ಇಂಗ್ಲಿಷ್ ಮೀಡಿಯಂ ಸರ್ಕಾರಿ ಶಾಲೆಗೆ ವಿರೋಧ: ಸಾಮಾಜಿಕ ಸಂಚು!

ಇಂಗ್ಲೀಷ್ ಮೀಡಿಯಂ ಸರ್ಕಾರಿ ಶಾಲೆಗೆ ವಿರೋಧ :

ಬಹುಜನರ ವಿರುದ್ದ ಸಾಮಾಜಿಕ -ಸಾಂಸ್ಕೃತಿಕ ಸಂಚು!

ಹೀಗೆ ಸ್ನೇಹಿತರೊಂದಿಗೆ, ಹಿತೈಷಿಗಳೊಂದಿಗೆ ಸಾಮಾನ್ಯವಾಗಿ ಮಾತನಾಡುವಾಗ ನನ್ನ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ತಿಳಿಯುತ್ತಿದ್ದಂತೆ ಬಹುತೇಕರು ‘ಗುಡ್. ಒಳ್ಳೆಯ ಸಬ್ಜೆಕ್ಟ್, ತುಂಬಾ ಸ್ಕೋಪ್ ಇದೆ. ಆದ್ರೆ ಇಂಗ್ಲಿಷ್ ನ ಚನ್ನಾಗಿ ಕಲ್ಸಿ, ಕೋಚಿಂಗ್ ಕೊಡ್ಸಿ, ಇಂಗ್ಲಿಷ್ ಇಲ್ಲದಿದ್ದರೆ ಇವತ್ತಿನ ಕಾಂಪಿಟೇಷನ್ ನಲ್ಲಿ ಸೆಟ್‍ಬ್ಯಾಕ್ ಆಗುತ್ತೆ ..’ ಎಂಬ ಸಲಹೆಗಳನ್ನು ನೀಡುವುದು ಸರ್ವೆ ಸಾಮಾನ್ಯವಾಗಿದ್ದು ಕೇಳಿದ್ದೇನೆ.

ಹೀಗೆ ಸಲಹೆ ಕೊಡುವವರಲ್ಲಿ ಕನ್ನಡ ಸಾಹಿತಿಗಳೂ ಇದ್ದಾರೆ ಎಂಬುದು ಮುಖ್ಯ.

ಭಾಷೆಯ ಆಯ್ಕೆಯಲ್ಲಿ, ಕಲಿಕೆಯಲ್ಲಿ ಎಷ್ಟೊಂದು ಅನಿವಾರ್ಯತೆ ನಮ್ಮನ್ನು ಕಾಡುತ್ತದೆ ನೋಡಿ. ನಾನೊಬ್ಬ ಪೋಷಕನಾಗಿ ಯೋಚಿಸುವಾಗ ಇವತ್ತಿನ ಸನ್ನಿವೇಶದಲ್ಲಿ ಕನ್ನಡ ಭಾಷೆಯ ಭಾವನಾತ್ಮಕತೆಯಿಂದ ದೂರ ನಿಂತು ಯೋಚಿಸಲೇ ಬೇಕಾದ ಅನಿವಾರ್ಯತೆಯೊಂದನ್ನು ಕಾಲದ ಭಿಕ್ಕಟ್ಟೇ ಸೃಷ್ಟಿಸಿದೆ.

ಕನ್ನಡ ಸಾಹಿತ್ಯ ಸಮ್ಮೇಳನವೊಂದರಲ್ಲಿ ಕನ್ನಡ ಖ್ಯಾತ ಹಿರಿಯ ಸಾಹಿತಿಯೊಬ್ಬರು ‘ನಾವೆಲ್ಲಾ ಸರ್ಕಾರಿ ಕನ್ನಡ ಶಾಲೆಯಲ್ಲೇ ಓದಿದ್ದು, ಅಷ್ಟೇ ಏಕೆ ಕನ್ನಡದ ಮೇರು ಕವಿಗಳ ಹೆಸರನ್ನು ಹೇಳುತ್ತಾ ಇವೆರಲ್ಲಾ ಕನ್ನಡದಲ್ಲೇ ಓದಿ ಸಾಧನೆ ಮಾಡಿಲ್ಲವೇ?, ಈಗ್ಯಾಕೆ ಇಂಗ್ಲಿಷ್ ಮೀಡಿಯಂ ನಲ್ಲೆ ಓದಬೇಕು.? ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ನಲ್ಲಿ ಓದಿದವರು ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿಲ್ಲವೆ?.’ ಪ್ರಶಸ್ತಿ . ಸಮ್ಮಾನಗಳನ್ನು ಪಡೆದಿಲ್ಲವೆ? ಇತ್ಯಾದಿ.. ಇತ್ಯಾದಿಯಾಗಿ ಕನ್ನಡಾಭಿಮಾನವನ್ನು ವ್ಯಕ್ತಪಡಿಸುತ್ತಾ ಎಲ್ಲರೂ ಕನ್ನಡ ಮೀಡಿಯಂನಲ್ಲೇ ಓದಬೇಕು . ಕನ್ನಡ ಉಳಿಸಬೇಕು ಎಂದು ಫರ್ಮಾನು ಹೊರಡಿಸುತ್ತಿದ್ದರು.

ಅದೇ ವೇದಿಕೆಯಲ್ಲಿ ಕುಳಿತಿದ್ದ ನನಗೆ ಇವರ ಮಾತುಗಳನ್ನು ಕೇಳಿದಾಗ ಈ ಸಾಹಿತಿಗೆ ತಾನು ಯಾವ ಕಾಲದಲ್ಲಿ ಇದ್ದೇನೆ ಎಂಬ ಅರಿವೇ ಇಲ್ಲದಿರುವುದು ಕಂಡು ಆಶ್ಚರ್ಯವಾಯಿತು, ನಿಜ, ಕನ್ನಡ ಅನೇಕ ಮೇರು ಕವಿಗಳನ್ನು, ಕನ್ನಡತನವನ್ನು ನಿರೂಪಿಸಿದವರನ್ನು ಕೊಟ್ಟಿದೆ. ಆದರೆ ಅದರ ಕಾಲಘಟ್ಟ, ಆಗಿದ್ದ ಶೈಕ್ಷಣಿಕ ಮಟ್ಟವನ್ನು ನಾವು ಅವಲೋಕಿಸಬೇಕು.

