ಸೋಜಿಗದ ಬಿಂದುವಿನ ಎದುರು ಒಂದು ಸಂಜೆ..

ಇಪ್ಪತ್ತಾರು ವರ್ಷಗಳ ಜೀವಿತಾವಧಿಯಲ್ಲಿ ನನ್ನನ್ನು ಆಳವಾಗಿ ಕಲಕಿದ, ನನ್ನ ಆಲೋಚನೆಗಳನ್ನು ಟಿಸಿಲೊಡೆಯುವಂತೆ ಮಾಡಿದಂತಹ ವ್ಯಕ್ತಿತ್ವ ಯಾವುದಿರಬಹುದು ಎಂದು ಸ್ಮೃತಿಯನ್ನು ಕೆದಕುತ್ತಹೋದಂತೆ, ಅದೊಂದು ಮೂರ್ತಿ ಕಣ್ಣೆದುರು ಬಂದು ನಿಲ್ಲುತ್ತದೆ. ಅದು ಅಮ್ಮನ ಹುಟ್ಟೂರಿನವನಾದ ಕೀರ್ತಿ. ಕೀರ್ತಿ ಎಂದರೆ ನನ್ನ ವಯೋಮಾನದ ಹುಡುಗನಲ್ಲ. ಅವನು ಅದಾಗಲೇ ನೆರೆತ ಬಿಳಿಗೂದಲಗಳನ್ನು ಮುಡಿಯ ಅರ್ಧದಷ್ಟು ತುಂಬಿಕೊಂಡಿದ್ದಾನೆ. ನಲವತ್ತೈದರ ಅಂಚಿಗೆ ಬಂದು ತಲುಪಿರುವ ಅವನ ಕಣ್ಣುಗಳು ಹರಿಯುವ ತೊರೆಗೆ ವಿರಮಿಸುವ ಅನುವು ಮಾಡಿಕೊಡುವ ತಗ್ಗಿನಂತೆ ಆಳಕ್ಕಿಳಿದಿವೆ. ಮುಖ ಕಾಂತಿಹೀನವಾಗಿ ಬರಿದಾಗಿದ್ದು, ಸದಾಕಲಾವೂ ಮಾಸಿದ ಅಂಗಿಯೊಂದನ್ನು ಮೈಗೇರಿಸಿಕೊಂಡಿರುತ್ತಾನೆ.

ಪುಟ್ಟ ಹುಡುಗನಾಗಿದ್ದ ದಿನಗಳಿಂದಲೂ ಕೀರ್ತಿಯನ್ನು ಹೆಸರು ಬಳಸಿಯೇ ಕೂಗುವುದು ಅಭ್ಯಾಸ. ಅವನು ಹಿರಿಯ ಎನ್ನುವ ಆಲೋಚನೆಯೇ ನನ್ನನ್ನು ಒಮ್ಮೆಯೂ ಸೇರಲಿಲ್ಲ. ಅವನಿಗೂ ನಾನು ಕೀರ್ತಿ ಎಂದರಷ್ಟೇ ಸೇರುತ್ತದೆ. ತನ್ನ ಬಡಕಲು ಹೆಗಲ ಮೇಲೆ ಕೂರಿಕೊಂಡು ನನ್ನನ್ನು ಆಟವಾಡಿಸಿದ ದಿನಗಳಿಂದ ಆರಂಭವಾಗಿ ಈಗ ಅವನದೇ ಎತ್ತರಕ್ಕಿರುವ ನನ್ನ ಹೆಗಲ ಮೇಲೆ ತನ್ನ ತೋಳುಗಳನ್ನ ಬಳಸಿ ಹರಟೆ ಕೊಚ್ಚುವು ಇವತ್ತಿಗೂ ಅವನು ಅದೇ ಮುಗ್ದತೆಯನ್ನು ಉಳಿಸಿಕೊಂಡಿದ್ದಾನೆ. ಬದುಕಿನ ಬಗ್ಗೆ ಅಷ್ಟೇ ಕುತೂಹಲವನ್ನು ಕಾಪಿಟ್ಟುಕೊಂಡಿದ್ದಾನೆ.

“ಕೀರ್ತಿ ಇದು ನಿನಗೆ ಗೊತ್ತಾ?” ಎಂದು ಅವನಿಗೆ ಅಪರಿಚಿತವಾದದ್ದನ್ನು ತೆಗೆದು ತೋರಿದರೆ ಬಟ್ಟಲುಗಣ್ಣುಗಳನ್ನು ಅರಳಿಸುತ್ತಾ, ಧ್ಯಾನಿಸಿ ಆಳಕ್ಕಿಳಿಸಿಕೊಳ್ಳುತ್ತಾನೆ.

