ಪತ್ರದೊಳಗೊಂದು ಉತ್ತರ..


ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೆ ಒರೆಯನಿಟ್ಟು
ನಿಮ್ಮ ನೆನಪೇ ನನ್ನ ಕಾಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು

ಅಮ್ಮ ಪಾತ್ರೆಯನ್ನು ಬೆಳಗುತ್ತಾ ಈ ಹಾಡು ಹೇಳುತ್ತಿದ್ದರೆ ಕಣ್ಣೆದುರು ಒಂದು ತವರಿನ ಲೋಕ ನಮ್ಮೆದುರು ತೆರೆದುಕೊಳ್ಳುತ್ತಿತ್ತು.

ತಂಪಾದ ಚೆಂದದ ತವರು, ಮನೆಯ ಮುಂದೊಂದು ತುಳಸಿಯ ಬೃಂದಾವನ, ಅದರೆದುರು ಬೆಳಗುವ ಪುಟ್ಟ ಹಣತೆ, ಕೈಯಲ್ಲಿ ಬೆರಳು ಚೀಪುತ್ತ ಕುಳಿತ ಒಂದು ಪುಟಾಣಿ ಕೂಸು, ಮದುವೆಯ ಕನಸಲ್ಲಿ ಕೆನ್ನೆ ಕೆಂಪೇರಿಸಿಕೊಂಡ ತಂಗಿ, ಮದುವೆಯ ಜವಾಬ್ದಾರಿಯ ಒತ್ತಡದಲ್ಲಿ ಒಂದಿನಿತು ಸೊರಗಿದಂತೆ ಕಾಣುವ ಅಪ್ಪ, ಮಗಳನ್ನು ಮನೆಗೆ ಕಳಿಸುವ ಗಳಿಗೆ ಹತ್ತಿರವಾದುದಕ್ಕೆ ನಿಡುಸುಯ್ಯುತ್ತಿರುವ ಅಮ್ಮ……

ಹೀಗೆ ಒಂದು ಇಡಿಯಾದ ದೃಶ್ಯವನ್ನು ಈ ಕವಿತೆ ಕಣ್ಣೆದುರು ಕಡೆದು ನಿಲ್ಲಿಸುತ್ತಿತ್ತು.

ಆಗೆಲ್ಲ ಅಮ್ಮ ಈ ಪದ್ಯಗಳನ್ನೆಲ್ಲ ಬರೆದವರು ನಾಜಗಾರ ಗಂಗಾಧರ ಶಾಸ್ತ್ರಿಗಳು ಎಂದೇ ಹೇಳುತ್ತಿದ್ದಳು. ಅವರು ಪ್ರಕಟಿಸುತ್ತಿರುವ ಶೃಂಗಾರ ಮಾಸಪತ್ರಿಕೆಯಲ್ಲಿ ಈ ಹಾಡುಗಳೆಲ್ಲ ಪ್ರಕಟವಾಗುತ್ತಿದ್ದುದರಿಂದ ಇವೆಲ್ಲವನ್ನೂ ಅವರೇ ಬರೆದಿರುವರೆಂಬುದು ಅಮ್ಮನ ನಂಬಿಕೆಯಾಗಿತ್ತು.

ಮುಂದೆ ನಾನು ಪದವಿ ವ್ಯಾಸಂಗ ಮಾಡುವಾಗ ಕೆ. ಎಸ್. ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ನಮಗೆ ಪಠ್ಯವಾಗಿ ಒದಗಿದಾಗಲೇ ಇವೆಲ್ಲವೂ ಅವರ ರಚನೆಗಳೆಂದು ತಿಳಿದದ್ದು. ಸಂಸಾರದ ಪರಿಧಿಯೊಳಗೆ ನಿಂತು ಪತಿಗೆ ಬರೆದ ಪತ್ರದ ಪರಿಯಿದು. ಆದರೂ “ತಂದೆಯವರೇ ಬಂದು ತಪ್ಪಾಯಿತೆನ್ನುವರು, ಹೆಣ್ಣುಹೆತ್ತವರನ್ನು ದೂರಬೇಡಿ” ಎಂಬ ಸಾಲುಗಳು ಅದೇಕೋ ಇಷ್ಟವಾಗುತ್ತಿರಲಿಲ್ಲ. ಆದಾಗ್ಯೂ ಹೆಂಡತಿಯೊಬ್ಬಳು ತನ್ನ ಗಂಡನಿಗೆ ಪತ್ರ ಬರೆಯುವ ಪರಿಕಲ್ಪನೆಯೇ ಒಂದು ಬಗೆಯ ಬಿಡುಗಡೆಯೆಂದು ಅನಿಸುತ್ತಿತ್ತು. ನೇರವಾಗಿ ಹೇಳಲಾರದ್ದನ್ನು ಹೊತ್ತೊಯ್ಯುವ ಪತ್ರ ನಿಜಕ್ಕೂ ಬಿಡುಗಡೆಯ ದಾರಿಯೇ ಸರಿ.

