ಬಾರುಕೋಲಿನ ಬೆನ್ನು..

ಕಿರಸೂರ ಗಿರಿಯಪ್ಪ

ಮುಳ್ಳ ಬೇಲಿಯ ನಡುವೆ
ಗಟ್ಟಿಸಿ ಮಣ್ಣು ತುಳಿವಾಗ
ಅವಳ ಎದೆಯಿಂದ ಸಿಡಿದ
ಬೀಜಗಳು
ಬಾರುಕೋಲಿನ ಬರಿಯಾಗಲೂ
ಹೂವಿನ ದನಿಯಾಗ್ಯಾವು

ಮಿಸುಗಾಡದ ಅಲೆಗಳ ದಕ್ಕಿಸಿಕೊಂಡು
ಗಾಣದೆತ್ತಿನ ತಿರುಗಾಟದ ಹಾಗೆ!
ಬೀದಿ ಬೀದಿ ಅಲೆದಾಳೊ
ಒಡಲ ಕಿಚ್ಚಿನ ಧಗೆ ತಣಿಸಲು


ಬಾರುಕೋಲಿನ ಗಾಯ ಹೊತ್ತ
ಬೆನ್ನ ಮೇಲಿನ ಬರೆಗಳು
ನಿಟ್ಟುಸಿರ ದೀಪ ಹಚ್ಚಿವೆ
ಕುದಿವ ಕಣ್ಣ ಕೊಳದೊಳಗೆ

ಮಕರಂಧದ ಸೋಗಿನಲಿ
ಮೈ ರಕ್ತ ಹೀರುವ ನಾಲಿಗೆಯೊಳಗೆ
ಸತ್ಯದ ನುಡಿ ಚಿತ್ರಿಸಿ
ಬೆಸೆದು ಬೇರಾಗುವ ನವಿಲು ಹೆಜ್ಜೆಗಳ ನಡಿಗೆ

ಬೆವರಿನ ತುದಿ ಕುಕ್ಕುವ
ಮಿಡಿ ನಾಗರದ ಕಣ್ಣೊಳಗೆ
ಬಾವುಗೊಂಡ ಹೆಗಲಾಗು
ಗಂಧ ಲೇಪಿಸುವ
ಅವಳ
ಉಡಿಯೊಳಗೆ ಆಲದ ಬೇರಿನ ಚಿತ್ತ

1 comment

Leave a Reply