ನುಡಿಯಲಾಗದ ಒಡಲ ಸತ್ಯಗಳು


ಅದೊಂದಿಷ್ಟು ನೆನಪುಗಳಿಗೆ ಭದ್ರವಾಗಿ ಬೀಗ ಹಾಕಿ ಎದೆಯಾಳದಲ್ಲಿ ಬಚ್ಚಿಟ್ಟಿದ್ದೆ. ಹೇಳಲೂ ಹೆದರುವಂತಹ ಸಂಗತಿಗಳವು. ನೆನಪಿಸಿಕೊಂಡಾಗಲೆಲ್ಲ ಮತ್ತೆ ಅನುಭವಿಸುತ್ತಿರುವನೇನೋ ಎಂಬಂತೆ ಭಾಸವಾಗುವ ನೆನಪುಗಳನ್ನು ಯಾರು ತಾನೆ ಕೆದಕಬಯಸುತ್ತಾರೆ?

ಹೆಪ್ಪುಗೆಟ್ಟಿದ್ದ ಅಂತಹ ಅನುಭವವನ್ನು ಮತ್ತೆ ಕೆದಕಿದ್ದು ಅವಳ ಜೀವನಗಾಥೆ. ಇಥಿಯೋಪಿಯಾದ ಮರಳುಗಾಡಿನಲ್ಲಿ ಹೂವಂತೆ ಅರಳಿದ ವಾರಿಸ್ ಡೆರಿಸ್ ಎಂಬ ರೂಪದರ್ಶಿಯ ಕಥೆಯನ್ನು ಓದುತ್ತಿರುವಂತೆಯೇ ನಾನು ಅನುಭವಿಸಿದ ನೋವುಗಳೆಲ್ಲ ಅದೆಷ್ಟು ಗೌಣ ಎಂದೆನಿಸಿ ಆ ಕ್ಷಣಕ್ಕೆ ಒಂದಿನಿತು ನಿರಾಳವಾದುದಂತೂ ಸತ್ಯ.

ಋತುಮಾನಕ್ಕನುಗುಣವಾಗಿ ಮೈದುಂಬಿ ಹೂದಳೆದು ಕಂಗೊಳಿಸುವ, ಭೂದೇವಿಯೇ ಹೆಣ್ಣೆಂದು ಸಂಭ್ರಮಿಸುವ ನಮ್ಮ ಸಂಸ್ಕ್ರತಿಯಲ್ಲಿ ಹೆಣ್ಣು ಮೈನೆರೆಯುವ ಕ್ರಿಯೆಯೊಂದು ಮೈಲಿಗೆಯೆಂಬ ನಂಬಿಕೆ ಅದು ಹೇಗೆ ಅಂಕುರಿಸಿತೋ ತಿಳಿಯದು.

ಕೆಲವು ಸಂಪ್ರದಾಯಗಳಲ್ಲಿ ಮೂರು ದಿನಗಳು, ಇನ್ನು ಕೆಲವರಲ್ಲಿ ನಾಲ್ಕು ದಿನಗಳು ಮೈಲಿಗೆಯ ದಿನಗಳೆಂದು ನಿಗದಿಯಾಗಿ ಹೆಣ್ಣುಗಳನ್ನು ಬದಿಗಿರಿಸಿದ್ದಂತೂ ಸತ್ಯ. ಮೈಥುನಾದಿ ಕ್ರಿಯೆಗಳಿಂದ ಹಿಡಿದು ಅಡುಗೆಯೇ ಇತ್ಯಾದಿ ಎಲ್ಲ ಕೆಲಸಗಳಿಂದ ಹೆಂಗಸರಿಗೆ ವಿಶ್ರಾಂತಿ ಸಿಗಲೆಂದು ಈ ಏರ್ಪಾಡು ಎಂಬುದನ್ನು ನಾವೆಲ್ಲರೂ ಕೇಳಿದ್ದೇವಾದರೂ, ಆಚರಣೆಯನ್ನು ಕಂಡುದಿಲ್ಲ. ನಮ್ಮ ಊರಿನಲ್ಲಿಯಂತೂ ಹೆಂಗಸರು ಆ ದಿನಗಳಲ್ಲಿ ಗಳಿಗೆಯಾದರೂ ವಿಶ್ರಾಂತಿ ಪಡೆದುದನ್ನು ನಾನು ಕಂಡಿಲ್ಲ. ಸೊಪ್ಪು, ಸೌದೆ ಎಂದು ಕಾಡಿಗೆ ಹೋಗುವುದು, ದನಕರುಗಳನ್ನು ಮೇಯಿಸುವುದು, ಹುಲ್ಲು ಹೊರೆಗಳನ್ನು ತರುವುದು, ಅಂಗಳ ಗುಡಿಸಿ, ಸಾರಿಸುವುದು, ತೋಟ ಹೊಲಗಳಿಗೆ ನೀರೂಡಿಸುವುದು, ಪಾತ್ರೆಗಳನ್ನು ತೊಳೆದುಕೊಡುವುದು ಹೀಗೆ ಅವರ ಕೆಲಸಕ್ಕೆ ಕೊನೆಯೆಂಬುದಿರಲಿಲ್ಲ.

ಆದಾಗ್ಯೂ ದೊಡ್ಡ ಮಹಡಿ ಮನೆಗಳಿರುವವರಿಗೆ ಎಲ್ಲರೆದುರು ಕುಳಿತು ಮೈಲಿಗೆಯೆಂದು ತಲೆತಗ್ಗಿಸುವ ಸನ್ನಿವೇಶಗಳಾದರೂ ಇರಲಿಲ್ಲ. ಕೆಲವು ಶ್ರೀಮಂತರ ಮನೆಗಳಲ್ಲಿ ಮುಟ್ಟಾದವರಿಗೆಂದೇ ಬೇರೆ ಕೋಣೆಗಳಿರುತ್ತಿರಲಾಗಿ ಆ ಮಟ್ಟಿಗೆ ಅವರಿಗೊಂದು ಪ್ರತ್ಯೇಕ ವ್ಯವಸ್ಥೆಯಿತ್ತು. ಆದರೆ ನಮ್ಮೆಲ್ಲರ ಬಾಲ್ಯದ ಸಂಗತಿಗಳು ಮಾತ್ರ ಭಿನ್ನವೇ ಆಗಿದ್ದವು.

ಇಡಿಯ ಮನೆಯಲ್ಲಿ ಅಡುಗೆ ಮನೆಯೊಂದನ್ನು ಹೊರತುಪಡಿಸಿ ಬೇರೆ ಕೋಣೆಯೇ ಇರದ್ದರಿಂದ ಆ ನಾಲ್ಕು ದಿನಗಳು ಹೊರಗಿನ ಚಾವಡಿಯ ಮೂಲೆಯಲ್ಲಿ ಒಂದು ಚಾಪೆ ಮತ್ತು ಬಿಂದಿಗೆಯನ್ನಿಟ್ಟುಕೊಂಡು ಕುಳಿತುಕೊಳ್ಳಬೇಕಿತ್ತು. ಬಂದವರಿಗೆಲ್ಲ ಚಾಪೆಯನ್ನು ಮುಟ್ಟದಿರುವಂತೆ ಹೇಳುತ್ತ ಇರುವುದೇ ಒಂದು ಕೆಲಸ. ತಪ್ಪಿ ಅವರೆಲ್ಲಿಯಾದರೂ ಮುಟ್ಟಿದರೆಂದರೆ ಅವರ ಎಲ್ಲ ಬಟ್ಟೆಯನ್ನೂ ಒಗೆಯುವ ಕೆಲಸ ನಮ್ಮದೆ.

