ಮನದ ನೋವಿಗೆ…

ಶ್ರೀದೇವಿ ಕೆರೆಮನೆ

ಸುಮ್ಮನೆ ಹಠ ಹಿಡಿಯುತ್ತದೆ
ಬೇಡ ಎಂದರೂ ಕೇಳದೆ
ಹುಚ್ಚು ಮನಸ್ಸು
ಅರ್ಥವೇ ಆಗುವುದಿಲ್ಲ ಅದಕೆ
ಸಧ್ಯದ ವಾಸ್ತವ
ಆತ ಹಿಂದಿನ ಗೆಳೆಯನಲ್ಲ
ಈಗಾತ ವ್ಯೋಮಕಾಯ
ಪ್ರೀತಿ ಪ್ರೇಮದ ಹಂಗಿಲ್ಲದ ನಿರಾಕಾರ
ಸಂತೈಸಿದಷ್ಟೂ ಬಯಸುವ ಮನಸಿಗೆ
ಮುದ್ದು ಮಾಡಿ ಹೇಳಿದಳು
ಕೇಳಲಿಲ್ಲ

ಬೈಯ್ದು ಛೀಮಾರಿ ಹಾಕಿದಳು
ಹಂಗಿಸಿದಳು ನಿಂದಿಸಿದಳು
ಯಾವುದಕ್ಕೂ ಬಗ್ಗದಿದ್ದಾಗ
ಸಟ್ಟುಗವೊಂದನ್ನು ಕೆಂಪಗೆ
ತೊಂಡೆ ಹಣ್ಣಿನಂತೆ ಕಾಯಿಸಿ
ಎಡಗೈಯ್ಯಿನ ಮುಂಗೈನ ನಾಡಿಯ
ಬಳಿ ಬರೆಯೆಳೆದಳು

ಹೆಚ್ಚಾವುದು?
ವಿರಹ ಕೊಡುವ ಮನದ ನೋವೇ?
ನೀರ್ಗುಳ್ಳೆಯಂತೆ ಉಬ್ಬಿ ನಿಂತ
ಸುಟ್ಟ ಸಟ್ಟುಗದ ಗಾಯವೇ ?
ಬಲಗೈಯಲ್ಲಿ ಎಡಗೈ ಹಿಡಿದು
ನೀರಾಡುವ ಕಣ್ಣಲ್ಲಿ
ಮತ್ತೆ ಮತ್ತೆ ಹಲುಬಿದಳು
ತುಟಿ ಕಚ್ಚಿ ಹಿಡಿದು
ನೋವ ತಡೆವಂತೆ ಮನಸು ಬಿಗಿದಳು
ನಿಡುಸುಯ್ದಳು, ನರಳಿದಳು
ಕಣ್ಣಂಚಲ್ಲಿ ಜಿನುಗಿದ ಮುತ್ತನ್ನು
ಅಲ್ಲಲ್ಲೆ ಇಂಗಿಸಿದಳು
ಮಾತಾಡದೇ ಮೈ ಮರೆತಳು

ಮನವ ದಂಡಿಸ ಬೇಕಲ್ಲದೇ
ತನುವ ದಂಡಿಸಿದರೇನು
ಹಂಗಿಸಿದನಂತೆ ಆ ಬೂದಿ ಬಡುಕ
ಕಮಲಪತ್ರದ ಮೇಲೆ ಬಿದ್ದ
ಮಂಜಿನ ಹನಿಯನ್ನು ಕೊಟ್ಟು ಕಳುಹಿದ
ಲೇಪಿಸಿಕೊಳ್ಳಲು ಸುಟ್ಟ ಗಾಯಕೆ
ತಂಪಾಗಲಿ ತನು ಎಂದು ಹಾರೈಸುತ್ತ
ಇಣುಕಿದ ಮರೆಯಲ್ಲೇ

ಲೇಪಿಸಿದಳು ಸಖಿ
ತನುವ ತಣಿಸುವ
ಕಮಲಪತ್ರದ ಮೇಲಿನ
ಮಂಜು ಹನಿಯನ್ನು ನವಿರಾಗಿ
ಹೂಂ ಎನ್ನಲಿಲ್ಲ
ಊಹೂಂ ಎಂದೂ ಉಸುರಲಿಲ್ಲ
ಮುಖದ ಭಾವ ಬದಲಾಗಲಿಲ್ಲ
ಇಹದ ಪರಿವೆಗೆ ಮರಳಲಿಲ್ಲ

