ಬಿ ವಿ ಭಾರತಿ ಹೊಸ ಕಥೆ ‘ಬ್ಯಾಡ್ ಡೆಟ್’

ಬ್ಯಾಡ್ ಡೆಟ್

ಬಿ ವಿ ಭಾರತಿ 

ಒಂದು ವಾರದಿಂದ ಆಫೀಸಿನಲ್ಲಿ ಹೆಣ ಬೀಳುವಷ್ಟು ಕೆಲಸ. ಮಾರ್ಚ್ 31 ಬಂತೆಂದರೆ ವರ್ಷದ ಕೊಳೆಗಳನ್ನೆಲ್ಲ ಗುಡಿಸುವ ಕೆಲಸ ಶುರುವಾಗುತ್ತದೆ. ಚಿತ್ರಗುಪ್ತ ನಾವು ಸತ್ತ ನಂತರ ಅಕೌಂಟ್ ಪುಸ್ತಕ ತೆರೆದಿಟ್ಟುಕೊಂಡು ಡೆಬಿಟ್ಟು, ಕ್ರೆಡಿಟ್ಟುಗಳನ್ನು ಲೆಕ್ಕ ಹಾಕಿ ಸ್ವರ್ಗಕ್ಕೋ, ನರಕಕ್ಕೋ ತಳ್ಳಿ ಮುಗಿಸಿ ಕೈ ತೊಳೆದುಕೊಳ್ಳುತ್ತಾನಂತಲ್ಲ, ಹಾಗೆಯೇ ವರ್ಷದ ಲೆಕ್ಕವೆಲ್ಲ ತಡಕಾಡಿ, ಉತ್ತರ ಸಿಗದ್ದನ್ನು ಸಸ್ಪೆನ್ಸ್ ಅಕೌಂಟಿನಲ್ಲೋ, ಬ್ಯಾಡ್ ಡೆಟ್ ಅಕೌಂಟಿನಲ್ಲೋ ಹೂತು ಸಮಾಧಿಯ ಮೇಲೆ ಹೂವಿಡುವ ಸಮಯವಿದು.

ಈ ಸಲವಂತೂ ದರಿದ್ರ ಲೆಕ್ಕ ಸ್ವಲ್ಪ ಹೆಚ್ಚೇ ತಲೆತಿಂದು ಬಿಟ್ಟಿತು.  ಅಂಕಿಗಳನ್ನು ನೋಡಿ ನೋಡಿ ತಲೆ ನೋವು ಬಂದಿತ್ತು. ಹಾಗಾಗಿ ಆಫೀಸಿಗೆ ಒಂದು ದಿನ ರಜೆ ಹಾಕಬೇಕು ಅಂತ ಒಂದು ವಾರದಿಂದ ಅಂದುಕೊಳ್ಳುತ್ತಿದ್ದೆ. ಇವತ್ತು ಬೆಳಿಗ್ಗೆ ಎದ್ದವನು ‘ಹುಷಾರಿಲ್ಲ’ ಅಂತ ಫೋನು ಮಾಡಿ, ರಜೆ ಹಾಕಿ ನೆಮ್ಮದಿಯಾಗಿ ಇರಬೇಕು ಅಂದುಕೊಳ್ಳುವುದರಲ್ಲೇ ಬೆಳಿಗ್ಗೆ ಬೆಳಿಗ್ಗೆಯೇ ಲಕ್ಷ್ಮಿ ಅಕ್ಕನ ಫೋನು ‘ಸ್ವಲ್ಪ ಹೊತ್ತು ಬಂದು ಹೋಗುತ್ತೀಯಾ’ ಅಂತ. ಇನ್ಯಾರೇ ಆದರೂ ಇವತ್ತು ಸಾಧ್ಯವಿಲ್ಲ ಅಂತ ನಿರಾಕರಿಸಿ ಬಿಡ್ತಿದ್ದೆ. ಆದರೆ ಅಕ್ಕನಿಗೆ ಹೇಗೆ ಹಾಗೆ ಹೇಳುವುದು? ಬದುಕಿನಲ್ಲಿ ಯಾವತ್ತೇ ಆದರೂ, ಎಂಥದ್ದೇ ಸಂದರ್ಭದಲ್ಲೂ ಜೊತೆಗಿರುವ ಅಕ್ಕನಿಗೆ ಇಲ್ಲ ಅನ್ನುವುದು ಹೇಗೆ! ಯಾವ ಸ್ಥಿತಿಯಲ್ಲೇ ಇದ್ದರೂ ಹೋಗಬೇಕು….

ಆದರೆ ಯಾಕೆ ಕರೆದಳು ಅನ್ನುವುದೇ ಅರ್ಥವಾಗುತ್ತಿಲ್ಲ. ಸಾಧಾರಣವಾಗಿ ಶಾಂತಳಾಗಿಯೇ ಇರುತ್ತಿದ್ದ ಅಕ್ಕನ ದನಿಯಲ್ಲಿ ಸಣ್ಣ ಉದ್ವಿಗ್ನತೆಯಿದ್ದ ಹಾಗಿತ್ತು. ಯಾಕಿರಬಹುದು ಆ ಉದ್ವಿಗ್ನತೆ? ಅಂಥದ್ದೇನಾಯಿತು? ಅವಳು ಉದ್ವಿಗ್ನಳಾಗಿದ್ದನ್ನು ನಾನು ನೋಡಿದ ಒಂದೇ ಸಂದರ್ಭ ಎಂದರೆ ಈಗೆರಡು ವರ್ಷದ ಹಿಂದೆ ಭಾವನಿಗೆ ಎರಡೂ ಕಿಡ್ನಿ ಕೆಲಸ ಮಾಡುವುದು ನಿಲ್ಲಿಸಿ ಡಯಾಲಿಸಿಸ್‌‌ಗೆ ದೇಹ ಒಡ್ಡಬೇಕಾದ ಸಂದರ್ಭದಲ್ಲಿ ಮಾತ್ರ. ಆ ನಂತರ ಅದಕ್ಕೂ ಒಗ್ಗಿಕೊಂಡಳು ಎಂದಿನಂತೆ. ಬರಬರುತ್ತಾ ಒಬ್ಬಳೇ ಮ್ಯಾನೇಜ್ ಮಾಡುವುದು ಕಷ್ಟವಾಗಿ ಹಾಸನದ ವಾಸ ಮುಗಿಸಿ, ಇಲ್ಲಿದ್ದ ಹರಿಯ ಮನೆಗೆ ಶಿಫ್ಟ್ ಆದರು ಅಕ್ಕ-ಭಾವ. ಮನೆಯ ಹತ್ತಿರವೇ ಇದ್ದ ಕಿಡ್ನಿ ಸೆಂಟರ್ ಆಸ್ಪತ್ರೆಯಲ್ಲೇ ಡಯಾಲಿಸಿಸ್ ಶುರು ಆಗಿದ್ದೂ ಆಯಿತು. ವಾರಕ್ಕೆ ಎರಡು ದಿನ ಡಯಾಲಿಸಿಸ್ ಮತ್ತು ಆ ನಂತರದ ಭಾವನ ಸುಧಾರಿಸಿಕೊಳ್ಳುವಿಕೆಯಲ್ಲಿ ಅಕ್ಕನಿಗೆ ಬಿಡುವು ಅನ್ನುವುದೇ ಸಿಗುತ್ತಿರಲಿಲ್ಲ. ಹಾಗಾಗಿ ನಾನು ಸಹಾ ಹೆಚ್ಚೆಂದರೆ ಎರಡು-ಮೂರು ಸಲ ಹೋಗಿರಬೇಕು. ಆದರೆ ಬಿಡುವು ಮಾಡಿಕೊಂಡು ಅವಳೇ ಆಗೀಗ ಕಾಲ್ ಮಾಡಿ ಮಾತಾಡುತ್ತಾಳೆ. ಅದು ಬಿಟ್ಟರೆ ಈಗಿಂದೀಗ ಬಾ ಅನ್ನುವ ರೀತಿಯಲ್ಲಿ ಅವಳು ಕರೆದಿದ್ದೇ ಇಲ್ಲ.  ಯಾಕೆ ಕರೆದಿರಬಹುದು….? ಮನಸ್ಸಿಗೆ ಯಾವ ಕಾರಣವೂ ಹೊಳೆಯಲಿಲ್ಲ…

