ಹುಚ್ಚುಸಂತನೊಬ್ಬ..

ಹುಚ್ಚುಸಂತನೊಬ್ಬ

ಜಿ. ಡಿ. ಅಗ್ರವಾಲ್ – ಸ್ವಾಮಿ ಜ್ಞಾನಸ್ವರೂಪ ಸಾನಂದ,

೨೦ ಜುಲೈ ೧೯೩೨ – ೧೧ ಅಕ್ಟೋಬರ್ ೨೦೧೮

ರಘುನಂದನ

ಹುಚ್ಚುಸಂತನೊಬ್ಬ ಅನ್ನನೀರು ಬಿಟ್ಟನಂತೆ

ಹರಿವನೀರಿಗಾಗಿ ಎದೆಯೊಡೆದು ಸತ್ತನಂತೆ

ಜ್ಞಾನಸ್ವರೂಪಿಯಂತೆ ಸಾನಂದನಂತೆ

ರಸವೆಲ್ಲ ವಿಷವಾಗಿ ಬೆಂಡಾದನಂತೆ

ನೂರಾರು ದಿನದಮೇಲೈದನೇದು ಬಂದಂತೆ

ನೀರಿಲ್ಲದ ನದಿಯಾಗಿ ಬತ್ತಿಹೋದನಂತೆ                                ||ಹುಚ್ಚುಸಂತನೊಬ್ಬ||

 

ನೀರಿಗಾಗಿ ಊಟಬಿಟ್ಟು ಪ್ರಾಣಬಿಡುವರೆ

ವಯಸ್ಸೆಂಭತ್ತು ಮೇಲಾರು ಬುದ್ಧಿಬೇಡವೆ

ಮಹಾಮಾತ್ಯಗೋಲೆಬರೆದು ಅಣಕಿಸುವುದೆ

ಛಪ್ಪನ್ನಿಂಚುಛಾತಿಗೆ ಸವಾಲೆಸುವುದೆ

ಇದ್ದು ಸಂಘದಲ್ಲಿ ಶರೀಕಾಗದಿರುವುದೆ

ನಮ್ಮಂತೆ ಆಗಲು ಹೇಸಿಕೊಳ್ಳಬಹುದೆ                                            ||ಹುಚ್ಚುಸಂತನೊಬ್ಬ||

ಶರ್ಮಿಲೆ ಮೇಧೆಯಂತಿದ್ದ ಭಂಡನು

ತನ್ನದೊಂದೆ ಋತಸತ್ ಎಂದ ಶಠನು

‘ಅಣೆ ಕಟ್ಟಕೂಡದಿಲ್ಲಿ’ ದಿಗಿಣ ಕುಣಿದನು

‘ಹಡಗು ತೇಲಕೂಡದಿಲ್ಲಿ’ ಚಂಡೆಬಡಿದನು

ನಮ್ಮೊಳಗೆ ಸೇರಲಿಲ್ಲ ಮಹಾಮೊಂಡನು

ಸನಾತನವ ನೋನುತ್ತ ಸಂದುಹೋದನು                           ||ಹುಚ್ಚುಸಂತನೊಬ್ಬ||

 

ಊರೂರ ಕಾರಖಾನೆಗವನೆ ಅಡ್ಡಿಯಿಲ್ಲಿ

ಗಂಗೆಯೊಳಗೆ ಕಕ್ಕಬೇಡಿ ಕೊಳಚೆ ಎಂದನಿಲ್ಲಿ

ತನ್ನೊಳಗನ್ನು ಕಕ್ಕುವುದು ಮಗುವೆಲ್ಲಿ ಎಲ್ಲಿ

ಇಲ್ಲೆ ಅಲ್ಲವೆ ತಾಯಮಡಿಲಿನಲ್ಲಿ

ಕಾರಿಕೊಂಡ ಯಾವುದೂ ಉಳಿಯದಿಲ್ಲಿ

ಹರಿವನೀರೆ ಇವಳೆಂಬುದೆ ಸತ್ಯವಿಲ್ಲಿ                                               ||ಹುಚ್ಚುಸಂತನೊಬ್ಬ||

