ಅವರಿಬ್ಬರಿಗೂ ಕ್ಷಮೆ ಎಂಬ ಮೋಕ್ಷ ದೊರೆಯಲಿ..

ಆ ಕಡಲ ತೀರವನ್ನು ಕಾಲು ನಡಿಗೆಯಿಂದ ಕ್ರಮಿಸಬಹುದಾದಷ್ಟು ದೂರದಲ್ಲಿ ಮೀನು ಹಿಡಿಯುವ ಬೆಸ್ತರ ಗುಡಿಸಲುಗಳಿವೆ. ಹೆಚ್ಚೆಂದರೆ ನೂರು  ಗುಡಿಸಲುಗಳಿರಬಹುದು. ಮೀನಿನ ವಾಸನೆ ಇಡೀ ಬಸ್ತಿಯನ್ನು ಆವರಿಸಿಕೊಂಡಿದೆ.

ಗುಡಿಸಲುಗಳ ಸಾಲಿನಲ್ಲಿರುವ ಕಡೆಯ ಗುಡಿಸಲು ಅವನದು. ಅದೊಂದು ಗುಡಿಸಲಿನ ಮಾಡಿಗೆ ಹೊದಿಸಿದ ಗರಿಗಳು ಬಿಸಿಲಿಗೆ ಒಣಗಿ, ಮಳೆಗಾಳಿಗೆ ಜೊಳ್ಳಾಗಿ ಮುರಿದು ಬೀಳುವ ಸ್ಥಿತಿಯಲ್ಲಿದೆ. ಅದೇ ಗುಡಿಸಲಿನ ಮಾಲೀಕ ಅವನು. ಬಡಕಲು ದೇಹ, ಸೀಮೆಎಣ್ಣೆ ದೀಪದಂತೆ ಆಳಕ್ಕಿಳಿದ ಕಣ್ಣುಗಳು, ಗರಿಕೆಯಂತಹ ಕುರುಚಲು ಗಡ್ಡ, ತಲೆಗೆ ಮುಂಡಾಸು, ಎದುರಿನ ತಟ್ಟೆಯಲ್ಲಿ ಎರಡು ಹೊತ್ತಿನ ಹಿಂದೆ ಮಾಡಿದ ಗಂಜಿ. ಮನೆಯ ಮೂಲೆಯಲ್ಲಿ ಹರಿದು ಗಂಟು ಗಂಟಾಗಿರುವ ಮೀನಿನ ಬಲೆ, ಗುಡಿಸಲಿನ ಹೊರಗೆ ಒಂದು ಮಗ್ಗಲಿಗೆ ಇನ್ನೇನೂ ತೂತು ಬೀಳಬಹುದಾದ ದೋಣಿ, ದೋಣಿಯ ಮೂಲೆಯಲ್ಲಿ ಎಷ್ಟೋ ವರ್ಷಗಳ ಕಡಲ ಅಲೆಗಳ ರಭಸಕ್ಕೆ ಎದೆಕೊಟ್ಟು ಸವೆದುಹೋಗಿರುವ ದೋಣಿಯ ಹುಟ್ಟು.

ಆದರೆ ಈ ಎಲ್ಲಾ ಇಲ್ಲಗಳ ನಡುವೆಯೂ ಬಡಕಲು ದೇಹದ ಅವನು ಸಂತುಷ್ಟನಾಗಿದ್ದಾನೆ. ಮನೆಯ ಒಲೆಯಲ್ಲಿ ದಿನವೂ ಗಂಜಿ ಬೇಯುತ್ತದೆ. ಕಳಚಿ ಬೀಳಲು ಅಣಿಯಾಗಿರುವ ಮಾಡಿನ ಗುಡಿಸಲಿನಲ್ಲೇ ಒಂದು ಕಾಲದ ಇಷ್ಟದ ಹುಡುಗಿ ಇದೀಗ ಹೆಂಡತಿಯಾಗಿ ಅನುವಾದವಾಗಿದ್ದಾಳೆ. ಅವರಿಬ್ಬರೂ ಪೂರ್ವತಯಾರಿ ಇಲ್ಲದೆಯೂ ಎಂದೋ ಬರೆದ ಪರೀಕ್ಷೆಗೆ ಬಂದ ಉತ್ತಮ ಫಲಿತಾಂಶದಂತೆ ಈಗ ಅರ್ಧ ಗೇಣಿನ ಅಳತೆಯ ಪುಟ್ಟ ಪಾದದ ಮಗಳಿದ್ದಾಳೆ. ವರ್ಷಗಳ ಹಿಂದೆ ಕಡಲನ್ನು ಕೇವಲ ವರ್ಣನೆಯಲ್ಲಿ ಕೇಳಿದ್ದ ಅವರ ಮಗಳು ಕಡಲನ್ನು ಈಗ ಕಣ್ಣಲ್ಲಿಯೂ ಕಂಡಿದ್ದಾಳೆ. ಆಗಾಗ ಒಬ್ಬಳೇ ನಡೆದು ಹೋಗಿ ಕಡಲು ಬಿಟ್ಟುಕೊಡುವ ಆಂತರ್ಯದ ಸತ್ಯವನ್ನು ಕಿವಿನೀಡಿ ಕೇಳಿಬರುತ್ತಾಳೆ. ಸಾಕು ಎನ್ನುವಷ್ಟು ಕಪ್ಪೆಚಿಪ್ಪುಗಳನ್ನು ಉಡಿಯಲ್ಲಿ ತುಂಬಿಕೊಂಡು ಗುಡಿಸಲಿನಲ್ಲಿಟ್ಟುಕೊಂಡಿದ್ದಾಳೆ.

