ಇತಿವೃತ್ತ

ಡಾ . ಅಜಿತ್ ಹರೀಶಿ 


ಅಪ್ಪನಿಷ್ಟ ಅಷ್ಟೇ ಅಲ್ಲವದು; ಹೋರಾಟ
ವಿದ್ಯೆಗಾಗಿ ಅಡವಿಟ್ಟರೆಲ್ಲಾ ತೋಟ
ಹಣ ಸಾಲದೆ ಅಮ್ಮನ ಚಿನ್ನದ ಸಾಲ
ಮನೆಯ ನೆನಪಲಿ ಮನವು ವ್ಯಾಕುಲ

ಮಸ್ತಕದ ಮಜಲು ಮುಚ್ಚಿದ ಪುಸ್ತಕಗಳು
ಉರುಹೊಡೆದು ಕಲಿತ ಹಂತಗಳು
ಆ ರಾತ್ರಿಗಳಲಿ ಹರೆಯದ ಬಯಕೆಗಳು
ತೊರೆದು ಪದವಿಗಾಗಿ ಸವೆದ ದಿನಗಳು

ಹಣಕಾಸಿನ ನೆರವಿಗೆ ಎಡತಾಕಿ
ಆಸ್ಪತ್ರೆ ಕಟ್ಟಿ, ಫಲಕ ತೂಗುಹಾಕಿ
ಸರತಿಗಾಗಿ ಕಾಯುವುದು ಆರಂಭದಲ್ಲಲ್ಲ
ವ್ಯವಹಾರದ ಚಕ್ರಕೆ ಸಿಲುಕಿ
ರೋಗಿಯ ಕಿಸೆ ಅರಸಿ ಮನಕಲಕಿ
ವರ್ಷಗಳ ವೃತ್ತಿಪರತೆಯ ಫಲವೆಲ್ಲ


ಕರ್ತವ್ಯ ಮುಗಿಸಿ, ಡೆಟಾಲ್ ತಾಗಿಸಿ
ಕೈ ತೊಳೆದು ಬಾಯಿ ಮುಕ್ಕಳಿಸಿ
ಬಂದಾಗ ಮಗಳಾಗಲೇ ಪವಡಿಸಿ
ಜಾರಿದ್ದ ಹೊದಿಕೆ‌ ಹೊದೆಸಿ
ಪಲ್ಲಂಗವೇರಿ ಮುತ್ತಮತ್ತಿನ ಹೊತ್ತು
ಮತ್ತೆ ಕರೆ ಬಂತು ತುರ್ತು

ಏನಾದರೂ ಮಾಡಿ ಉಳಿಸೆಂದವರು
ವೆಚ್ಚಭರಿಸುವಾಗ ಹಣದಾಹಿಯೆಂದರು
ಇಂತಹವರ ಕೊಳೆಗಳನು ತೊಳೆಯುತ
ಆರ್ತನ ಒಳಗೂ ಸಾಗುತ
ಸಾವಿನವರೆಗೂ ವೃತ್ತಿನಿರತ

ವಾಸಿಯಾದ ಸಂತಸ ಹಂಚುವರು
ಉಲ್ಬಣಿಸಿದರೆ ಶಪಿಸುವರು
ಪ್ರತಿಕ್ರಿಯೆಗಳಿಗೆ ಮನ ಕದಲದು
ಸಮಷ್ಟಿಯೊಳಿತೇ ಉನ್ನತ ಧ್ಯೇಯ
ನರನಿಗೆ ಅಯನ ತೋರುವ ವೈದ್ಯ.

1 comment

  1. ಪ್ರಸ್ತುತ ಕವಿತೆ ವೈದ್ಯನ ಅಂತರಾಳದ ಪಿಸುಮಾತುಗಳನ್ನು ಪಿಸುಗುಡುತ್ತಿದೆ ಚೆನ್ನಾಗಿದೆ ಸಾರ್ ಕವಿತೆ

Leave a Reply