ಇಲ್ಲೊಬ್ಬಳು ಹೆಂಡತಿ ಗಂಡನಿಗೆ ಪತ್ರ ಬರೆಯುತ್ತಿದ್ದಾಳೆ. ಮರಳಿ ತಾನು ಗಂಡನಲ್ಲಿಗೆ ಹೋಗಲಾರೆನೆಂದು ಅವಳು ಅದಾಗಲೇ ನಿರ್ಣಯಿಸಿಯಾಗಿದೆ. ತೀರ್ಥಯಾತ್ರೆಯ ನೆಪವೊಡ್ಡಿ, ಮನೆಯಿಂದ ಬಹುದೂರ ಬಂದ ಆ ಹೆಂಡತಿ ನದಿಯ ತಟದಲ್ಲಿ ಕುಳಿತು ಇನ್ನೆಂದಿಗೂ ತಾನು ನೋಡಬಯಸದ ಗಂಡನಿಗೆ ಪತ್ರವೊಂದನ್ನು ಬರೆಯುತ್ತಾಳೆ. ಅದು ಕೇವಲ ಪತ್ರವಲ್ಲ, ಅವಳ ಜೀವನದ ಪುನರಾವಲೋಕನವೂ ಹೌದು. ಅವಳು ಪಟ್ಟ ಯಾತನೆಗಳ ಸರಮಾಲೆಯನ್ನೇ ಅದರಲ್ಲವಳು ಬಿಚ್ಚಿಡುತ್ತಾಳೆ. ಯಾತನೆಗಳೆಂದರೆ ಅವು ತೀರ ಹಿಂಸಾತ್ಮಕವಾಗಿ ಇರಬಹುದೇನೋ ಎಂಬ ನಮ್ಮೆಲ್ಲ ಮಿಥ್‍ಗಳನ್ನು ಅವಳ ಪತ್ರದ ಸಾಲುಗಳು ಮುರಿಯುತ್ತಲೇ ಹೋಗುತ್ತವೆ. ಅವಳು ಹೇಳುತ್ತಾಳೆ, “ಖಂಡಿತಕ್ಕೂ ನೀವು ತುಂಬ ದಯಾಳುಗಳು. ಬಂಗಾಲದ ಎಲ್ಲ ಗಂಡಸರಂತೆ ಹೆಂಡತಿಯನ್ನು ಸುಡುವಷ್ಟು ಕ್ರೂರಿಗಳೇನೂ ಅಲ್ಲ. ಆದರೆ ದೈಹಿಕ ಹಿಂಸೆಯೊಂದೇ ಅಲ್ಲ, ಮೈಮನಸ್ಸುಗಳನ್ನು ಘಾಸಿಗೊಳಿಸುವುದು.”

ಅವಳು ಆ ಮನೆಯ ಎರಡನೆಯ ಸೊಸೆ. ಮೊದಲ ಸೊಸೆಯ ರೂಪ ಮತ್ತು ಶ್ರೀಮಂತಿಕೆಯ ಕೊರೆಯನ್ನು ನೀಗಿಸಿಕೊಳ್ಳಲೆಂದೇ ಇವಳನ್ನು ಸೊಸೆಯಾಗಿ ಆ ಮನೆಗೆ ಕರೆತಂದಿರುತ್ತಾರೆ. ಇಲ್ಲವಾದಲ್ಲಿ ಕೊಲ್ಕತ್ತಾದ ಪೇಟೆಯಿಂದ ಹೆಣ್ಣೊಬ್ಬಳನ್ನು ಅರಸಿಕೊಂಡು ರಸ್ತೆಯಿರದ ಅವಳ ಹಳ್ಳಿಗೆ ಕಾಲ್ನಡಿಗೆಯಲ್ಲಿ ಸಾಗಬೇಕಾದ ಅನಿವಾರ್ಯತೆಯೇನೂ ಅವರಿಗಿರಲಿಲ್ಲವೆಂಬುದು ಆ ಹೆಂಡತಿಗೆ ಗೊತ್ತು. ವಿಶೇಷವೆಂದರೆ ಅವಳ ಸೌಂದರ್ಯದ ಬಗ್ಗೆ ಅವಳಿಗಾಗಲೀ, ಅವಳ ಮನೆಯವರಿಗಾಗಲೀ, ಊರಿನವರಿಗಾಗಲೀ ಯಾವ ಹೆಮ್ಮೆಯೂ ಇಲ್ಲ.

