ಸೂತ್ರಧಾರಿ ಈಗ ನೇರವಾಗಿ ಅಖಾಡಕ್ಕಿಳಿದಿದ್ದಾನೆ…

“ಬಿಜೆಪಿ ಅಧಿಕಾರದ ಜೂಜಾಟದಲ್ಲಿದೆ” ಡಿ.26 1997 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದ ಮಾತು ನೆನಪಾಯಿತು. ಐದು ವರ್ಷ ದೇಶ ಆಳಿದ ಬಿಜೆಪಿ ಈಗ ಮತ್ತೆ ಅದೇ ಜೂಜಾಟವನ್ನು ಹೂಡಿದೆ.

ರಾಮಮಂದಿರದ ಹೆಸರಲ್ಲಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳ ಕಾಲ ರಾಮನನ್ನು ಮರೆತು ಮೆರೆದ ಬಿಜೆಪಿ ಈಗ ಅದೇ ರಾಮನನ್ನು ಆಟಕ್ಕೆ ಹೂಡಿ ಮತ ಬೇಟೆಗೆ ಹೊರಟಿದೆ. ಈಗ ಅದೆಂಥ ಅಪಾಯಕಾರಿ ಆಟ ಹೂಡಿದೆಯೆಂದರೆ ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವಂತೆ ತನ್ನ ಪೋಷಕ ಸಂಸ್ಥೆಗಳ ಮೂಲಕ ಒತ್ತಡ ಹಾಕಿಸಿಕೊಳ್ಳುವ ಮೂಲಕ ಸಂವಿಧಾನದ ಅಡಿಗಲ್ಲು ಕೀಳುವ, ನ್ಯಾಯ ವ್ಯವಸ್ಥೆಯ ಪೀಠವನ್ನೇ ಕಾಲಕೆಳಗೆಳೆದುಕೊಂಡು ಹೊಸಕಿ ಹಾಕುವ ಆಟವಿದು. ಸೂತ್ರಧಾರಿ ಈಗ ನೇರವಾಗಿ ಅಖಾಡಕ್ಕಿಳಿದಿದ್ದಾನೆ.

ರಾಮಮಂದಿರ ವಿವಾದ ಸುಪ್ರೀಂಕೋರ್ಟ್‍ನ ಮುಂದೆ ಇದೆ. ಅದರ ತೀರ್ಪಿನವರೆಗೂ ಕಾಯಲಾಗುವುದಿಲ್ಲ ಎನ್ನುತ್ತಿರುವ ಹಿಂದುತ್ವದ ಶಕ್ತಿಗಳು ಸುಪ್ರೀಂ ಕೋರ್ಟ್ ಹಿಂದೂಗಳ ಭಾವನೆಗಳು ಅರ್ಥಮಾಡಿಕೊಳ್ಳಬೇಕು ಎಂದು ತಾಕೀತು ಮಾಡುವ ದುಷ್ಟ ದಾಷ್ಟ್ಯ ತೋರುತ್ತಿರುವುದು ಕಳವಳಕಾರಿ ಸಂಗತಿ.

ಅಷ್ಟಕ್ಕೂ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಗೆ ಆಗ್ರಹಿಸುತ್ತಿರುವ ಜನರು ಯಾರು? ಇದು ಇಡೀ ದೇಶದ ಜನರ ಒಕ್ಕೊರಲಿನ ಅಭಿಪ್ರಾಯವೇ? ಕೆಲವೇ ಜನರ ಭಾವನೆ ದೇಶದ 130 ಕೋಟಿ ಜನರ ಭಾವನೆ ಹೇಗಾಗುತ್ತದೆ.? ಕೆಲವೇ ಜನರ ಭಾವನೆಯನ್ನೇ ಅಬ್ಬರದ ಸದ್ದಿನಲ್ಲಿ ಇಡೀ ದೇಶದ ಜನರ ಭಾವನೆ ಎಂಬಂತೆ ಬಿಂಬಿಸುವ ಕೆಲಸ ನಡೆದಿದೆ. ಈ ದೇಶದ ಸಂವಿಧಾನ, ನ್ಯಾಯಪೀಠಗಳ ಅಭಿಪ್ರಾಯಗಳು, ಆಶಯಗಳನ್ನು ‘ಜನರ ಭಾವನೆ’ ಎಂಬ ಕಲ್ಪಿತ ಸುಳ್ಳಿನಿಂದ ನುಚ್ಚುನೂರು ಮಾಡುವುದು ಎಂದರೆ ಹೀಗೆಯೇ..

