ವೀರಣ್ಣ ಮಡಿವಾಳರ ಕಣ್ಣಲ್ಲಿ ಸಾಹಿತ್ಯ ಸಮ್ಮೇಳನ

ವೀರಣ್ಣ ಮಡಿವಾಳರ

ಕನ್ನಡ ಮಕ್ಕಳ ಬದುಕು ಆದ್ಯತೆಯಾಗದ ಸಮ್ಮೇಳನಕ್ಕೆ ಅರ್ಥವಿಲ್ಲ. ಧಾರವಾಡ ಶೈಕ್ಷಣಿಕ ನಗರಿ, ಸಾಂಸ್ಕೃತಿಕ ನಗರಿ. ಬೇಂದ್ರೆ, ಶಂಬಾ ರಂತಹ ಮಾಸ್ತರುಗಳು ಬದುಕಿದ ಸಾರ್ಥಕ ನಗರ. ಇಂಥ ಅಪರೂಪದ ಘಮ ಇರುವ ಮಣ್ಣಲ್ಲಿ ಸಮ್ಮೇಳನ ನಡೆಯುತ್ತಿರುವುದು ಐತಿಹಾಸಿಕವೂ ಹೌದು.

ಆದರೆ…

ಕರ್ನಾಟಕದ ಇಂದಿನ ಕಾಲದ ಚಲನೆ ಏನು ಹೇಳುತ್ತಿದೆ, ಕನ್ನಡ ಬದುಕಿನ, ಕನ್ನಡ ಮಕ್ಕಳ ಬದುಕಿನ ಚಹರೆಗಳು ಯಾವ ಸವಾಲುಗಳನ್ನು ಮುಂದಿಡುತ್ತಿವೆ ಎಂಬುದರ ಕಿಂಚಿತ್ ಅರಿವು ಇಲ್ಲದೇ ಹೋದರೆ ಹನ್ನೆರಡು ಕೋಟಿ ರೂಪಾಯಿಯ ಆಡಂಬರದ ಗದ್ದಲವೊಂದೇ ಕಿವಿಗಡಚಿಕ್ಕುತ್ತದೆ, ಕಾಲಾಂತರದಲ್ಲಿ ಮರೆಯಾಗುತ್ತದೆ.

ಈ ಬಾರಿಯ ಸಮ್ಮೇಳನದ ಅಧ್ಯಕ್ಷರು ಕನ್ನಡ ಕಾವ್ಯದ ಮೇರು ಶಿಖರವೆಂದೇ ಭಾವಿಸಬಹುದಾದ ಕಂಬಾರರು. ಸೃಜನಶೀಲರಾಗಿ ಕಂಬಾರರನ್ನ ಕೊಂಡಾಡಬಹುದಾದರೂ ಕನ್ನಡ ನೆಲದಲ್ಲಿ ಆಗಿಹೋದ ಕ್ರೌರ್ಯಗಳ ಬಗ್ಗೆ, ಕಳಸಾ ಬಂಡೂರಿ ಹೋರಾಟದ ಸಂದರ್ಭದಲ್ಲಿ ಮಹಿಳೆಯರನ್ನ, ರೈತರನ್ನ ಪೊಲೀಸರು ಅಮಾನುಷವಾಗಿ ಬಡಿದಾಗ, ರೈತರು ಆತ್ಮಹತ್ಯೆ ಮಾಡಿಕೊಂಡಾಗ, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಲಕ್ಷಾಂತರ ಸಂಖ್ಯೆಯಲ್ಲಿ ಬಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟಿಸುತ್ತಾ ನೀರು, ಶೌಚಕ್ಕೂ ಪರದಾಡುತ್ತಿದ್ದಾಗ ಕಂಬಾರರು ಸ್ಪಂದಿಸಿದ ದನಿಯಾದ ಯಾವ ಉದಾಹರಣೆಯೂ ಇಲ್ಲ. ಇನ್ನೂ ಇವರು ಕನ್ನಡ ಶಾಲೆಗಳ ಬಗ್ಗೆ, ಕನ್ನಡ ಶಾಲೆಗಳ ಮಕ್ಕಳು ಭಾಷೆಯಾಚೆಗೂ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಬಲ್ಲರೆಂಬ ಯಾವ ಭರವಸೆಯೂ ಇಲ್ಲ.