ಊಟ, ತಿಂಡಿ ಎಲ್ಲವನ್ನೂ ಬಂದ ಅತಿಥಿಗಳ ಎದುರಿನಲ್ಲಿಯೇ ಮಾಡಬೇಕು. ತೀರ ಹಳ್ಳಿಯಾದ್ದರಿಂದ ಮನೆಗೆ ಬಂದವರೆಲ್ಲ ರಾತ್ರಿ ಉಳಿಯುವವರೆ. ಎಲ್ಲರಿಗೂ ಮಲಗಲು ಇರುವುದು ಚಾವಡಿ ಮಾತ್ರವೆ. ಆದ್ದರಿಂದ ಎಷ್ಟೋ ಸಲ ಮಲಗಲು ಜಾಗವಿಲ್ಲದೇ ಅಡಿಕೆ ಒಣಗಿಸಲೆಂದು ಮಾಡಿದ ಮಾಡಿನಡಿಯಲ್ಲಿ ಮಲಗಬೇಕು. ಅತ್ತಿತ್ತ ಹುಳು ಹುಪ್ಪಟೆಗಳ ಕಾಟ. ಹಾವು ಹಾಸಿಗೆಗೆ ಬಂದದೆಷ್ಟೋ ಸಲ! ಹೆಣ್ಣಿಗೆ ಇದೊಂದು ಜೀವಕ್ಕಂಟಿದ ಶಾಪ! ಎಂಬ ಉಪದೇಶವನ್ನು ಮಾತ್ರವೇ ಹಿರಿಯರಿಂದ ಪರಿಹಾರವಾಗಿ ಕೇಳಬಹುದಿತ್ತು.

ಆ ದಿನಗಳಲ್ಲಿ ಸ್ನಾನವಿಲ್ಲ. ಬಟ್ಟೆಯನ್ನು ಬದಲಾಯಿಸುವಂತೆಯೂ ಇಲ್ಲ. ಶಾಲೆಗೆ ಹೋಗುವವರಿಗೆ ಮಾತ್ರ ಕೊಂಚ ರಿಯಾಯಿತಿ. ಯುನಿಫಾರಂಅನ್ನು ಬದಲಾಯಿಸಬಹುದು. ಆದರೆ ಉಪಯೋಗಿಸಿದ ಎಲ್ಲ ಬಟ್ಟೆಯನ್ನೂ ನಾಲ್ಕನೇ ದಿನ ಸ್ನಾನ ಮಾಡುವಾಗ ಸೆಗಣಿ ನೀರಿನೊಂದಿಗೆ ಶುದ್ಧಗೊಳಿಸಿ ತೊಳೆಯಬೇಕು. ಅದೂ ಸ್ನಾನದ ಮನೆಗೆ ಪ್ರವೇಶವಿಲ್ಲ, ಹತ್ತಿರದಲ್ಲಿರುವ ಹೊಳೆಗೆ ಹೋಗಿ ಎಲ್ಲವನ್ನೂ ಒದ್ದೆಮಾಡಿ, ತಣ್ಣೀರಿನಲ್ಲಿ ಮುಳುಕು ಹಾಕಿ ಗಡಗಡನೆ ನಡುಗುತ್ತಾ ಬಂದ ಮೇಲಷ್ಟೇ ಸ್ನಾನದ ಮನೆಗೆ ಪ್ರವೇಶ.

ಆಗಿನ್ನೂ ಶೌಚಗ್ರಹಗಳೆಂಬ ಕಲ್ಪನೆಯೂ ಸುಳಿಯದ ಕಾಲ. ಇನ್ನು ನ್ಯಾಪಕಿನ್ನು ಅದೂ ಇದೂ ಅಂತೂ ದೂರವೇ ಉಳಿಯಿತು. ಮೆದುವಾದ ಕಾಟನ್ ಬಟ್ಟೆ ಸಿಕ್ಕಿದರೆ ಅದೇ ಪುಣ್ಯ. ಅದನ್ನು ತೊಳೆಯಲೂ ನೀರಿಗಾಗಿ ಇತರರನ್ನು ಬೇಡಬೇಕು. ಅವರು ಕೊಡುವ ಒಂದೋ ಎರಡೋ ಬಿಂದಿಗೆ ನೀರಿನಲ್ಲಿ ಎಲ್ಲವೂ ಮುಗಿಯಬೇಕು. ಬೆಳಕು ಹರಿಯುವ ಮೊದಲೇ ಅದನ್ನೆಲ್ಲ ಮುಗಿಸಿ ಮುಗ್ಗಲು ಬಟ್ಟೆಯನ್ನು ಹಾಸಿಗೆಯಡಿಯಲ್ಲೇ ಒಣಗಿಸಿಕೊಳ್ಳಬೇಕು. ಹೊರಗೆಲ್ಲಾದರೂ ಒಣಗಿಸಿ ಅದನ್ನು ಹಾವುಗಳೇನಾದರೂ ಮೂಸಿದರೆ ಸರ್ಪಶಾಪ ತಟ್ಟುವುದೆಂಬ ಭೀತಿ.

ಕೊನೆಯ ದಿನದ ಬೆಳಿಗ್ಗೆ ಸ್ನಾನ ಮಾಡುವ ಮೊದಲು ಆ ಬಟ್ಟೆಗಳನ್ನೆಲ್ಲ ಮಣ್ಣಿನಲ್ಲಿ ಗುಂಡಿತೋಡಿ ಹೂಳಬೇಕು. ಮುಂದಿನ ತಿಂಗಳಿಗೆ ಬೇರೆಯೇ ಬಟ್ಟೆ. ಎರಡು, ಮೂರು ಹೆಣ್ಣುಮಕ್ಕಳಿರುವ ಮನೆಗಳಲ್ಲಂತೂ ಬಟ್ಟೆಯನ್ನು ಪೂರೈಸುವುದೇ ಅಮ್ಮಂದಿರಿಗೊಂದು ಸವಾಲು.

ಹೀಗೆ ಬೆಳಗಿನ ಜಾವ ತೊಟ್ಟ ಬಟ್ಟೆಯಲ್ಲಿ ಶಾಲೆ, ಓದು ಎಲ್ಲವನ್ನೂ ಮುಗಿಸಿ ರಾತ್ರೆಯವರೆಗೂ ಇರಬೇಕು. ಹಾಗಾಗಿಯೇ ಬೊಂತೆಗಟ್ಟಲೆ ಬಟ್ಟೆಯನ್ನು ತೊಡೆಯ ನಡುವೆ ತುರುಕಿಕೊಳ್ಳಬೇಕು. ಒದ್ದೆಯಾದ ಬಟ್ಟೆಯನ್ನಿಟ್ಟುಕೊಂಡು ನಾಲ್ಕಾರು ಮೈಲು ನಡೆದು ಶಾಲೆಯಿಂದ ಮನೆ ತಲುಪುವಾಗ ತೊಡೆಗಳ ನಡುವೆ ಆಳವಾದ ಗಾಯಗಳು.

ದಿನಕಳೆದಂತೆ ಇನ್ನಷ್ಟು ಆಳವಾಗುತ್ತಾ ನಡೆಯುವ ರೀತಿಯನ್ನು ನೋಡಿಯೇ ತರಗತಿಯ ಹುಡುಗರೆಲ್ಲ ಗುಸುಗುಸು ಮಾಡಿ ನಗುತ್ತಿದ್ದರು. ಇವರಿಗೆಲ್ಲ ಗೊತ್ತಾಯಿತೆ ಎಂಬ ಮುಜುಗರ. ಶಾಲೆಗಳಲ್ಲಂತೂ ಮರದಡಿಯಲ್ಲೇ ಶೌಚಕ್ರಿಯೆ ನಡೆಸುವ ಸಂಭ್ರಮವಾದ್ದರಿಂದ ಆ ದಿನಗಳಲ್ಲಿ ಮೂತ್ರ ಬಂದು ಜೀವಹೋಗುವಂತಾದರೂ ಮಾಡಲಾಗದು. ಅದಕ್ಕೆ ಕಂಡುಕೊಳ್ಳುವ ಸುಲಭದ ಉಪಾಯವೆಂದರೆ ನೀರನ್ನೇ ಕುಡಿಯದೇ ದಿನಗಳೆಯುವುದು. ಒಂದು ತಿಂಗಳ ಗಾಯ ಇನ್ನೇನು ಮಾಸುತ್ತದೆಯೆನ್ನುವಾಗ ಇನ್ನೊಮ್ಮೆ ಎಲ್ಲದರ ಪುನರಾವರ್ತನೆ. ಇವೆಲ್ಲವೂ ನೂರಾರು ವರ್ಷಗಳ ಹಿಂದಿನ ವಿವರಗಳೇನಲ್ಲ. ಪೂರ್ವಜನ್ಮವೋ ಎಂಬಂತೆ ದಾಖಲಾದ ಇದೇ ಜೀವನದ ಸ್ವಯಂಅನುಭವದ ಸಾಲುಗಳು.