ನಾನು ಕೇಳಿದ ಅದೆಷ್ಟೋ ಕತೆಗಳ ರೂವಾರಿ ಕೀರ್ತಿ. ಅವನು ಯಾವುದೇ ಬಿಂದುವಿನಿಂದ ಬೇಕಾದರೂ ಕತೆಗಳನ್ನು ಆರಂಭಿಸಿಬಿಡಬಲ್ಲವನು. ಕಾವೇರಮ್ಮನವರ ಬಂಗಲೆಯನ್ನು ಹೆಸರಿಸುವ ಮೂಲಕ ಕತೆ ಆರಂಭಿಸಿದರೆ, ಊರಿನ ಮೂಲೆಯಲ್ಲಿದ್ದ ಗಣಪತಿರಾಯರ ತೋಟದ ಬಾವಿಯಲ್ಲಿ ಸಾಯುವ ಹುಡುಗನ ಕುರಿತು ಹೇಳುತ್ತಾ ಕತೆಯನ್ನು ಮುಗಿಸಿಬಿಡುತ್ತಿದ್ದ. ಕೀರ್ತಿ ಹೇಳಿದ ಅದೆಷ್ಟೋ ಕತೆಗಳಲ್ಲಿ ನಮ್ಮ ಎದುರು ಓಡಾಡುವವರೇ ಪಾತ್ರಗಳಾಗಿಬಿಡುತ್ತಿದ್ದರು. ಕೆಲವೊಮ್ಮೆ ಕತೆಗಳನ್ನು ಹೇಳುತ್ತಲೇ ತೊದಲುತ್ತಾ, ಹೊರಳಿಸುತ್ತಾ ಅರ್ಧಕ್ಕೆ ನಿಲ್ಲಿಸಿಬಿಡುತ್ತಿದ್ದ. ಮೌಖಿಕವಾಗಿ ಹೇಳುವಾಗಲೂ ಬರಿಯ ರೂಪಕಗಳಲ್ಲೇ ಕತೆಯನ್ನು ತುಂಬಿಸಿಬಿಡುತ್ತಿದ್ದ ಕೀರ್ತಿ ಪ್ರಶ್ನೆಗೆ ಸ್ಥಳವನ್ನೇ ಬಿಡುತ್ತಿರಲಿಲ್ಲ. ಬಹುಶಃ ನಾನು ಬದುಕಿನಲ್ಲಿ ಎದುರಾದ ಮೊದಲ ಸೋಜಿಗ ಎಂದರೆ ಅದು ಇವನೇ.

ಆದರೆ ಕೀರ್ತಿ ಎಂದರೆ ಸುತ್ತಲೂ ಕಾಡಿನಿಂದಲೇ ಆವರಿಸಿಕೊಂಡಿರುವ ಆ ಪುಟ್ಟ ಊರಿನ ಪಾಲಿಗೆ ದೊಡ್ಡ ಸೋಮಾರಿ. ಅವನ ಬದುಕಿನ ಶೈಲಿ ಇಡೀ ಊರಿಗೆ ಅದೊಂದು ಬಗೆಯಲ್ಲಿ ಅಪಥ್ಯೆ. ಮನೆಯಲ್ಲಿ ಯಾರಾದರೂ ಬೆಳಗ್ಗೆ ಎಂಟರ ನಂತರವೂ ಮಲಗಿದ್ದರೆ ಅಥವಾ ತೋಟದಲ್ಲಿ ನಿರೀಕ್ಷೆಯಂತೆ ಕೆಲಸ ಮಾಡದೇ ಹೋದರೆ “ಏನಪ್ಪಾ ನೀನು ಬರ್ತಾ, ಬರ್ತಾ ಕೀರ್ತಿ ಆಗ್ತಾ ಇದ್ಯಲ್ಲಾ” ಎಂದು ಸಿಟ್ಟಾಗುವ ಮೊದಲಿನ ಉದಾಹರಣೆಯನ್ನಾಗಿ ಅವನನ್ನು ಬಳಸಿಕೊಳ್ಳುತ್ತಿದ್ದರು.

ಆದರೆ ಊರಿನ ಬಹುಪಾಲು ಜನರು ತಮ್ಮ ವಯಕ್ತಿಕ ದೃಷ್ಠಿಕೋನದ ಹೊರತಾಗಿ ಕೀರ್ತಿಯ ಆಂತರ್ಯವನ್ನು ತಲುಪುದರಲ್ಲಿ ಸೋತಿದ್ದಾರೆ ಎನ್ನುವುದೇ ನನ್ನ ಯಾವತ್ತಿನ ನಂಬಿಕೆ. ಕೀರ್ತಿ ಬದುಕನ್ನು ಎಂದಿಗೂ ಸಂಕೀರ್ಣವಾಗಿಸಿಕೊಂಡವನಲ್ಲ. ಇಲ್ಲದ ಕನಸುಗಳನ್ನು ತನ್ನೊಳಗೆ ಭಿತ್ತಿಕೊಂಡವನಲ್ಲ. ಮತ್ತೊಬ್ಬರಿಗೆ ತಪ್ಪಿಯೂ ಭರವಸೆಯನ್ನು ನೀಡುವವನಲ್ಲ. ಅವನು ಇರುವುದನ್ನು ಮಾತ್ರವಷ್ಟೇ ಅನುಭವಿಸುವವನು. ಕೀರ್ತೀ ಅಂತಹ ಹಳ್ಳಿಯಲ್ಲಿದ್ದುಕೊಂಡೇ ಕನ್ನಡ ಸಾಹಿತ್ಯದಲ್ಲಿ ಎಂ.ಎ ಓದಿಕೊಂಡಿದ್ದವನು. ಇಂಗ್ಲಿಷ್ ಅವನಿಗೆ ಕನ್ನಡದಷ್ಟೇ ಸಲೀಸು.

