ಸಿಂಗಾಪುರದಲ್ಲಿ.. ಅಡುಗೆ ಮನೆಯಲ್ಲಿ..

Life is beautiful. If there is no kitchen work. ಇದು ನನ್ನದೇ ಸ್ವಂತ ವಾಕ್ಯ. ಹಗಲು ಕನಸು ಕಂಡಿದ್ದೇ ಆಯಿತು ಈ ಪದಗಳನ್ನು ಮೆಲುಕು ಹಾಕುತ್ತಾ. ನನಗೂ ಹಾಗೂ ಅಡುಗೆ ಮನೆಗೂ ಯಾಕೋ ಅಷ್ಟಕಷ್ಟೆ. ಈ ವಿಚಾರದಲ್ಲಿ ಆರಂಭದಿಂದಲೂ ಒಂದು ರೀತಿಯ ಬಂಡಾಯ. ಆದರೆ ಏನು ಮಾಡೋದು ಅನಿವಾರ್ಯ..!

ಈಗ ನಾವಿರುವ ಅಪಾರ್ಟ್ಮೆಂಟ್ ಅಷ್ಟೇ. ಮಹಡಿಯೊಂದಕ್ಕೆ ೮ ಮನೆಗಳು. ಅಡುಗೆ ಮನೆ ಹಾಗೂ ಹಿಂಬದಿಯ ಪ್ಯಾಸೇಜ್ ಸೇರಿ ಎದುರು ಬದರಾಗಿರುವ ಮನೆಗಳು. ಹೀಗಾಗಿ ಯಾರ ಮನೆಯಲ್ಲಿ ಎಷ್ಟು ಬಗೆಯ ನಳಪಾಕ ರೆಡಿಯಾಗುತ್ತೆ ಅನ್ನೋದನ್ನ ತಮ್ಮ ತಮ್ಮ ಕಿಚನ್ ನಿಂದಲೇ ಅಂದಾಜಿಸಬಹುದು. ನನ್ನ ಅಡುಗೆ ಕೋಣೆಗೆ ಎದುರಾಗಿ ಇರೋದು ಮಲಯ್, ಚೈನೀಸ್ ಜೊತೆಗೆ ಬೆಂಗಳೂರಿನ ಒಂದು ಕುಟುಂಬ.

ಮಲಯ್ ಅವರ ಮನೆಯಲ್ಲಾದ್ರು ಅಡುಗೆ ಮಾಡುವ ಸಲುವಾಗಿ ದೀಪ ಉರಿಯೋದಾದ್ರೂ ಕಾಣಬಹುದು. ಆದರೆ ಚೈನೀಸ್ ಮನೆಯಲ್ಲಂತೂ ಅದೂ ಅಪರೂಪ. ಬಹುತೇಕ ಚೀನಿಯರು ಹೊರಗಿನ ಆಹಾರ ಬಯಸುವ ಕಾರಣ ಅವರಲ್ಲಿ ದಿನನಿತ್ಯ ಅಡುಗೆ ಮಾಡುವ ಪದ್ಧತಿಯೇ ಇಲ್ಲ. ಇನ್ನೂ ಬೆಂಗಳೂರಿನವರಾದ ನನ್ನ ಮತ್ತು ಮತ್ತೊಂದು ಕುಟುಂಬದ ಅಡುಗೆ ಮನೆಯಂತೂ ಕೇಳೋದೇ ಬೇಡ. ಸಂಪೂರ್ಣ ದೇಸಿ ಸ್ಟೈಲ್.  ಕುಕ್ಕರ್ ಸೌಂಡ್, ಮಕ್ಕಳಿಗೆ ಬೈಯ್ಯೋದು, ಪಾತ್ರೆಗಳ ಶಬ್ದ – ಹೀಗೆ ಎಲ್ಲವೂ ಡೈರೆಕ್ಟ್ ಲೈವ್ ಫ್ರಮ್ ಕಿಚನ್. ಮುಂಜಾನೆ ೬ ಗಂಟೆಗೆ ಶುರುವಾದರೆ ರಾತ್ರಿ ಮಲಗೋ ತನಕ ನಿರಂತರ ಭೇಟಿ ಈ ಅಡುಗೆ ಮನೆಗೆ.

