ಓಲ್ಗಾ ಕಥೆ :ಅ’ಶೋಕ’

ತೆಲುಗು ಮೂಲ : ಓಲ್ಗಾ.


ಕನ್ನಡಕ್ಕೆ : ಅಜಯ್ ವರ್ಮಾ ಅಲ್ಲೂರಿ.

ಕನ್ನಡಿಯೊಳಗೆ ತನ್ನ ಬಿಂಬವನ್ನೊಮ್ಮೆ ನಿಶಿತವಾಗಿ,
ಪರೀಕ್ಷಿಕವಾಗಿ ನೋಡಿಕೊಂಡಳು ಮಂಡೋದರಿ. ಒಂದಿನಿತೂ ಅತಿಯೆನಸಲಿಲ್ಲ ತನ್ನ ಅಲಂಕರಣದಲ್ಲಿ. ಬಟ್ಟೆಗಳ ಬಣ್ಣಕ್ಕೆ ಒಪ್ಪುವಂತಹ ಒಡವೆ. ಮಂಡೋದರಿ ಅಮಿತ ಸೌಂಧರ್ಯವತಿ. ಆ ಸೌಂಧರ್ಯವು ಆಕೆಯ ರೂಪುರೇಖೆಯಲ್ಲಿ, ಶರೀರ ಸೌಷ್ಟವದಲ್ಲಿ, ಆರೋಗ್ಯದಲ್ಲಷ್ಟೇಯಲ್ಲ- ತನ್ನ ಮನದೊಳಗಿಂದ ಕಂಗಳವರೆಗೂ ಹರಿಯುವ ಪ್ರೀತಿ, ಜಾಣ್ಮೆ, ಆತ್ಮಗೌರವದ ನಿಶ್ಚಿತತೆ ಇವೆಲ್ಲಾ ಸಮಾನುಪಾತದಲ್ಲಿ  ಸೇರಿಕೊಂಡು ಆಕೆಗೊಂದು ವಿಶಿಷ್ಟತೆಯನ್ನು ತಂದುಕೊಟ್ಟಿವೆ. ಎಂಥಹ ದೊಡ್ಡ ಸಮೂಹದಲ್ಲಾದರೂ ಠೀವಿಯಾಗಿ ನಿಂತ ಆಕೆಯನ್ನು ಯಾರೇ ಆಗಲಿ ತುಂಬಾ ಸುಲಭವಾಗಿ ಗುರುತಿಸಬಲ್ಲರು. ಸುಕುಮಾರತೆಗಿಂತಲೂ ದಾರುಢ್ಯವೇ ಆಕೆಗೆ ಶೋಭೆ .ಅಂಗೈಗಳಿಗೆ ಪ್ರತ್ಯೇಕ ಲೇಪನವೊಂದನ್ನು ಹಚ್ಚುತ್ತಾ ಮತ್ತೆ ಕನ್ನಡಿಯೊಳಗೆ ನೋಡಿಕೊಂಡಳು ಮಂಡೋದರಿ.

ಆ ಕನ್ನಡಿಯ ತುದಿಗಿರುವ ಚಿಪ್ಪೊಂದು ಬಿರುಕುಬಿಟ್ಟಂತೆನೆಸಿತು ಆಕೆಗೆ. ಹತ್ತಿರದಿಂದ ನೋಡಿದಾಗ ಅದರ ಮೇಲೆ ತೆಳುವಾದ ಕೂದಲೆಳೆಯೊಂದು ಅಂಟಿಕೊಂಡಿತ್ತು. ಅಷ್ಟೇ ಅಲ್ಲವಾ ಅಂದುಕೊಳ್ಳುತ್ತಾ ಅದನ್ನು ತಗೆದೆಸೆದಳು. ಕಡಲ ಕಿನಾರೆಯಲ್ಲಿ ಅಲ್ಲದೆ, ಕಡಲಿನಾಳದಲ್ಲಿ ಹುಡುಕಿ-ಹುಡುಕಿ ತಂದ ಅಪರೂಪದ ಸುಕಮಾರದ ಕಡಲಚಿಪ್ಪುಗಳನ್ನು ಸೂರ್ಯಕಿರಣಗಳ ಆಕಾರದೊಳಗೆ ಅಂಟಿಸಿ, ನಡುಬಿಂಬದ ಜಾಗದಲ್ಲಿ ಪ್ರತಿಬಿಂಬಿಸುವ ಗಾಜನ್ನು  ಅಳವಡಿಸಿ ತಯಾರಿಸಿದ್ದ ಕನ್ನಡಿಯದು. ಸೂರ್ಯ ಬಿಂಬದೊಳಗೆ ಚಂದ್ರ ಬಿಂಬವು ಪ್ರತಿಫಲಿಸುತ್ತಿದ್ದಂತಿತ್ತು ಮಂಡೋದರಿಯ ವದನ ಆ ಕನ್ನಡಿಯೊಳಗೆ. ತೃಪ್ತಿಯಿಂದ ತನ್ನ ಅಲಂಕರಣೆಯನ್ನು ಮುಗಿಸಿಕೊಂಡು ‘ನಯನೆ ಇನ್ನೂ ಹೂಗಳನು ತರಲೇಯಿಲ್ಲ. ಬಹುಶಃ ದಿಗಿಲುಗೊಂಡು ನಡೆಯದಾದಳೇನೋ. ಆ ದಿಗಿಲು ಹುಯಿಲಾಗದೆ ಎಲ್ಲವೂ ಒಪ್ಪವಾದರೆ ಒಳಿತು.’ ಎಂದುಕೊಳ್ಳುತ್ತಾ ಆಕೆ ತನ್ನ ಕೋಣೆಯಿಂದ ಹೊರಬಂದಳು.

“ಅಮ್ಮಾ ಮಂಡೋದರೀ ದೇವಿ” ಎನ್ನುತ್ತಾ ಓಡುನಡಿಗೆಯಲ್ಲಿ ಸದ್ದುಮಾಡುತ್ತಾ ಬರುತ್ತಿರುವ ನಯನೆಯನ್ನು ನಿಲ್ಲಿಸಲೆಂದು ಮಂಡೋದರಿ ನಾಲ್ಕು ಹೆಜ್ಜೆ ಮುಂದಕೆ ನಡೆದು-

“ನಯನಾ ! ನನಗೆಲ್ಲಾ ಗೊತ್ತು. ನೀನು ಆಯಾಸ ಪಡಬೇಕಾಗಿಲ್ಲ.
ಹೋಗಿ ನಿನ್ನ ಕೆಲಸಗಳನ್ನು ಮುಗಿಸು ಎಂದಿನಂತೆ.” ಎಂದಳು.

ಪ್ರತಿದಿನವೂ ಮಂಡೋದರಿಯ ಮಾತುಗಳಲ್ಲಿ ಕೇಳಿಬರುವ ಪ್ರೀತಿಯ ಹೊರತು ಈ ದಿನ ಮತ್ತೊಂದು ಭಾವ ಕೇಳಿಬರದಂತಾದಾಗ ನಯನೆ ಅಚ್ಚರಿಗೊಂಡಳು. ಇಷ್ಟೆಲ್ಲಾ ನಡೆದರೂ ಮಂಡೋದರಿ ದೇವಿಗೆ ಆಕ್ರೋಶವೋ,
ಆವೇದನೆಯೋ ಉಂಟಾಗುವ ಬದಲು ಪ್ರೀತಿ ಹೇಗೆ ಮೂಡಿತು ?

ನಯನೆಯ ಮುಖದೊಳಗೆ ಆಕೆಯ ಮನಸನ್ನು ಓದಿದಂತೆ ಮಂಡೋದರಿಯು ಆಕೆಯ ಭುಜದ ಮೇಲೆ ಕೈ ಹಾಕಿ-

“ಆಕ್ರೋಶ, ಆವೇದನೆ ನಿನ್ನ ಮೇಲೆ, ನಿನ್ನ ಕುರಿತು ಅಲ್ಲವಲ್ಲ ನಯನಾ. ಈ ದಿನ ಕಡಿಮೆ ಹೂಗಳನು ತಂದಿರುವಿಯೇಕೆ ?  ಅಲಂಕರಣೆಯನ್ನು ಹೊಸ ಬಗೆಯಲ್ಲಿ ಮಾಡಲು  ಯೋಚಿಸಿರುವೆಯಾ ?” ಎಂದು ಕೇಳಿದಳು.

ನಯನೆ ಮಂಡೋದರಿಯ ಮುಂದೆ ನಿಲ್ಲಲಾಗದಂತೆ ತಾನು ತಂದ ಹೂಗಳನ್ನು ತಗೆದುಕೊಂಡು ತನ್ನ ಸಹಾಯಕರನ್ನು ಹುಡುಕುತ್ತಾ ಹೋದಳು. ಪ್ರತಿದಿನವೂ ಮುಂಜಾವಿನ ವೇಳೆ ಆಕೆ ಅಶೋಕವನಕ್ಕೆ ಹೋಗಿ ಹೂಗಳನ್ನೆಲ್ಲಾ ತಂದು ಮಂದಿರವೆಲ್ಲಾ ಅಲಂಕರಿಸುತ್ತಾಳೆ. ಪೂಜೆಗೆಂದು ಕೆಲ ಹೂಗಳನ್ನು ಪ್ರತ್ಯೇಕ ಆರಿಸಿಡುತ್ತಾಳೆ. ಇನ್ನು ಮಂಡೋದರಿಯ ಜಡೆಗೆ ಸುವಾಸನೆ ಬೀರುವ ಹೂಗಳು ಬೇರೆ, ಆ ದಿನದ ಬೆಳಗು ಮಂಡೋದರಿ ತನ್ನ ಅಲಂಕರಣೆಗೆ ಯಾವ ಬಣ್ಣವನ್ನು ಪ್ರೀತಿಯಿಂದ ಆಯ್ದುಕೊಳ್ಳುವಳೋ ಆ ಬಣ್ಣದ ಹೂಗಳನ್ನು ಬಗೆಬಗೆಯಾಗಿ ಮಾಲೆಹೆಣೆದು ಸಿದ್ಧಗೊಳಿಸುತ್ತಾಳೆ ನಯನೆ. ಆ ಕೆಲಸದಲ್ಲಿ ನಯನೆಗೆ ಮಂಡೋದರಿಯು ನಾಲ್ಕು ವರ್ಷಗಳ ಕಾಲ ತರಬೇತಿ ನೀಡಿದ್ದಾಳೆ. ಈಗ ನಯನೆ ಇನ್ನೂ ಹತ್ತು ಮಂದಿಗೆ ಅದನ್ನು ಕಲಿಸುತ್ತಾ ಆನಂದದಿಂದ ಆ ಕೆಲಸದಲ್ಲಿ ಮುಳುಗಿ ತನ್ನ ಮುಂಜಾವುಗಳನ್ನು ಕಳೆಯುತ್ತಿದ್ದಾಳೆ.