ಮುಂದಿನ ಒಂದು ತಿಂಗಳಿಗೆ ಮಳೆಗಾಲ ಆರಂಭ. ಅದಕ್ಕಾಗೇ ಎಚ್ಚರವಾಗಿ ಮೀನುಗಾರರ ಬಸ್ತಿಯ ಎಲ್ಲರ ಗುಡಿಸಲಿಗೂ ವಾರದ ಹಿಂದೆಯೇ ಮಾಡು ಹೊದಿಸಲಾಗಿತ್ತು. ಬಡಕಲು ದೇಹದ ಅವನು ಗುಡಿಸಲಿಗೆ ಮಾತ್ರ ಯಥಾಸ್ಥಿತಿ. ತಿಂಗಳಿನಿಂದಲೂ ಇವನ ಹರಿದ ಬಲೆಗೆ ಮೀನುಗಳು ಬಿದ್ದಿರಲಿಲ್ಲ. ಬಿದ್ದರೂ ಇವನ ದೋಣಿಯನ್ನು ಸೇರುತ್ತಿರಲಿಲ್ಲ. ಕಳೆದ ರಾತ್ರಿ ಬಿಡುವಿಲ್ಲದಂತೆ ಜೋರುಮಳೆಯಾಯಿತು. ಅವರು ಮೂವರು ಬೆದರಿಹೋಗಿದ್ದರು. ಕಡೆಗೆ ಒಬ್ಬರನೊಬ್ಬರು ಬಿಗಿಯಾಗಿ ಅಪ್ಪಿ ಮಲಗುವ ಮೂಲಕ ಇರುಳನ್ನು ಸರಿಸಿದ್ದರು.

 

ಬೆಳಗ್ಗೆ ಬಡಕಲು ದೇಹದ ಅವನಿಗೆ ಹಟವಾಯಿತು. ಅವನು ಮತ್ತು ಹೆಂಡತಿ ಇಬ್ಬರೂ ಗುಡಿಸಲಿಗೆ ಮಾಡು ಹೊದಿಸಲು ತೀರ್ಮಾನಿಸಿದರು. ಒಂದು ವಾರದ ಮೀನುಗಳನ್ನು ಒಂದೇ ದಿನದಲ್ಲಿ ಹಿಡಿಯಬೇಕು ಎಂದು ನಿರ್ಧರಿಸಿಕೊಂಡರು. ಕಡಲಿನಲ್ಲಿ ಅವನು ಮೀನು ಹಿಡಿಯಲು ನಿಲ್ಲುವಾಗ, ಹೆಂಡತಿ ದೋಣಿಗೆ ಹುಟ್ಟು ಹಾಕಬೇಕು ಎಂದು ಒಪ್ಪಂದ ಮಾಡಿಕೊಂಡರು. ಬೆಳಗ್ಗೆಯೇ ಗಂಜಿ ಕುದಿಸಿ ಮಗಳಿಗೆ ಬಡಿಸಿದರು. ಇಬ್ಬರೂ ಮಗಳನ್ನು ಮುದ್ದು ಮಾಡಿ ತಲೆನೇವರಿಸಿ ತಿರುಗಿ ಬರುವುದಾಗಿ ದೋಣಿಯನ್ನು ಸಾಗಿಸಿ ಕಡಲಿಗಿಳಿದರು. ಪುಟ್ಟ ದೇವರಂತಹ ಮಗಳು ಕಡಲಿನ ದಡದಲ್ಲಿ ನಿಂತು ಹೆತ್ತವರಿಗೆ ಕೈ ಬೀಸಿ ಕಳಿಸಿಕೊಟ್ಟಳು. ಕಡಲಿನ ಅಲೆಗಳು ಪಾದಗಳನ್ನು ಬಡಿದದ್ದು, ಮಗಳಿಗೆ ಯಾರೋ ಅಪ್ಪಿಕೊಂಡಂತೆ ಭಾಸವಾಯಿತು.

ದೋಣಿ ಸವೆದ ಹುಟ್ಟಿನಿಂದಲೋ, ಅಲೆಗಳು ರಭಸಕ್ಕೋ ಕಡಲಿಗಿಳಿದ ಒಂದಿಷ್ಟೇ ಹೊತ್ತಿಗೆ ದೂರಕ್ಕೆ ಕ್ರಮಿಸಿತ್ತು. ದಡದಲ್ಲಿ ನಿಂತವರ ಕಣ್ಣುಗಳಿಗೆ ಎರಡೇ ನಿಮಿಷಗಳ ಹಿಂದೆ ಉರಿಯುವ ಪಂಜಿನಂತೆ ಗೋಚರಿಸುತ್ತಿದ್ದ ದೋಣಿ, ಈಗ ದೂರದಲ್ಲಿ ಓಲಾಡುವ ದೀಪಾವಳಿಯ ಸಣ್ಣ ದೀಪದಂತೆ ಕಾಣುತ್ತಿತ್ತು. ಉರಿಯುತ್ತಿದ್ದ ಸೂರ್ಯನೂ ನೆತ್ತಿಗೇರಿದವನು ವೇಗವಾಗಿ ಕೆಳಗಿಳಿದು ಕಡಲಿನ ಯಾವುದೋ ಮೂಲೆಯಲ್ಲಿ ಮುಖವನ್ನು ತಗ್ಗಿಸಿ ಕರಗಿಹೋಗುತ್ತಿದ್ದ.

