ಅಡಿಗರೆಂದರೆ ಕಾವ್ಯವಷ್ಟೇ ಅಲ್ಲ, ಕನ್ನಡಿಯೂ ಹೌದು..

ಗೋಪಾಲಕೃಷ್ಣ ಅಡಿಗರನ್ನ ಬಣ್ಣಿಸುವುದಕ್ಕೆ ಇರುವುದೆರಡೇ ಉಪಮೆ ಎನ್ನುವಷ್ಟರ ಮಟ್ಟಿಗೆ “ಶತಮಾನದ ಕವಿ”, “ಒಂದು ಜನಾಂಗದ ಕಣ್ಣು ತೆರೆಸಿದ ಕವಿ” ಎನ್ನುವಂತ ಮಾತುಗಳನ್ನು ಸವಕಲು ಮಾಡಿಟ್ಟಿದ್ದೇವೆ. ಆದರೆ ಅಡಿಗರು ತೋರಿದ ಕಾವ್ಯ ಮಾರ್ಗದಲ್ಲಿ ನಿಧಾನವಾಗಿಯಾದರೂ ನಡೆದು ಅವರು ತೋರಿಸಲೆತ್ನಿಸಿದ  ಗುರಿಯನ್ನು ಕಂಡುಕೊಂಡವರಿಗಿಂತ ಅಡಿಗರನ್ನೇ ಹಿಮ್ಮೆಟ್ಟಿಸುವಂತೆ ಛಂದೋಬದ್ಧ ಲಯವನ್ನು ದಿಕ್ಕರಿಸಿದಂತೆ ಬರೆದವರೆ ಹೆಚ್ಚಾಗಿ ಕಾಣಿಸುತ್ತಾರೆ.

ಅಡಿಗರ ಕಾವ್ಯದ ಮೂಲಸೆಲೆಯ ಅಂತಃಸ್ರಾವವನ್ನು ಕಾಣಬೇಕಾದವರು ವಿಮರ್ಶೆ ಹೆಸರಿನಲ್ಲಿ ಕೆಲವೊಮ್ಮೆ ನೈಜವಿಮರ್ಶೆಯನ್ನು ಅವರ ಕಾವ್ಯದ ಲಯ ಎಟುಕದೇ ಹೋದಾಗ ಅದೇ ಹೆಸರಿನಲ್ಲಿ ಟೀಕೆಯನ್ನೂ ಮಾಡಿದ್ದಾರೆ. ಆಗೆಲ್ಲವೂ ಅಡಿಗರು ಕೇವಲ ಕಾವ್ಯದ ಮೂಲಕವಷ್ಟೇ ಉತ್ತರಿಸಿದ್ದಾರೆ.

ನನ್ನ ವಿಗ್ರಹ ಮುಕ್ಕುಮಾಡಿ ತದನಂತರವೆ
ಬೀದಿಗಿಳಿದವನೆ, ಕೊಂದವನೆ, ಕೊಂದು ಬದುಕಿಸಿದವನೆ,
ಜನ್ಮ ಶನಿಯೇ, ಜಿಗಣೆಗೆಣೆಯ, ಗುರುವೇ.
(ಪದ್ಯ:ವಿಮರ್ಶಕ)

ಎನ್ನುವಲ್ಲಿಗೆ ವಿಮರ್ಶಕನಿಗೂ ಕಾವ್ಯ ಸೃಷ್ಟಿಸಿದವನ  ಅಂತರಾಳವನ್ನ ಅರಿಯಲು ಬೇಕಾದ ಒಂದು ಚಿಕಿತ್ಸಕ ನೋಟ ಕೊಟ್ಟವರು.

