ಚೌತಿ ಮೆಣಸಿನ ಜಾಡು ಹಿಡಿದು…

ಗಂಗಾಧರ ಕೊಳಗಿ

ಕಳೆದ ಮೂರು ವರ್ಷಗಳಿಂದ ಅದು  ಗೀಳನ್ನೇ ಹಚ್ಚಿಬಿಟ್ಟಿತ್ತು. ಯಾರೋ ಹೀಗೇ ಮಾತನಾಡುತ್ತ ಕೂತಾಗ ಅದರ ಬಗ್ಗೆ ಕ್ವಚಿತ್ತಾಗಿ ಹೇಳಿದ್ದರು. ಅಷ್ಟಕ್ಕೇ   ಕುತೂಹಲ ಹುಟ್ಟಿಕೊಂಡು ಅವರ ಬಳಿ ಇನ್ನಷ್ಟು ವಿವರ ಕೇಳಿದರೆ ಪಾಪ, ಅವರಿಗೂ ಹೆಚ್ಚಿಗೇನೂ ಗೊತ್ತಿರಲಿಲ್ಲ. ಅಸ್ಪಷ್ಟವಾಗಿ ಒಂದಿಷ್ಟು ಹೇಳಿದರು.  ಸಮಾಧಾನವಾಗಲಿಲ್ಲ.

ಮನೆ,ಕುಟುಂಬದ ತಾಪತ್ರಯಕ್ಕೆ, ಹಣಕಾಸಿನ ಮುಗ್ಗಟ್ಟಿಗೆ ಯಾವತ್ತೂ ಅಷ್ಟೆಲ್ಲ ತಲೆಕೆಡಿಸಿಕೊಳ್ಳದವನಿಗೆ ಇದು ಮಾತ್ರ ಎಡೆಬಿಡದೇ ಕೊರೆಯತೊಡಗಿತ್ತು. ಅವರಿವರಲ್ಲಿ ವಿಚಾರಿಸಿ ಉದಾಸೀನದ ಮಾತುಗಳನ್ನ ಕೇಳಿ ಮುದುಡಿಕೊಂಡಿದ್ದೆ. ಒಂದು ದಿನ ಗೆಳೆಯ ಗಣಪತಿ ವಡ್ಡಿನಗದ್ದೆ ಬಳಿ ಯಾವತ್ತಿನಂತೆ ಅದು,ಇದೂ ಎಂದು ಮಾತನಾಡುತ್ತಿದ್ದಾಗ ಈ ವಿಷಯ ಪ್ರಸ್ತಾವಿಸಿದೆ. ಗಣಪತಿ ಸಸ್ಯ, ಸಸ್ಯಗಳ ಬೀಜ ಸಂಗ್ರಹಗಳಲ್ಲಿ ಆಸಕ್ತಿ ಇದ್ದ ಹುಡುಗ. ಹೆಚ್ಚಿಗೆ ಓದದಿದ್ದರೂ ತನ್ನ ಆಸಕ್ತಿಯಿಂದಾಗಿ ಆ ಕುರಿತಾಗಿ ಸಾಕಷ್ಟು ಜ್ಞಾನ ಗಳಿಸಿದವ. ಒಂದು ಅಪರೂಪದ ಸಸ್ಯ ಅಥವಾ ಬೀಜ ಬೇಕೆನ್ನಿಸಿದರೆ ಅದನ್ನ ಹುಡುಕಿಕೊಂಡು ಹೋಗುವ ಮನಸ್ಥಿತಿಯವ. ನಾನು, ಅವನು ಒಮ್ಮೆ ದೇವದಾರು ಮರವನ್ನ, ಅದರಡಿ ಬಿದ್ದಿರಬಹುದಾದ ಬೀಜ, ಹುಟ್ಟಿರುವ ಸಸಿಗಳನ್ನ ಹುಡುಕಿಕೊಂಡು ಕಾಡನ್ನೆಲ್ಲಾ ಸುತ್ತಿದ್ದೂ ಸೇರಿದಂತೆ ಇಂಥ ಸುತ್ತಾಟಗಳನ್ನ ಹಲವು ಬಾರಿ ಮಾಡಿದ್ದಿದೆ. ಅವನದು ನಿಶ್ಚಿತವಾದ ಉದ್ದೇಶವಾದರೆ  ಪರಿಸರ ತಜ್ಞನಲ್ಲದ, ಪ್ರಕೃತಿಯ ಬಗ್ಗೆ ಹೆಚ್ಛೇನೂ  ವೈಜ್ಞಾನಿಕ ಜ್ಞಾನವೂ ಇರದ ನನ್ನದು ಒಂದಿಷ್ಟು ಕಾಲ ಕಾಡನ್ನ, ಕಾಡಿನೊಳಗನ್ನ ಸುತ್ತಬಹುದು ಎನ್ನುವ ಸೀಮಿತ ಪರಿಧಿ. ಅವನು ಅರಸಿಬಂದ ವಸ್ತುವನ್ನ ಶೋಧಿಸುತ್ತ ಹೋದರೆ ನಾನು ಗಿಡ,ಮರ,ಬಳ್ಳಿ, ಹಕ್ಕಿ, ಪ್ರಾಣಿ..ಎಲ್ಲವನ್ನ ಅವಲೋಕಿಸುತ್ತ ಹೋಗುವವ. ಆ ನಡುವೆ ಪ್ರಕೃತಿ,ಪರಿಸರಕ್ಕೆ ಸಂಬಂಧಿಸಿದ ಮಾತು-ಕಥೆ ಅಷ್ಟೇ.

ಇವನಿಗಾದರೂ ಗೊತ್ತಿರಬಹುದು ಎಂದು ಕೇಳಿದ್ದೇ. ಆತ  ‘ಓಹ್, ಅದಾ, ಅಪ್ಪ ಹೇಳುತ್ತಿದ್ದ. ನಾನಿನ್ನೂ ನೋಡಿಲ್ಲ. ಅದನ್ನ ನೋಡೇಬಿಡುವಾ” ಎಂದು ಉತ್ಸಾಹದಿಂದ ಹೇಳಿದ. ನನಗೆ ತುಂಬಾ ಸಂತೋಷವಾಗಿಬಿಟ್ಟಿತು. ಮಂಗನ ಕೈಗೆ ಮಾಣಿಕ್ಯ ಕೊಟ್ಟಂತಾಯಿತು.ಗಣಪತಿ ತಾನು ತಂದೆಯವರ ಬಳಿ ಮತ್ತು ಅದನ್ನ ಗೊತ್ತಿರಬಹುದಾದವರ ಬಳಿ ಈ ಬಗ್ಗೆ ಮಾಹಿತಿ ಕಲೆ ಹಾಕುತ್ತೇನೆ  ಎಂದು ಆಶ್ವಾಸನೆ ಕೊಟ್ಟ.

ನನ್ನ ಅಷ್ಟೆಲ್ಲ ಕಾಡುತ್ತಿದ್ದುದು ಆಪ್ಟರಾಲ್ ಒಂದು ಸಾಂಭಾರ ಪಧಾರ್ಥ. ಸಾಂಭಾರ ಪಧಾರ್ಥಗಳಲ್ಲೇ  ಹೆಸರುವಾಸಿಯಾದ ಕಾಡು ಕಾಳುಮೆಣಸಿನ ಕುಟುಂಬದ ಒಂದು ತಳಿ. ತೋಟಿಗರಿಗೆ ಮಾತ್ರವಲ್ಲ ಬಹುತೇಕರಿಗೆ ಕಾಳುಮೆಣಸಿನ ಬಗ್ಗೆ ವಿವರಿಸುವ ಅಗತ್ಯವೇ ಇಲ್ಲ. ಅಷ್ಟು ಜನಜನಿತ. ಆದರೆ ತೋಟದಲ್ಲಿ ಬೆಳೆಯುವಂತೆಯೇ ಕಾಡಿನಲ್ಲಿ ಸಹಜವಾಗಿ ಬೆಳೆಯುವ ಕಾಳುಮೆಣಸಿನ ತಳಿಗಳು ನನಗೆ ತಿಳಿದ ಪ್ರಕಾರ ೨೫ಕ್ಕಿಂತಲೂ ಹೆಚ್ಚಿವೆ.ಅವುಗಳಲ್ಲಿ ಹಲವು ಕಾಳನ್ನಿರಲಿ, ಕರೆಯನ್ನೇ  ಬಿಡದ- ಅಂದರೆ ಕಾಳು ಕಚ್ಚಿಕೊಳ್ಳುವ ದೇಟು- ಬಳ್ಳಿಯ ತಳಿಗಳು. ಅವುಗಳನ್ನ ಕಾಡುಭಾಷೆಯಲ್ಲಿ ಅಂದರೆ ನಮ್ಮ ಗ್ರಾಮೀಣ ಮಾತಿನಲ್ಲಿ ನನ್ನಾರಿ ಬಳ್ಳಿ ಅನ್ನುತ್ತಾರೆ. ಪ್ರಾಯಶ: ಅದು ಬಂಜೆಯಾದ ಕಾರಣ ನರ-ನಾರಿ ಬಳ್ಳಿ ಎಂದು ಕರೆಯುತ್ತಿರಬೇಕು. ಭಾಷಾಶಾಸ್ತ್ರಜ್ಞರನ್ನ  ಈ ಬಗ್ಗೆ ಕೇಳಬೇಕೇನೋ?

