ಸೂರ್ಯಕೀರ್ತಿಯ ವೈನ್ ಕವಿತೆಗಳು

ಸೂರ್ಯಕೀರ್ತಿ  

೧.

ಹರಿಯುವ ನೀರಿನ ಚಂಚಲತೆಯ
ಹಿಡಿದು ,ಒಂದು ಹೂಜಿಯಲಿ ತುಂಬಿ.
ಬೇಯುವ, ಕೊಳೆಯುವ ,ಕುದಿಯುವ
ಆಗ ತಾನೆ ಕಾಯಿಂದ ಹಣ್ಣಿಗೆ ಮಾಗುವ
ಹುಳಿದ್ರಾಕ್ಷಿಯ ಜಜ್ಜಿ ,
ನಿಲ್ಲದೆಯೇ ಓಡುವ ಆ ನೀರಲಿ
ಇಳಿದರೆ  ಮದ್ಯವಾಗುವುದಿರಲಿ ,
ನೊರೆ ಬಿಟ್ಟ ವಿಷಸರ್ಪದಂತೆ ಬುಸುಗುಡುವುದು
ಹಾವು ಹೂಜಿಯಲ್ಲಿ !

ಕುಡಿದವನಿಗೆ ಮತ್ತಿನ ಮುತ್ತಾಗಬಹುದು,
ಹರಿಯುವ ಜಲಪಾತಗಳಿಲ್ಲಿ
ತುಂಬುವವು
ಕಲ್ಲಿಗೆ ತಲೆ ಬಡಿಯುವಂತೆ !
ಈ ನೀರೇ ಹೀಗೆ
ನೊರೆ ಬಂದು ಹರಿಯುವ ತನಕ
ದಾರಿ ಕಾಣದು ಅನ್ನಬ್ರಹ್ಮವ ಕಕ್ಕಿಸುವ ತನಕ !

ಆ ಕಾಡ ಮರದ ಬುಡದಲ್ಲಿಯೂ ಕೂಡ
ಮದ್ಯ,
ನಿಂತ ನೀರಲಿ ಕೊಳೆತ ಎಲೆ,ಹೂ, ಮಣ್ಣು
ಹೀಚು,ಕಾಯಿ , ಹಣ್ಣು ,ಬೇರುಗಳ
ಮದ್ಯದ ವಾಸನೆ !

ಇಲ್ಲಿ ,
ಕುಡಿಯುವುದೆಲ್ಲ ಮದ್ಯ ,
ಕುಡಿಯದಿರುವುದೇ ಅಸಾಧ್ಯ !
ಕುಡಿಯದೇ ಇರುವವರು ಯಾರು ?
ದಾಹ ಬಂದ ಮೇಲೆ ,
ನೀರಾದರೂ ಸೈ,
ಮದ್ಯವಾದರೂ ಸೈ,
ರಕ್ತವಾದರೂ ಸೈ !

ಅರಮನೆಗಳಲಿ ದೊಡ್ಡ ದೊಡ್ಡ ಗುಡಾಣಗಳ
ಮದ್ಯದ ಶೇಖರಣೆ ,
ದುಂಬಿ ಮದವೆದ್ದು ಹೂವಿಂದ ಹೂವಿಗೆ
ಹಾರಿ ಅತ್ಯಾಚಾರವೆಸದು
ಕುಡಿಯುವ ಮದ್ಯಕ್ಕೆ ಯಾರು ಶಿಕ್ಷೆ ಕೊಟ್ಯಾರು ?

ಹೂವು ದುಂಬಿಯ ಆಹ್ವಾನ ಕೊಟ್ಟು
ಕರೆಯುವುದೇ ?
ತನ್ನ ಯೌವನವ ಹೀರಿ ಬಿಸಾಕುವ
ಕ್ರೌರ್ಯಕ್ಕೆ ಸೌಂದರ್ಯವೆಂಬ ಹೆಸರೇ ?

ಛೇ!  ಎಂಥಾ ದೌರ್ಜನ್ಯ ,
ದುಂಬಿ ಹೂವಿನ ದಳ ಕಳಚಿ
ಮೈಯೆಲ್ಲ ಮುಟ್ಟಿ ಗುದ್ದಾಡುವ
ಬಗೆಯ ಗರ್ಭಪಾತವಲ್ಲದೇ ?
ಗರ್ಭಸೃಷ್ಠಿಯೇ ?