 

ಅಣೆ ಕಾರಖಾನೆ ಹಡಗಿಗಿವಳ ಮಣಿಸದೇನೆ ಇದ್ದರೆ

ಹಣವಾಗಿ ಇವಳ ಎಣಿಕೆಯಾಗದೇನೆ ಇದ್ದರೆ

ಕರೆಂಟು-ಕಮತಕ್ಕಿವಳೊಗ್ಗದೇನೆ ಇದ್ದರೆ

ಕಾಮರ್ಸು-ಯವ್ವಾರಕೆ ಕುದುರದೇನೆ ಇದ್ದರೆ

ಕರೆಂಟ್ ಅಕೌಂಟ್ ನಮ್ಮದು ಹಿಗ್ಗದೇನೆ ಇದ್ದರೆ

ಆಳುವುದು ಹೇಗೆ ನಾವಿವಳ ಪಳಗಿಸದೆ ಇದ್ದರೆ                                   ||ಹುಚ್ಚುಸಂತನೊಬ್ಬ||

 

ಗಂಗೆಯಮುನೆಗೋದೆ ದೇವವಧುಗಳಲ್ಲವೆ

ನರ್ಮದೆ ಸಿಂಧೂ ಕಾವೇರಿ ನಿತ್ಯೈದೇರಲ್ಲವೆ

ಮೀಯುವಾಗ ನೆನೆಯುವುದು ಸಾಕಲ್ಲವೆ

ಅವರ ಹೆಸರಬಲದಿಂದಲೇ ಶುದ್ಧಿಯಲ್ಲವೆ

ಹೆಚ್ಚು ಹಚ್ಚಿಕೊಂಡರೆ ಹೊರೆಯಲ್ಲವೆ

ಆ ಮುದಿಯ ಸೋತದ್ದದರಿಂದಲಲ್ಲವೆ                                   ||ಹುಚ್ಚುಸಂತನೊಬ್ಬ||

ಗಂಗೆ ಚಿಂತೆ ಏಕೆ ನಮಗೆ ಎಲ್ಲೂ ಹೋಗಳು

ಸದಾ ಶುದ್ಧಳು ಇವಳು ಅಳುತ ನಗುವಳು

ನಗುತ ಅಳುವಳು ಇವಳು ಎಲ್ಲ ಕೊಳಚೆ ಕೊಚ್ಚುವಳು

ಎಲ್ಲ ಪಾಪ ನುಂಗುವಳು ಕೋಟಿ ಹೆಣವ ಹೊರುವಳು

ಕೋಟಿ ಜೀವದಾತ್ಮಗಳನು ನಾಕಕೊಯ್ವಳು

ಎಂದೂ ಬತ್ತಳು ಇವಳು ಉದ್ಬುದ್ಧಳು                                    ||ಹುಚ್ಚುಸಂತನೊಬ್ಬ||

