ಪಾರಿವಾಳದ ಮರ.. 

ಅದೊಂದು ಪಾರಿವಾಳ ನಮ್ಮ ರೂಮಿನ ಬಾಲ್ಕನಿಯ ಕಂಬಿಯ ಮೇಲೆ ದಿನಕ್ಕೆ ಎರಡು ಬಾರಿ ನಿಯಮಿತವಾಗಿ ಬಂದು ಕೂರುತ್ತಿತ್ತು. ಮೊದಮೊದಲು ರೂಮಿನಲ್ಲಿ ಸಣ್ಣ ಹೆಜ್ಜೆಯ ಸಪ್ಪಳವಾದರೂ ಪುರ್ರೆಂದು ಹಾರಿ ಹೋಗುತ್ತಿದ್ದ ಪಾರಿವಾಳ, ಕ್ರಮೇಣವಾಗಿ ಬಾಲ್ಕನಿಗೆ ಸ್ನಾನದ ನಂತರ ಒದ್ದೆಯಾಗಿರುತ್ತಿದ್ದ ಟವೆಲ್ ಹರವಿ ಹಾಕಲು ಹೊರಟಾಗಲೂ ಒಂದಿಷ್ಟೂ ಕದಲದೆ ಕೂರುವ ಧೈರ್ಯ ತೋರಲು ಶುರುವಿಟ್ಟುಕೊಂಡಿತ್ತು.

ನಾನು ಬೆಂಗಳೂರಿನ ಜೆ.ಪಿ ನಗರದ ಪಿ.ಜಿಗೆ ಬಂದ ಮೊದಲಿನಿಂದಲೂ ರೂಮಿನ ಬಾಲ್ಕನಿಯ ಸಣ್ಣ ಅಂಗಳದಲ್ಲಿ ಪಾರಿವಾಳಗಳಿಗೆ ಅಂತಲೇ ಹಳೆಯ ತಟ್ಟೆಯೊಂದರಲ್ಲಿ ನೀರನ್ನು ತುಂಬಿಡುವ ಅಭ್ಯಾಸವನ್ನು ಇಟ್ಟುಕೊಂಡಿದ್ದೆ. ಬಾಲ್ಕನಿಯ ಕಂಬಿಯ ಮೇಲೆ ಕೂರುತ್ತಿದ್ದ ಅದೊಂದು ಪಾರಿವಾಳ ಕೂಡ ಆರಂಭದಲ್ಲಿ ಉಳಿದ ಪಾರಿವಾಳಗಳಂತೆ ನೀರಿಗಾಗಿ ಬರುತ್ತಿದೆ ಎಂದುಕೊಂಡಿದ್ದ ನನ್ನ ನಂಬಿಕೆ ದಿನಕಳೆದಂತೆ ಸುಳ್ಳು ಎನಿಸತೊಡಗಿತ್ತು.

ವಾರಗಳ ಹಿಂದಷ್ಟೇ ಬಾಲ್ಕನಿಯ ಎರಡೂ ತುದಿಗಳಿಗೆ ಹಾರುತ್ತ, ನಿಯಮಿತವಾಗಿ ಕೂರುತ್ತಿದ್ದ ಕಂಬಿಗಳನ್ನು ಅದಲುಬದಲು ಮಾಡುತ್ತ, ದೂರದಿಂದಲೇ ರೂಮಿನ ಒಳಗನ್ನು ಗಮನಿಸುತ್ತಿದ್ದ ಪಾರಿವಾಳ ನಿಧಾನವಾಗಿ ಬಾಗಿಲ ಮೂಲಕ ರೂಮನ್ನು ಪ್ರವೇಶಿಸುವ ಆವೇಶ ತೋರಿಸಿತ್ತು. ಅದಾದ ಕೆಲವೇ ದಿನಗಳಿಗೆ ತನ್ನ ಇರಾದೆಯನ್ನು ಪ್ರಯತ್ನದ ಮೂಲಕ ನಿಧಾನವಾಗಿ ಪಾರಿವಾಳ ಸಾಧ್ಯಗೊಳಿಸಿಕೊಂಡಿತು. ಗಂಧದಕಡ್ಡಿಯ ಗಾತ್ರದ ತನ್ನ ಕಿರುಬೆರಳುಗಳ ಪಾದದ ಮೂಲಕ ರೂಮನ್ನು ಪ್ರವೇಶಿಸಿದ ಪಾರಿವಾಳ ವಿಚಿತ್ರವಾದ ರೀತಿಯಲ್ಲಿ ನಡೆದುಕೊಳ್ಳತೊಡಗಿತ್ತು. ಕೆಲವೊಮ್ಮೆ ಒಳಗೆ ಯಾರಾದರೂ ಇರಬಹುದಾ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಲು ನಾನು ಬಂದಿದ್ದು ಎನ್ನುವಂತೆ ಬಂದಷ್ಟೇ ವೇಗವಾಗಿ ಹಾರಿಹೋಗುತ್ತಿದ್ದರೆ, ಮತ್ತೆ ಕೆಲವೊಮ್ಮೆ ಯಾವುದೋ ತುದಿಯಲ್ಲಿ ಕೂತು ಗುಟುರು ಹಾಕುತ್ತಿತ್ತು.

