ್ರೀತಿಗೆ,ಅನುಕಂಪಕ್ಕೆ ಕರಗಿ ಹೋದಳು ಶೂರ್ಪನಖಿ.

ಅವರಿಬ್ಬರ ಎದೆಗಳಲ್ಲಿ ಸ್ನೇಹ ಭಾವ ಅಂಕುರಿಸಿ ದೇಹಗಳು ಪುಳಕಿಸಿದವು.

“ಶೂರ್ಪನಖಿ,ನೀನು ಧೈರ್ಯವಂತೆ,ಸಾಹಸಿ.” ಎಂದಳು ಸೀತೆ.

ಮನಪೂರ್ವಕವಾಗಿ ಸೀತೆಯೆಂದ ಆ ಮಾತು ಶೂರ್ಪನಖಿಯ ಮನದಲ್ಲಿ ಉದ್ವೇಗವನ್ನು ತುಂಬಿತು.ತನ್ನ ಜೀವನದ ಗಮನವನ್ನು ಸೀತೆಗೆ ತಿಳಿಸಬೇಕೆಂಬ ಸ್ನೇಹಭಾವವು ಮೂಡಿತು.

“ನನ್ನ ಈ ಸದ್ಯದ ಸ್ಥಿತಿಯೇನಿದೆ-ಅದನ್ನು ದಕ್ಕಿಸಿಕೊಂಡ ಪರಿ ಸುಲಭವಲ್ಲ ಸೀತಾ.ಬದುಕಿಗೆ ಎದುರೀಜುತ್ತಲೇ ಗಟ್ಟಿಗೊಂಡಿದ್ದೇನೆ.ಸೌಂಧರ್ಯಕ್ಕೆ ನಿಜವಾದ ಅರ್ಥವೇನೆಂದು ತಿಳಿದುಕೊಳ್ಳುವುದರಲ್ಲೇ ಆನಂದವನ್ನು ಕಂಡುಕೊಂಡಿದ್ದೇನೆ.

ವಿರೂಪಗೊಂಡ ಆ ದಿನಗಳಲ್ಲಿ ಬದುಕು ದುರ್ಭರವಾಗಿಯೇ ಇತ್ತು.

ನನ್ನ ರೂಪ ನನಗೇ ಅಸಹ್ಯವೆನಿಸುತ್ತಿತ್ತು.ನನ್ನನ್ನು ನಾನೇ ದ್ವೇಷಿಸಿಕೊಳ್ಳುತ್ತಿದ್ದೆ.ಸಾವಿಗೆ ಶರಣಾಗಲು ಪ್ರಯತ್ನಿಸಿದ ದಿನಗಳೂ ಇವೆ.

ನನಗೆ ಸೌಂದರ್ಯ ಬೇಕು.ಪ್ರೀತಿ ಬೇಕು.ಇವೆರಡೂ ಇಲ್ಲದೆ ನಾನು ಬದುಕಲಾರೆ.ಆದರೆ ಅಂತಹ ನಾನು ಕುರೂಪಿಯಾದೆ.

ನನ್ನ ರೂಪವನ್ನು ಕಂಡ ಗಂಡಸರು,ನಾನು ಮೋಹಿಸಿದ ಸುಂದರವಾದ ಗಂಡಸರು ನನ್ನ ಬಗ್ಗೆ ಅಸಹ್ಯಪಡತೊಡಗಿದರು.

ಹಾಗಿರಲು  ಇಂತಹ ಬಾಳಾದರೂ ಏಕೆ ಅನ್ನಿಸತೊಡಗಿತು.ಆ ದಿನಗಳು ತುಂಬಾ ನರಕಪ್ರಾಯವಾಗಿದ್ದವು.ನನ್ನ ಮನ ದುಃಖದಿಂದ,ಕ್ರೋಧದಿಂದ ನಿತ್ಯ ಉರಿಯುತ್ತಲೇಯಿತ್ತು.
ಶ್ರೀರಾಮನನ್ನು,ಆತನ ತಮ್ಮನನ್ನು,ಕೊನೆಗೆ ನಿನ್ನನ್ನೂ ಎಷ್ಟು  ಶಪಿಸಿದ್ದೆ ಗೊತ್ತಾ ! ತುಂಬಾ ವಿಷಕಾರಿದ್ದೆ ನಿಮ್ಮ ಮೇಲೆ.ನನ್ನೊಳೊಗೆ ಎಳ್ಳಷ್ಟು ಪ್ರೀತಿಯಾದರೂ ಇರದೆ ಬರೀ ದ್ವೇಷವೇ ತುಂಬಿಕೊಂಡಿತ್ತು.ಸೌಂಧರ್ಯವನ್ನು ಆರಾಧಿಸುತ್ತಿದ್ದ ನಾನು,ಸುಂಧರವಾಗಿದ್ದ ಎಲ್ಲವನ್ನೂ ದ್ವೇಷಿಸತೊಡಗಿದೆ.ನನ್ನ ಸೌಂಧರ್ಯಕಾಂಕ್ಷೆ ಸುಂದರಿಯರ ಮೇಲೆ ಅಸೂಯೆಯಾಗಿ ಮಾರ್ಪಟ್ಟಿತು.

