೫ ಗಂಟೆಗಳ ಕಾಲ ಚಪ್ಪಾಳೆ ಶಿಳ್ಳೆಗಳಿಗೆ ಕೊರತೆಯಿರಲಿಲ್ಲ

ರಮ್ಯ ಜಾನು 

ಕೊನೆಗೂ ಮಳೆ ನಿಲ್ಲಲಿಲ್ಲ, ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಕುವೆಂಪುರನ್ನು ಮತ್ತೆ ಗೆಲ್ಲಿಸಿತು. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ಸಂದ ೫೦ ವರ್ಷದ ಸವಿನೆನಪಿಗಾಗಿ ಏರ್ಪಡಿಸಿದ ಕುವೆಂಪು ವಿರಚಿತ ‘ಶ್ರೀ ರಾಮಾಯಣ ದರ್ಶನಂ’ ನಾಟಕ ಮಳೆಯಲ್ಲೂ ಮೋಡಿ ಮಾಡಿದ್ದು, ೫ ಗಂಟೆಗಳ ಕಾಲ ಪ್ರತಿ ದೃಶ್ಯಕ್ಕೂ ಚಪ್ಪಾಳೆ ಶಿಳ್ಳೆಗಳು ಕೇಳುತಿದ್ದವು. ಹೀಗೆ ಕುವೆಂಪು ಎಲ್ಲರನ್ನು ಮತ್ತೆ ಆವರಿಸಿಕೊಂಡಿದ್ದರು.

ನನಗಿದ್ದ ಕುತೂಹಲಗಳಿಗೆ ಸಿಕ್ಕ ಉತ್ತರ, ಸಾಹಿತ್ಯ ಇಂದಿಗೂ ಎಂದಿಗೂ ಅಜರಾಮರ. ಈ ಕಾಲದಲ್ಲಿ ಸಾಹಿತ್ಯಗಳನ್ನು ಓದಿಕೊಳ್ಳುವ ಅಭ್ಯಾಸ ತೀರಾ ಕಡಿಮೆ ಅದರಲ್ಲೂ ಹಳೆಗನ್ನಡದ ಗೋಜಿಗೆ ಹೋಗದವರು ಬಹಳಷ್ಟು ಜನ. ಇನ್ನೂ ಪುರಾಣಗಳ ಬಗ್ಗೆ ಇರುವ ಆಸಕ್ತಿಯಂತೂ ಬೆರಳೆಣಿಕೆಗೆ ಸಿಗಬಹುದೇನೋ. ಹೀಗಿರುವಾಗ ನೆನ್ನೆ ನಾ ಕಂಡಿದ್ದು ಆಶ್ಚರ್ಯದ ಜೊತೆಗೆ ಸಾಹಿತ್ಯಕ್ಕಿರುವ ಶಕ್ತಿ ಎಂತಹದ್ದು ಎಂದು ತಿಳಿದುಕೊಂಡೆ. ಅಲ್ಲಿ ಬಂದಿದ್ದವರಲ್ಲಿ ಬಹುತೇಕರು ಯುವಜನರೇ ಆಗಿದ್ದರು. ಇನ್ನು ೫ ಗಂಟೆಗಳ ಕಾಲ ಪ್ರೇಕ್ಷಕರ ಆಸಕ್ತಿ ಉಳಿಸಿಕೊಳ್ಳುವಲ್ಲಿ ನಾಟಕ ಯಶಸ್ವಿ ಕಂಡಿತ್ತು.