***
ಮನೆಯೊಳಗೆ ಕಾಲಿಟ್ಟಾಗ ಅಕ್ಕ ನನಗಾಗೇ ಕಾಯುತ್ತಿದವಳ ಹಾಗೆ ಕೂತಿದ್ದಳು. ನಾನು ಕೇಳುವ ಮೊದಲೇ ‘ಇವತ್ತು ಡಯಾಲಿಸಿಸ್ ಅಲ್ವಾ. ಅದಕ್ಕೇ ಭಾವನನ್ನು ಅಸ್ಪತ್ರೆಯಲ್ಲಿ ಬಿಟ್ಟು ಬಂದಿದ್ದೀನಿ. ನಿನ್ನ ಜೊತೆ ಮಾತಾಡಬೇಕು ಅಂತ ಮನೆಗೆ ಬಂದೆ’ ಅಂದಳು.

ಅಕ್ಕ ಸೋತು ಹೋಗಿದ್ದ ಹಾಗೆ ಕಂಡಳು. ಮೊದಲಿನಿಂದ ತುಂಬ ಪುಟ್ಟದಾಗಿದ್ದ ಅವಳು ಈಗಂತೂ ತೋಯ್ದ ಗುಬ್ಬಚ್ಚಿಯ ಹಾಗೆ ಕಂಡಳು. ಕಣ್ಣುಗಳಲ್ಲಿ ನಿಜಕ್ಕೂ ಉದ್ವಿಗ್ನತೆಯಿತ್ತು. ಹಾಗಿದ್ದರೆ ನನಗೆ ಹಾಗನ್ನಿಸಿದ್ದು ನನ್ನ ಕಲ್ಪನೆಯಲ್ಲ ಅಂತಾಯಿತು.

‘ನೀನು ಬಂದಿದ್ದು ಸ್ವಲ್ಪ ಸಮಾಧಾನವಾಯಿತು ಜಗ್ಗ’ ಎನ್ನುತ್ತ ಮನೆಯಲ್ಲಿ ಯಾರೂ  ಯಾರೋ ಕೇಳಿಸಿಕೊಂಡಾರು ಅನ್ನುವಂತೆ ನನ್ನ ಹತ್ತಿರಕ್ಕೆ ಖುರ್ಚಿ ಎಳೆದುಕೊಳ್ಳುತ್ತಾ ಕುಳಿತು ‘ಭಾವನಿಗೆ ಇನ್ನು ಡಯಾಲಿಸಿಸ್ ಸಾಧ್ಯವಿಲ್ಲವಂತೆ. ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡ್ಬೇಕಂತೆ’ ಎಂದಳು.

ಕಿಡ್ನಿ ಟ್ರಾನ್ಸ್‌ಪ್ಲಾಂಟ್ … ನಾಲಿಗೆಯ ಪಸೆ ಆರಿತು … ಓಹ್ ಇದು ಸುಲಭದ ಕೆಲಸವಲ್ಲ! ತುಂಬ ಖರ್ಚಿನ ಬಾಬ್ತು ಅದು. ಎಷ್ಟಾಗಬಹುದೋ! ಆಪರೇಶನ್, ಕಿಡ್ನಿ, ಆ ನಂತರದ ಖರ್ಚು ಎಲ್ಲ ಸೇರಿದರೆ ಬಹುಶಃ 10 ಲಕ್ಷಕ್ಕೂ ಹೆಚ್ಚು ಖರ್ಚಾಗಬಹುದು…. ‘ಎಷ್ಟಾಗಬಹುದಂತೆ? ಹೇಗೋ ಅಡ್ಜಸ್ಟ್ ಮಾಡೋಣ ಸುಮ್ಮನಿರು’ ಎಂದೆ.

‘ಅದಲ್ಲ ಜಗ್ಗ … ಈಗ ಪ್ರಶ್ನೆ ಹಣದ್ದಲ್ಲ, ಕಿಡ್ನಿಯದ್ದು. ಹರಿ ಎಲ್ಲ ಟೆಸ್ಟ್ ಮುಗಿಸಿ ಕಿಡ್ನಿ ಹೊಂದುತ್ತದೆ ಅಂತ ಡಾಕ್ಟರ್ ಹೇಳಿದ ಮೇಲೆ ಈಗ ಕಿಡ್ನಿ ಕೊಡಲ್ಲ ಅಂತಿದಾನೆ ….’

ಸುಮಾರು ಎರಡು ನಿಮಿಷಗಳ ಕಾಲ ಇಬ್ಬರೂ ಮಾತಿಲ್ಲದೇ ಕೂತುಬಿಟ್ಟೆವು. ಈಗ ಗೊತ್ತಾಯಿತು ಅಕ್ಕ ನನ್ನನ್ನು ಬರಹೇಳಿದ ಕಾರಣ. ಅಕ್ಕನಿಗೆ ಈ ಮಾತನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ ಖಂಡಿತ. ತನ್ನ ಸುಖ ಅನ್ನುವುದನ್ನು ಯಾವತ್ತೂ ಯೋಚಿಸೇ ಇರದವಳಿಗೆ ಮಗನ ಮಾತು ಆಘಾತ ಮಾಡಿರಬೇಕು ಪಾಪ. ಅಂದರೆ …. ಈಗ ನಾನು ಹರಿಯನ್ನು ಕಿಡ್ನಿ ಕೊಡಲು ಒಪ್ಪಿಸಬೇಕು. ಆದರೆ … ಆದರೆ ಈ ವಿಷಯದಲ್ಲಿ ನಾನು ಮೂಗು ತೂರಿಸುವುದು ಸರಿ ಆದೀತಾ? ಇದೇನು ಹಣ ಕೊಡು ಅಂದ ಹಾಗಲ್ಲ, ನಿನ್ನದಿಷ್ಟು ಜಮೀನು ಕೊಡು ಅಂದ ಹಾಗಲ್ಲ. ಕಿಡ್ನಿ ಕೊಡು ಅಂತ ಬಲವಂತ ಪಡಿಸುವುದಾದರೂ ಹೇಗೆ’ ತಲೆಯ ನರಗಳೆಲ್ಲ ಬಿಗಿದ ಹಾಗೆ ಅನ್ನಿಸಿತು.

