ಬಸ್.. ಬಸ್.. ಬಸ್.. ಎಲ್ನೋಡಿ ಬಸ್..

ಇದು ೯೦ ರ ದಶಕದ ಕಥೆ. ಚಾರ್ಮಾಡಿ ಎಂಬ ಊರು.  ಘಾಟಿಯ ಬುಡದಲ್ಲಿರುವ ಕಟ್ಟ ಕಡೆಯ ಗ್ರಾಮ. ಬಾಲ್ಯದ ಜೀವನ ಕಳೆದಿದ್ದೆಲ್ಲಾ ನಾವು ಇಲ್ಲೆ. ಹಾಗಾಗಿ ಚಾರ್ಮಾಡಿ ಎಂದರೆ ನಮ್ಮ ಪಾಲಿಗೆ ತುಂಬಾ ಅಚ್ಚುಮೆಚ್ಚಿನ ಸ್ಥಳ. ಆದರೆ ನಮ್ಮ ವಿದ್ಯಾಭ್ಯಾಸ ನಡೆದಿದ್ದು ಮಾತ್ರ ಉಜಿರೆಯಲ್ಲಿ. ಇದರಿಂದಾಗಿ ಪ್ರಾಥಮಿಕ ತರಗತಿಯಿಂದಲೇ ಸರ್ಕಾರಿ ಬಸ್ ಗಳ ಜೊತೆ ಗುದ್ದಾಟ ಆರಂಭವಾಗಿತ್ತು.

ಬೆಳಗ್ಗಿನ ಸಮಯದಲ್ಲಿ ಈ ಊರಿಗೆ ಬರುತ್ತಿದ್ದ ಬಸ್ ಗಳ ಸಂಖ್ಯೆ ಕೇವಲ ೩. ಇಲ್ಲಿಂದ ಉಜಿರೆ ಶಾಲೆಗೆ ಹೋಗುತ್ತಿದ್ದ ಮಕ್ಕಳು ಮುಂಜಾನೆ ೮ ಗಂಟೆಯ ಬಸ್ ಗೆ ತೆರಳಲೇಬೇಕಿತ್ತು. ಮುಕ್ಕಾಲು ಗಂಟೆಯ ಪಯಣ ಆಗಿದ್ದ ಕಾರಣ ಈ ಬಸ್ ಅನಿವಾರ್ಯವಾಗಿತ್ತು. ಬಸ್ ಬಾರದೆ ಹೋದರಂತೂ, ಶಾಲೆಗೆ ತಲುಪುವುದೇ ಹರಸಾಹಸವಾಗುತಿತ್ತು. ಧರ್ಮಸ್ಥಳಕ್ಕೆ ತೆರಳಲು ಚಾರ್ಮಾಡಿ ಘಾಟಿಯಿಂದ ಇಳಿಯುತ್ತಿದ್ದ ಬಸ್ ಗಳಿಗೆ ಏನೂ ಕೊರತೆ ಇರಲಿಲ್ಲ. ಆದರೆ ಅದ್ಯಾವುದಕ್ಕೂ ಚಾರ್ಮಾಡಿಯಲ್ಲಿ ಸ್ಟಾಪ್ ಇರುತ್ತಿರಲಿಲ್ಲ.

ಆ ದಿನಗಳಲ್ಲಿ ರಾಜಕೀಯ ಪಕ್ಷ, ಪ್ರತಿನಿಧಿ, ಜನಸೇವೆ ಇತ್ಯಾದಿಗಳ ಬಗ್ಗೆ ಅರಿವಾದರೂ ಎಲ್ಲಿತ್ತು. ಕಡೇಪಕ್ಷ ಸಮಾಧಾನಕ್ಕಾದರೂ ಬೈದು ಬಿಡಲು ಕೂಡ ಇವು ಯಾವುದರ ಬಗ್ಗೆ ತಲೆಕೆಡಿಸಿಕೊಂಡವರೇ ಅಲ್ಲ. ಬಸ್ ಬಂದ್ರೆ ಸಾಕಪ್ಪಅನ್ನೋದೇ ನಮ್ಮ ಟಾರ್ಗೆಟ್ ಆಗಿರುತಿತ್ತು.  ಆದರೆ ಈಗ ಇಷ್ಟೊಂದು ಅಭಿವೃದ್ಧಿ ಹೊಂದಿಯೂ ಕೆಲವು ಕಡೆ ಬಸ್ ಸಂಚಾರದಲ್ಲಿನ ಅವ್ಯವಸ್ಥೆ ನೋಡಿದಾಗವಂತೂ, ನಮ್ಮ ಹಳೇ ಕಾಲದ ಬಸ್ ಕಥೆ ಎಷ್ಟೋ ವಾಸಿ ಅನಿಸಿಬಿಡುತ್ತದೆ.