ಎಂದಿನಂತೆ ಆ ಮುಂಜಾವಿನ ಮೊದಲ ಕಿರಣಗಳ ಬೆಳಕಿನಲ್ಲಿ ಹೂಗಳ ಸೌಂದರ್ಯವನ್ನೂ, ಪರಿಮಳವನ್ನೂ ಸವಿಯುತ್ತಾ ಹೂ ಬಿಡಿಸುತ್ತಿರುವ ನಯನೆಗೆ ಎಲ್ಲಿಂದಲೋ ಸಣ್ಣನೆಯ ವಿಶಾದಗೀತೆಯಂತಹ ಶೋಕವು ಕೇಳಿಸಿತು. ಅಶೋಕವನದೊಳಗೆ ಶೋಕ ! ಆ ವನದೊಳಗೆ ಬಾಲ್ಯದಿಂದಲೂ ಅಲೆದ ನಯನೆಗೆ ಅಚ್ಚರಿ ಮತ್ತು ಭಯ ಒಂದೇ ಸಮನೆ ಉಂಟಾದವು. ಆ ಶೋಕದ ನೆಲೆ ಎಲ್ಲಿದೆ ಎಂದು ಹುಡುಕುತ್ತಾ ಹೋದ ಆಕೆಯನ್ನು ಕೆಲ ಸೈನಿಕರು ತಡೆದರು. ಅವರೆಲ್ಲಾ ಹೆಂಗಸರೇ. ಎಲ್ಲರ ಮುಖದೊಳಗೂ ದಿಗಿಲು ಸ್ಪಷ್ಟವಾಗಿ ಕಾಣುತ್ತಿತ್ತು.

“ಇಲ್ಲಿಂದ ಮುಂದಕೆ ದಾರಿ ಇಲ್ಲವಮ್ಮಾ ನಯನಾ ! ಹಿಂದಿರುಗು.”

ನಯನೆಗೆ ದೊಡ್ಡಮ್ಮ  ವರಸೆಯಾಗುವ ತ್ರಿಜಟೆ ಗಂಭೀರವಾಗಿ ಹೇಳಿದಳು.

“ಏಕಮ್ಮಾ ? ಏನಾಗಿದೆ ? ಅಶೋಕವನದೊಳಗೆ ಆ ಶೋಕ ಯಾರದ್ದು ? ನೀವೆಲ್ಲಾ ಇಲ್ಲೇಕಿರುವಿರಿ ? ಸೈನಿಕರಿಗೆ ಅಶೋಕವನದೊಳಗೇನು ಕೆಲಸ ? ಮಂಡೋದರಿದೇವಿಗೆ ಗೊತ್ತಾದರೆ ಅವರು ಕೋಪಿಸುಕೊಳ್ಳುವುದಿಲ್ಲವೇ ?”

ನಯನೆಯ ಪ್ರಶ್ನೆಗಳು ಪುನ್ನಾಗ ಹೂಗಳಂತೆ ಉದುರಿದವು.

ತ್ರಿಜಟೆ  ನಯನೆಯನ್ನು ಅಲ್ಲಿದ್ದವರಿಂದ ದೂರಕ್ಕೆ ಕರೆದೋಯ್ದು ನಡೆದದ್ದೇನೆಂದು ಎಲ್ಲ ವಿವಿರಿಸಿದಳು.

ಅದನ್ನೆಲ್ಲಾ ಕೇಳಿದ ನಯನೆ ಬಿರಬಿರ ನಡೆಯುತ್ತಾ ಮಂಡೋದರಿಯ ಮಂದಿರಕ್ಕೆ ಬಂದಳು.

ಮಂಡೋದರಿಗೆ ಎಲ್ಲವೂ ಗೊತ್ತಾದಂತಿದೆ.

ಈಗೇನು ನಡೆಯುವುದು ? ನಯನೆಯ ನಯನಗಳಿಂದ ಉಬುಕಿದ ಕಣ್ಣಹನಿ ಆಕೆ ಬಿಡಿಸಿ ತಂದ ಹೂಗಳ ಮೇಲೆ ಬಿದ್ದು ಅವು ಒದ್ದೆಯಾಗುತ್ತಿವೆ. ಇಬ್ಬನಿ ಇಷ್ಟು ಬಿಸಿಯಾಗಿದೆ ಏಕೆ- ಏನು ಈ ವೈಪರೀತ್ಯ ಎಂದು ಹೂಗಳು ಗಾಬರಿಗೊಂಡಿವೆ.

*

ಮುಂಜಾವಿನ ಬಿಸಿಲು ಕ್ರಮೇಣ ಬಲಿಯುತ್ತಿದ್ದಂತೆ,  ಮಂಡೋದರಿಯ ಮಂದಿರವೂ ಸಹ ರಾವಣನು ಬರುತ್ತಿದ್ದಾನೆಂಬ ಸುದ್ದಿಯಿಂದ ಬಿಸಿಯೇರತೊಡಗಿತ್ತು. ಮಂದಿರದಲ್ಲಿ ಆಕೆಯ ಗೆಳತಿಯರು, ಆತ್ಮೀಯರೆಲ್ಲಾ ಗಲಿಬಿಲಿಗೊಳ್ಳುತ್ತಾ ಉತ್ಕಟತೆಯಿಂದ ಕೂತಿದ್ದರು. ಆದರೆ ತನ್ನ ಬಂಧುಗಳಾರೂ ಮುಂಜಾವಿನಿಂದ  ಅಲ್ಲಿಗೆ ಬರಲು ಧೈರ್ಯವೇ ಮಾಡುತ್ತಿಲ್ಲ.

ಮಂಡೋದರಿ ಭಗವತೀ ಪ್ರಾರ್ಥನೆಯನ್ನು ಮುಗಿಸಿಕೊಂಡು ತನ್ನ ಕೆಲಸದಲ್ಲಿ ಲೀನವಾದಳು. ಆಕೆಗೆ ಅಲಂಕರಣೆಯೆಂದರೆ ಇನ್ನಿಲ್ಲದ ಪ್ರೀತಿ. ಬೆಳ್ಳಿ, ಬಂಗಾರ, ಕಂಚು – ಈ ಲೋಹಗಳಿಂದ ಆಕೆ ಪ್ರಕೃತಿಯನ್ನು ಅನುಸರಿಸುತ್ತಾ ಎಷ್ಟೋ ಆಭರಣಗಳನ್ನು ಮತ್ತು ಗೃಹಾಲಂಕಾರಗಳನ್ನು ಮಾಡುತ್ತಾಳೆ.  ಹೂದಳದ ರಂಗಿನಿಂದ ಬಟ್ಟೆಗಳ ಮೇಲೆ ಬಗೆಬಗೆ ಬಣ್ಣದ ಚಿತ್ರಗಳನ್ನು ಬಿಡಿಸುತ್ತಾಳೆ. ಮುಂಜಾವಿನಿಂದ ಸಂಜೆವರೆಗೂ ಆಗೊಮ್ಮೆ ಈಗೊಮ್ಮೆ ವಿರಮಿಸಿದ ಬಳಿಕ ಆಕೆ ಆ ಕೆಲಸದಲ್ಲಿ ಸಂಪೂರ್ಣ ಮುಳುಗಿಬಿಡುತ್ತಾಳೆ. ರಾಚಕಾರ್ಯಗಳನ್ನು ಮುಗಿಸಿಕೊಂಡು ಬರುವ  ರಾವಣನ ಜೊತೆ ಸಂಗೀತೋತ್ಸವ ನಡೆಸುತ್ತಾಳೆ.  ಮಂಡೋದರಿಯ ಸ್ವರ ಮಾಧುರ್ಯಕ್ಕೆ ರಾವಣನ ವೀಣಾವಾದನ ಜತೆಗೂಡಿದರೆ ಮಂದಿರವೆಲ್ಲಾ ಆನಂದತರಂಗಿತವಾಗುತ್ತದೆ. ಕಡಲ ಅಲೆಗಳು ಮಂದಿರದೊಳಗೆ ಬರಲೆಂದು ವಿಫಲ ಪ್ರಯತ್ನ ಮಾಡುತ್ತಾ ಮುಗಿಲೆತ್ತರಕೆ ಜಿಗಿಯುತ್ತವೆ.