ಅಕ್ಕ ನನ್ನ ಮುಖವನ್ನೇ ನೋಡುತ್ತಾ ಕುಳಿತಿದ್ದಳು ನನ್ನ ಭರವಸೆಯ ಮಾತು ಹೊರಬೀಳಲಿ ಎನ್ನುವಂತೆ. ನಾನು ಮಾತನಾಡದೇ, ಸುಳ್ಳು ಭರವಸೆಯನ್ನೂ ಕೊಡದೇ ಸುಮ್ಮನೆ ಕುಳಿತಿದ್ದೆ. ಅಷ್ಟು ದೊಡ್ಡ ಹುಡುಗ, ನಿನಗ್ಯಾಕೆ ಬೇಕು ಇದೆಲ್ಲ ಅಂತ ತಿರುಗಿಬಿದ್ದರೆ …?

‘ಮೊನ್ನೆಯಿಂದ ಇದೇ ಮಾತು ಆಡಿ ಆಡಿ ಸೋತು ಹೋಗಿದ್ದೀನಿ. ಇನ್ನು ನಿನ್ನ ಮಾತಿಗೇನಾದರೂ ಬೆಲೆ ಕೊಟ್ಟರೆ ಕೊಡಬೇಕಷ್ಟೇ’ ಅಕ್ಕನ ಸೋತ ದನಿ. ಪಾಪ ಅನ್ನಿಸಿತು ಯಾಕೋ. ಅಬ್ಬಬ್ಬಾ ಅಂದರೆ ಹರಿ ಇನ್ನೇನು ಅನ್ನಬಹುದು? ಒಂದಿಷ್ಟು ಬಯ್ದಾನು ಅಷ್ಟೇ. ಬಯ್ಯಿಸಿಕೊಂಡರಾಯಿತು ಇವಳ ಸಲುವಾಗಿ. ‘ಆಯ್ತು ಪ್ರಯತ್ನಿಸ್ತೀನಿ’ ಎಂದೆ ತುಸು ಹೊತ್ತು ತಡೆದು …

***

ಒಂದಾದ ಮೇಲೊಂದು ಮಕ್ಕಳಾಗಿ, ಸದಾ ಬಸಿರು-ಬಾಣಂತನದಲ್ಲೇ ಅಮ್ಮ ಮುಳುಗೇಳುತ್ತಿದ್ದಾಗ ಅಮ್ಮನಾದವಳು ಲಕ್ಷ್ಮಿ ಅಕ್ಕ. ಅಮ್ಮ ಇದೆಲ್ಲ ಯಾವುದೂ ಇಲ್ಲದಿರುವಾಗ ಒಂದು ಅರೆಘಳಿಗೆ ಕೂಡುವಂಥವಳಲ್ಲ. ಆದರೆ ಹಾಗೇನಾದರೂ ಇದ್ದಾಗ ಮಾತ್ರ ಅನಿವಾರ್ಯವಾಗಿ ಎಲ್ಲ ಕೆಲಸ ಅಕ್ಕನ ತಲೆಗೆ ಬೀಳುತ್ತಿತ್ತು.

ಮನೆಯಲ್ಲಿ ದೊಡ್ಡಿ ಇದ್ದಳು. ದೊಡ್ಡ ಹೋದಮೇಲೆ ಮಕ್ಕಳಿಲ್ಲದ ಅವಳು ನಮ್ಮ ಮನೆಯಲ್ಲೇ ಇದ್ದಳು. ಸಾಕಷ್ಟು ಗಟ್ಟಿಯಾಗಿಯೂ ಇದ್ದಳು. ಆದರೆ ಯಾವ ಕೆಲಸಕ್ಕೂ ಕೈಹಾಕದೇ ಸುಮ್ಮನೇ ಕೂತುಕೊಳ್ಳುವುದು ತನ್ನ ಆಜನ್ಮಸಿದ್ದ ಹಕ್ಕು ಅನ್ನುವಂತೆ ಇದ್ದುಬಿಡುತ್ತಿದ್ದಳು. ಹಾಗಾಗಿ ಎಲ್ಲ ಕೆಲಸ ಲಕ್ಷ್ಮಿ ಅಕ್ಕ ಮತ್ತು ಉಳಿದ ಸಣ್ಣಪುಟ್ಟ ಪುಡಿ ಕೆಲಸಕ್ಕೆ ಜ್ಯೋತಿ, ಸುಮಾ, ರೂಪಾ. ಲಕ್ಷ್ಮಿ ಅಕ್ಕನಿಗೆ  ಆಗ ಹದಿನೇಳು, ಹದಿನೆಂಟು ವರ್ಷವಿರಬೇಕು. ಆದರೂ ಮೊದಲ ಮಗಳಾದ್ದರಿಂದ ಅಮ್ಮನ ಬಾಣಂತನದಲ್ಲಿ ಅನಿವಾರ್ಯವಾಗಿ ನಮ್ಮೆಲ್ಲರ, ಅಂದರೆ ಮನೆಯಲ್ಲಿದ್ದ ಏಳು ಮಕ್ಕಳ ಜವಾಬ್ದಾರಿ ಅವಳ ಮೇಲೇ ಬೀಳುತ್ತಿತ್ತು. ಪಾಪ ಎಷ್ಟು ಕೆಲಸ ಒಬ್ಬಳೇ ಮಾಡುತ್ತಿದ್ದಳು….

ತೋಟಕ್ಕೆ ಹತ್ತಿರವಾಗಿದ್ದ ನಮ್ಮ ಮನೆಯ ಸುತ್ತ-ಮುತ್ತ ಮನೆಗಳೂ ಇರಲಿಲ್ಲ. ಹಾಗಾಗಿ ಸಹಾಯಕ್ಕೂ ಯಾರೂ ಸಿಗುತ್ತಿರಲಿಲ್ಲ. ಪಟ್ಟಣದ ಜನರು ಹಳ್ಳಿಯ ಜನ ತುಂಬ ಮುಗ್ಧರೆನ್ನುವಂತೆ ತಿಳಿದುಕೊಳ್ಳುತ್ತಾರಾದರೂ, ನಮ್ಮೂರಿನ ಜನ ಅಂಥ ಮುಗ್ಧರೇನೂ ಆಗಿರಲಿಲ್ಲ. ತಮಗೆ ಹಣವೋ, ಅಥವಾ ಮದುವೆಗೆಂದು ಬಟ್ಟೆಯೋ, ಅಕ್ಕಿಯೋ ಬೇಕಿದ್ದಾಗ ಅವರ ಚುರುಕು ನೋಡಬೇಕು!

