ತಮ್ಮ ಕಥೆಯಲ್ಲಿನ ‘ಆಕೆ’ ಯಂತೆಯೇ ಚಿಂತಿಸತೊಡಗಿದರು..

ಕಾಲಿಂಗ್ ಬೆಲ್ ಸದ್ದಾಯಿತು.
ಅಡುಗೆ ಮನೆಯಲ್ಲಿದ್ದ ಆಕೆ ಬಂದು ಬಾಗಿಲು ತೆಗೆದಳು.
ಅಲ್ಲಿ ಯಾರ ಸುಳಿವೂ ಇರಲಿಲ್ಲ.

ಬೆಲ್ ಮಾಡಿದವಾರಾರು  ಎಂಬ ಚಿಂತೆಯಲ್ಲಿ ಮನೆಯ ಆಚೀಚೆ ನೋಡಿ ಬಂದಳು. ಗೇಟ್ ಮೇಲಿದ್ದ ಯಾವುದೋ ಒಂದು ಕೀ ಆಗ ಕಣ್ಣಿಗೆ ಬಿತ್ತು. ಅದು ಕಾರ್ ಕೀ ಎಂಬುದು ಅರ್ಥವಾಗಲು ಬಹಳ ಸಮಯ ಹಿಡಿಯಲಿಲ್ಲ. ಅವಳ ಬಳಿ ಕಾರ್ ಇರಲಿಲ್ಲ. ಮತ್ತೆ ಗೇಟು ತೆಗೆದು ರಸ್ತೆಗೆ ಬಂದು ನೋಡಿದಾಗ ಅವಳ‌ ಮನೆಗೆ ದೂರವಲ್ಲದಷ್ಟು ಸಮೀಪದಲ್ಲಿ ಒಂದು Abandoned Car (ತ್ಯಜಿಸಿಹೋದ ಕಾರು) ನಿಂತಿತ್ತು.

ಹೆದರುತ್ತಲೇ ಅದರತ್ತ ನಡೆದು ಹೋದ ಆಕೆ, ಆ ಕೀಯನ್ನು ಅದೇ ಕಾರಿನದಾ ಎಂದು ಪರೀಕ್ಷಿಸಿದಳು. ಮನೆಗೆ ಬಂದು ಕೆಲ ಸಮಯ ಯಾವುದೋ ಅಬಾಂಡನಡ್ ಕಾರ್ ನ‌ ಕೀಯನ್ನು ನನ್ನ ಮನೆಯ ಗೇಟ್ ಮೇಲೆ ಏಕೆ‌ ಇಡಲಾಗಿದೆ ಎಂದು ತುಂಬಾ ಯೋಚಿಸಿದ ನಂತರ ಏನೂ ಉತ್ತರ ತೋಚಲಿಲ್ಲ. ಏನಾದರಾಗಲಿ  ಕಾರಿನಲ್ಲಿ ಒಂದು ಸುತ್ತು ಹಾಕಿ ಬರೋಣವೆಂದು ಹೊರಟಳು.‌ ಅಂತೆಯೇ ತನ್ನದೇ ಕಾರಿನಲ್ಲಿ ಕೂತಿದ್ದಾಳೇನೋ ಎಂಬಂತೆ ಒಂದು ರೌಂಡ್ ಹೋಗಿ ಬಂದಳು.

ಮನೆಗೆ ವಾಪಸ್ಸಾದ ಮೇಲೆ ಕಾರಿನ ಕೀ ಯನ್ನು ಮನೆಯೊಳಗೆ ಇಟ್ಟು ಬಂದಳು. ನಂತರ ತನಗೆ ಸಿಟಿಯಲ್ಲಿ ಕೆಲಸವಿದ್ದುದರಿಂದ ಒಂದು ಟ್ಯಾಕ್ಸಿ ಬುಕ್ ಮಾಡಿ ಕಾಯುತ್ತಾ ನಿಂತಳು. ಕೆಲ ಸಮಯದ ನಂತರ ಟ್ಯಾಕ್ಸಿ ಬಂತು. ಅದರಲ್ಲಿ ಕೂತು, “ಮಾಲ್ ಗೆ ಹೊರಡು” ಎಂದಳು. ಟ್ಯಾಕ್ಸಿ, ಸೀದಾ ಅವಳನ್ನು ಮಾಲ್ ಬದಲು ಪೊಲೀಸ್ ಸ್ಟೇಷನ್ನಿಗೆ ತಂದು ನಿಲ್ಲಿಸಿತು. ಕೋಪಗೊಂಡ ಆಕೆ, ‘ ಏನಿದು ಹುಚ್ಚಾಟ ? ನಾನು ಹೇಳಿದ್ದು ಮಾಲ್ ಗೆ ಕರೆದುಕೊಂಡು ಹೋಗಲು. ನೀವ್ಯಾಕೆ ಈ ಪೊಲೀಸ್ ಸ್ಟೇಷನ್ ಗೆ ನನ್ನನ್ನು ಕರ್ಕೊಂಡ್ ಬಂದಿದೀರಾ ?’ ಎಂದು ಟ್ಯಾಕ್ಸಿ ಡ್ರೈವರ್ ನನ್ನು ತರಾಟೆಗೆ ತೆಗೆದುಕೊಂಡಳು. ಅದಕ್ಕಾತ, ‘ ಮೇಡಂ , ಈ ಟ್ಯಾಕ್ಸಿಯ ವಿಶೇಷತೆ ಬಗ್ಗೆ ನಿಮಗೆ ಗೊತ್ತಿಲ್ಲ ಅನ್ನಿಸುತ್ತೆ. ಇದರ ಡ್ರೈವರ್ ಆಗಿರೋದಕ್ಕೆ ನನಗೆ ಹೆಮ್ಮೆ ಇದೆ. ನೀವು ಕೂಡ ಖುಷಿ ಪಡಲೇಬೇಕು ‘ ಎಂದ.