ಇಂತಹ ಸಮಯದಲ್ಲೇ ಅನಿಸೋದು ನಮ್ಮ ಮನೆಗೂ ಕೆಲಸದವಳು ಇರ್ತಿದ್ರೆ, ಇಷ್ಟೆಲ್ಲಾ ಯುದ್ದ ಮಾಡುವ ಅಗತ್ಯನೇ ಇರುತ್ತಿರಲಿಲ್ಲ ಎಂದು. ಅಡುಗೆ ಮಾಡುವ ವಿಚಾರದಲ್ಲಿ ಆಲಸ್ಯ ತೋರುವ ನನ್ನಂತಹ ಅದೆಷ್ಟೋ ಮಂದಿಯ ಬಹುತೇಕ ಸಮಸ್ಯೆ ಪರಿಹಾರ ಆದ ಹಾಗೆ.

ಏನೇ ಹೇಳಿ, ಮನೆ ಕೆಲಸದವರಿಗೆ ಈಗ ಫುಲ್ ಡಿಮ್ಯಾಂಡ್. ನಗರಗಳಲ್ಲಿ ಅವರ ತಿಂಗಳ ಸಂಬಳ ಕೇಳೋದೇ ಬೇಡ. ದುಡಿದ ಸಂಬಳದ ಕಾಲು ಭಾಗ ಅವರಿಗೆ ಮೀಸಲು. ಮನೆ,  ಮಕ್ಕಳು, ಊಟ – ಉಪಚಾರ, ಆಫೀಸ್  ಅದು – ಇದು ಹೇಳುತ್ತಾ ತಲೆ ತುಂಬಾ ಬಿಡುವಿಲ್ಲದೆ ವಿಚಾರಗಳು ಓಡುವ ಇಂದಿನ ದಿನಗಳಲ್ಲಿ ಕೆಲಸದಾಕೆಯ ಅಗತ್ಯ ಮಾತ್ರ ಮಹತ್ವದ್ದು.

ದಿನ ಬೆಳಗಾದರೆ ಬೇರೆ ಕೆಲಸಗಳು ಕ್ರಮ ಪ್ರಕಾರ ನಡೆಯುತ್ತದೋ ಇಲ್ವೋ, ಕೆಲಸದಾಕೆಯ ಕೆಲಸ ಮಾತ್ರ ಕಟ್ಟುನಿಟ್ಟಾಗಿ ನಡೆಯಲೇಬೇಕು. ಬಹುತೇಕರ ಮನೆಯ ದಿನಚರಿ ಆರಂಭವಾಗೋದೇ ಅಲ್ಲಿಂದ. ಅಷ್ಟರ ಮಟ್ಟಿಗೆ ನಮ್ಮ ಜೀವನ ಹೊಂದಾಣಿಕೆ ಆಗಿ ಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿಅತಿಥಿಗಳಿಗಿಂತಲೂ ಕೆಲಸದಾಕೆಗೆ ಹೆಚ್ಚಿನ ಗೌರವ ಸಿಗುತ್ತಿರುವುದು ಸುಳ್ಳಲ್ಲ. ನಿಗದಿತ ಸಮಯಕ್ಕೆ ಬಂದು ಮನೆಯ ಎಲ್ಲಾ ಕೆಲಸವನ್ನು ಮುಗಿಸಿ ದರೆ ಸಾಕು ಅನ್ನೋದೇ ಎಲ್ಲರ ಚಿಂತೆ.