ನವ್ಯ ಮತ್ತು ನವ್ಯೋತ್ತರ ಸಾಹಿತಿಗಳು ಮತ್ತು ಸಾಹಿತ್ಯದ ಮೇಲೆ ಅಪಾರ ಪ್ರಭಾವ ಬೀರಿದ ಅಡಿಗರು ಈ ತಲೆಮಾರಿನ ಕವಿಗಳಿಗೆ ಒಂದು ಓದಿಗೆ ನಿಲುಕಿಬಿಡುತ್ತಾರೆ ಎನ್ನುವ ಭ್ರಮಾತ್ಮಕ ಆಂಟಿಕ್ ಪೀಸ್ ನಂತೆ ಗೋಚರಿಸಿಬಿಟ್ಟರೆ ಕವಿಯ ಮನಸಿಗೆ ಆತ್ಮವಂಚನೆ ಎನ್ನುವ ಭಯವಾಗುತ್ತದೆ.

ವಿಮರ್ಶಕನೂ ಕೂಡ ನಾಚುವಂತೆ ಕಾವ್ಯವನ್ನು ಸೃಷ್ಠಿಸಿದ ಅಡಿಗರಿಗೆ ತಾನು ಕಟ್ಟುತಿರುವ ಕಾವ್ಯ ಯಾವ ದಿಸೆಯಲ್ಲಿ ಸಾಗುತ್ತಿದೆ ಎನ್ನುವ ಚಿತ್ರಣವೂ ಸ್ಪಷ್ಟವಾಗಿತ್ತು. ಇದೇ ಹಿನ್ನಲೆಯಲ್ಲಿ ಇನ್ನು ಒಂದೇ ಬಗೆಯ ಕಾವ್ಯವನ್ನು ನಾನು ರಚಿಸಲಾರೆ ಎನ್ನುವುದನ್ನೂ ಸಾಂಕೇತಿಕವಾಗಿ “ಕೂಪಮಂಡೂಕ” ದಂತ ಕಾವ್ಯದ ಮೂಲಕ ಕಾವ್ಯಲೋಕಕ್ಕೆ ಸಾರಿದ್ದು.

 

ಅಡಿಗರ ಪ್ರಖ್ಯಾತ “ಭೂಮಿಗೀತ” ಕವನ ಸಂಕಲನಕ್ಕೆ ಯು.ಆರ್ ಅನಂತಮೂರ್ತಿ ಮುನ್ನುಡಿಯನ್ನು ಬರೆದಿದ್ದು ಕಾಲೇಜು ದಿನಗಳಲ್ಲಿ. ಮುನ್ನುಡಿಯನ್ನು ಬರೆದು ಎಷ್ಟೋ ವರ್ಷಗಳ ನಂತರ ಅನಂತಮೂರ್ತಿಯವರಿಗೆ ತೀರ್ಥಹಳ್ಳಿಯ ಹೊಟೇಲ್ ವೊಂದರಲ್ಲಿ ಸ್ನಾನ ಮಾಡುವಾಗ ಇದ್ದಕ್ಕಿದ್ದಂತೆ ನಾನು ಆವತ್ತು “ಭೂಮಿಗೀತ” ಕವನಸಂಕಲನವನ್ನ ವಿಮರ್ಶಿಸಿದರಲ್ಲಿ ಲೋಪವಿದೆ ಎನಿಸಿತಂತೆ. (ಅನಂತಮೂರ್ತಿಯವರ ಆತ್ಮಕತೆ ಸುರಗಿಯಲ್ಲಿ ಈ ಬಗ್ಗೆ ವಿವರವಾಗಿ ದಾಖಲಾಗಿದೆ)
ಈ ಸಂದರ್ಭವನ್ನು ನೆನೆದಾಗೆಲ್ಲಾ ತಂದುಕೊಂಡಾಗೆಲ್ಲಾ ಅಡಿಗರ ಕಾವ್ಯದ ವೇಗ ಮತ್ತು ವಿಸ್ತಾರ ಕಣ್ಣೇದುರು ಸುಳಿದಂತೆ ಭಾಸವಾಗುತ್ತದೆ.

