ಅಣ್ಣ ಈಗ ನೆನಪು ಮಾತ್ರವಲ್ಲ ಸ್ಪೂರ್ತಿ ಕೂಡ..


ಆತ ಒಬ್ಬ ಒಳ್ಳೆಯ ಮತ್ತು ಕೊನೆಯವರೆಗೂ ಸಂಘಟನೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡ ಸಂಘಟಕನೆಂದು ಹಿಂದಿನ ಬರಹದಲ್ಲಿ ಹೇಳಿದ್ದೆ. ಅದಕ್ಕೆ ಜ್ವಲಂತ ಉದಾಹರಣೆ ಎಂದರೆ ಬಂಡಾಯ ಸಾಹಿತ್ಯ ಸಂಘಟನೆಯನ್ನು ಆತ ಜಿಲ್ಲೆಯಲ್ಲಿ ಕಟ್ಟಿದ್ದು ಒಂದು ಅಂಶಮಾತ್ರ. ಅದರ ಆಚೆ ಇನ್ನೂ ಹಲವು ಸಂಗತಿಗಳಿವೆ. ಕನಿಷ್ಟ ಒಂದು ಡಜನ್‍ನಷ್ಟು ಸಂಘಟನೆಯನ್ನಾದರೂ ಆತ ಕಟ್ಟಿ ಬೆಳೆಸಿದ್ದಾನೆ. ಮತ್ತು ಕೆಲವು ಸಂಘಟನೆ, ಸಮಿತಿಯಲ್ಲಿ ಸದಸ್ಯನಾಗಿ ಗಮನೀಯನಾಗಿದ್ದಾನೆ.

ಸಾಹಿತ್ಯ ಅಕಾಡೆಮಿ ಸದಸ್ಯತ್ವ: ಸಾಮಾನ್ಯವಾಗಿ ಸಾಹಿತ್ಯ ಅಕಾಡೆಮಿಗೆ ಉತ್ತರ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ಬೆಂಗಳೂರು ಮುಂಬೈ ನಲ್ಲಿರುವ ಸಾಹಿತಿಗಳನ್ನೆ ಆಯ್ಕೆ ಮಾಡುತ್ತಿದ್ದರು. ಆ ಕಾಲದಲ್ಲಿ ಪ್ರಸಿದ್ಧ ಲೇಖಕರೆನ್ನಿಸಿಕೊಂಡವರು –ಉ.ಕದಲ್ಲೇ ಇದ್ದವರು ಎಷ್ಟೇ ಒಳ್ಳೆಯ ಲೇಖಕರಾದರೂ ಪ್ರಸಿದ್ಧಿಗೆ ಬರುತ್ತಿರಲಿಲ್ಲ- ಬೆಂಗಳೂರು ಅಥವಾ ಪೂಣಾ, ಮುಂಬೈನಲ್ಲೇ ಇರುತ್ತಿದ್ದರು. ಹಾಗಾಗಿ ಯಾವುದೇ ಪ್ರಶಸ್ತಿಗೆ, ಯಾವುದೇ ಸಮಿತಿಗೆ ಉಕದ ಕೋಟಾದಡಿಯಲ್ಲಿ ಅವರೇ ಆಯ್ಕೆಯಾಗುವ ಕಾಲವೊಂದಿತ್ತ್ತು. ಜಾನಪದ ಅಕಾಡೆಮಿ, ನಾಟಕ ಅಕಾಡೆಮಿಗಳಿಗೆ ಇಲ್ಲಿಯವರೇ ಆಗುತ್ತಿದ್ದರೂ ಸಾಹಿತ್ಯ ಅಕಾಡೆಮಿಗೆ ಮಾತ್ರ ಈ ಗ್ರಹಣ ತುಂಬಾ ವರ್ಷಗಳವರೆಗೂ ಬಿಟ್ಟಿರಲಿಲ್ಲ. (ಹಿಂದಿನ ಸದಸ್ಯರ ಪಟ್ಟಿ ನೋಡದೇ ಬರೆದಿದ್ದು.ಜಿಲ್ಲೆಯವರೇ ಇದ್ದರೂ ಯಾರ ಗಮನಕ್ಕೂ ಬಂದಿರಲಿಲ್ಲ.) ಹಾಗಾಗಿ ಸಾಹಿತ್ಯ ಅಕಾಡೆಮಿಯ ಪರಿಚಯ ಜಿಲ್ಲೆಯ ಜನರಿಗೆ ಕಡಿಮೆಯೇ.