ಆದರೆ ಮಾಮೂಲಿ ಕಾಳುಮೆಣಸಿನಂತೆ ತನ್ನ ಶ್ರಾಯದಲ್ಲಿ ಕರೆಯಾಗುವ, ಕಾಳು ಬೆಳೆಯುವ, ಪಕ್ವವಾಗುವ, ಸುಮಾರು ಫೆಭ್ರುವರಿ ತಿಂಗಳ ಸುಮಾರಿಗೆ ಕೊಯ್ಲಿಗೆ ಬರುವ ಕಾಳು ಮೆಣಸಲ್ಲ ಇದು. ಚೌತಿ ಮೆಣಸು!

ಅಂದರೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪೂರ್ಣವಾಗಿ ಬೆಳೆದು, ಮಾಗುವ ಕಾಳುಮೆಣಸು ಅಥವಾ ಕಾಡುಮೆಣಸು! ಅವನ್ನು ಯಾರಾದರೂ ಕೊಯ್ದರೆ ಲಭ್ಯ, ಇಲ್ಲವಾದರೆ ಹಣ್ಣಾಗಿ ತಾನಾಗಿಯೋ, ಹಕ್ಕಿಗಳು ತಿಂದೋ ಉದುರಿಹೋಗುತ್ತದೆ.

ಗಣಪತಿ ತನ್ನ ತಂದೆಯ ಬಳಿ ಈ ಬಗ್ಗೆ ಕೇಳಿದಾಗ ‘ಏ, ಮಾರಾಯಾ, ಅದು ಚೌತಿ ಮೆಣಸಾ, ಚೌತಿ ಹಬ್ಬದಾಗೆ ಫಲವಳಿಗೆಗೆ ಅದನ್ನೂ ಕಟ್ತಿದ್ವಾ , ಈಗ ಸಿಗಾದಿಲ್ಲ. ಅದರ ಚಟ್ನಿ ಎಷ್ಟು ರುಚಿ ಗೊತ್ತಾ?’ ಎಂದೆಲ್ಲ ಹೇಳಿ ಸಾಕಷ್ಟು ಆ ಬಗ್ಗೆ ಮಾಹಿತಿಯನ್ನ ಕೊಟ್ಟದ್ದನ್ನ ಬಂದು ನನ್ನ ಬಳಿ ಹೇಳಿದ. ಹಾಗೇ ಪಶ್ಚಿಮಘಟ್ಟದ ನಟ್ಟನಡುವಿನಲ್ಲಿರುವವರ ಪರಿಚಿತರ ಬಳಿ ಈ ಬಗ್ಗೆ ವಿವರ ಸಂಗ್ರಹಿಸಿ ಹೇಳಿದ.

ನನ್ನ ತಲೆಯೊಳಗಿನ ಮೆದುಳಿನಲ್ಲಿ( ಇದೆ ಎಂದು ಇವತ್ತಿಗೂ ಗ್ಯಾರಂಟಿಯಿಲ್ಲ) ಕೋಲಾಹಲ. ಎಷ್ಟು ವಿಚಿತ್ರ!

ತನ್ನ ಸಂತತಿಗೇ ಸವಾಲು ಹಾಕುವಂತೆ- ನೀವು ಬೇಕಾದರೆ ಯಾವಾಗ್ಲೋ ಹೂವಾಗಿ, ಮಿಡಿಯಾಗಿ,ಕಾಯಾಗಿ, ಹಣ್ಣಾಗಿ. ನನಗೆ ಸಂಬಂಧವಿಲ್ಲ. ನಾನು ಮಾತ್ರ ದಟ್ಟಮಳೆಯ, ತೀರಾ ಕನಿಷ್ಠದ ಶೀತದ ವಾತಾವರಣದಲ್ಲೇ ಮಾಗುತ್ತೇನೆ ಎಂದು ಹಠ ತೊಟ್ಟು ತನ್ನ ಪರಂಪರೆಗೆ ಸವಾಲು ಹಾಕಿದ ಬಂಡಾಯಗಾರ ಈ ಮೆಣಸು.

ನಿಜವೋ, ಸುಳ್ಳೋ? ಬಂಡಾಯಗಾರರು ಅಥವಾ ವ್ಯವಸ್ಥೆಗೆ ವಿರುದ್ಧವಾಗಿ ಸೆಟೆದು ನಿಂತವರು ಎಂಬ ಅದೆಷ್ಟು ಮನುಷ್ಯರೂಪಿಗಳನ್ನ ನಾವು ಹುಡುಕಿಕೊಂಡು ಹೋಗಿ ಮಾತನಾಡಿಸಿ ಪುನೀತರಾಗುವದಿಲ್ಲ? ಅವರೇ ನಮ್ಮ ಆದರ್ಶ ಎಂದು ಅವರನ್ನ ಗುಣಗಾನ ಮಾಡುವದಿಲ್ಲ? ಅವರೆಲ್ಲಕ್ಕಿಂತ ಮನುಷ್ಯರೂಪಿಯಲ್ಲದ ಇದೇ ನಿಜ ಅನ್ನಿಸಿತು.

ಕಳೆದ ಮೂರು ವರ್ಷದಿಂದ ಪ್ರತಿ ವರ್ಷ ಚೌತಿ ಸಮಯದಲ್ಲಿ ಏನಾದರೂ ಒಂದು ಗೋಟಾವಳಿ. ಒಂದು ನನಗೆ ಬಿಡುವಿರುತ್ತಿರಲಿಲ್ಲ. ಇಲ್ಲವಾದರೆ ಗಣಪತಿಗೆ. ಅದು ಬೆಳೆದು, ಹಣ್ಣಾಗುವ ಸಮಯದಲ್ಲಿ ಮಾತ್ರ ಗುರುತು ಹಿಡಿಯಬಹುದಷ್ಟೆÃ. ಉಳಿದ ಸಮಯದಲ್ಲಿ ಎಲ್ಲ ಕಾಳುಮೆಣಸಿನಂತೆ. ಪಶ್ಚಿಮಘಟ್ಟದ ನಟ್ಟನಡುವಿನ ಕಾಡುಗಳಲ್ಲಿ ಮಳೆಗಾಲವಲ್ಲ, ನಡುಬೇಸಿಗೆಯಲ್ಲೂ ರಕ್ತಕ್ಕಾಗಿ ಕಾತರಿಸುತ್ತ, ಹೊಂಚುಹಾಕುವ ಇಂಬಳ ಅಥವಾ ಉಂಬಳಗಳ ಕಾಟ ಗೊತ್ತಿದ್ದವರಿಗೇ ಗೊತ್ತು. ಮಳೆಗಾಲದಲ್ಲಂತೂ ಒಂದು ನಿಮಿಷದಲ್ಲಿ ನೂರಾರು ಇಂಬಳಗಳು ನಮಗೆ ಗೊತ್ತಿಲ್ಲದಂತೇ ಕಾಲಿಗೆ ಅಂಟಿಕೊಂಡು ಮರ್ಮಸ್ಥಾನದವರೆಗೂ ದಾಟಿಬಿಡುತ್ತವೆ. ಹೊಟ್ಟೆ ತುಂಬಾ ರಕ್ತ ಹೀರಿ, ಡೊಳ್ಳುಹೊಟ್ಟೆಯಾಗಿ ಉದುರಿಬಿದ್ದಾಗ ನಮ್ಮ ಶರೀರದಿಂದ ಜಿನುಗುವ ರಕ್ತ ನೋಡಿದಾಗಲೇ ನಮಗೆ ಗೊತ್ತಾಗೋದು! ನೆಲದ ಮೇಲೆ ಮಾತ್ರವಲ್ಲ, ಮರಗಳ ಕಾಂಡಗಳಲ್ಲಿ, ಬಳ್ಳಿಗಳಲ್ಲಿ ಕೂಡ ಅವು. ಅಷ್ಟು ಮಾತ್ರವಲ್ಲ ಸಸ್ಯಗಳ ಎಲೆಗಳ ಮೇಲೆ ಇರುವ ಇಂಬಳಗಳು ಪಟ್ ಅಂತಾ ಹಾರುತ್ತ ಮೈಮೇಲೆ ಜಿಗಿಯುತ್ತವೆ ಕೂಡ. ಇಂಥ ದುರ್ಬರ ಅನುಭಗಳನ್ನ ಸಾಕಷ್ಟು ಬಾರಿ ಅನುಭವಿಸಿದ್ದರೂ ಹಿಂಜರಿಕೆಯೇನೂ ಇರಲಿಲ್ಲ. ಆದರೂ ಅವಕಾಶ ಒದಗಲಿಲ್ಲ.