ಕಡಲಿಗಿಳಿದವ ಅಪ್ಪಅಮ್ಮನ್ನನ್ನು ಮಗಳು ಕಾದಳು . . ಕಾಯುತ್ತಿದ್ದಳು. . .ಕಾಯಬೇಕು ಎಂದುಕೊಂಡಳು. . ಮೀನುಗಳು ಹೆಚ್ಚು ಸಿಕ್ಕಿರಬಹುದು ಎನಿಸಿತು. . .ಅವರಿಬ್ಬರೂ ಈಗಷ್ಟೇ ಹೊರಟಿರಬಹುದು ಎಂದುಕೊಂಡಳು. . .ಮಗಳಿಗೆ ಇಂದು ಬರಬಹುದು ಎನಿಸಿತು. . .ಇಲ್ಲಾ, ನಾಳೆ ಮುಂಜಾನೆ ಬರಬಹುದು ಎಂದು ಬಲವಂತಾಗಿ ತನಗೆ ತಾನೇ ಒಪ್ಪಿಸಿಕೊಂಡಳು. . .ಕಾದಳು. . .ಕಾಯಬೇಕು ಎಂದುಕೊಂಡಳು ಪುಟ್ಟ ದೇವತೆಯಂತಹ ಮಗಳು.

ಆದರೆ ಅವರಿಬ್ಬರೂ ಬರಲೇ ಇಲ್ಲ. ಅವರಿಬ್ಬರು ಕಡಲಿಗಿಳಿದ ದಿನ ನೆತ್ತಿಗೇರಿದ ಸೂರ್ಯ ಕೆಳಗಿಳಿದು ಕಡಲಿನ ಮೂಲೆಯಲ್ಲಿ ಮುಳುಗಿಹೋದಂತೆ, ಅದೇ ಸಂಜೆ ದೋಣಿ ಮುಳುಗಿ ಅವರಿಬ್ಬರೂ ಕಡಲ ನಡುವೆ ಮುಳುಗಿಹೋಗಿದ್ದರು.

ಇಂದಿಗೂ ಕಡಲಿನ ದಡದಲ್ಲಿ ಕುಳಿತು ಪುಟಾಣಿ ಪಾದದ ಮಗಳು ಕಾಯುತ್ತಲೇ ಇದ್ದಳು. ವಾರದ ನಂತರ ಅದು ಬಸ್ತಿಯ ಅದಾರೋ ಕಡಲಿಗಿಳಿದವರು ಕಡಲ ನಡುವೆ ತೇಲುತ್ತಿದ್ದ ಹರಿದ ಬಲೆಯೊಂದಿಗೆ ಸವೆದ ಹುಟ್ಟು ತಂದು ದಡದಲ್ಲಿಟ್ಟಿದ್ದರು. ಹರಿದ ಬಲೆಯನ್ನು ನೋಡುತ್ತಿದ್ದಂತೆ ಬಡಕಲು ದೇಹದ ಅಪ್ಪ ನೆನಪಾದರೆ, ಸವೆದ ಹುಟ್ಟನ್ನು ಸ್ಪರ್ಶಿಸುತ್ತಿದ್ದಂತೆ ಅಮ್ಮನ ನೆನಪಾಯಿತು ದಡದಲ್ಲಿ ಕಾಯುತ್ತಿದ್ದ ಮಗಳಿಗೆ. ಇದೀಗ ಅವಳಿಗೆ ಅವರಿಬ್ಬರ ಗಮ್ಯ ಅರ್ಥವಾಗಿತ್ತು. ನಿಧಾನವಾಗಿ ನಡೆದು ಬಂದು ಕಡಲಿಗೆ ಮುಖಮಾಡಿ ನಿಂತುಕೊಂಡಳು. ಸೂರ್ಯ ಪ್ರತಿನಿತ್ಯದಂತೆ ರಕ್ತವರ್ಣಕ್ಕೆ ತಿರುಗಿ ಕಂತಲು ಆಣಿಯಾಗಿದ್ದ.

ಮೊದಲ ದಿನದಂತೆಯೇ ದಡದಲ್ಲಿ ನಿಂತಿದ್ದ ಮಗಳ ಪುಟ್ಟ ಪಾದಗಳಿಗೆ ಕಡಲ ಅಲೆಗಳು ನಿರಂತರವಾಗಿ ಮೇಲಿಂದ ಮೇಲೆ ಅಪ್ಪಳಿಸುತ್ತಿದ್ದವು. ಇಂದು ಸಹ, ಆವತ್ತಿನಂತೆಯೇ ಕಡಲು ಅಲೆಗಳು ಕಾಲುಗಳನ್ನು ಬಿಗಿಯಾಗಿ ಹಿಡಿದಂತೆ ಭಾಸವಾಗುತ್ತಿತ್ತು. ಇಷ್ಟಾದರೂ ಮಗಳು ಮಾತ್ರ ತಣ್ಣಗಿನ ದನಿಯಲ್ಲಿ,

“ನೀವು ನನ್ನ ಕಾಲುಗಳನ್ನು ಹಿಡಿದು ಎಷ್ಟು ಕೇಳಿಕೊಂಡರು ನಿಮ್ಮನ್ನು ನಾನು ಕ್ಷಮಿಸುವುದಿಲ್ಲ” ಎಂದಳು. ಅವಳ ದನಿಯಲ್ಲಿ ನಿಚ್ಚಳತೆಯ ಗುರುತುಗಳಿದ್ದವು.