ನಾನೊಂದು ನಡೆದಾಡುವ ಅಗ್ನಿಪರ್ವತವಾದೆ.ಉಕ್ಕೇರುವ ಕಣ್ಣೀರ ಕಡಲಾದೆ.”

ದುಃಖಮಯವಾದ ಶೂರ್ಪನಖಿಯ ನೆನಪುಗಳಿಂದ ಇಬ್ಬರೂ ಎದೆಗಳೂ ಭಾರಗೊಂಡವು.

“ಅಂತಹ ನೋವಿನಿಂದ ಹೇಗೆ ಪಾರಾದೆ ಶೂರ್ಪನಖಿ ?” ಕೇಳಿದಳು ಸೀತೆ.

“ತುಂಬಾ ಕಷ್ಟಪಟ್ಟೆ ಸೀತಾ.ಸೌಂಧರ್ಯದ ನಿಜವಾದ ಅರ್ಥವೇನೆಂದು ತಿಳಿದುಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ.ನನಗೆ ಅಮಿತ ಸೌಂಧರ್ಯದ ಗರ್ವವಿತ್ತು.ನನ್ನ ಮೂಗನ್ನು ನೋಡಿಕೊಂಡು ನಾನದೆಷ್ಟು ಬೀಗುತ್ತಿದ್ದೆನೋ ನಿನಗೆ ಗೊತ್ತಿಲ್ಲ.ನಿಮ್ಮ ಆರ್ಯರ ನೀಳವಾದ ಮೂಗುಗಳನ್ನು ನೋಡಿದರೆ ನನಗೆ ವಿಚಿತ್ರವೆನಿಸುತ್ತದೆ.ವಿಚಿತ್ರವೆಂ ದರೂ ಅದರೊಳಗೆ ಒಂದು ಸೌಂಧರ್ಯ ಇಲ್ಲದಿರಲಾರದು.ನನ್ನ ಮೂಗೊ ನೀಳವಲ್ಲ,ಹಾಗೆಂದು ಚಪ್ಪಟೆಯೂ ಅಲ್ಲ ಮತ್ತೆ.ಮೂಗು ಹೇಗಿರಬೇಕೆಂದು ಆ ಪರಮಾತ್ಮನು ಲೋಕಸೃಷ್ಟಿಯ ವೇಳೆಯಲಿ ಅಂದುಕೊಂಡನೋ,ನನ್ನದೂ ಅಂತಹದೇ ಎಂಬ ಹೆಮ್ಮೆ ನನಗೆ.ಹಚ್ಚನೆಯ,ಬೆಳ್ಳನೆಯ ಹುಲ್ಲಿನ ಹೂಗಳನ್ನು ನನ್ನ ಮೂಗಿಗೆ ಸಿಂಗರಿಸಿಕೊಳ್ಳುತ್ತಿದ್ದೆ.ಮೂಗುಹೊ ಳ್ಳೆಗಳ ಎರಡು ಬದಿಗೆ ಅವು ಚುಕ್ಕಿಗಳಂತೆ ಹೊಳೆಯುತ್ತಿದ್ದವು.ನನಗೆ ಪ್ರಿಯವಾದವರು ಯಾರಾದರೂ ನನ್ನ ಮೂಗನ್ನು ಮೃದುವಾಗಿ ಚುಂಬಿಸಿದರೆ ನನಗೆ ಹೇಳತೀರದಷ್ಟು ಪುಳಕ ಉಂಟಾಗುತ್ತಿತ್ತು.