ಮೈಲಿಗೆಯೆಂಬ ಈ ಸ್ವರೂಪದ ಆಚರಣೆ ಊರಿಗೆ ಬಸ್ಸು ಬರುವುದರೊಂದಿಗೆ ಒಂದಿಷ್ಟು ಅಲ್ಲಾಡಿದ್ದಂತೂ ಸತ್ಯ. ಬಸ್ಸಿನಲ್ಲಿ ಮನೆಯವರೆಲ್ಲ ಒಟ್ಟಿಗೆ ಬಂದಾಗ ಮನೆಗೆ ಬಂದು ಮೈಲಿಗೆ ತೆಗೆಯುವುದೋ ಬೇಡವೋ ಎಂಬುದೊಂದು ಮಹತ್ತರ ಚರ್ಚೆಯಾಗಿ ಆ ಕಾಲದಲ್ಲಿ ಹೊರಹೊಮ್ಮಿತು. ಸ್ವಲ್ಪ ವಿತಂಡವಾದವನ್ನು ಮೈಗೂಡಿಸಿಕೊಂಡ ನಾವೆಲ್ಲರೂ, “ಅದೆಲ್ಲ ಸರಿ, ಬಸ್ಸಿನಲ್ಲಿ ಯಾರ್ಯಾರು ಮೈಲಿಗೆಯಾಗಿದ್ದರೋ ಯಾರಿಗೆ ಗೊತ್ತು?” ಎಂದು ಸಂಶಯದ ಗುಂಗಿಹುಳವನ್ನು ದೊಡ್ಡವರ ತಲೆಯೊಳಗೆ ಬಿಟ್ಟು ಕಾಡುತ್ತಿದ್ದೆವು.

ಕೆಲವು ದಿನ ನಮಗೆ ಗೊತ್ತಾದರೆ ಮಾತ್ರ ಮೈಲಿಗೆ ಎನ್ನುತ್ತಾ ಮೈಲಿಗೆ ತೆಗೆಯುತ್ತಿದ್ದವರು ನಿಧಾನಕ್ಕೆ ಒಂದೇ ಸೀಟಿನಲ್ಲಿ ಕುಳಿತರೆ ಮಾತ್ರ ಮೈಲಿಗೆ ಎಂಬ ನಿರ್ಧಾರಕ್ಕೆ ಬಂದರು. ಹೆಂಗಸರಿಗಾದರೆ ಚಿಂತೆಯಿರಲಿಲ್ಲ, ಈ ಗಂಡಸರದೇ ಕಷ್ಟ. ಬರಿಯ ಬಟ್ಟೆಯನ್ನು ಒದ್ದೆಮಾಡಿದರಾಗಲಿಲ್ಲ, ಅವರ ಜನಿವಾರವನ್ನೂ ಬದಲಾಯಿಸಬೇಕು. ಇಲ್ಲವಾದಲ್ಲಿ ಊಟ ಮಾಡಲು ಅವಕಾಶವಿಲ್ಲದಂತಾಗಿ ಒಂದು ಬಗೆಯಲ್ಲಿ ಪೆಚ್ಚಾದರು. ಕೊನೆಗೊಮ್ಮೆ ಪದೇ ಪದೇ ಜನಿವಾರ ಬದಲಾಯಿಸುವ ಗೋಜು ಬೇಡವೆಂದು ಬಸ್ಸಿಗೆ ಮೈಲಿಗೆಯಿಲ್ಲ ಎಂದು ಸಾರಿದರು.

ಆದರೂ ಕೆಲವೊಮ್ಮೆ ತೀವ್ರ ಮುಜುಗರದ ಸಂದರ್ಭಗಳೂ ಒದಗಿಬರುತ್ತಿದ್ದವು. ಊರಿಗೆ ಯಾರ ಮನೆಗೇ ಆಗಲಿ, ಪೂಜೆಗೆ ಬರುವ ಪುರೋಹಿತರು ಮೊದಲ ದಿನವೇ ನಮ್ಮ ಮನೆಗೆ ಬರುವದು ವಾಡಿಕೆ. ಊರಿಗೆ ಒಂದೇ ಬಸ್ ಇರುವುದರಿಂದ ಮೈಲಿಗೆಯ ಆ ದಿನಗಳಲ್ಲಿ ಅವರೊಂದಿಗೆ ನಾವೂ ಬರಲೇಬೇಕು. ಹಾಗೆ ಒಟ್ಟಿಗೆ ಮನೆಗೆ ಬಂದವರು ಅವರೆದುರು ಹೊರಗೆ ಚಾಪೆಯಿಟ್ಟು ಕುಳಿತರೆ ಅವರ ಮೈಲಿಗೆ ತೆಗೆಯದೇ ಆದೀತೆ? ಅವರಿಗೆ ಶಾಸ್ರ್ತೋಕ್ತ ಜನಿವಾರ, ಹೋಮ ಎಲ್ಲ ವ್ಯವಸ್ಥೆ ಮಾಡುವುದಾದರೂ ಹೇಗೆ?

ಅದಕ್ಕೆಂದೇ ಅಮ್ಮ ಉಪಾಯವೊಂದನ್ನು ಹೆಣೆದಿದ್ದರು. ಅವರೊಂದಿಗೆ ಬಂದ ನಾವು ಮನೆಯ ಹಿಂದೆ ಮಾಡಿನಡಿಯಲ್ಲಿ ರಾತ್ರಿಯವರೆಗೂ ಕುಳಿತಿರುವುದು, ರಾತ್ರಿ ಅವರು ಊಟಕ್ಕೆ ಹೋದ ಸಮಯ ನೋಡಿ ಅಮ್ಮ ತಂದಿಡುವ ಅವಲಕ್ಕಿಯನ್ನೋ, ದೋಸೆಯನ್ನೋ ಗಬಗಬನೆ ತಿಂದು ಹಾಸಿಗೆಯಲ್ಲಿ ಮುಸುಕು ಹಾಕಿ ಮಲಗಿಬಿಡುವುದು. ಬೆಳಿಗ್ಗೆ ಅವರು ಏಳುವ ಮುನ್ನವೇ ಹಾಸಿಗೆಯೊಂದಿಗೆ ಮಾಯವಾಗಿಬಿಡುವುದು. ಕೆಲವು ಮನೆಗಳಲ್ಲಂತೂ ಹೆಂಗಸರು ಹೊರಗಾದರೆಂದರೆ ಅಡುಗೆ ಮಾಡುವವರಿಲ್ಲದೇ ಪುಟ್ಟ ಪುಟ್ಟ ಮಕ್ಕಳು ಪರದಾಡುವುದನ್ನು ನೋಡಲಾಗುತ್ತಿರಲಿಲ್ಲ. ಒಂಟಿ ಹೆಂಗಸರಿರುವ ಮನೆಗಳಾದರೆ ಮುಗಿಯಿತು, ಅವರ ಮೈಲಿಗೆಯ ದಿನಗಳಲ್ಲಿ ಊಟ ಹಾಕುವುದನ್ನೇ ಮುಂದಿಟ್ಟುಕೊಂಡು ತಿಂಗಳಿಡೀ ಅವರಿಂದ ಬಿಟ್ಟಿಕೆಲಸ ಮಾಡಿಸಿಕೊಳ್ಳುತ್ತಿದ್ದರು.