ಅದಕ್ಕೆ ಈ ಬಾರಿ ಒಂದು ತಿಂಗಳ ಮೊದಲೇ ಗಣಪತಿ ಜೊತೆ ಮಾತನಾಡಿ ಮುಹೂರ್ತ ಫಿಕ್ಸ ಮಾಡಿದ್ದೆ. ಗಣೇಶ ಚತುರ್ಥಿಗೆ ಮೊದಲು ಹೋಗೋಣ ಎಂದುಕೊಂಡಿದ್ದರೂ ಗಣಪತಿಗೆ ಎಲ್ಲೊÃ ತಿರುಗಾಟ ಬಂದದ್ದರಿಂದ ಸಾಧ್ಯವಾಗಲೇ ಇಲ್ಲ. ಈ ಬಾರಿಯೂ ತಪ್ಪಿಹೋಯಿತು ಎಂದು ವ್ಯಸನವಾಗುತ್ತಿತ್ತು.

ಗಣೇಶ ಚತುರ್ಥಿ ಮರುದಿನ ಗಣಪತಿ ಫೋನ್ ಮಾಡಿದ; ನಾಳೆ ಹೋಗೋಣವಾ? ಅಂತ. ಹಬ್ಬದ ಗಮ್ಮತ್ತು ಅಷ್ಟಾಗಿ ಇರದಿದ್ದರೂ ಸಣ್ಣ-ಪುಟ್ಟ ತಲೆಬಿಸಿಗಳಿದ್ದವು. ಅದಿದ್ದರೂ ಈ ಬಾರಿ ತಪ್ಪಿಸಿಕೊಳ್ಳಬಾರದು ಎಂದು ಧೃಡಸಂಕಲ್ಪ ಮಾಡಿ ಹೋಗೋಣ ಅಂದೆ.

ಮರುದಿನ ಬೆಳಿಗ್ಗೆ ಹನ್ನೊಂದರ ಸುಮಾರಿಗೆ ಹೊರಟೆವು. ಗಣಪತಿ ಸೂರ್ಯಪುತ್ರ; ಅಂದರೆ ತಡವಾಗಿ ಏಳುವವ. ಅವನು ಬಂದ ನಂತರ ಒಂದಿಷ್ಟು ತಿಂಡಿ, ನೀರು ಕಟ್ಟಿಕೊಂಡು ಬೈಕ್ ಹತ್ತಿ ಹೊರಟೆವು. ನೀವು ಬೆಂಗಳೂರು- ಹೊನ್ನಾವರ ಹೈವೇನಲ್ಲಿ ಪ್ರಯಾಣಿಸಿದ್ದಾದರೆ ಜೋಗಫಾಲ್ಸ, ಮಾವಿನಗುಂಡಿ ದಾಟಿ ಗೇರಸೊಪ್ಪೆ ಕಡೆ ಹೋಗುವಾಗ ಬಲಭಾಗದಲ್ಲಿ ಎತ್ತರದ ಗುಡ್ಡಗಳ ಸಾಲು ಕಾಣಿಸುತ್ತದೆ.ಆ ಗುಡ್ಡಗಳ ಈ ಪಕ್ಕ ಒಂದಿಷ್ಟು ಬಯಲಿದ್ದರೆ ಆಚೆ ಕಡೆಯ ಭಾಗ ಘನಘೋರ ಅರಣ್ಯ. ಹುಕ್ಕಳಿ ಗುಡ್ಡ ಎಂದು ಪ್ರಸಿದ್ಧವಾದ, ಈಗ ಶಿಥಿಲವಾದ, ಹಿಂದೆ ರಾಜರ ಕಾಲದಲ್ಲಿ ಕಾವಲು ಬತೇರಿ, ಕೆರೆಗಳಿದ್ದ ಎತ್ತರದ ಪ್ರದೇಶ. ಅದರ ತುದಿಯಲ್ಲಿ ನಿಂತು ನೋಡಿದರೆ ದೂರದ ಅರಬ್ಬಿÃ ಸಮುದ್ರ ಅಸ್ಪಷ್ಟವಾಗಿ ಗೋಚರಿಸುತ್ತದೆ.

ನಾವು ಹೊರಟದ್ದು ಆ ಗುಡ್ಡಸಾಲಿನ ಕಾಡಿಗೆ. ಈವರೆಗೆ ನೋಡಿಲ್ಲದ್ದಕ್ಕೆ ಅದನ್ನ ಹೇಗೆ ಹುಡುಕುವದು?ಎನ್ನುವ ಯೋಚನೆ. ಆ ಗುಡ್ಡ ಪ್ರದೇಶ ದಾಟಿ ಅದಕ್ಕಿಂತ ಮುಂದೆ ಇರುವ ದಟ್ಟಕಾಡಿನ ನಡುವಿನ ಹತ್ತಾರು ಮನೆಗಳಿರುವ ಸುತ್ತಲಮನೆ ಎನ್ನುವಲ್ಲಿಗೆ ಬೈಕ್ ಓಡಿತು.

ಮೊದಲೇ ಮಣ್ಣಿನ ಸಣ್ಣದಾದ ರಸ್ತೆ; ನಗರಗಳ ರಸ್ತೆಗೆ ಹೋಲಿಸಿದರೆ ಫುಟ್ಫಾತ್‌ನಂತ ದಾರಿ. ಮಳೆಗೆ ಕೊಚ್ಚಿಹೋಗಿ ಕೊರಕಲು, ಧೀಡೀರನೆ ಎದುರಾಗುವ ಏರು, ಹಾಗೇ ನೇರವಾಗಿ ಇಳುಕಲು. ಗೊಣೆಕಲ್ಲುಗಳಿಗೆ ಬೈಕಿನ ಚಕ್ರ ಜಾರುತ್ತಿತ್ತು. ಕಳೆದ ಹನ್ನೊಂದು ವರ್ಷಗಳಿಂದ ನನ್ನ ಜೊತೆಗೆ ಪಳಗಿ, ನನ್ನಂತೆ ಎಷ್ಟೋ ಕಾಡು,ಮೇಡುಗಳನ್ನ ಅಲೆದ ಗೆಳೆಯ ಹಿರೋ ಹೊಂಡಾ ಎಲ್ಲೂ ತಡವರಿಸದೇ ಸಾಗುತ್ತಿತ್ತು. ಅಲ್ಲಲ್ಲಿ ಕಾಣುವ ಮನೆ, ತೋಟ,ಗದ್ದೆಗಳು ಮರೆಯಾಗಿ ಅಪ್ಪಟ ಕಾಡಿನ ಒಡಲೊಳಗೆ ನುಗ್ಗಿದೆವು. ನಂತರದ್ದು ಮಾರಗಲದ ಕಾಡುದಾರಿ. ಥಟ್ಟನೆ ಏರೊಂದು ಎದುರಾಯ್ತು. ಸೆಕೆಂಡ್ ಗೇರ್‌ನಲ್ಲಿದ್ದನ್ನ ಫಸ್ಟಗೆ ಬದಲಾಯಿಸುವಷ್ಟರಲ್ಲಿ ಬೈಕ್ ಹಿಂದೆ ಜಾರತೊಡಗಿತು. ಸುಮಾರು ಐದಾರು ಅಡಿ ಏರನ್ನ ಬೈಕ್ ಹತ್ತಿಬಂದಿತ್ತು. ಈಗ ಜಾರಿದರೆ ನಾವಿಬ್ಬರೂ ಬೈಕ್ ಸಮೇತ ಹಿಂದಿರುವ ಇಳುಕಲಿನಲ್ಲಿ ಉರುಳುತ್ತಿದ್ದೆವು. ಎರಡೂ ಬ್ರೇಕ್ ಗಳನ್ನ ಒತ್ತಿಹಿಡಿದು ಕ್ಲಚ್ ಬಿಡದೇ ಇದ್ದರೂ ಬೈಕಿನ ಎರಡೂ ಚಕ್ರಗಳು ಆ ಸಣ್ಣ ಕಲ್ಲುಗಳ ನೆಲದಲ್ಲಿ ಹಿಮ್ಮೊಗವಾಗಿ ರ‍್ರನೆ ಜಾರತೊಡಗಿತು. ಬೈಕ್‌ನ ಎರಡೂ ಕಡೆ ಕಾಲಿನಿಂದ ನೆಲವನ್ನ ಆಧರಿಸಿದೆ. ಬೈಕ್ ಓಡಿಸಿ ಅನುಭವವಿದ್ದ ಗಣಪತಿ ಅತ್ತಿತ್ತ ಅಲುಗಾಡದೇ ಕಾಲನ್ನು ಆಧರಿಸಿಕೊಂಡ. ಒಂಚೂರು ಹ್ಯಾಂಡಲ್ ಆಚೀಚೆ ಓರೆ ಮಾಡದೇ ನೇರವಾಗಿ ಹಿಡಿದ ಕಾರಣ ಆ ಏರಿನ ಬುಡದವರೆಗೂ ಬೈಕ್ ಜಾರುತ್ತ ಬಂದು ನಿಂತಿತು.