ಮನುಷ್ಯ ಕಾಲ ಕಾಲಕ್ಕೆ ಆಗುತ್ತಿರುವ ಬದಲಾವಣೆಗಳಿಗೆ ತೆರೆದುಕೊಳ್ಳದಿದ್ದರೆ ಅಥವಾ ತನ್ನನ್ನೂ ಒಳಗೊಂಡಂತೆ ಆಗಿರುವ ಬದಲಾವಣೆಯನ್ನು ಗುರುತಿಸಿಕೊಂಡು ತನ್ನ ಅರಿವನ್ನು ಉನ್ನತೀಕರಿಸಿಕೊಳ್ಳದಿದ್ದರೆ ತುಕ್ಕು ಹಿಡಿದ ಗುಜರಿ ಸಾಮಾನಿನಂತೆ ಕಾಣುತ್ತಿರುತ್ತಾನೆ. ಈ ಹೊತ್ತಿನಲ್ಲಿ ಕನ್ನಡದ ಉಳಿವು-ಬೆಳವಣಿಗೆ ವಿಚಾರ ಎಷ್ಟು ಮಹತ್ವದ್ದೋ ಅದೇ ಹೊತ್ತಿನಲ್ಲಿ ಜಾಗತಿಕ ಓಟದ ಜೊತೆ ಓಡಲು ಇಂಗ್ಲಿಷ್ ಎಂಬ ಸಾಮ್ರಾಜ್ಯಶಾಹಿ ಭಾಷೆ ಕಲಿಕೆಯೂ ಅಷ್ಟೇ ಮುಖ್ಯವಾಗಿದೆ ಎಂಬ ವರ್ತಮಾನದ ಕಾಲದ ಕರೆಯನ್ನು ಕಿವಿಗೆ ಹಾಕಿಕೊಳ್ಳದೆ ಮಾತನಾಡುವ ಸಾಹಿತಿಗಳು, ಹೋರಾಟಗಾರರು ಈ ಸಮಾಜಕ್ಕೊಂದು ಸಾಮಾಜಿಕ- ಸಾಂಸ್ಕೃತಿಕ ವಂಚನೆಯೊಂದನ್ನು ಬಗೆಯುತ್ತಿದ್ದಾರೆ ಎಂದು ಯಾರಿಗಾದರು ಯಾಕೆ ಅನಿಸಬಾರದು?.

ರಾಜ್ಯ ಸರ್ಕಾರ ಮುಂದಿನ ವರ್ಷದಿಂದ ಒಂದು ಸಾವಿರ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವುದಾಗಿ ಘೋಷಿಸಿದ ಬೆನ್ನಲ್ಲೆ ಇದಕ್ಕೆ ಕನ್ನಡದ ಘಟಾನುಘಟಿ ಸಾಹಿತಿಗಳು, ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋರಾಟದ ಬೆದರಿಕೆಯನ್ನು ಹಾಕಿದ್ದಾರೆ. ಇಂಗ್ಲಿಷ್ ಕಲಿಕೆ ಇಂದು ಅನಿವಾರ್ಯ ಎಂಬ ಸತ್ಯ ಈ ಸಾಹಿತಿಗಳಿಗೆ, ಹೋರಾಟಗಾರರಿಗೆ ಗೊತ್ತಿಲ್ಲವೆಂದನೇಲ್ಲ.

ಆದರೂ ಅವರು ಏಕೆ ಸರ್ಕಾರ ತೆರೆಯಹೊರಟಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ವಿರೋಧಿಸುತ್ತಾರೆ ಎಂದರೆ ಇದರ ಹಿಂದೆ ಇದೇ ಸಾಮ್ರಾಜ್ಯಶಾಹಿ ಭಾಷೆಯನ್ನು ಕಲಿತು, ಅರಗಿಸಿಕೊಂಡು ಅಯಕಟ್ಟಿನ ಜಾಗದಲ್ಲಿ ಕುಳಿತಿರುವವರ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಬೀಳುವ ಭಯವೊಂದು ಅವರನ್ನು ಅಥವಾ ಈ ಅವರ ಹಿಂದೆ ಇರಬಹುದಾದ (ದುಷ್ಟ) ಶಕ್ತಿಗಳಿಗಿರಬಹುದು ಎಂಬ ಸಂಶಯ ನನ್ನದು.

ಸರ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಬಾರದು ಎಂದು ಕೂಗುತ್ತಿರುವವರ ಕುಟುಂಬದ ಮಕ್ಕಳು ಕಲಿತ ಭಾಷೆ ಯಾವುದು?, ಅವರೆಲ್ಲಾ ಈಗ ಎಲ್ಲಿದ್ದಾರೆ ? ಕನ್ನಡ ಭಾಷೆಗೆ ಅವರ ಕೊಡುಗೆ ಏನು? ಎಂಬ ಪ್ರಶ್ನೆಗಳನ್ನು ಎಸೆಯುವ ಕಾಲ ಬಂದಿದೆ. ಅಷ್ಟಕ್ಕೂ ಈ ಸಾಹಿತಿಗಳು , ಹೋರಾಟಗಾರರು ಕನ್ನಡ ಉಳಿವಿನ ನೆಪದಲ್ಲಿ ಸರ್ಕಾರ ತರಲುಹೊರಟಿರುವ ಇಂಗ್ಲಿಷ್ ಸರ್ಕಾರಿ ಶಾಲೆಗಳಲ್ಲಿ ಮಾಧ್ಯಮ ಬೇಡ ಎಂದು ಹೇಳುತ್ತಿರುವುದು ಯಾರನ್ನು ಗುರಿಯಾಗಿಸಿಕೊಂಡು, ಯಾರೆಲ್ಲಾ ಕಲಿಯಬಾರದು ಎಂಬುದನ್ನು ಹೇಳುತ್ತಿದ್ದಾರೆ? ಎಂಬ ಪ್ರಜ್ಞೆಯಾದರೂ ಇದೆಯೇ?

ಕನ್ನಡ ಉಳಿಸಿ ಎಂದರೆ ಕೇವಲ ಶಬ್ದಗಳನ್ನು ಉಳಿಸಿಕೊಳ್ಳುವುದಲ್ಲ. ಕನ್ನಡದ ಬದುಕು ಉಳಿದರೆ ಕನ್ನಡ ಭಾಷೆ ಉಳೀದಿತು. ಜಾಗತೀಕರಣದ ಪರಿಣಾಮ ಒಂದು ಭಾಷೆಯಷ್ಟೆ ಅಲ್ಲ, ಒಂದು ಬದುಕೇ ನಾಶವಾಗುತ್ತ ಸಾಗಿದೆ. ಕನ್ನಡದಲ್ಲಿ ‘ಅನ್ನ’ ಎನ್ನುತ್ತಿದ್ದ ಹಳ್ಳಿಗರು ಇಂದು ‘ರೈಸ್’ ಎನ್ನುತ್ತಿದ್ದಾರೆ. ಕನ್ನಡದಲ್ಲಿ ‘ಅನ್ನ’ ಎಂದರೆ ಅದು ಕೇವಲ ತಿನ್ನುವ ಆಹಾರವೆಂದಷ್ಟೇ ಅರ್ಥವಾಗಿರಲಿಲ್ಲ. ಅದಕ್ಕಿದ್ದ ಅರ್ಥ, ಭಾವನೆಗಳೇ ಬೇರೆ. ಅದು ಜನರ ಬದುಕಿನ ವಿಶಾಲ ಅರ್ಥವನ್ನು ಕಟ್ಟಿಕೊಡುತ್ತಿತ್ತು.

