ಇಲ್ಲಿ ಮೀಡಿಯಾ ಮಾತಾಡೋಲ್ಲ..

ಟಿವಿ9 ನಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಪ್ರಾರಂಭದಲ್ಲಿ ಡೆಸ್ಕ್ ವರ್ಕ್ ಮಾಡುತ್ತಿದ್ದ ನನಗೆ ಕೊನೆಗೆ ರಿಪೋರ್ಟಿಂಗ್ ಮಾಡುವ ಅವಕಾಶವೂ ಸಿಕ್ಕಿತ್ತು.

ಸಾಮಾನ್ಯವಾಗಿ ವರದಿಗಾರರಿಗೆ ದಿನಕ್ಕೆ ಕನಿಷ್ಟ ೨ ಸ್ಟೋರಿ  ಕೊಡಬೇಕಾದುದು ಕಡ್ಡಾಯ. ಪೊಲಿಟಿಕಲ್, ಕ್ರೈಮ್, ಮೆಟ್ರೋ, ಫಿಲ್ಮ್ ಹೀಗೆ ನಾನಾ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ರಿಪೋರ್ಟರ್ಸ್ ಗೆ 2 ಸ್ಟೋರಿ  ಆದ್ರೆ ಸಾಕು ಅನ್ನೋದೇ ಚಿಂತೆ. ವಾರದ ದಿನಗಳಲ್ಲಿ ನಗರದ ಎಲ್ಲೆಡೆ ಚಟುವಟಿಕೆಗಳು ಸಾಮಾನ್ಯ. ಹಾಗಾಗಿ ನ್ಯೂಸ್ ಗೆ ಏನೂ ಕೊರತೆ ಇರುತ್ತಿರಲಿಲ್ಲ. ಸಮಸ್ಯೆಗಳಿಲ್ಲದೆ ಸರಾಗವಾಗಿ ದಿನಗಳು ಓಡುತ್ತಿದ್ದವು. ಆದರೆ ವಾರಾಂತ್ಯದ ಪರದಾಟ ಕೇಳೋದೇ ಬೇಡ.

ಎಲ್ಲರೂ ರೆಸ್ಟ್ ತೆಗೆದುಕೊಳ್ಳುವ ಸಮಯದಲ್ಲಿ ನಾವು ಪತ್ರಿಕೋದ್ಯಮಿಗಳು ಮಾತ್ರ ಬಕ ಪಕ್ಷಿಗಳಂತೆ ನ್ಯೂಸ್ ಗಾಗಿ ಅಲೆದಾಡುವ ಪರಿಸ್ಥಿತಿ. ದೊಡ್ಡ ದೊಡ್ಡ ನ್ಯೂಸ್ ನ ಬೇಟೆ ಮಾಡಿದವರ ಖುಷಿ ಕೇಳೋದೇ ಬೇಡ. ಬದುಕಿತು ಬಡಜೀವ ಎನ್ನುವ ಹಾಗೆ. ಏನೂ ದಕ್ಕದವರಿಗೆ ಸಣ್ಣ – ಪುಟ್ಟ ಹೋರಾಟಗಳ ನ್ಯೂಸ್ ಆದ್ರೂ ಸಿಗಲಿ ಅನ್ನುವ ಆಶಯ. ನಗರದ ಮೂಲೆ ಮೂಲೆಗೆ ತೆರಳಿ ಶತ್ರುಗಳನ್ನೇ ಹುಡುಕಿ ಸೆರೆ ಹಿಡಿಯುವಂತೆ ನ್ಯೂಸ್ ಸಂಗ್ರಹಿಸುವ ಕೆಲಸ ವರದಿಗಾರರದ್ದು.

ಆದ್ರೆ ಸಿಂಗಾಪುರದ ಕಥೆ ಸಂಪೂರ್ಣ ಭಿನ್ನ. ಇಲ್ಲಿನ ಜರ್ನಲಿಸ್ಟ್ ಗಳಿಗೆ ನಮ್ಮ ಹಾಗೆ ಕೆಲಸನೇ ಇಲ್ಲ. ಒಂಥರಾ ಟೆನ್ಶನ್ ಫ್ರೀ ವರ್ಕ್.