ಅದಾದ ಬಳಿಕ ಕೇವಲ ಐದಾರು ಅಂಗುಲದಷ್ಟು ರೂಮಿನ ಒಳಗೆ ಬಂದ ಪಾರಿವಾಳ ನಾಲ್ಕೈದು ದಿನಗಳು ಕಳೆದರೂ ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳಲಿಲ್ಲ. ರೂಮನ್ನು ಪ್ರವೇಶಿಸುವ ಧೈರ್ಯ ತೋರಿದ ನಂತರವೆ  ರೂಮಿನೊಳಗೆ ಸಣ್ಣ ವ್ಯತಿರಿಕ್ತ ಸದ್ದಾದರೂ ಅಷ್ಟೇ ವೇಗವಾಗಿ ಹೊರಗೆ ಹಾರಿ ಹೋಗಿಬಿಡುತ್ತಿತ್ತು. ಹೊರಗೆ ಹಾರಿಹೋಗುವುದು ಅಸಾಧ್ಯ ಎನಿಸಿದ ಕ್ಷಣದಲ್ಲಿ ರೂಮಿನ ಅಟ್ಟದ ತುದಿಯನ್ನು ಆಶ್ರಯಿಸಿ ಭಯದಿಂದ ಕೂತುಬಿಡುತ್ತಿತ್ತು.

ಆದರೆ ನಾನು ಯಾವತ್ತೂ ಪಾರಿವಾಳವನ್ನು ಹಿಡಿಯಬೇಕು ಎನ್ನುವ ಪ್ರಯತ್ನವನ್ನ ಮಾಡಲಿಲ್ಲ. ಇಷ್ಟಾದರೂ ಪಾರಿವಾಳ ಮಾತ್ರ ದಿನದಿಂದ ದಿನಕ್ಕೆ ನನ್ನನ್ನು ಪರೋಕ್ಷವಾಗಿ ಪರೀಕ್ಷೆಗೆ ಅಣಿಗೊಳಿಸುತ್ತಲೇ ಇತ್ತು. ಚಕ್ರವರ್ತಿಯೊಬ್ಬ ನಿಧಾನವಾಗಿ ತನ್ನ ರಾಜ್ಯವನ್ನ ವಿಸ್ತಾರಗೊಳಿಸಿಕೊಳ್ಳುವಂತೆ ಪಾರಿವಾಳ ಕೂಡ ರೂಮನ್ನು ತನ್ನ ಹೆಜ್ಜೆಗಳ ಮೂಲಕ ವಿಸ್ತರಿಸಿಕೊಳ್ಳತೊಗಿತ್ತು. ಕೆಲವೇ ದಿನಗಳಲ್ಲಿ ನಿರ್ಭಯವಾಗಿ ರೂಮಿನಲ್ಲಿ ಓಡಾಡುವುದಕ್ಕೆ ಆರಂಭಿಸಿತು. ಮೊದಲು ಬಾಲ್ಕನಿಯ ಯಾವುದೋ ಕಂಬಿಯ ಮೇಲೆ ಕೂರುತ್ತಿದ್ದ ಪಾರಿವಾಳ ಇದೀಗ ಒಂದಿಷ್ಟೇ ಕೈ ಚಾಚಿದರೂ ಹಿಡಿತಕ್ಕೆ ಸಿಗುವಷ್ಟು ಹತ್ತಿರಕ್ಕೆ ಬಂದಿತ್ತು. ಎರಡೇ ತಿಂಗಳಿನಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾಗಲೇ ನನ್ನ ಕಾಲಿನ ಬಳಿ ಓಡಾಡುವಷ್ಟು ಸಲುಗೆಯನ್ನು ಬೆಳೆಸಿಕೊಂಡಿದ್ದ ಪಾರಿವಾಳ, ರಾತ್ರಿಯ ವೇಳೆ ಮಾತ್ರ ರೂಮಿನ ಅಟ್ಟದ ಮೇಲೆ ತುಂಬಿಟ್ಟಿದ್ದ ಪುಸ್ತಕಗಳ ಕಾವಿನ ನಡುವೆ ಬೆಚ್ಚಗೆ ನಿದ್ರಿಸುತ್ತಿತ್ತು.

