ಶಬರಿಮಲೆ – ಅಸ್ಪೃಶ್ಯತೆಯ  ಮತ್ತೊಂದು ಆಯಾಮ

ನಾ ದಿವಾಕರ

ಶಬರಿಮಲೆ – ಅಸ್ಪೃಶ್ಯತೆಯ  ಮತ್ತೊಂದು ಆಯಾಮ

ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ಕುರಿತು ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪು ಭಾರತದ ಸಾಂಪ್ರದಾಯಿಕ ಸಮಾಜಕ್ಕೆ ಜಾಗೃತಿಯ ಸಂದೇಶವಾಗಬೇಕಿತ್ತು. ದೇಶದ ಪ್ರಜ್ಞಾವಂತ ಜನತೆಯ ಪ್ರಬುದ್ಧತೆಗೆ ಮಾರ್ಗಸೂಚಿಯಾಗಬೇಕಿತ್ತು. ಆದರೆ ಅದೇನು ದುರಂತವೋ, ಸುಪ್ರೀಂಕೋರ್ಟ್ ತೀರ್ಪು ಈ ದೇಶದ ಸಾಮಾಜಿಕ ವ್ಯವಸ್ಥೆಯೊಳಗಿನ ಎಲ್ಲ ಹೊಲಸನ್ನೂ ಒಮ್ಮೆಲೆ ಎತ್ತಿ ಹೊರಹಾಕಿಬಿಟ್ಟಿದೆ. ಈ ದೇಶ ಇನ್ನು ಶತಮಾನಗಳು ಕಳೆದರೂ ತನ್ನ ಅಂತರಂಗದಲ್ಲಿ ಅಡಗಿರುವ ಕಲ್ಮಶವನ್ನು  ಹೊರಹಾಕಲು ಸಿದ್ಧವಾಗುವುದಿಲ್ಲ ಎಂಬ ದುರಂತ ಸಂದೇಶ ನೀಡುವ ನಿಟ್ಟಿನಲ್ಲಿ ಎಲ್ಲ ಬೆಳವಣಿಗೆಗಗಳೂ ನಡೆಯುತ್ತಿವೆ. ಜರಾಸಂಧ ವಧೆಯನ್ನು ನೆನಪಿಸುವ ಬಿಜೆಪಿ ಶಾಸಕರೊಬ್ಬರು ದೇವಾಲಯ ಪ್ರವೇಶಿಸಿದ ಮಹಿಳೆಯ ದೇಹವನ್ನು ಎರಡು ಭಾಗ ಮಾಡುತ್ತೇನೆ ಎಂದು ಘೋಷಿಸಿರುವುದು ಮತ್ತು ಈ ಘೋಷಣೆಯನ್ನು ಖಂಡಿಸಲೂ ಮುಂದಾಗದೆ ಬಿಜೆಪಿ ನಾಯಕರು ಮೌನ ವಹಿಸಿರುವುದು, ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಿ ಎಂದು ಘಂಟಾಘೋಷವಾಗಿ ಬಿಜೆಪಿ ಅಧ್ಯಕ್ಷರು ಕರೆ ನೀಡುವುದು ಇವೆಲ್ಲವೂ ಇಂತಹ ಕಲ್ಮಷದ ಒಂದು ಸಂಕೇತವಷ್ಟೆ. ಶಬರಿಮಲೆಯಲ್ಲಿ ದೇವಾಲಯ ಪ್ರವೇಶಕ್ಕಾಗಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಪ್ರಯತ್ನಗಳು ಈ ದೇಶದ ಸಾಮಾಜಿಕ ಜೀವನದಲ್ಲಿ ಸುಪ್ತವಾಗಿರುವ ಒಂದು ಜಾಗೃತ ಚೇತನವನ್ನು ಬಿಂಬಿಸುತ್ತದೆ. ಇದೇ ವೇಳೆ ಈ ಪ್ರಯತ್ನವನ್ನು ವಿಫಲಗೊಳಿಸಲು ಸಜ್ಜಾಗಿರುವ ಫ್ಯಾಸಿಸ್ಟ್ ಮನಸುಗಳು ಮತ್ತು ಈ ಮನಸುಗಳನ್ನು ಪ್ರಚೋದಿಸುವ ರಾಜಕೀಯ-ಸಾಂಸ್ಕøತಿಕ ಶಕ್ತಿಗಳು ನಮ್ಮ ದೇಶದ ಸಾಮಾಜಿಕ ಜೀವನದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ರೌರ್ಯ ಮತ್ತು ಅಸಹಿಷ್ಣುತೆಯನ್ನು ಬಿಂಬಿಸುತ್ತದೆ.