ಕಡಲ ಅಲೆಗಳು ಮಾತ್ರ ಬಡಿಯುತ್ತಾ ಮರಳಿ ಯತ್ನಿಸುತ್ತಲೇ ಇದ್ದವು. ಪುಟ್ಟ ಪಾದದ ಹುಡುಗಿ ಗಟ್ಟಿಮನಸ್ಸಿನಿಂದ ಅಲೆಗಳನ್ನು ತಿರಸ್ಕರಿಸುತ್ತಲೇ ಇದ್ದಳು.

ಆವತ್ತೂ ಸೂರ್ಯ ಸ್ಪಲ್ಪ ವೇಗವಾಗಿಯೇ ಮುಳುಗಿಹೋದ. . .

 

****

ಸ್ಕೂಲಿನಲ್ಲಿರುವಾಗ ನಾನು ಬರೆದ ಹತ್ತಾರೂ ಕತೆಗಳಲ್ಲಿ ಇದೂ ಒಂದಾಗಿದೆಯೋ ಅಥವಾ ಈ ಕತೆಯನ್ನು ನಾನು ಯಾರಿಂದಲೋ ಕೇಳಿರುವುದೋ ಸ್ಪಷ್ಟವಾಗಿ ಹೇಳುವುದು ಕಷ್ಟ. ಆದರೆ ಇದೊಂದು ಕತೆ ಎಷ್ಟೋ ವರ್ಷಗಳಿಂದ ತನ್ನ ಮಗ್ಗಲು ಬದಲಿಸುತ್ತಾ ಹೊಸ ರೀತಿಯಲ್ಲಿ ನನಗೆ ನೆನಪಾಗುತ್ತಲೇ ಇದೆ. ಓದಿದ ಕತೆಗಳಲ್ಲಿ ಮೀನು ಹಿಡಿಯಲು ಹೊರಟ ಬಡಕಲು ದೇಹದ ಬೆಸ್ತ, ಆತನ ಹೆಂಡತಿಯಾಗಿರುವ ಇಷ್ಟದ ಹುಡುಗಿ, ಪುಟಾಣಿ ದೇವರಂತಹ ಮಗಳು ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಲವೊಮ್ಮೆ ಈ ಮೂವರು ನೂತನ ಉಡುಗೆಯಲ್ಲಿದ್ದರೆ ಕೆಲವೊಮ್ಮೆ ಅದೇ ಮೀನಿನ ವಾಸನೆಯ ಚುಂಗು ಬಟ್ಟೆಗಳಲ್ಲಿ ಉಳಿದುಹೋದಂತೆ ಗೋಚರಿಸಿದ್ದಾರೆ. ಈ ನಡುವೆ ಕಡಲಿನ ಅಲೆಗಳು ಸಹಜವಾಗಿ ಕಾಲಿಗೆ ಅಪ್ಪಳಿಸುತ್ತಿರುವಾಗ ಆ ಪುಟ್ಟ ಪಾದದ ದೇವರಂತಹ ಹುಡುಗಿ “ನಾನು ನಿಮ್ಮನ್ನು ಕ್ಷಮಿಸುವುದಿಲ್ಲ” ಎಂದು ನಿರ್ಭಾವುಕವಾಗಿ ಅಲೆಗಳಿಗೆ ಹೇಳುವಾಗ ಆಕೆಯ ಎದೆಯಲ್ಲಿ ಇರಬಹುದಾದ ನಿರ್ಣಯದ ತೀವ್ರತೆಯನ್ನು ಅಳತೆ ಮಾಡುವುದು ಹೇಗೆ ಎನ್ನುವ ಗೊಂದಲಕ್ಕೆ ಒಳಗಾಗಿದ್ದೇನೆ. ನಾನು ಕಡಲಿನ ಎದುರು ನಿಂತು ಅಲೆಗಳಿಗೆ ಕಾಲು ತೋಯಿಸಿಕೊಳ್ಳುತ್ತಿರುವಾಗ ಆ ಪುಟ್ಟ ಪಾದದ ಹುಡುಗಿ ಇಲ್ಲಿ ಎಲ್ಲಿಯೋ ಕಡಲ ಅಲೆಗಳನ್ನು ಧಿಕ್ಕರಿಸಿ ನಿಂತಿರಬಹುದು ಎಂದು ಅನುಮಾನಗೊಂಡಿದ್ದೇನೆ.