ತೀರ ಸಣ್ಣವಳಿದ್ದಾಗಿನ ಒಂದು ಘಟನೆ ಇನ್ನೂ ಅವಳ ಕಣ್ಣಿಗೆ ಕಟ್ಟಿದಂತಿದೆ. ಅವಳ ತಮ್ಮನಿಗೂ, ಅವಳಿಗೂ ತೀರ ಖಾಯಿಲೆಯಾಗಿ ತಮ್ಮ ಸಾವನ್ನಪ್ಪುತ್ತಾನೆ, ಆದರೆ ಇವಳು ಬದುಕುಳಿಯುತ್ತಾಳೆ. ಆಗ ಎಲ್ಲರೂ ಹೇಳುತ್ತಾರೆ, “ಮೃಣಾಲ್ ಹೆಣ್ಣಾದ್ದರಿಂದ ಬದುಕುಳಿದಳು. ಸಾವಿಗೂ ಹೆಣ್ಣೆಂದರೆ ಹೇಸಿಗೆ!” ಆ ಮಾತು ಅವಳೆದೆಯೊಳಗೆ ಭದ್ರವಾಗಿದೆ. ಹೀಗೆ ಅತ್ತೆಯ ಮನೆಯವರ ಆಸೆಗೆ ಆಸರೆಯಾಗಿ ಗಂಡನ ಮನೆಗೆ ಬಂದಿದ್ದಾಳೆ ಮೃಣಾಲ್. ಗಂಡನಿಗೋ ಸದಾ ಅವನ ಕಛೇರಿಯ ಕೆಲಸಗಳದೇ ಚಿಂತೆ. ಹಳ್ಳಿಯಿಂದ ಬಂದ ಅವಳಿಗೆ ಮನೆಯಲ್ಲಿರುವ ಹಸುಗಳದೇ ಸಂಗಾತ. ಅವುಗಳ ಆರೈಕೆ ಮಾಡುತ್ತಾ, ಅವುಗಳೊಂದಿಗೇ ಮಾತನಾಡುತ್ತ ದಿನಕಳೆಯುತ್ತಾಳೆ.

ಅವಳಿಗೂ ಒಮ್ಮೆ ಒಳ್ಳೆಯ ಸಮಯ ಬರುತ್ತದೆ. ಇದ್ದಕ್ಕಿದ್ದಂತೆ ಎರಡನೆಯ ಸೊಸೆ ಎಂಬ ಪದವಿಯಿಂದ ಅಮ್ಮನೆಂಬ ಪೂಜನೀಯ ಸ್ಥಾನಕ್ಕೆ ಭಡ್ತಿಯಾಗುವ ಅವಕಾಶ ಒದಗುತ್ತದೆ. ಆದರೆ ವಿಧಿಯ ಆಲೋಚನೆಯೇ ಬೇರೆ. ಅವಳ ಮಗಳು ಸತ್ತು ಹುಟ್ಟುತ್ತಾಳೆ. ಇವಳೇನೂ ಸಾವಿಗೆ ಹೆದರುವವಳಲ್ಲ, ಆದರೆ ಸಾವು ಇವಳನ್ನು ಮುಟ್ಟುವುದಿಲ್ಲ. ಏಕೆಂದರೆ ಇವಳ ಸಾವು ಅಂತಹ ಘನತೆಯ ವಿಚಾರವೇನೂ ಆಗಿರುವುದಿಲ್ಲ. ಆದರೆ ಹೆರಿಗೆಗೆಂದು ಬಂದ ವೈದ್ಯರು ಮಾತ್ರ ಹೆರಿಗೆ ಕೋಣೆಯ ದುರವಸ್ಥೆಯ ಬಗ್ಗೆ ಮನೆಯವರೆಲ್ಲರನ್ನೂ ದೂರುತ್ತಾರೆ. ಆದರೆ ಇದರಿಂದ ಅವರ ಅಭಿಪ್ರಾಯವೇನೂ ಬದಲಾಗದು, ಏಕೆಂದರೆ ಹೆರಿಗೆಯಂತಹ ಮೈಲಿಗೆಯ ಕ್ರಿಯೆ ಅಂತಹ ಪರಿಸರದಲ್ಲಿ ತಾನೇ ನಡೆಯಬೇಕಾಗಿದ್ದು?

ಇಷ್ಟೇ ಕಥೆಯನ್ನವಳು ಪತ್ರದಲ್ಲಿ ಬರೆದಿದ್ದರೆ ಅದೊಂದು ಮಾಮೂಲಿಯಾದ ಬರವಣಿಗೆಯಾಗುತ್ತಿತ್ತೇನೊ. ಆದರೆ ಮೃಣಾಲ್ ತುಂಬ ಸೂಕ್ಷ್ಮ ಪ್ರವೃತ್ತಿಯವಳು. ಅವಳು ತನ್ನ ನೋವನ್ನು ಮಾತ್ರವೇ ತನ್ನದು ಅಂದುಕೊಂಡವಳಲ್ಲ. ಬೇರೆಯವರ ನೋವನ್ನು ತಾನು ಅನುಭವಿಸುವಷ್ಟು ಉದಾರ ಹೃದಯದವಳು. ಹಾಗಾಗಿಯೇ ಅನಾಥೆಯಾಗಿ ಅವರ ಮನೆಯನ್ನು ಸೇರುವ ಬಿಂದುವಿನ ಮೂಲಕ ಅವಳು ಅಲ್ಲಿರುವ ಪ್ರತಿಯೊಬ್ಬರ ಮೂಲಪ್ರವೃತ್ತಿಯನ್ನು ಅರಿಯಲು ಸಾಧ್ಯವಾಗುತ್ತದೆ .