ಆದರೆ ಅಣ್ಣ ಮೊದಲ ಬಾರಿಗೆ ಸಾಹಿತ್ಯ ಅಕಾಡೆಮಿಯ ಸದಸ್ಯನಾದಾಗ ಎಷ್ಟೊಂದು ಕಾರ್ಯಕ್ರಮ ನಡೆದವೆಂದರೆ, ಅಕಾಡೆಮಿ ಅನ್ನೋದು ಇದೆ ಎಂದು ಹಲವರಿಗೆ ತಿಳಿದದ್ದು ಆವಾಗಲೇ. ಬರಗೂರು ರಾಮಚಂದ್ರಪ್ಪನವರು ಆಗ ಅಧ್ಯಕ್ಷರು. 1992-95 ರ ಅವಧಿ. ಸಾಮಾನ್ಯವಾಗಿ ಸರ್ಕಾರವೇ – ಸರ್ಕಾರವೆಂದರೆ ಸರ್ಕಾರಿ ಅಧಿಕಾರಿಗಳು- ಸದಸ್ಯರನ್ನು ಆಯ್ಕೆ ಮಾಡಿಕೊಡುವ ಪರಿಪಾಠ ಅಲ್ಲಿಯವರೆಗೆ ಇತ್ತು. ಅದರ ಬದಲು ತನ್ನ ತಂಡದ ಸದಸ್ಯರ ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನೂ ಸ್ವಾತಂತ್ರ್ಯವನ್ನೂ ಬರಗೂರುರವರೇ ತಮ್ಮ ವರ್ಚಸ್ಸಿನಿಂದ ಪಡೆದಿದ್ದರು. ಇದರಿಂದಾಗಿ ಅಂತ್ಯಂತ ಗ್ರಾಮೀಣ ಪ್ರದೇಶದಿಂದ ಬಂದ ಅಣ್ಣನಂಥವರು ಸಹ ಅಕಾಡೆಮಿಯ ಸದಸ್ಯರಾಗುವ ಅವಕಾಶ ಲಭ್ಯವಾಯಿತು. ಇಲ್ಲದಿದ್ದರೆ ಒಂದು ಬಯೋಡಾಟಾವನ್ನೂ ಮುದ್ರಿಸಿಕೊಳ್ಳದ ಆತ ಅಕಾಡೆಮಿಯ ಸದ್ಯಸನಾಗುವುದು ಕನಸಿನ ಮಾತಾಗಿತ್ತು.

ಅಣ್ಣ ಮತ್ತು ಬರಗೂರು ಅವರು ಬಂಡಾಯದ ಗೆಳೆಯರು ಮಾತ್ರವಲ್ಲ, ಪರಸ್ಪರರ ಕೆಲಸದ ಬಗ್ಗೆ ಅಪಾರ ಗೌರವ ಉಳ್ಳವರಾಗಿದ್ದರು. ಅವರ ನಡುವಿನ ಪತ್ರ ವ್ಯವಹಾರಗಳ ಕಟ್ಟೇ ಮನೆಯಲ್ಲಿದೆ. ಇಬ್ಬರ ಗೆಳೆತನದ ಬಗ್ಗೆ ಮುಂದೊಮ್ಮೆ ಬರೆಯುತ್ತೇನೆ. ಅಣ್ಣನ ಕೆಲಸದ ಶಿಸ್ತು, ಆತನ ವೈಚಾರಿಕ ನಿಷ್ಟುರತೆ ಮತ್ತು ಸಂಘಟನಾ ಕೌಶಲ್ಯದ ಬಗ್ಗೆ ಅರಿವಿದ್ದ ಬರಗೂರು ಅವರು ಆತನನ್ನು ತಮ್ಮ ಕ್ಯಾಬಿನೆಟ್ಟಿಗೆ ಆಯ್ಕೆ ಮಾಡಿಕೊಂಡಿದ್ದರು. ಇಡೀ ತಂಡವೇ ಕ್ರಿಯಾಶೀಲವಾಗಿದ್ದುದಾಗಿತ್ತು. ರಂಜಾನ್ ದರ್ಗಾ, ಎಚ್.