ಬೆಳಿಗ್ಗೆ ನಾವೆಲ್ಲ ಏಳುವ ಮೊದಲೇ ಹಾಜರಾಗಿ ಸೌದೆ ಒಡೆದು ಒಟ್ಟುವುದೇನು, ಭಾವಿಯಿಂದ ನೀರು ಸೇದಿ ತೊಟ್ಟಿ ಭರ್ತಿ ಮಾಡುವುದೇನು, ಕೊಟ್ಟಿಗೆಯಲ್ಲಿದ್ದ ದನಗಳಿಗೆ ಹುಲ್ಲು – ಕಲಗಚ್ಚು ಇಡುವುದೇನು! ಇಡೀ ಹಿತ್ತಲಿನ ತುಂಬ ಪಾದರಸದಂತೆ ಓಡಾಡಿ ಎಲ್ಲ ಕೆಲಸಕ್ಕೂ ಕೈ ಹಾಕುತ್ತಿದ್ದರು. ಅಕ್ಕನಿಗೇನು ಗೊತ್ತಿಲ್ಲದ್ದಾ ಇವತ್ತು ಏನೋ ಬೇಕಿದೆ. ಹಾಗಾಗಿ ಇಷ್ಟೆಲ್ಲ ಅಕರಾಸ್ಥೆ. ಬೇಕಿದ್ದು ಕೈ ಸೇರಿದ ನಂತರ ಮುಂದೆ ಮತ್ತೇನೋ ಬೇಕಾಗುವವರೆಗೂ ಅವರು ಇತ್ತ ಕಡೆ ತಲೆಯಿಟ್ಟು ಮಲಗುವುದೂ ಇಲ್ಲ ಎಂದು. ಆದರೆ ಪಾಪ ದಿನಾ ಕೆಲಸ ಮಾಡಿ ದಣಿದಿರುತ್ತಿದ್ದಳಲ್ಲ ಹಾಗಾಗಿ ಮಾಡುವಾಗ ಒಂದು ದಿನಕ್ಕಾದರೂ ಸಹಾಯವಾಗಲಿ ಅನ್ನುವಂತೆ ಬೇಡ ಎನ್ನದೇ ಸುಮ್ಮನೆ ಇರುತ್ತಿದ್ದಳು. ಕೆಲಸ ಮುಗಿಸಿದ ನಂತರ ಹಿತ್ತಲಲ್ಲಿ ಕೂರಿಸಿ ತಿನ್ನಲು ಉಳಿದಿದ್ದ ತಂಗಳನ್ನ, ಸಾರು ಕೊಡುವಾಗ ಅವರ ಆಶ್ವಾಸನೆ ನೋಡಬೇಕು!

ಮರುದಿನದಿಂದ ಬೆಳಿಗ್ಗೆ ಅಕ್ಕ ಕಣ್ಣು ಬಿಡುವುದರಲ್ಲಿ ತಾವು ಬಂದು ಎಲ್ಲ ಕೆಲಸ ಮಾಡಿ ಮುಗಿಸುವುದಾಗಿ ಹೇಳುವ ಮಾತನ್ನು ಹೊಸಬರ್ಯಾರಾದರೂ ಕೇಳಿದರೆ ಮರುಳಾಗಿ ಕೇಳಿದಷ್ಟು ಕೊಟ್ಟುಬಿಡಬೇಕು ಅನ್ನುವಂತಿರುತ್ತಿತ್ತು. ಆದರೆ ಅಕ್ಕನಿಗೆ ಇವೆಲ್ಲ ಹಳೆಯ ಕಥೆಯಾದ್ದರಿಂದ – ಈಗೇನು ಬೇಕು ನಿಂಗೆ ಬೇಗ ಹೇಳು. ಒಳಗೆ ಕೆಲ್ಸ ಇದೆ ಎಂದು ನೇರವಾಗಿ ಕೇಳಿ ಬಿಡುತ್ತಿದ್ದಳು. ಆಗ ಹಲ್ಲುಗಿಂಜುತ್ತ ಹೇಗೂ ಕೇಳಿದಷ್ಟು ಕೊಡುವುದಿಲ್ಲ ಎನ್ನುವ ಅರಿವಿದ್ದ ಅವರು ತಮಗೆ ಬೇಕಿದ್ದಕ್ಕಿಂತ ಮೂರರಷ್ಟು ಕೇಳಿ, ಅಕ್ಕ ಅಮ್ಮನ ಜೊತೆ ಮಾತಾಡಿ, ಅಮ್ಮ ಅಪ್ಪನಿಗೆ ಸುದ್ದಿ ಮುಟ್ಟಿಸಿ, ಅಪ್ಪ ಅಷ್ಟಿಲ್ಲ ಇಷ್ಟೇ ಎಂದು ಹೇಳಿ, ಅವರು ಮತ್ತಿಷ್ಟು ದೈನ್ಯರಾಗಿ ಕೇಳಿ ಕೊನೆಗೆ ಯಾವುದೋ ಒಂದು ಮೊತ್ತಕ್ಕೆ ಇಬ್ಬರೂ ಒಪ್ಪಿ ಅದನ್ನು ತೆಗೆದುಕೊಂಡು ಜಾಗ ಖಾಲಿ ಮಾಡಿದರೆ ಮುಗಿಯಿತು … ಮತ್ತೆ ಅವರನ್ನು ಕಾಣುತ್ತಿದ್ದುದು ಮತ್ತೆ ಹಣದ ಅವಶ್ಯಕತೆ ಬಿದ್ದಾಗಲೇ. ಅದು ಅಕ್ಕನಿಗೂ ಗೊತ್ತಿರುತ್ತಿದ್ದರೂ ಮತ್ತೆ ಮತ್ತೆ ಕರಗಿ ಹಣ ಕೊಟ್ಟು ಕಳಿಸುತ್ತಿದ್ದಳು. ನಾಳೆ ಅವರು ಬರುವ ಯಾವ ಭರವಸೆಯೂ ಇಲ್ಲದಿದ್ದರೂ ಕೊಡುತ್ತಿದ್ದಳು ಮತ್ತು ಮರುದಿನ ಅವರು ಬಾರದಿದ್ದಾಗ ಗೊಣಗಾಡದೇ, ಮೋಸ ಹೋದೆ ಅನ್ನುವ ಸಿಟ್ಟು ಅಥವಾ ಅಸಹನೆಯನ್ನೂ ತೋರದೇ ತನ್ನ ಪಾಡಿಗೆ ತಾನು ಕೆಲಸಕ್ಕೆ ಕೈ ಹಚ್ಚುತ್ತಿದ್ದಳು.