ಸಿಂಗಾಪುರದಲ್ಲಿನ ಮೇಡ್ ಸಂಸ್ಕೃತಿ ವಿಭಿನ್ನ. ಮೇಡ್ ಗಳಿಗೆ ಇಲ್ಲಿ ಯಾವ ಕೊರತೆಯೂ ಇಲ್ಲ. ಶ್ರೀಲಂಕಾ, ಥೈಲ್ಯಾಂಡ್, ಬಾಂಗ್ಲಾದೇಶ , ಮಯನ್ಮಾರ್ , ಫಿಲಿಪೈನ್ಸ್, ಇಂಡೋನೇಷಿಯ, ಮಲೇಷ್ಯ, ಇಂಡಿಯ, ಲೋಕಲ್ಸ್.. ಹೀಗೆ ನೇರ ವಾಗಿ ದೇಶದ ಹೆಸರಿನಲ್ಲೇ ಇಲ್ಲಿ ಆಯ್ಕೆಗಳು ನಡೆಯುತ್ತವೆ. ಆದರೆ ಇವರೆಲ್ಲ ನಮ್ಮಲ್ಲಿನ ಹಾಗೆ ಬಂದು ಹೋಗುವವರು ಅಲ್ಲ. ನಿರ್ದಿಷ್ಟ ಸಮಯವೊಂದನ್ನು ಫಿಕ್ಸ್ ಮಾಡಿ ಮನೆಯಲ್ಲಿರುವ ಕೆಲಸಗಳನ್ನು ಮುಗಿಸುವವರು ಕೂಡ ಇವರುಗಳಲ್ಲ.  ಇವರದ್ದು ಏನಿದ್ರೂ ಶಾಶ್ವತ ಠಿಕಾಣಿ.

ಹೌದು ಸ್ವಾಮಿ…! ಇಲ್ಲಿ ನಿರ್ಮಾಣವಾಗುವ ಮನೆಗಳಿಂದಲೇ ಆರಂಭವಾಗುತ್ತದೆ ಈ ಮೇಡ್ ಗಳಿಗೆ ಸ್ವಾಗತ. ಮೇಡ್ ರೂಮ್ ಹೆಸರಿನ ಪ್ರತ್ಯೇಕ ಕೊಠಡಿ ಇಡೀ ಸಿಂಗಾಪುರದ ಮನೆಗಳಲ್ಲಿ ಕಾಣಬಹುದು. ಕೆಲಸದಾಕೆ ಹೊಂದದ ಮನೆಯಲ್ಲಿ ಆ ಸ್ಥಳ ಸ್ಟೋರ್ ರೂಮ್, ಪ್ರೇಯರ್ ರೂಮ್ ಹೀಗೆ ತಮಗೆ ಬೇಕಾದ ರೀತಿಯಲ್ಲಿ ಪರಿವರ್ತನೆಗೊಂಡಿರುತ್ತವೆ. 3 ಬೆಡ್ ರೂಮ್ ನ ಮನೆಯಲ್ಲಂತೂ ಅವರಿಗಾಗಿ ಪ್ರತ್ಯೇಕ ಟಾಯ್ಲೆಟ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.

ಇಲ್ಲಿನ ಶೈಲಿಯೇ ಹಾಗೆ. ದಿನವಿಡೀ ಕೆಲಸ. ವಾರಕ್ಕೊಂದು ದಿನ ರಜೆ. ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೆ ಸರಿಯಾಗಿ ತಮ್ಮ ಊರಿಗೆ ತೆರಳಲು ಅವಕಾಶ. ಮಕ್ಕಳ ಆರೈಕೆ, ಮನೆ ಕೆಲಸ, ದಿನಸಿ ಶಾಪಿಂಗ್, ಅಡುಗೆ ಎಲ್ಲವೂ ಇವರ ಜವಾಬ್ದಾರಿ.

ಕೆಲಸದಾಕೆಯನ್ನು ಹೊಂದಿರುವ ಸಿಂಗಾಪುರದ ಮನೆಯ ಹೆಂಗಸರು ಫುಲ್ ಬಿಂದಾಸ್. ಶಾಪಿಂಗ್, ಪಾರ್ಟೀ ಹೇಳುತ್ತಾ ಸಮಯ ಕಳೆಯೋದೇ ಜಾಸ್ತಿ. ಇಂತವರಿಗೆ ಮನೆಯ ಎಲ್ಲಾ ವಿಚಾರದಲ್ಲೂ ಪೂರ್ಣ ವಿರಾಮ. ಉದ್ಯೋಗಕ್ಕೆ ತೆರಳುವ ಮಹಿಳೆಯರಿಗಾದರೂ ಅನಿವಾರ್ಯ. ಆದರೆ ಹೌಸ್ ವೈಫ್ ಇರೋ ಮನೆಯಲ್ಲೂ ಮೇಡ್ ಗಳು ಸಾಮಾನ್ಯ. ಒಂದು ಬಗೆಯಲ್ಲಿ ಶೋಕಿಯ ವಿಚಾರ.