ಗಂಗೆ ಚಿಂತೆ ಏಕೆ ನಮಗೆ ಎಲ್ಲೂ ಹೋಗಳು ಇವಳು ಸದಾ ಶುದ್ಧಳು ಕೊಳಚೆಕೊಚ್ಚೆಹಣಹೆಣದ ಕಾಡುಹರಟೆ ಬಿಟ್ಟುಬಿಡುವಾ ಭಾರತೀಯ ಸಂಸ್ಕೃತಿಯ ಖಡ್ಗವಾಗುವಾ ಮಾಂಸಖಂಡವಾಗುವಾ ಹಸುಳೆಗಳನಪ್ಪಳಿಸಿದ ಕಂಸನಂತೆ ಗಟ್ಟಿಯಾಗುವಾ ನಾವು ವೈಕುಂಠಕೆ ಲಗ್ಗೆಯಿಟ್ಟ ಕಾಲನೇಮಿಯಂತೆ ದಿಟ್ಟರಾಗುವಾ ಒಂದಿಗೇನೆ ಕೂಗುವಾ ಸರಯೂವಿನ ದಡದಲ್ಲಯೋಧ್ಯೆಯಲ್ಲಿ ಹುಟ್ಟಿದ ಮರ್ಯಾದಾ ಪುರುಷೋತ್ತಮನ ಹಡೆದ ತಾಣ ನಮ್ಮದು ಮಯಸಭೆಯ ನಾಚಿಸುವ ಗುಡಿಯಾಗುವುದಲ್ಲಿ ಜಗವನಾಳ್ವುದು ಅದು ಜಗವನಾಳ್ವುದು ಗಂಗೆ ಚಿಂತೆ ಏಕೆ ನಮಗೆ ಎಲ್ಲೂ ಹೋಗಳು ಇವಳು ಸದಾ ಶುದ್ಧಳು ಕೂಗುವಾ ಒಂದಿಗೇನೆ ಗೋವರ್ಧನವನೆತ್ತಿದವನ ಕಾಳಿಂಗನ ತುಳಿದವನ ಹಡೆದಂಥ ಕಾರಾಗೃಹ ನಮ್ಮದು ನಮ್ಮದಾ ಗಿರಿಯಂಥ ಗುಡಿಕಟ್ಟಲು ಸುತ್ತಿನೆಲ್ಲ ಕೆಡಹಲು ಕಾರಸ್ಥಾನ ಮಾಡುವಾ ಕಾಳರಂತೆ ಏಳುವಾ ಒನಕೆ ಹಿಡಿಯುವಾ ಗಂಗೆ ಚಿಂತೆ ಏಕೆ ನಮಗೆ ಎಲ್ಲೂ ಹೋಗಳು ಇವಳು ಸದಾ ಶುದ್ಧಳು ಕೂಗುವಾ ಒಂದಿಗೇನೆ ಹರಹರ ಮಹಾದೇವ ಕಾಶಿ ನಮ್ಮ ಕೈಲಾಸ ವಿಶ್ವನಾಥ ನಮ್ಮ ದೈವ ಅವನ ಗುಡಿಯ ಅತ್ತಿತ್ತ ಎಲ್ಲ ಕೆಡಹುವಾ ಅವನ ಬೆಳ್ಳಿಬೆಟ್ಟದೆತ್ತರಕ್ಕೆ ಗುಡಿಯ ಕಟ್ಟುವಾ ಅವನ ಗಣಗಳಂತೆ ಕುಣಿಯುವಾ ಕೇಕೆಹಾಕುವಾ ಗಂಗೆ ಚಿಂತೆ ಏಕೆ ನಮಗೆ ಎಲ್ಲೂ ಹೋಗಳು ಇವಳು ಸದಾ ಶುದ್ಧಳು ಬನ್ನಿ ಕಂಸಕಾಲನೇಮಿ ಮಯಾಸುರರೆ ಬನ್ನಿ ಮಹಾಕಾಳಗಣಂಗಳೆ ನೀವು ಬನ್ನಿ ಬನ್ನಿ ಕೂಗುವಾ ಕೆಡಹುವಾ ಪೇರಿಸುವಾ ಕುಣಿಯುವಾ ಅಭಿವೃದ್ಧಿಯ ವ್ರತದಲ್ಲಿ ಅಲಕೆಗಳ ಕನಸಲ್ಲಿ ರಾಜಸೂಯ ಯಾಗದಲ್ಲಿ ಸಾಮ್ರಾಜ್ಯದ ಸೊಕ್ಕಿನಲ್ಲಿ ಮೈಯ ಮರೆಯುವಾ ಅತಿಕಾಯರಾಗುವಾ ಗಂಗೆ ಚಿಂತೆ ಏಕೆ ನಮಗೆ ಎಲ್ಲೂ ಹೋಗಳು ಇವಳು ಸದಾ ಶುದ್ಧಳು ಇವಳು ಸದಾ ಶುದ್ಧಳು ||ಹುಚ್ಚುಸಂತನೊಬ್ಬ||

*****

Leave a Reply