ನಾವೆಲ್ಲ ಉಂಡಾಡಿಗುಂಡಗಳು ಯಾರೂ ಅವಳಿಗೆ ಕೆಲಸದಲ್ಲಾಗಲೀ ಅಥವಾ ವ್ಯವಹಾರದಲ್ಲಾಗಲೀ ನಯಾಪೈಸೆ ಉಪಯೋಗಕ್ಕೆ ಬಾರದೇ ನಮ್ಮದೇ ಮೋಜುಗಳಲ್ಲಿ ಮುಳುಗಿರುತ್ತಿದ್ದೆವು. ಅವಳು ಮಾತ್ರ ಸದಾ ಕೆಲಸದಲ್ಲಿ ಮುಳುಗುವುದು ಕರ್ತವ್ಯವೇನೋ ಎನ್ನುವಂತೆ ಬೆಳಿಗ್ಗೆ ಎದ್ದು ಶುರು ಮಾಡಿದರೆ ಅವಳ ಕೆಲಸ ಮುಗಿಯುತ್ತಿದ್ದುದೇ ನೆನಪಿಲ್ಲ ನನಗಂತೂ. ತುಂಬ ನೀರಿನ ಕೊರತೆಯಿದ್ದ ಜಾಗದಲ್ಲಿ ನಾವು ಮಕ್ಕಳು ಸ್ವಲ್ಪವೂ ಅದರ ಪರಿವೆಯಿಲ್ಲದೇ ಎಮ್ಮೆಗಳ ಹಾಗೆ ಇರುವ ನೀರನ್ನೆಲ್ಲ ಖರ್ಚು ಮಾಡಿಬಿಡುತ್ತೇವೆ ಅನ್ನುವ ಕಾರಣಕ್ಕೆ ಅಕ್ಕ ಸಾಲಾಗಿ ಮೂರು, ನಾಕು ಜನರನ್ನು ನಿಲ್ಲಿಸಿ ನಾಲ್ಕಾರು ಚೊಂಬು ನೀರಿನಲ್ಲಿ ಸ್ನಾನದ ಆಟ ಮುಗಿಸಿ ನಮ್ಮನ್ನು ಹೊರದಬ್ಬಿ ನಂತರ ದೊಡ್ಡ ಬಕೆಟ್ಟಿನಲ್ಲಿ ರೊಟ್ಟಿ ಹಿಟ್ಟು ಕಲೆಸಿ, ದೊಡ್ಡದೊಂದು ಬೇಸಿನ್ನಿನ ತುಂಬ ಚಟ್ನಿ ಅರೆದು ರೊಟ್ಟಿ ತಟ್ಟಲು ಕೂತುಕೊಳ್ಳುತ್ತಿದ್ದಳು.

ಅಮ್ಮನಿಗೆ ಅಕ್ಕ ಅಷ್ಟೆಲ್ಲ ಕೆಲಸ ಮಾಡಿದರೂ ಗಂಡುಮಕ್ಕಳಾದ ನಮ್ಮ ಮೇಲೆಯೇ ಹೆಚ್ಚು ಪ್ರೀತಿ. ಗಂಡುಮಕ್ಕಳಾದ ನಾನು, ಸೂರಿ, ಶಂಕ್ರ, ಲೊಡ್ಡ ತಿಂದ ಮೇಲೆ ಉಳಿದ ಸುಮ, ರೂಪಾ, ಜ್ಯೋತಿಗೆ ತಿಂಡಿ. ನಾವು ತಿನ್ನುವುದನ್ನೇ ಆಸೆಗಣ್ಣಿನಿಂದ ನೋಡುತ್ತ, ಚಡಪಡಿಸುತ್ತ ನಿಂತಿರುತ್ತಿದ್ದ ಅವರೂ ತಲಾ ಮೂರು-ನಾಲ್ಕು-ಐದು ತಿಂದು ಮುಗಿಸಿ ಕೈ ತೊಳೆದುಕೊಳ್ಳುವುದರಲ್ಲಿ ಮೊದಲು ತಿಂದ ನಾವು ವಂಶೋದ್ಧಾರಕರಿಗೆ ಮತ್ತೆ ಹಸಿವು! ತಟ್ಟೆ ಹಿಡಿದು ಹೋದರೆ ಅಕ್ಕ ತುಟಪಿಟಕ್ಕೆನ್ನದೇ ಮತ್ತೆ ರೊಟ್ಟಿ ಮಾಡಿ ಹಾಕುತ್ತಿದ್ದಳು. ಒಬ್ಬೊಬ್ಬರಾಗಿ ಮತ್ತೆರಡು ಮೂರು ಗದುಕುತ್ತಿದ್ದೆವು.

ಆ ನಂತರ ಆಡಲು ಹೋದ ನಾವು ಮತ್ತೆ ಹೊಟ್ಟೆ ಚುರುಗುಟ್ಟಿದಾಗ ಊಟ ಕೇಳಲು ಅಡಿಗೆ ಮನೆಗೆ ನುಗ್ಗಿದರೆ, ಅರೆ ಕತ್ತಲೆಯ ಅಡಿಗೆಮನೆಯ ಮೂಲೆಯಲ್ಲಿ ಕೂತು ಒಣ ಅವಲಕ್ಕಿ ತಿನ್ನುತ್ತ ಕೂತಿರುವ ಅಕ್ಕ ಗಂಟಲಿನಲ್ಲಿ ಅವಲಕ್ಕಿ ಸಿಕ್ಕಿಕೊಂಡು ಬಿಕ್ಕಳಿಸುತ್ತ ‘ಒಂಚೂರು ನೀರು ಕೊಡೋ ಜಗ್ಗಿ’ ಅನ್ನುತ್ತಿದ್ದಳು ಸೋತ ದನಿಯಲ್ಲಿ. ಅಷ್ಟು ರೊಟ್ಟಿ ತಟ್ಟಿದ ಅಕ್ಕ ತನಗಾಗಿ ಒಂದೇ ಒಂದು ರೊಟ್ಟಿ ಇಟ್ಟುಕೊಳ್ಳದೆ ಎಲ್ಲ ನಮಗೇ ಮಾಡಿ ಹಾಕಿರುತ್ತಿದ್ದಳು. ಆಗ ಒಂದೆರಡು ಕ್ಷಣ ಮಾತ್ರ ಗಿಲ್ಟ್‌ನಲ್ಲಿ ಅವಳಿಗೆ ನೀರು ಕೊಟ್ಟು ”ಇನ್ನಾ ಬೇಕೆನೇ” ಅಂತ ಕೇಳುತ್ತಿದ್ದೆ. ಅವಳು ಬೇಡ ಅಂತ ತಲೆಯಾಡಿಸುವುದರಲ್ಲಿ ನನಗೆ ಗಿಲ್ಟ್ ಮರೆತೇ ಹೋಗಿ ”ಊಟ ಕೊಡೇ ಹಸಿವು” ಅನ್ನುತ್ತಿದ್ದೆ …

ಈಗ ನೆನೆಸಿಕೊಂಡರೆ ಸಿಟ್ಟು ಬರುತ್ತೆ, ಹೆಂಗಸರೆಂದರೆ ಈ ಪರಿ ತಮ್ಮ ಹೊಟ್ಟೆಗೂ ಇಟ್ಟುಕೊಳ್ಳದಂತೆ ತ್ಯಾಗ ಬುದ್ದಿ ಯಾಕೆ ತೋರಿಸುತ್ತಾರೆ ಎಂದು. ಇದ್ದಿದ್ದೆಲ್ಲ ನಮಗೆ ಬಡಿಸಿ ಕೃತಾರ್ಥರಾಗುವುದು ಸರಿ, ಆದರೆ ತಮ್ಮ ಹೊಟ್ಟೆಗೆ ಯಾಕೆ ಸರಿಯಾಗಿ ತಿನ್ನೋದಿಲ್ಲ? ಅಮ್ಮನಾದರೂ ಸರಿ, ಒಂದು ದಿನವಾದರೂ ಅಕ್ಕನ ಬಗ್ಗೆ ವಿಚಾರಿಸುತ್ತಲೂ ಇರಲಿಲ್ಲ. ಅದನ್ನೇನನ್ನಬೇಕು? ಉಪೇಕ್ಷೆ? ಪ್ರೇಮರಾಹಿತ್ಯ?