ಇದರಂತೆ ಲಂಕೇಶರು ಸಂಪಾದಿಸಿದ ೨೦ನೇ ಶತಮಾನದ ಕವಿಗಳ ಪ್ರಮುಖ ಕವಿತೆಗಳ ಸಂಗ್ರಹ ಅಕ್ಷಯಕಾವ್ಯ ಸಂಗ್ರಹದಲ್ಲಿ ಅಡಿಗರ “ಹಿಮಗಿರಿಯ ಕಂದರ” ಪದ್ಯದ ಮೊದಲ ಕೆಲವು ಭಾಗಗಳನ್ನು ಬಿಟ್ಟು ಉಳಿದರ್ಧವನ್ನು ಮಾತ್ರ ಮುದ್ರಿಸಿದ್ದಾರೆ. ಹೀಗೆ ಮಾಡಿದಕ್ಕೆ ಪ್ರತಿಯಾಗಿ ಅಡಿಗರ ಈ ಪದ್ಯ ಮೊದಲಾರ್ಧದಲ್ಲಿ ಕೇವಲ ಬೀಷಣ ಪ್ರತಿಮೆಗಳು ವಾಚ್ಯಾರ್ಥದಿಂದ ತುಂಬಿದೆ ಹೀಗಾಗಿ ಅದನ್ನು ಕೈ ಬಿಟ್ಟು ಮುಖ್ಯ ಕಾವ್ಯಭಾಗವನ್ನಷ್ಟೇ ತೆಗೆದುಕೊಂಡಿದ್ದೇನೆ ಎಂದು ಬರೆದಿದ್ದಾರೆ. ಲಂಕೇಶರ ಈ ಮಾತು ಸಮರ್ಥನೆಯೋ ಅಥವಾ ಉತ್ತರವೋ ಎನ್ನುವುದು ನಂತರದ ಪ್ರಶ್ನೆ. ಆದರೆ ಇಲ್ಲಿ ನಾವು ಕನ್ನಡದ ಇಬ್ಬರು ಮುಖ್ಯ ಲೇಖಕರು ಅಡಿಗರ ಒಂದೇ ಬಗೆಯ ಕಾವ್ಯವನ್ನ ನೋಡುತ್ತಿದ್ದ ರೀತಿಯನ್ನು ಅವಲೋಕಿಸಿದರೆ ಸಾಕು ಎನಿಸುತ್ತದೆ.

ನವೋದಯ ಕಾವ್ಯಮಾರ್ಗದಿಂದ ತಪ್ಪಿಸಿಕೊಂಡು ಹೊಸ ಕಾವ್ಯಹಾದಿಯಲ್ಲಿ ನಡೆಯಲು ಆರಂಭಿಸಿದ ದಿನಗಳಲ್ಲೇ ಬರೆದ ಪದ್ಯಗಳಾದ “ಚಂಡೆಮದ್ದಳೆ”, ಗೊಂದಲಪುರ, ಭೂಮಿಗೀತ, ಹದ್ದು, ರೀತಿಯ ಪದ್ಯಗಳು ತಮ್ಮೊಳಗಿನ ದಿಟ ಅಭಿವ್ಯಕ್ತಿಗೆ ಉತ್ತರವಾಗಿ ಹೊರಜಾರಿದ ಕಾವ್ಯದ ತುಣುಕುಗಳಾಗಿವೆ.