ಉಸ್ಸಪ್ಪಾ ಎಂದು ಬೈಕ್‌ನ್ನ ಅಲ್ಲೇ ಕಾಡಿನಲ್ಲಿ ನಿಲ್ಲಿಸಿ ನಡೆಯುತ್ತ ಹೊರಟೆವು. ಮನುಷ್ಯರ ಸುಳಿವೇ ಇರದ ಆ ಕಾಡಿನಲ್ಲಿ ಬೈಕಿನ ಬಗ್ಗೆ ಚಿಂತೆ ಮಾಡಬೇಕಾಗಿರಲಿಲ್ಲ. ಅಲ್ಲಿರುವ ಪ್ರಾಣಿಗಳು ಬೈಕ್ ಕದಿಯುವದಾಗಲೀ, ಚಕ್ರದ ಗಾಳಿ ತೆಗೆಯುವದಾಗಲೀ, ಕೊನೆ ಪಕ್ಷ ಬೈಕಿನ ಯಾವುದಾದರೂ ಅವಯವವನ್ನ ಊನ ಮಾಡುವಷ್ಟಾಗಲೀ ಬುದ್ದಿಶಾಲಿಗಳಲ್ಲವಲ್ಲ!

ಆಕಾಶದೆತ್ತರದ ಮರಗಳು, ಅವುಗಳನ್ನ ಬಳಸಿ ಉದ್ದುದ್ದನೆಯ ಬೆತ್ತದ ಬಳ್ಳಿಗಳು,ಇನ್ನಿತರ ಕಾಡುಬಳ್ಳಿಗಳು, ಒಂದು ಬೆತ್ತದ ಬಳ್ಳಿ ಅದೆಷ್ಟು ಉದ್ದಕ್ಕೆ ಹೋಗಿತ್ತೆಂದರೆ ಎತ್ತರದ ಮರವನ್ನು ಏರಿ, ಅಲ್ಲಿಂದ ಮತ್ತೊಂದು ಮರಕ್ಕೆ ದಾಟಿ, ಅಲ್ಲಿಂದ ಮತ್ತೊಂದಕ್ಕೆ ಜಿಗಿದು.. ಅದರ ತುದಿಯನ್ನ ಕಾಣಲಾಗಲೇ ಇಲ್ಲ.  ನಾವು ಹೋಗುತ್ತಿದ್ದ ಎತ್ತರದ ಗುಡ್ಡದ ಕಣಿವೆಯ ಇಳಿಜಾರಿನ ಕಾಲುದಾರಿಯ ಎರಡೂ ಕಡೆಗಳಲ್ಲಿ ದಟ್ಟನೆಯ ಅರಣ್ಯ, ವಯಸ್ಸಿನ ಹಂಗಿಲ್ಲದೇ ನೇರಾನೇರ ಬೆಳೆದುನಿಂತ ಮರಗಳು, ಅವುಗಳನ್ನ ಬಳಸಿಕೊಂಡ ತರಹೇವಾರಿ ಬಳ್ಳಿಗಳು, ಅತಿಹೆಚ್ಚು ಮಳೆ ಬೀಳುವ ಪ್ರದೇಶವಾದ ಕಾರಣ ಸಣ್ಣ,ದೊಡ್ಡ ಕೊಂಬೆಗಳಿಗೆ ತೋರಣ ಕಟ್ಟಿದಂತೆ ಜೋತುಬಿದ್ದ ಮಾಸ್‌ಗಳು, ಚಿತ್ರವಿಚಿತ್ರ ಕಾಕ್ಟಸ್‌ಗಳು. ಮರಗಳ ಬುಡದಲ್ಲಿ ಎಲೆದರಕು ಕೊಳೆತು, ಗೊಬ್ಬರವಾದ ಅವುಗಳ ಬುಡದಲ್ಲಿ ಜಿಗಿದು ಬೆಳೆದ ಹಲವು ಸಸ್ಯಗಳು, ಕಾಡಿನಿಂದ ಮುಚ್ಚಿಹೋದ ಕಣಿವೆಯಾಳದಲ್ಲಿ ನೀರು ಹರಿಯುವ ಸದ್ದು. ಒಂದಿಷ್ಟು ಜಾಗದಲ್ಲಿ ಪಾಂಡವರ ಅಡಕೆ ಗಿಡಗಳ ಹಿಂಡು. ಅವುಗಳಲ್ಲಿ ತೆನೆ ಬಂದ, ತೆನೆ ಒಡೆದು ಹೂವಾದ ಗಿಡಗಳು ಹಲವಾರಿದ್ದವು. ನಮ್ಮ ಕಣ್ಣುಗಳು ಮಾತ್ರ ಕಾಳುಮೆಣಸಿನ ಬಳ್ಳಿಗಳನ್ನ ಅರಸುತ್ತಿದ್ದವು. ಇಕ್ಕೆಲದಲ್ಲಿದ್ದ ಹಲವು ಮರಗಳನ್ನು ಬಳಸಿ ವರ್ತುಲಾಕಾರದಲ್ಲಿ ಹಬ್ಬಿಕೊಂಡ ಕಾಡುಮೆಣಸಿನ ಬಳ್ಳಿಗಳು.