ಕಂಬಾರರ ಕಾವ್ಯದ ಮತ್ತೊಂದು ವಿಶೇಷವೆಂದರೆ “ಕೇರಿಯ ಹಿರಿಯರೆಲ್ಲ ಬನ್ನಿ, ಊರಿನ ಕಿರಿಯರೆಲ್ಲ ಬನ್ನಿ” ಎಂಬ ಸಾಲನ್ನು ಹೊರತುಪಡಿಸಿದರೆ ಈ ನಾಡಿನ, ಈ ನೆಲದ ದಮನಿತ ಬದುಕಿನ ಎದೆಯ ದನಿಯಾಗಿ ಅವರು ಬರೆದ ಕವಿತೆಗಳು ಇಲ್ಲವೇ ಇಲ್ಲ. ಈ ಮಾತನ್ನು ಸಾಂದರ್ಭಿಕವಾಗಿ ಮಾತ್ರ ಹೇಳುತ್ತಿಲ್ಲ, ಅವರ ಕವಿತೆಗಳನ್ನ ಪ್ರೀತಿ ಅಭಿಮಾನದಿಂದ ಓದಿ ನಿರಾಶನಾಗಿ ಈ ಮಾತನ್ನು ಹೇಳುತ್ತಿರುವೆ. ಅವರ ಸಾಹಿತ್ಯದ ಬಗ್ಗೆ ಪಿಹೆಚ್ ಡಿ ಮಾಡಿರುವ ವಿಕ್ರಮ ವಿಸಾಜಿಯವರೇ ಕಂಬಾರರೊಂದಿಗೆ ಸಂವಾದವನ್ನು ನಡೆಸಿಕೊಡುವುದರಿಂದ “ಕಂಬಾರರ ಕಾವ್ಯದಲ್ಲಿ ದಮನಿತ ಬದುಕು ಯಾಕೆ ಆಬ್ಸೆಂಟ್ ಆಗಿದೆ?” ಎಂಬ ಪ್ರಶ್ನೆಯನ್ನ ವಿಸಾಜಿ ಕೇಳುವರೇ? ನೋ ವೇ. ಸಾಧ್ಯವೇ ಇಲ್ಲ ಬಿಡಿ.

ಕವಿಗೋಷ್ಠಿಯ ಕುರಿತು ಕೆಲವು ಮಾತುಗಳನ್ನ ಹೇಳಲೇಬೇಕು. ನನ್ನನ್ನ ಬಿಜಾಪುರ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಮಾಡಲಾಗಿತ್ತು. ಇದನ್ನ ತಿಳಿದ ನಾಯಕರೊಬ್ಬರು ನೀವು ಪ್ರಬುತ್ವದ ಚೇಲಾಗಳು, ಹೋಗಿ ಸಮ್ಮೇಳನದಲ್ಲಿ ಕವಿತೆ ಓದ್ತೀರಿ ಎಂದೆಲ್ಲಾ ಹೀಯಾಳಿಸಿದ್ದರು. ದಸರಾ ಕವಿಗೋಷ್ಠಿಯಲ್ಲೂ ಇದೇ ಮಾತುಗಳು. ಆ ಸಮ್ಮೇಳನದ ನಂತರ ಅನೇಕರು ನನ್ನನ್ನ ನಾ ಓದಿದ ಕವಿತೆಯ ಹೆಸರು ಹೇಳಿ ಗುರುತಿಸುವವರಿದ್ದಾರೆ. ಅದೆಲ್ಲ ಇರಲಿ, ಪ್ರಶ್ನೆಯೆಂದರೆ “ಹುಟ್ಟುತ್ತಲೇ ಸಾಹಿತ್ಯ ಸಮ್ಮೇಳನವನ್ನು ವಿರೋಧಿಸಿದವರು, ಈಗ ತಮ್ಮ ಕಡೆಯವರನ್ನೂ ಕರೆದುಕೊಂಡು ಸಾಹಿತ್ಯ ಸಮ್ಮೇಳನದಲ್ಲಿಯೇ ಕವಿತೆ ಓದಲು ಸಜ್ಜಾಗಿದ್ದಾರೆ. ನನಗಿನ್ನೂ ಕೆಲವು ಅನುಮಾನಗಳಿವೆ. ಏನೆಂದರೆ ಈ ಕವಿಗೋಷ್ಠಿ ಯಾವ ಅಪಸ್ವರಗಳಿಲ್ಲದೇ ವಿಚಾರ ಪ್ರಚೋದಕವಾಗಿ, ಜನಮನದ ಅಂತಃಕರಣ ಕಲಕುವಂತೆ ನಡೆಯಲಿದೆಯೇ ಅಥವಾ ನಾವು ಈ ಕವಿಗೋಷ್ಠಿಯನ್ನು ಬಹಿಷ್ಕರಿಸುತ್ತೇವೆ ಅಂತ ವೇದಿಕೆ ಮೇಲಿನಿಂದಲೇ ಇಳಿದು ಬರುವ ನಾಟಕಗಳು ನಡೆಯಲಿವೆಯೇ ಅಥವಾ ಸುಮಂಗಲಿಯರಿಂದ ಕುಂಭ ಮೇಳ ನಡೆಸುತ್ತಿರುವುದಕ್ಕೆ ನಮ್ಮ ವಿರೋಧ ವ್ಯಕ್ತಪಡಿಸಿ ಸಮ್ಮೇಳನವನ್ನು ಬಹಿಷ್ಕರಿಸುತ್ತೇವೆ ಎಂದು ಪತ್ರಿಕಾಗೋಷ್ಠಿ ನಡೆಸುವ ಡ್ರಾಮಾಗಳು ನಡೆಯಲಿವೆಯೇ? ಹಾಗಾಗದಿದ್ದರೆ ಈ ನಾಡಿನ ಆರೋಗ್ಯಕ್ಕೂ , ಸಮ್ಮೇಳನದ ಅರ್ಥವಂತಿಕೆಗೂ ಕ್ಷೇಮ.