ಕಾಲೇಜು ಮುಗಿಸಿದ ನಂತರ ಊರಿನ ಹೊಳೆಯನ್ನು ದಾಟಿದ ನಂತರ ಸಿಗುವ ಗುಡಿಯಲ್ಲಿ ದಿನಕ್ಕೆ ಎರಡು ಬಾರಿ ಪೂಜೆ ಮಾಡಿ ಬರುವುದು ಅವನ ನಿತ್ಯದ ಕೆಲಸವಾಗಿತ್ತು. ಮದುವೆಗೆ ಮೊದಲು ಅವನಪ್ಪ ಮಾಡುವ ಆ ನೇಮವನ್ನ ಅವನ ಮುಂದುವರೆಸಿದ್ದ. ಮನೆಯಲ್ಲಿನ ಉಳಿದವರಂತೆ ತೋಟ, ಗದ್ದೆ ಮಾಡುವುದರಲ್ಲಿ ಅಷ್ಟು ಆಸಕ್ತಿ ತೋರಿದವನಲ್ಲ ಅವನು. ಸದ್ಯ ಗುಡಿಯ ಪೂಜೆಯನ್ನು ಮಾಡಿದರೆ ಸಾಕು. ತೋಟದ ಕೆಲಸ ಬೇಡ ಎನ್ನುವುದನ್ನು ಮನೆಯವರೇ ಅನಧಿಕೃತವಾಗಿ ಒಪ್ಪಿಕೊಂಡುಬಿಟ್ಟಿದ್ದರು. ಓದಿಕೊಂಡವನು, ಮುಂದೊಂದು ದಿನ ಊರಿನಲ್ಲೇ ಉಳಿಯದೆ ಮೈಸೂರಿನಂತಹ ಊರು ಸೇರುತ್ತಾನೆ, ಯಾವುದಾದರೂ ಕಾಲೇಜಿಗೆ ಅಧ್ಯಾಪಕನಾದರೂ ಆಗುತ್ತಾನೆ ಎನ್ನುವುದು ಮನೆಯವರ ಭರವಸೆಯಾಗಿತ್ತು. ಆದರೆ ಈ ಎಲ್ಲದ ಪರೀಧಿಗಳ ಹೊರಗೆ ದೃಷ್ಠಿನೆಟ್ಟವನು.

ಈ ನಡುವೆ ಕೀರ್ತಿ ನನಗೆ ಸೋಜಿಗ ಎನಿಸುವುದಕ್ಕೆ, ಆಲೋಚನೆಯ ಕ್ರಮವನ್ನ ನನ್ನದೇ ರೀತಿಯಲ್ಲಿ ಬೆಳಸಿಕೊಳ್ಳುವುದಕ್ಕೆ ಸಾಕ್ಷಿಯಾದಕ್ಕೆ ಕಾರಣ ಒಂದಿದೆ. ಇಪ್ಪತ್ತೈದು ವರ್ಷಗಳ ಹಿಂದೆ ಕೀರ್ತಿಗೆ ಮದುವೆ ಮಾಡಲು ಮನೆಯವರು ನಿರ್ಧರಿಸಿದ್ದರಂತೆ. ಅವನ ಓದಿಗೆ ಸರಿ ಹೊಂದುವಂತಹ ಹುಡುಗಿಯನ್ನು ಮನೆಯವರು ಹೆಣಗಾಡಿ ಹುಡುಕಿದ್ದು, ಹುಡುಗಿ ಮನೆಯವರಿಗೆ ಒಪ್ಪಿಗೆಯಾಗಿದ್ದಳಂತೆ.

ಎಷ್ಟಾದರೂ ಓದಿಕೊಂಡವನು ನಾಳೆಯ ದಿನ ಯಾವುದೇ ಕಾರಣ ನೀಡಿ ಸಿಟ್ಟಾಗದೇ ಇರಲಿ ಎನ್ನುವ ಕಾರಣಕ್ಕೆ ಶಾಸ್ತ್ರದ ನೆಪವನ್ನ ಆರೋಪಿಸಿ ಹುಡುಗಿಯನ್ನು ನೋಡುವುದಕ್ಕೆ, ಸಾಧ್ಯವಾದರೆ ಮಾತನಾಡುವುದಕ್ಕೆ ಕಳುಹಿಸಿಕೊಟ್ಟಿದ್ದರಂತೆ.  ಮನೆಯವರ ಎದುರು ಆ ಬಗ್ಗೆ ಏನೆಂದರೆ ಏನನ್ನೂ ಮಾತನಾಡದ ಕೀರ್ತಿ ಹುಡುಗಿಯ ಎದುರಲ್ಲಿ ಮಾತ್ರ ತನ್ನ ಮೌನವನ್ನ ಮುರಿದುಬಿಟ್ಟಿದ್ದ.  ಹುಡುಗಿಯನ್ನು ಎದುರು ನಿಲ್ಲಿಸಿಕೊಂಡು.