ಈ ಸಂದರ್ಭದಲ್ಲಿ ಕಳೆದ ಮೂರು ದಶಕಗಳ ಭಾರತದ ರಾಜಕಾರಣದಲ್ಲಿ ರಾಜಕೀಯ ಅಂಶಗಳಿಗಿಂತಲೂ ಸಮಾಜೋ ಸಾಂಸ್ಕೃತಿಕ ಅಂಶಗಳೇ ಹೆಚ್ಚು ಪ್ರಧಾನ ಪಾತ್ರ ವಹಿಸಿರುವುದನ್ನು ಗುರುತಿಸುವುದು ಸೂಕ್ತ. ಭಾರತದ ಸಾರ್ವಭೌಮ ಪ್ರಜೆಗಳ ಮೂಲ ಸ್ವರೂಪವನ್ನೇ ವಿಕೃತಗೊಳಿಸುವ ರೀತಿಯಲ್ಲಿ ಆಡಳಿತ ವ್ಯವಸ್ಥೆಯ ನಿರ್ವಾಹಕರು ಜನತೆಯನ್ನು ಜಾತಿ, ಮತ, ಧರ್ಮ, ಭಾಷೆ ಮತ್ತು ಪ್ರಾದೇಶಿಕ ಅಸ್ಮಿತೆಗಳ ನೆಲೆಯಲ್ಲಿ ತುಂಡರಿಸಿ, ವಿಂಗಡಿಸಿ, ಕ್ರೋಢೀಕರಿಸಿ, ಧೃವೀಕರಿಸಿ ತಮ್ಮ ಅಧಿಕಾರ ಪೀಠಗಳನ್ನು ದೃಢೀಕರಿಸಿಕೊಂಡಿದ್ದಾರೆ. ಮತ ರಾಜಕಾರಣ , ಮತಬ್ಯಾಂಕ್ ರಾಜಕಾರಣ ಮತ್ತು ಮತಧರ್ಮ ರಾಜಕಾರಣ ಈ ಮೂರೂ ವಿದ್ಯಮಾನಗಳನ್ನು ಒಂದೇ ಭೂಮಿಕೆಯಲ್ಲಿ ನಿಲ್ಲಿಸಿ ಜನತೆಯನ್ನು ದಿಕ್ಕುತಪ್ಪಿಸುವ ಪ್ರಯತ್ನ ಅವ್ಯಾಹತವಾಗಿ ನಡೆಯುತ್ತಲೇ ಇದೆ. 1989ರ ರಾಮಮಂದಿರದಿಂದ 2018ರ ಶಬರಿಮಲೆ ಅಯ್ಯಪ್ಪನವರೆಗೆ ಈ ಮತಧಾರ್ಮಿಕ ರಾಜಕಾರಣದ ವಿಕೃತ ಧೋರಣೆ ವಿಭಿನ್ನ ಸ್ವರೂಪಗಳಲ್ಲಿ ವ್ಯಕ್ತವಾಗುತ್ತಲೇ ಇದೆ. ಕ್ರಮೇಣ ಪುರೋಹಿತಶಾಹಿಯ ತೆಕ್ಕೆಯಲ್ಲಿದ್ದ ದೇವರು ಮತ್ತು ಧರ್ಮದ ನೆಲೆಗಳನ್ನು, ಬ್ರಾಹ್ಮಣ್ಯಶಾಹಿಯ ಮೂಲ ನೆಲೆಯನ್ನು ಕಾಪಾಡಿಕೊಳ್ಳುತ್ತಲೇ ರಾಜಕೀಯ ನೆಲೆಯಲ್ಲಿ ಪ್ರತಿಷ್ಠಾಪಿಸುವ ಪ್ರಯತ್ನ ನಡೆಯುತ್ತಿದೆ.