ಟ್ರ್ಯಾಫಿಕ್ ನಿಂದ ಕಿಕ್ಕಿರಿದ ರಸ್ತೆಗಳಲ್ಲಿ ಪ್ರಯಾಣ ಮಾಡುವ ನಮ್ಮ ಜನರಿಗೆ, ಸಮಯಕ್ಕೆ ಸರಿಯಾಗಿ ತಲುಪಿದರೆ ಅದೇ ಪುಣ್ಯ. ಇನ್ನೂ ಬಸ್, ಬಸ್ ನ ವ್ಯವಸ್ಥೆ, ಅವುಗಳ ಸಮಯದ ಗೋಜಿಗೆ ಹೋಗುವುದೇ ಅಪರೂಪ. ಇನ್ನೂ ಸ್ವಂತ ವಾಹನಗಳಲ್ಲಿ ಪ್ರಯಾಣ ಬೆಳೆಸುವವರದ್ದು ಭಿನ್ನ ಸ್ಟೋರಿ. ಇಂತಹ ಸಮಸ್ಯೆಗಳ ಮೂಲ, ಪರಿಹಾರ ಹಾಗೂ ಅವುಗಳ ಅನುಷ್ಟಾನ ದೇವರಿಗೆ ಪ್ರೀತಿ.

ಈ ವಿಚಾರದಲ್ಲಿ ಸಿಂಗಾಪುರ ಎಷ್ಟೋ ಮುಂದಿದೆ. ಕೆಲವೊಮ್ಮೆ ಇಷ್ಟೆಲ್ಲಾ ಅಗತ್ಯವಿದೆಯಾ ಅನಿಸೋದು ಇದೆ. ನಾವು ಈ ಬಗ್ಗೆ ಕನಸು ಕಾಣೋದು ಕೂಡ ವ್ಯರ್ಥ. ನಮ್ಮಲ್ಲಿ ಇದರ ಅರ್ಧದಷ್ಟು ಯೋಜನೆಗಳು ನಡೆದಿಲ್ಲ ಅನ್ನೋದೇ ಹೊಟ್ಟೆನೋವು.

ಅಂದ ಹಾಗೆ ಸಿಂಗಾಪುರದಲ್ಲಿ “ಆನ್ ಡಿಮಾಂಡ್ ” ಬಸ್ ಗಳು ರಸ್ತೆಗಿಳಿದಿವೆ. ಅತ್ಯುತ್ತಮ ಸೇವೆ ನೀಡುತ್ತಿರುವ ರೈಲು, ಟ್ಯಾಕ್ಸೀ, ಬಸ್ ಗಳ ಪಟ್ಟಿಗೆ ಇದೀಗ ಮತ್ತೊಂದು ಸೇರ್ಪಡೆ. ೬ ತಿಂಗಳ ಪ್ರಯೋಗಾತ್ಮಕವಾಗಿ ಈ ಯೋಜನೆ ಆರಂಭವಾಗಿದೆ. ಸದ್ಯಕ್ಕೆ ಕೆಲವೇ ಮಾರ್ಗಗಳಿಗೆ ಸೀಮಿತವಾಗಿದ್ದು, ಜನರ ಪ್ರತಿಕ್ರಿಯೆಗೆ ಅನುಗುಣವಾಗಿ ಮುಂಬರುವ ದಿನಗಳಲ್ಲಿ ವಿಸ್ತರಿಸುವ ಯೋಜನೆಯನ್ನು ಹೊಂದಲಾಗಿದೆ. ಸಾರಿಗೆ ವಿಭಾಗಕ್ಕೆ ಸೇರಿದ App ಡೌನ್‌ಲೋಡ್ ಮಾಡಿಕೊಂಡರೆ ಮುಗೀತು. ಮತ್ತೆ ಎಲ್ಲವು ಸಲೀಸಾಗಿ ಈ ಕಾರ್ಯ ನೆರವೇರುತ್ತೆ.