ಆದರೆ ಪಾರಿವಾಳದ ಈ ಯಾವ ನಡೆಯೂ ನನ್ನನ್ನು ಸಂತೋಷಗೊಳಿಸಲಿಲ್ಲ. ಮನುಷ್ಯರನ್ನು ಕಂಡರೆ ಭಯಗ್ರಸ್ತವಾಗಿ ಪಲಾಯನ ಮಾಡುವ ದುರ್ಭಲ ಹಕ್ಕಿಯೊಂದು ಹೀಗೆ ಮನುಷ್ಯನಿದ್ದಲ್ಲಿಗೆ ಬಂದು ಕೂರುವ ಧೈರ್ಯ ತೋರಿದರ ಹಿಂದಿನ ಮರ್ಮ ಏನಾಗಿರಬಹುದು ಎನ್ನುವುದಷ್ಟೇ ನನ್ನನ್ನು ಯಕ್ಷಪ್ರಶ್ನೆಯಾಗಿ ಆವರಿಸಿಕೊಳ್ಳತೊಡಗಿತ್ತು. ಪಾರಿವಾಳ ತನ್ನ ಸಾಸುವೆ ಕಾಳಿನ ಬಣ್ಣದ ಕಣ್ಣುಗಳ ಮೂಲಕ ನನ್ನನ್ನು ದಿಟ್ಟಿಸಿ ನೋಡುತ್ತಿದೆ ಎನ್ನುವುದಕ್ಕಿಂತ, ರೂಮಿನ ವಾತಾವರಣ ಸೇರಿದಂತೆ ನನ್ನನ್ನು ಕೂಲಂಕುಷವಾಗಿ ಪರಿಶೀಲನೆ ಮಾಡುತ್ತಿರುಬಹುದಾ ಎನ್ನುವ ಅನುಮಾನವೇ ಹೆಚ್ಚಾಗತೊಡಗಿತ್ತು. ಪಾರಿವಾಳದ ಪ್ರತಿ ನಡಿಗೆಯೂ ಪ್ರಕೃತಿಯ ಯಾವುದೋ ಅನೂಹ್ಯ ಬಿಂದುವೊಂದನ್ನು ಬೆಸೆಯಲು ಹವಣಿಸುತ್ತಿರುವ ತಂತುವಿನಂತೆ ಗೋಚರಿಸುತ್ತಿತ್ತು.

ಆಗ ಸುದ್ದಿ ವಾಹಿನಿಯೊಂದರಲ್ಲಿ ನಾನು ಕ್ರೀಡಾ ವರದಿಗಾರನಾಗಿದ್ದೆ. ಐಪಿಎಲ್ ನಡೆಯುತ್ತಿದ್ದರಿಂದ ಆವತ್ತು ಮ್ಯಾಚ್ ರಿಪೋರ್ಟ್ ಬರೆದು ರೂಮಿಗೆ ಬರುವಷ್ಟರಲ್ಲಿ ರಾತ್ರಿಯಾಗಿತ್ತು. ದಣಿವಾಗಿದ್ದರಿಂದ ರೂಮಿಗೆ ಬಂದವನು ನೇರವಾಗಿ ಫ್ಯಾನ್ ಹಾಕುತ್ತಿದ್ದಂತೆ ರೂಮಿನ ಯಾವುದೋ ಮೂಲೆಯಲ್ಲಿ ಉದುರಿ ಬಿದ್ದಿದ್ದ ಪಾರಿವಾಳದ ಪುಕ್ಕಗಳು ಗಾಳಿಯಲ್ಲಿ ಹಾರಾಡುತ್ತಿದ್ದದ್ದು ಕಾಣಿಸಿತು. ರೂಮಿನ ಬಾಗಿಲು ತೆರೆದು ಒಳಗೆ ಬರುತ್ತಿದ್ದಂತೆ ರೂಮಿನ ಯಾವುದೇ ಮೂಲೆಯಲ್ಲಿದ್ದರೂ ತನ್ನ ಇರುವನ್ನು ಪ್ರಚುರಪಡಿಸುತ್ತಿದ್ದ ಪಾರಿವಾಳ ಆವತ್ತು ಮಾತ್ರ ಅಷ್ಟು ಗದ್ದಲ ಮಾಡಿದರೂ ಕಾಣಿಸಲಿಲ್ಲ. ಬಾಲ್ಕನಿಯಲ್ಲಿರಬಹುದು ಎನಿಸಿ ಕಂಬಿಗಳತ್ತ ನೋಡಿದೆ. ಅಲ್ಲಿಯೂ ಪಾರಿವಾಳದ ಸುಳಿವಿರಲಿಲ್ಲ.

ದಣಿದಿದ್ದರಿಂದ ಬಟ್ಟೆಯನ್ನು ಬದಲಿಸದೆ ಹಾಸಿಗೆಯ ಮೇಲೆ ಅಡ್ಡಾದವನಿಗೆ ನನ್ನ ದಿಂಬಿನ ಬಳಿ ಎಳೆಯ ಮಗುವಿನ ನುಣುಪನ್ನು ಹೋಲುವ ಪಾರಿವಾಳದ ಪದರು ಪುಕ್ಕಗಳ ಜತೆ ನಾಲ್ಕೈದು ಹುಲ್ಲಿನ ಎಳೆಗಳು ಚುಚ್ಚಿದವು. ತನ್ನ ಪಾಡಿಗೆ ತಾನು ಎನ್ನುವಂತೆ ತಿರುಗುತ್ತಿದ್ದ ಫ್ಯಾನ್‍ನ್ನು ನಿಲ್ಲಿಸಿ ದಿಂಬಿನ ಮೇಲೆ ಬಿದ್ದಿದ್ದ ಹುಲ್ಲನ್ನು ಮುಟ್ಟಿನೋಡಿದೆ. ಅದು ಯಾವುದೋ ವಿಚಿತ್ರ ಬಗೆಯ ಹುಲ್ಲು. ಗಂಟು ಗಂಟಾಗಿದ್ದ ಹುಲ್ಲುನ್ನು ಈ ಹಿಂದೆ ಎಲ್ಲಿಯೂ ನೋಡಿರಲಿಲ್ಲ. ಕಡೆಗೆ ಅದೇ ಹುಲ್ಲಿನ ಜಾಡು ಹಿಡಿದು ಇಡೀ ರೂಮು ಜಾಲಾಡಿದೆ.