ಆ ತಂಪನೆಯ ಬಿಸಿಲು ತಾಕದ ಪರಿಸರದಲ್ಲಿ ಏಕಾಏಕಿ ವಾಸ್ಕೋಡಗಾಮ ನೆನಪಾದ. ಹೊರಜಗತ್ತನ್ನು ಮರೆತು ಮನಸ್ಸಿನೊಳಗೆ ಈಜಾಡಲು  ಮಳೆ, ಬಿಸಿಲು, ತಂಪು ..ಇವುಗಳ ಹಂಗು ಯಾವಾಗಲೂ ಇಲ್ಲ, ಬೇಕೆಂದರೆ ಬಿರಿ ಬಿರಿ ಬಿಸಿಲಿನಲ್ಲೂ ಕೂತು ಕನಸು ಕಾಣುವವನಿಗೆ ಇಂಥ ತಂಪು ವಾತಾವರಣ ಚಾಪೆ ಹಾಸಿಟ್ಟಂತೆ ಆಗುತ್ತದೆ ಅಷ್ಟೇ. ಆ ಪುಣ್ಯಾತ್ಮ ನೂರಾರು ವರ್ಷಗಳ ಹಿಂದೆ ಈ ಸಾಂಬಾರ ಜಿನಸಿನ ಪರಿಮಳದ ಜಾಡು ಹಿಡಿದು ಸಾವಿರಾರು ಮೈಲಿ ಸಮುದ್ರ ಪ್ರಯಾಣ ಮಾಡಿ ಇಲ್ಲಿಗೆ ಹುಡುಕಿಕೊಂಡು ಬಂದನಲ್ಲ! ಈಗ ನಾವೇನು ಬಡಕೊಳ್ತಿದೇವೆ; ಕಮ್ಯೂನಿಕೇಷನ್ ಡೆವಲಪ್ ಆಗಿದೆ, ಜಾಲತಾಣಗಳ, ಸಂಪರ್ಕ ಮಾಧ್ಯಮಗಳ ಬೆಳವಣಿಗೆ ಆಗಿದೆ. ಡಿಜಿಟಲೀಕರಣ ನಮ್ಮನ್ನ ಬೆಳೆಸುತ್ತಿದೆ ಎಂದೆಲ್ಲ. ಅವ್ಯಾವವೂ ಇಲ್ಲದ ಕಾಲದಲ್ಲಿ ಅದು ಹೇಗೋ ಏನೋ ಇಲ್ಲಿನ ಕಾಳುಮೆಣಸಿನ ಸುವಾಸನೆ, ಅದರ ರುಚಿಗೆ ಮರುಳಾಗಿ ಆ ಕಾಲಕ್ಕೆ ಪೊರ್ಚುಗಲ್ ರಾಜನ ಭಂಡಾರದ ಸಾಕಷ್ಟು ಧನ ಕರಗಿಸಿ ಮೊದಲನೇ ವಿಫಲ ಪ್ರಯತ್ನದ ನಂತರ ಎರಡನೇ ಬಾರಿಗೆ ವಾಸ್ಕೋಡಗಾಮ ಇಲ್ಲಿಗೆ ಬಂದನಲ್ಲ. ಅವನ ಛಾತಿ, ಹಠದ ಹಿಂದೆ ಕೇವಲ ಕಾಳು ಮೆಣಸಿನ ಘಮಲು ಮಾತ್ರ ಇತ್ತೇ? ನನಗೆ ತಿಳಿದಂತೆ- ಬೇರೆಯೂ ಇರಬಹುದು- ಪ್ರಾಯಶ: ವಸಾಹತುಶಾಹಿಯ ಭಾರತದ ಉದ್ಘಾಟಕನಾದ ವಾಸ್ಕೊಡಗಾಮನ ಈ ಪಯಣದ ಕುರಿತಾಗಿ ನನಗೆ ಸಿಕ್ಕ ಕೃತಿಗಳಲ್ಲಿ ಕ್ವಚಿತ್ತಾಗಿ ಓದಿಕೊಂಡಿದ್ದರೂ ಅವನ ಸಾಹಸ, ನಾವೆ ಕಟ್ಟುವ ಅವನ ಕೌಶಲ್ಯ, ನಾವಿಕರನ್ನ ನಿಭಾಯಿಸಿದ ರೀತಿ, ನಾಲ್ಕಾರು ತಿಂಗಳು ಕಡಲಿನಲ್ಲೇ ಕಳೆದು- ಒಮ್ಮೆ ಆಫ್ರಿಕಾದ ಭೂಶಿರದವರೆಗೂ ಬಂದು, ತಾನು ಹುಡುಕಿಕೊಂಡು ಬಂದ ಪ್ರದೇಶ ಇದಲ್ಲ ಎಂದು ವಾಪಸ್ಸಾಗಿ, ಮತ್ತೆ ಹಠ ತೊಟ್ಟು ಬಂದನಲ್ಲ, ಅದು ವಸಾಹತುಶಾಯಿಯನ್ನ, ಅದರ ಮೊಮ್ಮಗ ಜಾಗತೀಕರಣವನ್ನ ತಂದ ಸಿಟ್ಟನ್ನ ಮರೆಸಿಬಿಡುತ್ತದೆ. ಪಕ್ಕದ ಬೀದಿಯ ಮನೆ ಹುಡುಕಲು ಜಿಪಿಎಸ್ ಬಳಸುವ ಇಂದಿನ ಕಾಲದಲ್ಲಿ ಕಾಣದ- ಕೇಳಿ ಮಾತ್ರ ಗೊತ್ತಿದ್ದ ಭಾರತಕ್ಕೆ ಬಂದ ವಾಸ್ಕೋಡಗಾಮ ಆ ಕಾಡಿನಲ್ಲಿ, ಅದೂ ಚೌತಿ ಮೆಣಸಿನ ಬಳ್ಳಿ ಹುಡುಕಬೇಕಾದ ಸಂಧಿಗ್ಧ ಸ್ಥಿತಿಯಲ್ಲಿ ನೆನಪಾಗಿದ್ದ.

ನಮಗೆ ಈಗ ಪೀಕಲಾಟ ಶುರುವಾಯಿತು. ಇವುಗಳಲ್ಲಿ ಚೌತಿ ಮೆಣಸು ಯಾವುದಿರಬಹುದು? ಎಂದು ಪತ್ತೆಹಚ್ಚಬೇಕಾದ ಅನಿವಾರ್ಯತೆ ಎದುರಾಯಿತು. ದೂರದಿಂದ ನೋಡಿದರೆ ಕಾಡಿನ ಮೆಣಸಿನ ಬಳ್ಳಿಗಳ ಎಲೆಗಳೆಲ್ಲ ಒಂದೇ ಥರ ಕಾಣುತ್ತವೆ. ನಾಡಿನ ಮೆಣಸಾದರೆ ಎಲೆಯ ಗಾತ್ರ, ಬಣ್ಣ, ಅದು ಬೆಳೆದ ಕ್ರಮದ ಭಿನ್ನತೆಯ ಮೂಲಕವೇ ಇದು ಮಲ್ಲಿಸರ, ಇದು, ಒಕ್ಕಾಳು, ಇದು ಪಣಿಯೂರು. ಎಂದು ಗುರುತಿಸಲು ಸಾಧ್ಯ. ಇಲ್ಲಿ ಆ ಜ್ಞಾನ ಬಹುತೇಕ ನಿಷ್ಪ್ರಯೋಜಕವೇ ಸರಿ. ಕಾಳಿನ ಮೂಲಕ ಗುರುತಿಸೋಣ ಎಂದರೆ ಯಾವುದರಲ್ಲೂ ಕಾಳುಗಳು ಕಾಣುತ್ತಿಲ್ಲ. ಏನು ಮಾಡೋದು? ಚಿಂತಾಕ್ರಾಂತರಾಗಿ ನಾವಿಬ್ಬರೂ ನಿಂತಿದ್ದೆವು. ಯಾಕೆಂದರೆ ಅಲ್ಲಿ ಕೂತರೆ ಇಂಬಳಗಳು ಹತ್ತಿಕೊಳ್ಳುವದರಿಂದ.

ಅಷ್ಟೊತ್ತಿಗೆ ಹತ್ತಿರದಲ್ಲೆಲ್ಲೋ ನಾಯಿ ಬೊಗಳುವದು ಕೇಳಿಸಿತು. ಇಲ್ಲೆಲ್ಲೋ ಮನೆಯಿರಬೇಕು ಎಂದು ಊಹಿಸಿ ಅದೇ ಕಾಲುದಾರಿಯಲ್ಲಿ ನಾವಿಬ್ಬರೂ ಮುಂಬರಿದೆವು. ಆ ಕಣಿವೆಯ ಇಳುಕಲಿನ ಪ್ರಪಾತದಲ್ಲಿ ಮನೆಯೊಂದು ಕಂಡಿತು. ಅಬ್ಬಾ! ಅನ್ನಿಸಿತು. ಈ ಕಾಡಿನಲ್ಲೂ ಮನುಷ್ಯರಿರುವ ಸಾಧ್ಯತೆಯನ್ನ ಕಲ್ಪಿಸಿರದ ನಮಗೆ ಅದೊಂದು ವಿಸ್ಮಯವಾಗೇ ಕಂಡಿತು.