ತಾವು ಇರುವ ಸ್ಥಳ, ಬಸ್ ಸ್ಟಾಪ್ ನಂಬರ್, ಪ್ರಯಾಣಿಕರ ಸಂಖ್ಯೆ, ತೆರಳಬೇಕಾದ ಸ್ಥಳವನ್ನು ಟೈಪ್ ಮಾಡಿ ಕಳುಹಿಸಬೇಕು. ಬಳಿಕ ಇ – ಟಿಕೆಟ್, ಬಸ್ ನ ಸಂಖ್ಯೆ, ಬಸ್ ನಿಮ್ಮಲ್ಲಿಗೆ ತಲುಪುವ ಸಮಯದ ಮಾಹಿತಿಯನ್ನು ಹೊಂದಿದ ಸಂದೇಶ ನಿಮ್ಮ ಮೊಬೈಲ್ ಗೆ ಬರುತ್ತದೆ. ಬಸ್ ಹತ್ತುವ ವೇಳೆಗೆ ಚಾಲಕನಿಗೆ ಇ – ಟಿಕೆಟ್ ತೋರಿಸುವುದು ಕಡ್ಡಾಯ. ನಂತರ ಸಾಮಾನ್ಯ ಬಸ್ ಗಳಲ್ಲಿ ಸಂಚರಿಸುವಂತೆ ಕಾರ್ಡ್ ಟ್ಯಾಪ್ ಮಾಡಬೇಕಿದೆ. ನೀವು ಇಳಿಯುವ ಸ್ಥಳ ತಲುಪುತಿದ್ದಂತೆ ಈ ಬಗ್ಗೆ ಮೊಬೈಲ್ ಗೆ ಮಾಹಿತಿಯೂ ರವಾನೆಯಾಗುತ್ತದೆ. ನಿತ್ಯ ಸಂಚರಿಸುವ ಬಸ್ ಮಾರ್ಗಗಳನ್ನು ಹೊರತು ಪಡಿಸಿಯೂ ಆನ್ ಡಿಮಾಂಡ್ ಬಸ್ ಗಳು ಪ್ರಯಾಣ ಬೆಳೆಸಲಿವೆ. ಪ್ರಾರಂಭಿಕ ಹಂತವಾಗಿರುವ ಕಾರಣ, ನಿರ್ದಿಷ್ಟ ಸಮಯ ಹಾಗೂ ಮಾರ್ಗಗಳನ್ನು ಗೊತ್ತು ಮಾಡಲಾಗಿದೆ. ನಿತ್ಯ ಸಂಚರಿಸುವ ಬಸ್ ನ ದರ ಹಾಗೂ ಆನ್ ಡಿಮಾಂಡ್ ಬಸ್ ಗಳ ದರದಲ್ಲಿ ಹೆಚ್ಚಿನ ವ್ಯತ್ಯಾಸವೇನು ಹೊಂದಿಲ್ಲ. ಹೀಗಾಗಿ ಯಾರು ಬೇಕಾದರೂ, ಅವುಗಳ ಸಮಯದಲ್ಲಿ ಪ್ರಯೋಜನ ಪಡೆಯಬಹುದಾಗಿದೆ.

ಜನರಿಗೆ ಸರ್ಕಾರದ ಮೇಲೆ ವಿಶ್ವಾಸ. ಸರ್ಕಾರಕ್ಕೆ ಜನರ ಮೇಲೆ ವಿಶ್ವಾಸ ಇವರೆಡೂ ಈ ದೇಶದಲ್ಲಿ ಉತ್ತಮವಾಗಿ ಹೊಂದಾಣಿಕೆ ನಡೆಯುತ್ತದೆ. ಇದರ ಫಲವೇ ಜನ ಹಿತವಾದ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿರುವುದು. ಆದರೆ ನಮ್ಮಲ್ಲಿ ಇವೆರಡು ನಡೀತಿಲ್ಲ ಅನ್ನೋದಕ್ಕೆ ವಿಶೇಷವಾಗಿ ಏನು ಹೇಳಬೇಕಾಗಿಲ್ಲ. ದಿನನಿತ್ಯ ಸಂಭವಿಸುವ ಘಟನೆಗಳೇ ಸಾಕು.