ಶಬರಿ ಮಲೆ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಮುಕ್ತ ಅವಕಾಶ ನೀಡಬೇಕು ಎನ್ನುವ ಸುಪ್ರೀಂಕೋರ್ಟ್‍ನ ತೀರ್ಪಿನ ವಿರುದ್ಧ ನಡೆಯುತ್ತಿರುವ ಸಂಘರ್ಷ ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿರುವ ಪಿತೃಪ್ರಧಾನ ಧೋರಣೆ ಮತ್ತು ವಿಕೃತ ಸಾಂಪ್ರದಾಯಿಕತೆಯನ್ನು ಎತ್ತಿ ತೋರಿಸಿದೆ. ಪುರುಷ ಪ್ರಧಾನ ಧೋರಣೆ ಮಹಿಳೆಯರಲ್ಲೂ ಇರುತ್ತದೆ, ಬ್ರಾಹ್ಮಣ್ಯದ ವಿಕೃತ ಮನಸ್ಸು ಬ್ರಾಹ್ಮಣೇತರರಲ್ಲೂ ಇರುತ್ತದೆ, ಪುರೋಹಿತಶಾಹಿ ಮನಸ್ಸಿಗೆ ಜಾತಿ ಧರ್ಮಗಳ ಆಂತರ ಇರುವುದಿಲ್ಲ ಎಂದು ಶಬರಿಮಲೆ ವಿವಾದ ನಿರೂಪಿಸಿದೆ. ತ್ರಿವಳಿ ತಲಾಖ್ ನಿಷೇಧಿಸಿ ಕೋರ್ಟ್ ಆದೇಶ ನೀಡಿದಾಗ ಮಹಿಳಾ ಪರ ಸೋಗು ಹಾಕಿಕೊಂಡು ಮುಸ್ಲಿಂ ಮಹಿಳೆಯರ ವಕಾಲತ್ತು ವಹಿಸಿದ ಸಂಪ್ರದಾಯವಾದಿ ಸಾಂಸ್ಕೃತಿಕ  ಆರಕ್ಷಕರೇ ಇಂದು ಹಿಂದೂ ಮಹಿಳೆಯರ ಮುಕ್ತ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡುತ್ತಿರುವುದು ಸಾಂಸ್ಕೃತಿಕ  ರಾಜಕಾರಣದ ನಿಜ ಸ್ವರೂಪವನ್ನು ಬಹಿರಂಗಪಡಿಸಿದೆ.

10 ರಿಂದ 50 ವರ್ಷದ ಋತುಮತಿಯಾಗುವ ಮಹಿಳೆಯರಿಗೆ ಬ್ರಹ್ಮಚಾರಿ ದೇವರಾದ ಅಯ್ಯಪ್ಪನ ಸ್ಥಾನಕ್ಕೆ ಪ್ರವೇಶ ನೀಡಕೂಡದು ಎನ್ನುವ ವಾದವೇ ಅಪ್ರಬುದ್ಧವಾದದ್ದು. ಪೌರಾಣಿಕ ಚಿತ್ರಣಗಳಿಗೆ ವ್ಯಕ್ತಿ ಸ್ವರೂಪ ನೀಡಿ, ಈ ವ್ಯಕ್ತಿ ಸ್ವರೂಪಕ್ಕೆ ಚಾರಿತ್ರಿಕ ನೆಲೆ ನೀಡುವ ಮೂಲಕ ಕೃತಕ ಇತಿಹಾಸ ಸೃಷ್ಟಿಸಿ, ದೇಶ ಕಾಲ ಇಲ್ಲದ ಇತಿಹಾಸವನ್ನೇ ಸತ್ಯ ಸಂಶೋಧನೆ ಎಂದು ಬಿಂಬಿಸಿ, ಜನಸಾಮಾನ್ಯರನ್ನು ಸಮೂಹ ಸನ್ನಿಗೆ ಒಳಪಡಿಸುವ ಸಾಂಸ್ಕೃತಿಕ ರಾಜಕಾರಣ ಸಾಂಸ್ಕೃತಿಕ ಅರಾಜಕತೆಗೆ ದಾರಿ ಮಾಡಿಕೊಡುತ್ತದೆ. ಅಯೋಧ್ಯೆಯ ಶ್ರೀರಾಮ, ಬಾಬಾಬುಡನ್‍ಗಿರಿಯ ದತ್ತಾತ್ರೇಯ ಮತ್ತು ಶಬರಿಮಲೆಯ ಅಯ್ಯಪ್ಪ ಈ ವಿಕೃತ ಸಂಸ್ಕೃತಿಗೆ ಬಲಿಯಾಗುವುದೇ ಅಲ್ಲದೆ ಸಾಂಸ್ಕೃತಿಕ ರಾಜಕಾರಣದ ಕೈಬಂದಿಯಾಗಿದ್ದಾರೆ. ಶಬರಿಮಲೆ ಅಯ್ಯಪ್ಪ ಒಂದು ಕಾಲ್ಪನಿಕ ವ್ಯಕ್ತಿ. ಪುರಾಣಗಳನ್ನೇ ಕೆದಕುತ್ತಾ ಹೋದರೆ ಆದಿವಾಸಿ, ಬೌದ್ಧ ಭಿಕ್ಕು, ಹರಿ ಹರನ ಸಂಗಮದಿಂದ ಜನಿಸಿದ ಶಿಶು , ರಾಜಕುಮಾರ ಎಂದೆಲ್ಲಾ ಕಥಾನಕಗಳು ಕೇಳಿಬರುತ್ತವೆ. ಈ ಕಪೋಲ ಕಲ್ಪಿತ ಪೌರಾಣಿಕ ಕಥನಗಳನ್ನೇ ನೈಜ ಇತಿಹಾಸದಂತೆ ಬಿಂಬಿಸುವ ಮೂಲಕ ಮತೀಯ ಫ್ಯಾಸಿಸ್ಟ್ ಶಕ್ತಿಗಳು ಜನಸಾಮಾನ್ಯರನ್ನು ಮೌಢ್ಯತೆಯ ಕೂಪಕ್ಕೆ ತಳ್ಳಲು ಯತ್ನಿಸುತ್ತಿದ್ದಾರೆ.

ಇಷ್ಟಕ್ಕೂ ಅಯ್ಯಪ್ಪ ಒಬ್ಬ ಜನಪ್ರಿಯ ದೇವರಾಗಿ ರೂಪುಗೊಂಡಿದ್ದು 1970ರ ದಶಕದ ನಂತರವೇ. ಶಬರಿಮಲೆಯಲ್ಲಿ ಮಕರವಿಳಕ್ಕು ಸಂದರ್ಭದಲ್ಲಿ ಗೋಚರಿಸುವ ದಿವ್ಯ ಜ್ಯೋತಿಯ ಕಟ್ಟುಕತೆಯನ್ನೇ ಪವಾಡಸದೃಶ ಎಂದು ನಂಬಿಸಿ ದಶಕಗಳ ಕಾಲ ಜನರನ್ನು ವಂಚಿಸಿದ ದೇವಾಲಯದ ಧರ್ಮದರ್ಶಿಗಳು ಈ ಪವಾಡವೆಲ್ಲ ಸುಳ್ಳು ಎಂದು ಸಾಬೀತಾದ ಮೇಲೆ ಮಹಿಳೆಯರ ಪ್ರವೇಶ ನಿಷೇಧಿಸುವ ಮೂಲಕ ತಮ್ಮ ಮೂಲ ದೇವರ ಅಸ್ತಿತ್ವವನ್ನು ಉಳಿಸಲು ಯತ್ನಿಸುತ್ತಿರುವುದು ವಾಸ್ತವ. ಸುಪ್ರೀಂಕೋರ್ಟ್‍ನ ತೀರ್ಪು ದೇಶದ ಮಹಿಳೆಯರ ಸಂವೇದನೆ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತದೆ. ಇದು ಪುರೋಹಿತಶಾಹಿ ಮನಸ್ಸಿನ , ಪಿತೃಪ್ರಧಾನ ಧೋರಣೆಯ ಸಾಂಸ್ಕೃತಿಕ ಅಧಿಪತಿಗಳಿಗೆ ಅಪಥ್ಯ ಎನಿಸುತ್ತದೆ. ಇಲ್ಲಿ ಪುರುಷ ಸಮಾಜ ಗಮನಿಸಬೇಕಾದ ಸಂಗತಿಯೊಂದಿದೆ. ವರ್ಷಕ್ಕೊಮ್ಮೆ ನಡೆಯುವ ಇರುಮುಡಿ ಉತ್ಸವ ಮತ್ತು ಮಕರವಿಳಕ್ಕು ಸಂದರ್ಭದಲ್ಲಿ ತಲೆಯ ಮೇಲೆ ಇರುಮುಡಿ ಹೊತ್ತು, ವ್ರತಗಳನ್ನು ಆಚರಿಸಿ ಬೆಟ್ಟದ ಮೇಲೆ ನಡೆದೇ ಹೋಗುವ ಪುರುಷರಲ್ಲಿ ಅನೇಕರು ವ್ರತಭಂಗ ಮಾಡಿದರೂ ಭಜನೆಯ ಮೂಲಕವೇ ತಮ್ಮ ಉನ್ಮಾದವನ್ನು ಹೊರಸೂಸುತ್ತಾ ದೈವ ದರ್ಶನವನ್ನು ಪೂರೈಸುತ್ತಾರೆ. ತಾವು ತಪ್ಪು ಮಾಡಿದ್ದೇವೆ ಎಂಬ ಪಾಪಪ್ರಜ್ಞೆಯೂ ಇಂತಹವರನ್ನು ಕಾಡುವುದಿಲ್ಲ.

ಆದರೆ ಕೋರ್ಟ್ ಆದೇಶದ ನಂತರವೂ ಸಹ ಯಾವುದೇ ಮಹಿಳೆ ತಮ್ಮ ಮಾಸಿಕ ಋತುಸ್ರಾವದ ಸಂದರ್ಭದಲ್ಲಿ ದೇವಾಲಯಕ್ಕೆ ಹೋಗಲು ಒಪ್ಪುವುದಿಲ್ಲ. ಇದು ಒಬ್ಬ ಮಹಿಳೆಯಲ್ಲಿ ಸಹಜವಾಗಿ ಕಂಡುಬರುವ ಪ್ರವೃತ್ತಿ, ಪುರುಷರಲ್ಲಿ ಕಾಣಲಾಗದ ಪ್ರವೃತ್ತಿ. ಕೌಟುಂಬಿಕ ಸಂದರ್ಭಗಳಲ್ಲೂ ಇದನ್ನು ಕಾಣಬಹುದು. ಮಹಿಳೆಯ ಈ ಅಂತರ್ಗತ ಸಂವೇದನೆಯನ್ನು ಗ್ರಹಿಸುವ ಮಟ್ಟಿಗೆ ಭಾರತದ ಪುರುಷ ಸಮಾಜ ಪ್ರಬುದ್ಧವಾಗಿಲ್ಲ ಎನ್ನುವುದನ್ನು ಪುರುಷರೇ ನಿರೂಪಿಸುತ್ತಿದ್ದಾರೆ. ಒಬ್ಬ ಬ್ರಹ್ಮಚಾರಿ ದೇವರ ದರ್ಶನಕ್ಕೆ ಋತುಮತಿಯಾಗುವ ಮಹಿಳೆ ಹೋಗುವಂತಿಲ್ಲ ಎನ್ನುವುದೇ ಆದರೆ ಸಕಲ ಕಲಾ ವಲ್ಲಭರಂತೆ ಜೀವನ ನಡೆಸುವ ಚಟ ಸಾರ್ವಭೌಮರನೇಕರು ಮಕರವಿಳಕ್ಕು ಸಂದರ್ಭದಲ್ಲಿ ಮಾತ್ರ ಕರಿಬಟ್ಟೆ ಉಟ್ಟು, ಸ್ವಾಮಿಯೇ ಶರಣಂ ಅಯ್ಯಪ್ಪಾ ಎನ್ನುತ್ತಾ ಉನ್ಮತ್ತರಾಗಿ ಅಯ್ಯಪ್ಪನ ದರ್ಶನಕ್ಕೆ ಹೋಗಲು ಎಷ್ಟು ಅರ್ಹರು. ಜೀ ಟಿವಿ ವಾಹಿನಿಯಲ್ಲಿ ದಿನನಿತ್ಯ ರಾಶಿಫಲ ಹೇಳುವ ಮೂಲಕ ಜನಸಾಮಾನ್ಯರ ದಿಕ್ಕುತಪ್ಪಿಸುವ ಗುರೂಜಿಯೊಬ್ಬರು “ ಅಯ್ಯಪ್ಪ ದರ್ಶನಕ್ಕೆ ಮಹಿಳೆಯರಿಗೆ ಅವಕಾಶ ನೀಡಿದರೆ ವ್ರತ ನಡೆಸಿ ದರ್ಶನಕ್ಕೆ ಬರುವ ಕರಿವಸ್ತ್ರಧಾರಿ ಭಕ್ತರ ಚಿತ್ತ ಚಂಚಲವಾಗುತ್ತದೆ ” ಎಂದು ಹೇಳುವ ಮೂಲಕ ಮಹಿಳೆಯರನ್ನು ಮನೆಯಲ್ಲೇ ಇರುವಂತೆ ಉಪದೇಶಿಸುತ್ತಾರೆ. ದೇವಾಲಯದ ಆಡಳಿತ ಮಂಡಲಿ ಸದಸ್ಯರೊಬ್ಬರು “ ಶಬರಿಮಲೆಗೆ ಮಹಿಳೆಯರೂ ಬರಲಾರಂಭಿಸಿದರೆ ಸೆಕ್ಸ್ ಟೂರಿಸಂ ಹೆಚ್ಚಾಗುತ್ತದೆ, ಭಕ್ತರು ಚಂಚಲರಾಗಿ ಅಡ್ಡದಾರಿ ಹಿಡಿಯುತ್ತಾರೆ ” ಎಂದು ಹೇಳುತ್ತಾರೆ.