ಮೇಲ್ನೋಟಕ್ಕೆ ಈ ಬದುಕು ಕಲರ್ ಫುಲ್ ಆಗಿ ಕಾಣುತ್ತದೆ. ಮನೆಯೊಡತಿಗೂ ನೋ ಟೆನ್ಶನ್ – ಕೆಲಸದಾಕೆಗೂ ಡಾಲರ್ ನಲ್ಲಿ ಸಂಬಳ. ಆದರೆ ಇವೆಲ್ಲ ಸರಿಯಾಗಿ ನಡೆದರೆ ಮಾತ್ರ. ಹಳಿ ತಪ್ಪಿತೋ ಜೈಲು ಕೈಬೀಸಿ ಸ್ವಾಗತಿಸುತ್ತದೆ. ಈ ವಿಚಾರದಲ್ಲೂ ಅಚ್ಚರಿ ಆಗುವಂತಹ ಜೊತೆಗೆ ಬೆಚ್ಚಿ ಬೀಳುವ ಪ್ರಕರಣಗಳು ನಡೆಯುತ್ತಾ ಇರುತ್ತವೆ. ಈ ಮೇಡ್ ಗಳು ಸಿಂಗಾಪುರಕ್ಕೆ ಎಂಟ್ರೀ ಕೊಡೋದೇ ನೂರಾರು ಕಾನೂನುಗಳನ್ನು ತಲೆಯಲ್ಲಿ ಹೊತ್ತು.

ಆಯಾಯ ದೇಶಗಳಿಂದ ಒಂದಾ ಬಡತನ, ಇಲ್ಲವೇ ನಿರುದ್ಯೋಗ ಸಮಸ್ಯೆಗಳ ಕಾರಣಗಳಿಂದ ಬರುವ ಈ ಮಹಿಳೆಯರು ಮೊದಲು ಲಗ್ಗೆ ಇಡೋದು ಮೇಡ್ ಏಜೆನ್ಸೀ ಗಳಿಗೆ. ಈ ಸಂಬಂಧ ನೂರಾರು ಸಂಸ್ಥೆಗಳು ತಲೆಯೆತ್ತಿವೆ. ಸಿಂಗಾಪುರದಲ್ಲಿ ಮೇಡ್ ಏಜೆನ್ಸೀ ಗಳದ್ದು ಒಂದು ದೊಡ್ಡ ವ್ಯಾಪಾರವು ಹೌದು. ಆದರೆ ಎಲ್ಲಕ್ಕೂ ಸರ್ಕಾರದಿಂದ ಪರವಾನಿಗೆ ಮಾತ್ರ ಕಡ್ಡಾಯ. ಹೀಗೆ ಬರುವ ಮಹಿಳೆಯರಿಗೆ ಮೊದಲು ಆಶ್ರಯ ನೀಡೋದು ಕೂಡ ಮೇಡ್ ಸಂಸ್ಥೆಗಳು.

ಇದಾದ ಬಳಿಕ , ಕೆಲಸದಾಕೆಯ ಅಗತ್ಯವಿರುವ ಕುಟುಂಬಗಳು, ಸರ್ಕಾರ ಹಾಗೂ ಮೇಡ್ ಸಂಸ್ಥೆಗಳ ಮೂಲಕ ಆಯ್ಕೆ ಮಾಡುತ್ತಾರೆ. ಜೊತೆಗೆ ಸರ್ಕಾರದ ಕಾನೂನುಗಳನ್ನು ಅನುಸರಿಸುವ ಸಂಬಂಧ ಒಪ್ಪಂದ ನಡೆಯುತ್ತದೆ. ಎಷ್ಟು ವರ್ಷಗಳವರೆಗೆ ಕೆಲಸ ಮಾಡುವ ಪರವಾನಿಗೆ, ಅವರ ಸಂಬಳ, ಇನ್ನಿತರೆ ಖರ್ಚುಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.