‘ಅನ್ನ’ ಎಂಬುದು ಬದುಕು, ಶ್ರಮ, ಸಂಸ್ಕೃತಿ ಎಲ್ಲವನ್ನೂ ನಿರ್ವಹಿಸುತ್ತಿತ್ತು. ಅದೀಗ ಬರೀ ‘ರೈಸ್’ (rice) ಆಗಿದೆ. ಅದೇ ರೀತಿ ಬೇಸಾಯ ಅಂದಾಕ್ಷಣ ಅದರ ಸುತ್ತ ಎತ್ತು, ನೇಗಿಲು,ಕುಳ, ಮಿಣಿ, ಕಣ, ಕಮ್ಮಾರ, ಸುಗ್ಗಿ ಹೀಗೆ… ಸಾವಿರ ಪದಗಳು ಇದ್ದವು. ಜಾಗತೀಕರಣದ ಪರಿಣಾಮ ‘ಟ್ರ್ಯಾಕ್ಟರ್’ ಎಂಬ ಪದವೊಂದು ಬಂದು ಇವೆಲ್ಲವೂ ನಾಶವಾದವು. ಪದವೂ ಹೋಗಿದೆ. ಬದುಕು ಹೋಗಿದೆ. ಜಾಗತೀಕರಣ ಬಂದು ಒಂದು ಕನ್ನಡದ ಬದುಕೇ ನಾಶವಾಗುತ್ತಿರುವಾಗ ಭಾಷೆ ಇಟ್ಟುಕೊಂಡು ಏನು ಮಾಡುವುದು? ಜಾಗತೀಕರಣಕ್ಕೆ ಪರ್ಯಾಯವಾಗಿ ಏನನ್ನಾದರೂ ನಾವು ಕಟ್ಟಿದ್ದಾಗ ಭಾಷೆ ಉಳಿವಿಗೆ ಏನೋ ಒಂದು ಲಾಭ ಆಗುತ್ತಿತ್ತು. ‘ಕನ್ನಡ’ ಉಳಿಸಿ ಎಂದರೆ ಶಬ್ದ ಉಳಿಸಿಕೊಳ್ಳುವುದಲ್ಲ. ಕನ್ನಡದ ಬದುಕು ಉಳಿದರೆ ಕನ್ನಡ ಉಳಿಯುತ್ತದೆ. ಕನ್ನಡದ ಬದುಕೇ ನಾಶವಾದರೆ ಕನ್ನಡಭಾಷೆ ಎಲ್ಲಿ ಉಳಿಯಲು ಸಾಧ್ಯ?.

ಬದುಕಿನ ಜೊತೆಯೇ ಭಾಷೆ ಇರುತ್ತದೆ. ಬದುಕೇ ನಾಶವಾಗುತ್ತಿರುವಾಗ ಭಾಷೆ ಉಳಿಸಿಕೊಳ್ಳಿ ಎಂದರೆ ಹೇಗೆ? ಇದನ್ನೆ ಖ್ಯಾತ ಭಾಷಾ ವಿದ್ವಾಂಸರಾದ ಕೆವಿಎನ್ ಅವರು ಹೀಗೆ ಹೇಳುತ್ತಾರೆ. ‘ಜನರಲ್ಲಿನ ತಿಳುವಳಿಕೆಗಳಿಂದ ನುಡಿಗಳು ಉಳಿಯುತ್ತವೆ ಎನ್ನುವಾಗ ಪ್ರಗತಿಯ ಮಾದರಿಗಳು ಜನರ ತಿಳುವಳಿಕೆಯನ್ನೆ ನಿಷ್ಕ್ರಿಯಗೊಳಿಸುವ ಅಥವಾ ಸ್ಥಗಿತಗೊಳಿಸುತ್ತಿರುವುದರಿಂದ ನುಡಿಗಳು ಉಳಿಯುವುದಾದರು ಹೇಗೆ?’ (ನುಡಿಗಳ ಅಳಿವು ಬೇರೆ ದಿಕ್ಕಿನ ನೋಟ: ಪ್ರೊ: ಕೆವಿಎನ್). ಇಂತಹ ಬಿಕ್ಕಟ್ಟನ್ನು ಎದುರಿಸುತ್ತಿರುವ ನಾವು ಇದರ ವಿರುದ್ದ ಹೋರಾಟಕ್ಕೆ ಅದರದ್ದೇ ಆದ ಭಾಷೆಯನ್ನು ಕಲಿಯಬೇಕಾಗಿದೆ. ಇದನ್ನು ಒಳಬಂಡಾಯದ ಸ್ವರೂಪವೂ ಎನ್ನಬಹುದು.

ಕನ್ನಡ ನುಡಿಯ ಬಗೆಗಿನ ಒಲುಮೆಯಿಂದ ಹುಟ್ಟಿದ ದಿಗಿಲು ದಿಟವಾಗಿ ‘ಕಲ್ಪಿತ’ವಾದದ್ದು. ಕನ್ನಡ ಮಾತನಾಡುವ ಸಮುದಾಯ ಎಲ್ಲಿಯವರೆಗೆ ಈ ಲೋಕದಲ್ಲಿ ಇರುವುದೋ ಅಲ್ಲಿಯವರೆಗೆ ಕನ್ನಡ ನುಡಿಯೂ ಇರುತ್ತದೆ. ಆ ಸಮುದಾಯವೇ ಇದ್ದಕ್ಕಿದ್ದಂತೆ ಮಯವಾಗುವ ಪ್ರಸಂಗ ಒದಗಿಬರಲಾರದು.  ಒಂದು ವೇಳೆ ಹಾಗೇನಾದರೂ ಆದರೆ ಆಗ ಕೇವಲ ಕನ್ನಡ ನುಡಿಯನ್ನು ಆಡುವ ಸಮುದಾಯ ಮಾತ್ರ ಇಲ್ಲವಾಗರಲಾರದಷ್ಟೇ… ಇನ್ನೊಂದು ಶತಮಾನದ ಬಳಿಕ ಜನ ಮಾತನಾಡುವ ಕನ್ನಡ ಈಗ ಮಾತನಾಡುವ ಕನ್ನಡಕ್ಕಿಂತ ಬೇರೆಯೇ ಆಗಿರುವುದು ಸಾಧ್ಯ. ಆದರೆ ಆಗಲೂ ಅದು ಕನ್ನಡವೇ ಅಲ್ಲವೇ? ಹೀಗಾಗಿ ಕನ್ನಡವು ಅಳಿಯುತ್ತಿರುವ ನುಡಿ ಎಂದು ದಿಗಿಲು ಪಡಲು ಕಾರಣಗಳು ಕಾಣುತ್ತಿಲ್ಲ. ಎನ್ನುವ ಕೆವಿಎನ್ ಅವರ ಮಾತುಗಳನ್ನು ಇವತ್ತಿನ ಕಲ್ಪಿತ ದಿಗಿಲಿನಲ್ಲಿರುವ ಕನ್ನಡ ಸಾಹಿತಿಗಳು ಕೇಳಿಸಿಕೊಳ್ಳಬೇಕು.