ಬಾಂಬೆ, ಬೆಂಗಳೂರಿನಂತಹ ನಗರಗಳಿಗೆ ಹೋಗಿಬಂದ ಕೆಲವು ಹುಡುಗಿಯರು ಅಲ್ಲಿ ಮನೆಗಳಲ್ಲಿಯೂ ಈ ರೀತಿಯ ಆಚರಣೆಯನ್ನು ಮಾಡಬೇಕಿಲ್ಲ ಎಂಬುದನ್ನು ಹೇಳಿದಾಗಲೆಲ್ಲ ಆ ಊರುಗಳು ಸ್ವರ್ಗವೆಂಬಂತೆ ಭಾಸವಾಗುತ್ತಿದ್ದವು. ಋತುಸ್ರಾವದ ತೀರ ಮೊದಲಿನ ವರ್ಷಗಳಲ್ಲಿ ಇನ್ನು ನಮ್ಮ ಓರಗೆಯ ಹುಡುಗರಿಗೆ ಯಾವುದರಲ್ಲೂ ನಾವು ಸ್ಪರ್ಧೆಯೊಡ್ಡಲು ಸಾಧ್ಯವಿಲ್ಲವೆಂಬ ನಿರಾಶ ಭಾವ ಅನೇಕ ಸಲ ಕಾಡಿದ್ದಿದೆ. ಅಮ್ಮನನ್ನೋ ಅಥವಾ ಇತರ ಹಿರಿಯರನ್ನೋ ಈ ಬಗ್ಗೆ ಪ್ರಶ್ನಿಸಿದಾಗಲೆಲ್ಲ “ಅದು ಹಾಗೆಯೇ, ಮೈನೆರೆದ ಮೇಲೆ ಮುಗಿಯಿತು. ಹೆಣ್ಣು ಜನ್ಮವೇ ಶಾಪ” ಎಂಬ ಹತಾಶೆಯ ಮಾತುಗಳೇ ಕೇಳಿಬರುತ್ತಿದ್ದವು.

ಇದರೊಂದಿಗೆ ಊರಿನಲ್ಲಿ ಮಾಡಲು ಕೆಲಸವಿಲ್ಲದ ಕೆಲವರಿಗಂತೂ ಹೆಣ್ಣುಮಕ್ಕಳ ತಿಂಗಳದಿನವನ್ನು ಲೆಕ್ಕ ಇಡುವುದೇ ಕೆಲಸವಾಗಿತ್ತು. ಹೊರಗೆ ಕುಳಿತುಕೊಳ್ಳಲು ಒಂದೆರಡು ದಿನ ತಡವಾದರೂ ವಿಚಾರಿಸಿ, ಲೇವಡಿ ಮಾಡುತ್ತಿದ್ದರು. ಹಾಗೆ ಮನೆಯಲ್ಲಿ ಅಮ್ಮಂದಿರಿಂದ ಸಣ್ಣ ವಿಚಾರಣೆಯೂ ನಡೆಯುತ್ತಿತ್ತು. ಬಿಡದೇ ಕಾಡುವ ಹೊಟ್ಟೆನೋವಿನ ಆ ದಿನಗಳಲ್ಲಿ ತೋಟದ ಮೂಲೆಯಲ್ಲೆಲ್ಲೋ ಅಡಿಕೆ ಹಾಳೆಯನ್ನೇ ಹಾಸಿಗೆಯಾಗಿಸಿಕೊಂಡು ಕಳೆದ ಗಳಿಗೆಗಳು ಅದೆಷ್ಟೋ?

ಮುಂದೆ ಕಾಲೇಜಿನ ದಿನಗಳಲ್ಲಿ ದೇಹಪ್ರಕೃತಿಗೆ ಸಂಬಂಧಿಸಿದ ಹತ್ತಾರು ಪುಸ್ತಕಗಳನ್ನು ಓದಿ, ತಿಳುವಳಿಕೆ ಪಡೆದುದಲ್ಲದೇ ಅವೆಲ್ಲವನ್ನೂ ಹತ್ತಿರದವರಿಗೆ ದಾಟಿಸಿದ್ದಾಯ್ತು. ಬದುಕಿನ ಸೂತ್ರ ನಮ್ಮ ಕೈಗೆ ಬಂದಾಗ ಮೊದಲು ಮಾಡಿದ ಕೆಲಸವೇ ಮೈಲಿಗೆಯ ಆ ದಿನಗಳನ್ನು ತೊಡೆದುಹಾಕಿದ್ದು. ಮುಂದೆ ಶಿಕ್ಷಕಿಯಾಗಿಯೂ ಎಲ್ಲ ವಿದ್ಯಾರ್ಥಿನಿಯರಿಗೆ ಸಾಧ್ಯವಾದಾಗಲೆಲ್ಲ ಈ ಬಗ್ಗೆ ವೈಜ್ಞಾನಿಕ ಮಾಹಿತಿಗಳನ್ನು ನೀಡುವುದು ನನ್ನ ನೆಚ್ಚಿನ ಕೆಲಸವಾಗಿತ್ತು.

ರಾಜ್ಯಸರ್ಕಾರದ ಕಿಶೋರಿಯರ ತರಬೇತಿ ಕಾರ್ಯಕ್ರಮದಲ್ಲಿ ಇಡಿಯ ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ನಡೆಸುವಾಗಲೆಲ್ಲ ಅದೆಂಥದ್ದೋ ಒಂದು ಧನ್ಯತಾಭಾವ! ಇಂದಿಗೂ ಕೂಡ ಹದಿಹರೆಯದ ವಿದ್ಯಾರ್ಥಿಗಳೊಂದಿಗೆ ಆಪ್ತಸಂವಾದ ನಡೆಸುವುದು ನನ್ನ ನೆಚ್ಚಿನ ಕಾರ್ಯಕ್ರಮವಾಗಿದೆ. ನನ್ನ ಮೊದಲ ಪುಸ್ತಕ “ಹದಿಹರೆಯದ ಕನಸುಗಳೊಂದಿಗೆ” ಇದೇ ಕಥೆಯನ್ನು ಹೇಳುತ್ತದೆ. ಆ ದಿನಗಳನ್ನು ನನ್ನಷ್ಟಕ್ಕೇ ಗೌಪ್ಯವಾಗಿಡುವ ಮತ್ತು ಎಲ್ಲ ದಿನಗಳಂತೆ ಕಳೆಯುವ ಅಹ್ಲಾದತೆಯೇ ನನ್ನ ಮಟ್ಟಿಗಂತೂ ಒಂದು ದೊಡ್ಡ ಬಿಡುಗಡೆ. ಅದನ್ನು ಬಹಿರಂಗಗೊಳಿಸುವಂತೆ ಆಗ್ರಹಿಸುವ ಯಾವ ದೈವದರ್ಶನವೂ, ಮಂಗಲ ಕಾರ್ಯವೂ ನನಗೆ ಬೇಡ.

ವಿಶ್ರಾಂತಿಯೆಂಬ ವಿಶಾಲ ಪರಿಕಲ್ಪನೆಯಡಿಯಲ್ಲಿ ಆಚರಿಸುವ ಒಂದು ಸಣ್ಣ ಸಂಪ್ರದಾಯದ ಕೆಲವು ಆಯಾಮಗಳನ್ನಷ್ಟೆ ನಾನಿಲ್ಲಿ ತೆರೆದಿಟ್ಟಿರುವೆ. ‘ಯೆಸ್, ಐ ಬ್ಲೀಡ್’ ಆಂದೋಲನ ಶುರುವಾದಾಗ ಕೆಲವರೆಲ್ಲ ಮುಟ್ಟಿನ ಕಾರಣಕ್ಕೆ ಕೆಲವು ವಿಶೇಷ ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡದ್ದನ್ನೋ ಅಥವಾ ನ್ಯಾಪ್ಕಿನ್ ಗಳನ್ನು ಮರೆತುಹೋಗಿ ಒದ್ದಾಡಿದ್ದನ್ನೋ, ಬಟ್ಟೆಯ ಮೇಲೆ ಕಲೆ ಕಂಡು ಅವಮಾನ ಅನುಭವಿಸಿದ್ದನ್ನೋ ಬರೆದುಕೊಳ್ಳುವಾಗಲೂ ನನ್ನೊಡಲಿನ ಬೆಂಕಿಯಂತಹ ಈ ನೆನಪುಗಳನ್ನು ಹಂಚಿಕೊಳ್ಳಬೇಕೆಂದು ಅನಿಸಿರಲೇ ಇಲ್ಲ. ಆದರೆ ವಾರಿಸ್‍ಳ ಕಥೆಯನ್ನು ಓದಿದಾಗ ವಿಶ್ವದಾದ್ಯಂತ ಇರುವ ಹೆಣ್ಣಿನ ಕುರಿತಾಗಿನ ಆಚರಣೆಗಳ ಕ್ರೌರ್ಯ ನನ್ನನ್ನು ನಿಬ್ಬೆರಗಾಗಿಸಿತು. ಜಗತ್ತಿನ ಮೂಲೆ ಮೂಲೆಯಲ್ಲಿಯೂ ಹೆಣ್ಣುಗಳ ಮೇಲೆ ಮೈಲಿಗೆ ಚಾರಿತ್ರ್ಯಗಳ ನೆಪದಲ್ಲಿ ರೂಪಿತವಾದ ಆಚರಣೆಗಳು ನಮ್ಮನ್ನೆಲ್ಲ ಒಗ್ಗೂಡಿಸಿವೆಯಲ್ಲ ಎನಿಸಿತು.