ಬಾಲ್ಕನಿಯಲ್ಲಿ, ಮಂಚದ ಕೆಳಗೆ, ಟೇಬಲ್ ಹಾಗೂ ಬೀರುವಿನ ಹಿಂದೆ ಹುಡುಕಿದರೂ ಏನೂ ಸಿಗಲಿಲ್ಲ. ಕಡೆಗೆ ಪಾರಿವಾಳ ಈ ನಡುವೆ ಕೂರಲು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ಅಟ್ಟದ ತುದಿಯೊಂದನ್ನು ನೋಡಬೇಕು ಎನಿಸಿತು. ಅಟ್ಟವನ್ನು ಬಾಗಿಲ ಸಹಾಯದಿಂದ ಹತ್ತಿ ನೋಡಿದಾಗ ನನಗೆ ದಿಗ್ಬ್ರಾಂತಿಯೊಂದು ಕಾದಿತ್ತು. ಕಳೆದು ಮೂರು ತಿಂಗಳಿನಿಂದ ಎಸ್‍ಐಟಿ ಅಧಿಕಾರಿಯಂತೆ ನನ್ನ ನಡವಳಿಕೆ ಸೇರಿದಂತೆ ರೂಮಿನ ವಾತವರಣವನ್ನು ಪರಿಶೀಲನೆ ಮಾಡಿದ್ದರ ಗುರುತನ್ನು ಪಾರಿವಾಳ ಅಟ್ಟದಲ್ಲಿ ಬಯಲು ಮಾಡಿತ್ತು. ಅಟ್ಟದ ಮೂಲೆಯಲ್ಲಿ ನಾನು ಮೈಸೂರಿನಿಂದ ತಂದಿಟ್ಟಿದ್ದ ಬ್ಯಾಗ್‍ನ ಮೇಲೆ ಪಾರಿವಾಳ ಸಣ್ಣಹುಲ್ಲಿನ ರಾಶಿಯನ್ನು ಗುಡ್ಡೆ ಹಾಕುವ ಮೂಲಕ ಗೂಡು ಕಟ್ಟಿದರ ಜತೆ ಮೊಟ್ಟೆಯೊಂದನ್ನು ಇಟ್ಟಿತ್ತು.

 

ಪಾರಿವಾಳ ಮೊಟ್ಟೆಯನ್ನು ಇಡುವುದಕ್ಕಾಗೇ ನನ್ನನ್ನು ಮೂರು ತಿಂಗಳ ದೀರ್ಘ ಪರೀಕ್ಷೆಗೆ ಒಡ್ಡಿದೆ ಎನ್ನುವುದು ಖಾತ್ರಿಯಾಗಿತ್ತು. ಆದರೆ ಪಾರಿವಾಳದ ಎದುರು ಮಾತ್ರ ನನಗೆ ಏನೂ ತಿಳಿದೇ ಇಲ್ಲ ಎನ್ನುವಂತೆ ಇರವುದಕ್ಕೆ ತೀರ್ಮಾನಿಸಿಕೊಂಡೆ. ಇಲ್ಲಿಯವರೆಗೆ ನನ್ನನು ಪಾರಿವಾಳ ಗಮನಿಸಿದಂತೆ ನಾಳೆಯಿಂದ ಪಾರಿವಾಳದ ನಡೆಯನ್ನು ನಾನು ಗಮನಿಸಬೇಕು ಎನಿಸಿತು. ಪಾರಿವಾಳ ರೂಮು ಸೇರುವ ಮೊದಲು ಎಲ್ಲಿಂದ ಬರುತ್ತದೆ? ಅದು ನನ್ನ ರೂಮನ್ನು ಬಿಟ್ಟರೆ ಮತ್ತೆಲ್ಲಿಗೆ ಹೋಗಿ ಬರುತ್ತದೆ! ಈ ಪಾರಿವಾಳಕ್ಕೆ ಮತ್ತೊಂದು ಗೂಡು  ಎನ್ನುವುದು ಇದೆಯಾ? ಇದ್ದರೆ ಅದು ಎಲ್ಲಿದೆ? ಎನ್ನುವುದನ್ನು ಕಂಡುಹಿಡಿಯಬೇಕು ಎನಿಸಿತು. ಆದರೆ ಪಾರಿವಾಳದ ಆ ಎಲ್ಲಾ ಗುಪ್ತ ಹೆಜ್ಜೆಗಳ ರಹದಾರಿಯನ್ನು ಕಂಡುಕೊಳ್ಳುವುದು ಅಷ್ಟು ಸಲೀಸಾಗಿರಲಿಲ್ಲ.

ನಾನು ಹಾಸಿಗೆಯಿಂದ ಏಳುವ ಮೊದಲೇ ಅಟ್ಟದಲ್ಲಿ ಕೂತಿರುತ್ತಿದ್ದ ಪಾರಿವಾಳ, ಕೆಲವೊಮ್ಮೆ ಇಡೀ ದಿನ ರೂಮನ್ನು  ಬಿಟ್ಟು ಕದಲುತ್ತಿರಲಿಲ್ಲ. ಹೀಗೆ ಗುಟ್ಟು ಬಿಟ್ಟುಕೊಡದ ಪಾರಿವಾಳ ಹಾಗೂ ಹಠಬಿಟ್ಟುಕೊಡದ ನಾನು ಇಬ್ಬರೂ ಅನಧಿಕೃತವಾದ ಸಂಕೀರ್ಣ ಮಾನಸಿಕ ಯುದ್ಧವೊಂದರಲ್ಲಿ ಸಿಕ್ಕು ಹಾಕಿಕೊಂಡೆವು.