ಬಿಟ್ಟಗಣ್ಣು ಬಿಟ್ಟುಕೊಂಡೇ
ಶಿಲೆಯಾದವಳ ಉಸಿರು
ಬಿಟ್ಟಗಣ್ಣಿಂದಲೇ ಶಿವನ ಆತ್ಮ ಸೇರಿತೇ
ಬೆದರಿದ ಸಖಿ ಕಂಗಾಲಾಗಿ
ನಿರಾಕಾರಿಯನು ಕೂಗಿದಳು
ಇವಳು ಕಲ್ಲಾಗಿದ್ದಾಳೆ
ಜೀವ ಶಿವನೆಡೆಗೆ ಪಯಣಿಸುತ್ತಿದೆ

ಅವನ ಹೆಸರು ಕೇಳಿದಾಕ್ಷಣವೇ
ಸಂಚಲನವಾಯಿತು ತನುವಲ್ಲಿ
ಬಂದನೇ ಅವನು?
ಎಲ್ಲಿದ್ದಾನೆ ನನ್ನವನು
ಧಿಗ್ಗನೆದ್ದವಳ ಕಣ್ಣಲ್ಲಿ ಕಂಡ
ಸಾವಿರ ನಕ್ಷತ್ರಗಳ ಕೋರೈಸುವ ಬೆಳಕು
ವಿರಹದ ತಪನೆಗೆ
ಎಲ್ಲವನ್ನೂ ತ್ಯಜಿಸಿ ಕದಳಿಗೆ ಹೊರಟವನೂ
ತತ್ತರಿಸಿಹೋದ ಪ್ರೇಮದ ಸುಡುಬೆಂಕಿಗೆ

ತನುವ ನೋವಿಗೆ ಮುಲಾಮು ಲೇಪಿಸಬಹುದು
ಬಯಸಿ ನೋಯುವ ಮನಕೆ
ಪ್ರೀತಿಯಲ್ಲದೇ ಬೇರೇನಿದೆ ಔಷಧ?

 

4 comments

  1. ಅರಸಿ ಅರಸಿ.‌….ಸುಂದರ ಹುಡುಕಾಟ,ಕಾಣದ ಕಡಲಿಗೆ ಹಂಬಲ..ಸಿಗುವನೋ ಸಿಗನೋ..ಪಯಣ ಮಾತ್ರ ಅನುಭವದ ಪಾಕ.ಪರಿತಪಿಸುವ ಮನಕ್ಕೊಂದು ಗುರಿ ಅವನು ಅಲ್ಲಮಾ…ಸಿಗದ ಗಂಡನ ಅಕ್ಕ ಅರಸಿದಂತೆ. ಆದರೆ ಭಾವತೀವ್ರತೆ , ಹಂಬಲ,ಪ್ರೇಮಾ,ಬಯಕೆ….ಆ ತೀವ್ರತೆಗೆ ಶರಣು.ಮನದ ಭಾವಕ್ಕೊಂದು ಹೊರದಾರಿ.ಅಭಿವ್ಯಕ್ತಗೊಂಡ ಭಾವಕ್ಕೆ ನಿರಾಳ.ಅಂತೂ ಹೊರದಾರಿ ಹುಡುಕಿಕೊಂಡ ಮನ…….ಹೀಗೆ ಏನೇನೋ ಅನ್ನಿಸುತ್ತಿದೆ ನಿಮ್ಮ ಅಲ್ಲಮ ಕವನ ಓದಿ..ಚಂದ ಇದೆ ಶ್ರೀ.

  2. ಬಲು ಚೆಂದದ ರಸಪೂರ್ಣ ಕವಿತೆ
    ಕಟ್ಟಿದ ರೀತಿ ಇನ್ನೂ ಅತ್ಯದ್ಭುತ ಶ್ರೀ
    ಅಭಿನಂದನೆಗಳು

Leave a Reply