“ನೋಡಿ, ನೀವು ನನ್ನನ್ನು ಮದುವೆಯಾಗುವುದಾದರೆ ಸಂತೋಷ, ಆದರೆ ನೀವು ನನ್ನನ್ನು ಮದುವೆಯಾದರೆ ನಾನು ಮಾತ್ರ ದುಡಿದು ನಿಮ್ಮನ್ನು ಸಾಕುವುದಿಲ್ಲ, ನೀವೇ ದುಡಿದು ಬದುಕುವುದಾದರೇ, ಗಂಡ ಎನ್ನುವ ಅಭಿಮಾನದಿಂದ ನನಗೂ ಊಟ ಹಾಕುವುದಾದರೆ ಮಾತ್ರ ಮದುವೆಯಾಗಲು ಒಪ್ಪಿಕೊಳ್ಳುತ್ತೇನೆ. ಇಲ್ಲ ಎಂದರೆ ದಯವಿಟ್ಟು ಬೇಡ. ಸುಮ್ಮನೇ ನಿಮ್ಮನ್ನು ಮದುವೆಯಾದ ಮೇಲೆ ನನ್ನ ವೈಯಕ್ತಿಕ ಬದುಕಿಗೆ ತೊಂದರೆಯಾಗಬಾರದು” ಎಂದುಬಿಟ್ಟಿದ್ದನಂತೆ.

ಅವನ ಮಾತು ಕೇಳುತ್ತಿದ್ದಂತೆ ಹುಡುಗಿಯ ಮನೆಯವರು ಕೈ ಮುಗಿದು ಕಳುಹಿಸಿಕೊಟ್ಟಿದ್ದರಂತೆ. “ಈಗಲೇ ಸತ್ಯವನ್ನು ಹೇಳಿದ ನೀನು ದೊಡ್ವವನು” ಎಂದಿದ್ದರಂತೆ. ಅವನ ಅದೊಂದು ಮಾತು ಹೆಣಗಾಡಿ ಹುಡುಕಿದ್ದ ಸಂಬಂಧವನ್ನು ತುಂಡುಮಾಡಿತ್ತು. ಕೀರ್ತಿ ಪ್ರಾಮಾಣಿಕವಾಗಿ ತಾನು ದುಡಿಯುವುದಿಲ್ಲ ಎನ್ನುವುದನ್ನು ನೇರವಾಗಿ ಹುಡುಗಿಯ ಎದುರೇ ಹೇಳಿ ಬಂದಿದ್ದು ಆವತ್ತಿಗೆ ಆ ಸಣ್ಣ ಹಳ್ಳಿಯಲ್ಲಿ ದೊಡ್ಡ ಸುದ್ದಿಯಾಗಿತ್ತಂತೆ. ಆ ನಂತರ ಕೀರ್ತಿಗೆ ಮನೆಯವರೇ ಮದುವೆ ಮಾಡುವ ಯೋಚನೆಗೆ ಹೋಗಲಲ್ಲ. ಅವನ ಅದೇ ರೀತಿಯಲ್ಲಿ ದಿನಗಳನ್ನು ಕಳೆಯಲು ಶುರುವಿಟ್ಟುಕೊಂಡಿದ್ದ.

ಇದಾದ ಎಷ್ಟೋ ವರ್ಷಗಳ ನಂತರ ಅಮ್ಮ ನಮ್ಮನ್ನು ಎದುರು ಕೂರಿಸಿಕೊಂಡು ಕೀರ್ತಿಯ ಈ ಅಸಲಿ ಕತೆಯನ್ನು ಹೇಳಿದ್ದಳು. ಹೇಳುತ್ತಾ, ಅವನು ಅದೆಂತಹ ಮಹಾಸೋಮಾರಿ ಎನ್ನುತ್ತಲೇ “ಆದರೂ ಅವನು, ಸತ್ಯ ಹೇಳಿ ಆ ಹುಡುಗಿ ಬಾಳು ಉಳಿಸಿದ್ದಾನೆ” ಎನ್ನುತ್ತಿದ್ದಳು.