ಆದರೆ ಒಂದು ದಿನ ರಂಗಶಂಕರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಹೋಗಬೇಕಾಗಿತ್ತು. ಅದಕ್ಕಾಗಿ ಮೂರು ದಿನಗಳ ಮೊದಲೇ ಆಫೀಸಿನಲ್ಲಿ ರಜೆ ತೆಗೆದುಕೊಂಡಿದ್ದೆ. ಅದೇ ದಿನ ಪಾರಿವಾಳ ಮಧ್ಯಾಹ್ನವಾದರೂ ರೂಮಿಗೆ ಬಂದಿಲ್ಲದೇ ಇರುವುದನ್ನು ಗಮನಿಸಿದೆ. ಅಟ್ಟದ ಮೇಲೆ ಹತ್ತಿ ನೋಡಿದಾಗ ಪಾರಿವಾಳದ ಮೊಟ್ಟೆ ಬಿಳಿಯ ಬಣ್ಣದಿಂದ ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗಿಕೊಳ್ಳುತ್ತಿದ್ದು ಕಾಣಿಸಿತು. ಇನ್ನು ಕೆಲವೇ ದಿನಗಳು ಪಾರಿವಾಳ ಕಾವು ನೀಡುವುದನ್ನು ಮುಂದುವರೆಸಿದರೆ ಮೊಟ್ಟೆಯೊಡೆದು ಮರಿಯೊಂದು ಹೊರಬರುವ ಸೂಚನೆ ಕಾಣಿಸಿತು. ಅದೇ ಕ್ಷಣದಲ್ಲಿ ಇಂದೇ ಏಕೆ ಪಾರಿವಾಳದ ಜಾಡನ್ನು ಹಿಡಿಯಬಾರದು ಎನಿಸಿತು. ರಂಗಶಂಕರದ ಕಾರ್ಯಕ್ರಮಕ್ಕಿಂತ ಅದರ ಜಾಡು ಅತಿಮುಖ್ಯ ಎನಿಸಿ ಬಾಲ್ಕನಿಯಲ್ಲಿ ನಿಂತು ಪಾರಿವಾಳಕ್ಕಾಗಿ ಕಾಯುತ್ತ ನಿಂತುಕೊಂಡೆ. ಎಷ್ಟೋ ಹೊತ್ತಿನ ಬಳಿಕ ಹಕ್ಕಿಯೊಂದು ಸೀದಾ ರೂಮಿನ ಕಡೆಗೆ ಹಾರಿ ಬರುತ್ತಿರುವುದು ದೂರದಿಂದ ಕಾಣಿಸಿತು.

ಹಾರಿ ಬರುತ್ತಿರುವ ಹಕ್ಕಿ ಹತ್ತಿರವಾಗುತ್ತಿದ್ದಂತೆ ಅದು ನಮ್ಮದೇ ರೂಮಿನ ಪಾರಿವಾಳ ಎನ್ನುವುದು ಖಚಿತವಾಗಿತ್ತು. ನಿಧಾನವಾಗಿ ಪಾರಿವಾಳ ಹಾರಿ ಬಂದ ದಿಕ್ಕಿನ ಕಡೆಗೆ ದೃಷ್ಠಿ ಹರಿಸಿ ನೋಡಿದೆ. ಅದು ಒಂದಿಷ್ಟು ದೂರದಲ್ಲಿದ್ದ ಕಮರ್ಷಿಯಲ್ ಬಿಲ್ಡಿಂಗ್‍ನ ಕಡೆಯ ಮಹಡಿಯಿಂದ ಬಂದಿರಬಹುದು ಎನಿಸಿತು. ಅದೇ ಬಿಲ್ಡಿಂಗ್‍ನ ಕಡೆಯ ಫ್ಲೋರ್ ಮೇಲೆ ಫೇರ್ ಅಂಡ್ ಲವ್ಲಿ ಅಡ್ವಟ್ರೈಸಿಂಗ್ ಹೋರ್ಡಿಂಗ್ವೊಂದನ್ನು ನಿರ್ಮಿಸಿದ್ದು ಪಾರಿವಾಳಕ್ಕೆ ಪೂರಕವಾಗಿಯೇ ಕಾಣಿಸಿತು. ಆ ಪಾರಿವಾಳ ಹಾರಿ ಬಂದಿದ್ದನ್ನು ಸರಿಯಾಗಿ ಗ್ರಹಿಸಿದರೇ ಅದೇ ಹೋರ್ಡಿಂಗ್‍ನ ಕಡೆಯಿಂದಲೇ ಬಂದಿದೆ ಎನ್ನುವುದು ಮೊದಲು ಅನುಮಾನವಾದರೂ, ಕ್ರಮೇಣವಾಗಿ ಅದೇ ಸತ್ಯ ಎನ್ನುವಂತೆ ಗೋಚರಿಸಿತ್ತು.