ಎಸ್. ಶಿವಪ್ರಕಾಶ್, ಸರಜೂ ಕಾಟ್ಕರ್, ಸತ್ಯಾನಂದ ಪಾತ್ರೋಟ, ಗೀತಾ ನಾಗಭೂಷಣ, ಸುಕನ್ಯಾ ಮಾರುತಿ, ಬೀಚನಳ್ಳಿ, ಗವಿಸಿದ್ದ ಬಳ್ಳಾರಿ… ಹೀಗೆ ಒಂದು ರೀತಿಯಲ್ಲಿ ಬಂಡಾಯ ಸಂಘಟನೆಯ ಮುಖ್ಯ ತಂಡವೇ ಅಲ್ಲಿತ್ತು. ಮತ್ತು ಬಂಡಾಯ ಸಾಹಿತ್ಯ ಸಂಘಟನೆ ಮಾಡಬೇಕಾದ ಬಹುಮುಖ್ಯ ಕೆಲಸಗಳನ್ನು ಅಕಾಡೆಮಿಯ ಅಡಿಯಲ್ಲಿ ಮಾಡಲಾಯಿತು.

ಹಾಗೆ ನೋಡಿದರೆ ಅಕಾಡೆಮಿಯ ಸದಸ್ಯನಾದ ಮೇಲೆ ಅಣ್ಣ ಹೆಚ್ಚು ಸಲ ಬೆಂಗಳೂರಿಗೆ ಹೋಗಿದ್ದು. ಕೇರಳದ ಕಾಸರಗೋಡಿಗೆ ಹೋಗಿದ್ದು, ಹಿಂದೆಲ್ಲ ದೂರದ ಊರಿಗೆ ಹೋಗುವ ಮನಸ್ಸಿದ್ದರೂ ಹಣಕಾಸಿನ ತೊಂದರೆಯಿಂದ ಆತ ಹೋಗುತ್ತಿರಲಿಲ್ಲ. ಬಂಡಾಯದ ಗೆಳೆಯರು ಮಾಡುವ ಕಾರ್ಯಕ್ರಮವೆಂದರೆ ಪ್ರಯಾಣ ವೆಚ್ಚವನ್ನೂ ಕೈಯಿಂದಲೇ ಹಾಕಿಕೊಳ್ಳಬೇಕಿತ್ತು. ಆದರೆ ಅಕಾಡೆಮಿ ಸಂಘಟಿಸಿದ ಕಾರ್ಯಕ್ರಮವಾದರೆ ಕನಿಷ್ಟ ಪ್ರಯಾಣವೆಚ್ಚವಾದರೂ ಸಿಗುತ್ತಿತ್ತು. ಬೆಂಗಳೂರಿಗೆ ಆಗಾಗ ಹೋಗುವುದರಿಂದ ಆತನಿಗೆ ಮತ್ತೆ ಮತ್ತೆ ನಿರಂಜನರನ್ನು ಭೇಟಿಯಾಗುವ ಅವಕಾಶ ಲಭ್ಯವಾಯಿತು. “ಅಕಾಡೆಮಿ ಸದಸ್ಯವಾಗಿರುವುದರಿಂದ ಅಕಾಡೆಮಿಗೇನು ಅನುಕೂಲತೆಯಾಯಿತು ಗೊತ್ತಿಲ್ಲ. ಆದರೆ ನನಗೆ ಮಾತ್ರ ನಿರಂಜನ ಅವರನ್ನು ಮತ್ತೆ ಮತ್ತೆ ಭೇಟಿಯಾಗಲು ಅನುಕೂಲವಾಯಿತು. ಬಂಡಾಯದ ಗೆಳೆಯರನ್ನು ಮತ್ತೆ ಮತ್ತೆ ಮಾತನಾಡಿಸಲು ಸಾಧ್ಯವಾಯಿತು. ಕೆಲವು ಪುಸ್ತಕಗಳನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಅಕಾಡೆಮಿ ಸದಸ್ಯನಾಗಿರುವುದರಿಂದ ನಮ್ಮ ಅವಧಿಯಲ್ಲಿ ಪ್ರಕಟವಾದ ಹಲವು ಉಪಯುಕ್ತ ಪುಸ್ತಕಗಳು ಉಚಿತವಾಗಿ ಓದಲು ಸಿಕ್ಕವು” ಎಂದು ಹೇಳುತ್ತಿದ್ದ. ಇದು ಆತನ ವಿನಯದ ಮಾತು. ಅವನು ಸದಸ್ಯನಾಗಿರುವುದು ಅಕಾಡಮಿಗೂ ಜಿಲ್ಲೆಗೂ ತುಂಬಾ ಅನುಕೂಲವೇ ಆಗಿತ್ತು.