ಆ ಮೂಗನ್ನು ಕಳೆದುಕೊಳ್ಳುವುದೆಂದರೆ ಏನೆಂದು ನನ್ನ ಹೊರತು  ಬೇರೆ ಯಾರಿಗೂ ಅರ್ಥವಾಗುವುದಿಲ್ಲ.ಆದರೂ ಅದನ್ನೆಲ್ಲಾ ಸಹಿಸಿದ್ದೆ.ವಿರೂಪದಿಂದಾಗಿ ಉಂಟಾಗುವ ವಿಕೃತವಾದ ಯೋಚನೆಗಳ ಭಾರವನ್ನೆಲ್ಲಾ ಹೊತ್ತಿದ್ದೆ.ಒಮ್ಮೊಮ್ಮೆ ನನಗೆ ಎಲ್ಲರನ್ನೂ,ಎಲ್ಲವನ್ನೂ ವಿರೂಪಗೊಳಿಸಬೇಕೆನಿಸುತ್ತಿತ್ತು.

ಆ ಸಿಡುಕಿನಿಂದ ಹೊರಬರಲು,ಮರಳಿ ಸೌಂದರ್ಯವನ್ನು ಪ್ರೀತಿಸಲು,ರೂಪ-ಅರೂಪಗಳ ನಿಜ ಸಾರಾಂಶವನ್ನು ಕಂಡುಕೊಳ್ಳಲು ನನ್ನೊಂದಿಗೆ ನಾನು ದೊಡ್ಡ ಯುದ್ಧವನ್ನೇ ಮಾಡಬೇಕಾಯಿತು.

ಆ ಯುದ್ಧದಲ್ಲಿ ನನಗೆ ಸಹಕಾರ ನೀಡಿದ್ದು ಈ ಅನಂತ ಪ್ರಕೃತಿ.

ಪ್ರಕೃತಿಗೆ ರೂಪ,ಕುರೂಪವೆಂಬ ಭೇದಗಳಿಲ್ಲವೆಂದು ಗ್ರಹಿಸಲು ತುಂಬಾ ಕಷ್ಟಪಟ್ಟೆ.ಅನೇಕ ಜೀವಿಗಳನ್ನು,ಮತ್ತವುಗಳ ಜೀವನಕ್ರಮವನ್ನೂ ಗಮನಿಸಿದೆ.ಸ್ತಬ್ಧತೆ-ಚಲನೆಯಲ್ಲಿಯ ಏಕತೆಯನ್ನು ಕಂಡುಕೊಂಡೆ.ಬಣ್ಣಗಳ ರಹಸ್ಯವನ್ನು ಅರಿತೆ.ಇದೆಲ್ಲದಕ್ಕೆ ನನಗೆ ಯಾವ ಗುರುವೂ ಇರಲಿಲ್ಲ.ನಾನೇ ಸ್ವತಃ ಸಾಧಿಸಿದೆ.ಪ್ರಕೃತಿಯೊಳಗಿನ ಅಣುಅಣುವನ್ನೂ ಶೋಧಿಸಿದೆ.ಆ ಶೋಧನೆಯಲ್ಲಿ ನನ್ನ ಕಣ್ಣುಗಳೇ ಬದಲಾಗಿಬಿಟ್ಟವೆ.ನನ್ನ ಕಣ್ಣಿಗೆ ಪ್ರತಿಯೊಂದೂ ಸುಂದರವಾಗಿ ಕಾಣತೊಡಗಿತು.ನನ್ನನ್ನೂ  ಒಳಗೊಂಡು ಪ್ರತಿಯೊಂದನ್ನು ಅಸಹ್ಯದಿಂದ ಕಾಣುತ್ತಿದ್ದ ನಾನು, ನನ್ನನ್ನೂ ಸೇರಿದಂತೆ ಸುತ್ತಲಿನ ಎಲ್ಲವನ್ನೂ ಪ್ರೀತಿಸತ್ತಾ ಬಂದೆ.