ಆದರೆ ಕಡಲು ತನ್ನ ಹೆತ್ತವರನ್ನ ಮರಳಿಸದೇ ಹೋಗಿದ್ದಕ್ಕೆ ಅಲೆಗಳ ಮೂಲಕ ಕಾಲಿಗೆ ಬಡಿದು ಕ್ಷಮೆ ಕೇಳುತ್ತಿದೆ ಎಂದು ಆ ಪುಟಾಣಿ ಹುಡುಗಿಗೆ ಅನಿಸಿದ್ದಾದರೂ ಏಕೆ? ಎಂದು ನನ್ನನ್ನು ನಾನೇ ಕೇಳಿಕೊಂಡಾಗಲೂ ಉತ್ತರ ದೊರೆಯದೇ ಬಡವಾಗಿಹೋಗಿದ್ದೇನೆ.

***

ಬೆಂಗಳೂರಿನ ದೀಪಾಂಜಲಿನಗರ ಮೆಟ್ರೋ ಸ್ಟೇಷನ್‍ನಲ್ಲಿ ರೈಲ್ವೆ ಗಾರ್ಡ್ ಆಗಿರುವ ರವೀಂದ್ರ ಭಗತ್ ಜತೆ ಒಂದಿಷ್ಟು ಹೊತ್ತು ಕಳೆದ ನಂತರ ಕಡಲಿನ ದಡದಲ್ಲಿ ಅಲೆಗಳನ್ನು ಕ್ಷಮಿಸದೇ ಹಟ ಮಾಡುತ್ತಿರುವ ದೇವರಂತಹ ಆ ಪುಟಾಣಿ ಹುಡುಗಿ ನೆನಪಾಗಿದ್ದಾಳೆ. ಅದೇ ಹುಡುಗಿ ತನ್ನ ಪ್ರಯಾಣವನ್ನು ಇಲ್ಲಿಯವರೆಗೂ ಹೊಸದೊಂದು ರೂಪದಲ್ಲಿ ನಡೆಸುತ್ತಾ ಬಂದಿರಬೇಕು ಎನಿಸಿದೆ. ರವೀಂದ್ರ ಭಗತ್ ಚಹಾ ಲೋಟದೊಳಗೆ ಕಡೆಯದಾಗಿ ಉಳಿಯುವ ಗಷ್ಟದಂತ ಕಮ್ಮಗಿನ ಸೊಗಸಿನ ಬಣ್ಣದವನು. ಕೇಳುವ ಅಷ್ಟೂ ಪ್ರಶ್ನೆಗಳಿಗೆ ಅರೆಬರೆ ಕನ್ನಡದಲ್ಲಿ ನಿಮಿಷಕ್ಕೊಮ್ಮೆ ಒಂದು ಸಾಲಿನಲ್ಲಿ ಉತ್ತರಿಸುವ ಅವನು ಆಕಾಶ ನೀಲಿಯ ಗಾರ್ಡ್ ಯೂನಿಫಾರಂನಲ್ಲಿ ಥೇಟು ಕೀಲು ಬೊಂಬೆಯಂತೆ ಕಾಣುತ್ತಾನೆ.

 

ದೂರದ ಜಾರ್ಖಂಡ್‍ನವನು ಈ ರವೀಂದ್ರ ಭಗತ್. ಎರಡು ವರ್ಷಗಳ ಹಿಂದೆ ಜಾರ್ಖಂಡ್‍ನಿಂದ ಬೆಂಗಳೂರಿಗೆ ಓಡಿ ಬಂದ ಹತ್ತು ಹುಡುಗರ ಪೈಕಿ ಇವನೂ ಒಬ್ಬ. ಮೊದಲು ಯಾವುದೋ ಅಪಾರ್ಟ್‍ಮೆಂಟ್‍ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಇವನು ಬೆಚ್ಚಗೆ ಬೆಂಗಳೂರಿಗೆ ಹೊಂದಿಕೊಳ್ಳಲು ಹವಣಿಸುತ್ತಿದ್ದ.
ಸೆಕ್ಯೂರಿಟಿ ಗಾರ್ಡ್ ಆಗಿದ್ದ ಅಪಾರ್ಟ್‍ಮೆಂಟ್‍ನಲ್ಲಿ ಎಲ್ಲರೂ ಅವನೊಂದಿಗೆ ಹಿಂದಿಯಲ್ಲೇ ಮಾತನಾಡುತ್ತಿದ್ದರಿಂದ ರವೀಂದ್ರ ಭಗತ್ ಬೆಂಗಳೂರು ತನ್ನೂರು ಜಾರ್ಖಂಡ್‍ಗಿಂತ ಹೆಚ್ಚು ಭಿನ್ನವಲ್ಲ ಎಂದುಕೊಂಡಿದ್ದನಂತೆ. ಹೀಗಿರುವಾಗಲೇ ಸೆಕ್ಯೂರಿಟಿ ಏಜೆನ್ಸಿಯವರು ಅವನನ್ನು ಇನ್ನು ಮುಂದೆ ದೀಪಾಂಜಲಿನಗರದ ಮೆಟ್ರೋ ಸ್ಟೇಷನ್‍ನಲ್ಲಿ ತಂದು ಕೆಲಸಕ್ಕೆ ಹಾಕಿದ್ದರು. ಯಾವುದನ್ನೂ ಪ್ರಶ್ನಿಸಲಾರದ ಸ್ಥಿತಿಯಲ್ಲಿರುವ ರವೀಂದ್ರ ಅದನ್ನೂ ಒಪ್ಪಿಕೊಂಡು ಇದೀಗ ಸೀಟಿ ಬಾರಿಸುತ್ತಾ, ಜನರಿಗೆ “ಕ್ಯೂ ಮೇ ಆಯಿಯೇ” ಎಂದು ಹೇಳುತ್ತಾ ಉಳಿದುಹೋಗಿದ್ದಾನೆ.