ಅಮ್ಮ ಹೇಳಿದ ಆ ಎಲ್ಲ ಮಾತುಗಳಿಗಿಂತ, ಕೀರ್ತಿ ಹುಡುಗಿಯ ಎದುರು ನಿಂತು ನಿನ್ನ ಮದುವೆಯಾಗುವುದು “ನನ್ನ ವೈಯಕ್ತಿಕ ಬದುಕು” ನಡೆಸುವುದಕ್ಕೆ ತೊಂದರೆಯಾಗಬಾರದು ಎಂದಿದ್ದ ಅದೊಂದು ಮಾತು ನನ್ನೊಳಗೆ ಉಳಿದುಬಿಟ್ಟಿತ್ತು. ನನ್ನ ಬದುಕು ಎಂದರೆ ಏನು? ನನ್ನ ಬದುಕು ಉಳಿದವರಿಗಿಂತ ಭಿನ್ನವಾದರೆ, ಅದು ಹೇಗೆ? ಎನ್ನುವಂತಹ ಪ್ರಶ್ನೆಗಳನ್ನು ಮೂಡಿಸಿದ್ದವು. ಅದುವರೆಗೂ ಮನುಷ್ಯರೆಲ್ಲರ ಬದುಕು ಕೇವಲ ಒಂದೇ ತೆರನಾದದ್ದು ಎನ್ನುವುದನ್ನು ನಂಬಿಕೊಂಡಿದ್ದ ನನ್ನ ನಂಬಿಕೆಗೆ ಕೀರ್ತಿಯ ಅದೊಂದು ಮಾತು ಹೊಸ ಅರ್ಥವನ್ನ ಕಲ್ಪಿಸಿತ್ತು. ಮನುಷ್ಯ ಸೇರಿದಂತೆ ಪ್ರತಿಜೀವಿಯೂ ವಯಕ್ತಿಕ ಬದುಕು, ವಯಕ್ತಿಕ ಜೀವನಶೈಲಿ, ವಯಕ್ತಿಕ ಹಕ್ಕು ಎನ್ನುವುದನ್ನು ಪ್ರಾಕೃತಿಕವಾಗಿಯೇ ಹೊಂದಿರುತ್ತದೆ ಎನ್ನುವುದನ್ನ ಮೊದಲು ಹೇಳಿಕೊಟ್ಟವನು ಕೀರ್ತಿ. ಈಗ ಓದಿದ ಪುಸ್ತಕಗಳ ಪಾತ್ರಗಳ ಗುರುತು ಹುಡುಕಿ ಊರೂರು ಅಲೆಯುವ ನನ್ನ ಬೆನ್ನ ಹಿಂದೆ ಕೀರ್ತಿಯ ಆವತ್ತಿನ ಮಾತಿನ ನೆರಳುಗಳು ಹಿಂಬಾಲಿಸುತ್ತಿದೆ ಎನಿಸುತ್ತದೆ.

ದಿನಗಳು ಉರಿಳಿದಂತೆ ಅಜ್ಜಿ ಊರಿಗೆ ಹೋಗುವುದು ಕ್ರಮೇಣವಾಗಿ ನಿಂತೇ ಹೋದವು. ಅಮ್ಮ ಮಾತ್ರ ಆಗಾಗ ಹೋಗಿ ಬರುತ್ತಿದ್ದಳು. ಬಂದವಳನ್ನು ಎಲ್ಲದರ ಬಗ್ಗೆ ವಿಚಾರಿಸಿದ ನಂತರ ತಪ್ಪದೇ ಕೀರ್ತಿಯ ವಿಚಾರವನ್ನ ಕೇಳುತ್ತಿದ್ದೆವು. “ಅವನಿಗೇನು, ಹೆಂಡತಿಯ! ಮಕ್ಕಳ? ಆರಾಮಾಗಿ ಅರಳಿಕಟ್ಟೆಯ ಮಲಗಿ ನಿದ್ರೆ ಮಾಡುತ್ತಿದ್ದಾನೆ. ಅವನಮ್ಮನಿಗೆ ಇನ್ನೂ ಇಬ್ಬರು ಗಂಡು ಮಕ್ಕಳು ಇರೋದಕ್ಕೆ ಉಳಿದುಕೊಂಡಳು. ಇವನೊಬ್ಬನೇ ಮಗನಾಗಿದ್ದರೇ ಬಾಯಿಗೆ ಮಣ್ಣು ಅಷ್ಟೇ” ಎನ್ನುತ್ತಿದ್ದಳು. ಕೀರ್ತಿ ಎಂದರೆ ಇವತ್ತಿಗೂ ಅಮ್ಮನಿಗೂ ಇಷ್ಟವಿಲ್ಲ. ಅವನನ್ನು ಸಮರ್ಥಿಸುವುದು ಇವತ್ತಿಗೂ ಮನೆಯಲ್ಲಿ ಸಲ್ಲುವುದಿಲ್ಲ.

ಆದರೆ ಕೀರ್ತಿಯ ಸಾಮಾನ್ಯವಾಗಿ ಮಾತನಾಡುತ್ತಿದ್ದಾಗ ಹೇಳುವ ಸಾಮಾನ್ಯ ಮಾತುಗಳು ಕೇವಲ ಮಾತುಗಳಲ್ಲ ಎನ್ನುವುದನ್ನು ನಾನು ಕಂಡುಕೊಂಡಿದ್ದೇನೆ. ಅವನ ಮಾತುಗಳು ಹೊಮ್ಮಿಸುವಂತಹ ಅರ್ಥವನ್ನೇ ಎಷ್ಟು ದಾರ್ಶನಿಕರ ಪುಸ್ತಕವನ್ನು ಓದುವಾಗಲೂ ಕಂಡಿದ್ದೇನೆ. ಆದರೆ ಹೀಗಿದ್ದೂ ಅವನು ಅದೊಂದು ಹಳ್ಳಿಯ ಕೊಂಪೆಯಲ್ಲೇ ಉಳಿದುಹೋಗಿದ್ದು ನೆನಪಾದಾಗ ಮಾತ್ರ ವಿಪರೀತ ಎನಿಸುವಷ್ಟು ಸಿಟ್ಟು, ಬೇಸರ ಆವರಿಸಿಕೊಳ್ಳುತ್ತವೆ.