ತಲಾತಲಾಂತರಗಳಿಂದಲೂ ಇಂಗ್ಲಿಷ್ ಭಾಷೆಯನ್ನು ಕಲಿತು, ಅರೆದು ಕುಡಿದು, ಅಯಕಟ್ಟಿನ ಜಾಗಗಳಲ್ಲಿ ಸಮೃದ್ದ ಮತ್ತು ಸುರಕ್ಷತಾ ವಲಯದ ಜೀವನವನ್ನು ಕಟ್ಟಿಕೊಂಡವವರು ಇಂದು ಅದೇ ಭಾಷೆಯನ್ನು ಕಲಿಯಹೊರಟಿರುವ ಗ್ರಾಮೀಣ, ದಲಿತ-ದಮನಿತ ಸಮುದಾಯಗಳನ್ನು ವಂಚಿಸುವ ಕಣ್ಕಟ್ಟು ಆಟ ಹೂಡಿದ್ದಾರೆ.

ಕನ್ನಡ ಉಳಿದಿರುವುದು ಇಂದಿನ ಸೋ ಕಾಲ್ಡ್ ಕನ್ನಡ ಚಳುವಳಿಗಾರರು, ಸಾಹಿತಿಗಳಿಂದಲ್ಲ. ಅದು ಈ ನಾಡಿನ ಬಹುಸಂಖ್ಯಾತ ದಲಿತ- ದಮನಿತ- ಗ್ರಾಮೀಣ ಜನಸಮುದಾಯಗಳಿಂದ ಮಾತ್ರ. ಎಂಬ ವಾಸ್ತವ ಸತ್ಯವನ್ನು ಮರೆಮಾಚುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ತಲೆಮಾರುಗಳಿಂದ ತಮ್ಮ ಅಸ್ತಿತ್ವ ಕಾಯ್ದುಕೊಂಡು ಯಥೇಚ್ಛವಾಗಿ ಇಂಗ್ಲಿಷ್‍ನ್ನು ಕಲಿತು, ದೇಶ, ವಿದೇಶಗಳಲ್ಲಿ ಬೇರು ಬಿಟ್ಟು ಪ್ರತಿಷ್ಠೆ ಮರೆದಿರುವಾಗ, ಅಧಿಕಾರ ಕೇಂದ್ರಿತ ಸ್ಥಳಗಳಲ್ಲಿ ಸುಭದ್ರವಾಗಿ ಕುಳಿತಿರುವಾಗ, ಐಟಿ-ಬಿಟಿ ಎಂಬ ಮೋಜಿನ ಮಹಲುಗಳಲ್ಲಿ ತೇಲುತ್ತಿರುವವರಲ್ಲಿ ಈಗ ಇದೇ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬಲಹೀನ, ನಿರ್ಲಕ್ಷ್ಯಕ್ಕೊಳಗಾದ ಬಹುಜನ ಜನಸಮುದಾಯದ ಮೊದಲ ಒಂದು ಪೀಳಿಗೆಯೂ ಅಕ್ಷರ ಕಲಿಕೆಗೆ ತೆವಳುತ್ತಿರುವಾಗ ಕನ್ನಡ ಉಳಿವು-ಹೋರಾಟ ಜಾಗೃತಿಗೊಂಡಿದೆ.

60 ರ ದಶಕದಲ್ಲಿ ಮೇಲ್ವರ್ಗದವರು ಇಂಗ್ಲಿಷ್ ಕಲಿಯುವಾಗ, ಇಂಗ್ಲಿಷ್ ಉಳಿಸಿಕೊಳ್ಳುವಾಗ ಬಹುಸಂಖ್ಯಾತ ಸಮುದಾಯದ ಹಿತಾಸಕ್ತಿಗಳು, ಗ್ರಾಮೀಣ ಜನಸಮುದಾಯ ಇಂಗ್ಲಿಷ್ ನ್ನು ತೊಲಗಿಸಬೇಕು ಎಂಬ ದನಿ ಎತ್ತಲು ಶಕ್ತವಾಗಿರಲಿಲ್ಲ ಎಂಬುದನ್ನು ಲೋಹಿಯಾ ಗುರುತಿಸಿದ್ದರು. ಈಗ ಅದೇ ಬಹುಸಂಖ್ಯಾತ ಸಮುದಾಯ ಇಂಗ್ಲಿಷ್ ನ್ನು ಕಲಿಯುವಾಗ ಈಗಾಗಲೆ ಇಂಗ್ಲಿಷ್ ಕಲಿತು ಅದರಲ್ಲೇ ಮುಳುಗಿರುವ ಜನವರ್ಗ ಇಂಗ್ಲಿಷ್ ನ್ನು ತೊಲಗಿಸಬೇಕು ಎಂದು ಕೂಗು ಹಾಕುತ್ತಿದೆ. ಕನ್ನಡ ಉಳಿಸಿ ಎನ್ನುವ ಮೂಲಕ ಬಹುಸಂಖ್ಯಾತರನ್ನು ದಾರಿ ತಪ್ಪಿಸುವ ಆ ಮೂಲಕ ತಮ್ಮ ಇಂಗ್ಲಿಷ್ ಘನತೆಯನ್ನು ಕಾಯ್ದುಕೊಳ್ಳುವ ಷಡ್ಯಂತ್ರ ಹೂಡಿದೆ. ಇದನ್ನೇ ಸಾಮಾಜಿಕ -ಸಾಂಸ್ಕೃತಿಕ ವಂಚನೆ ಎನ್ನುವುದು.