‘ಏನ್ ತರ್ಲೆ ಮಾತಾಡ್ತೀಯ ನೀನು . ಎಲ್ಲಿಗೋ ಹೋಗಬೇಕು ಎಂದವರನ್ನ ಮತ್ತೆಲ್ಲಿಗೋ ಕರೆದುಕೊಂಡು ಬಂದು ಇಲ್ಲದ ಕತೆ ಕಟ್ತೀಯ? ಸುಮ್ನೆ ನಾನು ಹೇಳಿದ ಮಾಲ್ ಗೆ ಕರೆದುಕೊಂಡು ಹೋಗು. ಇಲ್ಲದಿದ್ರೆ ಪೋಲಿಸ್ ಗೆ ಕಾಲ್ ಮಾಡ್ಬೇಕಾಗುತ್ತೆ.’ ಎಂದು ಆಕೆ  ದಬಾಯಿಸಿದಳು.

‘ಪೊಲೀಸ್ ಸ್ಟೇಷನ್ ಮುಂದೆನೇ ಇದೀವಲ್ಲ ಮೇಡಂ . ಮತ್ಯಾಕೆ ಕಾಲ್ ಮಾಡ್ತೀರ ? ನೇರವಾಗಿ ಹೋಗಿ ಕಂಪ್ಲೇಂಟ್ ಕೊಟ್ಬಿಡಿ’ ಎನ್ನುತ್ತಾ ಗಹಗಹಿಸಿ ನಕ್ಕ.

ಇದೇನೋ ನಿಗೂಢ ಇದೆ ಎಂದು ಅವಳಿಗೂ ಅನ್ನಿಸತೊಡಗಿತು. ‘ ಹೋಗಲಿ, ಅಂಥದ್ದೇನು ಈ ಟ್ಯಾಕ್ಸಿಯ ವಿಶೇಷ ? ನನಗೂ ಹೇಳಿಬಿಡು ಎಂದಳಾಕೆ.

ಆಗ ಡ್ರೈವರ್ ಹೀಗೆ ಹೇಳಿದ :
“ಮೇಡಂ, ಇದೊಂದು ದಂತಕತೆಯಾಗಿರುವ ಟ್ಯಾಕ್ಸಿ. ಇದುವರೆಗೆ ಇದರಲ್ಲಿ ಬಂದು ಹೋದ ಸಾವಿರಾರು ಪ್ರಯಾಣಿಕರು ಇದರ ವಿಶೇಷ ಅನುಭೂತಿಯನ್ನು ಪಡೆದು ಧನ್ಯರಾಗಿದ್ದಾರೆ. ನಾನು ಇದರ ಬಗ್ಗೆ ಅನೇಕ ಸಾಲುಗಳಲ್ಲಿ ಹೇಳಲಾರೆ. ತಾವು ಕೆಳಗಿಳಿದು ಬಂದು ಮುಂಭಾಗದಲ್ಲಿರುವ ಬರಹದ ಬೋರ್ಡ್ ಒಮ್ಮೆ ಓದಿದರೆ ಒಳ್ಳೆಯದು ”

ಈ ಪ್ರಹಸನಕ್ಕೊಂದು ಕೊನೆಹಾಡಲು ತೀರ್ಮಾನಿಸಿದ ಆಕೆ, ಕೆಳಗಿಳಿದು ಬಂದು ಬೋರ್ಡ್ ನಲ್ಲಿದ್ದ ಬರಹವನ್ನು ಓದಿದಳು ;
” ಈ ಟ್ಯಾಕ್ಸಿ ನೀವು ಹೋಗಲು ಬಯಸುವ ಸ್ಥಳಕ್ಕೆ ಕರೆದೊಯ್ಯುವುದಿಲ್ಲ …
ನೀವು ಹೋಗುವ ಅವಶ್ಯಕತೆಯಿರುವ ಸ್ಥಳಕ್ಕೆ ಮಾತ್ರ  ಕರೆದೊಯ್ಯುತ್ತದೆ…”