ಸದ್ಯ ತನಗೆ ಸಂಬಳ ನೀಡುತ್ತಿರುವುದು ಐದು ನಿಮಿಷಕ್ಕೊಮ್ಮೆ ಸದ್ದು ಮಾಡುತ್ತಾ ಬರುವ ರೈಲುಗಳನ್ನು ನಿಯಂತ್ರಿಸುವುದಕ್ಕೋ ಅಥವಾ ಮೆಟ್ರೋ ರೈಲುಗಳನ್ನು ಇಳಿದು ಎಲ್ಲಿಗೋ ಓಡುತ್ತಿರುವ ಈ ಬೆಂಗಳೂರಿನ ಜನರನ್ನು ನಿಯಂತ್ರಿಸುವುದಕ್ಕೋ ಎನ್ನುವ ಗೊಂದಲ ಇಂದಿಗೂ ಅವನಲ್ಲಿ ಸುಪ್ತವಾಗಿರಬಹುದು. ಇಂದು ಬೆಂಗಳೂರಿನಲ್ಲಿ ದಿನದ ಹನ್ನೆರಡು ತಾಸುಗಳು ರೈಲುಗಳನ್ನು ನೋಡುತ್ತಲೇ ಕಳೆಯುತ್ತಿರುವ ರವೀಂದ್ರ ತನ್ನೂರು ಜಾರ್ಖಂಡ್ ಮೇಲೆ ನಿಜವಾಗಿಯೂ ಮುನಿಸಿಕೊಂಡಿದ್ದಾನೆ.

ಮಾತಿನ ನಡುವೆ ಆಪ್ತತೆಯಿಂದ, “ರವೀಂದ್ರ ತುಮ್ಹಾರಾ ಜಾರ್ಖಂಡ್ ಮೇ ಕಾಮ್ ನಹೀ ಮಿಲ್‍ತಾಹೈ ಕ್ಯಾ?” ಎಂದು ಪ್ರಶ್ನಿಸಿದರೆ ತನ್ನ ಬೊಚ್ಚಬಾಯಿಯಲ್ಲಿ ನಗುತ್ತಾ ಕನ್ನಡದಲ್ಲೇ “ಜಾರ್ಖಂಡ್ ಬೇಡ” ಎಂದು ಉತ್ತರಿಸುತ್ತಾನೆ.

ಐದಾರು ತಲೆಮಾರುಗಳಿಂದ ಜಾಖಂಡ್‍ನಲ್ಲೇ ನೆಲೆಯಾಗಿರುವ ಮನೆತನ ರವೀಂದ್ರ ಭಗತ್‍ನದ್ದು. ರವೀಂದ್ರನ ಅಪ್ಪ ಅಮ್ಮ ಇಬ್ಬರೂ ಜಾಖಂಡ್‍ನಲ್ಲಿಯೇ ಹೊಸದಾಗಿ ಕಟ್ಟುವ ಮನೆಗಳು, ದೂರದ ನಗರಗಳಲ್ಲಿ ಕಟ್ಟುತ್ತಿದ್ದ ಅಪಾರ್ಟ್‍ಮೆಂಟ್‍ಗಳಲ್ಲಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದವರು. ಅಪ್ಪ ಅದಾಗಲೇ ತನ್ನ ಅನುಭವದಿಂದ ಸಿಮೆಂಟ್‍ನ್ನು ಹದವಾಗಿ ಕಲಸುವುದನ್ನು ಕಲಿತು, ಕರಣಿ ಹಾಗೂ ಗಜಗಳನ್ನು ಹಿಡಿದು ಗೋಡೆ ಕಟ್ಟುವ ಹಂತಕ್ಕೆ ಬಂದಿದ್ದರೆ, ಆನಿವಾರ್ಯವಾಗಿದ್ದಾಗ ಮಾತ್ರವೇ ಕಾಂಕ್ರೀಟ್ ಕೆಲಸಕ್ಕೆ ಬರುತ್ತಿದ್ದ ಅವನ ಅಮ್ಮ ಗಾರೆಯನ್ನು ತಲೆಯ ಮೇಲೆ ಹೊತ್ತು ಸಾಗಿಸುವುದಕ್ಕೆ ಸೀಮಿತವಾಗಿಹೋಗಿದ್ದಳು.