ವಾರಿಸ್ ಕಳೆದ ಶತಮಾನದ ತೊಂಬತ್ತರ ದಶಕದ ಬಹುಪ್ರಸಿದ್ಧ ರೂಪದರ್ಶಿ. ಆದರೆ ಅದಕ್ಕಿಂತ ಮೊದಲು ಅವಳೊಬ್ಬ ಸಾಮಾನ್ಯ ಅಲೆಮಾರಿ ಜನಾಂಗದ ಕೂಸು. ಕುರಿ ಸಾಕಣಿಕೆ ಅವರ ಕುಲಕಸುಬು. ಸಾಲಲ್ಲಿ ಹನ್ನೆರಡು ಮಕ್ಕಳ ನಡುವೆ ಹುಟ್ಟಿದವಳು ವಾರಿಸ್. ಇಥಿಯೋಪಿಯಾದ ಮರಳುಗಾಡಿನಲ್ಲಿ ನೀರನ್ನರಸಿ ಅವಳ ಕುಟುಂಬ ಅಲೆಯುತ್ತಾ ಸಾಗುತ್ತಿತ್ತು. ಶಿಕ್ಷಣವೆಂಬದು ಅವಳ ಬದುಕಿನಲ್ಲಿ ಕನಸಿನ ಮಾತು.

ಆದರೆ ಅಮ್ಮನ ತುಂಬುಪ್ರೀತಿಯೇ ಅವರಿಗೆಲ್ಲರಿಗೂ ಸ್ವರ್ಗದಂತಹ ಆಸರೆ. ಅವಳ ಅಪ್ಪನಿಗೋ ತನ್ನ ಹೆಣ್ಣುಮಕ್ಕಳು ಅಪ್ಪಟ ಕನ್ಯೆಯರೆಂದು ಸಾಬೀತುಪಡಿಸುವ ಹಂಬಲ. ಅದಕ್ಕೆ ಸಾಕ್ಷಿಯಾಗಿರಬೇಕಾದದ್ದೇ ಯೋನಿಛೇದನವೆಂಬ ಕರಾಳ ಆಚರಣೆ. ಏನೇನೂ ವೈದ್ಯಕೀಯ ಜ್ಞಾನವಿಲ್ಲದ ಹೆಂಗಸೊಬ್ಬಳು, ಯಾವುದೇ ಅರವಳಿಕೆಯ ನೆರವಿಲ್ಲದೇ ಹೆಣ್ಣಿನ ಯೋನಿಯ ಹೊರ ಅಂಗಗಳನ್ನೆಲ್ಲ ಕತ್ತರಿಸಿ, ಯೋನಿದ್ವಾರವನ್ನು ಒಂದು ರಂಧ್ರವನ್ನು ಮಾತ್ರ ಬಿಟ್ಟು ಹೊಲಿಯುವ ಕ್ರಿಯೆಯೇ ಯೋನಿಛೇದನ! ಮೂತ್ರ, ಋತುಸ್ರಾವ ಎಲ್ಲವೂ ಆ ರಂಧ್ರದ ಮೂಲಕವೇ ನಿಧಾನವಾಗಿ ಹೊರಬರಬೇಕು ಮತ್ತು ಅದೊಂದು ಅತ್ಯಂತ ಯಾತನಾಮಯ ಗಳಿಗೆ ಕೂಡ.

ಇದೊಂದು ಹೆಣ್ಣಿನ ಪಾವಿತ್ರ್ಯವನ್ನು ಸಾರುವ ಕ್ರಿಯೆ. ಮದುವೆಯ ನಂತರವಷ್ಟೇ ಅವಳ ಯೋನಿಗೆ ಹಾಕಿದ ಹೊಲಿಗೆಗಳನ್ನು ಬಿಚ್ಚಿ, ಸಂಭೋಗಕ್ಕೆ ಅವಕಾಶ ನೀಡಲಾಗುತ್ತಿತ್ತು. ವಾರಿಸ್‍ನ ಅಕ್ಕ ಅದಾಗಲೇ ಈ ಕ್ರಿಯೆಗೆ ಒಳಪಟ್ಟಿದ್ದರಿಂದ ಎಲ್ಲರೂ ಅವಳ ಗುಣಗಾನ ಮಾಡುತ್ತಿದ್ದರು. ಅವಳನ್ನು ಹೆಚ್ಚಿನ ಬೆಲೆ ಕೊಟ್ಟು ಶ್ರೀಮಂತ ವ್ಯಕ್ತಿಯೊಬ್ಬರು ಮದುವೆಯನ್ನೂ ಆಗಿದ್ದರು. ಹಾಗಾಗಿ ವಾರಿಸ್‍ಗೆ ಐದರ ಹರೆಯದಲ್ಲೇ ತಾನೂ ಅಪ್ಪಟ ಕನ್ಯೆಯಾಗುವ ಹಂಬಲ. ಅದನ್ನವಳು ತನ್ನ ಅಮ್ಮನೊಂದಿಗೆ ಕೇಳುತ್ತಿದ್ದಳು ಕೂಡ.

ಆ ಕರಾಳ ದಿನ ದೂರವೇನೂ ಇರಲಿಲ್ಲ. ಒಂದು ದಿನ ಬೆಳಿಗ್ಗೆ ಅಮ್ಮ ವಾರಿಸ್‍ಳಿಗೆ ಕುಡಿಯಲು ನೀರನ್ನೂ ಕೊಡದೇ ಊರ ಹೊರಗಿನ ಮರದ ನೆರಳಿರುವ ಜಾಗಕ್ಕೆ ಕರೆದುಕೊಂಡು ಹೋದಳು. ಅಲ್ಲಿ ಒಬ್ಬಳು ವಿಚಿತ್ರ ಹೆಂಗಸು ಒಂದು ಪೆಟ್ಟಿಗೆಯೊಂದಿಗೆ ಇವಳಿಗಾಗಿ ಕಾಯುತ್ತಿದ್ದಳು. ವಾರಿಸ್‍ನ ಅಮ್ಮ ಮಗಳಿಗೆ ಹೇಳಿದಳು, “ಮಗು, ನೀನು ತುಂಬ ಧೈರ್ಯಶಾಲಿ ತಾನೆ? ಎಷ್ಟು ನೋವಾದದರೂ ಈ ಅಮ್ಮನಿಗಾಗಿ ತಡೆದುಕೊಳ್ಳುವಿಯಲ್ಲ?” ವಾರಿಸ್ ಹೌದೆಂಬಂತೆ ತಲೆಯಲ್ಲಾಡಿಸಿದಳು.

ಅಮ್ಮ ಅವಳ ಕಾಲುಗಳನ್ನು ಅಗಲಿಸಿ ಗಟ್ಟಿಯಾಗಿ ಹಿಡಿದುಕೊಂಡಳು. ಆ ಹೆಂಗಸು ಕತ್ತಿಯಂಥದ್ದೇನೋ ಆಯುಧದಿಂದ ವಾರಿಸ್‍ಳ ಯೋನಿಛೇದನವನ್ನು ಮಾಡಿದಳು. ರಕ್ತ ಸೋರುತ್ತಿದ್ದ ತೊಡೆಯ ನಡುವೆಯೊಂದಿಷ್ಟು ಹಳೆಯ ಬಟ್ಟೆಯನ್ನು ತುರುಕಿ ಮಾಯವಾದಳು. ಛಿದ್ರವಾದ ಅವಳ ಅಂಗಗಳೆಲ್ಲ ಅಲ್ಲಿಯೇ ಚೆಲ್ಲಾಡಿದ್ದವು. ಅಮ್ಮ ಅವಳನ್ನೊಮ್ಮೆ ಮುದ್ದಿಸಿ, ಅಳುತ್ತಿರುವ ಅವಳನ್ನು ಅಲ್ಲಿಯೇ ಬಿಟ್ಟು ಬಿರಬಿರನೆ ಮನೆಯಕಡೆ ನಡೆದಳು!