ಹಕ್ಕಿಗಳೆರಡು ಯಾವುದೋ ಕಾರಣಕ್ಕೆ ಹಕ್ಕಿಮರಿಯೊಂದನ್ನು ಕುಕ್ಕಿ ಕುಕ್ಕಿ ಪುಕ್ಕ ಮುರಿದ ದೃಶ್ಯ ನನ್ನೊಳಗೆ ಎಂತಹ ಸ್ಪಂದನೆಯನ್ನುಂಟು ಮಾಡಿತ್ತೆಂದರೆ ಅದು ಎಷ್ಟು ಪ್ರೇಮಭರಿತವೋ ಅಷ್ಟೇ ಸೌಂಧರ್ಯಪೂರ್ಣವೆಂದು ಗ್ರಹಿಸಲು ಮತ್ತದನ್ನು ಅರ್ಥಮಾಡಿಕೊಳ್ಳಲು ನಾನು ಮಾಡಿದ ಸಾಧನೆ ಸಾಮಾನ್ಯವಾದುದ್ದಲ್ಲ.

ಕ್ರಮೇಣ ನನ್ನ ಕೈಗಳನ್ನು ಪ್ರೀತಿಸಲು ಕಲಿತೆ.ಆ ಕೈಗಳಿಂದ ಸೃಷ್ಟಿಸುವುದು,ಶ್ರಮಿಸುವುದು,ಸೇವಿ ಸುವುದು ಹೇಗೆಂದು ಅರಿತೆ.
ಇದೆಲ್ಲವೂ ಸಿದ್ದಿಸಲು ಹತ್ತುವರ್ಷಕ್ಕಿಂತಲೂ ಹೆಚ್ಚಿಗೆ ಹಿಡಿಯಿತು. ಹತ್ತು ವರ್ಷಗಳ ಕಠೋರ ದೀಕ್ಷೆಯಿದು.ಶ್ರಮ ಫಲಿಸಿದ ಮೇಲೆ ಈ ತೋಟವನ್ನು ಬೆಳೆಸತೊಡಗಿದೆ.”

ತನ್ನ ಜೀವನಯಾನದ ಸತ್ಯ-ಸೌಂದರ್ಯವನ್ನು ಸೀತೆಯ ಮುಂದೆ ಬಿಚ್ಚಿಟ್ಟಳು ಶೂರ್ಪನಖಿ.

“ನೀನೆಷ್ಟು ಸುಂದರವಾಗಿರುವಿ ಶೂರ್ಪನಖಿ.ನಿನ್ನ ಸೌಂಧರ್ಯವನ್ನು ಯಾವ ಗಂಡಸೂ ಗ್ರಹಿಸದಿರಬಹುದು.ಆದರೆ-”

ಸೀತೆಯ ಕೊರಳು ಗದ್ಗದಿತವಾಯಿತು.

ತನ್ನ ಅಗ್ನಿಪರೀಕ್ಷೆಗಿಂತಲೂ ಶೂರ್ಪನಖಿ ಎದುರಿಸಿದ ಪರೀಕ್ಷೆ ಕಡಿಮೆಯೇನಲ್ಲ ಎಂದುಕೊಳ್ಳುತ್ತಲೇ ಸೀತೆಯ ಕಣ್ಣಲ್ಲಿ ನೀರು ತಿರುಗಿದವು.

ಶೂರ್ಪನಖಿ  ಹಾಯಾಗಿ,ಅಂದವಾಗಿ,ಆನಂದಭರಿತಳಾಗಿ ನಕ್ಕಳು.

ಗಂಡಸನಿಗೆ ಮಾತ್ರ ಕಣ್ಣಿರಲಾರವಾ ? ಮನಸೆಂಬುದು ಇರಲಾರದಾ ? ಕುರೂಪಿಗಳನ್ನಾಗಿಸುವುದು,ಮತ್ತೆ ಅವರ ಮೇಲೆ ಅಸಹ್ಯಪಟ್ಟುಕೊಳ್ಳುವುದು ಮಾತ್ರ ಗೊತ್ತಿರುವ ಗಂಡಸರ ಬಗ್ಗೆ ಅಲ್ಲ ನಾನು ಮಾತನಾಡುತ್ತಿರುವುದು.”

“ಓ ! ಅಂದರೆ-” ಸೀತೆ ಅರ್ಧಕ್ಕೆ ಮಾತು ನಿಲ್ಲಿಸಿದಳು.ಆಕೆ ಶೂರ್ಪನಖಿ ಏನು ಹೇಳ ಹೊರಟಿದ್ದಾಳೆಂದು ಊಹಿಸಿದಳು.