ರಾವಣನು ಇಲ್ಲದ ದಿನಗಳಲ್ಲಿ ಮಂಡೋದರಿಯು ನಯನೆಯಂತಹ ಯುವತಿಯರನ್ನು, ಸ್ನೇಹಿತರನ್ನು ಕರೆದು ಭೋಜನ ಕೂಟ ಏರ್ಪಡಿಸುತ್ತಾಳೆ. ಎಲ್ಲರೂ ಸುರಪಾನ ಮಾಡುತ್ತಾ, ಹಾಸ್ಯ  ಪರಿಹಾರಗಳಾಡುತ್ತಾ, ಮಂಡೋದರಿ ನೂತನವಾಗಿ ವಿನೂತನವಾಗಿ ತಯಾರಿಸಿದ ಆಭರಣಗಳನ್ನು, ಬಿಡಿಸಿದ ಬಣ್ಣದ ಚಿತ್ರಗಳನ್ನು ನೋಡಿ ಬೆರಗುಗೊಂಡು  ಪ್ರಶಂಸಿಸುತ್ತಾರೆ.

ಲಂಕೆಯೊಳಗೆ ಮಂಡೋದರಿಯ ಕಲಾ ಪ್ರಾವೀಣ್ಯದ ಕುರಿತು, ಅಲಂಕಾರ ಪ್ರೀತಿಯ ಕುರಿತು ಅರಿಯದವರಿಲ್ಲ.

ದಿನಗಳನ್ನು ಹೀಗೆ ಹಾಯಾಗಿ, ಆನಂದವಾಗಿ ಕಳೆಯಲಿಕ್ಕೆ ಮಂಡೋದರಿ ಮಾಡಿದ ಹೋರಾಟ, ಪ್ರಯತ್ನ ಕಡಿಮೆಯೇನಲ್ಲ.

ಕಾಡೊಳಗಿನ ಸ್ವೇಚ್ಛಾಮಯ ಜೀವನಕ್ಕಿಂತಲೂ  ಲಂಕಾ ನಗರದೊಳಗೆ ಜೀವಿಸುವುದು ಆಕೆಗೆ ತುಂಬಾ ಕಷ್ಟವೇ ಆಗಿಬಿಟ್ಟಿದೆ.

ಮಾಮರಗಳನ್ನು ಉರುಳಿಸಿ, ವನ್ಯಜೀವಿಗಳನ್ನು ಹೊರ ಓಡಿಸಿ,  ಲಂಕಾ ನಗರವನ್ನು ನಿರ್ಮಿಸಬೇಕೆಂಬ ರಾವಣನ ಯೋಚನೆಯ ವಿರುದ್ಧ ಯುದ್ಧ ಮಾಡೀ ಮಾಡೀ ಆಕೆ ದಣಿದುಬಿಟ್ಟಿದ್ದಾಳೆ. ನಗರ ನಿರ್ಮಾಣವೆಂಬ ಬೀಜವು ಆತನ ಮನದೊಳಗೆ ಮಹಾವೃಕ್ಷವಾಯಿತು. ನಗರ ನಿರ್ಮಾಣ, ರಾಜ್ಯದ ವಿಸ್ತರಣೆ, ಸಾರ್ವಭೌಮಾಧಿಕಾರ, ಅಧಿಕಾರದ ಅಂತರಗಳು- ಇವೆಲ್ಲ ಆರ್ಯ ಸಂಸ್ಕೃತಿಯ ಲಕ್ಷಣಗಳು.

ರಾವಣನಿಗೇಕೆ ಅದರ ಬಗ್ಗೆ ಮನಸ್ಸಾಯಿತೋ ತಿಳಿಯದು. ಆದರೆ ಆತ ಆ ಸಂಸ್ಕೃತಿಯನ್ನು ಅನುಸರಿಸುವ ತೀವ್ರಾ ಕಾಂಕ್ಷೆಗೆ ಒಳಗಾಗಿದ್ದಾನೆ. ಆ ಕಾಂಕ್ಷೆ ಆತನನ್ನು ವಶಪಡಿಸಿಕೊಂಡಂತೆ ತನಗೆ ಆತನನ್ನು ವಶಪಡಿಸಿಕೊಳ್ಳಲಾಗಲಿಲ್ಲವಲ್ಲ ಎಂದು ದುಃಖಿಸುತ್ತಾ, ಆ ನಗರದಲ್ಲಿಯೇ ತನಗೆಂದೇ ಒಂದು ಪ್ರತ್ಯೇಕವಾದ ತಾಣವನ್ನು ಕಂಡುಕೊಂಡಿದ್ದಾಳೆ ಮಂಡೋದರಿ.

“ಈ ನಾಗರಿಕತೆಯು ತುಂಬಾ ವೇಗವಾಗಿ ವ್ಯಾಪಿಸುತ್ತಿದೆ. ಇಷ್ಟರಲ್ಲೇ ನಾವು ಆರ್ಯರನ್ನು ಮೀರಿಸದಿದ್ದರೆ  ಅವರು ನಮ್ಮನ್ನು ಉಳಿಸುವುದಿಲ್ಲ.” ಎನ್ನುತ್ತಾನೆ ರಾವಣ.

“ನಾವು ಉಳಿಯುವುದೆಂದರೆ-ಅರ್ಥವೇನು ರಾವಣಾ ! ನಮ್ಮತನವನ್ನು ಬಿಟ್ಟು ಆರ್ಯರನ್ನು ಅನುಸರಿಸಿ ನಾವು ಅವರ ಸಂಸ್ಕೃತಿಯಲ್ಲಿ ಅವರನ್ನು ಮೀರಿಸಿದರೆ  ನಾವು ನಾವಾಗಿ ಉಳಿದಂತಾಗುವುದಾ ? ಇಲ್ಲ ಪೂರ್ತಿ ಮುಳುಗಿದಂತಾಗುವುದಾ ?”
ಎಂದ ಮಂಡೋದರಿ ಮಾತುಗಳಲ್ಲಿಯ ಅರ್ಥ ರಾವಣನಿಗೆ ಅರ್ಥವಾದರೂ ನಗರ ಲೋಲತ್ವವು ಆತನನ್ನು ಸಂಪೂರ್ಣವಾಗಿ ದುರಾಕ್ರಮಿಸಿತು.

ನಗರ ನಿರ್ಮಾಣದ ಮೊದಮೊದಲು ಮರಗಳು ಉರುಳುತ್ತಿದ್ದರೆ ಮಂಡೋದರಿಯ ರೋದನೆಯನ್ನು ಯಾರಿಂದಲೂ ತಡೆಯಲಾಗಲಿಲ್ಲ. ಕಡಲು ಆರ್ಭಟವನ್ನು ಬಿಟ್ಟು ವಿನಮ್ರವಾಗಿ ಆಕೆಯ ವಿಶಾದವನ್ನು ಕೇಳಿ ಕಣ್ಣೀರು ಸುರಿಸುತಿತ್ತು.

ಆಗ ರಾವಣನು ಒಂದು ಅತಿಲೋಕ ವನದ ಕುರಿತು ಯೋಚಿಸಿ, ಮಂಡೋದರಿಯನ್ನೂ ಸಹ ಅದರ  ಭಾಗವಾಗಿಸಿದನು. ಸುಂದರವಾದ ವನವೊಂದು ಮಂಡೋದರಿಗೆಂದೇ ರೂಪುಗೊಂಡಿತು. ವನವು ಬೆಳೆಯುತ್ತಿದ್ದಂತೆ ಮಂಡೋದರಿಯ ಶೋಕ ಕಡಿಮೆಯಾಗುತ್ತಾ ಬಂತು. ಆ ವನಕ್ಕೆ ಅಶೋಕವನವೆಂಬ ಹೆಸರು ಹಾಗೆ ಸ್ಥಿರಗೊಂಡಿತು. ಅಲ್ಲಿ ಹೂಗಳು ನಗುತ್ತವೆ, ಹಕ್ಕಿ ಹಾಡುತ್ತವೆ, ನವಿಲುಗಳು ಕುಣಿದಾಡುತ್ತವೆ, ಜಿಂಕೆಗಳು ವಿಹರಿಸುತ್ತವೆ. ಮಿಂಚುಹುಳಗಳೂ ಸಹ ಎದೆದುಂಬಿ ಹಾಡುತ್ತವೆ. ಕೋಗಿಲೆಗಳು ಮನವನ್ನು ಬಡಿದೆಬ್ಬಿಸುತ್ತವೆ. ಚಿಟ್ಟೆಗಳು ತುಂಬು ಸಂತಸದಿ ವನದ ತುಂಬೆಲ್ಲಾ ಹಾರಾಡುತ್ತವೆ‌. ಮಾಮರಗಳಿಗೂ ಪಚ್ಚೆ ಹುಲ್ಲಿನ ಮೈದಾನಗಳಿಗೂ ಭೇದವೇಯಿಲ್ಲದ ಒಂದು ಸಮತೋಲನದ ಸೌಂದರ್ಯಲೋಕವದು. ನೆಮ್ಮದಿಯಿಂದ ಕೂಡಿದ ಆನಂದ. ಲೋಭ, ಲೌಲ್ಯರಹಿತ ಆನಂದ.

ಆದರೆ ಆ ಆನಂದದ ವನದೊಳಗೆ, ಅಶೋಕ ವನದೊಳಗೆ ಮೊದಲ ಸಲ ಒಂದು ಶೋಕ.

ಮಂಡೋದರಿಯ ಮನವನ್ನು ಅಶಾಂತಿಮಯವಾಗಿಸಿದ ಶೋಕ.

ಆರ್ಯ ನಗರದ ನಾಗರಿಕತೆಯಲ್ಲಿ ಇತ್ತೀಚಿಗೆ ಮತ್ತೆ ಮತ್ತೆ  ಕೇಳಿಬರುತ್ತಿರುವ ಓರ್ವ ಹೆಣ್ಣಿನ ಶೋಕ.