ಹೀಗೆ ಅದೇ ಕೆಲದಲ್ಲಿ ಎಷ್ಟೋ ವರ್ಷಗಳು ಕಳೆದು ಬದುಕು ಮತ್ತೊಂದು ಹಂತಕ್ಕೆ ತೆರೆದುಕೊಳ್ಳುವ ಸ್ಥಿತಿಯನ್ನು ತಲುಪುವ ದಿನಗಳವು. ಅಂತಹ ದಿನಗಳಲ್ಲೇ ರವೀಂದ್ರನ ಅಪ್ಪ ಕೆಲಸ ಮಾಡುತ್ತಿದ್ದ ಬಿಲ್ಡಿಂಗ್‍ನ ಗೋಡೆಯೊಂದು ಕುಸಿದು ಜರ್ಜರಿತವಾಗಿ ಸತ್ತುಹೋಗಿದ್ದ. ಅಪ್ಪ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ ಬಿಲ್ಡಿಂಗ್‍ನ ಮೇಸ್ತ್ರಿಯಾಗಿದ್ದವನು ದೂರದ ಸಂಬಂಧಿಯಾಗಿದ್ದನಂತೆ. ಹೀಗಾಗೇ ಕೆಲಸ ಮಾಡುತ್ತಿರುವಾಗಲೇ ಸಾವನ್ನಪ್ಪಿದ್ದಕ್ಕೆ ಕೆಲವೇ ವಾರಗಳಲ್ಲಿ ಒಂದಿಷ್ಟು ಸಾವಿರದಷ್ಟು ಹಣ ಮನೆ ಸೇರಿತ್ತು. ಮನೆ ಕಟ್ಟುವಾಗಲೇ ಹೆಣ ಬಿದ್ದಿದ್ದಕ್ಕೋ ಅಥವಾ ಮತ್ತಾವಾ ಕಾರಣಗಳಿಗೋ ಒಂದು ತಿಂಗಳು ಮನೆಯ ಕೆಲಸವನ್ನ ನಿಲ್ಲಿಸಿದ್ದರು.

 

ಆ ನಂತರ ಎಲ್ಲವೂ ಅನಿವಾರ್ಯವಾಗಿ ಸಹತೆಗೆ ಮರಳಿತ್ತು. ಅಮ್ಮ ಮತ್ತೊಬ್ಬ ಮೇಸ್ತ್ರಿಯ ಬಳಿಗೆ ಮತ್ತದೇ ಕಾಂಕ್ರೀಟ್ ಕೆಲಸ ಹುಡುಕಿಕೊಂಡು ಹೋದಳು. ಅದುವರೆಗೂ ತನ್ನ ಸೊಟ್ಟಗಿನ ಕಾಲುಗಳನ್ನು ವಿಚಿತ್ರವಾಗಿ ಬಳಸಿ ನಡೆಯುತ್ತ, ಸುಮ್ಮನೇ ಉಳಿದುಹೋಗಿದ್ದ ರವೀಂದ್ರ ಕೂಡ ಅಪ್ಪನ ಕಾಂಕ್ರೀಟ್ ಕೆಲಸಕ್ಕೆ ಹೋಗಿದ್ದ. ಸಾಧ್ಯವಾಗಲಿಲ್ಲ, ಎರಡೇ ತಿಂಗಳಿಗೇ ಬಿಟ್ಟು ಬಂದಿದ್ದ.

ರವೀಂದ್ರನ ಅಮ್ಮನೂ ಕೂಡ ಇಂತಹದೇ ಕೆಲಸ ಮಾಡು ಎಂದು ಅವನಿಗೆ ಒತ್ತಾಯ ಮಾಡಲಿಲ್ಲ. ಅವನ ಎದುರು ನೀನು ಕೆಲಸಕ್ಕೆ ಹೋಗಲೇಬೇಕು ಎನ್ನುವ ಹಟವನ್ನೂ ಮಾಡಲಿಲ್ಲ. ತನಗೆ ತೋಚಿದಂತೆ ಅವಳು ಬದುಕುತ್ತಾ, ಮಗನನ್ನು ಅದೇ ದಿಸೆಯಲ್ಲಿ ಬಿಟ್ಟುಕೊಟ್ಟಿದ್ದಳು. ರವೀಂದ್ರ ಅಪ್ಪ ತೀರಿಹೋದ ನಾಲ್ಕೈದು ವರ್ಷಗಳನ್ನು ಹೀಗೆ ಕಳೆದಿದ್ದಾನೆ. ಬೇಕು ಎನಿಸಿದಾಗ ಕೂಲಿ ಮಾಡುತ್ತಾ, ಸಾಕು ಎನಿಸಿದಾಗ ಊರು ತಿರುಗುತ್ತಾ ತನ್ನನ್ನು ತಾನೇ ನೆನೆದು ಮರುಗಿದ್ದಾನೆ. ಕರಗಿದ್ದಾನೆ.

ಆದರೆ ಇದ್ದಕ್ಕಿದಂತೆ ಎರಡು ವರ್ಷಗಳ ಹಿಂದೆ ಸ್ಥಿತಿ ಬದಲಾಗುವ ಹಂತ ಬಂದಿತ್ತು. ರವೀಂದ್ರ ಭಗತ್‍ನೊಂದಿಗೆ ಆಗಾಗ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ ಒಂದಿಷ್ಟು ಹುಡುಗರು ಜಾರ್ಖಂಡ್‍ನಿಂದ ಬೇರೊಂದು ಕೆಲಸಕ್ಕಾಗಿ ಬೆಂಗಳೂರಿಗೆ ಓಡಿ ಬರಲು ನಿರ್ಧರಿಸಿದ್ದರು. ಮೊದಲೇ ಬದುಕಿನ ಯಾವುದೇ ದಾರಿಯಲ್ಲೂ ಪ್ರಯಾಣ ಮುಂದುವರೆಸಲು ಸಾಧ್ಯವಾಗದೇ ನಲುಗಿದ್ದ ರವೀಂದ್ರ ಬೆಂಗಳೂರಿಗೆ ಓಡಿ ಬರುತ್ತಿದ್ದ ಗುಂಪಿನಲ್ಲಿ ಒಬ್ಬನಾಗಿದ್ದ.