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್ ಎಸ್) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಆರ್. ಎಸ್. ಎಸ್ ನ ಹಿರಿಯ ನಾಯಕ ‘ಭಯ್ಯಾಜಿ’ ಆಡಿದ ಮಾತುಗಳು ಈ ದೇಶದ ಎಲ್ಲವನ್ನೂ ನುಂಗಿ ನಾಶಗೈಯ್ಯುವ ಅಪಶಕುನದಂತೆ ಕಾಣುತ್ತಿದೆ. ಸಂವಿಧಾನ ನಾಶಕ್ಕೆ ಆರ್.ಎಸ್ ಎಸ್ ಮತ್ತದರ ಕಾಲಾಳು ಪಡೆಗಳು ಪ್ರಯತ್ನಿಸುತ್ತಿರುವುದು ಇವತ್ತಿನದ್ದಲ್ಲ. 1949 ರಿಂದಲೂ ನಡೆಸಿಕೊಂಡು ಬರುತ್ತಿದೆ.

ಆರ್.ಎಸ್ ಎಸ್ ನೇರವಾಗಿ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಧರ್ಮ ಮತ್ತು ಸಂಸ್ಕೃತಿಯ ಆಧಾರದಲ್ಲಿ ಭರತವರ್ಷದ ಸರ್ವಾಂಗೀಣ ಅಭಿವೃದ್ದಿಯನ್ನು ಸಾಧಿಸುವುದು ಸಂಘದ ಗುರಿ ಮತ್ತು ಉದ್ದೇಶ ಎಂದು ತನ್ನದೆ ಆದ ಲಿಖಿತ ಸಂವಿಧಾನ ಪರಿಚ್ಛೇದ ಮೂರು ಮತ್ತು ಅದರ ವಿಸ್ತೃತ ನಿಲುವನ್ನು ಪರಿಚ್ಛೇದ ನಾಲ್ಕರಲ್ಲಿ ಹೇಳಿದ್ದರೂ. ಸಂಘವು ತನ್ನ ರಾಜಕೀಯ ಮುಖವಾಣಿಯಾಗಿರುವ ಬಿಜೆಪಿ ಮೂಲಕ ರಾಜಕೀಯ ದಾಹವನ್ನು ತೀರಿಸಿಕೊಳ್ಳುತ್ತಾ ಬಂದಿದೆ.

‘ಭಾರತದ ಸಂವಿಧಾನ’ ಸಂಘ ಮತ್ತದರ ಪರಿವಾರದ ಧರ್ಮಾಧಾರಿತ ರಾಷ್ಟ್ರ ನಿರ್ಮಾಣಕ್ಕೆ ಇರುವ ದೊಡ್ಡ ಅಡ್ಡಗೋಡೆ. ಅದನ್ನೆ ಈಗ ಒಡೆದು ಚೂರು ಮಾಡುವ ಕೆಲಸಕ್ಕೆ ಕೈ ಹಾಕಲಾಗುತ್ತಿದೆ. ಇದುವರೆಗೂ ಜನರ ಮನಸ್ಸಿನಲ್ಲಿ ಮತೀಯ ಭಾವನೆಗಳನ್ನು ಕೆರಳಿಸಿ ಕಾರ್ಯಸಾಧು ಮಾಡಿಕೊಳ್ಳುತ್ತಿದ್ದ ಹಿಂದುತ್ವದ ಶಕ್ತಿಗಳು ಸಂವಿಧಾನವನ್ನು ಮತ್ತು ಅದರ ಅಂಗಸಂಸ್ಥೆಗಳನ್ನೆ ಪತನಗೊಳಿಸಿದರೆ ಮತೀಯ ರಾಜ್ಯ ನಿರ್ಮಾಣ (ರಾಮರಾಜ್ಯ) ದಾರಿ ಸುಗಮ ಎಂಬ ಕೃತ್ಯಕ್ಕೆ ರೂಪುರೇಶೆ ಹೆಣೆಯುತ್ತಿವೆ.