ನಗರದೊಳಗೆ ನೀನೆಷ್ಟು ಪ್ರಯತ್ನಿಸಿದರೂ ಅದರ ವಿಷಾದ ಛಾಯೆಗಳನ್ನು ಪ್ರವೇಶಿಸದೆ  ಇರಲಾರೆ ಎಂದು ಮಂಡೋದರಿಗೆ ಹೇಳುತ್ತಿರುವಂತೆ ಶುರುವಾದ ಶೋಕ.

*

ರಾವಣನು ಮಂದಿರದೊಳಗೆ ಬಂದು, ಏನೇನು ಕೇಳಬೇಕೋ ಕೇಳಿಬಿಡು ಎಂಬಂತೆ ಮಂಡೋದರಿಯ ಮುಂದೆ  ಕೈಕಟ್ಟಿ ನಿಂತಿದ್ದಾನೆ.

ಉತ್ತರಗಳನ್ನೆಲ್ಲಾ ಸಿದ್ಧ ಮಾಡಿಕೊಂಡು ಬಂದವರಿಗೆ ಅವರು ಊಹಿಸುವ ಪ್ರಶ್ನೆಗಳನ್ನೇ ಕೇಳುವಷ್ಟು ಅವಿವೇಕಿ ಅಲ್ಲ ಮಂಡೋದರಿ.

“ಆರ್ಯರ ಎದುರು ಪರಾಜಯ ಪಾಲಾದ ರಾವಣನಿಗೆ ಎಂತಹ ಉಪಶಮನ ಬೇಕಾಗಿತ್ತೋ ?” ಎಂದಳು ತಾನು ಮಾಡುತ್ತಿರುವ  ಕೆಲಸವನ್ನು ಬಿಡದೆ.

ರಾವಣನು ಅಚ್ಚರಿಗೊಂಡ.

“ಆರ್ಯರಿಂದ ಪರಾಜಯವಾ ? ನನಗಾ ? ಏನನ್ನುತ್ತಿರುವೆ ನೀನು ?”

“ನಮ್ಮನ್ನು ಇಷ್ಟಪಡದ, ಪ್ರೀತಿಸದ ವ್ಯಕ್ತಿಗಳನ್ನು ಒತ್ತಾಯಪೂರ್ವಕವಾಗಿ ವಂಚನೆಯಿಂದ ಹಾರಿಸಿಕೊಂಡು ಬರುವ  ಹೇಡಿತನದ ಕೆಲಸ ಮಾಡುವುದೆಂದರೆ ಅದು ಆರ್ಯರ ನಾಗರಿಕತೆಗೆ ತಲೆಬಾಗಿದಂತಲ್ಲವೇ ? ಅವರ ಜಾಡಿನಲ್ಲಿಯೇ ನಡೆದಂತಲ್ಲವೇ ? ಏನನ್ನು ಆಶಿಸಿ ಆಕೆಯನ್ನು ತಂದು ಅಶೋಕವನದಲ್ಲಿ ಶೋಕವನ್ನು ತುಂಬಿದ್ದೀರೋ ನನಗೆ ತಿಳಿಯುತ್ತಿಲ್ಲ. ನಮ್ಮನ್ನು ಇಷ್ಟಪಡದವರನ್ನು ನಾವು ಗೌರವಪೂರ್ವಕವಾಗಿ ಬೀಳ್ಕೊಡುತ್ತೇವಲ್ಲ- ಆ ಬೆಲೆಯನ್ನು  ಕಳೆದುಕೊಂಡು ನೀವೀಗ  ಪರಾಜಯ ಪಾಲಾದವರಂತೆ ಬಂದಿದ್ದೀರೆಂದೇ ನಾನು ಭಾವಿಸುತ್ತಿದ್ದೇನೆ.

ರಾವಣನು ಕ್ಷಣ ಹೊತ್ತು ನಿರುತ್ತರನಾದ.

ಅಷ್ಟರಲ್ಲೇ ತನ್ನನ್ನು ತಾನು ಒಗ್ಗೂಡಿಸಿಕೊಂಡು-

“ಸೀತೆಯ ನಿಮಿತ್ತ ರಾಮನನ್ನು ಜಯಿಸಿ ಲಂಕಾ ನಗರವನ್ನು ರಕ್ಷಿಸಿಕೊಳ್ಳುವುದು ನನ್ನ ಉದ್ದೇಶ.”

“ನಗರವನ್ನಾ ? ಇಲ್ಲ ಪ್ರಜೆಗಳನ್ನಾ ನೀವು ರಕ್ಷಿಸುವುದು ?”

“ಮಂಡೋದರೀ ನಿನಗೆ ಅರ್ಥವಾಗುತ್ತಿಲ್ಲ. ಆರ್ಯ ನಾಗರಿಕತೆಯನ್ನು, ಆರ್ಯ ಸಾಮ್ರಾಜ್ಯವನ್ನು ದಕ್ಷಿಣಪಥದುದ್ದಕ್ಕೂ  ವಿಸ್ತರಿಸಿಕೊಳ್ಳುತ್ತಾ ಲಂಕಾ ನಗರವನ್ನು ಜಯಿಸುವ ಉದ್ದೇಶದಿಂದ ಬರುತ್ತಿದ್ದಾನೆ ಆ ರಾಮನು. ನಾವು ಕೈಕಟ್ಟಿ ಕುಳಿತರೆ ಆರ್ಯರು ಜಯಿಸುತ್ತಾರೆ. ಅವರ ಯುದ್ಧ ವ್ಯೂಹಗಳನ್ನು, ನೀತಿಯಂತೆ ಪ್ರಚಾರ ಮಾಡುವ ಅವರ ಕಪಟೋಪಾಯಗಳನ್ನು ಅನುಸರಿಸಿಯೇ, ನಾವು ಅವರನ್ನು ಸೋಲಿಸಬೇಕು.”

“ಅವರನ್ನು ಅನುಸರಿಸುವುದೇ ಆದರೆ ಮತ್ತೆ ಜಯಿಸುವುದೇಕೆ ?”

“ಜಯಿಸಿದ ಮೇಲೆ ನಮ್ಮ ಸಂಸ್ಕೃತಿಯನ್ನು ಸಾಟಿಯಿಲ್ಲದಂತೆ ಸ್ಥಾಪಿಸಿಲಿಕ್ಕೆ.”

“ನಮ್ಮ ಸಂಸ್ಕೃತಿ ನಿಮಗಿನ್ನೂ ನೆನಪಿದೆಯಾ ರಾವಣಾ ? ವ್ಯಂಗ್ಯವಾಗಿ ನಕ್ಕಳು ಮಂಡೋದರಿ.

“ಇದೆ. ನೀನಂದುಕೊಂಡಷ್ಟೇನೂ ಬದಲಾಗಲಿಲ್ಲ ನಾನು.  ನಗರವನ್ನೆಷ್ಟು ಪ್ರೀತಿಸುತ್ತೇನೋ ಅಶೋಕವನವನ್ನೂ ಸಹ ಅಷ್ಟೇ ಪ್ರೀತಿಸುತ್ತೇನೆ. ಎರಡರ ಆಲೋಚನಾ ಬೀಜಗಳು ನನ್ನವೇ.”

“ಅರಣ್ಯವನ್ನು ನಾಶಗೊಳಿಸಿ  ವನವನ್ನು ಬೆಳೆಸಿದ್ದೀರಿ. ಅದು ಬದಲಾವಣೆಯಲ್ಲವೆಂದು ನಂಬುತ್ತಿದ್ದೀರಿ. ಈ ದಿನ ಈ ವನದಲ್ಲಿ ಒಬ್ಬ ಆರ್ಯ ಹೆಂಗಸಿನ ಶೋಕಗೀತೆಯನ್ನು ಕೇಳುವಂತೆ ಮಾಡಿ ವನ ಪ್ರಯೋಜನವನ್ನೇ ತಪ್ಪುದಾರಿ ಹಿಡಿಸಿದ್ದೀರಿ.  ಆದರೂ ಈ ಬದಲಾವಣೆ ಒಳ್ಳೆಯದೆಂದುಕೊಳ್ಳುವ ನಿಮಗೆ ಏನು ಹೇಳಲಿ ?”

“ಸೀತೆಯನ್ನು ನಗರದ ಈ ಭವನದೊಳಗೆ ಕರೆತಂದರೆ ಆಕೆಗೆ ತೊಂದರೆಯಾಗುವುದೆಂದು ಊಹಿಸಿ ಅಲ್ಲಿರಿಸಿದ್ದೆ ಮಂಡೋದರಿ.
ಆರ್ಯರಿಗೆ ಹೆಣ್ಣಿನ ಶೀಲದ ಬಗೆಗಿನ ಹಿಡಿತ ಯಾವ ರೀತಿಯದ್ದೆಂದು ನೀನು ಊಹಿಸಲಾರೆ. ಅಶೋಕ ವನದೊಳಗಿದ್ದರೆ ಆಕೆಯ ಭವಿಷ್ಯತ್ತಿಗೆ ಯಾವ ತೊಂದರೆಯೂ ಬರುವದಿಲ್ಲವೆಂದು  ಹಾಗೆ ಮಾಡಿರುವೆ. ನಿನಗೆ ಸ್ವಲ್ಪ ಇರುಸು ಕಸಿವಿಸಿಯಾಗುವುದೆಂದು ಗೊತ್ತು. ಆದರೆ ನನಗಾಗಿ, ದ್ರಾವಿಡ ವಿಜಯಕ್ಕಾಗಿ ನೀನಿದನ್ನು ಸಹಿಸಬೇಕು. ಬೇರೆ ದಾರಿಯಿಲ್ಲ.”

ರಾವಣನಿಗೆ ಮಾತು ಬೆಳೆಸಲು ಇಷ್ಟವಿರದೆ ಹೊರಟುಹೋದ.

ಮಂಡೋದರಿ ರಾವಣನನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಕಾಲವನ್ನು ಮರೆತುಬಿಟ್ಟಳು.