ಪ್ರೊಟೆಸ್ಟ್ ಇಲ್ಲ, ಜಾಥಾ ನಡಿಯೋದಿಲ್ಲ, ಚಳುವಳಿಗಳು ಇಲ್ವೇ ಇಲ್ಲ. ನಕಾರಾತ್ಮಕ ವರದಿಗಳಿಗಂತೂ ಎಂಟ್ರೀನೇ ಇಲ್ಲ. ಅಭಿವೃದ್ಧಿ, ಅಂತಾರಾಷ್ಟ್ರೀಯ ನ್ಯೂಸ್, ಟ್ರಾವೆಲ್, ವ್ಯಾಪಾರ, ಆರೋಗ್ಯ, ತಿನ್ನೋದು, ಶಾಪಿಂಗ್ ಇಷ್ಟೇ ಟಾಪಿಕ್. ವಿವಾದಾತ್ಮಕ ವಿಚಾರಗಳು,ರಾಜಕೀಯ ಏರಿಳಿತ, ಸಮಸ್ಯೆಗಳು, ಲೈವ್ ರಿಪೋರ್ಟಿಂಗ್, ಚಾಲೆಂಜ್ ರೀತಿಯ ವಿಷಯಗಳೇ ಇಲ್ಲ. ಇಲ್ಲಿ ಎಲ್ಲವೂ ಶಾಂತ. ನ್ಯೂಸ್ ಪೇಪರ್ ಗಳ ಪುಟಗಳು ಮಾತ್ರ ೨೫೦ ಕ್ಕೂ ಅಧಿಕ. ಹಾಗೆ ಏನಾದ್ರೂ ನೆಗೆಟಿವ್ ವಿಚಾರಗಳು ಪ್ರಕಟಗೊಂಡರೂ ಅದು ಮೊದಲ ಒಂದಷ್ಟು ಪುಟಗಳಲ್ಲಿ ಕಣ್ಣಿಗೆ ಬೀಳೋದೆ ಇಲ್ಲ. ಎಲ್ಲೋ ಒಂದು ಮೂಲೆಯಲ್ಲೀ ಬಾಕ್ಸ್ ರೂಪದಲ್ಲಿ ಪ್ರಿಂಟ್ ಆಗಿರುತ್ತವೆ.

ಫ್ರೀಡಮ್ ಆಫ್ ಸ್ಪೀಚ್ ಹೇಳುತ್ತಾ ನಮ್ಮಲ್ಲಿ ಎಷ್ಟು ಹಾರಾಟ ನಡಿಯುತ್ತೋ ಅದಕ್ಕೆ ತದ್ವಿರುದ್ಧವಾಗಿ ಅಷ್ಟೇ ಮೌನ ಇಲ್ಲಿನ ಮಾಧ್ಯಮ. ಇಲ್ಲಿನ ಪ್ರೆಸ್, ಟೀವಿ, ರೇಡಿಯೋಗಳು ಸರ್ಕಾರಿ ನಿಯಂತ್ರಣಕ್ಕೆ ಒಳಪಟ್ಟಿದೆ. ಸರ್ಕಾರದ ವಿರುದ್ಧ ಯಾವುದೇ ಮಾಧ್ಯಮ ಚಕಾರ ಎತ್ತುವ ಹಾಗಿಲ್ಲ. ಅಷ್ಟೇ ಅಲ್ಲ ರಾಜಕೀಯ ಪ್ರೇರಿತ ಮಾತುಗಳು, ಧರ್ಮಕ್ಕೆ ಸಂಬಂಧಿಸಿದ ವಿಚಾರಗಳು, ದೇಶದ ಶಾಂತಿ – ಸುವ್ಯವಸ್ಥೆಗೆ ಅಡ್ಡಿಪಡಿಸುವ ಯಾವುದೇ ವಿಚಾರಗಳ ಪ್ರಚಾರಕ್ಕೆ ಅನುಮತಿ ಇಲ್ಲ.