ಅಮ್ಮ ಇಷ್ಟೆಲ್ಲ ಕಾಳಜಿ ತೋರಿಸಿದಳಲ್ಲ ಈ ವಂಶೋದ್ಧಾರಕರಿಗೆ … ಕೊನೆ ದಿನಗಳಲ್ಲಿ ಅಮ್ಮನ ಜೊತೆಗಿದ್ದಿದ್ದು ಅಕ್ಕ ಮತ್ತು ಜ್ಯೋತಿಯೇ. ಪಟ್ಟಣ ಸೇರಿದ್ದ ಗಂಡುಮಕ್ಕಳ ಮನೆಯಲ್ಲಿ ಅವಳಿಗೆ ಉಸಿರು ಕಟ್ಟುವ ಹಾಗೆ ಅನ್ನಿಸಿ ಒದ್ದಾಡುವಾಗ ಅಕ್ಕ ತಮ್ಮಲ್ಲಿಗೆ ಬರುವಂತೆ ಕರೆದೊಯ್ಯುತ್ತಿದ್ದಳು. ಒಂದು ವ್ಯಕ್ತಿ ಇನ್ನೆಷ್ಟು ನಿಸ್ವಾರ್ಥವಾಗಿ ಬದುಕಬಹುದು?

ಈಗ ಹರಿ ಆ ಮಾತು ಹೇಳಿದ್ದಕ್ಕೆ ಅಕ್ಕನಿಗೆ ಆಘಾತವಾಗಿ ಹೋಗಿರಬೇಕು. ಅಪ್ಪನಿಗೇ ಕಿಡ್ನಿ ಕೊಡುವುದಿಲ್ಲ ಅನ್ನುವ ಮಾತು ಅಕ್ಕನಂತವಳಿಗೆ ಅರಗಿಸಿಕೊಳ್ಳಲು ತುಂಬ ಕಷ್ಟವಾಗಿರಬೇಕು. ಆದರೆ ಅಕ್ಕ ಹಾಗಿರುತ್ತಿದ್ದಳೆಂದ ಮಾತ್ರಕ್ಕೆ ಹರಿಯನ್ನು ಕಿಡ್ನಿ ಕೊಡು ಅಂತ ಬಲವಂತ ಮಾಡುವುದು ಹೇಗೆ ಅನ್ನುವುದೇ ನನಗೆ ಅರ್ಥವಾಗುತ್ತಿಲ್ಲ….

***

‘ಅಕ್ಕ ವಿಷಯ ಹೇಳಿದ್ಲು ಹರಿ…’

ಹರಿ ಅದನ್ನು ನಿರಿಕ್ಷಿಸಿಯೇ ಇದ್ದವನಂತೆ ‘ಒಂದು ಮಾತು ಹೇಳಲಾ ಜಗ್ಗ ಮಾವ? ಆಫೀಸಿನಲ್ಲಿ ಲೋನ್ ಬೇಕಿದ್ದರೆ ತೆಗೆದುಕೊಳ್ತೀನಿ. ಆದರೆ ಕಿಡ್ನಿ ಮಾತ್ರ ಕೊಡಲ್ಲ’ ಎಂದವನು ಮಾತು ಮುಗಿಸಿದಂತೆ ಮೌನವಾಗಿ ಕುಳಿತ.

ಈ ಪರಿಯಾಗಿ ಖಂಡತುಂಡಾದಂತೆ ಮಾತಾಡುತ್ತಾನೆ ಅಂತ ನಿರೀಕ್ಷಿಸಿರದ ನಾನು ಬೆಪ್ಪಾಗಿ ಕೂತೆ.

‘ಅಪ್ಪನಿಗೆ ‘ತಮ್ಮ’ ಕಿಡ್ನಿಯ ಬಗ್ಗೆಯೇ ಕಾಳಜಿ ಇರಲಿಲ್ಲ. ಎಷ್ಟು ಒದ್ದಾಡಿದ್ವಿ ನೆನಪಿಲ್ಲವಾ ನಿಮಗೆ? ಈಗಿನ್ನು ನನ್ನದನ್ನು ಕೊಟ್ಟರೆ ಅದನ್ನಾದರೂ ನೆಟ್ಟಗೆ ನೋಡ್ಕೊಳ್ತಾರೆ ಅಂತ ಏನು ಗ್ಯಾರಂಟಿ ಇದೆ? ಮುಂದೆ ನನಗೇನಾದರೂ ಆದರೆ ಆಗ ನನಗೆ ಒಂದೇ ಕಿಡ್ನಿ ಇರತ್ತೆ … ಇನ್ನೊಂದನ್ನು ಅಪ್ಪ ಯಥಾಪ್ರಕಾರ ಹಾಳುಗೆಡವಿರ್ತಾರೆ … ಆಗ…?? ನನಗೆ ಅವರ ಬಗ್ಗೆ ನಂಬಿಕೆ ಇಲ್ಲ ’ ಎಂದ.

ಹರಿ ಹೇಳುವುದು ಸರಿಯೇ ಇತ್ತು. ಭಾವನ ವಿಚಿತ್ರ ಬದುಕಿನ ಬಗ್ಗೆ ಅದೆಷ್ಟು ಚರ್ಚೆಗಳಾಗಿ ಹೋಗಿವೆಯೋ ನಮ್ಮ ಮನೆಯಲ್ಲಿ. ಭಾವನಿಗೆ ಡಯಾಬಿಟೀಸ್ ಶುರುವಾದಾಗ ಒಂದು ರೀತಿ ಆತಂಕದ ಸ್ವಭಾವದ ಭಾವ ಇದ್ದಕ್ಕಿದ್ದ ಹಾಗೆ ಶುರುವಾದ ಖಾಯಿಲೆಗೆ ಸವಾಲು ಹಾಕುವವರಂತೆ ಇಡೀ ಜೀವನವನ್ನೇ ಅದಕ್ಕಾಗಿ ಮುಡುಪಿಟ್ಟವರಂತೆ ಬದುಕಲು ಶುರುವಿಟ್ಟರು. ದಿನ ಬೆಳಗಾದರೆ ಕಿಲೋಮೀಟರ್‌ಗಟ್ಟಳೆ ವಾಕಿಂಗ್ ಹೋಗುವುದೇನು, ಪಾಲಿಷ್ ಇಲ್ಲದ ಅಕ್ಕಿ ಹುಡುಕಿ ತರುವುದೇನು, ಸಿಹಿ ತಿಂಡಿಗಳನ್ನು ಕಂಡರೆ ಮಾರು ದೂರ ಓಡುವುದೇನು … ಸದಾಕಾಲ ಅದರ ವಿಷಯವನ್ನೇ ಆಡಿ ಆಡಿ ಬೋರ್ ಹೊಡೆಸುತ್ತಿದ್ದರು.