ಸುಪ್ರೀಂ ಕೋರ್ಟ್ ತೀರ್ಪು ಬರುವವೆರಗೂ ಕಾಯಬೇಕಾದ ಸಂವಿಧಾನ ನಿಷ್ಠ ವರ್ತನೆಯಿಂದ ಬಹುದೂರ ಸಾಗಿರುವ ಮತೀಯ ಶಕ್ತಿಗಳು ನ್ಯಾಯಪೀಠವೂ ಇಂತಹದ್ದೇ ತೀರ್ಪು ನೀಡಬೇಕೆಂಬ, ಹಾಗೊಮ್ಮೆ ತಮಗೆ ವ್ಯತಿರಿಕ್ತ ತೀರ್ಪು ಕೊಟ್ಟಲ್ಲಿ ಅದನ್ನು ಒಪ್ಪಿಕೊಳ್ಳಲಾಗದು ಎಂಬ ಸಂದೇಶವನ್ನು ನೀಡ ಹೊರಟಿರುವುದು ಸಂವಿಧಾನದ್ರೋಹ, ದೇಶದ್ರೋಹ ಎನ್ನಲಾಗದೆ?.

ಜನರನ್ನು ಭಾವಾನಾತ್ಮಕವಾಗಿ ಕೆರಳಿಸಿ ಸಂವಿಧಾನದ ವಿರುದ್ದವೇ ಎತ್ತಿಕಟ್ಟುತ್ತಿರುವುದಕ್ಕೆ ಶಬರಿಮಲೆ ತೀರ್ಪು ವಿರೋಧಿ ಧೋರಣೆ ಸ್ಪಷ್ಟ ಎಂಬುದನ್ನು ದೇಶ ಕಾಣುತ್ತಿದೆ. ಜನರ ಭಾವನೆಗಳು ಮತ್ತು ಸಂವಿಧಾನದ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ ಸಂವಿಧಾನವನ್ನು ಎತ್ತಿ ಹಿಡಿಯಬೇಕು. ಏಕೆಂದರೆ ಸಂವಿಧಾನದಲ್ಲಿ ಎಲ್ಲವೂ ಅಡಗಿದೆ. ಎಲ್ಲದಕ್ಕೂ ಮದ್ದಿದೆ. ‘ಪ್ರಜಾಪ್ರಭುತ್ವದಲ್ಲಿ ಜನರೇ ಸುಪ್ರೀಂ ಕೋರ್ಟು ಹೊರತು ಕೋರ್ಟ್ ಅಲ್ಲ’ ಎಂದು ಹೇಳುವ ಪರಿವಾರದ ನಾಯಕರು ಈ ದೇಶದ ಮೊದಲ ‘ದ್ರೋಹಿಳು’ ಎಂದು ಯಾರಿಗಾದರೂ ಯಾಕೆ ಅನಿಸಬಾರದು.?

ಈಗಾಗಲೆ ಗೋರಕ್ಷಣೆ ನೆಪದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಜನರ ಗುಂಪಿನ ಕೈಗೆ ಕೊಡಲಾಗಿದೆ. ಈ ಕಾಡು ನ್ಯಾಯಕ್ಕೆ ಪೊಲೀಸರೆ ಕೊಲೆಯಾಗುತ್ತಿದ್ದಾರೆ. ಇನ್ನು ನ್ಯಾಯಪೀಠಗಳನ್ನು ಪೂರ್ಣ ಪ್ರಮಾಣದಲ್ಲಿ ಆವರಿಸಿಕೊಂಡರೆ ಅಲ್ಲಿಗೆ ಭಾರತದ ಭವಿಷ್ಯ ಮುಗಿದಂತೆಯೇ. ರಾಮಮಂದಿರದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಪಾತ್ರಧಾರಿ ಬಿಜೆಪಿ ಇಬ್ಬಂದಿತನದಿಂದಲೇ ಅಧಿಕಾರವನ್ನು ಅನುಭವಿಸಿದೆ. ಸೂತ್ರಧಾರಿ ಸಂಘಪರಿವಾರವೂ ಕೂಡ ಈ ನಾಲ್ಕೂಮುಕ್ಕಾಲು ವರ್ಷಗಳ ಕಾಲ ಸುಮ್ಮನಿದ್ದು ಈಗ ಚುನಾವಣೆ ಎದುರಿಗಿರುವಾಗ ಬೀದಿಗಿಳಿದಿರುವ ಆಷಾಡಭೂತಿತನವನ್ನು ಉನ್ಮತ್ತಗೊಂಡು ಕೂಗುತ್ತಿರುವ ರಾಮಭಕ್ತ ಹಿಂದೂಗಳು ಅರ್ಥಮಾಡಿಕೊಳ್ಳಬೇಕು.

ಪಾಲಂಪುರದಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಅಧಿವೇಶನದಲ್ಲಿ ಮೊದಲ ಬಾರಿಗೆ ಅಯೋಧ್ಯೆ ವಿಷಯವನ್ನು ಬಿಜೆಪಿ ಎತ್ತಿತ್ತು. ಆಗ 1989 ರ ಲೋಕಸಭಾ ಚುನಾವಣೆಗಳು ಎದುರುಗೊಳ್ಳುತ್ತಿದ್ದವು. ಬಾಬರಿ ಮಸೀದಿ ಸ್ಥಳವನ್ನು ರಾಮಮಂದಿರ ಕಟ್ಟಲು ಹಿಂದೂಗಳಿಗೆ ಹಸ್ತಾಂತರಿಸಬೇಕೆಂಬ ನಿರ್ಣಯವೂ ಈ ಅಧಿವೇಶನದಲ್ಲಿ ಕೈಗೊಳ್ಳಲಾಯಿತು. ಇದನ್ನು ‘ಪಾಲಂಪುರ ನಿರ್ಣಯ’ ವೆಂದೆ ಕರೆಯಲಾಗುತ್ತದೆ.

ಅದರ ಪರಿಣಾಮವೇ ಡಿ.6 1992 ರಂದು ಬಾಬರಿ ಮಸೀದಿ ಧ್ವಂಸಗೊಳಿಸಲಾಗುತ್ತದೆ. ಅಂದು ಕೂಡ ನ್ಯಾಯ ಪೀಠದ ತೀರ್ಪುನ್ನು ಉಲ್ಲಂಘಿಸಿಯೇ ನಡೆಸಲಾಗಿದ್ದು,

‘ಜನರೇ ಸುಪ್ರೀಂ ಕೋರ್ಟು ಹೊರತು ಕೋರ್ಟುಗಳಲ್ಲ ಎನ್ನುವ ಆರ್ .ಎಸ್ ಎಸ್ ಇದೆ ಮಾತನ್ನು ಯಾಕೆ ತನ್ನ ರಾಜಕೀಯ ಮುಖವಾಣಿ ಬಿಜೆಪಿಯ ಮೂಲಕ ಇದನ್ನು ರಾಜಕೀಯ ನಿರ್ಣಯವನ್ನಾಗಿ ಮುದ್ರೆ ಒತ್ತಿಸಬಾರದು? ಬಿಜೆಪಿ ಕೇವಲ ಹಿಂದೂತ್ವದ ಹೆಸರಲ್ಲಿ ಮತಗಳಿಕೆಯ ಆಷಾಡಭೂತಿತನ ತೋರದೆ ತನ್ನ ಮಾತೃಸಂಸ್ಥೆಯ ಸಂವಿಧಾನವಿರೋಧಿ ನಿಲುವನ್ನೆ ಸಮ್ಮತಿಸಿ ಹಿಂದುತ್ವದ ಬದ್ದತೆಯನ್ನು ತೋರಬಾರದೇಕೆ? ಅದು ಬಿಜೆಪಿ ಗೆ ಸಾಧ್ಯವಿಲ್ಲ. ಬಿಜೆಪಿ ಈಗ ಎರಡು ದೋಣಿಯ ಮೇಲೆ ಪಯಣ ನಡೆಸುತ್ತಿದೆ. ಅಧಿಕಾರದ ಜೂಜಾಟ ಎಂದರೆ ಇದೇ. ಎನ್.ಡಿ.ಎ ನೇತೃತ್ವದಲ್ಲಿ ಸರ್ಕಾರ ರಚಿಸಿದ ಉದಾರ ಹಿಂದುತ್ವದ ನಾಯಕ ವಾಜಪೇಯಿ ಅವರು ಬಿಜೆಪಿಗೆ ಬಹುಮತವಿಲ್ಲ ಎಂಬ ನೆಪದಲ್ಲಿ ರಾಮಮಂದಿರವನ್ನು ಕೋಲ್ಡ್ ಸ್ಟೋರೇಜ್ ಗೆ ಇರಿಸಿದ್ದರು.