ನಿಧಾನವಾಗಿ ಇಳುಕಲನ್ನ ಇಳಿಯುತ್ತ ಆ ಮನೆಯ ಸಮೀಪ ಹೋದೆವು. ಆ ಮನೆಯಲ್ಲಿ ಜನರಿದ್ದಾರೋ, ಇಲ್ಲವೋ ಎಂದು ನಾವು ಮಾತನಾಡಿಕೊಳ್ಳುತಿದ್ದುದನ್ನ ಕೇಳಿಸಿಕೊಂಡಿರಬೇಕು. ಕೆಳಗಡೆಯಿದ್ದ ಆ ಮನೆಯಿಂದ ಎರಡು ನಾಯಿಗಳು ಬೊಬ್ಬಿರಿಯುತ್ತ ಮೇಲಕ್ಕೆ ಬಂದವು. ಆದರೆ ಅವುಗಳ ಸ್ವರ ಬೇರೆ ರೀತಿಯಲ್ಲಿತ್ತು. ಒಂದು ರೀತಿಯ ವಿನಯ, ಭಯ, ಮುಂತಾದ ರಸಗಳೆಲ್ಲ ಇದ್ದಂತೆ ಅನಿಸಿತು. ಅವುಗಳಿಗೆ ಕ್ಯಾರೇ ಅನ್ನದೇ ನಾವು ಮನೆಯತ್ತ ಹೋದಂತೆಲ್ಲ ಅವು ಬಾಲವಲ್ಲಾಡಿಸುತ್ತಿದ್ದರೂ ತಮ್ಮ ಮಾಮೂಲಿ ವರಸೆ ಬಿಡದೇ ಕೂಗುತ್ತಲೇ ನಮ್ಮಿಂದ ದೂರ ಓಡುತ್ತಿದ್ದವು. ಆ ಮನೆಯಲ್ಲಿ ಯಾರೂ ಇರಲಿಲ್ಲ. ಹೊರಗಡೆ ಹಲವು ಬೆಲೆಬಾಳುವ ವಸ್ತುಗಳಿದ್ದರೂ ಹಾಗೇ ಬಿಟ್ಟು ಹೋಗಿದ್ದರು. ಆ ಕಾಡಿನಲ್ಲಿ ಯಾವ ಕಳ್ಳರು ಬಂದಾರು ಎನ್ನುವ ಧೈರ್ಯವಿರಬೇಕು. ಹಬ್ಬದ ಮರುದಿನವಾದ ಕಾರಣ ಊರಿಗೋ, ನೆಂಟರ ಮನೆಗೋ ಹೋಗಿರಬೇಕು ಎಂದ ಗಣಪತಿ. ನಮಗೆ ಚೌತಿ ಮೆಣಸಿನ ಮಾಹಿತಿ ಒದಗಿಸಬಹುದಾದ ಎಳೆಯೊಂದು ಕೈ ತಪ್ಪಿತಲ್ಲ ಎನ್ನುವ ವ್ಯಸನದಲ್ಲಿ ವಾಪಸ್ಸು ಗುಡ್ಡ ಹತ್ತಿದೆವು. ಆಗಲೂ ನನಗೆ ಆ ನಾಯಿಗಳ ವರ್ತನೆಗಳದ್ದೇ ಗುಂಗು. ಗಣಪತಿಯನ್ನ ಕೇಳಿದೆ, ಅವ್ಯಾಕೆ ಬೊಬ್ಬಿರಿಯುತ್ತಿದ್ದರೂ ಬಾಲ ಅಲ್ಲಾಡಿಸುತ್ತ, ಮಧ್ಯೆ ಕಂಯ್, ಕುಂಯ್ ಅಂತಿದ್ದವಲ್ಲಾ, ಕಚ್ಚಕೇ ಬರಂತಿರುವ ನಾಯಿಗಳು  ಹೀಗ್ಯಾಕೆ ಮಾಡಿದವೋ? ಎಂದೆ. ‘ ಏ, ಮಾರಾಯಾ, ನಾಯಿ ಕೂಗೋದು ಕೇಳ್ಯೆ ನಾನು ಈ ಮನೇಲಿ ಜನ ಇಲ್ಲಾ ಅಂತಾ ಅಂದ್ಕೊಂಡೆ. ಒಂಟಿ ಮನೆಲೀರ ನಾಯಿಗಳು ಮನೆಯಲ್ಲಿ ಜನ ಇದ್ರೆ ಅಬ್ಬರಿಸಿಕೊಂಡು ಕಚ್ಚಲಿಕ್ಕೇರ‍್ತವೆ, ಆಗ ಗಟ್ಟಿ ಧೈರ್ಯ, ಒಂದೊಮ್ಮೆ ಏನಾದ್ರೂ ಆದ್ರೂ ಮನೆ ಜನ ಇದಾರಲ್ಲಾ ಅಂತಾ. ಮನೇಲಿ ಯಾರೂ ಇಲ್ಲ ಅಂದ್ರೆ ಪುಕ್ಕಲು, ಹಾಗಂತ ಮೂಲ ಸ್ವಭಾವ ಬಿಡುವಂತಿಲ್ಲ, ಬೊಗಳಿ, ಅಬ್ಬರಿಸಲೇ ಬೇಕು. ಅಷ್ಟೂ ಕರ್ತವ್ಯಪಾಲನೆ ಮಾಡದಿದ್ದರೆ ಉಂಡ ಅನ್ನಕ್ಕೆ ಅಪಚಾರ’ಎಂದ. ನನಗೆ ಎಲಾ ! ಎನ್ನುವಷ್ಟು ಬೆರಗಾಯ್ತು. ಆತ ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ ಅನ್ನಿಸಿತು. ಮರುಕ್ಷಣ ಬೆರಗು ಕಳೆದು ಉಕ್ಕಿ,ಉಕ್ಕಿ ನಗು ಬಂತು. ಮನಸೋಇಶ್ಚೆ ಗಟ್ಟಿಯಾಗಿ ನಕ್ಕುಬಿಟ್ಟೆ. ಮನುಷ್ಯನೂ ಹಾಗೇ ಅಲ್ಲವಾ, ಹಿಂದುಗಡೆ ಎರಡು ಜನ ಬಲಕ್ಕೆ ಇದಾರೆ ಅಂದ್ರೆ ಏನು ಆರ್ಭಟ, ಇಲ್ಲದಿದ್ರೆ ಕೊಂಯ್,ಕರ‍್ರ್. ನಾಯಿಗಳು ಕೂಡ ಮನುಷ್ಯನಷ್ಟೇ ಬೆರಕೆ, ಅವನಂತೆ ಸಮಯಸಾಧಕತನವನ್ನೂ ಕಲಿತಿದ್ದಾವಲ್ಲಾ ಎನ್ನುವ ಸೋಜಿಗವಾಯ್ತು.

ಇಷ್ಟೆಲ್ಲ ಆದರೂ ನಮ್ಮೆದುರಿರುವ ಸವಾಲು ಹಾಗೇ ಇತ್ತು. ಯಾರಾದರೂ ತೋರಿಸಿಕೊಡುವ ಸಾಧ್ಯತೆಯೂ ಇಲ್ಲವಾಯ್ತು. ಈಗೇನಿದ್ದರೂ ನಾವೇ ಅರಸಬೇಕು. ಒಂದೊಂದೇ ಮೆಣಸಿನ ಬಳ್ಳಿಗಳನ್ನ ಹತ್ತಿರದಿಂದ ನಮ್ಮ ಬಳಿ ಆದಷ್ಟು ಸೂಕ್ಷ್ಮವಾಗಿ ಪರಿಶೀಲಿಸಿತೊಡಗಿದೆವು. ಸ್ವಲ್ಪ ಹೊತ್ತಿನ ನಂತರ ಒಂದು ಬಳ್ಳಿಯಲ್ಲಿ ಅಲ್ಲಲ್ಲಿ ಕಾಳುಗಳಿದ್ದ ಕರೆಗಳು ಕಾಣಿಸಿದವು. ಕೆಳಕ್ಕೆ ಆಳದಿಂದ ಬೆಳೆದ ಮರಗಳಲ್ಲಿದ್ದ ಆ ಬಳ್ಳಿಗಳನ್ನು ಸೋಕುವ ಹಾಗಿರಲಿಲ್ಲ. ನಮ್ಮ ಕ್ಯಾಮೆರಾಗಳನ್ನ ಜೂಂ ಮಾಡುತ್ತ ಆ ಕರೆಗಳ ಫೊಟೊ ತೆಗೆದು ನೋಡಿದರೆ ಅಲ್ಲಿ ಕಾಳುಮೆಣಸಿನ ಬದಲು ನವ್ಯಾತಿನವ್ಯದ ಚಿತ್ರಗಳಿದ್ದವು. ಒಂದು ರೀತಿಯ ಸೋಲು, ಕಣ್ಣಿಗೆ ಕಂಡರೂ ಕೈಗೆ ಸಿಗದ ಹತಾಶೆ. ಇಂಥದ್ದನ್ನ ಅನುಭವಿಸಿದರಷ್ಟೇ ಗೊತ್ತು.

ಏನ್ಮಾಡೋದು ಅಂತಾ ತಲೆ ಮೇಲೆ ಕೈಹೊತ್ತು ಕುಳಿತ, ಅಲ್ಲ ನಿಂತ ಇಬ್ಬರೂ ನಮ್ಮ ಜ್ಞಾನಚಕ್ಷಗಳನ್ನ ತೆರೆಯುವ ಕೀಲಿಕೈ ಕೈಗೆತ್ತಿಕೊಂಡೆವು. ನನ್ನದು ಸವಣೂರ ಎಲೆ, ಸ್ವಲ್ಪ ಸುಣ್ಣ, ಒಂದಿಷ್ಟು ಚಾಲಿ ಅಡಕೆ ಹೋಳು, ಮಧು ಎನ್ನುವ ತಂಬಾಕು ( ಅದರ ಮೇಲೆ ಮಾರಕ ಕಾಯಿಲೆಗೆ ಶೀಘ್ರ ದಾರಿ ಎನ್ನುವ ಒಕ್ಕಣೆ ಬೇರೆ), ಗಣಪತಿಯದು ಸ್ವಲ್ಪ ಸ್ಪೆಷಲ್. ಕೆಂಪಡಿಕೆ ಹೋಳು, ಅದಕ್ಕೆ ಚೇತನಾ ಜರದಾ, ಒಂದಿಷ್ಟು ಸುಣ್ಣ, ಗಸಗಸ ತಿಕ್ಕಿ ಬಾಯಿಗಿಟ್ಟ ಅಂದರೆ ತ್ರಿಲೋಕದ ವಿದ್ಯಮಾನಗಳೆಲ್ಲ ಇವನ ಕಣ್ಣೆದುರಿಗೇ. ನನ್ನದು ಸ್ವಲ್ಪ ದೇಸಿ, ಅವತ್ತು ಮಾಮೂಲಿಯದರ ಜೊತೆಗೆ ಅವನ ಚೇತನಾವನ್ನು ಸೇರಿಸಿ ದವಡೆಗಿಟ್ಟೆ. ಟೋನಿ ಸ್ಟಾರ್ಕನ ದೈತ್ಯ ಸುಪರ್‌ಮ್ಯಾನ್‌ಗೆ ಆ ಕವಚದೊಳಗೆ ಕಣ್ಣೆದುರು ಕಾಣುತ್ತಲ್ಲ- ಅಷ್ಟಲ್ಲ, ಅದರ ನೂರರ ಒಂದುಪಟ್ಟು ನಮಗೆ ಪ್ಲಾನ್ ಹೊಳೆಯತೊಡಗಿತು.