ನಾಟಕ ನಮನ್ನು ರಾಮಾಯಣ ಕಾಲಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿತ್ತು. ಹಳೆಗನ್ನಡ ಭಾಷೆ ತೊಡಕಾಗದೆ ಸಾಹಿತ್ಯದ ಸೊಗಡನ್ನು ಆಪ್ತವಾಗಿ ಸ್ವೀಕರಿಸಲು ಅನುವುಮಾಡಿಕೊಟ್ಟಿತ್ತು. ನಾನು ಸಾಮಾನ್ಯವಾಗಿ ಕೇಳಿದ್ದ ರಾಮಾಯಣದಲ್ಲಿ ಎಷ್ಟೋ ಪಾತ್ರಗಳ ಪರಿಚಯವಿರಲಿಲ್ಲ. ಈ ನಾಟಕದ ವಿಶೇಷತೆಯದು ಎಲ್ಲರ ಪಾತ್ರವನ್ನು ಅಚ್ಚುಕಟ್ಟಾಗಿ ಪರಿಚಯಿಸಿದ್ದರು.

ಇನ್ನು ರಾವಣನಲ್ಲೂ ಹಾಸ್ಯ ಗುಣಗಳನ್ನು ಕಂಡಿದ್ದು ವಿಶೇಷವಾಗಿತ್ತು. ರಾಕ್ಷಸರು ಎಂದ ತಕ್ಷಣ ಕ್ರೂರಿಗಳೆಂದೇ ತಿಳಿದಿರುತ್ತಾರೆ ಅದಲ್ಲದೆ ನಮಗೂ ಮನುಷ್ಯತ್ವ, ಧರ್ಮ, ಸಂಸ್ಕೃತಿ ಇದೆ ಎಂದು ರಾವಣ ಹೇಳಿದಾಗ ಮನಸ್ಸು ಅವಲೋಕನೆಗೆ ದೂಡುತ್ತದೆ. ವಾಲೀ ಸುಗ್ರೀವರ ಆಟ ಕಿತ್ತಾಟಗಳು, ಶೂರ್ಪನಕಿಯ ನರ್ತನ ಇನ್ನು ಎಷ್ಟೋ ಪಾತ್ರಗಳು ತಮ್ಮ ತಮ್ಮ ನಿಲುವಿನಿಂದ ಕೊಟ್ಟ ಪಾಠಗಳು ಕಣ್ಣಿಗೆ ಕಟ್ಟುವಂತಿದೆ.

ಪ್ರತೀ ದೃಶ್ಯದ ರಂಗವಿನ್ಯಾಸ ಬಹಳಾ ವೈವಿಧ್ಯತೆ ಇಂದ ಕೂಡಿದ್ದು ಕಣ್ಣಿಗೆ ಹಬ್ಬವಾಗಿತ್ತು. ನನಗಂತೂ ಮತ್ತೊಂದು ದೃಶ್ಯ ಯಾವಾಗ ಬರುತ್ತೋ ಅಂತ ಕುತೂಹಲ, ಎಲ್ಲಾ ಸನ್ನಿವೇಶಗಳನ್ನು ಅಚ್ಚುಕಟಾಗಿ ಅರ್ಥಮಾಡಿಕೊಳ್ಳಲು ರಂಗವಿನ್ಯಾಸ ಮುಖ್ಯ ಪಾತ್ರ ವಹಿಸಿತ್ತು. ಹಾಡು ಮತ್ತು ಸಂಗೀತಕ್ಕೆ ಕೈಗಳು ತಾಳ ಹಾಕುತ್ತಾ, ಒಮೊಮ್ಮೆ ಬೆರಳುಗಳು ತಾನಾಗಿಯೇ ಚಿಟಿಕೆ ಹೊಡೆಯುತಿದ್ದವು. ಇನ್ನು ಬೆಳಕಿನ ಆಟ ಮಿಂಚಿನಂತೆ ಓಡಾಡುತಿತ್ತು. ಸಂಪೂರ್ಣ ಹಬ್ಬವೇ ಆಗಿತ್ತು ಅಂದುಕೊಂಡೆ. ಪ್ರತಿ ದೃಶ್ಯಕ್ಕೂ ಸಿಗಬೇಕಿದ್ದ ಅನುಭವಕ್ಕೆ ಕೊರತೆ ಇರಲಿಲ್ಲ.

Leave a Reply