ಸಂಜೆಯ ಹೊತ್ತಲ್ಲಿ ನಡೆಯುವ ಸಂಗೀತೋತ್ಸವ ಆ ದಿನ ನಿಂತು ಹೋಯಿತು.

ಮುಂದೆಂದೂ ನಡೆಯಲಿಲ್ಲ.

ರಾವಣನು ಯುದ್ಧದ ತಯಾರಿಯಲ್ಲಿ ಮುಳುಗಿದ್ದಾನೆ.

ಮಂಡೋದರಿ ತನ್ನ  ಅಂತರ್ಮಧನದೊಳಗೆ ತಾನೇ ನರಳುತ್ತಾ, ತನ್ನ ಅಲಂಕರಣೆಯಲ್ಲಿ, ಹೂವ್ವಿನ ಆಭರಣಗಳ ತಯಾರಿಯಲ್ಲಿ ಮುಳುಗಿ ಮನವನ್ನು ತಿಳಿಯಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ.

*

“ಆಕೆ ಮಹಾರಾಜನನ್ನು ಲೆಕ್ಕಿಸುತ್ತಿಲ್ಲ. ಹೇಳಬೇಕೆಂದರೆ ನಿಮ್ಮಷ್ಟು ಸೌಂದರ್ಯವತಿಯೂ ಅಲ್ಲ. ಇದೆಲ್ಲಾ ಏನಮ್ಮಾ ?”

ನಯನೆ ಅಶೋಕವನದ ಬಗ್ಗೆ ಪ್ರತಿದಿನವೂ ಏನೋ ಒಂದು  ಸುದ್ದಿ ಹೇಳದೆ ಇರಲಾರಳು.

ಆ ವೇಳೆ ನಯನೆ ಸೀತೆಯ ಸೌಂದರ್ಯದ ಪ್ರಸ್ತಾಪ ಮಾಡಿದ್ದರಿಂದ ಮಂಡೋದರಿಗೆ ಸೀತೆಯ ಬಗ್ಗೆ ಕುತೂಹಲ ಕೆರಳಿತು.

“ಆಕೆ ಹೇಗಿರುತ್ತಾಳೆ ನಯನಾ ? ಸ್ವಲ್ಪ ವಿವರವಾಗಿ ಹೇಳು.”

“ನಿರಲಂಕಾರಿಯಾಗಿ, ಕಳಾಹೀನವಾಗಿದ್ದಾಗ ಇರುವ ಅಂದಚಂದವೂ ಸಹ ಮರೆಯಾಗುತ್ತದೆ ಅಲ್ಲವಾ ಅಮ್ಮಾ. ನನ್ನ ಕಣ್ಣಿಗೆ ಆಕೆ ದೀನಳಾಗಿ, ತುಂಬಾ ಸಾಧಾರಣವಾಗಿ ಕಂಡಳು.”

“ಯಾವ ಅಲಂಕರಣೆಯೂ ಇಲ್ಲವಾ ? ಒಂದು ಆಭರಣವಾದರೂ ?”

“ಇಲ್ಲಮ್ಮಾ.  ಚೂಡಾಮಣಿಯೊಂದು ಬಿಟ್ಟು ಮತ್ತಾವ  ಆಭರಣಗಳೂ ಇಲ್ಲ. ಒಂದು ಹೂವನ್ನಾದರೂ ಮುಡಿಯದೆ ಕೂದಲನ್ನು ಇಳಿಬಿಟ್ಟಿಕೊಂಡು ಕೂತಿದ್ದಾಳೆ. ಹಣೆಗೆ ಕೆಂಬಣ್ಣದ ಬೊಟ್ಟು ಮಾತ್ರ ಸ್ವಲ್ಪ ಎದ್ದು ಕಾಣುತ್ತಿದೆ.”

ಹೆಣ್ಣೊಬ್ಬಳು ಅಂತಹ ದಯನೀಯ ಸ್ಥಿತಿಯಲ್ಲಿ ಇದ್ದಾಳೆಂದು ತಿಳಿದು ಮಂಡೋದರಿಯ ಮನಸ್ಸು ಕರಗಿ ಹೋಗಿತ್ತು.

ತಾನು ಇತ್ತೀಚೆಗೆ  ತಯಾರಿಸಿದ ಒಡವೆಗಳನ್ನು,  ಹೊಸ ಬಟ್ಟೆಗಳನ್ನು  ತೆಗೆದುಕೊಂಡು ಸೀತೆಯನ್ನು ನೋಡಲು ಹೊರಟಳು.  ಅಶೋಕವನದಲ್ಲಿ ಅರಳಿದ ಪರಿಮಳಭರಿತವಾದ ಹೂವುಗಳನ್ನು ಸಹ ಸೀತೆಗೆಂದು ತಗೆದುಕೊಂಡಳು.

ಮಂಡೋದರಿ ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಲೇ ಸೀತೆಯ ಮುಖ ಕಳೆಗುಂದಿತು. ಹೊಸ ಬಟ್ಟೆ, ಹೂ-ಒಡವೆಗಳನ್ನು ಕೈಯಲ್ಲಿ ಹಿಡಿದು ತಂದ ಆಕೆಯ ಅಂತರಂಗವನ್ನು ಸೀತೆ ಸಂಪೂರ್ಣವಾಗಿ ಅಪಾರ್ಥ ಮಾಡಿಕೊಂಡಳು.

ರಾವಣನೇ ಕಳಿಸಿದನೆಂದುಕೊಂಡಳು.

“ಸೀತಾ ! ನೀನಿಷ್ಟು ದಯನೀಯವಾಗಿ, ನಿರಾಭರಣವಾಗಿ ಏಕಿರಬೇಕು ? ನಿನ್ನ ಗಂಡ ನಿನ್ನನ್ನು ರಕ್ಷಿಸಿ ಕರೆದೊಯ್ಯಲು       ಸರ್ವಸನ್ನದ್ಧನಾಗಿ ಬರುತ್ತಿದ್ದಾನೆ. ನೀನು ದಿಗಿಲುಗೊಳ್ಳದೆ ಆತನಿಗಾಗಿ ಕಾದು ನೋಡುತ್ತಾ ಅಶೋಕವನಲ್ಲಿ ಹಾಯಾಗಿ ಕಾಲ ಕಳೆಯಬಹುದು.”

ಮಂಡೋದರಿಯ ಮಾತುಗಳಿಗೆ ಸೀತೆ ಅಚ್ಚರಿಗೊಂಡಳು. ಈಕೆ ತನ್ನ ವೈರಿಯ ಹೆಂಡತಿಯಾ ? ತನ್ನ ಗೆಳತಿಯಂತೆ ಮಾತನಾಡುತ್ತಿದ್ದಾಳೇನು ? ಇದೆಲ್ಲವೂ ಯಾವುದೋ ತಂತ್ರದ ಭಾಗವಿರಬಹುದೆಂಬ ಯೋಚನೆಯಲ್ಲಿ ಮತ್ತೆ ಸೀತೆಯ ಮುಖ ಕೆಂಪೇರಿತು.

ಸೀತೆಯ ಮುಖದಲ್ಲಿನ ಬದಲಾವಣೆಗಳನ್ನು ಮಂಡೋದರಿ ಗಮನಿಸಿದಳು.

“ನಿನ್ನ ಗಂಡನ ವಿಯೋಗವು ಬಾಧಾಕರವೇ ಆದರೂ ರಾವಣನಿಂದಾಗಿ ನಿನಗೆ ಯಾವ ಅಪಾಯವೂ ಇಲ್ಲ ಸೀತಾ. ನಮ್ಮನ್ನು ಇಷ್ಟ ಪಡದವರ ಅಭಿಪ್ರಾಯಗಳನ್ನೂ ಸಹ ಗೌರವಿಸುವ ನೀತಿ ನಮ್ಮ ಜಾತಿಗಿದೆ.”

“ಅಪಹರಿಸಿಕೊಂಡು ಬರುವುದೇನಾ ಗೌರವಿಸುವುದೆಂದರೆ”  ಚುರುಕಾಗಿ ಕೇಳಿದಳು ಸೀತೆ.

“ಅದು ನಿಮ್ಮಿಂದ ಕಲಿತದ್ದೇ ಸೀತಾ. ನನ್ನ ಗಂಡ ಆರ್ಯ  ಸಂಸ್ಕೃತಿಯನ್ನು ದ್ವೇಷಿಸುತ್ತಲೇ ತನಗೆ ತಿಳಿಯದಂತೆ ಅದರ ಕೆಲವು ಲಕ್ಷಣಗಳನ್ನು ರೂಢಿಸಿಕೊಂಡಿದ್ದಾನೆ. ಈಗ ಈ ಯುದ್ಧವೂ…”

ಮಂಡೋದರಿಯ ಮಾತು ಮುಗಿಯುವ ಮುನ್ನವೇ-

“ಯುದ್ಧದಲ್ಲಿ ನನ್ನ ಗಂಡ ಗೆದ್ದೇ ಗೆಲ್ಲುತ್ತಾನೆ. ನಿನ್ನ ಗಂಡ ಸೋಲುತ್ತಾನೆ.” ಎಂದು ಪೌರುಷದಿಂದ  ಹೇಳಿದಳು ಸೀತೆ.