ಖಾಸಗಿ ಶಾಲೆಗಳು ತಮ್ಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿರುವಾಗ. ಇಂಗ್ಲಿಷ್ ಹೊರತಾಗಿ ಬದುಕು, ಭವಿಷ್ಯವೇ ಇಲ್ಲ ಎಂಬಂತ ಭ್ರಮೆಯನ್ನು ಪೋಷಕರಲ್ಲಿ ಬಿತ್ತಿ ದಂಧೆ ನಡೆಸುತ್ತಿರುವಾಗ ಅದನ್ನು ಪ್ರಶ್ನಿಸಲಾರದ ಕನ್ನಡ ಸಾಹಿತಿಗಳು, ಹೋರಾಟಗಾರರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯುವುದು ಕನ್ನಡಕ್ಕೆ ಧಕ್ಕೆ ಎಂಬಂತೆ ವರ್ತಿಸುತ್ತಿರುವುದು ಅವರಲ್ಲಿನ ಬುದ್ದಿ-ಭಾಷೆ ಎರಡೂ ಗತಿಸಿದ ಸಂಕೇತ.

ಕೇವಲ ಕನ್ನಡ ಕಲಿಸುವುದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಿಲ್ಲ. ಆದರೆ ಇಂಗ್ಲಿಷ್ ನ್ನು ಕಲಿಸುವುದರಿಂದ ಅದನ್ನು ಒಂದು ಮಾಧ್ಯಮವಾಗಿಯೂ ಅಳವಡಿಸುವುದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಬಹುದು. ಪೋಷಕರು ತಮ್ಮ ಮಗುವನ್ನು ನರ್ಸರಿಯಿಂದಲೇ ಖಾಸಗಿ ಸಂಸ್ಥೆಗಳನ್ನು ಅವಲಂಬಿಸುವ ಇಂದಿನ ಪರಿಸ್ಥಿತಿಯಲ್ಲಿ ಕ್ರಮೇಣ ಆ ಮಗುವು ಖಾಸಗಿ ಶಿಕ್ಷಣ ಸಂಸ್ಥೆಗಳ ದಾರಿಯನ್ನೆ ಅವಲಂಬಿಸಿ ಮುಂದುವರೆಯುತ್ತವೆ.

ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಕೇವಲ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮವನ್ನು ಜಾರಿಗೆ ತರುವುದಷ್ಟೇ ಅಲ್ಲ, ನರ್ಸರಿಯನ್ನು ಆರಂಭಿಸಬೇಕು. ಇದು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಉಳಿವಿಗೆ ಸಹಕಾರಿಯಾಗುತ್ತವೆ. ಬಡ ಮತ್ತು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಮಾರ್ಗ ಹಾಕಿಕೊಟ್ಟಂತಾಗುತ್ತದೆ. ಸರ್ಕಾರ ಪ್ರಾಯೋಜಿತ ಬೆದರಿಕೆಗಳಿಗೆ ಜಗ್ಗದೆ ಇದೀಗ ಕೈಗೊಂಡಿರುವ ನಿರ್ಧಾರವನ್ನು ಜಾರಿಗೊಳಿಸುವ ಇಚ್ಛಾಶಕ್ತಿಯನ್ನು ತೋರಬೇಕು. ಇದು ಸರ್ಕಾರಿ ಶಾಲೆಯ ಉಳಿವಿನ ಬದ್ದತೆಯ ಕರ್ತವ್ಯವಾಗಲಿ. ಗೆಲ್ಲುವುದಕ್ಕೆ ಇಂಗ್ಲಿಷ್ ಇರಲಿ, ಬಾಳುವುದಕ್ಕೆ ಕನ್ನಡವಿರಲಿ.

ಇಂಗ್ಲಿಷ್ಇಂ ಮಾಧ್ಯಮದಲ್ಲಿ ಕಲಿತ ಮಾತ್ರಕ್ಕೆ ಕನ್ನಡ ಭಾಷೆ, ಕನ್ನಡತನ ಅಳಿಯುವುದಿಲ್ಲ. ಭಾಷೆಯೊಂದು ಜಾಗತಿಕ ಭಾಷೆಯ ಪ್ರಭಾವದ ಆಚೆಯೂ ಜೀವಂತಿಕೆ ಇದೆ ಎನ್ನುವುದಕ್ಕೆ ತುಳು ಭಾಷೆಯ ಜೀವಂತಿಕೆ ಸಾಕ್ಷಿ. ಷೇಕ್ಸ್ ಪಿಯರ್ ನ ಕೃತಿಗಳನ್ನು ಮೂಲದಲ್ಲೆ ಓದಿದರೂ ಅವುಗಳ ವಿಮರ್ಶೆ ಹೆಚ್ಚಿನದಾಗಿ ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಲ್ಲಿ ಬಂದಿವೆ.

ಭಾಷಾ ವೈವಿಧ್ಯತೆಯನ್ನೊಳಗೊಂಡಿರುವ ದೇಶದಲ್ಲಿ ಏಕರೂಪ ಶಿಕ್ಷಣ ಜಾರಿ, ಶಿಕ್ಷಣದ ರಾಷ್ಟ್ರೀಕರಣದ ಮೂಲಕ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯ ಅಸ್ಮಿತೆಯನ್ನು ಕಾಯ್ದುಕೊಳ್ಳುವ ಮತ್ತು ಜಾಗತಿಕ ಭಾಷೆಯ ಮೂಲಕ ಇವತ್ತಿನ ಸವಾಲುಗಳನ್ನು ಎದುರಿಸಲು ಮಕ್ಕಳನ್ನು ಸಿದ್ದಪಡಿಸಬೇಕಿದೆ.

ಗೋಕಾಕ್ ಮಾದರಿ ಚಳುವಳಿ ನಡೆಯಬೇಕಾಗಿರುವುದು ಸರ್ಕಾರ ಜಾರಿಗೆ ತರಹೊರಟಿರುವ ಸರ್ಕಾರಿ ಆಂಗ್ಲಮಾಧ್ಯಮ ಶಾಲೆಗಳನ್ನು ವಿರೋಧಿಸಲು ಅಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ದಂಧೆಯನ್ನು, ಸುಲಿಗೆಯನ್ನು ಹತ್ತಿಕ್ಕಲು, ಮತ್ತು ಶಿಕ್ಷಣದ ರಾಷ್ಟ್ರೀಕರಣಕ್ಕಾಗಿ ನಡೆಯಬೇಕಿದೆ.