ಒಂದು- ಇಲ್ಲೇ ಮನೆ ಇದೆ ಅಂದ್ರೆ ಅಲ್ಲಿರುವ ಮನುಷ್ಯನಿಗೆ ಚೌತಿ ಮೆಣಸು ಗೊತ್ತಿದೆ, ಅದನ್ನ ಅವನು ಕೊಯ್ಯುತ್ತಾನೆ. ಎರಡು- ಮೆಣಸನ್ನು ಕೊಯ್ಯಲು ಆತ ಏಣಿಯನ್ನ ಬಳಸುತ್ತಾನೆ. ಮತ್ತು ಕೊಯ್ದದ್ದರ ಬಗ್ಗೆ ಆ ಬಳ್ಳಿ, ಸುತ್ತಲಿನ ಸಸ್ಯಗಳ ಮುದುಡುವಿಕೆ, ಹೆಜ್ಜೆ ಗುರುತು ಇದ್ದೇ ಇರುತ್ತೆ. ಇವನ್ನ ನಾವು ಅನುಸರಿಸಬೇಕು ಎಂದು ತೀರ್ಮಾನಿಸಿಕೊಂಡೆವು.

ನಾನೇನು ಕಾಡಿನ ಬಗ್ಗೆ ಬಹಳಷ್ಟನ್ನ ತಿಳಿದುಕೊಂಡವನಲ್ಲ. ಆದರೆ ಕಾಡನ್ನ ಹಿಂದಿನ ಇತಿಹಾಸಕಾರರು ಬರೆದಿರುವದನ್ನ, ಕಾಡು ಅಲೆದವರ ಮಾಹಿತಿಗಳನ್ನ, ಇತ್ತೀಚಿನ ಮಾಹಿತಿಪೂರಣವನ್ನ ಅವಲಂಬಿಸಿ ಕಾಡನ್ನು ಕಂಡವ ನಾನಲ್ಲ. ನನಗೆ ಕಾಡು ಕಲಿಸಿದ ರೀತಿಯೇ ಬೇರೆ, ನನ್ನ ಭಾಷೆಯೇ ಬೇರೆ. ಇದೇ ಇದು, ಇಷ್ಟಕ್ಕೇ ಎಷ್ಟು ಎಂದು ಸೇರೋ, ಕೆಜಿಯೋ ಲೆಕ್ಕ ಹಾಕಿ ಹೇಳುವ ಪಂಡಿತ ನಾನಲ್ಲ. ನಾನು ಹೇಳುವದು ಬಹಳಷ್ಟು ಹೆಚ್ಚುಗಾರಿಕೆ ಅನ್ನಿಸಬಹುದು. ಕಾಡಿನ ಒಡನಾಟ ಹುಟ್ಟಿನಾರಭ್ಯ ಬಂದ ಕಾರಣ ಕಾಡು ನನಗೆ ನನ್ನದೇ ಮನೆ ಅನಿಸುವಷ್ಟು ಹತ್ತಿರ.

ನಿಧಾನಕ್ಕೆ ಪ್ರಪಾತದಲ್ಲಿರುವ ಬಳ್ಳಿಗಳ ಸಖ್ಯ ಬಿಟ್ಟು ದಿಬ್ಬದ ಮೇಲಿರುವ ಬಳ್ಳಿಗಳ ತಲಾಷಿಗೆ ತೊಡಗಿದೆವು.   ಒಂದೆರಡು ಬಳ್ಳಿಗಳಲ್ಲಿ ನಾಲ್ಕಾರು ಕರೆಗಳು ಕಂಡವು; ಅವುಗಳಲ್ಲಿ ಒಂದೆರಡು ಹಣ್ಣು ಕಾಳುಗಳು ಅಂಟಿಕೊಂಡಿದ್ದವು. ಹಾಗೇ ನೋಡುತ್ತ ಹೋದ ಹಾಗೇ ಒಂದು ಬಳ್ಳಿಯಲ್ಲಿ ಬಹಳಷ್ಟು ಕರೆಗಳಿದ್ದವು. ಅದನ್ನೇ ಲಕ್ಷಿಸಿ ಹೋದರೆ ನೋಡುವದೇನು? ಯಾರಿಗೂ ಕಾಣದಂತೆ ಆ ಬಳ್ಳಿಗೇ ಜೋಡಿಸಿಟ್ಟ ಮರದ ಏಣಿ! ಭಾಪರೇ! ಅಂದೆ. ಅಂದರೆ ಈ ಮೆಣಸಿನ ಬಗ್ಗೆ ಕೆಲವರಿಗೆ ಗೊತ್ತಿದೆ. ಅದನ್ನ ಅವರು ಹೊರಜಗತ್ತಿಗೆ ಚೂರೂ ಐಬು ಕೊಡದೇ ಸರಿಯಾದ ಶ್ರಾಯದಲ್ಲಿ ಕೊಯ್ಯುತ್ತಾರೆ. ಇನ್ನೂ ಬೆಳೆಯದವನ್ನ ಕೊಯ್ಯಲು ಈ ಏಣಿ ಇಟ್ಟಿದಾರೆ. ಅಷ್ಟೇ.

ಕಾಡಿನೊಡಲಲ್ಲಿ ನಡೆಯುವ ನಿಗೂಢ ಕೃತ್ಯಗಳಿಗೂ, ನಾಡಿನಲ್ಲಿ ಆಗುವ ವಿಧ್ಯಮಾನಗಳಿಗೂ ಈಗ ಬಹಳಷ್ಟು ವ್ಯತ್ಯಾಸಗಳಿಲ್ಲ( ನನ್ನ ಮತ್ತೊಂದು ವಾದ ಏನೆಂದರೆ ನಾಡೆಂದು ಕರೆಯುವ ನಮ್ಮ ವಾಸ್ತವದಲ್ಲಿ ನಡೆಯುವ ವಿದ್ಯಮಾನಗಳು ಕಾಡಲ್ಲು ನಡೆಯುತ್ತವೆ. ಆದರೆ ಅವು ನಮ್ಮ ಅರಿವಿಗೆ ಬರೋದಿಲ್ಲ)