ಈ ಸಂದರ್ಭದಲ್ಲಿ ಕೆಲಸದಾಕೆಯ ಆರೋಗ್ಯ, ಆಹಾರ, ಮೂಲಭೂತ ಸೌಕರ್ಯಗಳ ಒದಗಿಸುವ ಸಂಪೂರ್ಣ ಜವಾಬ್ದಾರಿ ಆ ಮನೆಯವರದ್ದಾಗಿರುತ್ತದೆ. ಒಬ್ಬಾಕೆಯನ್ನು ಮನೆ ಕೆಲಸಕ್ಕೆ ಕರೆತಂದ ಬಳಿಕ, ಆಕೆ ಕದ್ದು ಮುಚ್ಚಿ ಅಥವಾ ಮನೆಯವರ ಅನುಮತಿ ಮೇರೆಗೂ ಬೇರೆ ಮನೆಯಲ್ಲಿ ಕೆಲಸ ಮಾಡುವ ಹಾಗಿಲ್ಲ. ಇದೇ ವೇಳೆ ಸರ್ಕಾರದ ಪರವಾನಿಗೆ ಪಡೆಯದೆ ಯಾವ ಮನೆಯವರು ಕೂಡ ಕೆಲಸದಾಕೆಯನ್ನು ಇಟ್ಟುಕೊಳ್ಳುವಂತಿಲ್ಲ. ಈ ಸಂಬಂಧ ಕಾನೂನು ಬಾಹಿರ ಚಟುವಟಿಕೆಗಳು ನಡೆದ್ದಲ್ಲಿ 10,000 ಡಾಲರ್ ನಷ್ಟು ದಂಡ ಕಟ್ಟುವ ಸನ್ನಿವೇಶಗಳು ಎದುರಾಗುವ ಸಾಧ್ಯತೆಗಳಿವೆ.

ರಂಗೋಲಿ ಕೆಳಗೆ ತೂರುವವರು ಇಲ್ಲೂ ಏನು ಕಡಿಮೆ ಇಲ್ಲ. ಕಲಿಕೆಗಾಗಿ ಬಂದವರು ಪಾರ್ಟ್ ಟೈಮ್ ಮೇಡ್ ಕೆಲಸಕ್ಕೂ ಇಳಿಯುತ್ತಾರೆ. ಸ್ನೇಹಿತರ ಸಂಪರ್ಕದ ಮೂಲಕ ಒಂದಿಷ್ಟು ಮನೆಗಳನ್ನು ಗೊತ್ತು ಮಾಡಿಕೊಳ್ಳುತ್ತಾರೆ. ವಾರಕ್ಕೆ ೨ ರಿಂದ ೩ ಬಾರಿ ಭೇಟಿ ನೀಡಿ ಮನೆ ಸ್ವಚ್ಛ ಮಾಡುತ್ತಾರೆ. ತಮ್ಮ ಮನೆಯ ಕೆಲಸವಾದರೆ ಸಾಕು ಎನ್ನುವ ಮನೆಯೊಡತಿಯರು ಕೂಡ ಅವರ ಪರವಾನಿಗೆ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಹಾಗಾಗಿ ಅಂತಹ ವಿದ್ಯಾರ್ಥಿಗಳು ಕೂಡ ಈ ಕಾನೂನಿಂದ ತಪ್ಪಿಸಿಕೊಳ್ಳಲು, ಈ ಪಾರ್ಟ್ ಟೈಮ್ ಕೆಲಸವನ್ನು ತುಂಬಾ ಸುರಕ್ಷಿತ ಎಂದು ನಂಬಿರುತ್ತಾರೆ. ಆದರೆ ಎಷ್ಟು ದಿನಗಳವರೆಗೆ ನಡೆಯುತ್ತದೆ ಅನ್ನೋದು ಮಾತ್ರ ಯಾರಿಂದಲೂ ಊಹಿಸಲು ಸಾಧ್ಯವಿಲ್ಲ.