ತಮ್ಮ ಚಿತ್ತ ಚಾಂಚಲ್ಯವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲಾಗದ ಯಾವುದೇ ವ್ಯಕ್ತಿ ಯಾವುದೇ ದೈವದರ್ಶನಕ್ಕೆ ಅರ್ಹನಲ್ಲ ಅಲ್ಲವೇ ? ಮಹಿಳೆಯರ ಇರುವಿಕೆಯೇ ಇವರ ಚಾಂಚಲ್ಯವನ್ನು ವೃದ್ಧಿಸುತ್ತದೆ ಎನ್ನುವುದಾದರೆ ಇವರ 40 ದಿನಗಳ ಬ್ರಹ್ಮಚರ್ಯ ವ್ರತ ಮತ್ತು ಇರುಮುಡಿಯ ಮಹತ್ವವಾದರೂ ಏನು ? ಯಾವುದೇ ಅತ್ಯಾಚಾರ, ದೌರ್ಜನ್ಯ ಎಸಗಿದಾಗಲೂ ಮಹಿಳೆಯರ ಮೇಲೆ ಇದೇ ರೀತಿಯ ಆರೋಪ ಹೊರಿಸಲಾಗುತ್ತದೆ. ಪ್ರಚೋದಕ ಉಡುಪು, ಪಾಶ್ಚಿಮಾತ್ಯ ಸಂಸ್ಕೃತಿಯೇ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಾರಣ ಎನ್ನುವ ವಿತಂಡವಾದವೇ ಇಲ್ಲಿಯೂ ಕಾಣುತ್ತದೆ. ಇಲ್ಲಿ ಪ್ರಶ್ನೆ ಇರುವುದು ಮಹಿಳೆಯರ ವಯಸ್ಸು ಅಥವಾ ಅವರ ದೇಹದಲ್ಲಿ ನಡೆಯುವ ಜೈವಿಕ ಕ್ರಿಯೆಗಳಲ್ಲ. ಇದು ಸಾಂಪ್ರದಾಯಿಕ, ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸುವ ಸಂದರ್ಭದಲ್ಲಿ ಸಾಮಾನ್ಯವಾಗಿ ಅನುಸರಿಸಲಾಗುವ ಅಸ್ಪೃಶ್ಯತೆಯ ಮತ್ತೊಂದು ಸ್ವರೂಪವಷ್ಟೇ. ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆ ಕೇವಲ ಜಾತಿಗೆ ಸೀಮಿತವಾಗಿಲ್ಲ. ಜಾತಿಯ ಗಡಿಗಳಿಂದಾಚೆಗೂ ಅಸ್ಪೃಶ್ಯತೆಯ ಆಚರಣೆ ಸದ್ದಿಲ್ಲದೆ, ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಲೇ ಬಂದಿದೆ. ಈ ಅನಿಷ್ಟ ಸಂಪ್ರದಾಯಕ್ಕೆ ಬಲಿಯಾಗಿರುವುದು ಮಹಿಳೆಯರಷ್ಟೇ.