ಆದರೆ ನಮ್ಮಲ್ಲಿನ ಮಾಧ್ಯಮಗಳು ಉಸಿರಾಡೋದೆ ಇಂತಹ ಸಂಗತಿಗಳಿಂದ. ಟಿಆರ್ ಪಿ ಒಂದೇ ನಮಗೆ ಟಾರ್ಗೆಟ್. ಒಳ್ಳೆಯ ವಿಚಾರಕ್ಕಾದ್ರೂ ಒತ್ತುಕೊಟ್ಟಲ್ಲಿ ಮೆಚ್ಚುಗೆ ಗಳಿಸುವ ವಿಚಾರ. ಒಂದೊಂದು ರಾಜಕೀಯ ಪಕ್ಷಕ್ಕೂ ಒಂದೊಂದು ಚ್ಯಾನೆಲ್. ರಾಜಕೀಯ ಮುಖಂಡರು ಆಡಿದ್ದೆ ಆಟ. ಇವುಗಳ ಮಧ್ಯೆ ಸಮಾಜಕ್ಕೆ ಒಳಿತಾಗುವ ವಿಚಾರಗಳು ಪ್ರಸಾರವಾದ್ದಲ್ಲಿ ದೊಡ್ಡ ಸಂಗತಿ. ಅದು ಕೂಡ ಟಿಆರ್ ಪಿ  ಮೇಲೆ ಅವಲಂಬಿತ.

ಆದರೆ ಸಿಂಗಾಪುರದ ಕಾನೂನು ತಿಳಿಯುತ್ತಾ ಹೋದರೆ, ಇಲ್ಲಿ ಟಿವಿ, ನ್ಯೂಸ್ ಪೇಪರ್ ಗಳು ಇರೋದೇ ದೊಡ್ಡ ವಿಚಾರ ಅನಿಸಿ ಬಿಡುತ್ತದೆ.

ಹೊರದೇಶದಿಂದ ಪ್ರಕಟಿತ ಮಾಧ್ಯಮದ ಲಭ್ಯತೆಯ ಕುರಿತು ಕೂಡ ಸಿಂಗಾಪುರ ಸರ್ಕಾರ ನಿರ್ಧರಿಸುತ್ತದೆ. ಬಹುತೇಕ ಸ್ಥಳೀಯ ಮಾಧ್ಯಮಗಳು ಷೇರುಗಳ ಮೂಲಕ ನೇರವಾಗಿ ಅಥವಾ ಪರೋಕ್ಷವಾಗಿ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿದೆ. ಎಲ್ಲಾ ವಿಚಾರದಲ್ಲೂ ಸೂಕ್ಷ್ಮ ಸುದ್ದಿಗಳನ್ನು ಪ್ರಕಟಿಸುವ ವಿದೇಶಿ ಪತ್ರಿಕೆಗಳನ್ನು ಇಲ್ಲಿ ಆಮದು ಮಾಡಿಕೊಳ್ಳಲಾಗುವುದಿಲ್ಲ.

ಸಿಂಗಾಪುರದಲ್ಲಿ ರೇಡಿಯೋ ಮತ್ತು ಟೆಲಿವಿಷನ್ ಕೇಂದ್ರಗಳು ಸರ್ಕಾರಿ ಸ್ವಾಮ್ಯದ ಘಟಕಗಳಾಗಿವೆ. ಇಲ್ಲಿನ ಮೀಡಿಯಾ ಕಾರ್ಪ್ ಏಳು ಸ್ಥಳೀಯ ದೂರದರ್ಶನ ಚಾನೆಲ್ ಗಳನ್ನು ಮತ್ತು 14 ರೇಡಿಯೊ ಚಾನೆಲ್ ಗಳನ್ನು ಹೊಂದಿದೆ. ಟಿವಿ ಉಪಗ್ರಹ ಡಿಶ್ ಗಳ ಖಾಸಗಿ ಮಾಲೀಕತ್ವವನ್ನು ಇಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಆಡಳಿತ ಪಕ್ಷದೊಂದಿಗೆ ನಿಕಟ ಸಂಪರ್ಕ ಹೊಂದಿರುವ “ಸಿಂಗಾಪುರ್ ಪ್ರೆಸ್ ಹೋಲ್ಡಿಂಗ್ಸ್” , ಪತ್ರಿಕೆ ಉದ್ಯಮದ ವಾಸ್ತವ ಏಕಸ್ವಾಮ್ಯವನ್ನು ಹೊಂದಿದೆ. ಒಟ್ಟು ೭ ನ್ಯೂಸ್ ಪೇಪರ್ ಗಳು ಇಲ್ಲಿ ಚಾಲನೆಯಲ್ಲಿವೆ.