ಹೆಚ್ಚು ಯೋಚಿಸದೇ ಸೀದಾ ಪಾರಿವಾಳ ಹಾರಿ ಬಂದಿರಬಹುದು ಎನ್ನುವ ಅನುಮಾನವನ್ನು ಭಿತ್ತಿದ್ದ ಬಿಲ್ಡಿಂಗ್‍ನತ್ತ ನಡೆದುಹೋದೆ. ಫೇರ್ ಅಂಡ್ ಲವ್ಲಿಯ ಹೋರ್ಡಿಂಗ್‍ನ ಆ ಬಿಲ್ಡಿಂಗ್‍ನ ಕಡೆಯ ಫ್ಲೋರ್‍ಗೆ ಹತ್ತುವುದು ಅಷ್ಟು ಸುಲಭವಾಗಿರಲಿಲ್ಲ. ಕೆಳಗಿನ ಅಂಗಡಿಯ ಮಳಿಗೆಗಳು ಹಾಗೂ ಹೊಟೇಲ್‍ನ ಹಳೆಯ ಕುರ್ಚಿ, ಟೇಬಲ್‍ನಂತಹ ಮರದ ಸಾಮಾನುಗಳನ್ನು ಮನಸೋಇಚ್ಛೆ ತುಂಬಿಟ್ಟಿದ್ದರು. ಅದರಲ್ಲೂ ಕೆಳಗಿನ ಹೊಟೇಲ್‍ನಲ್ಲಿ ಕ್ಲೀನಿಂಗ್ ಕೆಲಸಕ್ಕಿದ್ದ ಉತ್ತರ ಭಾರತದ ಹುಡುಗರು ಮಾಡಿದ್ದ ಗಲೀಜು ವಾಕರಿಕೆ ತರಿಸುವಂತಿತ್ತು. ಅಷ್ಟಾದರೂ ಪಾರಿವಾಳದ ಜಾಡು ಭೇದಿಸಬೇಕು ಎನ್ನುವ ಹಠ ನಿರ್ಣಯ ಅದಾಗಲೇ ಜಾರಿಯಾಗಿದ್ದರಿಂದ ಅಸಂಖ್ಯ ಧೂಳಿನ ನಡುವೆಯೇ ಕಡೆಯ ಫ್ಲೋರ್‍ನ್ನ ತಲುಪಿದೆ.

ಬಿಲ್ಡಿಂಗ್‍ನ ಕಡೆಯ ಫ್ಲೋರ್ ಪ್ರವೇಶಿಸುತ್ತಿದ್ದಂತೆ ಜೆ.ಪಿ ನಗರ ಇಡಿಯಾಗಿ ಕಾಣಿಸತೊಡಗಿತ್ತು. ಹೋರ್ಡಿಂಗ್‍ನ ಮೆಟ್ಟಿಲುಗಳನ್ನು ಹತ್ತುವ ಮೂಲಕ ಇನ್ನಷ್ಟು ತುದಿಯನ್ನು ತಲುಪುತ್ತಿದ್ದಂತೆ ಬೆಂಗಳೂರು ಎಂಬ ಮಹಾನಗರದಲ್ಲಿ ನಿರ್ಮಾಣವಾಗಿರುವ ಮನೆಗಳು ಹಾಗೂ ಕಟ್ಟಡಗಳು ಎಳೆಯ ಮಕ್ಕಳು ಆಟದ ಸರಭರದಲ್ಲಿ ಕೈ ಚೆಲ್ಲಿದ ಎಂಟಾಣೆಯ ಬೆಂಕಿಪೊಟ್ಟಣಗಳು ಬೀದಿಯ ತುಂಬೆಲ್ಲಾ ಹರಡಿಕೊಂಡಿರುವಂತೆ ಕಾಣಿಸಿತು. ನಾನು ನಿಧಾನವಾಗಿ ಕೆಳಗಿಳಿದು ಪಾರಿವಾಳದ ಗೂಡು ಸಿಕ್ಕಬಹುದೆಂದು  ಕಣ್ಣಾಡಿಸಿದೆ. ಹೀಗೆ ಹುಡುಕುತ್ತಿರುವಾಗಲೇ ಕಂಬಿಗಳ ಮೇಲೆ ಹಕ್ಕಿಗಳ ಹಿಕ್ಕೆಗಳ ಗುರುತುಗಳು ಕಾಣಿಸಿದವು.