ಎಷ್ಟೋ ಹೂವಗಳ ಮೂಸಿ, ಕೆದರಾಡಿ ,
ಗುದ್ದಾಡಿ ಬಂದ ದುಂಬಿಗೆ ಪುರುಷನೆಂಬ ಬಿರುದು !?
ಯಾರು ಕೇಳುವವರು ಇಲ್ಲ
ರಂಭೆ ,ಊರ್ವಶಿ, ಮೇನಕೆಯ ಮೈ ನೋವುಗಳ!

ಪುರುಷ ಕಚ್ಚಿ ಗಾಯ ಮಾಡಿದ
ಸ್ತನ, ರಟ್ಟೆ, ತೊಡೆ, ತುಟಿ, ಮೂಗು
ಹಣೆ, ಹೊಕ್ಕುಳದಲ್ಲಿ ನಿಂತ ಕಪ್ಪು ರಕ್ತ !
ಇದಕ್ಕೆ ಯಾವ ಮದ್ಯವ ಕುಡಿಯಬೇಕು?

ಯಾವ ಸಂಗೀತವ ಪಾಡಬೇಕು ?
ಯಾವ ದೇಹವ ತೋರಿ ನಗಬೇಕು ?

ಒಂದು ಹೂಜಿಯಲ್ಲಿ ಮದ್ಯ ,
ಮತ್ತೊಂದರಲಿ ರಕ್ತವ ಬಸಿದು
ಇಟ್ಟರು ,
ಮದ್ಯ ರಕ್ತವ ಕುಡಿಯುತಿತ್ತು ,
ರಕ್ತ ಮದದ ಮದ್ಯವ ಕುಡಿದು
ಮುಪ್ಪಾಗುತಿತ್ತು !


ವಯಸ್ಸಾದ ಮುದಿಯ ಪುರುಷನಿಗೆ
ಬಾಯಿ ತುಂಬಾ ಕಾಮದ ಸಾರಾಯಿ !
ಚಿಗುರಲ್ಲೇ ಮೊಗ್ಗಾಗುವ ಹುಡುಗಿಗೆ ,
ಅರಳುವ ಹೂಗಳ ತೋರಿಸಿ,
ಭೋಗಿಸುವ ಅಪೇಕ್ಷೆ ಮುದುಕನಿಗೆ!

೫.
ಒಮ್ಮೊಮ್ಮೆ  ಕುಡಿಯುತ್ತಿದ್ದ ಕವಿ
ಸದಾ ಕುಡಿಯಲು ಶುರುವಾದಾಗ ಕಾವ್ಯದ ಕುಡುಕನಾದ ,
ಕವಿ ಕುಡುಕನಾಗುವುದೆಂದರೆ
ಹೂ – ಕಾಯಾಗುವುದು ಎಂದರ್ಥ !

೬.
ಎರಡು ಮೋಡಗಳು ಮದವೆದ್ದು
ತುಟಿಗೆ ತುಟಿಯ ಇರಿಸಿ
ಮುದ್ದಾಡುವಾಗ
ಹನಿ ಕಾವ್ಯವಾಯಿತು,
ಈ ಮದವೇ ಮದ್ಯವಾಯಿತು !

2 comments

  1. ಸೂರ್ಯ ಕೀರ್ತಿ ವೈನ್ ಕವಿತೆಗಳು ಮನಮುಟ್ಟುವಂತಿದೆ ಓದಿದವರಿಗೆ ನಶೆ ಏರುವಂತೆವೆ, ಕಾಣದ ಆಸೆಗಳಿಗೆ, ಎಷ್ಟು ತಡೆದರೂ ತಡಿಯಲಿಕ್ಕೆ ಆಗದೆ ಭೋರ್ಗರೆಯುತ್ತಿರುವ ಕಾಮ, ಇಡಿಸಿ ಕೊಳ್ಳಲೇ ಬೇಕು ಅಂತ ಮನದಲ್ಲಿ ಪುಟಿದೇಳುತ್ತಿರುವ ಮನದಾಸೆ ಗಳನ್ನು ಮದ್ಯ ಸೇವಿಸಿ ಮನದೊಳಗೆ ಖುಷಿಪಡುವ ಕವಿಯ ಭಾವನೆಗಳು ವೈನ್ ಕವಿತೆಗಳಲ್ಲಿ ಸ್ಪಷ್ಟ ಕಾಣುತ್ತಿದೆ

Leave a Reply