ವಿಶ್ವದೆಲ್ಲೆಡೆ ಹೇರಲ್ಪಟ್ಟ ಇಂಗ್ಲೀಷ್ ಭಾಷೆ ಅಹಂಕಾರದ ಭಾಷೆಯಾಗುತ್ತಿರುವುದು ವಿಪರ್ಯಾಸ. ಸ್ಥಳೀಯ ಭಾಷೆಗಳು ಕಟ್ಟಿಕೊಂಡ ಅಭಿಮಾನ ಬದುಕಿನ ದಾರಿಯುದ್ದಕ್ಕೂ ಪಲ್ಲಟಗೊಳ್ಳದ ಸಹಜತೆಯನ್ನು ಕಾಯ್ದುಕೊಳ್ಳುವ ಕಡೆಗಿನದು.

ಹಾಗಂತ ಭಾಷೆಯ ಕಾರಣಕ್ಕೆ ಬಡ ಕುಟುಂಬದಲ್ಲಿ ಜನಿಸಿದ ಮಕ್ಕಳು ಗ್ರಾಮೀಣ ವಲಯದಲ್ಲಿ ಬೆಳೆದ ಮಕ್ಕಳು ಅವಕಾಶಗಳಿಂದ ವಂಚಿತರಾಗಿ ಅನುಭವಿಸುವ ಅವಮಾನಗಳನ್ನು ಈ ಸಾಹಿತಿಗಳು ಗೌರವವೆಂದೇ ಭ್ರಮಿಸಿರುವಂತಿದೆ. ಇವತ್ತಿನ ಅಥವಾ ಮುಂದಿನ ಕಾಲ ಇಂಗ್ಲಿಷ್ ಭಾಷೆಯನ್ನು ನಿರಾಕರಿಸುವಂತ ಕನ್ನಡದ ಬದುಕನ್ನು ಉಳಿಸಿಕೊಳ್ಳಲು ಗಟ್ಟಿ ಸಿದ್ಧತೆಗಳನ್ನು ಮಾಡಿಕೊಳ್ಳಿ ಅಂತ ಈ ಸೋಗಿನ ಸಾಹಿತಿಗಳ ಮೇಲೆ ಎಸಿಯಬೇಕು. ಆಂಗ್ಲಭಾಷೆ ಚಾಲ್ತಿಯಲ್ಲಿರುವ ಊರುಗಳಲ್ಲಿ ವಾಸ ಮಾಡಬೇಡಿ ಮೈಲಿಗೆ ಆಗುತ್ತೆ ಅಂತ ಇವರ ಮನೆಗೋಡೆಗಳನ್ನು ಕೆಡವಬೇಕಷ್ಟೆ.

2 comments

 1. ಎಲ್ಲ ಬಿಟ್ಟ ಭಂಗಿ ನೆಟ್ಟ ಅನ್ನೋ ಹಂಗೆ ಇರೋ ನೂರಾರು ಸಮಸ್ಯೆಗಳನ್ನು ಬಗೆಹರಿಸೋದು ಬಿಟ್ಟು ಯಾರಿಗೂ ಬೇಡವಾದ ಇಂಗ್ಲಿಷ್ ಮಾಧ್ಯಮ ಸರ್ಕಾರೀ ಶಾಲೆಗಳನ್ನು ಶುರು ಮಾಡಿ ಏನು ಸಾಧಿಸಕ್ಕೆ ಹೊರಟಿದ್ದಾರೆ?

  ಜರ್ಮನಿಯಲ್ಲಿ, ಫ್ರಾನ್ಸ್ ನಲ್ಲಿ, ಜಪಾನ್ ನಲ್ಲಿ ಸರಕಾರಗಳು ಖುದ್ದಾಗಿ ಮುಂದೆ ನಿಂತು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆಗೆಯೋದನ್ನು ಯೋಚನೆ ಕೂಡ ಮಾಡಿಲ್ಲ ಮತ್ತು ಮಾಡಲ್ಲ, ಆದರೆ ಯಾರು ಕೂಡ ಇಂಗ್ಲಿಷ್ ನಿರ್ಲಕ್ಷಿಸಿಲ್ಲ, ಅದನ್ನು ಒಂದು ಭಾಷೆಯಾಗಿ ಕಲಿತು ನಮಗಿಂತ ಚೆನ್ನಾಗಿಯೇ ಮಾತಾಡ್ತಾರೆ,

  ಸಮಸ್ಯೆ ಇರೋದು ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯಲು ಅಲ್ಲ, ಅದನ್ನ ಅವಶ್ಯವಾಗಿ ಒಂದು ಅಥವಾ ಎರಡನೇ ತರಗತಿಯಿಂದ ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳಲ್ಲೇ ಕಲಿಸಲಿ, ಆದರೆ ದೊಡ್ಡ ಸಮಸ್ಯೆ ಎಂದರೆ ಇಂಗ್ಲಿಷ್ ಮಾಧ್ಯಮದ್ದು, ವಿಜ್ಞಾನ, ಗಣಿತ ಇತ್ಯಾದಿ ವಿಷಯಗಳು ಕನ್ನಡದ ಮೂಲಕ ತಲೆಗೆ ಹೋದರೆ ಅದು ಚೆನ್ನಾಗಿ ಅರ್ಥವಾಗಿ, ಮಕ್ಕಳಿಗೆ ಆಸಕ್ತಿ ಬೆಳೆದು ಮುಂದೆ ಆ ವಿಷಯಗಳನ್ನು ಆಳವಾಗಿ ಅಭ್ಯಾಸ ಮಾಡಲು ಪ್ರೇರೇಪಿಸುತ್ತೆ, ಅದರ ಬದಲು ಆ ವಿಷಯಗಳನ್ನು ಇಂಗ್ಲಿಷ್ ಮೂಲಕ ಕಲಿತರೆ ಭಾಷೆಯ ಮೇಲೆ ಗಮನ ಎಲ್ಲ ಹೋಗಿ ವಿಷಯ ಹಿಂದೆ ಹೋಗಿ ಕೊನೆಗೆ ಹೇಗೋ ಪಾಸಾಗಿ mediocre ವಿಧ್ಯಾರ್ಥಿಗಳಾಗಿ ಕೊನೆಗೆ ಯಾವ ವಿಷಯದಲ್ಲೂ ಪರಿಣಿತಿ ಪಡೆಯದೇ ಹೇಗೋ ಜೀವನ ಸಾಗಿಸ್ತಾರೆ, ಎಲ್ಲ ಕಲಿತ, ಆದರೆ ಏನೂ ಗೊತ್ತಿಲ್ಲದ ಜನಾಂಗವಾಗಿ