ಹಿಂದೂ ಸಂಪ್ರದಾಯದ ಅನೇಕ ಆಚರಣೆಗಳಲ್ಲಿ ಮಹಿಳೆಯರ ಒಂದು ವರ್ಗವನ್ನು ಅಸ್ಪೃಶ್ಯರನ್ನಾಗಿ ಕಾಣುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಮುತ್ತೈದೆ ಮತ್ತು ವಿಧವೆಯ ನಡುವಿನ ತಾರತಮ್ಯ, ಮಕ್ಕಳನ್ನು ಹೆರಲಾಗದ ಮಹಿಳೆಯರ ಮೇಲಿನ ನಿಷೇಧ, ಋತುಮತಿಯಾದ ಮಹಿಳೆಯರ ಪ್ರತ್ಯೇಕತೆ, ಅವಿವಾಹಿತ ಮಹಿಳೆಯರು ಎದುರಿಸುವ ತಾರತಮ್ಯಗಳು, ವಿಚ್ಚೇದಿತ ಮಹಿಳೆಯರನ್ನು ನಿರ್ಲಕ್ಷಿಸುವ ಪ್ರವೃತ್ತಿ ಇವೆಲ್ಲವೂ ಪ್ರತಿಯೊಂದು ಕುಟುಂಬದಲ್ಲೂ ಕಂಡುಬರುವ ವಿದ್ಯಮಾನಗಳು. ಅಸ್ಪೃಶ್ಯತೆಯ ವಿರುದ್ಧ ದನಿ ಎತ್ತುವ ಸಮಾಜವೂ ಈ ರೀತಿಯ ಲಿಂಗಾಧಾರಿತ ಅಸ್ಪೃಶ್ಯತೆಯನ್ನು ಗಮನಿಸದೆ ಇರುವುದನ್ನೂ ಕಾಣುತ್ತಿದ್ದೇವೆ. ಓರ್ವ ಮಹಿಳೆ ಎದುರಿಸುವ ಈ ಸನ್ನಿವೇಶವನ್ನು ಯಾವುದೇ ಪುರುಷನೂ, ಎಂತಹುದೇ ಸಂದರ್ಭದಲ್ಲೂ ಎದುರಿಸುವುದಿಲ್ಲ ಎನ್ನುವುದನ್ನು ಗಮನಿಸಬೇಕು. ಹಾಗಾಗಿಯೇ ಭಾರತೀಯ ಸಮಾಜದಲ್ಲಿ ಮಹಿಳೆಯ ಶೀಲ ಸದಾ ಮುನ್ನೆಲೆಗೆ ಬರುತ್ತದೆ. ಶೀಲ ಹರಣ ಮಾಡುವುದು ಪುರುಷನ ಹಕ್ಕು ಎಂದಾದರೆ ಶೀಲ ಕಳೆದುಕೊಳ್ಳುವುದು ಮಹಿಳೆಯ ಅಪರಾಧವಾಗಿಬಿಡುತ್ತದೆ (ಕೆಲವೊಮ್ಮೆ ಸ್ವಯಂಕೃತವೂ). ಸಂವೇದನೆಯೇ ಇಲ್ಲದ ಒಂದು ಸಾಂಪ್ರದಾಯಿಕ ಸಮಾಜದಲ್ಲಿ ಇದು ಆಳವಾಗಿ ಬೇರೂರಿರುತ್ತದೆ.

