ಮೌನ ಮಾತಿಗಿಳಿಯುತ್ತದೆ…

ಮಲ್ಲಮ್ಮ   ಜೊಂಡಿ


ಹೌದು,
ಒಮ್ಮೊಮ್ಮೆ ಮಾತಿಗಿಷ್ಟು ವಿರಾಮಕೊಟ್ಟು
ಮೌನ ಮಾತಿಗಿಳಿಯುತ್ತದೆ
ನಮ್ಮಿಬ್ಬರಲ್ಲಿ.
ಅಭಿಮಾನದ ಬಣ್ಣ ಬಳಿದುಕೊಂಡ
‘ಅಹಂ’ ನ ಗೋಡೆಗೆ ಕಣ್ಕುಕ್ಕುವ ಚಿತ್ತಾರ..

ನಿಂತ ನೀರಲ್ಲವದು
ಹುಣ್ಣಿಮೆಯು ಹೊತ್ತ ನಿರಂತರ ಅಲೆಗಳೋಟ
ಉಳಿದ ಮಾತಿನರಮನೆಯಲಿ
ಮೌನದೊಂದಿಗೆ ಸಂದಾನ ಸಭೆ
ಸಫಲವೊ, ವಿಫಲವೊ
ಜರುಗುತ್ತಿದೆ


ಸೋಲು ಗೆಲುವಿನ ಪ್ರಶ್ನೆಯಲ್ಲ
ಆಡುವ ಅನಿವಾರ್ಯತೆ
ಓಡಲಾಗದ ತೊಡಕು
ಭೂಮಿಗಂಟಿದ ಬೇರು
ಬೆಳೆಯುತ್ತಲಿದೆ

ಈಗೀಗ,
ಮೌನಕೂ ಮಂಪರು ಹಗಲಿನಲಿ
ಹೊದ್ದು ಮಲಗುವ ತವಕ
ತೆರಳುವ ಮಾತುಗಳಿಗೆ
‘ಧ್ವನಿ’ ತಾಕಬಲ್ಲದೆ?

 

Leave a Reply