ಇದೀಗ ದೈತ್ಯ ಬಲದೊಂದಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಕೂಡ ಇದೇ ತಂತ್ರದ ಜೂಜಾಟವನ್ನೇ ಆಡಿದ್ದಾರೆ. ಹಿಂದುತ್ವದ ವಿಚಾರದಲ್ಲಿ ಬಿಜೆಪಿ ಮತ್ತು ಆರ್.ಎಸ್ ಎಸ್ ವಂಚಕತನಗಳನ್ನೆ ಇದುವರೆಗೂ ನಡೆಸಿಕೊಂಡು ಬಂದಿವೆ. ಇಂತಹ ವಂಚನೆಗಳಿಗೆ ಅಸಂಖ್ಯಾತ ಜನರ ರಕ್ತ ತರ್ಪಣ ನಡೆದು ಹೋಗಿದೆ. ಮತ್ತೊಂದು ಸುತ್ತಿನ ಆಟಕ್ಕೆ ಆರ್ ಎಸ್ ಎಸ್ -ಬಿಜೆಪಿ ಅಣಿಯಾಗಿದೆ.

ಈ ಆಟದಲ್ಲಿ ಈ ಬಾರಿ ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆ ನುಂಗಿ ನೊಣೆಯುವ ಸಂಚು ನಡೆದಿದೆ. ಇದು ನಿಜವಾದ ಹಿಂದುತ್ವದ ಉಳಿವಿನ ಅಥವಾ ರಾಮಮಂದಿರದ ಭಕ್ತಿಯಲ್ಲ. ಫಾಸಿಸ್ಟ್ ಮುಖವಾಡದ ಅಧಿಕಾರ ದಾಹ. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ನೆಹರು ಅವರ ಹಿಂದುತ್ವದ ತತ್ವಗಳು, ರಾಹುಲ್ ಗಾಂಧಿ ತನ್ನ ಕುಲ-ಗೋತ್ರಗಳ ಹೇಳಿಕೊಳ್ಳುವುದು. ದೇವಸ್ಥಾನಗಳಿಗೆ ಓಡಾಡುವುದು ಆರ್.ಎಸ್ ಎಸ್ ಮತ್ತು ಬಿಜೆಪಿಗೆ ಪಥ್ಯವಾಗುವುದಿಲ್ಲ.

ಮಾಜಿ ಪ್ರಧಾನಿ ದೇವೇಗೌಡರು ನನ್ನಂತಹ ಹಿಂದೂ ಯಾರಿಲ್ಲ ಎಂದು ಎದೆತಟ್ಟಿಕೊಂಡು ಹೇಳುವಾಗ ಅವರಿಗೆ ಉತ್ತರಿಸಲಾಗದೆ ತಲೆಮರೆಸಿಕೊಳ್ಳುವ ಸೋ ಕಾಲ್ಡ್ ಹಿಂದುತ್ವದ ವಾರಸುದಾರರ ಮುಖವಾಡವನ್ನು ದೇಶದ ಜನತೆ 2019 ರ ಲೋಕಸಭಾ ಚುನಾವಣೆಯಲ್ಲಿ ಕಳಚುವುದೇ ನಿಜವಾದ ಹಿಂದುತ್ವ ನಿಷ್ಠೆ ಮತ್ತು ದೇಶಭಕ್ತಿ. ಈ ಮೂಲಕ ಸಂವಿಧಾನವನ್ನು ರಕ್ಷಿಸಬೇಕಿದೆ.

Leave a Reply