ಒಟ್ಟಾರೆ ಈ ಮೇಡ್ ಆಯ್ಕೆಯ ವ್ಯವಹಾರ ತೃಪ್ತಿ ಕೊಡುತ್ತೋ ಇಲ್ವೋ, ಕಾನೂನು ಅನುಸರಿಸೋದು ಮಾತ್ರ ಆಗಲೇಬೇಕು. ಕೆಲವೊಂದು ಘಟನೆಗಳಲ್ಲಿ ಮೇಡ್ ಗಳನ್ನ ಇಟ್ಟುಕೊಳ್ಳೋದೇ ಭಯಾನಕ ಅನಿಸಿದರೆ, ಮತ್ತೆ ಹಲವೆಡೆ ಮನೆಯವರಿಂದಲೇ ಕೆಲಸದಾಕೆಯ ಮೇಲೆ ನಡೆಯುವ ಹಿಂಸಾಚಾರಗಳು. ಮೇಡ್ ಗಳು ಅಳುವ ಸ್ವರಗಳು, ಮನೆಯ ಒಡತಿಯರ ಬೈಗುಳಗಳು ಈ ದೇಶದಲ್ಲಂತೂ ಸಾಮಾನ್ಯ.  ಬಹುತೇಕ ಮನೆಗಳ ಯಜಮಾನರು ಹಾಗೂ ಮೇಡ್ ಗಳಿಗೆ “ ಅತ್ತ ಬಿಡುವ ಹಾಗೆಯೂ ಇಲ್ಲ. ಇತ್ತ ನೆಮ್ಮದಿಯೂ ಇಲ್ಲ” ಅನ್ನುವ ಪರಿಸ್ಥಿತಿ. ಮುಗಿಯದ ಗೋಳಾಟ. ಇದೆಲ್ಲಾ ನೋಡಿದಾಗ ನಮ್ಮ ದೇಸಿ ಸ್ಟೈಲೇ ಎಷ್ಟೋ ವಾಸಿ. ಮನಸ್ಸಿನ ಕೋಪವನ್ನೆಲ್ಲಾ ಪಾತ್ರೆಗಳ ಮೇಲೆ ಹಾಕುತ್ತಾ, ಯೂಟ್ಯೂಬ್ ಸಹಾಯದಿಂದ ಅಡುಗೆಯನ್ನು ಮಾಡುತ್ತಾ, ಅದರಲ್ಲೂ ನನ್ನ ಕಿಚನ್ ಎದುರಿಗೆ ಕಾಣುವ ಚೀನಿ ಕುಟುಂಬದ ಅಡುಗೆ ಮನೆ ನೋಡ್ತಾ ಇದ್ರೆ ಅಂತೂ..  ಮತ್ತೆ ಅದೇ ನನ್ನ ಸ್ವಂತ ವಾಕ್ಯ ನೆನಪಾಗೋದೇ..

ಶಿವನೇ ಶಂಭುಲಿಂಗ….!!!

1 comment

  1. ನಿಮ್ಮ ಲೇಖನ ಓದಿದಾಗ ನಾವಿರುವ ದುಬೈನಲ್ಲಿ ಕೂಡಾ ಇಂತಾದ್ದೆ ಕಥೆ ನೆನಪಾಗುತ್ತೆ. ಇಲ್ಲೂ maid roomಗಳಿರುವ ಫ್ಲಾಟಗಳು ಹೆಚ್ವು. ಹೆಚ್ಚಾಗಿ ಅರಬ್ ಜನರೆ ಮೇಡಗಳನ್ನು ಇಟ್ಟುಕೊಳ್ಳುತ್ರಾರೆ. ಒಮ್ಮೊಮ್ಮೆ ಮೇಡಗಳೆ ಮನೆಯವರಿಗೆ ಮೋಸ ಮಾಡಿದ ಸುದ್ದಿಯಾದರೆ , ಎಷ್ಟೊ ಬಾರಿ ಮನೆಯವರೆ ಅವರನ್ನು ಹೀನಾಯವಾಗಿ ಕಾಣುವ,
    ಅವರ ಪರಿಸ್ಥಿತಿ ಯನ್ನು ದುರ್ಬಳಕೆ ಮಾಡಿರುವ ಸುದ್ದಿ ಕೇಳತ್ತೀವಿ.

Leave a Reply