ಯಾವ ಪೂರ್ವ ತಯಾರಿಯೂ ಇಲ್ಲ. ಅವನ ಮನೆಯಲ್ಲಿ ಹೇಳಿದನೋ ಇಲ್ಲವೋ. ಅಂತೂ ಎರಡು ರಾತ್ರಿಗಳ ರೈಲಿನ ಪ್ರಯಾಣ ಮುಗಿಸಿ ಬೆಂಗಳೂರಿಗೆ ಬಂದವನು ಇದೀಗ ಮತ್ತೊಂದು ಬಗೆಯ ರೈಲಿಗೆ ಗಾರ್ಡ್ ಆಗಿದ್ದಾನೆ. ಬೆಂಗಳೂರಿನಲ್ಲಿ ಮೆಟ್ರೋ ರೈಲುಗಳಿವೆ ಎನ್ನುವುದು ರವೀಂದ್ರನಿಗೆ ಗೊತ್ತಾಗಿದ್ದು ಕೂಡ ಅವನು ದೀಪಾಂಜಲಿನಗರ ಮೆಟ್ರೋ ಸ್ಟೇಷನ್‍ಗೆ ರೈಲ್ವೆ ಗಾರ್ಡ್ ಆಗಿ ಸೇರಿಕೊಂಡ ನಂತರವೇ. ಈಗ ಸಲೀಸಾಗಿದ್ದಾನೆ. ಜಾರ್ಖಂಡ್‍ನ್ನು ನಿರಾಕರಿಸುತ್ತಾ ಬೆಂಗಳೂರಿಗೆ ಒಗ್ಗಿಹೋಗಿದ್ದಾನೆ.

“ನಿನಗೆ ಬರುವ ಹನ್ನೊಂದು ಸಾವಿರ ಸಂಬಳದಲ್ಲಿ, ಮನೆಗೆ ಎಷ್ಟು ಕೊಡುತ್ತೀಯಾ” ಎಂದು ಕೇಳಿದರೆ, “ಪಾಂಚ್ ಹಝಾರ್” ಎಂದು ಸಣ್ಣಗೆ ನಗೆಯಾಡುತ್ತಾನೆ.

ಎರಡು ತಿಂಗಳು ನಿರಂತರವಾಗಿ ಕೆಲಸ ಮಾಡು, ಆ ನಂತರ ಒಂದು ವಾರ ರಜಾ ಹಾಕಿ ಊರಿಗೆ ಹೋಗಿ ಬಾರೋ ಎಂದರೆ, “ನಹೀ, ಜಾರ್ಖಂಡ್ ಬೇಡ” ಬೆಂಗಳೂರು ಸಾಕು ಎನ್ನುತ್ತಾನೆ.

ಅವನು ಜಾರ್ಖಂಡ್ ಬೇಡ ಎನ್ನುವಾಗ ಅವನ ದನಿಯಲ್ಲಿ ಬೆಂಗಳೂರಿನ ಜೀವನಶೈಲಿ ಬಗ್ಗೆ ಮೆಚ್ಚುಗೆಗಿಂತ ಜಾರ್ಖಂಡ್‍ನಲ್ಲಿ ಆತ ಸವೆಸಿದ ಖಾಲಿತನವೇ ಜೋರಾಗಿ ಕಾಣುತ್ತದೆ. ಹುಟ್ಟೂರು ಜಾರ್ಖಂಡ್‍ನ್ನು ಅವನು ನಿರಾಕರಿಸುವಾಗ ಯಾವುದೋ ಕಡಲ ಎದುರು ನಿಂತು ಹೆತ್ತವರನ್ನು ಮುಳುಗಿಸಿಕೊಂಡಿದ್ದಕ್ಕೆ ಅಲೆಗಳನ್ನು ಕ್ಷಮಿಸದೇ ನಿರಾಕರಿಸುತ್ತಿರುವ ಪುಟ್ಟ ಪಾದದ ಹುಡುಗಿಯ ನೆನಪಾಗುತ್ತದೆ.

ತಾನೇ ಬರಿಗಾಲಿನಲ್ಲಿ ನಡೆದು ಕಡಲಿನ ಅಲೆಗಳ ಸದ್ದುಗಳನ್ನು ಎದೆಗಿಳಿಸಿಕೊಂಡು ಬರುತ್ತಿದ್ದ ಹುಡುಗಿಯಂತೆ, ರವೀಂದ್ರನೂ ಸಹ ಮೆಟ್ರೋ ರೈಲು ಹೊರಡಿಸುವ ಸಣ್ಣ ಉಸುರಿನಂತಹ ಸದ್ದಿನಲ್ಲಿ ಹಳೆಯ ನೋವುಗಳನ್ನು ಮರೆಯಲು ಯತ್ನಿಸುತ್ತಿದ್ದಾನಾ?

ಇರಬಹುದು. . .

3 comments

  1. ನಮ್ಮ ಮೆಟ್ರೋ..ನೂರೊಂದು ಕಥೆಗಳು..
    ಸುಂದರ ಬರಹ..ಹೀಗೆ ಮುಂದುವರೆಯಲಿ..

Leave a Reply