ಸಂಜೆ ಅಮ್ಮ ತಿರುಗಿ ಅಲ್ಲಿಗೆ ಬರುವಾಗ ವಾರಿಸ್ ಬದುಕಿದ್ದುದೇ ಒಂದು ಪವಾಡ. ಅಮ್ಮನ ಸಂತೋಷಕ್ಕೆ ಪಾರವಿರಲಿಲ್ಲ. ಅವಳನ್ನೆತ್ತಿಕೊಂಡು ಮನೆಗೆ ಬಂದಳು. ತಿಂಗಳಿನವರೆಗೂ ಅವಳಿಗೆ ಸ್ವಲ್ಪವೇ ನೀರನ್ನು ಕೊಡುತ್ತಿದ್ದಳು. ಪ್ರತಿಸಲ ಅವಳು ಮೂತ್ರ ಮಾಡುವಾಗಲೂ ಜೀವ ಹೋಗುವಂತಹ ನೋವಾಗುತ್ತಿತ್ತು. ಇವೆಲ್ಲವೂ ನಿನ್ನ ಒಳ್ಳೆಯದಕ್ಕೇ, ಇದರಿಂದ ನಿನಗೆ ಒಳ್ಳೆಯ ಗಂಡ ಸಿಗುತ್ತಾನೆ ಎಂದು ಭರವಸೆ ತುಂಬುತ್ತಿದ್ದಳು. ಆದರೆ ಆ ಭರವಸೆ ಹುಸಿಯಾಗುವ ದಿನಗಳು ದೂರವಿರಲಿಲ್ಲ. ಒಳ್ಳೆಯ ಜಾತಿಯ ಕುರಿಗಳ ಆಸೆಗಾಗಿ ಅವಳ ತಂದೆ ಅವಳನ್ನು ನಡುವಯಸ್ಸು ಮೀರಿದ ವ್ಯಕ್ತಿಯೊಬ್ಬನಿಗೆ ಮದುವೆಮಾಡಿಕೊಡಲು ತುದಿಗಾಲಲ್ಲಿ ನಿಂತಿದ್ದರು.

ವಾರಿಸ್‍ಳ ಒಳಗೊಂದು ಸುಪ್ತಚೈತನ್ಯ ಗುಪ್ತಗಾಮಿನಿಯಾಗಿ ಹರಿಯುತ್ತಿತ್ತೆಂದು ಕಾಣುತ್ತದೆ. ನಡುವಯಸ್ಸು ಮೀರಿದ ಅವನೊಂದಿಗೆ ಮದುವೆಯಾಗಿ, ಮತ್ತದೇ ಯಾತನಾಮಯ ಬದುಕನ್ನು ಒಪ್ಪಿಕೊಳ್ಳು ಹನ್ನೆರಡು ವರ್ಷದ ವಾರಿಸ್ ಸಿದ್ದಳಿರಲಿಲ್ಲ. ಅಮ್ಮನೂ ಅವಳ ಬೆಂಬಲಕ್ಕೆ ನಿಲ್ಲಲಿಲ್ಲ. ದೂರದ ಮೊಗದಿಶುವಿನಲ್ಲಿ ತನ್ನ ಚಿಕ್ಕಮ್ಮನೊಬ್ಬಳಿದ್ದಾಳೆ ಎಂಬ ವಿಷಯವನ್ನವಳು ಅಮ್ಮನಿಂದ ತಿಳಿದಿದ್ದಳು. ಹೇಗಾದರೂ ಮಾಡಿ ಮೊಗದಿಶುವನ್ನು ತಲುಪಬೇಕು ಎಂಬುದಷ್ಟೇ ಅವಳ ಮುಂದಿನ ಗುರಿಯಾಯಿತು.

ಅಸಾಧ್ಯವಾದ ಆ ಮರಳುಗಾಡಿನಲ್ಲವಳು ಬರಿಗಾಲಿನಲ್ಲಿ ಓಡತೊಡಗಿದಳು. ಅವಳ ಅಪ್ಪನಿಗಿಂತ ಜೋರಾಗಿ ಓಡಬೇಕು ಎಂಬುದು ಮಾತ್ರ ಅವಳಿಗೆ ತಿಳಿದಿತ್ತು. ಅನ್ನಾಹಾರಗಳ ಪರಿವೆಯಿಲ್ಲದ ಓಟವದು. ಮಾರ್ಗಮಧ್ಯದಲ್ಲಿ ಸಿಂಹದ ಬಾಯಿಯವರೆಗೂ ಅವಳು ಹೋಗಿಬಂದಳು. ಸಿಂಹ ಅವಳನ್ನು ಮೂಸಿ ಅಲ್ಲಿಂದ ಮಾಯವಾಯಿತು. ಗುರುತು ಪರಿಚಯವಿಲ್ಲದ ವ್ಯಕ್ತಿಗಳ ಟ್ರಕ್ ಏರಿ, ಅವರ ಆಕ್ರಮಣದಿಂದ ಉಪಾಯವಾಗಿ ತಪ್ಪಿಸಿಕೊಂಡು ಅವಳು ಮೊಗದಿಶುವನ್ನು ತಲುಪಿದ್ದೇ ಒಂದು ಪವಾಡ!

ಅಲ್ಲಿಗೇ ನಿಲ್ಲಲಿಲ್ಲ ಅವಳ ಪಯಣ. ಕೆಲಸದ ಆಯಾ ಆಗಿ ಇಂಗ್ಲಂಡಿಗೂ ಹೋದಳು. ದಿನವಿಡೀ ದುಡಿತ, ಭಾಷೆ ಬಾರದ ದೇಶ, ತನ್ನವರಿಲ್ಲದ ಪರಿಸ್ಥಿತಿ. ಎಲ್ಲವನ್ನೂ ಮೀರಿನಿಂತ ಅವಳೊಳಗಿನ ಜೀವಚೈತನ್ಯ ಅದೆಲ್ಲಿಂದ ಬಂತೊ? ಅವಳನ್ನು ಕೆಲಸಕ್ಕೆ ಕರೆದುಕೊಂಡು ಹೋದವರು ಪುನಃ ಇಥಿಯೋಪಿಯಾಕ್ಕೆ ಹೊರಟಾಗ ವಾರಿಸ್ ಮಾತ್ರ ಹಿಂದಿರುಗಲಿಲ್ಲ. ವಿದೇಶದಲ್ಲಿ ವಾಸಿಸಲು ಅನುಮತಿ ಪತ್ರವಿಲ್ಲದೆಯೂ ಅಲ್ಲಿಯೇ ಉಳಿಯುವ ತೀರ್ಮಾನ ಮಾಡಿದಳು.

ಪರಿಚಯದವರೊಬ್ಬರ ಕ್ಯಾಂಟೀನಿನಲ್ಲಿ ಕೆಲಸ ಮಾಡತೊಡಗಿದಳು. ಅಲ್ಲವಳು ಆಕಸ್ಮಿಕವಾಗಿ ಪ್ರಸಿದ್ಧ ಛಾಯಾಗ್ರಾಹಕರಾದ ಟೆರೆನ್ಸ್ ಡೊರೋವಾನ್‍ರ ಕಣ್ಣಿಗೆ ಬಿದ್ದಳು. ಇದೊಂದು ಪವಾಡದ ಗಳಿಗೆಯಾಗಿ ಹೊರಹೊಮ್ಮಿತು. ದಿನಕಳೆಯುವುದರೊಳಗಾಗಿ ವಾರಿಸ್ ಪಿರೆಲಿ ಕ್ಯಾಲೆಂಡರ್ ಎಂಬ ಪತ್ರಿಕೆಯ ಮುಖಪುಟದಲ್ಲಿ ದಾಖಲಾದಳು. ಜೊತೆಯಲ್ಲಿಯೇ ಜೇಮ್ಸ್ ಬ್ಯಾಂಡ್ ಚಲನಚಿತ್ರದಲ್ಲಿ ನಟಿಸುವ ಅವಕಾಶವೂ ಅವಳಿಗೆ ಒದಗಿಬಂತು. ಇಷ್ಟೆಲ್ಲ ಆದಾಗಲೂ ಅವಳನ್ನು ಸಂಪರ್ಕಿಸುವವರಿಗೆ ನೀಡಲು ಅವಳಿಗೊಂದು ಖಾಯಂ ವಿಳಾಸವೂ ಇರಲಿಲ್ಲ!