ಕೀರ್ತಿ ಇವತ್ತಿಗೂ ಐದು ಕಿಲೋ ಮೀಟರ್‍ನಷ್ಟು ನಡೆದು ಪತ್ರಿಕೆಗಳನ್ನು, ತಾಲ್ಲೂಕು ಕೇಂದ್ರದ ಲೈಬ್ರರಿಯಲ್ಲಿ ಸಿಗುವ ಪುಸ್ತಕಗಳನ್ನು  ನಿಯಮಿತವಾಗಿ ಓದುತ್ತಾನೆ. ಅವನು ಅಕ್ಷರದ ವ್ಯಾಮೋಹಿ. ನನ್ನ ಪಾಲಿಗೆ ಅಮ್ಮನ ನಂತರ ಕತೆ ಹೇಳಿದ ಗುರು. ಅಜ್ಜಿಯ ಊರಿಗೆ ಹೋಗುವನ್ನು ನಿಲ್ಲಿಸಿದ ಎಷ್ಟೋ ವರ್ಷಗಳಾದರೂ ಕೀರ್ತಿ ಯಾವುದೋ ಕಾರಣಕ್ಕಾದರೂ ನಮ್ಮ ಮಾತಿನ ನಡುವೆ ಬಂದು ಹೋಗಿಬಿಡುತ್ತಿದ್ದ.

ನಾನು ಬೆಂಗಳೂರಿಗೆ ಬಂದು ವರ್ಷವಾದ ನಂತರ ಅಜ್ಜಿ ಡಯಾಲಿಸೀಸ್‍ಗೆ ಒಳಗಾಗಬೇಕಾಗಿತ್ತು. ಅದೊಂದು ದಿನ ಏನೋ ಕನಸು ಬಿದ್ದು ನರಳಿಬಿಟ್ಟಿದ್ದಳು. ತಾನು ಕಡೆಯ ದಿನಗಳ ಸಾಲಿನಲ್ಲಿ ನಿಂತಿದ್ದೇನೆ ಎನ್ನುವಂತೆ ನಾನು ಮೊಮ್ಮಕ್ಕಳನ್ನು ನೋಡಬೇಕು ಎಂದು ಕಣ್ಣೀರು ಹಾಕಿದ್ದಳು. ಎಲ್ಲರೂ ಒಂದು ದಿನ ಅಜ್ಜಿಯನ್ನು ನೋಡಲು ಹೊರಡುವುದು ಎಂದು ತೀರ್ಮಾನವಾಗಿತ್ತು. ಅಮ್ಮ ಫೋನ್ ಮಾಡಿ, “ನೀನು ಊರಿಗೆ ಬಂದು ಹೋಗು” ಎಂದಳು. ನನಗೂ ಬಿಡುವು ಬೇಕು ಎನಿಸಿತ್ತು. ಊರಿಗೆ ಹೊರಡಲು ಬ್ಯಾಗ್‍ಗೆ ಬೇಕಾದ ಎಲ್ಲವನ್ನು ತುಂಬಿಟ್ಟುಕೊಂಡು ಅಣಿಯಾದೆ. ನಿದ್ರೆಗೆ ಹೊರಡುವ ಮೊದಲು ಯಾಕೋ ಕೀರ್ತಿ ನೆನಪಾದ. ಒಂದು ಪ್ಯಾಕ್ ಸಿಗರೇಟು ತೆಗೆದುಕೊಂಡು ಅವನಿಗೆ ಕೊಡಬೇಕು ಎನಿಸಿತು. ಬೆಳಗ್ಗೆ ಬಸ್ಸು ಹಿಡಿಯುವ ಮೊದಲು ತೆಗೆದುಕೊಂಡು ಊರಿಗೆ ಹೊರಟೆ.

ಊರು ತಲುಪಿದಾಗ ಎಲ್ಲವೂ ಹೊಸತು ಎನಿಸಿತು. ಊರು ಬದಲಾಗಿತ್ತೋ ಅಥವಾ ನನ್ನ ನೋಟವೇ ವಿಸ್ತರಿಸಿಕೊಂಡಿತ್ತೋ ಗೊತ್ತಿಲ್ಲ. ಇಡೀ ಊರು ಅದೊಂದು ತೆರನಾಗಿ ಕಾಣುತ್ತಿತ್ತು. ನೀಲಿ ಕನ್ನಡಕವನ್ನು ನೋಡಿದ ಊರಿನವರು ನನ್ನನ್ನು ಗುರುತು ಹಿಡಿಯಲು ಪರದಾಡುತ್ತಿದ್ದರು. ಅವರ ಆ ಅನುಮಾನಸ್ಪಾದ ನೋಟಗಳು, ನಾಲಿಗೆಯ ತುದಿಯಲ್ಲಿ ನಿಂತಿದ್ದ ಮಾತುಗಳು ಏನನ್ನೋ ಹೇಳುವುದಕ್ಕೆ ಉಳಿಸಿಕೊಂಡಂತೆ ಭಾಸವಾಗುತ್ತಿತ್ತು. ಆ ಎಲ್ಲವನ್ನೂ ದಾಟುತ್ತಾ ಮನೆಗೆ ಬಂದವನು ಅಜ್ಜಿಯನ್ನು ಮಾತನಾಡಿಸಿದೆ. ಅವಳಿಗೂ ಸಮಾಧಾನ ಎನಿಸಿತು. ಅಕ್ಕಂದಿರನ್ನು ಮಾತನಾಡಿಸಿ ಅಟ್ಟದ ಮೇಲೆ ಕೂತು ಒಂದಿಷ್ಟು ಹಳೆಯ ಪುಸ್ತಕಗಳನ್ನು ತಿರುವಿ ಹಾಕಿದೆ. ಇದ್ದಕ್ಕಿದ್ದಂತೆ ಕೀರ್ತಿಯ ನೆನಪಾಯಿತು. ಬ್ಯಾಗ್‍ನಲ್ಲಿದ್ದ ಸಿಗರೇಟ್ ಪ್ಯಾಕ್‍ನ್ನು ಜೇಬಿಗಿಳಿಸಿದೆ.