“ನಿನ್ನ ಮನಸ್ಸು ಅದೆಷ್ಟು ಕಠಿಣವಾಗಿಬಿಟ್ಟಿದೆ ಸೀತಾ. ಬಹುಶಃ ಯುದ್ಧ ನಡೆಯುವುದಿಲ್ಲ ಅನ್ನಿಸುತ್ತೆ. ಮೈತ್ರಿ ಏರ್ಪಡಬಹುದು. ಇಬ್ಬರೂ ಒಬ್ಬರನ್ನೊಬ್ಬರು ಜಯಿಸಲಾಗದ ಸಮಾನ ಪ್ರತಾಪ ಉಳ್ಳವರೆಂಬ ಅರಿತುಕೊಂಡು ಸಂಧಿ ಉಂಟಾಗಬಹುದು. ಅದಕ್ಕಾಗಿ ನಾವಿದ್ದರೂ ಪ್ರಯತ್ನಿಸಬಹುದಲ್ಲವೇ ?”

“ಅದು ನಡೆಯುವುದಿಲ್ಲ.”  ಸೀತೆ ಸ್ಥಿರವಾಗಿ ನುಡಿದಳು.

“ನಡೆಯುವುದೋ, ನಡೆಯುವದಿಲ್ಲವೋ- ನಿನ್ನ ಮನಸ್ಸಿಗೆ ನಿನ್ನ ಗಂಡ ಗೆಲ್ಲುತ್ತಾನೆಂಬ ನಂಬಿಕೆ ಇದೆಯಲ್ಲವಾ. ಆ ನಂಬಿಕೆಯಿಂದಲೇ ಸಂತೋಷದಿಂದಿರು. ನಿನ್ನ ಶರೀರವನ್ನು ಕೃಶಿಸಿಕೊಳ್ಳದೆ ಸರ್ವಾಲಂಕಾರಗಳಿಂದ ಸುಶೋಭಿತವಾಗಿರು.

“ಗಂಡನು ತನ್ನ ಬದಿಗಿರದಿದ್ದಾಗ ಆರ್ಯ ಕುಲದ ಹೆಣ್ಣುಗಳು ಅಲಂಕರಿಸಿಕೊಳ್ಳುವುದಿಲ್ಲ.”

“ಅಲಂಕಾರಕ್ಕೂ, ಗಂಡನಿಗೂ ಸಂಬಂಧವೇನು ಸೀತಾ ?” ನಕ್ಕಳು ಮಂಡೋದರಿ.

“ಗಂಡನಿಗಾಗಿ ಅಲ್ಲದಿದ್ದರೆ ಇನ್ನಾರಿಗಾಗಿ  ಈ ಅಲಂಕರಣೆಗಳೆಲ್ಲಾ ?”

“ಮದುವೆಯ ಮುಂಚೆ ನೀನು ಅಲಂಕರಣೆ ಮಾಡಿಕೊಳ್ಳಲಿಲ್ಲವಾ ? ನಾವು ನಮ್ಮ ಆನಂದಕ್ಕಾಗಿ, ವಿಲಾಸಕ್ಕಾಗಿ, ನಮ್ಮ ದೇಹವನ್ನು ಗೌರವಿಸುವುದಕ್ಕಾಗಿ ಅಲಂಕರಿಸಿಕೊಳ್ಳುತ್ತೇವೆ. ಅದನ್ನು ನೋಡಿ ಗಂಡಂದಿರು ಸಂತೋಷಗೊಳ್ಳಬಹುದು. ಕೆಲವರು ಬೇಸರವೂ ಪಡಬಹುದು. ಆದರೆ ನಾವೂ, ನಮ್ಮ ದೇಹಗಳೂ ನಮ್ಮದಲ್ಲವಾ ಸೀತಾ ? ನಾವು ಅವುಗಳನ್ನು ಗೌರವಿಸಬೇಕಲ್ಲವೇ ?

“ಅಮ್ಮಾ, ನಿನ್ನ ಮಾತುಗಳು ನನಗೆ ಸ್ವಲ್ಪವೂ  ಹಿತವೆನಿಸುತ್ತಿಲ್ಲ. ಅರ್ಥವೇ ಆಗುತ್ತಿಲ್ಲ. ನಾನು, ನನ್ನ ದೇಹ, ಮನಸ್ಸು ಈ ಎಲ್ಲವೂ ರಾಮನಿಗಾಗಿಯೇ.”

“ಇದೇ ಏನು  ಆರ್ಯ  ಹೆಂಗಸರ ನಿಲುವು ! ನಿಮ್ಮದೆಂದು ಹೇಳಿಕೊಳ್ಳಲು ನಿಮ್ಮ ಬಳಿ ಏನೂ ಇಲ್ಲವಾ ?”
ನಿಬ್ಬೆರಗಾದಳು  ಮಂಡೋದರಿ.

“ಇಲ್ಲ. ಇಲ್ಲದಿದ್ದರೂ  ಯಾವ ಅಗೌರವವೂ ಇಲ್ಲ. ತುಂಬಾ ಗೌರವವಿದೆ.” ಗಂಭೀರವಾಗಿ ನುಡಿದಳು ಸೀತೆ.

“ಎಷ್ಟು ಮೋಸ ! ನಯನಾ ನೋಡಿದೆಯಾ ಆರ್ಯ ಹೆಂಗಸರ ಸ್ಥಿತಿ. ನಡೆ ಹೋಗೋಣ. ಆದರೆ ಸೀತಾ ಒಮ್ಮೆ ಯೋಚಿಸಮ್ಮಾ.  ನಿನ್ನ ಬಗ್ಗೆ ನೀನು  ಯೋಚಿಸು.”

ಸೀತೆಗೆ ಕೋಪ ಹೆಚ್ಚುತ್ತಿತ್ತು.

“ಮೊದಲು ನಿನ್ನ ಬಗ್ಗೆ ನೀನು ಯೋಚಿಸಿಕೋ. ನಿನ್ನ ಗಂಡ ತೀರಿಕೊಂಡ ಮೇಲೂ, ಹೀಗೆ ಮೈತುಂಬಾ ಅಲಂಕರಿಸಿಕೊಂಡಿರುವೆಯೋ ಇಲ್ಲವೋ ಎಂದು.”  ಕಟುವಾಗಿ ಅಂದ ಸೀತೆಯ ಮಾತುಗಳಿಗೆ ಮಂಡೋದರಿಯ ಮನವು ಕಳವಳಗೊಂಡಿತು.

“ರಾವಣನ ಮೇಲೆ ನನಗೆ ಪ್ರೀತಿಯಿಲ್ಲ ಎಂದುಕೊಳ್ಳದಿರು.  ಆದರೆ ನನ್ನ ಪ್ರೀತಿ ಗುಲಾಮಿತನವಲ್ಲ. ಅಚ್ಚವಾದದ್ದು, ಸ್ವಚ್ಛವಾಗದು. ಬಾಹ್ಯ ಸಂಕೇತಗಳ, ನಿರೂಪಣೆಗಳ ಹಂಗು ಅದಕ್ಕಿಲ್ಲ. ನನ್ನನ್ನು ನಾನು ಇಲ್ಲವಾಗಿಸಿಕೊಂಡು ರಾವಣನನ್ನು ಹೇಗೆ ಪ್ರೀತಿಸಬಲ್ಲೆನು ? ಅದಕ್ಕೆಂದೇ ಯುದ್ಧ ಬೇಡವೆಂದು ರಾವಣನೊಡನೆ ವಾದಿಸುತ್ತಾ ಯುದ್ಧ ಮಾಡುತ್ತಿದ್ದೇನೆ. ಆತನ ತಪ್ಪುಗಳನ್ನು ಎತ್ತಿ ತೋರುತ್ತಿದ್ದೇನೆ. ದಂಡಕಾರಣ್ಯದಲ್ಲಿ ರಕ್ಷಕ ರಾಜರ ಸಂಹಾರದ ಕುರಿತು ನೀನು ರಾಮನೊಡನೆ ಮಾತನ್ನಾದರೂ ಆಡಿದಂತೆ ಕಾಣುತ್ತಿಲ್ಲ. ಮಾತನಾಡಿ ನಿಲ್ಲಿಸಿಬಹುದಾಗಿದ್ದರೆ ಬಹುಶಃ ನೀನು ಈ ದಿನ ಇಲ್ಲಿಯವರೆಗೂ ಬರುತ್ತಿರಲಿಲ್ಲವೇನೋ.

ಸೀತೆ ತನಗಿನ್ನು ಮಾತನಾಡುವುದು ಇಷ್ಟವಿಲ್ಲವೆಂಬಂತೆ ಆ ಕಡೆಗೆ ತಿರುಗಿಸಿದಳು.

ಮಂಡೋದರಿ ಏನೇನೋ ಯೋಚಿಸುತ್ತಾ  ಅಲ್ಲಿಂದ ಹಿಂದಿರುಗಿದಳು.

*

ಯುದ್ಧ ನುಗ್ಗಿಬರುತ್ತಿದೆ. ರಾಮದೂತನಾದ ವನಚರನೊಬ್ಬನು ಬಂದು ಲಂಕೆಯೊಳಗಿನ ಭವನಗಳಿಗೆಲ್ಲಾ ಬೆಂಕಿಯಿಕ್ಕಿದ್ದಾನೆ. ಅಶೋಕವನದೊಳಗಿನ ಅನೇಕ ಸುಂದರ ತಾಣಗಳನ್ನು ದ್ವಂಸಗೊಳಿಸಿದ್ದಾನೆ.

“ನಗರವು ಆ ವನಚರನಿಗೆ ಕೋಪ ಕೆರಳಿಸಿದ್ದೇ ಆದಲ್ಲಿ ಅದು ಎಂತಹದ್ದೆಂದು ನಾನು ಅರ್ಥಮಾಡಿಕೊಳ್ಳಬಲ್ಲೆ ನಯನಾ, ಆದರೆ ಆತ ಈ ಅಶೋಕವನವನ್ನು  ನಾಶಗೊಳಿಸಿದ್ದಾನೆಂದೆರೆ ಆರ್ಯ ನಾಗರಿಕತೆ ನಶೆಮದ್ದಾಗಿ ನಮ್ಮ ದಕ್ಷಿಣವಾಸಿಗಳನ್ನು ವಿಪರೀತವಾಗಿ ವಶಪಡಿಸಿಕೊಂಡ ಹಾಗಾಯಿತು. ಇದನ್ನೂ ಅರಿತೂ ಅರಿಯದಂತೆ ಎಲ್ಲರೂ ಸುಮ್ಮನಿದ್ದಾರೆ.

ಮಂಡೋದರಿಗೀಗ ರಾವಣನ ದರ್ಶನ ಬರುಬರುತ್ತಾ ಅಪುರೂಪವಾಗಿಬಿಟ್ಟಿದೆ.

ಯುದ್ಧ ಆರಂಭವಾಗಿದೆ.

*
ರಾವಣ ಸಂಹಾರವಾಗಿ, ಸೀತೆಯ ಅಗ್ನಿಪರೀಕ್ಷೆಯೂ ಮುಗಿಯಿತು. ವಿಭೀಷಣನ ಪಟ್ಟಾಭಿಷೇಕವನನ್ನು ಮುಗಿಸಿ ಸೀತೆ, ರಾಮ-ಲಕ್ಷ್ಮಣರು ಅಯೋಧ್ಯೆಗೆ ಹೊರಡಲು ಸಿದ್ಧರಾದರು.  ರಾವಣನ ಅಪರ ಕರ್ಮಗಳನ್ನು ಅರ್ಯ ಪದ್ಧತಿಗಳ ಪ್ರಕಾರ ಒಬ್ಬ ಚಕ್ರವರ್ತಿಗೆ ತಕ್ಕ ರೀತಿಯಲ್ಲಿ ಘನವಾಗಿ ನಡೆಸಬೇಕಾಗಿ ರಾಮನು ವಿಭೀಷಣನಿಗೆ ಹೇಳಿದನು.

ಒಣ ಗಂಧದ ಕೊಂಬೆಗಳಿಂದ, ಅನೇಕ ದಿವ್ಯ ಔಷಧ ಸಂಪದ್ಭರಿತವಾದ ಮೂಲಿಕೆಗಳಿಂದ, ಸುವರ್ಣ ರಜಿತಾದಿ ಲೋಹಗಳಿಂದ ಚಿತೆಯನ್ನು ತಯಾರಿಸಿದರು.

ಸೀತೆಗೆ ಅಗ್ನಿ ಪರೀಕ್ಷೆಯು ಕಲುಗಿಸಿದ ಆತ್ಮಶೋಭೆಯಿಂದ ಇನ್ನೂ ಹೊರಬರಲಾಗಲಿಲ್ಲ. ನಡೆಯುತ್ತಿರುವುದರ  ಬಗ್ಗೆ ಆಕೆಗೆ ಯಾವ ಗಮನವೂ ಇಲ್ಲ.

“ರಾಮಚಂದ್ರಾ !  ಎಲ್ಲಾ ನೀವು ಹೇಳಿದಂತೆಯೇ ಮಾಡಿದ್ದೇನೆ.
ಆದರೆ ಮಂಡೋದರಿ ದೇವಿ ನಿಮ್ಮ ಆಚಾರಗಳನ್ನು ಪಾಲಿಸಲು  ಒಪ್ಪುತ್ತಲೇಯಿಲ್ಲ.”

“ಯಾವ ಆಚಾರಗಳು ?” ರಾಮನಿಗೆ ಕುತೂಹಲ ಕೆರಳಿ ಕೇಳಿದನು.

“ಅವರು ನಿರಲಂಕಾರಿ ಆಗುವುದಿಲ್ಲವಂತೆ. ತಾವು ಬದುಕಿದಷ್ಟು ಕಾಲ ಸರ್ವಾಲಂಕಾರಗಳಿಂದ, ಪುಷ್ಪಾಲಂಕಾರಗಳಿಂದಲೇ ಇರುತ್ತೇನೆಂದು ಹೇಳಿದ್ದಾರೆ. ಅವರನ್ನು ಒಪ್ಪಿಸುವ ಶಕ್ತಿ ನನಗಿಲ್ಲ.”

ರಾಮನು ಏನೂ ಮಾತನಾಡಲಿಲ್ಲ.

ಮಂಡೋದರಿ ವೈಧವ್ಯವನ್ನು ನಿರಾಕರಿಸುತ್ತಿದ್ದಾಳೆ. ಇದೇಗೆ ಸಾಧ್ಯ ? ರಾಮನಿಗೆ ಎಷ್ಟು ಯೋಚಿಸಿದರೂ ಏನೂ ತೋಚಲಿಲ್ಲ. ರಾವಣನ ಅಪರ ಕರ್ಮಗಳು ಮುಗಿಯದೆ ವಿಭೀಷಣ ಪಟ್ಟಾಭಿಷೇಕವಾ ? ಹೇಗೆ ನಡೆಯುತ್ತದೆ ! ತುಂಬಾ ಹೊತ್ತು ಯೋಚಿಸಿ, ದೀರ್ಘ ನಿಟ್ಟುಸಿರು ಬಿಟ್ಟು-

“ರಾವಣನ ಚಿತೆ ಆರಬೇಕೆಂದರೆ ಆಕೆ ವೈಧವ್ಯವನ್ನು ಪಡೆಯಲೇಬೇಕೆಂದು ತಿಳಿಸಿ. ಇದು ನನ್ನ ಆಜ್ಞೆಯೆಂದು ತಿಳಿಸಿ.” ಎಂದನು ಕಟುವಾಗಿ.

*

ವಿಭೀಷಣನು ಮಂಡೋದರಿಯ ಮುಂದೆ ಕೈಕಟ್ಟಿ ನಿಂತು ರಾಮನು ಹೇಳಿದ್ದನ್ನು ಆಕೆಗೆ ತಿಳಿಸಿದ.

“ರಾಮಬಾಣದಂತೆ ಈ ದಿನ ಲಂಕಾನಗರದೊಳಗೆ ರಾಮಾಜ್ಞೆಯೂ ಸಹ ಅನುಲ್ಲಂಘನೀಯವಾಗಿದೆ ತಾಯಿ. ನನ್ನ ನಿಸ್ಸಾಯಕತೆಯನ್ನು ದಯವಿಟ್ಟು ಮನ್ನಿಸಿ.” ಎಂದು ಬೇಡಿಕೊಂಡ.

ಮಂಡೋದರಿ ಕ್ರೋಧವನ್ನು ಅದುಮಿಟ್ಟು ಹೇಳಿದಳು-

“ನೀನು ಚಕ್ರವರ್ತಿಯಾಗಿಯೂ  ನಿಸ್ಸಾಯಕನೆಂದು ಹೇಳಿಕೊಳ್ಳುತ್ತಿರುವೆ. ಆರ್ಯರ ಪಕ್ಷ ವಹಿಸಿ ಆರ್ಯಧರ್ಮವೆಂದು ಬೀಗುತ್ತಿರುವ ‘ಅಗ್ರ ಸೋದರ ಭಕ್ತಿ’ ಯನ್ನು ಅಂಗಾಲಡಿಗೆ ಹಾಕಿ ತುಳಿದಿರುವೆ. ಅದಕ್ಕೆ ರಾಮನು ಖುಷಿಗೊಂಡನೇ ವಿನಃ ಇದು ಆರ್ಯಧರ್ಮವಲ್ಲವೆಂದು, ನಿನ್ನ ಅಣ್ಣನ ಬಳಿ ಹೋಗೆಂದು ನಿನ್ನನ್ನು ಕಳಿಹಿಸಲೇ ಇಲ್ಲ. ಈ ದಿನ ಅವರ ಆಚಾರಗಳನ್ನು ಪಾಲಿಸಬೇಕಾಗಿ ನನ್ನನ್ನು ಆಜ್ಞಾಪಿಸುತ್ತಿರುವುದು ನನಗೆ ವಿಚಿತ್ರವೆನಿಸುತ್ತಿದೆ.”

“ಎಲ್ಲದಕ್ಕಿಂತಲೂ ಧರ್ಮರಕ್ಷಣೆಯೇ ಮುಖ್ಯವೆಂಬುವುದು ರಾಮನ ಭಾವನೆ. ಅದಕ್ಕೆಂದೇ ನನ್ನನ್ನು..”  ವಿಭೀಷಣನ ಮಾತು ಅರ್ಥವಾದಂತೆ ಛೀತ್ಕಾರ ತಗೆದಳು ಮಂಡೋದರಿ.

“ಯಾವುದು ಧರ್ಮವೆಂದು ನಿರ್ಣಯಿಸುವ ಅಧಿಕಾರವನ್ನು ಕೈಗೆ ತಗೆದುಕೊಂಡವರು ಯಾವ ಮಾತುಗಳನ್ನಾದರೂ ಆಡಬಲ್ಲರು ವಿಭೀಷಣಾ. ಆದರೂ, ನನ್ನ ರಾವಣನೇ ಇಲ್ಲವಾದಾಗ ಈ ಚರ್ಚೆಗಳೆಲ್ಲವೂ ನನಗೆ ಅನವಶ್ಯಕ.”

“ಮತ್ತೆ ಈಗಿನ ಕರ್ತವ್ಯದ ಸಂಗತಿಯೇನು ?”

ಮಂಡೋದರಿ ಕೆಲ ಕ್ಷಣ ನಿರ್ಲಿಪ್ತವಾಗಿ ನೋಡಿದಳು. ಆ ನಂತರ  ಸಣ್ಣಗೆ ನಕ್ಕಳು. ಸ್ವಾಧಿಕಾರವೇ ಮೈದುಂಬಿ ನಕ್ಕಂತೆ ನಕ್ಕಳು.