ರಜೆಯಲ್ಲಿ ಮನೆಗೆ ಬಂದರಂತೂ ಅವರ ಪಾಡು ಬೇಡ. ತುಂಬ ಜನರಿದ್ದ ಮನೆಯಲ್ಲಿ ಅಮ್ಮ ಸಿಹಿತಿಂಡಿ ಮಾಡುವುದು ಮಾಮೂಲಾಗಿತ್ತು. ಹೊರಗಿನ ತಿಂಡಿ ಮನೆಗೆ ತಾರದ ಅಮ್ಮ ಲಾಡು, ಮೈಸೂರು ಪಾಕು, ಕಡುಬು ಅಂತ ಮಾಡಿ ಮಾಡಿ ಮನೆ ಮಂದಿಗೆಲ್ಲ ಬಡಿಸುವಾಗ ಭಾವನ ಡಯಾಬಿಟೀಸ್ ಜಪ ಶುರುವಾಗುತ್ತಿತ್ತು. ಎದುರು ಕೂತು ತಿನ್ನುವವರನ್ನು ನೋಡುತ್ತಾ, ಹೊಟ್ಟೆ ಉರಿ ಪಟ್ಟುಕೊಳ್ಳುತ್ತಾ ತಮ್ಮ ರೋಗದ ಕಥೆ ಹೇಳಲು ಶುರುವಿಟ್ಟು ಕೊಳ್ಳುತ್ತಿದ್ದರು. ನಾವು ಭಾವನ ಮಾತಿಗೆ ಸುಮ್ಮನೇ ತಲೆಯಾಡಿಸುತ್ತ ಎದುರಿಗಿದ್ದ ಸಿಹಿತಿಂಡಿ ಮುಕ್ಕುತ್ತಿರುತ್ತಿದ್ದೆವು.

ಒಂದಿಷು ವರ್ಷ ಹೀಗಿದ್ದವರಿಗೆ ಇದ್ದಕ್ಕಿದ್ದ ಹಾಗೆ ಅದೇನಾಯಿತೋ ಗೊತ್ತಿಲ್ಲ … ಬದುಕಿನ ಬಗ್ಗೆ ಎಲ್ಲ ಆಸ್ಥೆ ಕಳೆದುಕೊಂಡವರ ಹಾಗೆ ಬದುಕಲು ಶುರು ಮಾಡಿಬಿಟ್ಟರು. ಸಂಜೆಯಾದರೆ ವಾಕಿಂಗ್ ನೆಪದಲ್ಲಿ ಹೊರಟವರು ಅಚ್ಚುಕಟ್ಟಾಗಿ ಪಕೋಡಾ, ಬೋಂಡಾ, ಬಜ್ಜಿ ದಿನವೂ ತಿಂದು ಬರಲು ಶುರು ಮಾಡಿದರು. ಅಪರೂಪಕ್ಕೊಮ್ಮೆ ತಿನ್ನುವುದು ಸರಿ, ದಿನವೂ ಆ ರೀತಿ ಎಣ್ಣೆಯದು ತಿಂದರೆ ಗತಿಯೇನು ಅಂತ ಅಕ್ಕ ಬೇಸರಿಸಿಕೊಂಡಾಗ ತಿಂದು ಬಂದು ತಿಂದೇ ಇಲ್ಲ ಅಂತ ಸುಳ್ಳಾಡಲು ಶುರು ಮಾಡಿದರು.

ಅಕ್ಕನಿಗೆ ಸಿಟ್ಟು ಬಂದು ಸಂಜೆಯಾದೊಡನೆ ಮಗನನ್ನು ಅಪ್ಪನ ಜೊತೆ ವಾಕಿಂಗ್ ಹೋಗಿ ಅವರ ಕಳ್ಳತನದ ವರದಿ ಒಪ್ಪಿಸುವಂತೆ ಒತ್ತಾಯ ಮಾಡುತ್ತಿದ್ದಳು. ಹರಿ ಅಪ್ಪನ ಜೊತೆ ಒಂದಿಷ್ಟು ದಿನ ಹೋಗಿ ಅಪ್ಪನ ಮೇಲೆ ಪತ್ತೇದಾರಿ ಮಾಡಿ ಅಮ್ಮನಿಗೆ ರಿಪೋರ್ಟ್ ಒಪ್ಪಿಸಿದ. ಓದುವ ಹುಡುಗ ಸಂಜೆಯಾದೊಡನೆ ಗೆಳೆಯರು, ಓದು ಎಲ್ಲವನ್ನು ಬಿಟ್ಟು ಎಷ್ಟು ದಿನ ಅಂತ ಅಪ್ಪನ ಕಳ್ಳತನದ ಪತ್ತೇದಾರಿ ಮಾಡಲು ಸಾಧ್ಯ. ಹಾಗಾಗಿ ಬರಬರುತ್ತ ಅಮ್ಮ ಹೇಳಿದಾಗ ಏನಾದರೂ ಮಾಡಿಕೊಳ್ಳಲಿ ಹೋಗು, ನನ್ನಿಂದಾಗಲ್ಲ ಅಂತ ನಿರಾಕರಿಸಿಬಿಟ್ಟ.

ಆಮೇಲೆ ಅಕ್ಕ ಭಾವನೊಡನೆ ತಾನೇ ವಾಕಿಂಗ್ ಹೋಗಲು ಶುರು ಮಾಡಿದಳು. ಯಾವಾಗ ಅಕ್ಕ ಈ ಮಾರ್ಗ ಅನುಸರಿಸಲು ಶುರು ಮಾಡಿದಳೋ, ಅಲ್ಲಿಯವರೆಗೆ ಕದ್ದುಮುಚ್ಚಿ ತಿನ್ನುತ್ತಿದ್ದ ಭಾವ  ‘ನೀನೇನು ನನ್ನ ಕಳ್ಳತನ ಕಂಡು ಹಿಡಿಯುವುದು?’ ಅಂತ ವಾಕಿಂಗ್‌ಗೆ ಶುಭಂ ಹಾಡಿ, ಸವಾಲು ಹಾಕುವವರ ಥರ ಅಂಗಡಿಯಿಂದ ದಿನ ಅರ್ಧರ್ಧ ಕೆಜಿ ಸಿಹಿತಿಂಡಿ ತಂದು ಮನೆಯಲ್ಲಿ ಎಲ್ಲರೆದುರೇ ಕೂತು ತಿನ್ನಲು ಶುರು ಮಾಡಿದರು!