 

ಸಾಮಾನ್ಯವಾಗಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಹಕ್ಕಿಗಳು ಹೋರ್ಡಿಂಗ್‍ನ ಮೇಲೆ ಕೂರುವುದು ಸಾಮಾನ್ಯ. ಕೂತಲ್ಲೇ ಹಕ್ಕಿಗಳು ಹಿಕ್ಕೆಯನ್ನು ಹಾಕುತ್ತವೆ. ಹೀಗಿರುವಾಗ ಹೋರ್ಡಿಂಗ್‍ನ ಕಂಬಿಗಳ ಮೇಲಿದ್ದ ಹಿಕ್ಕೆಗಳು ನಾನು ಹುಡುಕಿ ಬಂದಿದ್ದ ಪಾರಿವಾಳದ್ದೇ ಎಂದು ನಂಬುವುದು ಮೂರ್ಖತನವಾಗುತ್ತದೆ ಎನಿಸಿತು. ಹೀಗಾಗಿ ಪಾರಿವಾಳದ ಜಾಡನ್ನು ಬಿಟ್ಟುಕೊಡುವ ಯಾವುದಾದರೂ ಸಮೀಪದ ಗುರುತು ಸಿಗಬಹುದು ಎಂದು ಹುಡುಕುತ್ತಿರುವಾಗಲೇ ಅದೊಂದು ತುದಿಯಲ್ಲಿ ಎರಡು ಮೊಟ್ಟೆಗಳು ಹೊಡೆದು ಚೂರಾಗಿದ್ದು ಕಾಣಿಸಿತು. ಆದರೆ ಆ ಮೊಟ್ಟೆಗಳು ಹೊಡೆದುಬಿದ್ದು ಅದರ ಲೋಳೆ ನೆಲದ ಮೇಲೆ ಅಂಟಿಕೊಂಡಿತ್ತು. ಬಿಸಿಲಿನ ಜಳ ಹಾಗೂ ನೆಲದ ಕಾವಿಗೆ ಒಣಗಿ ಹೋಗಿದ್ದ ಲೋಳೆಯನ್ನು ಆಧರಿಸಿ ಮೊಟ್ಟೆಗಳು ಹೊಡೆದು ಚೂರಾಗಿ ಎಷ್ಟು ದಿನಗಳಾಗಿರಬಹುದು ಎನ್ನುವುದನ್ನು ಅಂದಾಜು ಮಾಡುವುದು ಸಲೀಸಾಗಿರಲಿಲ್ಲ.

ಅದರೆ ಮೊಟ್ಟೆಗಳು ಬಿದ್ದು ಚೂರಾಗಿದ್ದ ಸ್ಥಳದಲ್ಲೇ ನಿಂತು ತಲೆ ಎತ್ತಿ ನೋಡಿದಾಗ ಅದೇ ನೇರಕ್ಕೆ ಹೋರ್ಡಿಂಗ್ ಮಧ್ಯಂತರದ ಕಂಬಿಗಳ ನಡುವೆ ಚಿಂದಿಯಾದ ಸ್ಥಿತಿಯಲ್ಲಿದ್ದ ಹಕ್ಕಿಯ ಗೂಡಿನಂತಹದು ಏನೋ ಇರುವ ಗುರತು ಕಾಣಿಸಿತು. ಹೋರ್ಡಿಂಗ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಗೂಡನ್ನು ಬಿಡಿಸಿ ಕೆಳಗೆ ತಂದು ನೋಡಿದೆ. ಈ ಗೂಡನ್ನು ನಿರ್ಮಿಸಲು ಬಳಸಲಾಗಿದ್ದ ಹುಲ್ಲಿನ ಎಳೆಗಳನ್ನು ಸ್ಪರ್ಶಿಸುತ್ತಿದ್ದಂತೆ ಕೆಲವು ದಿನಗಳ ಹಿಂದೆ ನನ್ನ ಹಾಸಿಗೆಯ ದಿಂಬಿನ ಬಳಿ ಸಿಕ್ಕಿದ ಹುಲ್ಲಿನ ಎಳೆಗಳನ್ನು ಸ್ಪರ್ಶಿಸಿದ ಅನುಭಕ್ಕಿಂತ ಭಿನ್ನವಾಗಿರಲಿಲ್ಲ.  ನಿಜ ಹೇಳಬೇಕು ಎಂದರೆ ಆ ಎರಡು ಗೂಡುಗಳನ್ನು ಒಂದೇ ಬಗೆಯ ಹುಲ್ಲಿನಿಂದ  ಹೆಣೆಯಲಾಗಿತ್ತು.

ಪಾರಿವಾಳ ಕೆಲವು ದಿನಗಳ ಹಿಂದೆ ತನ್ನ ಗೂಡನ್ನು ಇದೇ ಹೋರ್ಡಿಂಗ್‍ನ ಮಧ್ಯಂತರದ ಕಂಬಿಗಳ ನಡುವೆ ತನ್ನ ಗೂಡನ್ನು ನಿರ್ಮಿಸಿಕೊಂಡಿತ್ತು. ಆದರೆ ಹೋರ್ಡಿಂಗ್‍ಗೆ ಕಟ್ಟಲಾಗಿತ್ತು ಪ್ಲಾಸ್ಟಿಕ್‍ನ ಬ್ಯಾನರ್ ಹರಿದು ಜೋರು ಗಾಳಿಗೆ ನಿಯಂತ್ರಣವಿಲ್ಲದೆ ಬೀಸುವಾಗ ಅಂಗೈ ಅಗಲವೂ ಇಲ್ಲದ ಕಂಬಿಗಳ ನಡುವೆ ಕಟ್ಟಿದ್ದ ಹುಲ್ಲಿನ ಗೂಡಿಗೆ ಬಡಿದು ಮೊಟ್ಟೆಗಳು ಕೆಳಗೆ ಬಿದ್ದು ಚೂರಾಗಿದ್ದವು. ಆ ನಂತರ ಪಾರಿವಾಳ ಮೊಟ್ಟೆಯನ್ನು ಇಡುವುದಕ್ಕೆ ಸರಿಯಾದ ಹಾಗೂ ಈ ಮೊದಲಿನಂತೆ ಯಾವುದೇ ತೊಂದರೆಯೂ ಎದುರಾಗದಂತಹ ಸ್ಥಳದಲ್ಲಿ ಮೊಟ್ಟೆಯನ್ನು ಇಡಬೇಕಿತ್ತು. ಹೀಗಾಗಿ ಹೊಸ ಜಾಗದ ತಲಾಶ್ ನಡೆಸಿದ್ದ ಪಾರಿವಾಳ ನನ್ನ ರೂಮನ್ನು ತನ್ನದೇ ಕಾರಣಗಳಿಗೆ ಆಯ್ಕೆ ಮಾಡಿಕೊಂಡಿರಬಹುದು ಎನಿಸಿತು.