ನಿಜವಾಗಿಯಾದರೆ ಬಿಂದು ಮೃಣಾಲ್‍ಗೆ ಸಂಬಂಧಿಸಿದವಳೇ ಅಲ್ಲ. ಅವಳ ಓರಗಿತ್ತಿಯ ಸ್ವಂತ ತಂಗಿ. ಆದರೆ ಒಬ್ಬ ಪರಿಪೂರ್ಣ ಸೊಸೆಯಾಗುವ ತುಡಿತದಲ್ಲಿರುವ ಆಕೆ ತನ್ನ ಸ್ವಂತ ತಂಗಿಯನ್ನೂ ಹತ್ತಿರ ಸೇರಿಸುವುದಿಲ್ಲ. ಉಳಿದವರೆಲ್ಲ ಅವಳನ್ನೊಂದು ಕಾಲಕಸದಂತೆ ನೋಡುತ್ತಿದ್ದರೂ ಅದು ಅವಳ ಹಣೆಯ ಬರಹವೆಂದು ಸುಮ್ಮನಿರುತ್ತಾಳೆ. ಮನೆಯ ಹೊರಗಿನ ಕೋಣೆಯಲ್ಲಿರುವ ಬಿಂದು ಅನಾರೋಗ್ಯದಿಂದ ಬಳಲುತ್ತಿದ್ದರೂ ಯಾರೂ ಅವಳನ್ನು ಲೆಕ್ಕಿಸುವುದಿಲ್ಲ.

ಮೃಣಾಲ್‍ನೊಳಗಿರುವ ತಾಯಿ ಎಚ್ಚರಗೊಳ್ಳುತ್ತಾಳೆ. ಅವಳು ಬಿಂದುವನ್ನು ತನ್ನ ಕೋಣೆಯೊಳಗೆ ತಂದು ಆರೈಕೆ ಮಾಡುತ್ತಾಳೆ. ಮನೆಯವರೆಲ್ಲರ ವಿರೋಧವನ್ನು ಲೆಕ್ಕಿಸದೇ ಅವಳನ್ನು ಅಪರಿಮಿತವಾಗಿ ಪ್ರೀತಿಸುತ್ತಾಳೆ. ಅವಳ ಎಲ್ಲ ಸೌಲಭ್ಯವನ್ನು ಕಸಿದುಕೊಂಡಾಗಲೂ ಅವಳ ಪ್ರೀತಿಯ ತೊರೆ ಮಾತ್ರ ಬತ್ತುವುದಿಲ್ಲ. ಬಿಂದುವಿಗೆ ಮೊದಲ ಬಾರಿಗೆ ತನ್ನನ್ನು ಪ್ರೀತಿಸುವ ಹೃದಯವೊಂದು ಇದೆಯೆಂಬ ಬೆಚ್ಚನೆಯ ಭಾವವೊಂದನ್ನು ಅವಳು ಮೂಡಿಸುತ್ತಾಳೆ. ಹೆಣ್ಣಿನ ಬಗೆಗೆ ಮನೆಯವರೆಲ್ಲರಿಗಿರುವ ಭಾವನೆಯೇನೆಂಬುದನ್ನವಳು ಬಿಂದುವಿನ ಮೂಲಕ ಅರಿಯುತ್ತಾಳೆ.

ಬಿಂದುವನ್ನು ಮನೆಯಿಂದ ಹೊರಹಾಕಲು ಮದುವೆಯೆಂಬ ಹೊಸ ಅಸ್ತ್ರವೊಂದನ್ನು ಮನೆಯವರು ಉಪಯೋಗಿಸುತ್ತಾರೆ. ಈಗ ಅವಳನ್ನು ಕಾಪಿಟ್ಟುಕೊಳ್ಳಲು ಮೃಣಾಲ್‍ಗೆ ಸಾಧ್ಯವಾಗುವುದಿಲ್ಲ. ಬಿಂದು ಮಾತ್ರ ಮದುವೆಯ ಬಗ್ಗೆ ಬಹಳ ಭಯಪಡುತ್ತಲೇ ಹಸೆಮಣೆಯೇರುತ್ತಾಳೆ. ಅವಳ ಭಯವು ಸತ್ಯವಾಗುವ ದಿನ ಸನ್ನಿಹಿತವಾಗುತ್ತದೆ. ಬಿಂದುವಿನ ಗಂಡನೊಬ್ಬ ಹುಚ್ಚನಾಗಿರುತ್ತಾನೆ ಮತ್ತು ಅವಳ ಅತ್ತೆ ಅವನೊಂದಿಗೆ ಮಲಗುವಂತೆ ಇವಳನ್ನು ಒತ್ತಾಯಿಸುತ್ತಾಳೆ. ಮದುವೆ ಮಾಡಿಸಿರುವುದೇ ಅವನ ಹುಚ್ಚು ಬಿಡಿಸಲೆಂದು.