“ನಿನ್ನ ಊಹೆ ನಿಜವೇ ಸೀತಾ.ನನಗೊಬ್ಬ ಗಂಡಸಿನ ನಂಟು ದೊರೆತಿದೆ.ನನ್ನ ಕೈಗಳಿಂದ ಪ್ರಕೃತಿಯೊಳಗೆ ಹರಿಯುವ ಈ ಸೌಂದರ್ಯವನ್ನು ಸ್ವಲ್ಪಕಾಲ ತನ್ನದಾಗಿಸಿಕೊಂಡು,ತನ್ನನ್ನು ನೆನಗರ್ಪಿಸಿಕೊಳ್ಳುವ ಅದೃಷ್ಟವಂತನೊಬ್ಬ ಸಿಕ್ಕಿದ್ದಾನೆ.” ಎನ್ನುತ್ತಾ ಶೂರ್ಪನಖಿ ಕೊರಳೆತ್ತಿ ಸುಧೀರಾ ಎಂದು ಕರೆದಳು.

ಸಾರ್ಥಕ ನಾಮಧೇಯದ ದೃಢಕಾಯನೊಬ್ಬನು ಅಲ್ಲಿಗೆ ಬಂದನು.

“ಈಕೆ ಸೀತೆ.” ಎಂದು ಹೇಳಿದಳು ಶೂರ್ಪನಖಿ ಸುಧೀರನಿಗೆ.

ಸುಧೀರನು ಗೌರವದಿಂದ ಸೀತೆಗೆ ನಮಸ್ಕರಿಸಿದನು.

“ಸೀತೆಗೆ ನಿನ್ನನ್ನು ತೋರಿಸಬೇಕೆಂದೇ ಕರೆದಿದ್ದೆ.”

ಆ ಮಾತಿಗೆ ಸುಧೀರನು ಹೊರಟುಹೋದನು.ಆ ಪುಟ್ಟ ದೃಶ್ಯದಿಂದಾಗಿ ಇಲ್ಲಿಯವರೆಗು ಯಾವ ಗಂಡು-ಹೆಣ್ಣುಗಳ ಮಧ್ಯೆ ತಾನು ನೋಡಿರದ ಬಾಂಧವ್ಯವಾವುದೋ ಇವರಿಬ್ಬರ ನಡುವೆ ಇದ್ದಂತನ್ನಿಸಿತು ಸೀತೆಗೆ‌.

“ನಿನ್ನ ಜೀವನವನ್ನು ಸಫಲವಾಗಿಸಿಕೊಂಡಿರುವೆ ಎಂದಾಯಿತು.”

“ಸಾಫಲ್ಯಕ್ಕೆ ಅರ್ಥವು ಗಂಡಸಿನ ನೆಂಟತನದಲ್ಲಿ ಇಲ್ಲವೆಂದು ಗ್ರಹಿಸಿದೆ ಸೀತಾ.ಅದು ಅರಿವಾದ ಮೇಲೆಯೇ ನನಗೆ ಈತನೊಂದಿಗೆ ನಂಟು ಬೆಳದಿದೆ.”

ಸೀತೆ ಶೂರ್ಪನಖಿಯ ಮಾತುಗಳನ್ನು ಜಾಗರುಕವಾಗಿ ಕೇಳುತ್ತಿದ್ದಾಳೆ.ಯಾವುದೋ ವಿವೇಕ,ಗಾಂಭೀರ್ಯ ಆಕೆಯ ಮಾತುಗಳಲ್ಲಿ.ಈ ಕಾರಣಕ್ಕೇ-ಮತ್ತೆ ಮತ್ತೆ ಕೇಳಬೇಕೆನಿಸುತ್ತಿದೆ.


“ಸೀತಾ-ಮತ್ತೆ ನೀನು ?”

“ಮಕ್ಕಳನ್ನು ಬೆಳೆಸುವುದರಲ್ಲೇ ನನ್ನ ಜೀವನ ಸಾರ್ಥಕವಾಗುತ್ತದೆ.”

“ಅದೇ ನಿನ್ನ ಜೀವನಾದರ್ಶವಾ ?”

“ಹೌದು.ನಾನು ರಾಮನ ಪತ್ನಿ.ಪಟ್ಟಮಹಿಷಿಯಾಗಿ ನನ್ನ ಜವಾಬ್ದಾರಿಗಳನ್ನು ನೆರವೇರಿಸಲಾಗಲಿಲ್ಲ.ರಾಮರಾಜ್ಯಕ್ಕೆ ವಾರಸುದಾರರನ್ನಾದರೂ ಒಪ್ಪಿಸಬೇಕಬಲ್ಲವೇ.”