ಶಬರಿಮಲೆ ವಿವಾದ ಈ ಅಸ್ಪೃಶ್ಯತೆಯ ಒಂದು ಆಯಾಮವನ್ನು ನಮ್ಮ ಮುಂದಿಟ್ಟಿದೆ. ಒಂದು ವೇಳೆ ಮಹಿಳೆಯರು ಶಬರಿಮಲೆಯಲ್ಲಿ ಜಯ ಸಾಧಿಸಿಬಿಟ್ಟರೆ ಎಲ್ಲ ರೀತಿಯ ಅಸ್ಪೃಶ್ಯತೆಯನ್ನು ಸಾಂವಿಧಾನಿಕವಾಗಿ ನಿಷೇಧಿಸುವ ಕೂಗು ಗಟ್ಟಿಯಾಗುತ್ತದೆ. ಅಷ್ಟೇ ಅಲ್ಲದೆ ಪಿತೃಪ್ರಧಾನ ವ್ಯವಸ್ಥೆ ರೂಪಿಸಿರುವ ಕಾನೂನು, ನಿಯಮಗಳು ಪ್ರಶ್ನಾರ್ಹವಾಗಿಬಿಡುತ್ತವೆ. ಇದು ಕೇವಲ ಹಿಂದೂ ಸಾಂಪ್ರದಾಯಿಕ ಸಮಾಜಕ್ಕೆ ಮಾತ್ರವೇ ಅಲ್ಲದೆ ಈ ಸಮಾಜವನ್ನು ನಿಯಂತ್ರಿಸುವ ಬ್ರಾಹ್ಮಣ್ಯದ ಅಧಿಪತ್ಯಕ್ಕೂ ಸವಾಲಾಗುತ್ತದೆ. ಬಿಜೆಪಿ ಮತ್ತು ಸಂಘಪರಿವಾರದ ತೀವ್ರ ಪ್ರತಿರೋಧವನ್ನು , ಮತಬ್ಯಾಂಕ್ ರಾಜಕಾರಣದ ಹೊರತಾಗಿ, ಈ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ. ಹಾಗೆಯೇ ಕೇರಳದ ಕಾಂಗ್ರೆಸ್ ಪಕ್ಷವೂ ಸಹ ಈ ವಿಚಾರದಲ್ಲಿ ಬಿಜೆಪಿಯ ಮಾರ್ಗವನ್ನೇ ಅನುಸರಿಸುತ್ತಿರುವುದು ವೈದಿಕ ಶಕ್ತಿಗಳ ಪ್ರಾಬಲ್ಯದ ಸಂಕೇತವಾಗಿ ಕಾಣುತ್ತದೆ. ಶಬರಿಮಲೆಯ ಹೋರಾಟ ನಿಂತ ನೀರಾಗದೆ ಹರಿವ ನದಿಯಂತೆ ಪ್ರವಹಿಸುತ್ತಾ ಪುರುಷ ಪ್ರಧಾನ ವ್ಯವಸ್ಥೆಯ ಬೃಹತ್ ಅಲೆಗಳನ್ನು ಎದುರಿಸಿ ನಿಲ್ಲಲು ಮಹಿಳಾ ಶಕ್ತಿಯನ್ನು ಸಿದ್ಧಪಡಿಸಬೇಕಿದೆ.

1 comment

  1. ಬ್ರಹ್ಮಚಾರಿ ಅಯ್ಯಪ್ಪನನ್ನು ಋತು ಚಕ್ರದ ಸ್ತ್ರೀಯರು ಪೂಜಿಸಿದರೆ ಮೈಲಿಗೆ ಆಗುತ್ತೆ ಅನ್ನುವವರನ್ನು ಕೇಳುತ್ತೇನೆ,
    ವ್ಯಭಿಚಾರಿ ಗಂಡಸರು ಅಯ್ಯಪ್ಪನನ್ನು ಪೂಜಿಸುತ್ತಿಲ್ಲವೇ?

Leave a Reply