ರೂಪದರ್ಶಿಯಾಗಿ, ನಟಿಯಾಗಿ ವಾರಿಸ್‍ಳ ಕಲಾ ಬದುಕಿನ ಗ್ರಾಫ್ ಏರುತ್ತಲೇಹೋಯಿತು. ಅಂದು ಜಗತ್ತಿನ ಪ್ರಸಿದ್ಧ ಸೌಂದರ್ಯ ಪ್ರಸಾದನ ಕಂಪನಿಗಳಾದ ರೆವ್ಲಾನ್ ಮತ್ತು ಚಾನೆಲ್ ಉತ್ಪನ್ನಗಳಿಗೆ ಅವಳು ರೂಪದರ್ಶಿಯಾದಳು. ಆಗ ಅವಳಿಗೆ ಕೇವಲ ಇಪ್ಪತ್ತರ ಹರೆಯ. ಆದರೆ ಅವಳೊಳಗೆ ತಾನು ಓಡಿಬಂದ ಮರಳುಗಾಡಿನ ಚಿತ್ರಣವೇ ನೆನಪಾಗಿ ಕಾಡುತ್ತಿತ್ತು. ಹೇಳಿಕೇಳಿ ಅವರ ಕುಟುಂಬದ್ದು ಅಲೆಮಾರಿ ಬದುಕು. ಅವಳಿಗೆ ತಾಯಿಯನ್ನು ನೋಡುವ ಹಂಬಲ ಎಡೆಬಿಡದೇ ಕಾಡತೊಡಗಿತು.

ತಾಯಿಯನ್ನು ಅರಸಿಕೊಂಡು ಮರಳುಗಾಡಿನಲ್ಲಿ ಅವಳು ಅಲೆದಳು. ಕೊನೆಗೂ ಪತ್ತೆಹಚ್ಚುವಲ್ಲಿ ಯಶಸ್ವಿಯೂ ಆದಳು. ಅದೊಂದು ಅಪೂರ್ವವಾದ ಗಳಿಗೆ. ಮರಳುಗಾಡಿನಲ್ಲಿ ಕಳೆದುಹೋದ ಮಗಳು ಇಡಿಯ ಜಗತ್ತಿನ ಗಮನವನ್ನು ಸೆಳೆಯುತ್ತಿರುವ ವಿಷಯ ಆ ತಾಯಿಗೆ ಅರ್ಥವಾಗುವುದಾದರೂ ಹೇಗೆ? ಅಮ್ಮನನ್ನು ತನ್ನೊಡನೆ ಕರೆಯುತ್ತಾಳೆ ವಾರಿಸ್. ಆದರೆ ಅಮ್ಮ ಅಪ್ಪನ ಎರಡನೆಯ ಹೆಂಡತಿಗೆ ಹುಟ್ಟಿದ ಐದು ಮಕ್ಕಳ ಪಾಲನೆ ಪೋಷಣೆಯ ಹೊಣೆಯಿಂದ ಹಿಂದೆ ಸರಿಯಲಾರೆ ಎಂದು ನಿರಾಕರಿಸುತ್ತಾಳೆ. ತಾಯಿಯ ಆರ್ದೃ ಹೃದಯದ ಮಾತು ವಾರಿಸ್‍ಳನ್ನು ಕಣ್ಣೀರಾಗಿಸುತ್ತದೆ. ಅವಳು ಒಂದಿಷ್ಟು ಹಣವನ್ನು ಅವರಿಗಾಗಿ ನೀಡಿ ಮರಳುತ್ತಾಳೆ.

ಇಷ್ಟಾಗಿಯೂ ವಾರಿಸ್ ಯಾವುದೇ ಗಂಡಸರೊಂದಿಗೆ ಬೆರೆಯುವುದಿಲ್ಲ. ಅವಲ ತೊಡೆಯ ನಡುವಿನ ಗುಟ್ಟು ಹಾಗೆಯೇ ಉಳಿಯುತ್ತದೆ, ಬಾಲ್ಯದ ನೋವಿನ ನೆನಪಾಗಿ. ಗೆಳತಿಯೊಬ್ಬಳಿಗೆ ಒಮ್ಮೆ ವಿಷಯ ತಿಳಿದು ಇವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪುನಃ ಶಸ್ತ್ರಚಿಕಿತ್ಸೆ ಮಾಡಿಸುತ್ತಾಳೆ. ಸುದೀರ್ಘ ಎರಡು ದಶಕಗಳ ನೋವಿನ ಯಾತ್ರೆಯೊಂದು ಹೀಗೆ ಕೊನೆಗೊಳ್ಳುತ್ತದೆ. ಮುಂದೆ ಹೆರಾಲ್ಡ್ ಜಾಕ್ಸನ್‍ನನ್ನು ಮದುವೆಯಾಗುವ ಡೆರಿಸ್ ಅಲೀಕೆ ಎಂಬ ಮುದ್ದುಮಗುವಿನ ತಾಯಿಯೂ ಆಗುತ್ತಾಳೆ.

ಇಷ್ಟೇ ಆಗಿದ್ದರೆ ವಾರಿಸ್‍ಳ ಹೋರಾಟ ಒಂದು ಚೆಂದದ ಸಿನೆಮಾ ಕಥೆಯಾಗಿಯಷ್ಟೇ ಉಳಿಯುತ್ತಿತ್ತು. ಆದರೆ ಅವಳು ಮುಂದೆ ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿ ಬದಲಾಗುತ್ತಾಳೆ. ತಮ್ಮ ಜನಾಂಗದಲ್ಲಿ ಪ್ರಚಲಿತವಿರುವ ಯೋನಿಛೇದನವೆಂಬ ಅನಿಷ್ಠ ಪದ್ದತಿಯನ್ನು ತೊಡೆದುಹಾಕಲು ಕಟಿಬದ್ದಳಾಗುತ್ತಾಳೆ. ಅನೇಕ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದರೂ, ಅನೇಕ ಸಲ ಅವಳ ಮೇಲೆ ಆಕ್ರಮಣಗಳು ನಡೆದರೂ ಎದೆಗುಂದದೇ ಅಭಿಯಾನವನ್ನು ಮುನ್ನಡೆಸುತ್ತಾಳೆ. ತನ್ನ ಆತ್ಮಚರಿತ್ರೆ ‘ಡೆಸರ್ಟ್ ಫ್ಲವರ್’ ಅನ್ನು ಪ್ರಕಟಿಸಿ ಇಡಿಯ ಜಗತ್ತಿನೆದುರು ಸ್ತ್ರೀಯರಿಗಾಗುತ್ತಿರುವ ದೌರ್ಜನ್ಯದ ಅರಿವನ್ನು ಮೂಡಿಸುತ್ತಾಳೆ. ‘ಡೆಸರ್ಟ್ ಫ್ಲವರ್ ಫೌಂಡೇಶನ್’ ಸ್ಥಾಪಿಸುತ್ತಾಳೆ. ಅವಳ ಜೀವನಗಾಥೆ ‘ಡೆಸರ್ಟ್ ಫ್ಲವರ್’ ಚಲನಚಿತ್ರವಾಗಿಯೂ ಪ್ರಸಿದ್ಧಿಯಾಗಿದೆ.