“ಎಂದೂ ರಾಜ್ಯದಲ್ಲಿರದಿದ್ದರೂ,ನಿನ್ನ ಜೀವನವು ಹೇಗೆ ರಾಜ್ಯದೊಂದಿಗೆ ಅಂಟಿಕೊಂಡಿದೆಯೋ ನೋಡು ಸೀತಾ !”

“ರಾಜಪತ್ನಿಯಾದ ಮೇಲೆ ತಪ್ಪುತ್ತದಾ ?” ಸೀತೆ ನಕ್ಕಳು.

“ಏಕೋ ಗೊತ್ತಿಲ್ಲ,ನನಗೆ ಮೊದಲಿನಿಂದಲೂ ರಾಜ್ಯವೆಂದರೆ ಭಯ. ನನ್ನ ಅಣ್ಣ ಎಷ್ಟು ಹೇಳಿದರೂ ನಾನು ಲಂಕಾನಗರಿಯಲ್ಲಿ ಇರುತ್ತಿರಲಿಲ್ಲ.ಇಂತಹ ಅರಣ್ಯ ವಿಹಾರದ ನೆಮ್ಮದಿಯು ಮತ್ತೆಲ್ಲಿಯೂ ದೊರೆಯುವುದಿಲ್ಲ ಸೀತಾ.”

“ನನಗೂ  ಈ ಅರಣ್ಯವಾಸವೇ ಪ್ರೀತಿ.ರಾಮನು ಪರಿತ್ಯಜಿಸಿದರೂ ಈ ವನವಾಸವು ನನ್ನ ಕ್ಲೇಶವನ್ನು ತಗ್ಗಿಸಿದೆ.”

ಅವರ ಮತುಕತೆಯಲ್ಲಿ ಸಮಯ ಉರಿಳಿದ್ದೇ ಗೊತ್ತಾಗಲಿಲ್ಲ‌.

“ನನ್ನ ಮಕ್ಕಳಿಗೆ ಅವರು ಶ್ರೀರಾಮಚಂದ್ರನ ತನಯರೆಂದು ಗೊತ್ತಿಲ್ಲ.ನಾನೂ ಹೇಳಲಿಲ್ಲ.ಸಮಯವು ಆಸನ್ನವಾದಾಗ ಗೊತ್ತಾಗುತ್ತದೆ.”

“ಗೊತ್ತಾದ ಮೇಲೆ ಈ ಅರಣ್ಯದಲ್ಲಿ ಕ್ಷಣವಾದರೂ ನಿಲ್ಲುವರಾ ?”

ಶೂರ್ಪನಖಿ ಸೀತೆಯತ್ತ ಕನಿಕರದಿಂದ ನೋಡಿದಳು.

“ಅವರಿಗೆ  ಈ ಅರಣ್ಯವಾಸ ಪ್ರಿಯವಾದುದೇ.” ಬಲಹೀನದ ದನಿಯಲ್ಲಿ ಉತ್ತರಿಸಿದಳು ಸೀತೆ.

“ಅವರಿಗೆ ಪ್ರಿಯವಾಗಿರಬಹುದು.ಆದರೆ ರಾಜ್ಯಕ್ಕೆ ಅರಣ್ಯವೆಂದರೆ ಪ್ರೀತಿಯೇನು ? ನಗರಗಳ ಅಭಿವೃದ್ಧಿಗಾಗಿ,ನಾಗರಿಕರ ರಕ್ಷಣೆಗಾಗಿ ಈ ಅರಣ್ಯಪುತ್ರರು ಅಲ್ಲಿಗೆ ಹೋಗುವುದು ತಪ್ಪುವುದಿಲ್ಲವೇನೋ.”

ತಪ್ಪುವುದಿಲ್ಲವೆಂದು ಸೀತೆಗೂ ಗೊತ್ತು.

“ಆಗ ಏನು ಮಾಡುವೆ ಸೀತಾ ? ಒಬ್ಬಂಟಿ ವಾಲ್ಮೀಕಿಯ ಆಶ್ರಮದಲ್ಲೇ ಉಳಿದುಬಿಡುವೆಯಾ ?”

