ಒಂದು ಜೋಡಿ ಕಣ್ಣು !

ಅಶ್ಫಾಕ್ ಪೀರಜಾದೆ

ಆ ತೀರ ಅವನು ; ಈ ತೀರ ಇವನು
ನಡುವೆ ಝುಳು..ಝುಳು ಜೋಗುಳದ ನದಿ ನಾನು
ಇಬ್ಬರೂ ಬೇರೆ -ಬೇರೆಯಾದರು
ಜಲತಲದಲಿ ಒಂದೇ ಭೂಮಿಯ ಮಣ್ಣು
ಮೇಲೆ ಸೈತಾನ ನಿರ್ಮಿಸಿದ ಸರಹದ್ದು

ಅವನೊಬ್ಬ ಅಲ್ಲಾಹ..ಇವನೊಬ್ಬ ಈಶ್ವರ
ಇಬ್ಬರೂ ಒಂದೇ, ಹೆಸರು ಬೇರೆ ಬೇರೆ
ಆಶಯವೊಂದೇ ಪ್ರೇಮ.. ತ್ಯಾಗ.. ದಯೆ
ಆತ ಕಬೀರ.. ..ಈತ ಶರೀಫ
ಗುರಿಯೊಂದೇ ಮನುಜ-ಪ್ರೇಮ! ಮನುಜೊದ್ಧಾರ!!

ದಿನದ ಇಪ್ಪತ್ನಾಲ್ಕೂ ತಾಸು
ನನ್ನಾವರಿಸಿದ ಹಗಲು – ಇರುಳು
ಒಂದು ಗೋಚರ ; ಇನ್ನೊಂದು ಅಗೋಚರ
ಒಂದು ಅವ್ಯಕ್ತ ; ಮತ್ತೊಂದು ಅಭಿವ್ಯಕ್ತ

ಸೂರ್ಯ -ಚಂದ್ರ, ಬಯಲು-ಆಲಯ
ಭೂಮಿ- ಆಗಸ… ಬೆಳಗು-ಬೆಳದಿಂಗಳು
ಒಂದು ಜೀವನ ಸ್ಪೂರ್ತಿ;
ಮಗದೊಂದು ಬದುಕಿನ ಶಕ್ತಿ
ಇರ್ವವರನ್ನು ಸಮಸಮ
ಹೋಲಿಸಿ ಹೇಳುವುದಾದರೆ
ಇವು ನನಗೆ ಒಂದು ಜೊಡಿ ಕಣ್ಣು !!!

1 comment

Leave a Reply