ಈ  App ನಲ್ಲಿ ಬಸ್ ಬುಕ್ ಮಾಡುತಿದ್ದಂತೆ ಕೆಲವೇ ಹೊತ್ತಿನಲ್ಲಿ ಇಡೀ ಒಂದು ಬಸ್ ನಿಮ್ಮ ಕಾಲ ಬುಡಕ್ಕೆ ಬಂದು ನಿಲ್ಲುತ್ತದೆ. ಎಂತಹ ಭಾಗ್ಯ ಇಲ್ಲಿನವರದ್ದು. ಕೇವಲ ಒಬ್ಬ ಪ್ರಯಾಣಿಕ ಇದ್ದರೂ ಹವಾನಿಯಂತ್ರಿತ ಬಸ್ ಸಂಚಾರದ ರಾಜಯೋಗ ನಿಮ್ಮ ಪಾಲಿಗೆ.

ಸರ್ಕಾರದ ಪ್ರಕಾರ, ಆನ್ ಡಿಮಾಂಡ್ ಯೋಜನೆಯ ಮುಖ್ಯ ಗುರಿ ಸಂಪನ್ಮೂಲಗಳ ಸರಳೀಕರಣ ಮತ್ತು ತಂತ್ರಜ್ಞಾನದ ನಿಯಂತ್ರಣ. ಅಂದ ಹಾಗೆ ಸಿಂಗಾಪುರದಲ್ಲಿ ಖಾಸಗಿ ವಾಹನಗಳ ಶಟಲ್ ವ್ಯವಸ್ಥೆಯನ್ನು ಕಾಣಬಹುದು. ಇವು ಬಸ್ ಗಳಿಗೆ ಹೋಲಿಸಿದರೆ ಎಷ್ಟೋ ಉತ್ತಮವಾದುದು. ನಾವು ಕೂಡ ಎಷ್ಟೋ ಸಲ ಬುಕ್ ಮಾಡಿದ್ದು ಇದೆ. ಆದರೆ ಈಗ ಆರಂಭವಾಗಿರುವ ಬಸ್ ಸಂಚಾರ ಅದೂ ಕಡಿಮೆ ದರದಲ್ಲಿ.. ಸಿಗುವ ಸೌಲಭವನ್ನು ಯಾರು ತಾನೇ ಬಿಡ್ತಾರೆ ಹೇಳಿ. ದುಬಾರಿ ದೇಶದಲ್ಲಿ ಅಗ್ಗದ ಸೇವೆ ನಿಜಕ್ಕೂ ಸಿಹಿಸುದ್ದಿ.

ಮೀಟರ್ ತೋರಿಸಿದಷ್ಟು ಹಣ ನೀಡಿ ಆಟೋದಲ್ಲಿ ಪಯಣ ಇಲ್ಲವೇ ಮತ್ತಷ್ಟು ದುಬಾರಿಯ ಟ್ಯಾಕ್ಸೀ ನಲ್ಲಿ ಸಂಚಾರ. ಹೆಚ್ಚು ಹಣ ನೀಡಿದರೂ ಪರವಾಗಿಲ್ಲ ಪ್ರಯಾಣ ಆರಾಮದಾಯಕವಾಗಿದ್ದರೆ ಸಾಕು ಅನ್ನೋರೆ ಹೆಚ್ಚು.  ಇವುಗಳ ಮಧ್ಯೆ ಪೆಟ್ರೋಲ್, ಡೀಸಲ್, ಇತರೆ ಖರ್ಚುಗಳನ್ನು ಲೆಕ್ಕಹಾಕಿದಾಗ ಸ್ವಂತ ವಾಹನಗಳೇ ಎಷ್ಟೋ ಕಂಫರ್ಟ್ ಅನಿಸತೊಡಗಿವೆ. ಪರಿಣಾಮ ರಸ್ತೆಗಿಳಿಯುವ ವಾಹನಗಳ ಸಂಖ್ಯೆಗಳಿಗೆ ಲೆಕ್ಕವೇ ಇಲ್ಲ.