ಆಗ ಬಹುಶಃ ನಾವೆಲ್ಲ ಸೇರಿ ಯಾವುದಾದರೂ ಸೈಕಿಯಾಟ್ರಿಸ್ಟ್ ಹತ್ತಿರ ಕರೆದೊಯ್ಯಬೇಕಿತ್ತೋ, ಏನೋ .. ಗೊತ್ತೇ ಆಗಲಿಲ್ಲ. ಅವರನ್ನು ತಿದ್ದಲು ಪ್ರಯತ್ನಿಸಿದಷ್ಟೂ ಅವರು ರೆಬೆಲ್ ಆಗುತ್ತಾ ಹೋದರು. ಅಷ್ಟು ಸಿಹಿತಿಂಡಿಯಲ್ಲಿ ಹರಿಗೆ ಸಹಾ ಒಂದೇ ಒಂದು ತುಣುಕು ಕೊಡದೇ ತಿಂದು ಮುಗಿಸುತ್ತಿದ್ದರು.

ಹರಿ ಮತ್ತು ಅಕ್ಕ ಗದರಿದರು, ಕೂಗಾಡಿದರು .. ಭಾವ ಮಾತ್ರ ಎಂದಿನಂತೆ ನಿರ್ಲಿಪ್ತ. ಸಂಜೆಯಾದೊಡನೆ ಆ ಥರ ಸಿಹಿತಿಂಡಿ ತಿಂದು ತಿಂದು ಶುಗರ್ ಎಷ್ಟು ಏರಿತೆಂದರೆ ಮುಂದಿನ ಮೂರು ವರ್ಷಗಳಲ್ಲಿ ಹತ್ತು ವರ್ಷ ವಯಸ್ಸಾದವರಂತೆ ಕಾಣಲು ಶುರು ಮಾಡಿದರು. ಹರಿ ಆಗ ಕಾಲೇಜಿನ ಮೆಟ್ಟಿಲು ಹತ್ತಿದ್ದ. ಅಪ್ಪನ ಈ ಹುಚ್ಚುತನವನ್ನು ನೋಡಿ, ನೋಡಿ ಬೇಸತ್ತಿದ್ದ.

ಹೇಳಿದ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲದ ಭಾವ ಅವನ ಮಾತಿಗೆ ಸೊಪ್ಪೇ ಹಾಕುತ್ತಿರಲಿಲ್ಲ. ಹೆಚ್ಚು ಸಿಟ್ಟು ಹತ್ತಿ ಕೂಗಾಡಿದ ದಿನ ಅರ್ಧ ಕೆಜಿಯ ಬದಲು ಒಂದು ಕೆಜಿ ಸಿಹಿ ತಿನ್ನುತ್ತೇನೆ ಅನ್ನುವವರನ್ನು ಯಾರು ತಾನೇ ಕಂಟ್ರೋಲಿನಲ್ಲಿಡಲು ಸಾಧ್ಯ?

ಅಮ್ಮನ ಜಗಳ ಬರಬರುತ್ತ ಅಸಹಾಯಕತೆಯಾದದ್ದನ್ನು, ಆ ನಂತರ ಮೌನವಾದದ್ದನ್ನು ಹರಿ ಮಿಡುಕುತ್ತ ನಿಂತು ನೋಡಿದನಷ್ಟೇ. ಆ ನಂತರ ಅವನಿಗೆ ತನ್ನ ಬದುಕು ಕಟ್ಟಿಕೊಳ್ಳುವುದಷ್ಟೇ ಎದುರು ನಿಂತದ್ದು. ಇಂಜಿನಿಯರಿಂಗ್ ಓದಲು ಬೆಂಗಳೂರು ಸೇರಿದ. ಹಾಸ್ಟೆಲಿನಲ್ಲಿದ್ದು ಓದಿಕೊಂಡ. ಭಾವ ನಿಧಾನದ ಆತ್ಮಹತ್ಯೆ ಮಾಡಿಕೊಳ್ಳುವವನ ಹಾಗೆ ಆರೋಗ್ಯ ಕೆಡಿಸಿಕೊಳ್ಳುತ್ತ ಹೋದ.

ಯಾವಾಗ ಊರಿಗೆ ಹೋದರೂ ಇದೇ ಇದೇ ನೋಡಿ ಬೇಸತ್ತವನು ಆ ನಂತರ ಊರಿಗೆ ಹೋಗುವುದನ್ನೇ ಕಡಿಮೆ ಮಾಡಿದ. ಅಕ್ಕ ಇನ್ನಿಷ್ಟು ಮೌನಿಯಾದಳು. ಈಗ ಭಾವನ ಸ್ಥಿತಿ ಇಲ್ಲಿಗೆ ಬಂದು ನಿಂತಿದೆ ಮತ್ತು ಎಲ್ಲ ಗೊತ್ತಿರುವ ನಾನು ಹರಿಯ ಜೊತೆ ಮಾತಾಡಿ ಒಪ್ಪಿಸಬೇಕು … ಹೇಗೆ! ಅರ್ಥವೇ ಆಗುತ್ತಿಲ್ಲ …

***

ತ್ಯಾಗವೇ ಬದುಕು ಅನ್ನುವಂತೆ ಬದುಕಿದ ಅಕ್ಕನಿಗೆ ಈ ಲೆಕ್ಕಾಚಾರಗಳು ಅರ್ಥವಾಗುವುದೇ ಇಲ್ಲ. ಹಾಗಂತ ಹರಿಯದು ತಪ್ಪು ಅನ್ನಲು ನನಗೆ ಅವನಲ್ಲಿ ತಪ್ಪೇ ಕಾಣುತ್ತಿಲ್ಲ. ಬಹುಶಃ ಅವನ ಜಾಗದಲ್ಲಿ ನಾನೇ ಇದ್ದಿದ್ದರೂ ಹೀಗೆಯೇ ಯೋಚಿಸುತ್ತಿದ್ದೆ ಎನಿಸುತ್ತದೆ. ಆದರೆ ಅಕ್ಕ ..? ಅವಳಿಗೆ ಹಣ ಸಹಾಯ ಮಾಡಬಹುದು. ಆದರೆ ಕಿಡ್ನಿ ಹೇಗೆ ವ್ಯವಸ್ಥೆ ಮಾಡಲಿ?

ಬದುಕಿನ ಕೆಲವು ಲೆಕ್ಕಾಚಾರಗಳು ಥೇಟ್ ನನ್ನ ಆಫೀಸಿನ ಅಕೌಂಟಿನ ಹಾಗೇ … ಡೆಬಿಟ್ಟು ಮತ್ತು ಕ್ರೆಡಿಟ್ಟು ಅನ್ನುವ ಹೆಡಿಂಗ್‌ನಲ್ಲಿ ಗುರುತಿಸಿಕೊಳ್ಳದೇ, ಕೊನೆಗೆ ಬ್ಯಾಡ್ ಡೆಟ್ ಅಂತ ಮಾತ್ರ ಹಣೆಪಟ್ಟಿ ಹಾಕಿ ತಿಪ್ಪೆ ಸಾರಿಸಬಹುದು ಅಷ್ಟೇ…

ಅಕ್ಕನಿಗೆ ಈಗ ಇದನ್ನು ಹೇಳುವುದು ಹೇಗೆ ಮತ್ತು ಅರ್ಥ ಮಾಡಿಸುವುದು ಹೇಗೆ ಯೋಚಿಸುತ್ತಾ ಕುಳಿತೆ…

4 comments

Leave a Reply