1992-95 ರ ಮೂರು ವರ್ಷದ ಆತನ ಅವಧಿಯಲ್ಲಿ ಉತ್ತರ ಕನ್ನಡದ ತುಂಬಾ ಹಲವು ಕಾರ್ಯಕ್ರಮಗಳು ನಡೆದವು. ಹೊನ್ನಾವರದಲ್ಲಿ ಕಾವ್ಯ ಕಮ್ಮಟ, ಕುಮಟಾದಲ್ಲಿ ರಾಜಕೀಯ ಕಾದಂಬರಿಯ ವಿಚಾರ ಸಂಕಿರಣ, ಅಂಕೋಲೆಯಲ್ಲಿ ಮಕ್ಕಳ ಸಾಹಿತ್ಯದ ಕುರಿತು ವಿಚಾರ ಸಂಕಿರಣ… ಹೀಗೆ ಹಲವು ವಿಚಾರ ಸಂಕಿರಣ ಕಮ್ಮಟಗಳು ನಡೆದವು. ಈ ಜಿಲ್ಲೆಯ ಅತಿ ಹೆಚ್ಚು ಹಿರಿ ಕಿರಿಯ ಲೇಖಕರು ಈ ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಭಾಗವಹಿಸಿದರು.

ಅಂಕೋಲೆಯ ಹಿರಿಯ ಕವಿ ಶ್ಯಾಮ ಹುದ್ದಾರರವರು ಸಂಗ್ರಹಿಸಿದ ಹಲವು ಲೇಖಕರ ಹಸ್ತಾಕ್ಷರದ ಕಾರ್ಡಗಳನ್ನು ಅಕಾಡೆಮಿ ಮೂಲಕ ಗೌರವಧನ ಕೊಟ್ಟು ಸ್ವೀಕರಿಸಿ ಅದನ್ನು ಅಕಾಡೆಮಿ ಕಛೇರಿಯಲ್ಲಿ ಪ್ರದರ್ಶನಕ್ಕೆ ಇಡುವಲ್ಲಿ ಅಣ್ಣನ ಪ್ರಯತ್ನ ಅತಿ ಮುಖ್ಯವಾದುದ್ದು.

ಬರಗೂರು ರಾಮಚಂದ್ರಪ್ಪನವರು ಅಧ್ಯಕ್ಷರಾಗಿರುವ ಕಾಲ ಪುಸ್ತಕ ಪ್ರಕಟಣೆಯ ಸುಗ್ಗಿ ಕಾಲ. ಬಹುಶಃ ಜಿ.ಎಸ್.ಎಸ್. ಅಧ್ಯಕ್ಷರಾಗಿರುವಾಗಲೂ ಹಲವು ಪುಸ್ತಕಗಳು ಬಂದಿದ್ದವು. ಆದರೆ ಇವರ ಸಂದರ್ಭದಲ್ಲಿ ಪುಸ್ತಕ ಮುದ್ರಣ ಮತ್ತು ಮಾರಾಟಕ್ಕೆ ಅತಿಹೆಚ್ಚು ಒತ್ತು ಕೊಟ್ಟಿದ್ದರು. ಕನ್ನಡ ಸಾಹಿತ್ಯದ ಪುನರ್ ಮೌಲ್ಯೀಕರಣ, ಉಪಸಂಸ್ಕೃತಿ ಮಾಲೆ, ಸಾಮಾಜಿ ಚಿಂತಕರ ಮಾಲೆ, ಅಂತರ್ ಶಿಸ್ತೀಯ ಅಧ್ಯಯನ ಮಾಲೆ….. ಹೀಗೆ ಓದುಗರ ಹಸಿವಿಂಗಿಸುವ ಹಲವು ವೈಚಾರಿಕ ಪುಸ್ತಕಗಳು ಬಂದವು. ಉಪಸಂಸ್ಕೃತಿ ಮಾಲೆಯಲ್ಲಿ 35 ಕ್ಕೂ ಹೆಚ್ಚು ಪುಸ್ತಕಗಳು ಬಂದಿರಬೇಕು. ಅದರ ಸಂಪಾದಕ ಮಂಡಳಿಯಲ್ಲಿ ಅಣ್ಣನೂ ಇದ್ದ. ನಮ್ಮ ಜಿಲ್ಲೆಯ ಡಾ. ಆರ್.ಜಿ. ಗುಂದಿ, ಡಾ. ಎನ್. ಆರ್. ನಾಯಕ ಮುಂತಾದವರು ಈ ಮಾಲಿಕೆಯ ಒಂದೊಂದು ಪುಸ್ತಕ ಬರೆದಿದ್ದಾರೆ. ಕೆಲವರು ಈ ಪುಸ್ತಕಗಳು ಉಪಸಂಸ್ಕೃತಿಯನ್ನು ಸರಿಯಾಗಿ ಪರಿಚಯಿಸಲಿಲ್ಲ ಎಂದು ಇಂದು ಟೀಕೆ ಮಾಡುತ್ತಾರಾದರೂ ಸಾಹಿತ್ಯ ಅಕಾಡೆಮಿಯೊಂದು ಇಂತಹ ಉಪಸಂಸ್ಕೃತಿಯನ್ನು ಗುರುತಿಸಿದ್ದು, ಅವರನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಿದ್ದು ತೀರಾ ಮುಖ್ಯ ಸಂಗತಿ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಕೆಲವು ವರ್ಷಗಳ ನಂತರದಲ್ಲಿ ಅಕಾಡೆಮಿಗೆ ವಿಷ್ಣು ನಾಯ್ಕ ಅವರು ಸದಸ್ಯರಾದರು. ಆಗಲೂ ಜಿಲ್ಲೆಯಲ್ಲಿ ತುಂಬಾ ಕಾರ್ಯಕ್ರಮಗಳು ನಡೆದಿವೆ. ಮೂಲತಃ ಅವರು ಸಂಘಟಕರು, ಲೇಖಕರು ಆಗಿರುವುದರಿಂದ ಇದು ಸಾಧ್ಯವಾಯಿತು.

ಭಾರತ ಜ್ಞಾನ ವಿಜ್ಞಾನ ಸಮಿತಿ: ಬಿಜಿವಿಎಸ್ ಉತ್ತರ ಕನ್ನಡದಲ್ಲಿ ಪ್ರಾರಂಭವಾದಾಗ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಸುಮಾರು ಹತ್ತು ವರ್ಷಗಳ ಕಾಲ ಮುನ್ನಡೆಸಿದರು. ಸಾಕ್ಷರತಾ ಆಂದೋಲನದ ಭಾಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ವಿಜ್ಞಾನ ಚಳುವಳಿಯನ್ನು ಬೆಳೆಸಿದ ಹೆಮ್ಮೆ ಆತನದು. ಇದು 90 ರ ದಶಕ ಇರಬೇಕು ಆಗ ಸಿ. ಯತಿರಾಜು ಅವರು ಅದರ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಈ ಬಸವರಾಜ ಕೂಡ ಜಿಲ್ಲೆಗೆ ಬರುತ್ತಿದ್ದರು. ನಾನು ಆಗ ಜಿಲ್ಲಾ ಕಾರ್ಯದರ್ಶಿ ಆಗಿದ್ದೆ. ಮತ್ತು ರಾಜ್ಯ ಸಮಿತಿಯಲ್ಲಿಯೂ ಇದ್ದೆ. ಹಾಗಾಗಿ ಬೆಂಗಳೂರು ಸಭೆಗೆ ಹೋಗುವ ಕೆಲಸ ನನ್ನದು. ಅಲ್ಲಿ ನಡೆದ ತೀರ್ಮಾನವನ್ನು ಜಿಲ್ಲೆಯಲ್ಲಿ ಜಾರಿಗೊಳಿಸುವ ಕೆಲಸ ಅಣ್ಣನದು. ಏಕೆಂದರೆ ಈ ಸಮಿತಿಯಲ್ಲಿರುವ ಉತ್ತರ ಕನ್ನಡದ ಹಲವು ಲೇಖಕರು, ಹಿರಿಯರು ಅಣ್ಣನ ಮಾತನ್ನು ಅತ್ಯಂತ ಗೌರವದಿಂದ ಮತ್ತು ಪ್ರಾಮಾಣಿಕವಾಗಿ ಜಾರಿಗೊಳಿಸುತ್ತಿದ್ದರು.

ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯಕ್ರಮವೆಂದರೆ ಅಣ್ಣನಿಗೆ ಎಲ್ಲಿಲ್ಲದ ಆಸಕ್ತಿ, ಉತ್ಸಾಹ. ನಾವು ಆಗ ಹುಡುಗರು. ಜಿ.ಎಸ್. ಅವಧಾನಿಯವರು, ಎಸ್.ಎಂ.ನಾಯ್ಕರು, ಶಾಂತಿ ನಾಯಕರು, ನಾನು, ಶ್ರೀಪಾದ, ಲೋಕೇಶ, ಮಾಸ್ತಿ ಗೌಡ, ಮಮತಾ ಭಾಗ್ವತ್, ಜಿ.ಟಿ.ಹಳ್ಳೇರ್, ಎಸ್.ಡಿ ಹೆಗಡೆ ಹೀಗೆ ಹಲವರು ತಂಡವಾಗಿ ಕೆಲಸ ಮಾಡುತ್ತಿದ್ದೆವು. ಹತ್ತು ದಿನಗಳ ವಿಜ್ಞಾನ ಜಾಥಾ ಮಾಡಿದೆವು. ಲೋಕದರ್ಶನ ಎನ್ನುವ ಒಂದು ಸಂವಾದ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ನಡೆಯಿತು. ಪ್ರ. ನರೇಂದ್ರ ನಾಯಕರನ್ನು ಕರೆದು ಜಿಲ್ಲೆಯಾದ್ಯಂತ ಪವಾಡ ಬಯಲು ಕಾರ್ಯಕ್ರಮ ನಡೆಸಿದೆವು. ಹಲವು ಕರಪತ್ರಗಳ ಬಿಡುಗಡೆ ಮಾಡಿದೆವು. ತುಂಬಾ ಕಮ್ಮಟಗಳು, ಶಿಬಿರಗಳು ವಿಚಾರ ಸಂಕಿರಣಗಳು ಆ ಕಾಲದಲ್ಲಿ ಜಿಲ್ಲೆಯಲ್ಲಿ ನಡೆದವು. ಅದರಲ್ಲೂ ಇಡೀ ಜಿಲ್ಲೆಯಲ್ಲಿ ನಡೆದ ‘ಚಿಣ್ಣರ ಮೇಳ’ ಒಂದು ಅವಿಸ್ಮರಣೀಯ ಕಾರ್ಯಕ್ರಮ. ಸುಮಾರು ನೂರಾ ಇಪ್ಪತ್ತೈದಕ್ಕಿಂತ ಹೆಚ್ಚು ಚಿಣ್ಣರ ಮೇಳಗಳು ಜಿಲ್ಲೆಯಲ್ಲಿ ನಡೆದವು. ಪಾಠ ನಾಟಕ ಎನ್ನುವ ಒಂದು ವಿಭಾಗ ಚಿಣ್ಣರ ಮೇಳದಲ್ಲಿ ಸೇರಿದ್ದು ಉತ್ತರ ಕನ್ನಡದಿಂದಲೇ. ಹಾಸನದಿಂದ ಸೌಭಾಗ್ಯಮ್ಮ, ಅಂತೋನಿಸ್ವಾಮಿ ಬರುತ್ತಿದ್ದರು. ಶ್ರೀಪಾದ ಭಟ್, ಕಿರಣ ಭಟ್,ರಾಜು ನಾಯ್ಕ, ಮಾಧವಿ ಭಂಡಾರಿ ಮತ್ತು ನಾವೆಲ್ಲ ಸೇರಿ (ಹಲವರ ಹೆಸರು ನೆನಪಾಗುತ್ತಿಲ್ಲ.) ಪ್ರಾಥಮಿಕ ಶಾಲೆಯಲ್ಲಿ ಅತಿ ಹೆಚ್ಚು ಮಕ್ಕಳ ನಾಟಕವನ್ನು