“ಇಲ್ಲ ಶೂರ್ಪನಖಾ,ನನ್ನ ತಾಯಿ ಭೂದೇವಿಯ ಆಶ್ರಯ ಪಡೆಯುತ್ತೇನೆ.”

“ಸೀತಾ,ನಿನ್ನ ತಾಯಿ ಎಲ್ಲಿ ಇಲ್ಲ ಹೇಳು ? ಆದರೆ ನಿನ್ನ ತಾಯಿಯ ರೂಪ ಇಲ್ಲಿಯದಕ್ಕಿಂತ ಸುಂದರವಾಗಿ ಮತ್ತೆಲ್ಲೂ ಇಲರಾಲದೆಂದನಿಸುತ್ತದೆ ನನಗೆ.”

ಶೂರ್ಪನಖಿ ಹೆಮ್ಮೆಯಿಂದ ತೋಟದತುಂಬೆಲ್ಲ ಕಣ್ಣಾಡಿಸಿದಳು.

ಆಕೆಯ  ಉದ್ದೇಶವೇನೆಂದು ಅರ್ಥವಾದಂತೆ ಸೀತೆ ನಕ್ಕಳು.ಆ ಆಯಾಚಿತ ಆಧರಣೆಗೆ ಸೀತೆಯ ಮನಸ್ಸು ಉಕ್ಕೇರಿತು.ಸಹೋದರಿ ಭಾವವು ಮನದುಂಬಿ ಬಂದಿತ್ತು.

“ಖಂಡಿತ ಬರುವೆನು ಶೂರ್ಪನಖಿ.ನನ್ನ ಮಕ್ಕಳು ನನ್ನನ್ನು ತೊರೆದು ನಗರಕ್ಕೆ ಹೋದ ಬಳಿಕ ನಾನು ಭೂಪುತ್ರಿಯಾಗುತ್ತೇನೆ.ಈ ತಣ್ಣನೆಯ ತರುಗಳ ನೆರಳಲ್ಲಿ ದಣಿವಾರಿಸಿಕೊಳ್ಳುತ್ತಾ ಬಾಳಿಗೊಂದು ಹೊಸ ಅರ್ಥ ಕಂಡುಕೊಳ್ಳುತ್ತೇನೆ.”

ಕುಶಲವರಿಬ್ಬರೂ ಬರುವುದನ್ನು ಕಂಡು ಅವರು ಮಾತು ನಿಲ್ಲಿಸಿದರು.

ಶೂರ್ಪನಖಿ ಅವರಿಗೆ ಮಧುರವಾದ ಫಲಗಳನ್ನು ನೀಡಿದಳು.ಇಬ್ಬರೂ ಪ್ರೀತಿಯಿಂದ ಸವಿದರು.

“ಯಾರಮ್ಮ ಆಕೆ ?” ದಾರಿಯ ನಡುವಲ್ಲಿ ತಾಯಿಯನ್ನು ಕೇಳಿದರು ಮಕ್ಕಳಿಬ್ಬರೂ.

“ನನಗೆ ತುಂಬಾ ಬೇಕಾದವಳು ಕಂದಾ.ತುಂಬಾ ಆಪ್ತಳು.” ಎಂದಳು ಸೀತೆ.

“ಮತ್ತೆ ನಮಗೆ ಈ ಮುಂಚೆ ಎಂದೂ ಹೇಳಲಿಲ್ಲವೇಕಮ್ಮಾ ?”

“ಕಾಲ ಕೂಡಿ ಬಂದಾಗ ಎಲ್ಲಾ ಗೊತ್ತಾಗುತ್ತದೆ.ಆದರೆ ಈ ಅರಣ್ಯದಲ್ಲಿ,ಈ ಉದ್ಯಾನವನದ ದಾರಿಯನ್ನು ಎಂದೂ ಮರೆಯಬೇಡಿ.ನೀವು ಎಲ್ಲಿಗೆ ಹೋದರೂ,ಏನು ಮಾಡಿದರೂ ಈ ದಾರಿಯ ಜಾಡು ನಿಮಗೆ ನೆನಪಿರಲೇಬೇಕು.ಮರೆಯುವುದಿಲ್ಲ ತಾನೆ ?”

“ಮರೆಯುವುದಿಲ್ಲಮ್ಮಾ” ಲವಕುಶರಿಬ್ಬರೂ ತಾಯಿಗೆ ಮಾತು ಕೊಟ್ಟರು.

2 comments

Leave a Reply