ಬಿಂದು ಪುನಃ ಮೃಣಾಲ್ ಇರುವಲ್ಲಿಗೆ ಓಡಿ ಬರುವಳಾದರೂ ಅವಳನ್ನು ತನ್ನೊಂದಿಗೆ ಇಟ್ಟುಕೊಳ್ಳಲು ಮೃಣಾಲ್‍ಗೆ ಸಾಧ್ಯವಾಗುವುದಿಲ್ಲ. ತನ್ನ ತವರಿನಿಂದ ತಂದ ಒಡವೆಗಳನ್ನು ಗಿರವಿಯಿಟ್ಟಾದರೂ ಸರಿಯೆ, ಬಿಂದುವನ್ನು ಕಾಪಾಡುವೆನೆಂಬ ಅವಳ ಮಾತನ್ನು ಇಡಿಯ ಕುಟುಂಬ ಒಟ್ಟಾಗಿ ವಿರೋಧಿಸುತ್ತದೆ. ಈ ಗಲಾಟೆಯನ್ನು ನೋಡಿದ ಬಿಂದು ಏನಾದರಾಗಲಿ ಎಂದು ಪುನಃ ಗಂಡನ ಮನೆಗೆ ನಡೆದುಬಿಡುತ್ತಾಳೆ. ಅಲ್ಲಿಂದ ತನ್ನ ತವರಿಗೆ ಓಡಿಹೋದಾಗ ಅವರೂ ಅಲ್ಲಿಂದ ಕರುಣೆಯಿಲ್ಲದೇ ಓಡಿಸಿದರೆಂಬ ಸುದ್ದಿ ಮೃಣಾಲ್‍ಗೆ ತಿಳಿದು ಚಿಂತಿತಳಾಗುತ್ತಾಳೆ. ಶತಾಯಗತಾಯ ಅವಳನ್ನು ಉಳಿಸಲೇಬೇಕೆಂದು ತೀರ್ಥಯಾತ್ರೆಯ ನೆಪಮಾಡಿ ಗಂಡನ ಚಿಕ್ಕಮ್ಮನೊಂದಿಗೆ ಹೊರಡುತ್ತಾಳೆ.

ಹೊರಡುವ ಮುಂಜಾನೆಯೇ ರೇಲ್ವೇನಿಲ್ದಾಣಕ್ಕೆ ಬಿಂದುವನ್ನು ಕರೆತರುವಂತೆ ತನ್ನ ತಮ್ಮನಿಗೆ ಹೇಳಿರುತ್ತಾಳೆ. ಎಲ್ಲವೂ ಸುಖಾಂತವಾಗುವುದೆಂಬಲ್ಲಿಗೆ ಬಿಂದುವಿನ ಸಾವಿನ ಸುದ್ದಿ ಅವಳ ಕಿವಿಗೆ ಅಪ್ಪಳಿಸುತ್ತದೆ. ಅದೂ ಎಲ್ಲ ಬಂಗಾಳಿ ಸ್ತ್ರೀಯರು ಮಾಡುವಂತೆ ಅವಳು ಮೈಗೆ ಬೆಂಕಿ ಹಚ್ಚಿಕೊಂಡು ಸಾಯುತ್ತಾಳೆ ಮತ್ತು ಅವಳ ಮಾಮೂಲಿ ರೀತಿಯ ಸಾವಿನ ಬಗ್ಗೆ ಇಡಿಯ ಊರು ಬೇಸರಗೊಂಡಿರುತ್ತದೆ! ಸಾವಿನಲ್ಲಿ ನಾವೀನ್ಯತೆಯನ್ನು ಸಮಾಜ ಬಯಸುತ್ತಿದೆಯೇ ವಿನಃ ಅವಳ ಬದುಕಿನಲ್ಲಿ ನಾವೀನ್ಯತೆ ತರುವ ಯಾವ ಪ್ರಯತ್ನವೂ ನಡೆಯುವುದಿಲ್ಲ.

ಮೃಣಾಲ್ ತಲ್ಲಣಿಸಿ ಹೋಗಿದ್ದಾಳೆ. ಮತ್ತದೇ ಮನೆಗೆ ಅವಳು ಮರಳಲಾರಳು. ಹಾಗೆಂದು ತನ್ನನ್ನು ತಾನೇ ಮುಗಿಸಿಕೊಂಡು ಎಲ್ಲದಕ್ಕೂ ಮಂಗಲ ಹಾಡುವ ಅಂಜುಬುರುಕಿಯೂ ಅವಳಲ್ಲ. ಅವಳೆದುರು ಹರಿವ ನದಿ ಅವಳಿಗೆ ಬದುಕಿನ ಚಲನಶೀಲತೆಯ ಪಾಠ ಹೇಳುತ್ತಿರುತ್ತದೆ. ಸುತ್ತ ಹರಡಿರುವ ವಿಶಾಲ ಬಾನು ಬದುಕಿನ ಅಗಾಧತೆಯನ್ನು ತೆರೆದು ತೋರುತ್ತದೆ. ಹಾಗಾಗಿ ಅವಳು ನದಿಯ ದಡದಲ್ಲಿ ಕುಳಿತು ತನ್ನ ಪತಿಗೊಂದು ಪತ್ರವನ್ನು ಬರೆಯುತ್ತಾಳೆ ಮತ್ತು ಆ ಪತ್ರದಲ್ಲಿ ಇವುಗಳೆಲ್ಲವನ್ನೂ ವಿವರಿಸುತ್ತಾಳೆ.

