ಆಕಾಶದಲ್ಲೊಂದು ಚಿಗುರು..

ನಾ ದಿವಾಕರ್ 

ಪುರುಷೋತ್ತಮ ಬಿಳಿಮಲೆ ಅವರ ಫೇಸ್ ಬುಕ್ ಗೋಡೆಯಲ್ಲಿದ್ದ ಭಾವಚಿತ್ರದ ಸುತ್ತ ಹೆಣೆದ ಅಕ್ಷರ ಸಾಲು 

ಅತ್ತ ಬಾನಂಚಿನಲಿ
ಬಾನಾಡಿಗಳಂಗಣದ ನಡುವೆ
ಏನೋ ಕಾಣುತ್ತಲುಂಟು ;
ಕತ್ತಲೆ ಸರಿಯುತಿದೆ
ಬೆಳಕು ಮರೆಯಾಗುತಿದೆ
ಹಣತೆ ಹಚ್ಚಿದವರಾರೋ
ದೀಪ ನಂದಿಸಿದವರಾರೋ
ಹೆಜ್ಜೆಯ ಸದ್ದೂ ಮೌನ !

ಹಸಿದ ಒಡಲೋ
ನೆತ್ತರು ಬಸಿದ ಕಡಲೋ
ಸತ್ತ ಪ್ರಜ್ಞೆಯ ಮಡಿಲಿಗೊಂದು
ತೊಗಲು ಜೀವ ;
ಸಮಾಧಿಗೂ ಬದುಕುಂಟು
ಮಸಣದಲು ಸದ್ದುಂಟು
ಮತ್ತೇಕೆ ದುಗುಡ
ಒತ್ತರಿಸಿದ ದುಃಖ
ಬಿತ್ತರಿಸದಿರಲೇಕೆ ?

ಅಲ್ಲೊಂದು ಕುಸುಮ
ಕುಸುಮದಂಚಿನ ಹೊನಲು
ಅಂಚಿನಾಚೆಗಿನ ಕನಸು
ಕಾಣ್ಕೆಗಳ ಮೆರವಣಿಗೆ ;
ಖಂಡಾಂತರದ ಕೂಸು
ಅಖಂಡತೆಯ ಬಾಣಲೆಯಲಿ
ಕಾಣದ ಹೆಜ್ಜೆಗಳನರಸಿ
ಏಕಾಂತತೆಯ ಭಂಗಿ !

ಕಣ್ಣ ಬಣ್ಣಕೆ ಮಣಿದ
ಮಣ್ಣ ಕಣ
ಹೆತ್ತೊಡಲಿನಂತೆ ಕಣಾ
ಮೆತ್ತುತವೆ ಹೆಜ್ಜೆಯಡಿಗೆ ;
ಹಸಿದ ಕಂಗಳೋ
ಅಮ್ಮನಿತ್ತ ತಂಗಳೋ
ಎಲುಬುಗಳ ರಂಗೋಲಿ
ಜೀವಂತಿಕೆಗೆ ಸಾಕ್ಷಿ !

ಮಣ್ಣತ್ತ ಬಾನತ್ತ
ಅತ್ತಿತ್ತಲಾಡುತ್ತ
ಬೆತ್ತಲಾಗುವ ಮುನ್ನ
ಕತ್ತಲೆಯ ಸರಿಸುತ
ನಡೆ ;
ಕಂದರಗಳ ತೊರೆದು
ಹಂದರಗಳನರಸಿ
ಬಿತ್ತ ಚಿತ್ತವ ನೆನೆದು
ಮುತ್ತನರಸುತ
ನಡೆ !

ನೆಲದಡಿಯ ಮಸಣ
ಜಗದಗಲ ವ್ಯಸನ
ಎದೆಯ ಹಂದರದಿ
ಜೀವೋದ್ಯಾನ ;
ಜೀವಂತಿಕೆಗೆ
ಮಾಂಸ ಖಂಡವದೇಕೆ
ಬದುಕೇ
ಒಂದು ಪ್ರಶ್ನೆ !

ನೆಟ್ಟ
ನೋಟವಿದೋ
ತಂಬೆಲರ
ಚಿಗುರೆಲೆಯಲಿ ;
ಅತ್ತಣ
ಲೋಕದಂಚಿನ
ಕುಸುಮ
ಚಿಗುರೆಲೆಯ
ನರ್ತನ !

1 comment

  1. ಡಾ ಪುರುಷೋತ್ತಮ ಬಿಳಿಮಲೆ ಅವರು ಫೇಸ್ ಬುಕ್ ನಲ್ಲಿ ಹಾಕಿದ್ದ ಒಂದು ಭಾವಚಿತ್ರವನ್ನು ಕಂಡು ನನ್ನ ಮನದಲ್ಲಿ ಅರಳಿದ ಅಕ್ಷರ ಸಾಲುಗಳು – ನಾ ದಿವಾಕರ

Leave a Reply