ಗಣಪತಿ ನಿಧಾನಕ್ಕೆ ಆ ಏಣಿಯನ್ನು ಚಾಚಿ ಅದರ ಒಂದೊಂದೇ ಕಾಲಿನ ಮೇಲೆ ಹೆಜ್ಜೆಯಿಟ್ಟು ಹತ್ತತೊಡಗಿದ. ಅಷ್ಟರಲ್ಲಾಗಲೇ ಅವನ ಕಾಲಿಗೆ ನಾಲ್ಕಾರು ಇಂಬಳಗಳು ಕಚ್ಚಿಕೊಂಡಿದ್ದರೂ ಅದನ್ನ ಲಕ್ಷಿಸದೇ ಹತ್ತುತ್ತಿದ್ದ. ‘ ಏ ಮಾರಾಯಾ ನಿಧಾನಕ್ಕೆ ಹತ್ತೋ, ಏಣಿ ಲಡ್ಡಾದಂತಿದೆ’ ಎಂದು ಕಾಲಿಗೆ ಹತ್ತಿಕೊಂಡು ರಕ್ತ ಹೀರುವ ತವಕದಲ್ಲಿದ್ದ ಇಂಬಳಗಳನ್ನ ಕೊಡವಿಕೊಳ್ಳುತ್ತ ಕೂಗಿದೆ. ಹುಷಾರಿಯಿಂದಲೇ ಹತ್ತಿದ ಗಣಪತಿ ಆ ಮೆಣಸಿನ ಬಳ್ಳಿಯಲ್ಲಿದ್ದ ಹತ್ತಾರು ಕರೆಗಳನ್ನ ದೇಟಿನ ಸಮೇತ ಕೊಯ್ದು ಕೆಳಕ್ಕೆ ಹಾಕಿದ. ಕೆಳಕ್ಕೆ ಬಿದ್ದ ಅವನ್ನೆಲ್ಲ ಹೆಕ್ಕಿ ಸ್ವಲ್ಪ ಕೆಳಗಡೆ ಇದ್ದ ಕಾಲುದಾರಿಗೆ ಬಂದು ನಿಂತೆ. ಗಣಪತಿ ನಿಧಾನಕ್ಕೆ ಇಳಿದುಬಂದ. ಅದರ ಎಲೆಗಳನ್ನ ಇಬ್ಬರೂ ಗಮನಿಸುತ್ತ ನಿಂತೆವು. ಯಾಕೆಂದರೆ ಕಾಳುಮೆಣಸಿನ ತಳಿಗಳನ್ನು ಗುರುತಿಸುವಲ್ಲಿ ಅವುಗಳ ಎಲೆಗಳದ್ದು ಪ್ರಮುಖ ಪಾತ್ರ. ಎಲೆಗಳ ನಡುವಿನ ರೇಖೆಗಳ ಸಂಖ್ಯೆ, ಒಂದು ರೇಖೆಗೂ, ಮತ್ತೊಂದಕ್ಕೂ ಇರುವ ಅಂತರ, ಎಲೆಗಳ ವಿನ್ಯಾಸ ಒಂದರಿಂದ ಮತ್ತೊಂದಕ್ಕೆ ಭಿನ್ನವಾಗಿರುತ್ತದೆ ಎನ್ನುವದನ್ನ ಕೇಳಿದ್ದೆವು. ಆ ಮೂಲಕ ಇದರ ಗುರುತು ಹಿಡಿದಿಟ್ಟುಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದೆವು.

ಇಬ್ಬರಲ್ಲೂ ಏನೋ ಸಂಭ್ರಮ, ಏನನ್ನೋ ಸಾಧಿಸಿದ, ಗೆದ್ದ ಸಡಗರ. ತಿಂಗಳುಗಟ್ಟಲೆ ಕಡಲಿನಲ್ಲಿದ್ದ ನಾವಿಕರಿಗೆ ನೆಲ ಕಂಡಾಗ ಹೀಗೇ ಆಗುತ್ತದೆಯೇನೋ? ಅಷ್ಟರಲ್ಲೇ ವಿಶಿಷ್ಠವಾದ ಘಮವೊಂದು ನಮ್ಮ ಸುತ್ತ ಆವರಿಸಿಕೊಂಡಿತ್ತು. ಮೆಣಸಿನ ಬಳ್ಳಿ ಹಿಡಿದ ಕೈನ ಹಸ್ತವನ್ನ ಮೂಸಿದೆ. ಗಾಢವಾದ, ಮನಸ್ಸಿಗೆ ಸುಖ ಕೊಡುವ ಸುವಾಸನೆ. ‘ಕಾಳು ಜಗಿದು ನೋಡು’ ಎಂದು ಗಣಪತಿ ತಾನೊಂದು ಕಾಳನ್ನ ಅಗೆಯುತ್ತ ಹೇಳಿದ. ಮೊದಲು ಕಾಳಿನ ಸಿಪ್ಪೆಯನ್ನು ಅಗಿದೆ. ತುಸು ಖಾರ ಬೆರೆತ ಸಿಹಿ. ಓಹ್, ಊರಿನ ಮೆಣಸಿನಂತೆ ಎಂದುಕೊಳ್ಳುತ್ತ ಒಳಗಿನ ಪುಟ್ಟ ಬೀಜವನ್ನ ಅಗಿದೆ. ನಾಲಗೆ ಒಂದುಕ್ಷಣ ಚರ‍್ರೆಂದಿತು. ನಂತರ ಏನೋ ಸ್ವಾದಿಷ್ಟ, ವಿವರಿಸಿಲಾಗದ ರುಚಿ. ನಮ್ಮ ಬಾಯಿಂದಲೇ ಮೂಗಿಗೆ ಸೋಕುವ ಪರಿಮಳ.

ಇದಕ್ಕೆ ಕಣೋ, ಮೊದಲು ಅರಬ್ಬೀ ವ್ಯಾಪಾರಿಗಳು, ಅವರಿಂದ ಇದರ ರುಚಿ ಹತ್ತಿಸಿಕೊಂಡ ವಾಸ್ಕೊಡಗಾಮ, ಅವನ ನಂತರ ಪ್ರೆಂಚರು, ಡಚ್ಚರು, ಬ್ರಿಟಿಷರು ಒಬ್ಬರ ಹಿಂದೊಬ್ಬರು ನಮ್ಮ ದೇಶಕ್ಕೆ ಹುಡುಕಿಕೊಂಡು ಬಂದರೇನೋ? ಎಂದೆ.

ನಾವಿದ್ದ ಕಾಡು ಒಂದು ಕಾಲದಲ್ಲಿ ಅಲ್ಲಿಂದ ಅನತಿ ದೂರದಲ್ಲೆÃ ಇರುವ -ಕಾಳುಮೆಣಸಿನ ರಾಣಿ ಎಂದೇ ಕರೆಸಿಕೊಂಡಿದ್ದ – ಗೇರುಸೊಪ್ಪೆಯ ಸ್ರಾಮಾಜ್ಯಕ್ಕೆ ಸೇರಿದ್ದಿರಬಹುದು. ಮತ್ತು ಪಶ್ಚಿಮಘಟ್ಟದ ಕಾಡುಗಳಲ್ಲೆಲ್ಲ ಇಂಥ ಹಲವಾರು ಮೆಣಸಿನ ತಳಿಗಳಿರಬಹುದು. ಸಾವಿರಾರು ಮೈಲು ದೂರದ ದೇಶಕ್ಕೆ ತನ್ನ ಕಂಪು, ರುಚಿಗಳಿಂದಲೇ ಆಕರ್ಷಣೆ ಹುಟ್ಟಿಸಿದ ಕಾಡು ಕಾಳುಮೆಣಸು ನಮ್ಮ ಕೈಯಲ್ಲಿತ್ತು. ಎಷ್ಠೋ ದಿನಗಳಿಂದ ಅದನ್ನು ಕಾಣಲೆಂದು ಕಾತರಿಸಿದ್ದ ನಮಗೆ ವಜ್ರದ ಹರಳುಗಳಿಗಿಂತ ಅಮೂಲ್ಯವಾದದ್ದೂ ಆಗಿತ್ತು.

ಏರು ದಾರಿಯಲ್ಲಿ ವಾಪಸ್ಸು ಬರುತ್ತ ಮತ್ತೊಂದಷ್ಟು ಸಸ್ಯ,ಗಿಡಗಳನ್ನ ಗುರುತಿಸುತ್ತ ಬೈಕ್ ಇಟ್ಟಲ್ಲಿಗೆ ಬಂದು

ಅಲ್ಲಿಂದ  ಹೊರಟಾಗ ಗಂಟೆ ಸಂಜೆ ನಾಲ್ಕಾಗಿತ್ತು. ಅದೇ ಕೊರಕಲು ದಾರಿಯಲ್ಲಿ ಒದ್ದಾಡುತ್ತ ಕಾಡು ಕಳೆಯುತ್ತಿದ್ದಂತೇ ಆ ತನಕ ಕಾಣಿಸಿಕೊಳ್ಳದ ಹಸಿವು ಏಕಾಏಕಿ ಕಿಬ್ಬೊಟ್ಟೆಯಲ್ಲಿ ಕೆರಳಿಬಿಟ್ಟಿತು. ಒಂದಷ್ಟು ದೂರ ಬಂದ ನಂತರ ತಿಳಿ ನೀರು ಹರಿಯುತ್ತಿದ್ದ ಸಣ್ಣ ಹಳ್ಳವೊಂದರ ಬಳಿ ನಿಂತೆವು. ತಂದಿದ್ದ ತಿಂಡಿಗಳನ್ನ ಅಲ್ಲೇ ಇದ್ದ  ಕಾಡುಗಿಡದ ಅಗಲವಾದ ಎಲೆಗೆ ಸುರುವಿಕೊಂಡು ಉಣ್ಣುತ್ತಿದ್ದರೆ ಸ್ವರ್ಗ ಸುಖ!

 

2 comments

Leave a Reply