ಗಂಡನೊಂದಿಗೆ ದಶಕಗಳ ಕಾಲ ಸಂಸಾರ ನಡೆಸಿದರೂ ಎದುರು ಬದುರಲ್ಲಿ ಕುಳಿತು ಮಾತನಾಡಿದ ನೆನಪಿಲ್ಲ ಅವಳಿಗೆ. ತನ್ನ ಕಾಗದದಲ್ಲಿ ಅವಳು ಹೇಳುತ್ತಾಳೆ, “ಅರ್ಥೇಚ. ಕಾಮೇಚ, ಧರ್ಮೇಚ…… ಮದುವೆಯಲ್ಲಿ ಮೊಳಗಿದ ಮಂತ್ರಗಳನ್ನು ಮರೆಯುವುದಾದರೂ ಹೇಗೆ? ಅಷ್ಟಕ್ಕೂ ಹೆಣ್ಣಾದವಳು ತನ್ನ ಗಂಡನನ್ನು ಕಟ್ಟಿಹಾಕಲು ಇದೊಂದೇ ಮಂತ್ರ ಸಾಕು. ಆದರೆ ಇವುಗಳೆಲ್ಲದರ ಅನ್ವಯ ಹೆಣ್ಣಿಗೆ ಮಾತ್ರವೆಂಬುದು ಅಲಿಖಿತ ನಿಯಮವಾಗಿರುವಾಗ ಅವಳು ತಾನೇ ಬಂಧಿಯಾಗುವುದು ಅನಿವಾರ್ಯವಲ್ಲವೇನು? ನಿಮ್ಮಲ್ಲಿ ಬಹುತೇಕ ಗಂಡಂದಿರಿಗೆ ತಾವು ಮದುವೆಯಲ್ಲಿ ಪಡೆದ ಭಾಗ್ಯದ ಅರಿವೇ ಇರುವುದಿಲ್ಲ. ಹೆಣ್ಣಿನ ಆಂತರ್ಯವನ್ನರಿಯದೇ ಅವಳನ್ನು ದಕ್ಕಿಸಿಕೊಂಡೀರಿ ಹೇಗೆ?” ಇದು ಇಂದಿಗೂ ಹೆಣ್ಣುಗಳು ಕೇಳುತ್ತಿರುವ ಪ್ರಶ್ನೆಯೇ ಆಗಿದೆ.

ಮೃಣಾಲ್ ಆ ಕಾಲದ ಬುದ್ದಿವಂತ ಹೆಣ್ಣು. ಅವಳ ಅಮ್ಮನಿಗೆ ಯಾವಾಗಲೂ ಮಗಳ ಬುದ್ದಿವಂತಿಕೆಯ ಬಗೆಗೇ ಚಿಂತೆ. ಅಮ್ಮನ ಪ್ರಕಾರ ಹೆಣ್ಣೆಂದರೆ ಹಾಕಲಾದ ನಿಯಮಗಳಿಗನುಸಾರವಾಗಿ ಬಾಳಬೇಕಾದ ಒಂದು ಸಾಮಾನ್ಯ ಜೀವಿ. ಹೆಂಗಸಿಗೆ ಜಾಣತನವೇ ಶಾಪ! ಈ ಜಾಣತನವೇ ಅವಳು ಜೀವನವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವಂತೆ ಮಾಡುತ್ತದೆ.

ಎಷ್ಟೋ ಸಲ ಹೀಗಾಗುತ್ತದೆ. ಎಂಥಹ ಭದ್ರವಾದ ಕಟ್ಟಡ ನಮ್ಮದು ಎಂಬ ಭ್ರಮೆಯಲ್ಲಿ ನಾವಿರುತ್ತೇವೆ. ಎಲ್ಲಿಂದಲೋ ಹಾರಿಬಂದ ಪುಟ್ಟ ಬೀಜವೊಂದಕ್ಕೆ ಆ ಕಟ್ಟಡದಲ್ಲಿರುವ ಸಣ್ಣ ಬಿರುಕು ಅದು ಹೇಗೆ ಕಾಣುವುದೊ ತಿಳಿಯದು. ಅಲ್ಲಿ ಕುಳಿತು ಮೆಲ್ಲನೆ ಕುಡಿಯೊಡೆದು ದಾಂಗುಡಿಯಿಟ್ಟಾಗಲೇ ಬಿರುಕಿನ ಅರಿವು ಮೂಡುವುದು. ಅಂಥದೊಂದು ಬೀಜವಾಗಿ ತೇಲಿಬಂದವಳು ಬಿಂದು. ಬಿಂದು ಅವಳ ಬದುಕೇ ಆಗಿಹೋಗಿದ್ದಳು. ಅವಳೊಂದಿಗೆ ತನ್ನ ಬದುಕನ್ನು ಜೋಡಿಸಿಕೊಳ್ಳಬೇಕೆಂಬ ತಹತಹಿಕೆಯಲ್ಲಿರುವಾಗಲೇ ಅವಳ ತಮ್ಮ ಅವಳಿಗೆ ಹೇಳಿದ್ದ,