ಮೇಲ್ನೋಟಕ್ಕೆ ಆನ್ ಡಿಮಾಂಡ್ ಬಸ್ ಯೋಜನೆ ವಿಪರೀತ ಅನ್ನೋದು ಸಹಜ. ಕೇವಲ ಓರ್ವ ವ್ಯಕ್ತಿಗಾಗಿ ಬಸ್ ಬರೋದು ಅಂದ್ರೆ ತಮಾಷೆಯ ಸಂಗತಿಯಂತೂ ಅಲ್ಲ. ದುಡ್ಡು ಹೆಚ್ಚಾಗಿರಬೇಕು ಇವರಿಗೆಲ್ಲಾ ಅನ್ನೋರನ್ನು ತಳ್ಳಿಹಾಕುವಂತಿಲ್ಲ. ಆದರೆ ಸರ್ಕಾರದ ಮೂಲ ಉದ್ದೇಶವನ್ನು ಅರಿಯುವುದು ಮುಖ್ಯ. ಖಾಸಗಿ ವಾಹನಗಳ ನಿಯಂತ್ರಣ ಹಾಗೂ ಈ ಮೂಲಕ ವಾಹನ ದಟ್ಟಣೆಯಲ್ಲಿ ಕಡಿವಾಣ.

ಭವಿಷ್ಯದಲ್ಲಿನ ಬಹುದೊಡ್ಡ ಸಮಸ್ಯೆ ನಿವಾರಣೆಗೆ ಪ್ರಾಥಮಿಕ ಹಂತ ಹಾಗೂ ಅವುಗಳನ್ನು ತಾಳ್ಮೆಯಿಂದ ಎದುರಿಸುವ ವ್ಯವಸ್ಥೆಗೆ ಇದೊಂದು ಉತ್ತಮ ಉದಾಹರಣೆ. ನಮ್ಮಲ್ಲಿನ ನಕಾರಾತ್ಮಕ ಭಾವನೆಗಳಿಂದಾಗಿ ಬಹುತೇಕ ಯೋಜನೆಗಳು ಆರಂಭವಾಗುವುದೇ ಇಲ್ಲ. ಯಾವ ರೀತಿ ನಡೆಯಬಹುದು ಎನ್ನುವುದಕ್ಕೂ ಪ್ರಯತ್ನಗಳು ಕೂಡ ಅಷ್ಟಕಷ್ಟೆ.  ಇದು ಮನೆ ಮನೆಯ ಕಥೆಗಳು. ಸಮಾಜ, ಟೀಕೆ ಟಿಪ್ಪಣಿಗಳನ್ನು ಎದುರಿಸುತ್ತಲೇ ಮುಂದೆ ಸಾಗಿದವ ನಿಜವಾಗಿಯೂ ಧ್ಯೆರ್ಯವಂತ ಎಂದೇ ಅರ್ಥ.

ಒಟ್ಟಿನಲ್ಲಿ ಆನ್ – ಡಿಮಾಂಡ್ ಯೋಜನೆಯು, ದೇಶದ ಸಾರಿಗೆ ವ್ಯವಸ್ಥೆಯ ಆರ್ಥಿಕತೆ ಮತ್ತು ನೆಟ್ ವರ್ಕ್ ವ್ಯಾಪ್ತಿಯ ಮೇಲೆ ಅವಲಂಬಿತವಾಗಿದೆ. ಸಾಧಕ ಬಾಧಕಗಳ ನಡುವೆ ದಿಟ್ಟ ಹೆಜ್ಜೆಯತ್ತ ಸಾಗಿರುವ ಇಲ್ಲಿನ ಸರ್ಕಾರದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಜನರ ಸುವ್ಯವಸ್ಥೆ ಹಾಗೂ ಭವಿಷ್ಯದ ಬಗ್ಗೆ ಇಷ್ಟೊಂದು ಕಾಳಜಿವಹಿಸುವ ಇಂತಹ ಸರ್ಕಾರ ನಮ್ಮಲ್ಲೂ ಬರಬೇಕು.  ಇದಕ್ಕೆಲ್ಲಾ ಚುನಾವಣೆಯೇ ಬರಬೇಕಾಗಿಲ್ಲ. ಈಗಿರೋ  ಸರ್ಕಾರದಿಂದಲೂ ಸಾಧ್ಯವಿದೆ. ಆದರೆ ಮನಸ್ಸು ಮಾಡಬೇಕಷ್ಟೆ..!

2 comments

  1. Vidya ,Singapurina bagge namage gottillada eshto vishayagallanu sogasagi kattikoduttide nimma ankana.Heege bareyuttiri.

Leave a Reply