ಮನಸ್ಸಲ್ಲಿ ಹಲವು ನಿರೀಕ್ಷೆಗಳಿದ್ದರೂ, ಹೃದಯದಲ್ಲಿ ಲಕ್ಷಾಂತರ ಜನ ಸೇರುತ್ತಿರುವುದಕ್ಕೆ ಪ್ರೀತಿ ಅಭಿಮಾನವಿದ್ದರೂ ಯಾಕೋ ಈ ಕಾಲದ ಸಂಕಟಗಳನ್ನ ಪ್ರಭುತ್ವಕ್ಕೆ ಅರ್ಥಮಾಡಿಸುವುದರಲ್ಲಿ ನಾವು ಸೋಲುತ್ತಲೇ ಬರುತ್ತಿದ್ದೇವೆ ಎಂಬ ಕೊರಗು.

ಅಂತಿಮವಾಗಿ ಕನ್ನಡ ಮನಸ್ಸುಗಳ ಚೈತನ್ಯವೊಂದೇ ಎಲ್ಲ ಸವಾಲುಗಳನ್ನ ಎದುರಿಸುವ ಚೈತನ್ಯವನ್ನು ನೀಡಬಲ್ಲದು. ಅದೊಂದೇ ನಮ್ಮನ್ನ ಮುನ್ನಡೆಸಬಲ್ಲದು. ಆ ಕೆಲಸವನ್ನ, ಆ ಸಂವೇದನೆಯನ್ನು ಹಬ್ಬಿಸುವ ಅರ್ಥಪೂರ್ಣತೆಯನ್ನ ಕೆಲವರಾದರೂ ಮಾಡಿಯಾರು ಎಂಬ ನಿರೀಕ್ಷೆಯೊಂದಿಗೆ.

ಸರಕಾರಿ ಶಾಲೆಗಳ ಅಳಿವು ಉಳಿವು ಗೋಷ್ಠಿಯನ್ನ ನಾನು ತಪ್ಪಿಸುವುದಿಲ್ಲ. ನನಗೆ ಆಮಂತ್ರಣ ಬಂದಿಲ್ಲ. ಯಾರ ಯಾರನ್ನೂ ವಿಶೇಷ ಆಹ್ವಾನಿತರನ್ನಾಗಿ ಕರೆಯುತ್ತಾರೆ, ನಾವು, ನಮ್ಮಂಥವರು ಕಾಣಿಸುವುದೇ ಇಲ್ಲ. ಇರಲಿ, ಯಾವ ಮೂಲೆಯಲ್ಲಿ ಕುಳಿತಾದರೂ ಸರಿಯೇ ಈ ಗೋಷ್ಠಿಯನ್ನ ಕೇಳುತ್ತೇನೆ. ಯಾಕೆಂದರೆ ನನ್ನ ಪ್ರಕಾರ ಸಮ್ಮೇಳನದ ಹೈಲೈಟ್ ಇದೊಂದೇ…

1 comment

  1. yava kavi, kavya heegeye, i mean dhamanithara daniyagiye irabeku endu expect madodu thappu. adu nijavaada saahityave haudadare eda-bala, melu-keelu, mahila-purusha emba prabhadagala chaukattinolage silukadirali. sahitya adannu meeriddu. yake sahityavannu nelada daniyagi mooodi barbeku anta aashistiri. adu sahajavaagiye irali. neevu helidanthe ondonde vibhagada bagge dani etbekaadre adke bekada specilist nnnu nemisona, saahithigalannalla.

    neevu kambararannu vimarshisidaga nange sachin yaake only cricket aadida hockey nooo aadbekittu adu namma neladdu anta vadisuvante kandiitu…

Leave a Reply