“ಬಿಂದು ಕಳೆದ ರಾತ್ರಿ ತನ್ನ ಸೀರೆಗೆ ಬೆಂಕಿಯಿಟ್ಟುಕೊಂಡು ಸತ್ತಳು, ಸಾಯುವ ಮುನ್ನ ನಿನಗೊಂದು ಚೀಟಿ ಬರೆದಿಟ್ಟಿದ್ದಳಂತೆ ಮತ್ತು ಅದನ್ನು ಅವಳೊಂದಿಗೆ ಚಿತೆಗಿಟ್ಟರೆಂದು ಅವಳ ಮನೆಯ ಕೆಲಸಗಾರ ಹೇಳಿದ” (ಮೌನ)

“ಎಲ್ಲ ಅವಳ ನಾಟಕ” ಅವಳ ಮನೆಯವರು ಹೇಳಿದರು.


ಈ ಬಂಗಾಳಿ ಸ್ತ್ರೀಯರು ತಮ್ಮ ಸೀರೆಗೆ ಬೆಂಕಿಯಿಡುವ ನಾಟಕವನ್ನು ಮಾತ್ರ ಯಾಕೆ ಆಡುತ್ತಾರೋ ತಿಳಿಯದು. ಬಂಗಾಳದ ಪುರುಷಸಿಂಹಗಳ ದೋತಿಗಳಿಗೂ ಬೆಂಕಿಯಿಡುವ ದೃಶ್ಯಗಳನ್ನೇಕೆ ಸಂಯೋಜಿಸುವುದಿಲ್ಲ? ಇದು ಪರ್ಯಾಯೋಚಿಸಬೇಕಾದ ವಿಷಯ! ಅವಳದು ಅದೆಂತಹ ನೀರಸವಾದ ನಾಟಕ! ಸಾಯುವಾಗಲಾದರೂ ಬಂಗಾಲದ ಪುರುಷ ಪುಂಗವರು ಆನಂದಿಸಬೇಕಾದ ಒಂದು ಹೊಸಮಾರ್ಗವೂ ಆಕೆಗೆ ಗೋಚರಿಸಲಿಲ್ಲ! ಮನೆಯವರ ದೃಷ್ಟಿಯಲ್ಲಿ ಬಿಂದು ಅಮರಳಾದಳು. .
ಶತಶತಮಾನಗಳಿಂದ ಆತ್ಮಬಲಿ, ಆತ್ಮಾಹುತಿಗಳನ್ನು ಹಾಡಿಹೊಗಳಿದವರಲ್ಲವೇ ನಾವು? ಸೀತೆಯ ಅಗ್ನಿದಿವ್ಯಕ್ಕೆ ಅಯೋಧ್ಯೆಯ ಜನ ಆಗ್ರಹಪಡಿಸುತ್ತಾರೆ. ಈ ಅನಂತವಿಶ್ವ ಯಾವತ್ತೂ ಹಿಂದಿರುಗಿ ನೋಡಲಾರದು, ಆದರೆ ಮಾನವನ ಹೃದಯ ಹಿಂದಿರುಗಿ ನೋಡುತ್ತದೆ.