ಅಶಾಂತಿಯನ್ನು ಹುಟ್ಟು ಹಾಕುವ ಅಥವಾ ರಾಷ್ಟ್ರೀಯ ಭದ್ರತೆಯನ್ನು ಬೆದರಿಸಲು ಪರಿಗಣಿಸುವ ಸುದ್ದಿಯ ಪ್ರಸಾರವನ್ನು ತಡೆಯುವ ಅನುಮತಿ ಇಲ್ಲಿನ ಮಾನನಷ್ಟ ಮತ್ತು ಪ್ರಚೋದನೆ ಕಾನೂನಿಗೆ ನೀಡಲಾಗಿದೆ.

ಸಾರ್ವಜನಿಕವಾಗಿ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳೋದಾದ್ರೂ ಅನುಮತಿ ಅಗತ್ಯ. ಆ ಸಮಾರಂಭದ ಮುಖಂಡನ ಎಲ್ಲ ಮಾಹಿತಿಗಳನ್ನು ಪೊಲೀಸರಿಗೆ ಸಲ್ಲಿಸುವುದು ಇಲ್ಲಿ ಕಡ್ಡಾಯ. ಸಾರ್ವಜನಿಕ ಭಾಷಣಗಳಿಗೆ ಜಮಾಯಿಸುವ ಜನರ ಸಂಖ್ಯೆಯ ಮೇಲೆ ಪೊಲೀಸರನ್ನು ನಿಯೋಜಿಸುವ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಕಾನೂನಿನ ಚೌಕಟ್ಟಿನೊಳಗೆ ಇದ್ದಲ್ಲಿ ಮಾತ್ರ ಇಂತಹ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುತ್ತದೆ.

ಇನ್ನು ರಾಜಕೀಯ ವಿಷಯವನ್ನು ಹೊತ್ತಿರುವ ವೆಬ್ ಸೈಟ್ ಗಳು ಮಾಧ್ಯಮ ಅಭಿವೃದ್ಧಿ ಪ್ರಾಧಿಕಾರದಿಂದ ನೊಂದಾಯಿಸಬೇಕು. ಆಕ್ಷೇಪಾರ್ಹ ಎಂದು ಪರಿಗಣಿಸುವ ಯಾವುದೇ ವಿಚಾರ ಪ್ರಕಟಗೊಂಡಲ್ಲಿ ವೆಬ್ ಸೈಟ್ ಮಾಲೀಕರು ಮತ್ತು ಸಂಪಾದಕರು ಕ್ರಿಮಿನಲ್ ಪ್ರಕರಣಕ್ಕೆ ಹೊಣೆಗಾರರಾಗುತ್ತಾರೆ.