ಅಜ್ಜಿ ಊಟ ಮಾಡುವ ಮೊದಲು ಎಂದಳು ಹಾಸಿಗೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ. ನಾನು ಕೀರ್ತಿಯನ್ನು ನೋಡಿ ಬರುತ್ತೇನೆ ಎಂದೆ. ನೀನು ಇನ್ನೂ ಅವನನ್ನು ಸಂಗ ತೊರೆದಿಲ್ಲವಾ ಎಂದು ನಕ್ಕಳು. ಹುಡುಕುತ್ತಾ ತೋಟದ ಕಡೆ ಹೊರಟೆ. ಅವನ ಪಾಲಿನ ತೋಟ ಲಂಟಾನಗಳ ನಡುವೆ ಮುಳುಗಿಹೋಗಿತ್ತು. ನೀರನ್ನೇ ಕಾಣದೆ ತೆಂಗು ಹಾಗೂ ಅಡಿಕೆ  ಮರಗಳು ಒಣಗಿಹೋಗಿದ್ದವು. ಅದು ತೋಟ ಎನ್ನುವುದಕ್ಕೆ ಅಯೋಗ್ಯವಾಗಿತ್ತು. ಪಕ್ಕದ ತೋಟದವರನ್ನು ಕೀರ್ತಿ ಎಲ್ಲಿ ಎಂದು ವಿಚಾರಿಸಿದೆ. “ಅವನು ಈಗ, ಎಲ್ಲಿ ಇರ್ತಾನೆ ಗಾವಡಗೆರೆಗೆ ಹೋಗಿರ್ತಾನೆ, ಸಂಜೆ ಬರ್ತಾನೆ” ಎಂದರು. ಸಂಜೆಯವರೆಗೂ ಗದ್ದೆ ಬಯಲು, ಹೊಲ, ಜೀರಿಗೆ ಮಾವಿನ ಮರದ ತೋಪಿನಲ್ಲಿ ಅಲೆದು ಬಂದೆ. ಐದರ ಹೊತ್ತಿಗೆ ಕೀರ್ತಿಗೆ ನಾನು ಹುಡುಕಿ ಬಂದಿದ್ದು ಗೊತ್ತಾಗಿತ್ತು. ಅವನೇ ನನ್ನನ್ನು ಹುಡುಕಿ ಗದ್ದೆ ಬಯಲಿಗೆ ಬಂದಿದ್ದ.

ಅದೇ ಬಗೆಯ ಮಾಸಿದ ಅಂಗಿ ಅವನ ಮೈಯನ್ನು ಅಂಟಿಕೊಂಡಿದ್ದರೆ, ಮುಖದಲ್ಲಿ ಬಿಳಿಯ ದಾಡಿ ಆವರಿಸಿಕೊಂಡಿತ್ತು. ಕಣ್ಣುಗಳು ಮತ್ತಷ್ಟು ಆಳಕ್ಕಿಳಿದಿದ್ದವು. ಇಬ್ಬರು ಒಬ್ಬರೊಬ್ಬನೊಬ್ಬರನ್ನು ನೋಡಿ ನಗೆಯಾಡಿದೆವು. ಅವನು ಸಲೀಸಾಗಿ ಹೆಗಲ ಮೇಲೆ ತೋಳು ಬಳಸಿ ನಾನು ಕೇಳದೇ ಇದ್ದರೂ ಊರಿನ ಬೆಳವಣಿಗೆಯನ್ನು ಹೇಳುತ್ತಿದ್ದ.

ನಾನು ಜೇಬಿನಿಂದ ಲೈಟ್ಸ್ ಸಿಗರೇಟು ಪ್ಯಾಕ್‍ವೊಂದನ್ನು ಅವನ ಕೈಗಿಟ್ಟೆ.
“ನಾನು ಸಿಗರೇಟು ಸೇದುವಿಲ್ಲ” ಎಂದ.
“ನೀವು ಸೇದಬೇಕು” ಎಂದು ಒತ್ತಾಯಿಸಿದೆ. ಅದೇ ಮೊದಲ ಬಾರಿಗೆ ಗೊತ್ತಿಲ್ಲದೇ ಬಹುವಚನದಲ್ಲಿ ಸಂಬೋಧಿಸಿದ್ದೆ. ಅವನು ಅದನ್ನು ಸ್ವೀಕರಿಸಿದ್ದ. ಎಷ್ಟೋ ಹೊತ್ತಿನ ನಂತರ ಯಾವುದಾದರೂ ಕತೆ ಹೇಳಿ ಎಂದು ಕೇಳಿದೆ.