ಬಿಂದುವಿನ ಮರಣದ ಮುರಳಿಯ ಶೋಕರಾಗದ ಮುಂದೆ ಮಹಲುಗಳ ಇಟ್ಟಿಗೆ, ಗಾರೆ, ಸಿಮೆಂಟುಗಳ ಗೋಡೆಗಳೆಲ್ಲ ಪುಡಿಪುಡಿಯಾದವು. ಕಂದಾಚಾರಗಳ ಕಪ್ಪು ಹೊಗೆ ಬಿಂದುವನ್ನು ಆವರಿಸಿತ್ತು. ಬಿಂದು ಬಂದು ಆ ಹೊಗೆಯ ಪರದೆಯೊಳಗಿನ ರಂಧ್ರದಿಂದ ಮೃಣಾಲ್ ಳನ್ನು ನೋಡಿದಳು. ಅವಳು ಸತ್ತು ಆ ಧೂಮಪಟಲವನ್ನು ಹರಿದು ಚಿಂದಿ ಮಾಡಿದಳು. ಈಗ ಹೊರಗೆ ಬಂದಮೇಲೆ, ಬಯಲಾದ ಮೇಲೆ, ಮೃಣಾಲ್ ಗೆ ಅನಿಸುತ್ತದೆ ತನ್ನ ಭವ್ಯ ದಿವ್ಯಗಳಿಗೆ ಕೊನೆಯೇ ಇಲ್ಲ ಎಂದು. ಅವಳೀಗ ಆ ಪರಮ ದಿವ್ಯಾನುಭೂತಿಗೆ ಕೈ ಚಾಚಿ ನಿಂತವಳು. ವಿಶಾಲವಾದ ಭವ್ಯ ನೀಲ ನಭದ ಮೂಲಕ ಆ ಪರಮದಿವ್ಯ ಅವಳನ್ನೇ ಎವೆಯಿಕ್ಕದೇ ನೊಡುತ್ತಿದೆ. ಈಗ ಜಮೀನುದಾರರ ಮನೆಯ ಎರಡನೆಯ ಸೊಸೆ ನಿಜವಾಗಿ ನಾಮಾವಶೇಷವಾಗಿ ಹೋಗಿದ್ದಾಳೆ. ಅವಳೀಗ ಹೊಸಬೆಳಕನ್ನು ಹುಡುಕಿ ವಿಶಾಲ ಗಗನದಡಿಯಲ್ಲಿ ಗುರಿಯಿರದೇ ಹೊರಟಿದ್ದಾಳೆ.

ತಾಯಿ ನನ್ನ ಕೈಬಿಟ್ಟರೂ
ತಂದೆ ನನ್ನ ಕೈಬಿಟ್ಟರೂ
ಪ್ರಭೂ, ಮೀರಾಳ ಪಯಣ ನಿಲ್ಲದು.
ಅವಳಿಗೆ ಏನೆಲ್ಲ ಆಗಬೇಕೋ ಅವೆಲ್ಲ ಆಗಲಿ
ಏನೆಲ್ಲ ಬರಬೇಕೋ ಅವುಗಳೆಲ್ಲ ಬರಲಿ
ಮೀರಾ ಅಂಜುವುದಿಲ್ಲ
ಮೀರಾ ಅಳುಕುವುದಿಲ್ಲ
ಅವಳು ಸಹಿಷ್ಣು
ಮತ್ತವಳು ಹೆಣ್ಣು
ಮೀರಾಳ ಈ ಭಜನ್ ಅವಳ ದಾರಿಗೆ ಬೆಳಕಾಗಿದೆ.

ಈಗ್ಗೆ ಒಂದು ಶತಮಾನಗಳ ಹಿಂದೆ ಗುರುದೇವ ರವೀದ್ರನಾಥರು ಕಟ್ಟಿಕೊಟ್ಟ ಹೆಣ್ಣೊಬ್ಬಳ ಕಥೆಯಿದು. ಇಂದಿಗೂ ಪ್ರಸ್ತುತವೆನಿಸುವಷ್ಟು ತಾಜಾತನವನ್ನು ಉಳಿಸಿಕೊಂಡಿರುವುದೇ ಅದರ ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ನೋವು ತನ್ನದೇ ಆಗಬೇಕೆಂದೇನೂ ಇಲ್ಲ, ಬೇರೆಯವರ ನೋವಿನಿಂದಲೂ ಬದುಕಿನ ಮಜಲುಗಳನ್ನು ಅರಿಯುವ ಜೀವಪರ ನಿಲುವು ಸಾರ್ವಕಾಲಿಕವೂ ಹೌದು. ಎಲ್ಲದರ ಕೊನೆಯಲ್ಲೊಂದು ಬಿಡುಗಡೆಯ ಕಿಂಡಿಯನ್ನು ತೆರೆದಿಡುವ ಗುರುದೇವರ ಲೋಕದೃಷ್ಟಿ ಇಂದು ನಿಂತು ನೋಡುದಾಗಲೂ ಅಚ್ಛರಿ ಹುಟ್ಟಿಸುತ್ತದೆ. ಅನೇಕ ಬಿಂದುಗಳು ನಮ್ಮೆದುರು ಬಿಡಿಬಡಿಯಾಗಿ ಮೂಡಿ ಆತಂಕಗೊಳಿಸುತ್ತಿರುವಂತೆಯೇ ಅವರೆಲ್ಲರನ್ನು ಒಗ್ಗೂಡಿಸಿ ಚೆಂದದ ರಂಗವಲ್ಲಿಯನ್ನು ಅರಳಿಸುವ ಮೃಣಾಲ್ ಗಳು ಮುಂದೆನಿಂತು ನಮ್ಮನ್ನು ಸಂತೈಸುತ್ತಾರೆ. ಮೃಣಾಲ್‍ನ ಕರುಣೆಯ ತೊರೆ ಎಂದೆಂದಿಗೂ ಬತ್ತದಿರಲಿ, ಮತ್ತದು ಬಿಂದುವನ್ನು ಬದುಕಿಸಲಿ.

Leave a Reply