ಇಷ್ಟೆಲ್ಲಾ ಕಾನೂನು – ನಿಯಮಗಳನ್ನು ಜಾರಿಗೆ ತರುವ ಸಿಂಗಾಪುರ ಸರ್ಕಾರದ ಬಗ್ಗೆ ಟೀಕೆಗಳಿಗೆ ಏನೂ ಕಡಿಮೆಯಿಲ್ಲ. ಹೆಚ್ಚಿನ ಮಾಹಿತಿಗಳು, ವರದಿಗಳು ಸರ್ಕಾರದ ಪರವಾಗಿಯೇ ಸಲ್ಲಿಕೆಯಾಗುತ್ತವೆ. ಸರಿಯೋ – ತಪ್ಪೋ ಅವುಗಳನ್ನು ಪ್ರಶ್ನಿಸುವ ಹಕ್ಕು ಮಾತ್ರ ಜನತೆಗೆ ಇಲ್ಲ. ಪ್ರಶ್ನಿಸುವ ಎಲ್ಲ ರೀತಿಯ ಸಾಮಾಜಿಕ ಜಾಲತಾಣಗಳು ವಿರುದ್ಧ ಪ್ರಕರಣ ದಾಖಲಿಸುವ ಮಟ್ಟಿಗೆ ಅಧಿಕಾರ ಸರ್ಕಾರಕ್ಕೆ ಇದೆ. ಅದಾಗಲೇ ಎಷ್ಟೋ ವೆಬ್ ಸೈಟ್ ಗಳಿಗೆ ದೇಶದ ಪ್ರವೇಶವನ್ನೇ ಪಡೆಯುವ ಭಾಗ್ಯ ಸಿಕ್ಕಿಲ್ಲ. ಅದಾಗಲೇ ಪ್ರವೇಶ ಪಡೆದು, ಕಾನೂನು ಅನುಸರಿಸದ ವೆಬ್ ಸೈಟ್ ಗಳಿಗೆ ಗೇಟ್ ಪಾಸ್ ಕೂಡ ನೀಡಲಾಗಿದೆ ಹಾಗೂ ನೀಡಲಾಗುತ್ತಿದೆ. ಜೊತೆಗೆ ಜೀವಮಾನ ಪೂರ್ತಿ ತೀರಿಸಲಾಗದಷ್ಟು ದಂಡಗಳು, ಜೈಲು ಶಿಕ್ಷೆಗಳಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ.

ನಾವು ಫುಲ್ ಬಿಂದಾಸ್ ಬಿಡಿ. ನಮ್ಮನ್ನು ಪ್ರಶ್ನಿಸುವವರೇ ಇಲ್ಲ. ನಮ್ಮಲ್ಲಿ ಸ್ವಾತಂತ್ರ್ಯ ತುಂಬಿ ತುಳುಕುತ್ತಿದೆ. ನಮ್ಮ ದೇಶಕ್ಕೆ ಈಗ ಇರುವ ರೀತಿಯೇ ಸರಿ. ಬೇಜಬ್ದಾರಿಯಿಂದ ವರ್ತಿಸುವ ನಾಯಕರುಗಳಿಗೆ ಜನರೇ ಬುದ್ದಿ ಕಲಿಸಬೇಕು. ಈಗಂತೂ ನ್ಯೂಸ್ ಪೇಪರ್, ಟೀವಿ ಚ್ಯಾನೆಲ್ ಗಳಿಗಿಂತ ಸಾಮಾಜಿಕ ಜಾಲತಾಣಗಳದ್ದೇ ಪ್ರಾಬಲ್ಯ. ಇವುಗಳನ್ನು ನೋಡಿ ನ್ಯೂಸ್ ನಿರ್ಧರಿಸುವ ಕಾಲ ಮಧ್ಯಮಗಳಾದ್ದಾಗಿವೆ. ಸಾಮಾಜಿಕ ಜಾಲತಾಣಗಳಲ್ಲೂ ಕುಂದು ಕೊರತೆಗಳಿವೆ. ಆದರೆ ಇದ್ದುದ್ದನ್ನು ಇದ್ದ ಹಾಗೆ ಬಿತ್ತರಿಸುವ ಅವಕಾಶ ಇರೋದು ಈ ಕ್ಷೇತ್ರಕ್ಕೆ ಮಾತ್ರ. ಕಾನೂನೇ ನೆಟ್ಟಗಿರದ ನಮ್ಮ ದೇಶದಲ್ಲಿ ಕಡೆ ಪಕ್ಷ ಈ ಮೂಲಕವಾದ್ರೂ ಜನ ನ್ಯಾಯಯುತ ಬದುಕು ನಡೆಸುವಂತೆ ಆಗಲಿ. ಅನ್ಯಾಯ, ಸುಳ್ಳು ದಂಧೆಗಳಲ್ಲಿ ತೊಡಗುವ ಅಧಿಕಾರಿಗಳು, ಜನರು, ಇಂತಹವುಗಳಿಂದಲೇ ಪಾಠ ಕಲಿಯುವಂತೆ ಆಗಲಿ.