ಆಯಾ ಶಾಲೆಯ ಶಿಕ್ಷಕರೇ ಸಿದ್ಧಪಡಿಸುವಂತೆ ಮಾಡಿದೆವು. ಇದರಲ್ಲಿ ಅಣ್ಣನ ನಾಟಕವೇ ಅತಿ ಹೆಚ್ಚು ಬಳಕೆಯಾಯಿತು. ಆ ನಂತರ ಇದರ ಅನುಭವದ ಆಧಾರದಲ್ಲಿ ಚಿಂತನ ಉತ್ತರ ಕನ್ನಡದಿಂದ ಮಕ್ಕಳ ನಾಟಕ ರೆಫರ್ಟರಿ ಪ್ರಾರಂಭಿಸಿ ಸುಮಾರು ಐದು ವರ್ಷ ತಿರುಗಾಟವನ್ನು ಸಂಘಟಿಸಿದೆವು.

ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ, ಧಾರವಾಡ ಇದರ ರಾಜ್ಯ ಅಧ್ಯಕ್ಷರಾಗಿ/ಸಂಚಾಲಕರಾಗಿ ಚಂಪಾ ಅವರಿದ್ದರು. ಅದರ ಉತ್ತರ ಕನ್ನಡ ಜಿಲ್ಲಾ ಸಂಚಾಲಕರಾಗಿ ಅಣ್ಣ ಕಾರ್ಯನಿರ್ವಹಿಸಿದರು. ತಾಲೂಕುವಾರು ಸಂಚಾಲಕರ ತಂಡವನ್ನೇ ರಚಿಸಿಕೊಂಡಿದ್ದ. ಕೆಲವು ವರ್ಷಗಳ ಕಾಲ ಉತ್ತರ ಕನ್ನಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯನೂ ಆಗಿ ಕೆಲಸ ಮಾಡಿದನು. ಉ.ಕ ದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕುವಲ್ಲಿ ಮತ್ತು ಹಲವು ಹೋರಾಟಗಳನ್ನು ರೂಪಿಸುವಲ್ಲಿ ಅಣ್ಣನ ಕೊಡುಗೆ ಮರೆಯಲಾಗದು. ನಾನು ಪಿಯುಸಿ ಓದುವಾಗಲೇ ಡಿ.ಎಸ್.ಎಸ್ ನ ಒಂದು ಅಧ್ಯಯನ ಶಿಬಿರಕ್ಕೆ ನನ್ನನ್ನು ಕಳುಹಿಸಿ ಕೊಟ್ಟಿದ್ದ. ಇದು ನನ್ನ ಮೊದಲ ಅಧ್ಯಯನ ಶಿಬಿರ ಕೂಡ ಆಗಿತ್ತು. ಹೀಗೆ ಯಾವುದೇ ಇಂತಹ ಜನಪರ ಸಂಘಟನೆಗಳು ಜಿಲ್ಲೆಗೆ ಪ್ರವೇಶಿಸಿದರೂ- ಮೇಲಿನಿಂದ ಹಣ ಬಾರದೇ ಕೈ ಯಿಂದ ಖರ್ಚು ಮಾಡಿಕೊಳ್ಳುವ ಸಂಘಟನೆಗಳಿಗೆ- ಈತನನ್ನೇ ಹಿಡಿದು ಕೊಳ್ಳುತ್ತಿದ್ದರು! ಒಪ್ಪಿಕೊಂಡಿದ್ದನ್ನು ಪ್ರಾಮಾಣಿಕವಾಗಿ ಮಾಡುವ ಈತನ ಗುಣ ಎಲ್ಲರಿಗೂ ಇಷ್ಟವಾದುದು.

