ಪರಮ ದಯಾಳುವಿನ ಪದತಳದಲ್ಲಿ…

ರೂಪ ಹಾಸನ

ಪರಮ ದಯಾಳುವಿನ
ಪದತಳದಲ್ಲಿ ನೆಲೆಸುವುದೆಂದರೆ…..

ಈ ಮಾನುಷ ಅಂಗಾಂಗಗಳೆಂಬ
ಯಾವ ವಾಹಕಗಳ ಹಂಗಿಲ್ಲದೇ
ಮನೋಕಾಮನೆಗಳೆಲ್ಲವೂ
ತನ್ನಷ್ಟಕ್ಕೇ ಈಡೇರಿಬಿಡುವ ಹಂತ
ಆಖೈರಿನ ಪರಮಸುಖ.

ಆಡುವ ಮೊದಲೇ ಅರಿವ
ಕರುಣಾಳು ಇಂಗಿತಜ್ಞತೆಯೆದುರು
ಮಾತುಗಳು ಅಗ್ನಿಕುಂಡಕ್ಕೆ ಆಹುತಿ
ನಾಲಿಗೆ ಜೀವಂತ ಸಮಾಧಿ.

ಬೇಡುವ ಮೊದಲೇ
ನೀಡುವ ಕಾರುಣ್ಯದ
ಅಭಯಹಸ್ತವಿರುವಾಗ
ಕೈಗಳಿಗೆಲ್ಲಿದೆ ಮುಗಿವ ಉಸಾಬರಿ?

ಕಂಡದ್ದು ಕಾಣದಿರುವುದೆಲ್ಲಾ
ಅಶರೀರ ದೃಷ್ಟಿಗೆ ಗೋಚರಿಸಿ
ಕಾಣ್ಕೆಗಳಾಗಿ
ಥಟ್ಟನೆ ಜಗದ ತುಂಬ
ಆವರಿಸಿ ಮುತ್ತುಗಳಾಗುವಾಗ
ಕಣ್ಣು ಮತ್ತದರ ನೋಟ ಯಾಕೆ ಬೇಕು?

ಮಾತಾಗಿ ಕುಡಿಯೊಡೆಯದ
ಸಂಚಾರಿ ಭಾವಗಳನೂ
ಎದೆಯಿಂದ ಎದೆಗೇ ತಲುಪಿಸುವ
ನಿಸ್ತಂತು ವಾಹಕದ ದಯೆಯಿರುವಾಗ
ಕಿವಿಗಳೂ ನಿಷ್ಕ್ರಿಯ!

ಪರಮ ದಯಾಳುವಿನ
ಪದತಳದಲ್ಲಿ ನೆಲೆಸುವುದೆಂದರೆ……
ನಿಯಮವೊಂದೇ,
ಸದಾ ಸನ್ನದ್ಧವಾಗಿರಬೇಕು
ನಿಶ್ಯಬ್ದದ ಸಂಕೇತಗಳೆಳೆ ಸ್ವೀಕರಿಸಲು.

ಕಡ್ಡಾಯವೆಂದರೆ…..
ಪದತಳದಲ್ಲಿಯೇ ಇರಬೇಕು!

1 comment

  1. ಪರಮ ದಯಾಳು ಕವನದಲ್ಲಿ ಲೌಕಿಕತೆಯನ್ನು ನಿರಾಕರಿಸಿ ಔನ್ನತ್ಯಕ್ಕೇರಬೇಕೆನ್ನುವ ತುಡಿತ ಚೆನ್ನಾಗಿ ಬಂದಿದೆ.

Leave a Reply