ಮೌನ ಕುಂಚ…

ಸದಾಶಿವ್ ಸೊರಟೂರು


ವಸಂತಗಳು
ಬೊಗಸೆ ಬೆರಳುಗಳ ಮಧ್ಯೆ
ಕಂಡಿ ಮಾಡಿಕೊಂಡು
ಹೊರಟು ಹೋದವು

ಬಂದಾಗ ಇದೇ ಕೈಯಲ್ಲಿ
ತುಂಬು ಕೂದಲ ಕುಂಚವಿತ್ತು
ಪ್ರತಿ ಬೆರಳುಗಳು ಕನಸು
ಕಕ್ಕುತ್ತಿದ್ದವು

ಗಲಗಲ ವಯಸ್ಸು,
ರಕ್ತ-
ಬದುಕಿನ ತರುಣರ
ನಾಲಿಗೆಯ ಮೇಲೆ ಹನುಕಲು
ತುದಿಗಾಲು,
ಪ್ರತಿಭೆ ಅನುಭವ ಇನ್ನೂ
ಏನೇನೋ ಸುಡುಗಾಡುಗಳಿಂದ
ತುಂಬಿದ ಜೇಬು

ಅವತ್ತು ಕಾಲಲ್ಲಿ ಮುರಿಯುವ
ಮುಳ್ಳು
ಎದೆಯೊಳಗೆ ಮುರಿದಿತ್ತು
ಅವರು ಮುಳ್ಳು ತೆಗೆಯುವ
ಚಿಮ್ಮಟ ಎತ್ತಿ ಹೊಯ್ದಿದ್ದರು

ಸಾವಿರ ಬಣ್ಣಗಳಲ್ಲಿ ಅದ್ದಿಕೊಂಡ
ಕುಂಚ
ಕೈಯಲ್ಲೆ ಒಣಗಿ ಹೋಯಿತು.

1 comment

  1. ಶಬ್ದ ಸಂಪನ್ನ ಪ್ರತಿಮೆಗಳ ಮಧ್ಯೆ ಏನನ್ನೂ ಹೇಳಲಾಗದ ದರಿದ್ರ ನಾ… ಅದ್ಭುತವಾಗಿದೆ ಕವಿತೆ

Leave a Reply