ಆದರೆ ಸಿಂಗಾಪುರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವೇ ಇಲ್ಲ. ಏನೇ ಇದ್ದರೂ ಸರ್ಕಾರ ಹೇಳಿದ್ದೆ ಪಾಲಿಸಬೇಕು. ಜನತೆಗೆ ಬೇಕಾದ ಎಲ್ಲ ಸವಲತ್ತುಗಳನ್ನು ನೀಡುವಲ್ಲಿ ಮಾತ್ರ ಸಿಂಗಾಪುರ ಹಿಂದೆ ಬಿದ್ದಿಲ್ಲ. ಈ ಮೂಲಕ ಶಾಂತಿ – ಸುವ್ಯವಸ್ಥೆ ಕಾಪಾಡೋದು ಈ ಸರ್ಕಾರದ ಲೆಕ್ಕಾಚಾರ. ಅಲ್ಲದೆ ನೆಗೆಟಿವ್ ಆಲೋಚನೆಗಳಿಗೆ ಅವಕಾಶ ಕಲ್ಪಿಸದೆ ಇರೋದು ಇದರ ಉದ್ದೇಶ. ದೇಶದ ಯಾವ ಮೂಲೆಗೆ ಸಂಚರಿಸಿ ಒಂದು ರೀತಿಯ ಮನೆಯ ವಾತಾವರಣ.

ತಮ್ಮ – ತಮ್ಮ ಕೆಲಸಗಳನ್ನು ಮಾಡುತ್ತಾ, ತಮ್ಮ ಪಾಡಿಗಿರುವ ಜನರು. ಸಾಧ್ಯವಾದರೆ ಸಹಾಯ ಮಾಡುವ ಗುಣ. ಇಲ್ಲವಾದರೆ ಸರ್ಕಾರದ ಜವಾಬ್ದಾರಿ.

ಸಿಂಗಾಪುರ ತೋರುವ ಕಾಳಜಿಯ ಬಗ್ಗೆ ಮೆಚ್ಚಲೇಬೇಕು. ಯಾವ ಮಟ್ಟಕ್ಕೆ ಇದೆ ಅಂದ್ರೆ, ಬಸ್ ಸ್ಟಾಪ್ ಗಳಲ್ಲಿ ಕುಡಿದು ಮಲಗುವುದು ಬಿಡಿ, ಸುಮ್ನೆ ರೆಸ್ಟ್ ತೆಗೆದುಕೊಳ್ಳುವ  ನೆಪದಲ್ಲಿ ನಿದ್ದೆ ಮಾಡುವ ಯೋಜನೆ ಹಾಕಿಕೊಂಡರು ಮುಗೀತು. ಕೆಲವೇ ಕ್ಷಣಗಳಲ್ಲಿ ಪೋಲೀಸ್, ಆಂಬ್ಯುಲೆನ್ಸ್ ಪ್ರತ್ಯಕ್ಷವಾಗಿ ಬಿಡುತ್ತವೆ.

ಕೊನೆಗೆ ಡಾಲರ್ ನಲ್ಲಿ ತೋರಿಸುವ ಬಿಲ್ ಮಾತ್ರ ನಿಮ್ಮ ಕೈಗೆ…!!!

1 comment

  1. ಅಂದ್ರೇ ಬೇರೆ ರಾಷ್ಟ್ರಗಳಿಗಿಂತ ನಮ್ಮಲ್ಲಿ ಸ್ವತಂತ್ರ ಹೆಚ್ಚ ಮೇಡಂ ಮಾಧ್ಯಮಕ್ಕೆ..

Leave a Reply