  ಈಗಿನ ಯಾವ ಮಾಧ್ಯಮದಲ್ಲೇ ಡಿಗ್ರಿ ಮಾಡಿದ ಜನರನ್ನು ಪರೀಕ್ಷೆ ಮಾಡಿದರೆ ಸಾಮಾನ್ಯವಾಗಿ ಓದಕ್ಕೆ ಬರೆಯೋಕೆ ಬರುತ್ತೆ ಆದರೆ ಯಾವ ವಿಷಯದ ಬಗೆಗೂ ಕೂಡ ಐದು ನಿಮಿಷ ಯಾವುದೇ ಭಾಷೆಯಲ್ಲೂ ಅವರಿಗೆ ಮಾತಾಡಲು ಬರೋದಿಲ್ಲ, ಇದು ನಮ್ಮ ಮೂಲಭೂತ ಸಮಸ್ಯೆ, ಇಂಗ್ಲಿಷ್ ಮಾಧ್ಯಮ ಇದಕ್ಕೆ ಪರಿಹಾರ ಅಲ್ಲ, ನಿಜವಾಗಿ ಇಂಗ್ಲಿಷ್ ಮಾಧ್ಯಮ ಇನ್ನು ಸಮಸ್ಯೆಯನ್ನು ಹೆಚ್ಚು ಮಾಡುತ್ತೆ..

  ನಮ್ಮ ಮಕ್ಕಳಿಗೆ ಸಿಗಬೇಕಾಗಿರೋದು ಈಗಿನ ಕಾಲಕ್ಕೆ ಸರಿಯಾದ, ಆಧುನಿಕ, ಅಪ್ಡೇಟ್ ಆದ ಜ್ಞಾನ, ಅದು ಕನ್ನಡದಲ್ಲಿ ಸಿಕ್ಕರೆ ಇನ್ನು ಒಳ್ಳೆಯದು, ಆದರೆ ಆ ಜ್ಞಾನ ಇಂಗ್ಲಿಷ್ ಮೂಲಕವೇ ಸಿಗಬೇಕೆಂದರೆ ನಮಗೆ ಮೊದಲು ಒಳ್ಳೆಯ ಇಂಗ್ಲಿಷ್ ಗೊತ್ತಿರಬೇಕಾಗುತ್ತೆ ಮತ್ತು ನಮ್ಮ ಪರಿಸ್ಥಿತಿಯಲ್ಲಿ ಅದು ಅಸಾಧ್ಯ ಮತ್ತು ಅಸ್ವಾಭಾವಿಕ..

  ಒಂದು ನಮ್ಮ ಸಮಕಾಲೀನ ಉದಾಹರಣೆಯನ್ನು ನೋಡಿದರೆ ಪುಟ್ಟ ಯುರೋಪಿಯನ್ ದೇಶಗಳಾದ ಫಿನ್ಲ್ಯಾಂಡ್, ಸ್ವೀಡನ್. ಅವುಗಳ ಜನಸಂಖ್ಯೆ ಒಂದು ಕೋಟಿಗೂ ಕಡಿಮೆ, ಆದರೆ ಅವರಲ್ಲಿ ನೂರಕ್ಕೆ ನೂರು ಅವರ ಮಾತೃಭಾಷೆಯಲ್ಲೇ ಜೀವಿಸುತ್ತಾರೆ, ಅವರು ಕಲಿಯುವ ಪ್ರತಿಯೊಂದು ವಿಷಯವು ಅವರ ಭಾಷೆಯ ಮೂಲಕವೇ, ಹಾಗೆಂದು ಅವರು ಇಂಗ್ಲಿಷ್ ಅನ್ನು ನಿರ್ಲಕ್ಷಿಸಿಲ್ಲ, ಮೊದಲನೇ ತರಗತಿಯಿಂದಲೇ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯುತ್ತಾರೆ, ಹಾಗಾಗಿ ಅವರಿಗೆ ಅವರ ಮಾತೃಭಾಷೆ ಮತ್ತು ಇಂಗ್ಲಿಷ್ ಎರಡರಲ್ಲೂ ಒಳ್ಳೆಯ ಹಿಡಿತ ಇರುತ್ತೆ, ಆದರೆ ಗಣಿತ, ವಿಜ್ಞಾನ ಮತ್ತು ಬೇರೆ ಎಲ್ಲ ವಿಷಯಗಳನ್ನು ಅವರು ಕಲಿಯೋದು ಫಿನ್ನಿಷ್/ಸ್ವೀಡಿಷ್ ಮೂಲಕ. ಫಿನ್ಲ್ಯಾಂಡ್ ನ ನೋಕಿಯಾ ಮೊಬೈಲ್ ಸಾಮ್ರಾಜ್ಯವನ್ನು ಆಳಲಿಲ್ಲವೇ? ಸ್ವೀಡನ್ ನ ವೋಲ್ವೋ ವಾಹನಗಳನ್ನು ನಾವು ಕಣ್ಣಿಗೊತ್ತಿಕೊಂಡು ಉಪಯೋಗಿಸುತ್ತಿಲ್ಲವೇ?

  ನಾನು ಸ್ವೀಡಿಷ್ ಕಂಪನಿಯಲ್ಲೇ ಕೆಲಸ ಮಾಡೋದು, ನಾವು ಮೀಟಿಂಗ್ ಗಳಲ್ಲಿ ಬಳಸೋದು ಇಂಗ್ಲಿಷ್ ಅನ್ನೇ, ಆದರೆ ಕೆಲವು ಸರಿ ತುಂಬಾ ಕ್ಲಿಷ್ಟವಾದ ವಿಷಯ ಚರ್ಚೆ ಮಾಡುವಾಗ ಒಬ್ಬಿಬ್ಬರಿಗೆ ಸರಿಯಾಗಿ ಅರ್ಥವಾಗದಿದ್ದರೆ ಅರ್ಥವಾಗಿರುವ ಯಾರಾದರೂ ಅವರಿಗೆ ಸ್ವೀಡಿಷ್ ಭಾಷೆಯಲ್ಲಿ ಹೇಳಿದಾಗ ಅವರಿಗೆ ಅರ್ಥ ಆಗುತ್ತೆ! ಅದು ಮಾತೃ ಭಾಷೆಗಿರುವ ಶಕ್ತಿ…
  ಐದು ಕೋಟಿ ಕನ್ನಡಿಗರಿರುವ ನಮ್ಮ ನಾಡಿನಲ್ಲಿ ಒಂದು ಖ್ಯಾತ ಲೇಖಕರ ಪುಸ್ತಕವನ್ನು ನಾವು ಮೊದಲ ಮುದ್ರಣವಾಗಿ ೧೦೦೦ ಪ್ರತಿಗಳನ್ನು ಮಾಡಿಸಿದರೆ ಅವರು ೫೦,೦೦೦ ಪ್ರತಿಗಳನ್ನು ಮಾಡಿಸುತ್ತಾರೆ!!