ಕೊನೆಯಲ್ಲಿ ಆತ ಪೂರ್ಣವಾಗಿ ತೊಡಗಿಸಿಕೊಂಡಿದ್ದು ಚಿಂತನ ಉತ್ತರ ಕನ್ನಡ ಸಂಘಟನೆಯಲ್ಲಿ. ಇದು ಉತ್ತರ ಕನ್ನಡದಲ್ಲಿ ಬಂಡಾಯ, ಬಿಜಿವಿಎಸ್, ಡಿ.ಎಸ್.ಎಸ್ ಮತ್ತು ಎಸ್.ಎಫ್.ಐ ನಂಥ ಸಂಘಟನೆಗಳ ಆಶಯಗಳ ಮೊತ್ತವಾಗಿತ್ತು. 1993 ರಲ್ಲಿ ಇದು ಪ್ರಾಂಭವಾದಾಗ ಜಿಲ್ಲೆಯ ಎಲ್ಲಾ ಪ್ರಗತಿಪರರೂ ಅದರ ಬೆನ್ನುಲುಬಾಗಿ ನಿಂತರು. ನಾನು ಮತ್ತು ಸಿ. ಆರ್. ಶಾನಭಾಗ್ ಜಿಲ್ಲಾ ಸಂಚಾಲಕರಾಗಿದ್ದೆವು. ಅದಕ್ಕೊಂದು ಬೈಲಾ ಬೇಕೆಂದು ಅಣ್ಣ ಮತ್ತು ಜಿ. ಎಸ್. ಅವಧಾನಿಯವರ ನೇತೃತ್ವದಲ್ಲಿ ಒಂದು ಬೈಲೊ ಸಮಿತಿ ಕೂಡ ಇತ್ತು. ಬೈಲೋ ಬರೆದುಕೊಟ್ಟವನು ಅಣ್ಣ. ಅವಧಾನಿಯವರು ಅದನ್ನು ನೋಡಿ ‘ಆರ್. ವಿ. ಬರೆದ ಮೇಲೆ ನಾನು ನೋಡುವುದೇನು?’ ಎಂದು ಖುಷಿಯಿಂದ ಸಹಿ ಹಾಕಿ ಕೊಟ್ಟಿದ್ದರು. ಚಿಂತನ ಕಿರು ಪುಸ್ತಕ ಮಾಲೆಯಲ್ಲಿ 25-30 ಕಿರು ಪುಸ್ತಕಗಳು ಹೊರಬಂದು ಲಕ್ಷಾಂತರ ಪ್ರತಿಗಳು ಮಾರಾಟವಾದವು. ಚಿಂತನ ಕನ್ನಡ ಪುಸ್ತಕ ಮಳಿಗೆಯನ್ನು ಪ್ರಾರಂಭಿಸಿದೆವು. ನಂತರ ಚಿಂತನ ರಂಗ ಅಧ್ಯಯನ ಕೇಂದ್ರ ಸ್ಥಾಪಿಸಿದೆವು. ಈ ಎಲ್ಲಾ ಸಂದರ್ಭದಲ್ಲೂ ಅಣ್ಣನ ಮಾರ್ಗದರ್ಶನ, ಪಾಲ್ಗೊಳ್ಳುವಿಕೆ ಪೂರ್ಣ ಪ್ರಮಾಣದಲ್ಲಿತ್ತು.

ಹೀಗೆ ಜಿಲ್ಲೆಯಲ್ಲಿ ನಡೆದ ಹಲವು ಸಂಘಟನೆಗಳ ಆಧಾರ ಸ್ಥಂಭವಾಗಿ ಹೊಸ ತಲೆಮಾರನ್ನು ಪ್ರಭಾವಿಸಿದ್ದು ಈಗ ನೆನಪು ಮಾತ್ರವಲ್ಲ ಸ್ಪೂರ್ತಿ ಕೂಡ.

Leave a Reply