ಇದರಂತೆ ಗೋಪಾಲಕೃಷ್ಣ ಅಡಿಗರ ಮೊದಲನೇ ಕಾವ್ಯ ಸಂಗ್ರಹವಾದ ” ಭಾವತರಂಗ”ದಲ್ಲಿ ಕೇವಲ ಎಳೆತನದ ಪ್ರೀತಿ, ದಿಕ್ಕೆಟ್ಟು ನಿಂತಿರು ಮನಷ್ಯರ ನಡುವಿನ ಸಂಬಂಧಗಳು, ನಿರ್ಲಿಪ್ತ ಬಯಕೆ, ದೂರಲ್ಲಿ ತನಗೆ ಏನು ಬೇಕು ಎನ್ನುವುದನ್ನು ನಿಂತು ನೋಡುವ ಬೇಡುವಂತ ಕಾವ್ಯಗಳಿವೆ. ನಂತರದಲ್ಲಿನ “ಕಟ್ಟುವೆವು ನಾವು” ಕವನ ಸಂಕಲನದಲ್ಲಿ ತನ್ನನ್ನು ಅರಿಯಲು ಹೆಣಗಾಡಿದಂತೆ ಹೊರಜಗತ್ತಿನ ನಡೆಯ‌ ಕಡೆಗೂ ಕಣ್ಣು ಹಾಯಿಸಿದ್ದು ಸ್ಪಷ್ಟವಾಗಿ ಕಾಣುತ್ತದೆ.

ಇಲ್ಲಿಯವರೆಗೆ ಸಹಜ ಎನ್ನುವಂತೆ ಸಲೀಸಾಗಿ ಓದುಗರ ಒಳಗೆ ಇಳಿದುಬಿಡುತ್ತಿದ್ದ ಅಡಿಗರ ಕಾವ್ಯಗಳು ಆ ನಂತರದಲ್ಲಿ ಆರಿಸಿಕೊಂಡ ಅಬ್ಬರದ ಅಥವಾ ಬೀಷಣ ಪ್ರತಿಮೆಗಳಿಂದ ಕೂಡಿದ ಪದ್ಯಗಳು ಓದುಗರ ಸೇರಿದ್ದಕ್ಕಿಂತ ವಿಮರ್ಶಕರ ಮೇಜು ತಲುಪಿದ್ದೆ ಹೆಚ್ಚು ಎನಿಸುತ್ತದೆ.

ಹೀಗೆ ಯೋಚಿಸುವಾಗೆಲ್ಲಾ ಅಡಿಗರು ಬಳಸಿದ ಅಬ್ಬರದ ಪ್ರತಿಮೆಗಳೂ ಕೂಡ ನಮ್ಮ ದಿನನಿತ್ಯದ ಬದುಕಿನಿಂದಲೇ ಸೀದಾ ಎಳೆದುತಂದು ತಮ್ಮ ಕಾವ್ಯಶಾಲೆಗೆ ಸೇರಿಸಿಕೊಂಡಿದ್ದಲ್ಲವೇ! ಹೀಗಿದ್ದೂ ಇದನ್ನು ಮತ್ತೊಂದು ಬಗೆಯಿಂದ ನೋಡುವ ಅಗತ್ಯವೇನಿತ್ತು? ಪ್ರತಿಮೆಗಳಲಾಗಲಿ, ಉಪಮೆಗಳಲಾಗಲಿ ಕೇವಲ ಕಾವ್ಯದ ಅಗತ್ಯ ಸರಕಷ್ಟೇ ಅಲ್ಲವೇ ಎಂದೂ ಅನಿಸುತ್ತದೆ.

 

ನರ್ಸುಗಳು ಡಾಕ್ಟರರು ಹೆರಿಗೆಮನೆಯೊಳಹೊರಗೆ
ಅವರ ಬೆನ್ನಿಗೆ ಸದಾ ನಾಲ್ಕು ಮಂದಿ
ತೊಟ್ಟಿಲಗಂಡಿಯಲ್ಲಿ ಬೊಂಬು ತುಂಬಾ ಅಗ್ಗ
ಜಾತಕರ್ಮದಿ ನಿರತ ಈ ಪುರೋಹಿತಭಟ್ಟ ಅಪರಪ್ರಯೋಗದಲಿ ಪಾರಂಗತ.
ಮರಿಮರಿಯ ಹೊರಹೊರೆಗಳಾಡಿದವು ಮಣ್ಣಿನಲಿ
ಹೊಟ್ಡೆ ಹೊಸೆದುವು ಜಾರುತೊಗಟೆಯಲ್ಲಿ
ರೆಕ್ಕೆ ಬಡಿದುವು ಶೂನ್ಯ ಬೀದಿಯಲಿ ಚಪ್ಪಾಳೆಯಿಕ್ಕಿ ಕುಣಿದುವು ಮೋರಿ ಮೋರಿಯಲಿ
ಮಧ್ಯಾಹ್ನದುರಿಬಿಸಿಲು ಹೆತ್ತ ಹೆಣಬಣಬೆಗೂ ಪಾಚಿಗಟ್ಟಿದ ಜಿಗಣೆ ಜೀವ ಹಲವು
(ಪದ್ಯ: ಭೂಮಿಗೀತ)