ಅದನ್ನು ಜೀರ್ಣಮಾಡಿಕೊಳ್ಳಬೇಕೆನ್ನುವಷ್ಟರಲ್ಲಿಯೇ,
‘ಬೇಕಿದ್ದರೆ ಹಿಂಭಾಗದಲ್ಲಿ ಇಂಗ್ಲಿಷ್ ನಲ್ಲೂ ಇದೆ. ಓದಿಕೊಳ್ಳಿ ಮೇಡಂ ‘ ಎಂದ ಡ್ರೈವರ್. ಅದರಂತೆಯೇ ಆಕೆ ಕಾರಿನ ಹಿಂಭಾಗಕ್ಕೆ ಬಂದು ನೋಡಿದಳು.
“This taxi doesn’t take you where  you   want to go…
It takes you where you need to go… ”

ಕನ್ನಡ ,ಇಂಗ್ಲಿಷ್ ಎರಡರಲ್ಲೂ ಆ ಟ್ಯಾಕ್ಸಿಯ ವಿಶೇಷತೆಯನ್ನು ಓದಿ ಮುಗಿಸುವುದರೊಳಗೆ ಆಕೆಗೆ ತನ್ನನ್ನೇಕೆ ಪೊಲೀಸ್ ಸ್ಟೇಷನ್ ಮುಂದೆ ಕರೆತಂದು ನಿಲ್ಲಿಸಲಾಗಿದೆ ಎಂಬುದು ಖಾತರಿಯಾಗತೊಡಗಿತು. ಕುತೂಹಲಕ್ಕೆ ಆಕೆ ಡ್ರೈವರ್ ನನ್ನು ಕೇಳಿದಳು ; ‘ ಹೀಗೆ ಪ್ರತಿಯೊಬ್ಬರನ್ನೂ ಎಲ್ಲಿಗೆ ಕರೆದೊಯ್ಯುಬೇಕು ಎಂಬುದು ನಿಮಗೆ ಯಾರು ಹೇಳುತ್ತಾರೆ ? ‘

‘ನನಗೆ ಹಾಗೆ ಯಾರೂ ಹೇಳುವುದಿಲ್ಲ ಮೇಡಂ. ಈ ಟ್ಯಾಕ್ಸಿ ಯಾವ ಕಡೆ ಚಲಿಸಲು ಬಯಸುತ್ತದೋ ಆ ಕಡೆ ಚಾಲನೆ ಮಾಡುವುದಷ್ಟೇ ನನ್ನ ಕೆಲಸ’ ಎಂದು ವೇದಾಂತಿಯಂತೆ ಮಾತನಾಡಿದ ಆ ಡ್ರೈವರ್.

ಆಗ ಆಕೆ ನೇರವಾಗಿ ಪೊಲೀಸ್ ಸ್ಟೇಷನ್ ಒಳ ಹೋಗಿ ತನ್ನ ಮನೆಯ ರಸ್ತೆಯಲ್ಲಿ ಕಾಣಿಸಿಕೊಂಡಿರುವ ಆ ಅನಾಮಿಕ ಕಾರಿನ ಬಗ್ಗೆ ಮಾಹಿತಿ ನೀಡಿದಳು. ವಾಪಸ್ ಬರುವಷ್ಟರಲ್ಲಿ ಆ ಟ್ಯಾಕ್ಸಿ ಅಲ್ಲಿರಲಿಲ್ಲ.

ಕಾಲಿಂಗ್ ಬೆಲ್ ಮಾಡಿದವರು , ಕಾರನ್ನು ಅಲ್ಲಿ ಬಿಟ್ಟು ಹೋದವರು , ಟ್ಯಾಕ್ಸಿ ಡ್ರೈವರ್ ನ ರೂಪದಲ್ಲಿ ಬಂದವರು ಯಾರು ಎಂದು  ಜೀವನ ಪೂರ್ತಿ ಆಕೆ ಯೋಚಿಸುತ್ತಲೇ ಉಳಿದಳು…

*          *             *           *            *

ಆ ವಾರದ ಮ್ಯಾಗಝಿನ್ ಒಂದರಲ್ಲಿ ಪ್ರಕಟವಾಗಿದ್ದ ಕಥೆಗಾರ ಶ್ಯಾಮರಾಯರ ‘ ಅತಿಮಾನುಷ’ ಎಂಬ ಈ ಅತೀ ಚಿಕ್ಕ ಕತೆಯನ್ನು ಕಂಡು ಸ್ವತಃ ಅವರಿಗೇ ಆಶ್ಚರ್ಯವಾಯಿತು. ಕೇವಲ ಒಂದು ಫ್ಯಾಂಟಸಿಗಾಗಿ ಬರೆದ ಆ ಕಥೆ ಅವರಿಗೇ ಇಷ್ಟವಾಗದ ಕಾರಣ ಹರಿದು ಡಸ್ಟ್ ಬಿನ್ ಗೆ ಹಾಕಿದ್ದರು. ಆದರೂ ಇದು ಪ್ರಕಟಗೊಂಡ ಬಗೆ ಹೇಗೆ ಎಂಬುದನ್ನು ತಮ್ಮ ಕಥೆಯಲ್ಲಿನ ‘ಆಕೆ’ ಯಂತೆಯೇ ಚಿಂತಿಸತೊಡಗಿದರು.

Leave a Reply