ವಿಶ್ವಸಂಸ್ಥೆಯ ಶಾಂತಿ ರಾಯಭಾರಿಯಾಗಿಯೂ ಅವಳು ಕೆಲಸ ನಿರ್ವಹಿಸಿದ್ದಾಳೆ. ಸೋಮಾಲಿಯ, ಇಥಿಯೋಪಿಯಾ ಮೊದಲಾದ ಆಫ್ರಿಕನ್ ಬುಡಕಟ್ಟು ಜನಾಂಗದಲ್ಲಿ ತೊಂಭತ್ತರ ದಶಕದಲ್ಲಿ 130 ಮಿಲಿಯನ್‍ಗಿಂತಲೂ ಹೆಚ್ಚು ಜನ ಮಹಿಳೆಯರು ಈ ಕ್ರೂರವಾದ ಆಚರಣೆಗೆ ಒಳಗಾಗಿದ್ದರೆಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯೇ ಬಹಿರಂಗಪಡಿಸಿದೆ. ಅವರೆಲ್ಲರ ನೋವಿಗೆ ದನಿಯಾಗಿ ಮತ್ತು ಪರಿಹಾರ ರೂಪವಾಗಿ ಒದಗಿಬಂದವಳು ಡೆರಿಸ್ ವಾರಿಸ್. 2000ನೇ ಇಸವಿಯಲ್ಲಿ ವರ್ಷದ ಮಹಿಳೆಯಾಗಿ ಆಯ್ಕೆಯಾದ ಡೆರಿಸ್‍ಗೆ ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗಳು ದಕ್ಕಿವೆ. ಮರಳುಗಾಡಿನಲ್ಲಿ ಮರೆಯಾಗಿಹೋಗಬೇಕಿದ್ದ ಕಪ್ಪು ಹುಡುಗಿಯೊಬ್ಬಳ ಜಗದ ಅನೇಕ ಹೆಣ್ಣುಗಳ ನೋವಿಗೆ ದನಿಯಾದ ಪವಾಡಸದೃಶ ಕಥೆಯಿದು.

ಕ್ರೌರ್ಯಗಳೆಲ್ಲ ಹೆಣ್ಣುಗಳಿಗೇ ಯಾಕೆ ಅಂಟಿಕೊಳ್ಳುತ್ತವೆಯೋ ತಿಳಿಯದು. ತಾಯಿಯೊಬ್ಬಳು ಮಗುವನ್ನು ಹೆತ್ತು ಮಲಗಿದರೂ ಮೈಲಿಗೆಯೆಂದು ದೂರವಿಡುವ ಕಾಲವೂ ಇತ್ತಲ್ಲ. ನಾನು ಮಗುವನ್ನು ಹೆತ್ತ ಆ ವರ್ಷ ನಮ್ಮ ಹಳ್ಳಿಯಲ್ಲಿ ಅದೆಂತಹ ಚಳಿಯೆಂದರೆ ಅಪ್ಪ ಹೀಗೆ ನೆನಪಿಸಿಕೊಳ್ಳುತ್ತಿದ್ದರು. “ಇಂಥದ್ದೇ ಚಳಿಗಾಲದಲ್ಲಿ ನನ್ನ ಚಿಕ್ಕಮ್ಮ ತನ್ನ ಹತ್ತನೇ ಮಗುವನ್ನು ಹೆತ್ತಳು. ಆಗೆಲ್ಲ ಬಾಣಂತಿ ಮೈಲಿಗೆಯೆಂದು ಹನ್ನೆರಡು ದಿನ ಬಚ್ಚಲಿನಲ್ಲಿಯೇ ಮಲಗಬೇಕಿತ್ತು. ಹತ್ತನೇ ದಿನ ಬೆಳಗಾಗುವಾಗ ಅವಳ ಮೈ ಕೊರಡಾಗಿತ್ತು.” ಮತ್ತೆ ಮದುವೆಯಾದ ಅಪ್ಪನ ಚಿಕ್ಕಪ್ಪನಿಗೆ ಇನ್ನೂ ಐದು ಮಕ್ಕಳು ಹುಟ್ಟಿದವು! ಹಾಗೆಂದು ನೆನಪಿಸಿಕೊಂಡ ಅಪ್ಪ ನನ್ನನ್ನು ಎಲ್ಲ ಮೈಲಿಗೆಯ ಹಂಗು ತೊರೆದು ಬೆಚ್ಚಗಿರುವ ಅಡುಗೆ ಮನೆಯಲ್ಲೇ ಮಲಗಲು ಬಿಟ್ಟಿದ್ದರು.

ಅದೆಷ್ಟೋ ಮಹಿಳೆಯರು ಸರಿಯಾಗಿ ಮಾತು ಬರುವ ಮೊದಲೇ ನಡುವಯಸ್ಕರನ್ನು ಮದುವೆಯಾಗಿ ಬಹುಬೇಗ ವಿಧವೆಯರಾಗಿದ್ದರು. ತಲೆಯನ್ನು ಬೋಳಿಸಿಕೊಂಡು ಕೆಂಪು ಸೀರೆಯನ್ನುಟ್ಟು, ಅವರಿವರ ಸೇವೆ ಮಾಡುತ್ತಾ, ಬತ್ತಿ ಹೊಸೆಯುತ್ತಾ ತಮ್ಮ ಇಡಿಯ ಬದುಕನ್ನು ಸವೆಸಿದರು. ಕದ್ದು ಬಸಿರಾದವರನ್ನಂತೂ ಊರು ಬಹಿಷ್ಕಾರದ ಶಿಕ್ಷೆ ವಿಧಿಸಿ ಹೊರಗಟ್ಟುತ್ತಿತ್ತು. ಇಂದಿಗೂ ಮನೆಯ ಹಬ್ಬ, ಹರಿದಿನಗಳ ಆಚರಣೆಗೆಂದು, ಶುಭಕಾರ್ಯಗಳ ಪೂರೈಕೆಗೆಂದು ತಮ್ಮ ಮುಟ್ಟನ್ನು ಮಾತ್ರೆಗಳಿಂದ ಮುಂದೂಡುತ್ತಲೇ ಇದ್ದಾರೆ ನನ್ನೂರಿನ ಅದೆಷ್ಟೋ ಮಹಿಳೆಯರು. ಕನ್ಯಾಪೊರೆಯೇ ಹೆಣ್ಣಿನ ಪಾವಿತ್ರ್ಯತೆಯ ಗುರುತೆಂದು ಭಾವಿಸಿ ಹೆಂಡತಿಯರ ಮೇಲೆ ಸಂಶಯಿಸುವ ಗಂಡಂದಿರು ಇಂದಿಗೂ ಇದ್ದಾರೆ. ಅದಕ್ಕೆಂದೇ ಕೃತಕ ಕನ್ಯಾಪೊರೆಯನ್ನು ಹೊಲಿಯುವ ಶಸ್ತ್ರಕ್ರಿಯೆ ಇಂದಿಗೂ ಧಾರಾಳವಾಗಿ ನಡೆಯುತ್ತಿದೆ ಎಂದರೆ ನೀವು ನಂಬಲೇಬೇಕು. ಇವೆಲ್ಲವೂ ಹೆಣ್ಣಿನ ನಿಗೂಢಲೋಕದ ಭಾಗಗಳು.

ಹಾದೀಲಿ ಹೋಗ್ವೋರೆ| ಹಾಡೆಂದು ಹೇಳಬೇಡಿ|
ಹಾಡಲ್ಲ ನನ್ನ ಒಡಲುರಿ…… ಎನ್ನುತ್ತಾಳೆ ಹಳ್ಳಿಯ ಗರತಿಯೊಬ್ಬಳು. ಒಡಲೊಳಗೆ ಬೆಂಕಿಯಂತೆ ಸುಡುತ್ತಾ, ಮಾತಾಗದ ಇನ್ನದೆಷ್ಟು ಆಚರಣೆಗಳು ಸಂಸ್ಕøತಿ, ಸಂಪ್ರದಾಯಗಳ ಹೆಸರಿನಲ್ಲಿ ನಡೆಯುತ್ತಿವೆಯೋ ಬಲ್ಲವರಾರು? ಮುಟ್ಟಾದವರನ್ನು ಮುಟ್ಟೆನೆಂದು ಬೆಟ್ಟವೇರಿ ಕುಳಿತ ದೇವನೇ ಬಲ್ಲ.

4 comments

  1. ಕರುಳು ಕಿತ್ತು ಬರುತ್ತೆ ಓದುವಾಗಲೇ ಕಣ್ಣಲ್ಲಿ ನೀರು ಬಂತು. ನಾವು ಚಿಕ್ಕವರಿರುವಾಗ ಅಮ್ಮನನ್ನು ಬೇಕೆಂತಲೇ ಮುಟ್ಟು ತಿದ್ದೇವು. ಪರಿಹಾರ ಆಮೇಲೆ ಹೋಗಿ ಸೆಗಣಿ ಮೆಟ್ಡುವುದು. ಎಲ್ಲಾ ಹೆಣ್ಣು ಮಕ್ಕಳ ಮನದ ಮಾತು ತೆರೆದಿಟ್ಟಿದ್ದೀರಿ.

Leave a Reply