ಒಂದೇ ಸೇತುವೆಯ ನಡುವೆ ನಿಂತು ಎರಡು ವಿರುದ್ದ ದಿಕ್ಕಿಗಿರುವ ಹುಟ್ಟು ಸಾವಿನ ಕುರಿತು ಕವಿ ತೋರುತ್ತಿರುಚ ದೃಶ್ಯ ನಮ್ಮೊಳಗುಳಿಯುವುದು ಬರೀ ಕಾವ್ಯವನ್ನಷ್ಟೇ ಒಳಗಿಳಿಸಿಕೊಳ್ಳುವ ಮುಗ್ದತೆಯನ್ನ ತೋರಿದಾಗ ಮಾತ್ರ. ಹಾಗೆ ನೋಡಿದಾಗ ಮಾತ್ರವೇ ಅಬ್ಬರದ ಪ್ರತಿಮೆಗಳೂ ಕೂಡ “ಪ್ರಟಿ” ಎನಿಸಲು ಸಾಧ್ಯ ಎನ್ನುವುದು ನನ್ನ ನಂಬಿಕೆ.

ಹೀಗೆ ಹತ್ತು ಹಲವು ಆಯಾಮಗಳಲ್ಲಿ ಅಡಿಗರ ಕಾವ್ಯಗಳನ್ನು ನೋಡುತ್ತಿರುವಾಗಲೇ ಈ ತಲೆಮಾರಿನ ಕವಿಗಳ ಬಗ್ಗೆ ಆತಂಕವಾಗುತ್ತದೆ. ಸದ್ಯ ನಮ್ಮೆಲ್ಲರ ಕೈಯಲ್ಲಿರು ಅನಂತ ಸಾಧ್ಯತೆಯ ಧಾತು ಮೊಬೈಲ್ ನಮ್ಮ ಕಾವ್ಯ ಪ್ರಚಾರಕ್ಕೂ ಸಹಕಾರಿಯಾಗಿದೆ. ಕಾವ್ಯಗಳನ್ನು ಬರೆದು ಫೇಸ್ ಬುಕ್ ನಲ್ಲಿ ಒಂದೇ ನಿಮಿಷದೊಳಗೆ ಅಪ್ಲೋಡ್ ಮಾಡಿಬಿಡುತ್ತೇವೆ. ಕಾವ್ಯ ಸೃಷ್ಠಿಗೆ ತೆಗೆದುಕೊಂಡ ಅವಧಿಗಿಂತ ಅರ್ಧದಷ್ಟು ಸಮಯಕ್ಕಿಂತ ಕೇವಲ ಒಂದು ಸಾಲಿ‌ನಲ್ಲೋ ಅಥವಾ ಎರಡೇ ಪದಗಳಲ್ಲೋ ವಿಮರ್ಶೆ ವೇಷಧಾರಿಯಂತ ಮಾತುಗಳು ಮೆಚ್ಚುಗೆಯ ರೂಪದಲ್ಲೂ ಕುಹಕದ ರೂಪದಲ್ಲೂ ಎದುರಾಗುತ್ತವೆ. ಹಾಗಾದರೆ ನಮ್ಮ ಇವತ್ತಿನ ಕವಿಗಳು (ಎಲ್ಲರೂ ಒಳಗೊಂಡಂತೆ) ನಮ್ಮಗಳ ಕಾವ್ಯಸೃಷ್ಠಿಯ ಅಂತ ಸತ್ವ ಎಷ್ಟು ಗಾಢವಾದದ್ದು ಎನ್ನುವುದನ್ನು ಕಂಡುಕೊಳ್ಳಬೇಕಾಗಿದೆ.

