ಜೋಡಿ ಹುಬ್ಬಿನ ಪುರಾಣ

ಜಮುನಾ ರಾಣಿ ಹೆಚ್.ಎಸ್


ಹತ್ತನೆಯ ತರಗತಿ ಪಾಸಾಗಿದ್ದೇ ತಡ
ಗೆಳತಿಯರೆಲ್ಲರೂ ಪಾರ್ಲರ್ರಿಗೆ ಹೋಗಿ
ಚೆಂದ ಕಾಣುವಂತೆ ತಿದ್ದಿ ತೀಡಿಸಿಕೊಂಡು ಬಂದು
ಕಾಲೇಜಿನ ಮೆಟ್ಟಿಲು ಏರುವಷ್ಟೊತ್ತಿಗೆ
ಇವರೇನಾ ನನ್ನೊಟ್ಟಿಗೆ ಓದಿದ್ದು ಎನ್ನುವಷ್ಟು
ಬದಲಾವಣೆ ಕಂಡಿತ್ತು ಅವರ ಮುಖ, ಹಾವಭಾವದಲ್ಲಿ
ಜೊತೆಗೆ ದಿನಕ್ಕೊಬ್ಬ ಹುಡುಗನ
ಪ್ರೇಮ ನಿವೇದನೆಯ ಖುಷಿ ಬೇರೆ ಅವರಲ್ಲಿ

ನನ್ನದೋ ಥೇಟು ಅಬ್ಬೆಪಾರಿ ಜೀವನ
ಅದರಂತೆಯೇ ಉಡುಗೆ ತೊಡುಗೆಗಳು ಕೂಡ
ಅಲಂಕಾರದ ಬಗೆಗಿನ ನನ್ನ ನಿರ್ಲಕ್ಷವ ಕಂಡು
ಒಮ್ಮೆ ಅಮ್ಮನೇ ಹೇಳಿದ್ದಳು
ನೀನು ಹೆಣ್ಣೋ ಗಂಡೋ ಎಂದು
ಇಂದಿಗೂ ನನಗೆ ಅನುಮಾನವಿದೆ ಎಂದು
ಇದೆಲ್ಲಾ ಅವರವರ ಭಾವಕ್ಕೆ ಎನ್ನುವ
ಮೂಗುಮುರಿಯುವಂತೆ ನನ್ನ ಉತ್ತರ

ಒಮ್ಮೆ ಗೆಳತಿಯರೊಟ್ಟಿಗೆ ಮಾತನಾಡುವಾಗ
ನನ್ನ ಹುಬ್ಬುಗಳ ನೋಡಿ
ಒಬ್ಬಳು ನೀ ನೋಡುವುದಕ್ಕೆ
ಯಾವ ಹಿಡಂಬಿಗೂ ಕಡಿಮೆಯಿಲ್ಲ ಎಂದು
ಆಡಿಕೊಂಡದ್ದೇ ತಡ
ಆ ದಿನವೇ ಕಾಲೇಜಿನ ಎದುರಿಗಿದ್ದ
ಪಾರ್ಲರ್ ಮೆಟ್ಟಿಲು ಹತ್ತಿ ಬಿಟ್ಟೆ

ಎತ್ತರದ ಕುರ್ಚಿಯಲ್ಲಿ ಕೂರಿಸಿದ ಪಾರ್ಲರ್ ನವಳು
ಮುಂಗುರುಳ ನೇವರಿಸಿ
ಒಂದಷ್ಟು ಪೌಡರ್ ಹಚ್ಚಿ
ಶುರುವಿಟ್ಟುಕೊಂಡಳು ನೋಡಿ
ಹದ್ದಿನ ಬಾಯಿಗೆ ಇಲಿ
ಸಿಕ್ಕಿಹಾಕಿಕೊಂಡಂತಹ ಪರಿಸ್ಥಿತಿ ನನ್ನದು
ಜೀವ ಕೈಗೆ ಬರುವುದೊಂದು ಬಾಕಿ
ಬೇಕಿತ್ತಾ ಈ ನೋವು ಎಂದು
ಪದೇ ಪದೇ ಕೇಳುತ್ತಿತ್ತು ಮೈ-ಮನಸ್ಸು

ಒಂದೊಂದು ರೋಮವ ಹೆಕ್ಕಿ ಹೆಕ್ಕಿ
ದಾರದಿಂದ ಅವಳು ಎಳೆಯುವಾಗಲೂ
ಅಬ್ಬಾ, ಜೀವವೇ ಬಾಯಿಗೆ ಬಂದಂತೆನ್ನಿಸಿತ್ತು
ಎಷ್ಟು ಅರಚಿದರೂ… ಊಹುಂ
ಆ ಹುಡುಗಿ ನಿಧಾನಿಸಲೇ ಇಲ್ಲ
ನಿಮ್ಮ ಹುಬ್ಬುಗಳು ಚಂದ್ರಕಾಂತ ಧಾರಾವಾಹಿಯ
ಕ್ರೂರ್ ಸಿಂಗ್ ನ ಹಾಗೆ ಇವೆ
ತಿಂಗಳಿಗೆ ಎರಡು ಬಾರಿಯಾದರೂ ಮಾಡಿಸಿಕೊಳ್ಳಿ
ಸ್ವಲ್ಪ ಬೆಳವಣಿಗೆಯಾದರೂ ಕಡಿಮೆಯಾಗುತ್ತವೆ
ಎಂದು ಕ್ರೀಮ್ ಹಚ್ಚಿ, ಮಸಾಜ್ ಮಾಡಿ
ಕನ್ನಡಿಯ ಮುಂದೆ ಹಿಡಿದಾಗ
ನಾನೇ ಅಲ್ಲವೋ ಅನ್ನುವಂತೆ
ಕನ್ನಡಿಯೂ ಹುಬ್ಬೇರಿಸಿದಂತಾಯಿತು.

ಕೊನೆಗೂ ನನ್ನಲ್ಲೂ ಸೌಂದರ್ಯಪ್ರಜ್ಞೆ
ಎಚ್ಚೆತ್ತುಕೊಂಡಿದ್ದುದ ಕಂಡು ಅಮ್ಮ
ಇವತ್ತು ಹುಡುಗಿಯಂತೆ ಕಾಣುತ್ತಿದ್ದೀಯ ಕಣೆ
ಆ ಐಶ್ವರ್ಯ ರೈನ ನಿನ್ನ ಮುಂದೆ ನೀವಾಳಿಸಿ
ಬಿಸಾಕಬೇಕು ಎಂದಾಗ
ವಿಶ್ವ ಸುಂದರಿಯಷ್ಟೇ ಧೀಮಂತ ಭಾವನೆ
ಸುಳಿದು ಮಾಯವಾಯಿತು.

2 comments

Leave a Reply