ಪಾರಿವಾಳದ ಈ ನಡೆಗಳನ್ನು ಗ್ರಹಿಸಿದರೆ ಈ ಪ್ರಕೃತಿ ಮನುಷ್ಯನ ಪ್ರತಿ ಎಣಿಕೆಗಳನ್ನು ಬುಡಮೇಲು ಮಾಡಬಿಡುವ ಸಂಕೀರ್ಣ ಪ್ರದೇಶ ಎನಿಸುತ್ತದೆ. ಆದರೆ ಬೆಂಗಳೂರಿನಂತಹ ಮಹಾನಗರದಲ್ಲಿ ಪಾರಿವಾಳದಂತಹ ಹಕ್ಕಿಗಳು ಸಹಜವಾಗಿ ಸಂತಾನೋತ್ಪತಿ ಮಾಡುವುದಕ್ಕೆ ಪೂರಕವಾದ ವಾತಾವರಣ ಹಾಗೂ ಅಗತ್ಯವಾದ ಪ್ರಕೃತಿಯ ಸಹಕಾರ ಇಲ್ಲ ಎನ್ನುವುದು ನಿಜಕ್ಕೂ ಭಯಪಡಬೇಕಾದ ವಿಷಯ. ಮರಗಳನ್ನು ನುಣ್ಣಗೆ ಕಡಿದು ಚರಂಡಿಯ ಪಕ್ಕದಲ್ಲೂ ಮನೆ ಅಥವಾ ಅಪಾರ್ಟ್‍ಮೆಂಟ್ ಕಟ್ಟುತ್ತಿರುವ ಮನುಷ್ಯ ತನ್ನ ಮಕ್ಕಳಿಗೆ ನಿಜವಾದ ಹಕ್ಕಿಗಳನ್ನು ಕೊಂದು ಅವುಗಳನ್ನು ಬಿಬಿಎಂಪಿ ಬಸ್‍ಸ್ಟಾಂಡ್‍ಗಳು ಹಾಗೂ ಫ್ಲೈ ಓವರ್‍ಗಳ ಅಂಡರ್ ಪಾಸ್‍ನಲ್ಲಿ ಎದುರಾಗುವ ಗೋಡೆಗಳ ಮೇಲೆ ಬರೆದ ಚಿತ್ರಗಳ ಮೂಲಕ ಪರಿಚಯಿಸುತ್ತಿದ್ದಾನೆ ಎನಿಸುತ್ತದೆ.

ಆದರೆ ಈ ಎಲ್ಲದರ ನಡುವೆ ಆ ಪಾರಿವಾಳ ಮತ್ತೊಂದು ಗೂಡು ಕಟ್ಟುವ ಹಾಗೂ ಭರವಸೆಯಿಂದ ಮತ್ತೊಂದು ಮೊಟ್ಟೆಯನ್ನಿಡಲು ಸ್ಥಳವನ್ನ ಆಯ್ಕೆ ಮಾಡಿಕೊಳ್ಳಲು ಅನುಸರಿಸಿದ ರೀತಿ. ವಿಜ್ಞಾನದ ಮೂಲಕ ಜಗತ್ತನ್ನು ವಶಪಡಿಸಿಕೊಳ್ಳುತ್ತೇನೆ ಎಂದು ಬೀಗುವ ಮನುಷ್ಯಜೀವಿಯನ್ನು ಪರೀಕ್ಷಿಸಿದ ರೀತಿ ನನ್ನನ್ನು ಈಗಲೂ ಆಲೋಚಿಸುವಂತೆ ಮಾಡುತ್ತದೆ, ಪ್ರಕೃತಿಯ ಎದುರು ಮನುಷ್ಯ ಯಾವತ್ತಿಗೂ ಅಣುವಷ್ಟೇ ಎನ್ನುವುದನ್ನು ಮತ್ತೆ ಮತ್ತೆ ಒಪ್ಪಿಕೊಳ್ಳುವಂತೆ ಮಾಡುತ್ತದೆ.

 

2 comments

  1. ಬದುಕಿಗೆಬಹಳ ಹತ್ತಿರವಿರುವ ನಿನ್ನದೇ ಶೈಲಿಯ ಬರಹಗಳುನಮ್ಮನ್ನ ಅವಲೋಕಿಸುವಂತೆ ಮಾಡುತ್ತವೆ

Leave a Reply