“ವಿಭೀಷಣಾ ! ಇದು ನನ್ನ ಆಜ್ಞೆಯೆಂದು ರಾಮನಿಗೆ ಹೇಳು. ರಾವಣನ ಚಿತೆ ಲಂಕಾನಗರದೊಳಗೆ ಆರದಂತೆ ಸದಾ ಹೀಗೆ ಉರಿಯುತ್ತಲೇ ಇರತ್ತದೆ. ಆತನ ಮೇಲಿನ ನನ್ನ ಪ್ರೇಮಾಗ್ನಿಯೂ ಸಹ ನನ್ನ ಎದೆಯೊಳಗೆ ಉರಿಯುತ್ತಲೇ ಇರುತ್ತದೆ. ಈ ಮಂಡೋದರಿ ಅರ್ಯಧರ್ಮಗಳನ್ನು
ಅನುಸರಿಸಿ ನಿರಲಂಕಾರಿಯಾಗುವವಳಲ್ಲ. ವೈಧವ್ಯವನ್ನು ಹೊಂದುವವಳಲ್ಲ. ರಾವಣಕಾಷ್ಟವು ಉರಿಯುತ್ತಲೇ ಇರಬೇಕು. ನೀನು ಬೇಕಾದರೆ ಪಟ್ಟಾಭಿಷೇಕ ಮಾಡಿಕೋ- ನಾನು ನನ್ನ ಗೆಳತಿಯರೊಡನೆ, ಆಪ್ತರೊಡನೆ ಸೇರಿ ಹತ್ತಿರದ ಕಾಡಿಗೆ ಹೋಗಬಿಡಲು ಇಚ್ಚಿಸಿದ್ದೇನೆ. ಆದರೆ ನೀನು ನನ್ನ ಆಜ್ಞೆಯನ್ನು ಮರೆಯದೆ ಪಾಲಿಸಬೇಕು- ರಾವಣನ ಚಿತೆ ಆರಲು ಬಿಡದಿರು. ಆಶೋಕವನವನ್ನು ಒಣಗಲು ಬಿಡದಿರು.”

ವಿಭೀಷಣನು ರಾಮನಿಗೆ ಬೇಡಿ, ಒಪ್ಪಿಸಿ ಪಟ್ಟಾಭಿಷೇಕ ಮಾಡಿಸಿಕೊಂಡ.

*

ಎಲೆಯುದುರೋ ಕಾಲದಲ್ಲಿಯೂ ಕಾಡು ಸುಂದರವಾಗಿಯೇ ಇರುತ್ತದೆ. ಯಾವ ಋತುವಿನ ಸೊಬಗು ಆ ಋುತುವಿನದು.  ಮಂಡೋದರಿಗೆ ಮುಪ್ಪು ಆವರಿಸಿಕೊಳ್ಳುತ್ತಿದ್ದರೂ ಅಸಾಮಾನ್ಯ ಕಾಂತಿಯಿಂದ ನೋಡುಗರ ಮನಕ್ಕೆ ಪುಳಕವನ್ನುಂಟು ಮಾಡುವಂತಿದೆ ಆಕೆಯ ಮೈಮಾಟ. ಕಾಡೊಳಗಿನ ಮಾಮರಗಳ ಮಧ್ಯೆ ತಾನೂ ಒಂದು ಮಾಮರವೆಂಬಂತೆ ಬದುಕುತ್ತಿದ್ದಾಳೆ ಆಕೆ.

ಒಂದು ದಿನ ವಿಭೀಷಣನು ಮಂಡೋದರಿಯ ಬಳಿ ಬಂದ.

“ತಾಯೀ ! ನಮಗೀಗ ವಯಸ್ಸಾಗಿದೆ. ಸುತ್ತಲೂ ಅನೇಕ ಮಾರ್ಪಾಡುಗಳಾಗಿವೆ. ರಾಮನು ಸೀತೆಯನ್ನು ಪರಿತ್ಯಜಿಸಿದ್ದಾನೆ. ಸೀತೆ ರಾಮನಿಂದ ವಿಮುಕ್ತಳಾಗಿ ತನ್ನ ತಾಯಿಯ ಮಡಿಲಿಗೆ ಹೋಗಿಬಿಟ್ಟಿದ್ದಾಳೆ. ರಾಮನೂ ಸಹ ಈ ಲೋಕದಿಂದ ನಿರ್ಗಮಿಸಿದ್ದಾನೆ. ಆದರೆ ಅಣ್ಣನಾದ ರಾವಣನ ಚಿತೆ ಉರಿಯುತ್ತಲೇ ಇದೆ. ನೀವು ಅಪ್ಪಣೆ ಕೊಟ್ಟರೆ -”

“ಉರಿಯಲಿ ಬಿಡು ವಿಭೀಷಣಾ ! ಆರ್ಯ ನಾಗರಿಕತೆಯ ಮೇಲೆ ಒಬ್ಬ ದ್ರಾವಿಡದ ಹೆಣ್ಣು ಹಾರಿಸಿದ ಬಂಡಾಯದ ಭಾವುಟದಂತೆ ಆ ಚಿತೆಯ ಜ್ವಾಲೆಯು ನಾಲ್ಕು ದಿಕ್ಕಿಗೂ ಹರಡಲಿ ಬಿಡು. ಆ ಚಿತೆ ಈಗ ನೀನು ಆರಿಸಿದರೂ ಆರುವುದಿಲ್ಲ. ಲಂಕೆಯಲ್ಲಷ್ಟೇಯಲ್ಲ, ಪ್ರತೀ ನಗರದಲ್ಲಿಯೂ ರಾವಣಕಾಷ್ಟವೊಂದು ಉರಿಯುತ್ತಲೇ ಇರುತ್ತದೆ. ರಾವಣನ ಚಿತೆಯನ್ನು ಆರಲಾರದಂತೆ ಮಾಡಿದ್ದು ನಾನಲ್ಲ. ಅದು ಸ್ವತಃ ರಾಮನ ಆರ್ಯ ಸಂಸ್ಕೃತಿ. ಪ್ರತಿ ನಗರದಲ್ಲಿಯೂ ಅವು ಉರಿದರಷ್ಟೇ ತಮಗೆ ಉಳಿವು ಎಂದು ಆ ಸಂಸ್ಕೃತಿ ಭಾವಿಸುವ ದಿನವೊಂದು ಬಂದೇ ಬರುತ್ತದೆ. ಪ್ರತಿ ನಗರದಲ್ಲಿಯೂ ರಾವಣಕಾಷ್ಟಗಳನ್ನು ಉರಿಸಿ ತನ್ನನ್ನು ರಕ್ಷಿಸಿಕೊಳ್ಳಲೆಂದು ನೋಡುತ್ತದೆ. ಆದರೆ ಯಾವುದೋ ಒಂದು ದಿನ ಆ ಉರಿ ಅವರನ್ನೇ ದಹಿಸುತ್ತದೆ. ಸರ್ವನಾಶ ಮಾಡುತ್ತದೆ. ಇದು ಹೀಗೆ ನಡೆಯುತ್ತಲೇ ಇರುತ್ತದೆ. ಮತ್ತೊಂದು ಕಡೆ ಅಶೋಕವನವು ಹಚ್ಚಹಸಿರಾಗಿ ನಮ್ಮ ಜಾತಿಯ ಅರಣ್ಯ ಜೀವನ ಪರಿಮಳಕ್ಕೆ ಸಂಕೇತವಾಗಿ  ಉಳಿದುಬಿಡುತ್ತದೆ.”

ರಾವಣನ ನೆನಪಿನಿಂದಾಗಿ ಕಣ್ಣೀರು ತುಂಬಿಕೊಂಡವು ಮಂಡೋದರಿಯ ಕಂಗಳಲ್ಲಿ. ವಿಚಿತ್ರವೆಂಬಂತೆ ಆ ಕಂಗಳಲ್ಲಿ ಒಂದು ಕಣ್ಣು ಬೆಂಕಿಕಿಡಿಯಂತೆ ಕೆಂಪಗೆ ಉರಿಯುತ್ತಿದೆ. ಮತ್ತೊಂದು  ಹಸಿರ ಕಾಂತಿಯನು ಹೊರಚಿಮ್ಮುತ್ತಿದೆ.

3 comments

  1. “ಮದುವೆಯ ಮುಂಚೆ ನೀನು ಅಲಂಕರಣೆ ಮಾಡಿಕೊಳ್ಳಲಿಲ್ಲವಾ ? ನಾವು ನಮ್ಮ ಆನಂದಕ್ಕಾಗಿ, ವಿಲಾಸಕ್ಕಾಗಿ, ನಮ್ಮ ದೇಹವನ್ನು ಗೌರವಿಸುವುದಕ್ಕಾಗಿ ಅಲಂಕರಿಸಿಕೊಳ್ಳುತ್ತೇವೆ. ಅದನ್ನು ನೋಡಿ ಗಂಡಂದಿರು ಸಂತೋಷಗೊಳ್ಳಬಹುದು. ಕೆಲವರು ಬೇಸರವೂ ಪಡಬಹುದು. ಆದರೆ ನಾವೂ, ನಮ್ಮ ದೇಹಗಳೂ ನಮ್ಮದಲ್ಲವಾ ಸೀತಾ ? ನಾವು ಅವುಗಳನ್ನು ಗೌರವಿಸಬೇಕಲ್ಲವೇ ?”

    ಈ ಸಾಲುಗಳು ಇಡೀ ಕತೆಯ ಧ್ವನಿ

  2. ಧ್ವನಿಪೂರ್ಣ ಕತೆ. ಸಾಂಸ್ಕೃತಿಕ ಸಂಘರ್ಷ, ಸ್ತ್ರೀ ಸಂವೇದನೆ ಜತೆಯಾಗಿ ಮೂಡಿರುವ ಪರಿ ಅನನ್ಯ.

Leave a Reply