ಒಂದಷ್ಟು ನೀಲುಗಳು…

ಡಾ. ಪ್ರೇಮಲತ ಬಿ

ಆಹ್ವಾನ….
ಚಳಿಗಾಲ ಶುರುವಾಯ್ತು ನೋಡು
ಹೊಂಬಿಸಲ ತೌರು ನನ್ನೆದೆ
ನಡುಬೇಸಿಗೆಯ ಚಡಪಡಿಕೆಯಲು
ಸುರಿಸುವುದು ತುಂತುರು ಹೂ ಮಳೆ !

ನಿನ್ನೆದೆ…..
ಬಾನೆಡೆಗೆ ಏರಿದ
ಎತ್ತರದ ಉಪ್ಪರಿಗೆ
ನನಗೋ
ಮುಗಿಲ ಹರಟುವ
ಅವಿರತ ಚಪ್ಪರಿಕೆ !

ಸಿಗದ ನೀನು…
ಗಾಳ ಹಾಕಿ ಹಿಡಿಯಹೊರಟವರ ಕಣ್ಣಿಗೆ
ಮಣ್ಣೆರಚಿ ನುಸುಳುತ್ತ ಮಿಂಚುವ
ಮೈಯ ಮೀನು ನೀನು
ಗೌವ್ವೆನ್ನುವ ಕತ್ತಲೆ, ದಟ್ಟ ಕಾಡಲ್ಲಿ
ಫಳಕ್ಕೆನ್ನುತ್ತ ಕಂಡು ಮರೆಯಾಗುವ ಮಿಂಚುಹುಳು !


ನೆನಪು
ರಾತ್ರಿಯಿಡೀ ಹಸಿದು ಸಾಯುವ ಆಸೆಗಳಿಗೆ
ನಿದ್ದೆ ಬಾರದೆ ಎದ್ದು ಕೂರುವ ವಿಚಾರಗಳಿಗೆ
ನಿನ್ನದೇ ರೂಪು ರೇಷೆ !

ನೀನು…………
ಪಸೆಯಾರಿದ ಬಾಯಿಗೆ ಬೆವರ
ಉಳಿಸಿಕೊಳ್ಳುವ ಬಯಕೆ
ಸಿಡಿಲೆರಗಿ ಒರಗಿದ ಮರಕ್ಕೆ
ಮರಳಿ ಚಿಗುರುವ ಕನಸಿನಂತೆ

ನೀನಿಲ್ಲದ ಈ ಹೊತ್ತು

ಸರ್ರಕ್,ಫುಳಕ್, ತಳಕ್ಕನೆಂದು
ಮೈಯೆಲ್ಲ ಮಿಂಚಾಗಿ ಹೊಳೆದು
ಮೆಲ್ಲಗೆ ತೆವಳುವ ಹೆಬ್ಬಾವಿನಂತೆ
ಎದೆ ಬಿಗಿದು, ಉಸಿರ ಕಡಿದು
ಕನವರಿಸುವಂತೆ ಕಾಣದ್ದು
ಏನಿದೆಯೋ ಆ ದೇವರಿಗೇ ಗೊತ್ತು
ನೀನಿಲ್ಲದೆ ಬಳಲಿದ ಈ ಹೊತ್ತು !


ನೀನಿಲ್ಲದ ಹೊತ್ತು

ಮುಂದೆ ನಿಂತಾಗ ಸ್ತಬ್ದವಾಗುವ ಸಮಯ,
ಮಾತು ಮೌನದಿ ಕವಿತೆಯಾಗುವ ಹೊತ್ತು ,
ನೀನಿಲ್ಲದೇ ಹೋದಾಗ ಉದ್ದುದ್ದ ಹಿಗ್ಗಿ
ಉರುಳಾಗಿ ಕೊರಳ ಬಿಗಿದು ತುಂಡಾಗುತ್ತ ಬಿಕ್ಕುತ್ತದೆ !

ಕರ್ಮ
ಬೆಳಗಿನ ಬೆಳಕಲ್ಲಿ, ಕಮರುವ ಆಸೆಗಳಲಿ
ನಾನು ನಿನ್ನ ನಿತ್ಯ ಕೊಲ್ಲುತ್ತೇನೆ
ರಾತ್ರಿ ಕನಸುಗಳು ಅಮರಿಸಿಬಿಡುವ ವೇಳೆ
ನೀನು ಮತ್ತೆ ವಿಜೃಂಭಿಸುತ್ತೀಯೆ !

 

Leave a Reply