ಇದೆಲ್ಲದರ ನಡುವೆ ಗೋಪಾಲಕೃಷ್ಣ ಅಡಿಗರು ತಮ್ಮ ಕಡೆ ದಿನಗಳಲ್ಲಿ ಹೊರ ತಂದ ” ಬಾ ಇತ್ತ ಇತ್ತ” ಕಾವ್ಯಸಂಗ್ರಹದಲ್ಲಿ “ಪಕ್ಷ” ಹೆಸರಿನ ಕಾವ್ಯವೊಂದನ್ನ ರಚಿಸಿದ್ದಾರೆ. ಈ ಪದ್ಯ ನನಗೆ ಕಾಡುವುದು ಅದರ ವಸ್ತು ವಿನ್ಯಾಸದಿಂದಲ್ಲ ಅಥವಾ ಹಿತ ಎನಿಸುವ ಪದಗಳಿಂದಲೂ ಅಲ್ಲ. ಅದನ್ನ ರಚಿಸಲು ಅಡಿಗರು ತೆಗೆದುಕೊಂಡ ಅವಧಿ ೧೯೮೧ರಿಂದ ೧೯೯೨. ಕಾವ್ಯರಚನೆಯೇ ಮೂಲ‌ ಕಸುಬು ಎನ್ನುವಷ್ಟರ ಮಟ್ಟಿಗೆ ಕಾವ್ಯಗಳನ್ನು ನಂಬಿದ್ದ ಕವಿಯೊಬ್ಬ ಅಷ್ಟೂ ದೀರ್ಘಕಾಲ ಒಂದೇ ಪದ್ಯವನ್ನು ಧ್ಯಾನಿಸುತ್ತ ಕರಗಿಹೋಗುವುದು ನನ್ನನ್ನು ಹೆಚ್ಚು ಕಾಡಿಸುತ್ತದೆ ಬೆರಗುಗೊಳಿಸುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ ಇವತ್ಗಿನ ಕವಿಗಳಿಗೆ ಅಡಿಗರು ಬರೀ ಕಾವ್ಯವಷ್ಟೇ ಅಲ್ಲ, ಕನ್ನಡಿಯೂ ಹೌದು.

 

4 comments

  1. ಹೌದು ಗೆಳೆಯ ಕಾವ್ಯವಷ್ಟೆ ಅಲ್ಲ, ಕನ್ನಡಿಯೂ ಹೌದು.

  2. “ವಿಮರ್ಶಕನೂ ಕೂಡ ನಾಚುವಂತೆ ಕಾವ್ಯವನ್ನು ಸೃಷ್ಠಿಸಿದ ಅಡಿಗರಿಗೆ” ? …. hmmm

  3. ಅಡಿಗರ ಬಗೆಗಿನ ವಿಮರ್ಶೆಗ ಮತ್ತು ಅಡಿಗರ ಕಾವ್ಯಗಳನ್ನು ಓದಿದಾಗ, ದೊಡ್ಡ ಕಂದರ ಇರುವಂತೆ ಯಾವಾಗಲೂ ಕಾಣಿಸುತ್ತದೆ ನನಗೆ. ಬಹುಶಃ ಅದೇ ಆಲೋಚನೆಯ ಫಲಿತಾಂಶದ ಬರಹ ಇದುವೆ ಎಂದುಕೊಂಡಿದ್ದೇನೆ.

Leave a Reply