“ಯಾವ ಕತೆಗಳು ಇಲ್ಲ ಈಗ ಗೊತ್ತಾ?” ಎಂದ.

“ಸರಿ ಇನ್ನು ಮೂರು ದಿನ ಊರಿನಲ್ಲೇ ಇರುತ್ತೇನೆ. ನಾಳೆಯಾದರೂ ಹೇಳಿ” ಎಂದು ಮೊದಲ ಆತ್ಮೀಯತೆಯಲ್ಲೇ ಒತ್ತಾಯಿಸಿದೆ.

“ನಾಳೆ ಎನ್ನುವುದು ಎಲ್ಲಿದೆ ಮಾರಾಯ. ನಿನ್ನೆ ಇದ್ದರೆ, ನಾಳೆ ಎನ್ನುವುದು ಇರುತ್ತಿತ್ತು. ನಿನ್ನೆಯೇ ಇರದೇ ನಾಳೆ ಎಲ್ಲಿದೆ?” ಎಂದ.

ನನಗೆ ಅವನ ತಾತ್ವೀಕತೆ ನಿಲುಕಲಿಲ್ಲ. ಮಾತನ್ನು ಸಹಜತೆಗೆ ತಿರುಗಿಸಿದೆ. ಊರು, ಕೆಲಸ, ಪ್ರೀತಿ, ಗುರಿ, ಕನಸು, ಸುತ್ತಾಟಗಳ ಮಾತುಕತೆಗಳು ಸಾಗುತ್ತಿರುವಾಗಲೇ ನಾಲ್ಕು ಸಿಗರೇಟು ಸೇದಿ ಬಿಸಾಡಿದ.
“ನೀವು ನನಗೆ ಹೇಳಿದ ಅರ್ಧ ಕತೆಗಳು ಈಗ ನಿಮಗೆ ನೆನಪಿದೆಯಾ!” ಎಂದು ಕೇಳಿದೆ.

ತನಗೆ ಗೊತ್ತಿರುವುದು ಇಷ್ಟೇ ಎನ್ನುವಂತೆ ಕವಿತೆಯೊಂದರ ಸಾಲುಗಳನ್ನು ಹೇಳಿದ.


Deep is your for the land of your memories

and the dwelling place of your greater desires and

our love would not blind nor our hold you.

yet this we ask ere you leave us, that you speak to us

and give us of your us your truth

ಅದಾದ ನಂತರ ನನಗೂ ಕೇಳುವುದಕ್ಕೆ ದೇಶಾವರಿಯ ಮಾತುಗಳ ಹೊರತು ಬೇರೆ ಏನೂ ಉಳಿಯಲಿಲ್ಲ.

ಎಷ್ಟೋ ತಿಂಗಳುಗಳ ನಂತರ ಅವನು ಆವತ್ತು ಹೇಳಿದ ಕವಿತೆ ಖಲೀಲ್ ಗಿಬ್ರಾನ್‍ನ ಫ್ರಾಪೆಟ್ ಸಂಕಲನವನ್ನ ಓದುವಾಗ ಕಂಡವು. ಆದರೆ ಆವತ್ತಿಗೆ ಆ ಸಾಲುಗಳನ್ನು ಗದ್ದೆ ಬಯಲಿನಲ್ಲಿ ಕೂತು ಕೀರ್ತಿ ಸಿಗರೇಟು ಸುಡುತ್ತ ಏಕೆ ಹೇಳಿದ ಎನ್ನುವುದು ಇವತ್ತಿಗೂ ಅರ್ಥವಾಗಿಲ್ಲ. ಆದರೆ ಬದುಕಿನುದ್ದಕ್ಕೂ ಒಂದು ಪ್ರಮಾಣದ ಮುಗ್ದತೆಯನ್ನ, ಪರಿಮಿತಿಯನ್ನು ಉಳಿಸಿಕೊಳ್ಳುವುದು ಸಾಧ್ಯವಾ ಎನ್ನುವುದನ್ನು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುವಾಗೆಲ್ಲಾ ಕೀರ್ತಿ ನೆನಪಾಗುತ್ತಾನೆ.

ಬದುಕಿನ ವಿವರ ಕೇಳುವವರಿಗೆ, ನಾನು ಎಂದರೆ ಇಷ್ಟೇ ಎನ್ನುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಅವಕಾಶವಿದೆ ಎನ್ನುವುದನ್ನು ಕಲಿಸಿಕೊಟ್ಟವನಂತೆ ಪ್ರಾಪ್ತವಾಗುತ್ತಾನೆ. ಈ ಎಲ್ಲದರ ನಡುವೆ ಅವನು ಎಂದೋ ಹೇಳಿ ಅರ್ಧಕ್ಕೆ ಉಳಿಸಿದ ಆಗಾಗ ನನ್ನೊಳಗೆ ಬೆಳೆಯುತ್ತಲೇ ಇವೆ. ಪೂರ್ಣವಾದ ಬರೆಯಬೇಕು ಅಷ್ಟೇ.

1 comment

Leave a Reply