  ಇನ್ನು “ಖಾಸಗಿ ಶಾಲೆಗಳು ತಮ್ಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿರುವಾಗ. ಇಂಗ್ಲಿಷ್ ಹೊರತಾಗಿ ಬದುಕು, ಭವಿಷ್ಯವೇ ಇಲ್ಲ ಎಂಬಂತ ಭ್ರಮೆಯನ್ನು ಪೋಷಕರಲ್ಲಿ ಬಿತ್ತಿ ದಂಧೆ ನಡೆಸುತ್ತಿರುವಾಗ ಅದನ್ನು ಪ್ರಶ್ನಿಸಲಾರದ ಕನ್ನಡ ಸಾಹಿತಿಗಳು” ಅನ್ನುವುದರ ಬಗ್ಗೆ, ಸೀರಿಯಸ್ಲೀ, ಸಾಹಿತಿಗಳು ಈ ವಿಷಯದಲ್ಲಿ ಏನು ಮಾಡಲು ಸಾಧ್ಯ ಹೇಳಿ? ಹೆಚ್ಚೆಂದರೆ ಒಂದು ಪ್ರತಿಭಟನೆ ನೆಡೆಸಬಹುದು, ಅದಕ್ಕೆ ಕೇರ್ ಮಾಡೋರು ಯಾರು? ಭಾಷೆಯ ಬಗ್ಗೆ, ಶಿಕ್ಷಣದ ಬಗ್ಗೆ, ಶಿಕ್ಷಣ ಮಾಧ್ಯಮದ ಬಗೆಗೆ ಒಂದು ದೃಢ, ವೈಜ್ಞಾನಿಕ ನಿರ್ಧಾರ ತೆಗೆದುಕೊಳ್ಳಬೇಕಾಗಿರೋದು ನಮ್ಮ ರಾಜ್ಯ ಸರಕಾರವೇ ಹೊರತು ಇನ್ಯಾರು ಅಲ್ಲ..
  ಆದರೆ ಸುಮಾರು ಶಾಸಕರೇ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ದಂಧೆ ಮಾಡಿಕೊಂಡಿರುವಾಗ ಇದರಲ್ಲಿ conflict of interest ಕೂಡ ಬರುತ್ತೆ, ತಮ್ಮ ಸ್ವಂತ ಲಾಭಕ್ಕೋಸ್ಕರ ಭಾಷೆಯನ್ನು ತಿಪ್ಪೆಗೆಸಿ ಅನ್ನುತ್ತಾರೆ ಅವರು, ಅವರ ಪ್ರಕಾರ ಭಾಷೆ ಉಳಿಸುವುದನ್ನು ಬೇರೆ ಯಾರಾದರೂ ಮಾಡಿಕೊಳ್ಳಲಿ, ಅದು ಅವರಿಗೆ ಸುತರಾಂ ಸಂಬಂಧ ಪಟ್ಟಿಲ್ಲ..

  “ಕೇವಲ ಕನ್ನಡ ಕಲಿಸುವುದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಿಲ್ಲ” ಅನ್ನೋದರ ಬಗ್ಗೆ: ಸರ್ಕಾರಿ ಶಾಲೆಗಳನ್ನು ಬರೀ ಉಳಿಸೋದು ನಮ್ಮ ಗುರಿಯಾಗಿರಬಾರದು, ಸರ್ವರಿಗೂ ಕನ್ನಡದಲ್ಲಿ, ಸಮಾನ ಶಿಕ್ಷಣ ಉಚಿತವಾಗಿ ಹತ್ತನೇ ತರಗತಿಯವರೆಗೂ ಕೊಡುವುದು ಸರಕಾರದ ಕರ್ತವ್ಯ, ಇದಕ್ಕಾಗಿ ಖಾಸಗಿ ಶಾಲೆಗಳನ್ನು ನಿಷೇದಿಸಿದರು ಕೂಡ ಒಳ್ಳೆಯದೇ, ಖಾಸಗಿ ಶಾಲೆಗಳು ಹತ್ತರ ನಂತರ ಶಿಕ್ಷಣ ನೀಡಬಹುದು, ಅಷ್ಟರವರೆಗೆ ಒಂದು ಕಾಮನ್ ಬೇಸ್ ಎಲ್ಲರಿಗು ಸಿಕ್ಕಿರುತ್ತದೆ..

  ನಾವು ನಿಜವಾಗಿ ಹೋರಾಟ ಮಾಡಬೇಕಾಗಿರುವುದು ಒಳ್ಳೆಯ ಕ್ವಾಲಿಟಿ ವಿದ್ಯಾಭ್ಯಾಸ ಸರ್ಕಾರೀ ಶಾಲೆಗಳಲ್ಲಿ ಸಿಗಬೇಕಾದ ಬಗ್ಗೆ, ಒಳ್ಳೆಯ ತರಬೇತಿ ಹೊಂದಿದ ಶಿಕ್ಷಕರನ್ನು ನೇಮಿಸಿ ಅವರು ಅವರ ಕೆಲಸ ಸರಿಯಾಗಿ ಮಾಡಲು ಬಿಡಬೇಕಾದ ಬಗ್ಗೆ, ಅವರನ್ನು ಕಲಿಸುವುದು ಬಿಟ್ಟು ಬೇರೆ ಇತರ ಕೆಲಸಗಳಿಗೆ (ಎಲೆಕ್ಷನ್, ಸೆನ್ಸಸ್, ಅಡುಗೆ ಇತ್ಯಾದಿ) ಉಪಯೋಗಿಸುವುದರ ವಿರುದ್ಧ, ಶಿಕ್ಷಣದ ರಾಷ್ಟ್ರೀಕರಣ ಆಗಬೇಕಿರುವ ಪರವಾಗಿ, ಖಾಸಗಿ ಶಾಲೆಗಳನ್ನು ಪ್ರಾಥಮಿಕ ಹಂತದಲ್ಲಿ ನೆಡೆಸಲು ಅನುಮತಿ ನೀಡುವುದರ ವಿರುದ್ಧ..
  ಸರ್ಕಾರೀ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ನೀಡುವುದರಿಂದ ಒಳ್ಳೆಯದು ಏನೇನೂ ಆಗೋದಿಲ್ಲ, ಬದಲಿಗೆ ಇನ್ನೂ ನಮ್ಮ ಮಕ್ಕಳ, ನಮ್ಮ ಭಾಷೆಯ ಪರಿಸ್ಥಿತಿ ಹಾಳಾಗಬಹುದಷ್ಟೆ!

Leave a Reply